ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಗಣರಾಜ್ಯೋತ್ಸವದ ಮುನ್ನಾ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ಕನ್ನಡ ಅನುವಾದ

प्रविष्टि तिथि: 25 JAN 2026 7:50PM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೇ,

ನಮಸ್ಕಾರ!

ಸ್ವದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯರಾಗಿರುವ ನಾವೆಲ್ಲರೂ ಅತ್ಯಂತ ಉತ್ಸಾಹದಿಂದ ಗಣರಾಜ್ಯೋತ್ಸವ ಆಚರಿಸಲಿದ್ದೇವೆ. ನಾನು ನಿಮ್ಮೆಲ್ಲರಿಗೂ ರಾಷ್ಟ್ರೀಯ ಹಬ್ಬವಾಗಿರುವ ಗಣರಾಜ್ಯೋತ್ಸವದ ಹೃತ್ಪೂರ್ವಕ ಶುಭಾಶಯಗಳನ್ನು ಹೇಳುತ್ತಿದ್ದೇನೆ.

ಗಣರಾಜ್ಯೋತ್ಸವದ ಶುಭ ಸಂದರ್ಭವು ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿನ ಸ್ಥಿತಿ ಮತ್ತು ದಿಕ್ಕನ್ನು ಅವಲೋಕಿಸಲು ಒಂದು ಅವಕಾಶವನ್ನು ನೀಡುತ್ತದೆ. ನಮ್ಮ ಸ್ವಾತಂತ್ರ್ಯ ಚಳವಳಿಯ ಶಕ್ತಿಯು 1947 ರ ಆಗಸ್ಟ್ 15 ರಿಂದ ದೇಶದ ಸ್ಥಿತಿಯನ್ನು ಬದಲಾಯಿಸಿತು. ಭಾರತ ಸ್ವತಂತ್ರ ದೇಶವಾಯಿತು. ನಾವು ನಮ್ಮದೇ ಆದ ರಾಷ್ಟ್ರದ ವಿಧಿಯ ಶಿಲ್ಪಿಗಳಾದೆವು.

1950 ಜನವರಿ 26 ರಿಂದ ನಾವು ನಮ್ಮ ಗಣರಾಜ್ಯವನ್ನು ಸಾಂವಿಧಾನಿಕ ಆದರ್ಶಗಳ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದೇವೆ. ಅದೇ ದಿನದಂದು ನಾವು ನಮ್ಮ ಸಂವಿಧಾನವನ್ನು ಪೂರ್ಣರೂಪದಲ್ಲಿ ಜಾರಿಗೆ ತಂದೆವು. ಪ್ರಜಾಪ್ರಭುತ್ವದ ತಾಯಿ, ಭಾರತಭೂಮಿ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತಿ ಪಡೆಯಿತು, ಹಾಗೂ ನಮ್ಮ ಪ್ರಜಾಪ್ರಭುತ್ವದ ಗಣರಾಜ್ಯ ಅಸ್ತಿತ್ವಕ್ಕೆ ಬಂದಿತು.

ನಮ್ಮ ಸಂವಿಧಾನವು ವಿಶ್ವ ಇತಿಹಾಸದಲ್ಲಿಯೇ ಗಣರಾಜ್ಯದ ಅತಿದೊಡ್ಡ ಅಡಿಪಾಯ ಗ್ರಂಥವೆನಿಸಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ನ್ಯಾಯ,ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳು ನಮ್ಮ ಗಣರಾಜ್ಯವನ್ನು ವ್ಯಾಖ್ಯಾನಿಸುತ್ತವೆ. ಸಂವಿಧಾನ ನಿರ್ಮಾತೃಗಳು ರಾಷ್ಟ್ರೀಯತೆ ಮತ್ತು ದೇಶದ ಏಕತೆಯ ಮನೋಭಾವಕ್ಕೆ ಸಾಂವಿಧಾನಿಕ ನಿಬಂಧನೆಗಳ ಬಲವಾದ ಅಡಿಪಾಯವನ್ನು ಒದಗಿಸಿದ್ದಾರೆ.

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಮ್ಮ ರಾಷ್ಟ್ರವನ್ನು ಒಗ್ಗೂಡಿಸಿದರು. ಕಳೆದ ವರ್ಷ, ಅಕ್ಟೋಬರ್ 31ರಂದು, ರಾಷ್ಟ್ರ ಕೃತಜ್ಞತಾಪೂರ್ವಕವಾಗಿ ಪಟೇಲ್ ಅವರ 150ನೇ ಜಯಂತಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಿತು. ವಲ್ಲಭಭಾಯಿ ಪಟೇಲ್ ಅವರ 150 ನೇ ಜಯಂತಿಗೆ ಸಂಬಂಧಿಸಿದ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಈ ಆಚರಣೆಗಳು ಜನರಲ್ಲಿ ರಾಷ್ಟ್ರೀಯ ಏಕತೆ ಮತ್ತು ಹೆಮ್ಮೆಯ ಮನೋಭಾವವನ್ನು ಬಲಪಡಿಸುತ್ತವೆ. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ, ನಮ್ಮ ಪ್ರಾಚೀನ ಸಾಂಸ್ಕೃತಿಕ ಏಕತೆಯ ರಚನೆಯನ್ನುನಮ್ಮ ಪೂರ್ವಜರು ರೂಪಿಸಿದ್ದಾರೆ. ಈ ರಾಷ್ಟ್ರೀಯ ಏಕತೆಯ ಮನೋಭಾವವನ್ನು ಉತ್ತೇಜಿಸುವ ಪ್ರತಿಯೊಂದು ಪ್ರಯತ್ನವೂ ಅತ್ಯಂತ ಶ್ಲಾಘನೀಯ.

ಕಳೆದ ವರ್ಷ, ನವೆಂಬರ್ 7 ರಿಂದ ನಮ್ಮ ರಾಷ್ಟ್ರ ಗೀತೆ ‘ವಂದೇ ಮಾತರಂ’ರಚನೆಯಾಗಿ 150 ವರ್ಷಗಳು ಪೂರ್ಣಗೊಂಡ ಸ್ಮರಣಾರ್ಥ ಹಲವಾರು ಆಚರಣೆಗಳು ನಡೆಯುತ್ತಿವೆ. ಭಾರತ ಮಾತೆಯ ದೇವೀ ಸ್ವರೂಪಕ್ಕೆ ಈ ಗೀತೆ ಪ್ರಾರ್ಥನೆಯಾಗಿದ್ದು, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ರಾಷ್ಟ್ರಪ್ರೇಮದ ಭಾವನೆಯನ್ನು ಉತ್ತೇಜಿಸುತ್ತದೆ. ಮಹಾನ್ ರಾಷ್ಟ್ರೀಯ ಕವಿ ಸುಬ್ರಮಣ್ಯ ಭಾರತಿ ಅವರು ತಮಿಳು ಭಾಷೆಯಲ್ಲಿ ‘ವಂದೇ ಮಾತರಂ ಯಂಬೋಮ್’ಅಂದರೆ ‘ನಾವು ವಂದೇ ಮಾತರಂ ಹೇಳೋಣ’ಎಂಬ ಗೀತೆಯನ್ನು ರಚಿಸಿ, ವಂದೇ ಮಾತರಂ ಭಾವನೆಯನ್ನು ಮತ್ತಷ್ಟು ವಿಸ್ತಾರವಾಗಿ ಜನಮಾನಸದೊಂದಿಗೆ ಸಂಪರ್ಕಿಸಿದರು. ಇತರ ಭಾರತೀಯ ಭಾಷೆಗಳಲ್ಲಿ ಕೂಡಾ ಈ ಗೀತೆಯ ಅನುವಾದ ಜನಪ್ರಿಯವಾಗಿದೆ. ಶ್ರೀ ಅರಬಿಂದೋ ಅವರು ‘ವಂದೇ ಮಾತರಂ’ಅನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರೆ. ಋಷಿಸಮಾನರಾದ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿರುವ ಈ‘ವಂದೇ ಮಾತರಂ’ಗೀತೆ ನಮ್ಮ ರಾಷ್ಟ್ರ-ನಮನದ ಧ್ವನಿಯಾಗಿದೆ.

