56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐ.ಎಫ್.ಎಫ್.ಐ) ಸಿನಿಡಬ್ಸ್ ಅಳವಡಿಕೆಯೊಂದಿಗೆ ಪ್ರವೇಶಸಾಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸಲಿದೆ
ಎಲ್ಲರಿಗೂ ಸಿನಿಮಾ ಸೌಲಭ್ಯತೆ ಲಭ್ಯವಾಗುವಂತೆ ಮಾಡುವ ತನ್ನ ಬದ್ಧತೆಯನ್ನು ಬಲಪಡಿಸುವ ಸಲುವಾಗಿ, 56ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು (ಐ.ಎಫ್.ಎಫ್.ಐ) ಬಹುಭಾಷಾ ಆಡಿಯೊ-ಬೆಂಬಲದ ಅಪ್ಲಿಕೇಶನ್, ಸಿನಿಡಬ್ಸ್ ಅನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್ ಪ್ರೇಕ್ಷಕರು ತಮ್ಮ ನೆಚ್ಚಿನ ಭಾಷೆಯಲ್ಲಿ ಆಯ್ದ ಉತ್ಸವದ ಚಲನಚಿತ್ರಗಳನ್ನು ನೋಡಿ ಆನಂದಿಸಲು ಅವಕಾಶ ನೀಡುತ್ತದೆ. ಈ ನವೀನ ಪ್ರಯೋಗವು ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ, ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಮತ್ತು ಸಿನಿಮಾ ಎಲ್ಲರಿಗೂ ಹಂಚಿಕೆಯ ಅನುಭವವನ್ನು ನೀಡಲಿದೆ ಎಂದು ಖಚಿತಪಡಿಸಿಕೊಳ್ಳುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ.
ಸಿನಿಡಬ್ಸ್: ತಡೆರಹಿತ ಸಿನಿಮಾ ವೀಕ್ಷಣೆ
ಸಿನಿಡಬ್ಸ್ ಅಪ್ಲಿಕೇಶನ್ ಚಲನಚಿತ್ರ ಪ್ರೇಕ್ಷಕರು ಚಿತ್ರಮಂದಿರಗಳ ಒಳಗೆ, ಚಿತ್ರ ಪ್ರದರ್ಶನಗೊಳ್ಳುತ್ತಿರುವ ಭಾಷೆಯನ್ನು ಲೆಕ್ಕಿಸದೆ, ತಮ್ಮ ಆದ್ಯತೆಯ ಭಾಷೆಯಲ್ಲಿ ಚಲನಚಿತ್ರಗಳನ್ನು ನೋಡಿ ಆನಂದಿಸಲು ಅನುವು ಮಾಡಿಕೊಡುತ್ತದೆ. ಸರಳ ಮತ್ತು ತಡೆರಹಿತ ಪ್ರಕ್ರಿಯೆಯೊಂದಿಗೆ, ಬಳಕೆದಾರರು ಸಿನಿಡಬ್ಸ್ ಅಪ್ಲಿಕೇಶನ್ ನೊಂದಿಗೆ ಈ ಕೆಳಗೆ ನೀಡಲಾದ ಪ್ರಯೋಜನಗಳನ್ನು ಪಡೆಯಬಹುದು:
- ಅಪ್ಲಿಕೇಶನ್‌ನಲ್ಲಿ ತಮ್ಮ ಆದ್ಯತೆಯ ಭಾಷೆಯ ಆಡಿಯೊ ಟ್ರ್ಯಾಕ್ ಅನ್ನು ಡೌನ್‌ಲೋಡ್ ಮಾಡಬಹುದು
- ಪೇಟೆಂಟ್ ಪಡೆದ ಆಡಿಯೊ-ಸಿಂಕ್ರೊನೈಸೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು ಅಪ್ಲಿಕೇಶನ್ ಚಲನಚಿತ್ರದೊಂದಿಗೆ ಸ್ವಯಂ-ಸಿಂಕ್ ಮಾಡಲು ಅವಕಾಶ ಮಾಡಿಕೊಡುತ್ತದೆ
- ತಲ್ಲೀನತೆಯ, ವೈಯಕ್ತೀಕರಿಸಿದ ಮತ್ತು ತಡೆರಹಿತ ಚಲನಚಿತ್ರ ಅನುಭವವನ್ನು ಅನುಭವಿಸಬಹುದು
ಭಾಷಾ ಗಡಿಗಳನ್ನು ಮುರಿಯುವ ಮೂಲಕ, ಸಿನಿಡಬ್ಸ್ ವಿವಿಧ ಪ್ರದೇಶಗಳು ಮತ್ತು ಭಾಷಾ ಹಿನ್ನೆಲೆಗಳ ಪ್ರೇಕ್ಷಕರು ಒಟ್ಟಿಗೆ ಸೇರಿ ಸಿನಿಮಾವನ್ನು ಸಹಜವಾಗಿ ಅಂತರ್ಗತ ವಾತಾವರಣದಲ್ಲಿ ಆನಂದಿಸಲು ಅನುವು ಮಾಡಿಕೊಡುತ್ತದೆ.