ಎರಡು ದಿನಗಳ ಹಿಂದೆ ಅಂದರೆ ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯಂದು ರಾಷ್ಟ್ರ, ತನ್ನ ಗೌರವ ನಮನ ಸಲ್ಲಿಸಿತು. 2021 ರಿಂದ ನೇತಾಜಿ ಅವರ ಜನ್ಮ ದಿನವನ್ನು ‘ಪರಾಕ್ರಮ ದಿನದ’ಹೆಸರಿನಲ್ಲಿ ಆಚರಿಸಲಾಗುತ್ತಿದೆ ಅಂದರೆ, ದೇಶದ ನಾಗರಿಕರು, ವಿಶೇಷವಾಗಿ ಯುವಜನತೆ ನೇತಾಜಿಯವರ ಅದಮ್ಯ ದೇಶಭಕ್ತಿಯಿಂದ ಪ್ರೇರಿತರಾಗಬೇಕು ಎಂಬುದು ಇದರ ಉದ್ದೇಶವಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ‘ಜೈ ಹಿಂದ್’ ಘೋಷಣೆಯು ನಮ್ಮ ರಾಷ್ಟ್ರೀಯ ಹೆಮ್ಮೆಯ ಘೋಷಣೆಯಾಗಿದೆ.

ಪ್ರೀತಿಯ ದೇಶಬಾಂಧವರೇ,

ನೀವೆಲ್ಲರೂ ನಮ್ಮ ರೋಮಾಂಚಕ ಗಣರಾಜ್ಯವನ್ನು ಶಕ್ತಿಶಾಲಿಯಾಗಿಸುತ್ತಿದ್ದೀರಿ. ನಮ್ಮ ಮೂರೂ ಸೇನೆಗಳ ವೀರ ಸೈನಿಕರು ಮಾತೃಭೂಮಿಯನ್ನು ರಕ್ಷಿಸಲು ಸದಾ ಜಾಗೃತರಾಗಿದ್ದಾರೆ. ನಮ್ಮ ಕರ್ತವ್ಯನಿಷ್ಠ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ದೇಶವಾಸಿಗಳ ಆಂತರಿಕ ಭದ್ರತೆಗೆ ಸದಾ ಸನ್ನದ್ಧರಾಗಿರುತ್ತಾರೆ.  ನಮ್ಮ ಅನ್ನದಾತರಾಗಿರುವ ರೈತರು, ದೇಶವಾಸಿಗಳಿಗಾಗಿ ಪೋಷಕಾಂಶ ಸಮೃದ್ಧ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದಾರೆ.  ನಮ್ಮ ದೇಶದ ಕಠಿಣ ಪರಿಶ್ರಮಿ ಮತ್ತು ಪ್ರತಿಭಾವಂತ ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಹೊಸ ಮಾನದಂಡಗಳನ್ನು ರಚಿಸುತ್ತಿದ್ದಾರೆ. ನಮ್ಮ ಸಮರ್ಪಿತ ಮನೋಭಾವನೆಯ ವೈದ್ಯರು,ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರು ನಮ್ಮ ದೇಶವಾಸಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ನಮ್ಮ ನಿಷ್ಠಾವಂತ ಸ್ವಚ್ಛತಾ ಕಾರ್ಯಕರ್ತರು ದೇಶವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಮ್ಮ ಶಿಕ್ಷಕರು ಭವಿಷ್ಯದ ಪೀಳಿಗೆಯನ್ನು ರೂಪಿಸುತ್ತಾರೆ. ನಮ್ಮ ವಿಶ್ವದರ್ಜೆಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ದೇಶದ ಅಭಿವೃದ್ಧಿಗೆ ಹೊಸ ದಿಶೆ ನೀಡುತ್ತಾರೆ. ನಮ್ಮ ಕಷ್ಟಪಟ್ಟು ದುಡಿಯುವ ಕಾರ್ಮಿಕ ಸೋದರ-ಸೋದರಿಯರು ರಾಷ್ಟ್ರದ ಪುನರ್ನಿಮಾಣಕ್ಕೆ ಕೊಡುಗೆ ನೀಡುತ್ತಾರೆ. ನಮ್ಮ ಭರವಸೆಯ ಯುವಜನರು ಮತ್ತು ಮಕ್ಕಳು ತಮ್ಮ ಪ್ರತಿಭೆ ಮತ್ತು ಕೊಡುಗೆಯೊಂದಿಗೆ ದೇಶದ ಸುವರ್ಣ ಭವಿಷ್ಯದಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸುತ್ತಾರೆ. ನಮ್ಮ ಪ್ರತಿಭಾವಂತ ಕಲಾವಿದರು, ಶಿಲ್ಪಿಗಳು ಮತ್ತು ಸಾಹಿತಿಗಳು ನಮ್ಮ ಶ್ರೀಮಂತ ಪರಂಪರೆಗೆ ಆಧುನಿಕ ಸ್ಪರ್ಶ ನೀಡುತ್ತಿದ್ದಾರೆ. ದೇಶದ ಬಹುಮುಖ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳ ತಜ್ಞರು ಮಾರ್ಗದರ್ಶನ ನೀಡುತ್ತಿದ್ದಾರೆ. ನಮ್ಮ ಶಕ್ತಿಶಾಲಿ ಉದ್ಯಮಿಗಳು ದೇಶವನ್ನು ಅಭಿವೃದ್ಧಿಪಡಿಸಲು ಮತ್ತು ಸ್ವಾವಲಂಬಿಯಾಗಿಸಲು ಅಪಾರ ಕೊಡುಗೆ ನೀಡುತ್ತಿದ್ದಾರೆ. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮ್ಮ ಕಾರ್ಯಗಳಿಂದ  ಅಸಂಖ್ಯಾತ ಜನರ ಜೀವನಕ್ಕೆ ಬೆಳಕು ನೀಡುತ್ತಿದ್ದಾರೆ. ಸರ್ಕಾರ ಮತ್ತು ಸರ್ಕಾರೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುವವವರು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಸಾರ್ವಜನಿಕ ಸೇವೆಗೆ ಬದ್ಧವಾಗಿರುವ ಜನಪ್ರತಿನಿಧಿಗಳು,ಜನಪರ ಆಶಯಗಳಿಗೆ ಅನುಗುಣವಾಗಿ ಕಲ್ಯಾಣ ಮತ್ತು ಅಭಿವೃದ್ಧಿ ಗುರಿಗಳ ಸಾಧನೆಗೆ ಸಹಾಯ ಮಾಡುತ್ತಿದ್ದಾರೆ. ಹೀಗಾಗಿ, ಎಲ್ಲಾ ಪ್ರಬುದ್ಧ ಮತ್ತು ಸಂವೇದನಾಶೀಲ ನಾಗರಿಕರು ನಮ್ಮ ಗಣರಾಜ್ಯದ ಪ್ರಗತಿಯನ್ನು ಮುನ್ನಡೆಸುತ್ತಿದ್ದಾರೆ. ನಮ್ಮ ಗಣರಾಜ್ಯವನ್ನು ಬಲಪಡಿಸಲು ಶ್ರಮಿಸುತ್ತಿರುವ ಎಲ್ಲಾ ಸಹ ನಾಗರಿಕರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಸಾಗರೋತ್ತರ ಭಾರತೀಯರು ಜಾಗತಿಕ ವೇದಿಕೆಯಲ್ಲಿ ನಮ್ಮ ಗಣರಾಜ್ಯದ ಚಿತ್ರಣಕ್ಕೆ ವೈಭವವನ್ನು ತರುತ್ತಾರೆ. ಅವರಿಗೆ ನನ್ನ ವಿಶೇಷ ಮೆಚ್ಚುಗೆಯನ್ನು ತಿಳಿಸುತ್ತೇನೆ.

ಪ್ರೀತಿಯ ದೇಶವಾಸಿಗಳೇ,

ಇಂದು, ಅಂದರೆ ಜನವರಿ 25 ಅನ್ನು ನಮ್ಮ ದೇಶದಲ್ಲಿ ‘ರಾಷ್ಟ್ರೀಯ ಮತದಾರರ ದಿನ’ವಾಗಿ ಆಚರಿಸಲಾಗುತ್ತದೆ. ನಮ್ಮ ವಯಸ್ಕ ನಾಗರಿಕರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಉತ್ಸಾಹದಿಂದ ತಮ್ಮ ಮತಚಲಾಯಿಸುತ್ತಾರೆ. ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರು ಮತದಾನದ ಹಕ್ಕನ್ನು ಚಲಾಯಿಸುವುದು ರಾಜಕೀಯ ಶಿಕ್ಷಣಕ್ಕೆ ಕಾರಣವಾಗುತ್ತದೆ ಎಂದು ನಂಬಿದ್ದರು. ನಮ್ಮ ಮತದಾರರು, ಬಾಬಾಸಾಹೇಬರ ದೃಷ್ಟಿಕೋನಕ್ಕೆ ಅನುಗುಣವಾಗಿ ತಮ್ಮ ರಾಜಕೀಯ ಅರಿವನ್ನು ಪ್ರದರ್ಶಿಸುತ್ತಿದ್ದಾರೆ. ಮತದಾನದಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ನಮ್ಮ ಗಣರಾಜ್ಯಕ್ಕೆ ಪ್ರಬಲ ಆಯಾಮ ನೀಡುತ್ತದೆ.

ಮಹಿಳೆಯರು ಸಬಲರಾಗುವುದು ಮತ್ತು ಸಾಮರ್ಥ್ಯವಂತರಾಗುವುದು ದೇಶದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದೆ. ಅವರ ಆರೋಗ್ಯ, ಶಿಕ್ಷಣ, ಸುರಕ್ಷತೆ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಕೈಗೊಳ್ಳಲಾಗುತ್ತಿರುವ ಪ್ರಯತ್ನಗಳಿಂದ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿ ಹೆಚ್ಚಳವಾಗಿದೆ. ‘ಬೇಟೀ ಬಚಾವೋ, ಬೇಟೀ ಪಢಾವೋ’ಅಭಿಯಾನದಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ದೊರೆತಿದೆ. ‘ಪ್ರಧಾನ ಮಂತ್ರಿ – ಜನ್ ಧನ್ ಯೋಜನೆ’ಅಡಿಯಲ್ಲಿ ಈಗಿನವರೆಗೂ 57 ಕೋಟಿಗಿಂತಲೂ ಅಧಿಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ ಮಹಿಳೆಯರ ಖಾತೆಗಳು ಸುಮಾರು 56 ಪ್ರತಿಶತದಷ್ಟಿದೆ.

ನಮ್ಮ ಸೋದರಿಯರು ಮತ್ತು ಹೆಣ್ಣುಮಕ್ಕಳು, ಸಾಂಪ್ರದಾಯಿಕ ರೂಢಿಗಳನ್ನು ಮುರಿದು ಮುಂದೆ ಸಾಗುತ್ತಿದ್ದಾರೆ. ಮಹಿಳೆಯರು ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ. ಸ್ವ-ಸಹಾಯ ಗುಂಪುಗಳಿಗೆ ಸಂಬಂಧಿಸಿದ ಹತ್ತು ಕೋಟಿಗೂ ಹೆಚ್ಚು ಸೋದರಿಯರು ಅಭಿವೃದ್ಧಿಯ ಹೊಸ ವ್ಯಾಖ್ಯಾನವನ್ನು ಬರೆಯುತ್ತಿದ್ದಾರೆ. ಹೊಲ- ಕೊಟ್ಟಿಗೆಯಿಂದ ಬಾಹ್ಯಾಕಾಶಕ್ಕೆ,ಸ್ವಯಂ ಉದ್ಯೋಗದಿಂದ ಸೈನ್ಯದವರೆಗೆ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳು ವಿಶ್ವ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಭಾರತದ ಹೆಣ್ಣುಮಕ್ಕಳು ICC Women’s Cricket World Cup ಮತ್ತು ಆ ನಂತರ Blind Women’s T20 World Cup ಗೆದ್ದು ಸ್ವರ್ಣಾಕ್ಷಗಳಲ್ಲಿ ಇತಿಹಾಸ ಬರೆದಿದ್ದಾರೆ. ಕಳೆದ ವರ್ಷChess World Cup ನ ಅಂತಿಮ ಪಂದ್ಯವು ಭಾರತದ ಇಬ್ಬರು ಹೆಣ್ಣುಮಕ್ಕಳ ನಡುವೆ ನಡೆಯಿತು.ಕ್ರೀಡಾ ಜಗತ್ತಿನಲ್ಲಿ ನಮ್ಮ ಹೆಣ್ಣುಮಕ್ಕಳ ಪ್ರಾಬಲ್ಯಕ್ಕೆ ಈ ಉದಾಹರಣೆಗಳೇ ಸಾಕ್ಷಿ. ಇಂತಹ ಹೆಣ್ಣು ಮಕ್ಕಳ ಬಗ್ಗೆ ದೇಶವಾಸಿಗಳು ಹೆಮ್ಮೆ ಪಡುತ್ತಾರೆ.

ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಸರಿಸುಮಾರು 46 ಪ್ರತಿಶತದಷ್ಟಿದೆ. ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಹೊಸ ಎತ್ತರ ನೀಡುವ ‘ನಾರಿ ಶಕ್ತಿ ವಂದನಾ ಕಾಯ್ದೆ’ ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಚಿಂತನೆಗೆ ಅಭೂತಪೂರ್ವ ಶಕ್ತಿ ನೀಡಲಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಮಹಿಳಾ ಶಕ್ತಿಯ ಪಾತ್ರ ಮಹತ್ವದ್ದಾಗಿದೆ. ಅವರ ಹೆಚ್ಚುತ್ತಿರುವ ಕೊಡುಗೆಯೊಂದಿಗೆ,ನಮ್ಮ ದೇಶವು ಲಿಂಗ ಸಮಾನತೆಯ ಆಧಾರದ ಮೇಲೆ ಅಂತರ್ಗತ ಗಣರಾಜ್ಯದ ಉದಾಹರಣೆಯನ್ನು ಪ್ರಸ್ತುತಪಡಿಸುತ್ತದೆ.

ಎಲ್ಲರನ್ನೊಳಗೊಳ್ಳುವ ಚಿಂತನೆಯೊಂದಿಗೆ ವಂಚಿತ ವರ್ಗಗಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕಳೆದ ವರ್ಷ ನವೆಂಬರ್ 15 ರಂದು,ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದಂದು ದೇಶವಾಸಿಗಳು ಐದನೇ 'ಬುಡಕಟ್ಟು ಗೌರವ ದಿನ'ವನ್ನು ಆಚರಿಸಿದರು ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಗಳು ಸಂಪನ್ನಗೊಂಡವು.‘ಆದಿ ಕರ್ಮಯೋಗಿ’ಅಭಿಯಾನದ ಮೂಲಕ, ಬುಡಕಟ್ಟು ಸಮುದಾಯದ ಜನರಲ್ಲಿ ನಾಯಕತ್ವದ ಸಾಮರ್ಥ್ಯಗಳನ್ನು ಹೆಚ್ಚಿಸಲಾಯಿತು. ಕಳೆದ ವರ್ಷಗಳಲ್ಲಿ,ಬುಡಕಟ್ಟು ಸಮಾಜದ ಭವ್ಯ ಇತಿಹಾಸವನ್ನು ದೇಶವಾಸಿಗಳಿಗೆ ಪರಿಚಯಿಸಲು ಸರ್ಕಾರವು ವಸ್ತುಸಂಗ್ರಹಾಲಯಗಳ ನಿರ್ಮಾಣ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅವರ ಕಲ್ಯಾಣ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ‘ರಾಷ್ಟ್ರೀಯ ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನಾ ಅಭಿಯಾನ’ದ ಅಡಿಯಲ್ಲಿ, ಈವರೆಗೆ 6 ಕೋಟಿಗೂ ಅಧಿಕ ಸ್ಕ್ರೀನಿಂಗ್ ಮಾಡಲಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಸರಿ ಸುಮಾರು ಒಂದು ಲಕ್ಷ ನಲವತ್ತು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಸಾಧಾರಣವಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಇಂತಹ ಅಭಿಯಾನಗಳು ಬುಡಕಟ್ಟು ಸಮುದಾಯಗಳಲ್ಲಿ ಸಂಪ್ರದಾಯಗಳು ಮತ್ತು ಆಧುನಿಕ ಅಭಿವೃದ್ಧಿಯ ನಡುವೆ ಸಾಮರಸ್ಯವನ್ನು ತರುವ ಕೆಲಸ ಮಾಡುತ್ತಿವೆ. 'ಧರ್ತಿ ಆಬ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ' ಮತ್ತು 'ಪಿಎಂ-ಜನ್ ಮನ್ ಯೋಜನೆ'ಮೂಲಕ ಪಿವಿಟಿಜಿ, ಸಮುದಾಯಗಳು ಸೇರಿದಂತೆ ಎಲ್ಲಾ ಬುಡಕಟ್ಟು ಸಮುದಾಯಗಳನ್ನು ಸಶಕ್ತಗೊಳಿಸಿದೆ.

ನಮ್ಮ ಅನ್ನದಾತನಾಗಿರುವ ರೈತ, ನಮ್ಮ ನಮ್ಮ ಸಮಾಜ ಮತ್ತು ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ಶ್ರಮವಹಿಸಿ ದುಡಿಯುವ ಪೀಳಿಗೆಯ ರೈತರು ನಮ್ಮ ದೇಶವನ್ನು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಯನ್ನಾಗಿ ಮಾಡಿದ್ದಾರೆ. ಕೃಷಿ ಆಧಾರಿತ ಉತ್ಪನ್ನಗಳನ್ನು ರಫ್ತು ಮಾಡಲು ರೈತರ ಪರಿಶ್ರಮದಿಂದ ಮಾತ್ರ ಸಾಧ್ಯವಾಗುತ್ತಿದೆ. ಅನೇಕ ರೈತರು ಯಶಸ್ಸಿನ ಅತ್ಯಂತ ಪ್ರಭಾವಶಾಲಿ ಉದಾಹರಣೆಗಳನ್ನು ಪ್ರಸ್ತುತಪಡಿಸಿದ್ದಾರೆ. ರೈತ ಬಂಧುಗಳಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ,ರಿಯಾಯಿತಿ ಬಡ್ಡಿಯಲ್ಲಿ ಸಾಲ,ಪರಿಣಾಮಕಾರಿ ವಿಮಾ ರಕ್ಷಣೆ,ಕೃಷಿಗಾಗಿ ಉತ್ತಮ ಗುಣಮಟ್ಟದ ಬೀಜಗಳು, ನೀರಾವರಿ ಸೌಲಭ್ಯ ದೊರೆಯಬೇಕು, ಹೆಚ್ಚಿನ ಉತ್ಪಾದನೆಗೆ ರಸಗೊಬ್ಬರ ಲಭ್ಯವಾಗಬೇಕು,ಆಧುನಿಕ ಕೃಷಿ ಪದ್ಧತಿಯೊಂದಿಗೆ ಸಾವಯವ ಕೃಷಿಗೆ ಉತ್ತೇಜನ ನೀಡಬೇಕು ಎಂಬೆಲ್ಲಾ ವಿಷಯಗಳಿಗೆ ಆದ್ಯತೆ ನೀಡಲಾಗುತ್ತಿದೆ.‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಮೂಲಕ ರೈತ ಸೋದರ-ಸೋದರಿಯರ ಕೊಡುಗೆಗೆ ಗೌರವ ನೀಡಲಾಗುತ್ತಿದೆ ಮತ್ತು ಅವರ ಪ್ರಯತ್ನಗಳಿಗೆ ಬಲ ತುಂಬಲಾಗುತ್ತಿದೆ.