ಸಿನಿಡಬ್ಸ್ ನ ಪ್ರಯೋಜನಗಳು
ಚಿತ್ರಮಂದಿರಗಳು ಮತ್ತು ಪ್ರದರ್ಶನಗಳಿಗೆ, ಸಿನಿಡಬ್ಸ್ ಬಹುಭಾಷಾ ಪ್ರೇಕ್ಷಕರನ್ನು ಒಂದೇ ಪ್ರದರ್ಶನಕ್ಕೆ ಆಕರ್ಷಿಸಲಿದೆ. ಇದು ಭಾಷಾ-ನಿರ್ದಿಷ್ಟ ಪ್ರದರ್ಶನಗಳಲ್ಲಿ ಪ್ರತಿಕ್ರಿಯೆಯನ್ನು ಹೆಚ್ಚಿಸಲಿದ್ದು, ಹೆಚ್ಚು ಪರಿಣಾಮಕಾರಿ ಆಡಿಟೋರಿಯಂ ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುವ ಸಾದ್ಯತೆ ಇದೆ. ಹೀಗಾಗಿ, ಸಿನಿಪ್ರಿಯರು ತಮ್ಮ ಆದ್ಯತೆಯ ಭಾಷೆಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದ್ದು, ಭಾಷಾ ಮಿತಿಗಳನ್ನು ಮೀರಿ ಪ್ರಾದೇಶಿಕ ಮತ್ತು ಜಾಗತಿಕ ಸಿನಿಮಾಗಳನ್ನು ಆಸ್ವಾದಿಸಿ ಆನಂದಿಸಬಹುದು. ವಿವಿಧ ಭಾಷೆಗಳನ್ನು ಮಾತನಾಡುವ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಚಲನಚಿತ್ರ ಅನುಭವಗಳನ್ನು ಹಂಚಿಕೊಳ್ಳಬಹುದು.
ಐ.ಎಫ್.ಎಫ್.ಐ 56ರಲ್ಲಿ ವರ್ಧಿತ ಆಡಿಯೋ ಪ್ರವೇಶ ಸಾಧ್ಯತೆ
ಅನುಕೂಲತೆಯ ತನ್ನ ಧ್ಯೇಯವನ್ನು ಮತ್ತಷ್ಟು ವಿಸ್ತರಿಸುತ್ತಾ, ಐ.ಎಫ್.ಎಫ್.ಐ ವಿಶೇಷ ಪ್ರದರ್ಶನಗಳನ್ನು ಪರಿಚಯಿಸಿದೆ, ಅವುಗಳೆಂದರೆ:
ಆಡಿಯೋ ವಿವರಣೆ (ಎ.ಡಿ):
ಅಂಧ ವೀಕ್ಷಕರು ಚಿತ್ರದ ಕಥೆಯ ಹಂದರದೊಂದಿಗೆ ಸಂಪೂರ್ಣವಾಗಿ ತಲ್ಲೀನರಾಗಲು ಅನುವು ಮಾಡಿಕೊಡುವ ದೃಶ್ಯ ಅಂಶಗಳ ನಿರೂಪಿತ ವಿವರಣೆಗಳನ್ನು ಒದಗಿಸುತ್ತದೆ.
ಮುಚ್ಚಿದ ಶೀರ್ಷಿಕೆಗಳು (ಸಿ.ಸಿ):
ಸಂವಾದಗಳು, ಧ್ವನಿ ಸೂಚನೆಗಳು ಮತ್ತು ಅಗತ್ಯ ಆಡಿಯೋ ಅಂಶಗಳಾಗಿ ಪರದೆಯ ಮೇಲಿನ ಪಠ್ಯವನ್ನು ಮುಚ್ಚಿದ ಶೀರ್ಷಿಕೆಗಳು ನೀಡುತ್ತವೆ. ಇದು ಶ್ರವಣದೋಷವುಳ್ಳ ಪ್ರೇಕ್ಷಕರನ್ನು ಬೆಂಬಲಿಸುತ್ತದೆ.