ದಶಕಗಳಿಂದ ಬಡತನದೊಂದಿಗೆ ಹೋರಾಡುತ್ತಿದ್ದ ಕೋಟ್ಯಂತರ ದೇಶವಾಸಿಗಳನ್ನು ಬಡತನ ರೇಖೆಗಿಂತ ಮೇಲೆತ್ತಲಾಗಿದೆ. ಅಷ್ಟೇ ಅಲ್ಲದೆ.ಅವರು ಪುನಃ ಬಡತನದ ಬಾಳಿಗೆ ತೆರಳದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. 140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಕಲ್ಪನೆಯ ಆಧಾರದ ಮೇಲೆ ಅಂತ್ಯೋದಯ ಸ್ಫೂರ್ತಿಯನ್ನು ಜಾರಿಗೊಳಿಸುವ ವಿಶ್ವದ ಅತಿದೊಡ್ಡ ಯೋಜನೆ 'ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ'ಜಾರಿಗೊಳಿಸಲಾಗಿದೆ. ಈ ಯೋಜನೆಯಿಂದ ಸರಿಸುಮಾರು 81 ಕೋಟಿ ಫಲಾನುಭವಿಗಳಿಗೆ ನೆರವು ದೊರೆತಿದೆ. ಬಡ ಕುಟುಂಬಗಳಿಗೆ ವಿದ್ಯುತ್,ನೀರು,ಶೌಚಾಲಯ ಹೊಂದಿರುವ 4ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ನಿರ್ಮಿಸಿ, ಅವರುಗೌರವಯುತವಾಗಿ ಜೀವಿಸಲು ಮತ್ತು ಮುಂದೆ ಸಾಗಲು ಆಧಾರ ಒದಗಿಸಲಾಗಿದೆ. ಬಡವರ ಕಲ್ಯಾಣಕ್ಕಾಗಿ ಮಾಡಿದ ಇಂತಹ ಪ್ರಯತ್ನಗಳು ಮಹಾತ್ಮ ಗಾಂಧೀಜಿಯವರ ಸರ್ವೋದಯ ಆದರ್ಶವನ್ನು ಕಾರ್ಯರೂಪಕ್ಕೆ ತರುತ್ತವೆ.

ವಿಶ್ವದಲ್ಲೇ ಅತಿ ಹೆಚ್ಚು ಯುವಜನತೆಯನ್ನು ಹೊಂದಿರುವ ದೇಶ ನಮ್ಮದಾಗಿದೆ. ನಮ್ಮ ಯುವಜನರಲ್ಲಿ ಅಪಾರ ಪ್ರತಿಭೆ ಇರುವುದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಯುವ ಉದ್ಯಮಿಗಳು,ಕ್ರೀಡಾಪಟುಗಳು,ವಿಜ್ಞಾನಿಗಳು ಮತ್ತು ವೃತ್ತಿಪರರು ದೇಶಕ್ಕೆ ಹೊಸ ಶಕ್ತಿಯನ್ನು ತುಂಬುತ್ತಿದ್ದಾರೆ ಮತ್ತು ಜಾಗತಿಕ ಮಟ್ಟದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇಂದು,ನಮ್ಮ ಹೆಚ್ಚಿನ ಸಂಖ್ಯೆಯ ಯುವಜನರು  ಸ್ವಯಂ ಉದ್ಯೋಗದ ಯಶಸ್ಸಿನ ಪ್ರಭಾವಶಾಲಿ ಉದಾಹರಣೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ನಮ್ಮ ದೇಶದ ಅಭಿವೃದ್ಧಿ ಪಯಣದ ಧ್ವಜಧಾರಿಗಳು ನಮ್ಮ ಯುವಜನರಾಗಿದ್ದಾರೆ. ‘ಮೇರಾ ಯುವ ಭಾರತ್‘ಅಥವಾ ‘ಮೈ ಭಾರತ್’ ಎನ್ನುವುದು ತಂತ್ರಜ್ಞಾನದ ಸಹಾಯದಿಂದ ಚಾಲಿತ ಅನುಭವ ಆಧಾರಿತ ಶಿಕ್ಷಣ ವ್ಯವಸ್ಥೆಯಾಗಿದೆ. ಇದು ನಾಯಕತ್ವ ಮತ್ತು ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶಗಳೊಂದಿಗೆ ಯುವಜನರನ್ನು ಸಂಪರ್ಕಿಸುತ್ತದೆ. ನಮ್ಮ ದೇಶದಲ್ಲಿ ನವೋದ್ಯಮಗಳ ಪ್ರಭಾವಶಾಲಿ ಯಶಸ್ಸಿನ ಪ್ರಮುಖ ಶ್ರೇಯ ನಮ್ಮ ಯುವ ಉದ್ಯಮಿಗಳಿಗೆ ಸಲ್ಲುತ್ತದೆ. ಯುವ ಪೀಳಿಗೆಯ ಆಕಾಂಕ್ಷೆಗಳನ್ನು ಕೇಂದ್ರೀಕರಿಸಿದ ನೀತಿಗಳು ಮತ್ತು ಕಾರ್ಯಕ್ರಮಗಳ ಬಲದ ಮೇಲೆ ದೇಶದ ಅಭಿವೃದ್ಧಿಯು ವೇಗ ಪಡೆಯುತ್ತದೆ.2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಯುವ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ.

ಪ್ರೀತಿಯ ದೇಶವಾಸಿಗಳೇ,

ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ವಿಶ್ವ ವೇದಿಕೆಯಲ್ಲಿ ಅನಿಶ್ಚಿತತೆಯ ಹೊರತಾಗಿಯೂ,ಭಾರತದಲ್ಲಿ ಆರ್ಥಿಕ ಬೆಳವಣಿಗೆ ಪ್ರಗತಿಯಲ್ಲಿದೆ. ಸದ್ಯದಲ್ಲಿಯೇ ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ.

ವಿಶ್ವದರ್ಜೆಯ ಮೂಲಸೌಕರ್ಯಗಳ ನಿರ್ಮಾಣದಲ್ಲಿ ಹೂಡಿಕೆ ಮಾಡುವ ಮೂಲಕ,ನಾವು ನಮ್ಮ ಆರ್ಥಿಕ ರಚನೆಯನ್ನು ಉನ್ನತ ಮಟ್ಟದಲ್ಲಿ ಪುನರ್ನಿರ್ಮಿಸುತ್ತಿದ್ದೇವೆ. ಆರ್ಥಿಕ ಭವಿಷ್ಯವನ್ನು ನಿರ್ಮಿಸುವ ಪಯಣದಲ್ಲಿ,ಸ್ವಾವಲಂಬನೆ ಮತ್ತು ಸ್ವದೇಶೀಯತೆ ನಮ್ಮ ಮೂಲ ಮಂತ್ರಗಳಾಗಿವೆ.

ಸ್ವಾತಂತ್ರ್ಯಾನಂತರ ದೇಶದ ಆರ್ಥಿಕ ಏಕೀಕರಣಕ್ಕೆ ಮಹತ್ವದ ನಿರ್ಧಾರವಾದ ಜಿಎಸ್‌ಟಿ ಜಾರಿಯಿಂದ ಒಂದು ರಾಷ್ಟ್ರ,ಒಂದು ಮಾರುಕಟ್ಟೆ ಎಂಬ ವ್ಯವಸ್ಥೆ ಜಾರಿಗೆ ಬಂದಿದೆ. ಜಿಎಸ್‌ಟಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಇತ್ತೀಚಿನ ನಿರ್ಧಾರವು ನಮ್ಮ ಆರ್ಥಿಕತೆಗೆ ಮತ್ತಷ್ಟು ಪ್ರಚೋದನೆಯನ್ನು ನೀಡುತ್ತದೆ. ಕಾರ್ಮಿಕ ಸುಧಾರಣೆಗಳ ಕ್ಷೇತ್ರದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲಾಗಿದೆ. ಇದು ನಮ್ಮ ಕಾರ್ಮಿಕ ಸೋದರ-ಸೋದರಿಯರಿಗೆ ಪ್ರಯೋಜನ ನೀಡುತ್ತದೆ ಮತ್ತು ಉದ್ಯಮಗಳ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.

ಪ್ರೀತಿಯ ದೇಶಬಾಂಧವರೇ,

ಪ್ರಾಚೀನ ಕಾಲದಿಂದಲೂ.ಇಡೀ ಮನು ಕುಲವು ನಮ್ಮ ನಾಗರಿಕತೆ,ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳಿಂದ ಪ್ರಯೋಜನ ಪಡೆಯುತ್ತಿದೆ. ಆಯುರ್ವೇದ,ಯೋಗ ಮತ್ತು ಪ್ರಾಣಾಯಾಮವನ್ನು ವಿಶ್ವ ಸಮುದಾಯವೇ ಮೆಚ್ಚಿದೆ ಮತ್ತು ಅಳವಡಿಸಿಕೊಂಡಿದೆ. ಅನೇಕ ಮಹಾನ್ ವ್ಯಕ್ತಿಗಳು ನಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಐಕ್ಯತೆಯ ಪ್ರವಾಹಕ್ಕೆ ಅಡೆತಡೆಯಿಲ್ಲದ ಹರಿವನ್ನು ನೀಡಿದ್ದಾರೆ. ಕೇರಳದಲ್ಲಿ ಜನಿಸಿದ ಮಹಾನ್ ಕವಿ,ಸಮಾಜ ಸುಧಾರಕ ಮತ್ತು ಆಧ್ಯಾತ್ಮಿಕ ಮುಖಂಡ ಶ್ರೀನಾರಾಯಣ ಗುರುಗಳ ಪ್ರಕಾರ,ಜಾತಿ ಮತ್ತು ಪಂಥದ ತಾರತಮ್ಯವಿಲ್ಲದೆ ಜನರೆಲ್ಲರೂ ಭ್ರಾತೃತ್ವ ಭಾವನೆಯಿಂದ ವಾಸಿಸುವ ಸ್ಥಳವನ್ನು ಆದರ್ಶವೆಂದು ಪರಿಗಣಿಸಲಾಗಿದೆ. ನಾನು ಶ್ರೀ ನಾರಾಯಣ ಗುರುಗಳ ಈ ಚಿಂತನೆಯನ್ನು ಅವರ ಭಾಷೆಯಲ್ಲಿ ಪುನರಾವರ್ತಿಸಲು ಪ್ರಯತ್ನಿಸುತ್ತೇನೆ:

ಜಾತಿ- ಭೇದಂ ಮತ್-ದ್ವೇಷಂ, ಎದುಂ-ಇಲ್ಲಾದೇ ಸರ್ವರುಂ

ಸೋದ್-ರತ್ವೇನ್ ವಾಡುನ್ನ, ಮಾತೃಕಾ-ಸ್ಥಾನ್ ಮಾನಿತ್.

ಇಂದಿನ ಭಾರತ ತನ್ನ ಭವ್ಯವಾದ ಸಂಪ್ರದಾಯಗಳನ್ನು ಜಾಗೃತಗೊಳಿಸಿ ಹೊಸ ಆತ್ಮಸ್ಥೈರ್ಯದೊಂದಿಗೆ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎನಿಸಿದೆ. ಇತ್ತೀಚಿನ ವರ್ಷಗಳಲ್ಲಿ,ನಮ್ಮ ಆಧ್ಯಾತ್ಮಿಕ ಸಂಪ್ರದಾಯಗಳ ಪವಿತ್ರ ಸ್ಥಳಗಳು ಸಾರ್ವಜನಿಕ ಜಾಗೃತಿಯೊಂದಿಗೆ ಜೋಡಣೆಯಾಗಿದೆ.

ನಿಗದಿತ ಅವಧಿಯೊಳಗೆ ಗುಲಾಮಗಿರಿಯ ಮನೋಭಾವನೆಯಿಂದ ಮುಕ್ತರಾಗಲು ಕಾಲಮಿತಿಯ ಸಂಕಲ್ಪ ಕೈಗೊಳ್ಳಲಾಗಿದೆ. ಭಾರತೀಯ ಜ್ಞಾನ ಪರಂಪರೆಯು ತತ್ವಶಾಸ್ತ್ರ,ವೈದ್ಯಕೀಯ,ಖಗೋಳಶಾಸ್ತ್ರ,ಗಣಿತ,ಸಾಹಿತ್ಯ ಮತ್ತು ಕಲೆಯ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಭಾರತೀಯ ಸಂಪ್ರದಾಯದಲ್ಲಿ ಲಭ್ಯವಿರುವ ಸೃಜನಶೀಲತೆಯನ್ನು ‘ಜ್ಞಾನ್ ಭಾರತಂ ಮಿಷನ್’ ನಂತಹ ಪ್ರಯತ್ನಗಳ ಮೂಲಕ ಉಳಿಸಿ ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ಈ ಅಭಿಯಾನ ಆಧುನಿಕ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಮೂಲ್ಯ ಹಸ್ತಪ್ರತಿಗಳಲ್ಲಿ ಸಂಗ್ರಹವಾಗಿರುವ ಭಾರತದ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಭಾರತೀಯ ಭಾಷೆಗಳು ಮತ್ತು ಭಾರತೀಯ ಜ್ಞಾನ ಸಂಪ್ರದಾಯಕ್ಕೆ ಆದ್ಯತೆ ನೀಡುವ ಮೂಲಕ,ನಾವು ಸ್ವಾವಲಂಬನೆಯ ಪ್ರಯತ್ನಗಳಿಗೆ ಸಾಂಸ್ಕೃತಿಕ ಆಧಾರವನ್ನು ಒದಗಿಸುತ್ತಿದ್ದೇವೆ.