ಆಡಿಯೋ ವಿವರಣೆ (ಎ.ಡಿ) ಮತ್ತು ಮುಚ್ಚಿದ ಶೀರ್ಷಿಕೆಗಳು (ಸಿ.ಸಿ) ಒಟ್ಟಾರೆಯಾಗಿ, ಸಂವೇದನಾ ಸಾಮರ್ಥ್ಯವನ್ನು ಲೆಕ್ಕಿಸದೆ ಪ್ರತಿಯೊಬ್ಬ ವೀಕ್ಷಕರು ಚಲನಚಿತ್ರಗಳ ಮ್ಯಾಜಿಕ್ ಅನ್ನು ಅನುಭವಿಸಬಹುದಾದ ಹೆಚ್ಚು ಅಂತರ್ಗತ ಸಿನಿಮಾ ಪರಿಸರವನ್ನು ನಿರ್ಮಿಸಲಿದೆ.
ಹೆಚ್ಚು ಸಮಗ್ರ ಭವಿಷ್ಯದತ್ತ ಒಂದು ಹೆಜ್ಜೆ
ಸಿನಿಡಬ್ಸ್ ಮತ್ತು ವರ್ಧಿತ ಪ್ರವೇಶಸಾಧ್ಯತಾ ವೈಶಿಷ್ಟ್ಯಗಳ ಏಕೀಕರಣದೊಂದಿಗೆ, 56ನೇ ಐ.ಎಫ್.ಎಫ್.ಐ ಜಾಗತಿಕ ಚಲನಚಿತ್ರೋತ್ಸವಗಳಲ್ಲಿ ಒಳಗೊಳ್ಳುವಿಕೆಯ ಮಿತಿಯನ್ನು ಮೀರುವ ನಿರೀಕ್ಷೆ ಇದೆ. ಭಾಷೆ ಮತ್ತು ಪ್ರವೇಶಸಾಧ್ಯತೆಯು ಇನ್ನು ಮುಂದೆ ಅಡೆತಡೆಗಳಾಗಿರದೆ, ಪ್ರೇಕ್ಷಕರನ್ನು ಒಂದುಗೂಡಿಸುವ ಸೇತುವೆಗಳಾಗಿ ಕಾರ್ಯನಿರ್ವಹಿಸುವ ಸಿನಿಮೀಯ ಅವಕಾಶವನ್ನು ಸೃಷ್ಟಿಸುವ ಐ.ಎಫ್.ಎಫ್.ಐ ನ ಸಮರ್ಪಣೆಯನ್ನು ಈ ಉಪಕ್ರಮವು ಪುನರುಚ್ಚರಿಸುತ್ತದೆ.
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಉದಯವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಉದಾತ್ತವಾಗಿ ರೂಪಗೊಂಡಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಹಾಗೂ ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ.ಎಸ್.ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಈ ವೇದಿಕೆಯಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಪ್ರದರ್ಶಿಸುತ್ತವೆ, ಅನುಭವೀ ಕಲಾವಿದರು ನಿರ್ಭೀತ ಅಪರಿಚಿತರೊಂದಿಗೆ ತಮ್ಮ ಚೌಕಟ್ಟನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ನ ನಿಜವಾದ ಆಕರ್ಷಣೆ ಎಂದರೆ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮತ್ತು ಹೆಚ್ಚಿನ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್ - ಇದೆಲ್ಲವುಗಳ ಮಿಶ್ರಣವಾಗಿದ್ದು, ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳ ಸಂಗಮವಾಗಿದೆ. ನವೆಂಬರ್ 20 ರಿಂದ 28 ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುವ ಐ.ಎಫ್.ಎಫ್.ಐ 56ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ನಿಬ್ಬೆರಗಾಗುವ ವರ್ಣಪಟಲ ಅನುಭವ ನೀಡುತ್ತದೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನತೆಯ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
रिलीज़ आईडी:
2195278
| Visitor Counter:
24
इस विज्ञप्ति को इन भाषाओं में पढ़ें:
Marathi
,
English
,
Konkani
,
Gujarati
,
Manipuri
,
Assamese
,
Bengali
,
Khasi
,
Urdu
,
हिन्दी
,
Punjabi
,
Odia
,
Tamil
,
Malayalam