ಎಂಟನೇ ಶೆಡ್ಯೂಲ್‌ನಲ್ಲಿರುವ ಎಲ್ಲಾ ಭಾರತೀಯ ಭಾಷೆಗಳಲ್ಲಿ ಭಾರತದ ಸಂವಿಧಾನವು ಈಗ ಲಭ್ಯವಿದೆ. ಭಾರತೀಯ ಭಾಷೆಗಳಲ್ಲಿ ಸಂವಿಧಾನವನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ದೇಶವಾಸಿಗಳಲ್ಲಿ ಸಾಂವಿಧಾನಿಕ ರಾಷ್ಟ್ರೀಯತೆಯನ್ನು ಪಸರಿಸುತ್ತದೆ ಮತ್ತು ಸ್ವಾಭಿಮಾನದ ಭಾವನೆಯನ್ನು ಬಲಪಡಿಸುತ್ತದೆ.

ಸರ್ಕಾರ ಮತ್ತು ಜನಸಾಮಾನ್ಯರ ನಡುವಿನ ಅಂತರ ನಿರಂತರವಾಗಿ ಕಡಿಮೆಯಾಗುತ್ತಿದೆ. ಪರಸ್ಪರ ನಂಬಿಕೆಯ ಆಧಾರದ ಮೇಲೆ ಉತ್ತಮ ಆಡಳಿತಕ್ಕೆ ಒತ್ತು ನೀಡಲಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅನೇಕ ಅನಗತ್ಯ ನಿಯಮಗಳನ್ನು ರದ್ದುಪಡಿಸಲಾಗಿದೆ,ಅನೇಕ ಅನುಸರಣೆಗಳನ್ನು ರದ್ದುಪಡಿಸಲಾಗಿದೆ ಮತ್ತು ವ್ಯವಸ್ಥೆಗಳನ್ನು ಸರಳಗೊಳಿಸಲಾಗಿದೆ.ತಂತ್ರಜ್ಞಾನದ ಮೂಲಕ ಸೌಲಭ್ಯಗಳೊಂದಿಗೆ ನೇರವಾಗಿ ಫಲಾನುಭವಿಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ದೈನಂದಿನ ಜೀವನವನ್ನು ಸುಧಾರಿಸುವ ಉದ್ದೇಶದಿಂದ ಸುಲಭ ಜೀವನ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ.

ಕಳೆದ ದಶಕದಲ್ಲಿ,ಸಾರ್ವಜನಿಕ ಸಹಭಾಗಿತ್ವದ ಮೂಲಕ ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಪ್ರಮುಖ ರಾಷ್ಟ್ರೀಯ ಅಭಿಯಾನಗಳಿಗೆ ಸಾಮೂಹಿಕ ಚಳುವಳಿಗಳ ರೂಪ ನೀಡಲಾಗಿದೆ. ಪ್ರತಿ ಗ್ರಾಮ ಮತ್ತು ನಗರದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಪ್ರಗತಿಪರ ಬದಲಾವಣೆಯ ಮಾಧ್ಯಮವನ್ನಾಗಿ ಮಾಡಲಾಗಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ದೇಶವಾಸಿಗಳೆಲ್ಲರ ಸಾಮಾನ್ಯ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಅತ್ಯಂತ ಶಕ್ತಿಯಿದೆ. ಸರ್ಕಾರ ಕೈಗೊಳ್ಳುವ ಪ್ರಯತ್ನಗಳಿಗೆ ಸಮಾಜದಿಂದ ಸಕ್ರಿಯ ಬೆಂಬಲ ದೊರೆತಾಗ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸುತ್ತವೆ. ಉದಾಹರಣೆಗೆ,ನಮ್ಮ ದೇಶವಾಸಿಗಳು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡಿದ್ದಾರೆ. ಇಂದು ವಿಶ್ವದ ಅರ್ಧಕ್ಕಿಂತ ಹೆಚ್ಚು ಡಿಜಿಟಲ್ ವಹಿವಾಟು ಭಾರತದಲ್ಲಿ ನಡೆಯುತ್ತಿದೆ. ಚಿಕ್ಕ ಅಂಗಡಿಗಳಲ್ಲಿ ಸರಕುಗಳನ್ನು ಖರೀದಿಸುವುದರಿಂದ ಹಿಡಿದು ಆಟೋ-ರಿಕ್ಷಾ ದರಗಳನ್ನು ಪಾವತಿಸುವವರೆಗೆ,ಡಿಜಿಟಲ್ ಪಾವತಿಗಳ ಬಳಕೆಯು ಜಾಗತಿಕ ಸಮುದಾಯಕ್ಕೆ ಪ್ರಭಾವಶಾಲಿ ಉದಾಹರಣೆಯಾಗಿದೆ.ಅದೇ ರೀತಿ,ಇತರ ರಾಷ್ಟ್ರೀಯ ಗುರಿಗಳ ಸಾಧನೆಯಲ್ಲಿ ದೇಶವಾಸಿಗಳೆಲ್ಲರೂ ಸಕ್ರಿಯ ಪಾತ್ರ ನಿರ್ವಹಿಸುತ್ತಾರೆ  ಎಂದು ನಾನು ಆಶಿಸುತ್ತೇನೆ.

ಪ್ರೀತಿಯ ದೇಶವಾಸಿಗಳೇ,

ಕಳೆದ ವರ್ಷ ನಮ್ಮ ದೇಶವು ಆಪರೇಷನ್ ಸಿಂದೂರ್ ಮೂಲಕ, ಭಯೋತ್ಪಾದಕರ ಶಿಬಿರಗಳ ಮೇಲೆ ತೀವ್ರ ದಾಳಿ ನಡೆಸಿತು. ಭಯೋತ್ಪಾದನೆಯ ಅನೇಕ ಅಡಗುತಾಣಗಳನ್ನು ನಾಶಪಡಿಸಲಾಯಿತು ಮತ್ತು ಅನೇಕ ಭಯೋತ್ಪಾದಕರನ್ನು ಅಂತ್ಯಗೊಳಿಸಲಾಯಿತು. ಆಪರೇಷನ್ ಸಿಂದೂರ್ ನ  ಐತಿಹಾಸಿಕ ಯಶಸ್ಸು ಭದ್ರತಾ ಕ್ಷೇತ್ರದಲ್ಲಿ ನಮ್ಮ ಸ್ವಾವಲಂಬನೆಯ ಶಕ್ತಿಯಿಂದ ಚಾಲಿತವಾಗಿದೆ.

ಸಿಯಾಚಿನ್ ಮೂಲ ಶಿಬಿರ ತಲುಪಿದ ನಂತರ,ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಕೂಡಾ ದೇಶವನ್ನು ರಕ್ಷಿಸಲು ಧೈರ್ಯಶಾಲಿ ಸೈನಿಕರು ಸಂಪೂರ್ಣ ಸಿದ್ಧರಾಗಿ ಉತ್ಸಾಹದಿಂದ ಇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳಾದ ಸುಖೋಯ್ ಮತ್ತು ರಫೇಲ್ ನಲ್ಲಿ ಹಾರಾಟ ನಡೆಸುವ ಅವಕಾಶವೂ ನನಗೆ ಸಿಕ್ಕಿತು. ವಾಯುಪಡೆಯ ಯುದ್ಧ ಸಾಮರ್ಥ್ಯಗಳ ಬಗ್ಗೆ ನನಗೆ ಅರಿವಾಯಿತು.ಭಾರತೀಯ ನೌಕಾಪಡೆಯ ದೇಶೀಯ ನಿರ್ಮಿತ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್‌ನ ಅಸಾಧಾರಣ ಸಾಮರ್ಥ್ಯಗಳನ್ನು ನಾನು ಕಣ್ಣಾರೆ ಕಂಡೆನು. ನಾನು ನೌಕಾ ಜಲಾಂತರ್ಗಾಮಿ ಐಎನ್ಎಸ್ ವಾಗ್ಶೀರ್‌ನಲ್ಲಿ ಸಮುದ್ರದ ಆಳಕ್ಕೆ ಹೋದೆ. ನಮ್ಮ ಭೂಸೇನೆ,ವಾಯುಪಡೆ ಮತ್ತು ನೌಕಾಪಡೆಯ ಸಾಮರ್ಥ್ಯದ ಆಧಾರದಲ್ಲಿ, ನಮ್ಮ ದೇಶವಾಸಿಗಳಿಗೆ ನಮ್ಮ ಭದ್ರತಾ ಸಾಮರ್ಥ್ಯಗಳಲ್ಲಿ ಸಂಪೂರ್ಣ ವಿಶ್ವಾಸವಿದೆ.

ಪ್ರೀತಿಯ ದೇಶವಾಸಿಗಳೇ,

ಪರಿಸರ ಸಂರಕ್ಷಣೆ ಇಂದು ನಿರ್ಣಾಯಕ ಆದ್ಯತೆಯಾಗಿದೆ. ಪರಿಸರಕ್ಕೆ ಸಂಬಂಧಿಸಿದ ಹಲವು ಕ್ಷೇತ್ರಗಳಲ್ಲಿ ಭಾರತವು ವಿಶ್ವ ಸಮುದಾಯವನ್ನು ಮುನ್ನಡೆಸಿದೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ. ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನಶೈಲಿಯು ಭಾರತದ ಸಾಂಸ್ಕೃತಿಕ ಸಂಪ್ರದಾಯದ ಒಂದು ಭಾಗವಾಗಿದೆ. ಈ ಜೀವನಶೈಲಿಯು ಜಗತ್ತಿಗೆ ನಮ್ಮ ಸಂದೇಶವಾದ 'ಪರಿಸರಕ್ಕಾಗಿ ಜೀವನಶೈಲಿ' ಅಥವಾ 'ಜೀವನ'ದ ಆಧಾರವಾಗಿದೆ. ಭೂಮಿ ತಾಯಿಯ ಅಮೂಲ್ಯ ಸಂಪನ್ಮೂಲಗಳು ಭವಿಷ್ಯದ ಪೀಳಿಗೆಗೆ ಲಭ್ಯವಾಗುವಂತೆ ನೋಡಿಕೊಳ್ಳುವ ಪ್ರಯತ್ನಗಳನ್ನು ಮಾಡೋಣ.

ನಮ್ಮ ಸಂಪ್ರದಾಯದಲ್ಲಿ,ಸೃಷ್ಟಿಯಾದ್ಯಂತ ಶಾಂತಿಗಾಗಿ ಪ್ರಾರ್ಥನೆಗಳನ್ನು ಸಲ್ಲಿಸಲಾಗಿದೆ. ಶಾಂತಿಯುತ ಜಗತ್ತನ್ನು ಸ್ಥಾಪಿಸುವುದರಿಂದ ಮಾತ್ರ ಮಾನವೀಯತೆಯ ಭವಿಷ್ಯ ಸುರಕ್ಷಿತವಾಗಿರುತ್ತದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಅಶಾಂತಿಯ ನಡುವೆಯೂ,ಭಾರತವು ವಿಶ್ವ ಶಾಂತಿಯ ಸಂದೇಶವನ್ನು ಹರಡುತ್ತಿದೆ.

ಪ್ರೀತಿಯ ದೇಶವಾಸಿಗಳೇ,

ಭಾರತದ ನಿವಾಸಿಗಳಾಗಿರುವುದು ನಮ್ಮ ಸೌಭಾಗ್ಯವಾಗಿದೆ. ಕವಿ ಗುರು ರವೀಂದ್ರನಾಥ ಟ್ಯಾಗೋರ್ ಒಮ್ಮೆ ನಮ್ಮ ತಾಯ್ನಾಡಿನ ಬಗ್ಗೆ ಹೀಗೆ ಹೇಳಿದರು:

ವೋ ಆಮಾರ್ ದೇಶೇರ್ ಮಾಟೀ, ತೋಮಾರ್ ಪೋರೇ ಠೆಕಾಈ ಮಾಥಾ

ಅಂದರೆ:

ಓ ನನ್ನ ದೇಶದ ಮಣ್ಣೇ,ನಾನು ನಿನ್ನ ಪಾದಗಳಿಗೆ ಶಿರ ಬಾಗಿ ವಂದಿಸುತ್ತೇನೆ.

ಗಣರಾಜ್ಯೋತ್ಸವ ಈ ಬಲವಾದ ದೇಶಭಕ್ತಿಯ ಭಾವನೆಯನ್ನು ಮತ್ತಷ್ಟು ಬಲಪಡಿಸಲು ಸಂಕಲ್ಪ ಮಾಡಲು ಒಂದು ಅವಕಾಶ ಎಂದು ನಾನು ನಂಬುತ್ತೇನೆ. ನಾವೆಲ್ಲರೂ ‘ರಾಷ್ಟ್ರ ಮೊದಲು’ ಎಂಬ ಮನೋಭಾವದೊಂದಿಗೆ ಒಟ್ಟಾಗಿ ಕೆಲಸ ಮಾಡೋಣ ಮತ್ತು ನಮ್ಮ ಗಣರಾಜ್ಯವನ್ನು ಇನ್ನಷ್ಟು ವೈಭವಯುತವಾಗಿ, ಗೌರವಯುತವಾಗಿಸೋಣ.

ನಾನು ಮತ್ತೊಮ್ಮೆ, ನಿಮ್ಮೆಲ್ಲರಿಗೂ, ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಹೇಳುತ್ತಿದ್ದೇನೆ. ನಿಮ್ಮೆಲ್ಲರ ಜೀವನ ಸಂತೋಷ, ಶಾಂತಿ, ಭದ್ರತೆ ಮತ್ತು ಸಾಮರಸ್ಯದಿಂದ ತುಂಬಿರುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ನಿಮ್ಮೆಲ್ಲರಿಗೂ ಉಜ್ವಲ ಭವಿಷ್ಯವನ್ನು ನಾನು ಬಯಸುತ್ತೇನೆ.

ಧನ್ಯವಾದ!

ಜೈಹಿಂದ್!

ಜೈ ಭಾರತ್!

 

*****


(रिलीज़ आईडी: 2218594) आगंतुक पटल : 36
इस विज्ञप्ति को इन भाषाओं में पढ़ें: Tamil , Malayalam , Assamese , English , Khasi , Urdu , Marathi , हिन्दी , Bengali , Punjabi , Gujarati , Odia