ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್‌ನ ಜಾಮ್‌ನಗರದಲ್ಲಿ 1450 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಹಲವು ಯೋಜನೆಗಳಲೋಕಾರ್ಪಣೆ ನೆರವೇರಿಸಿದ ಪ್ರಧಾನಿ
"ಭವ್ಯತೆ ಮತ್ತು ಗಾಂಭೀರ್ಯದ ದೃಷ್ಟಿಯಿಂದ, ʻಸ್ಮೃತಿವನʼವು ʻ9/11ʼ ಅಥವಾ ʻಹಿರೋಶಿಮಾ ಸ್ಮಾರಕʼಕ್ಕಿಂತ ಕಡಿಮೆಯಿಲ್ಲ"
"ಪೋಲೆಂಡ್ ಸರಕಾರದ ಸಹಾಯದ ಹಿಂದೆ, ಮಹಾರಾಜ ದಿಗ್ವಿಜಯ್ ಸಿಂಗ್ ಅವರ ದಯೆ ದೊಡ್ಡ ಪಾತ್ರವನ್ನು ವಹಿಸಿದೆ"
"ಜನಶಕ್ತಿ, ಜ್ಞಾನ ಶಕ್ತಿ, ಜಲಶಕ್ತಿ, ಊರ್ಜಾ ಶಕ್ತಿ ಮತ್ತು ರಕ್ಷಾ ಶಕ್ತಿ ಎಂಬ ಐದು ಸುದೃಢ ಅಡಿಪಾಯಗಳ ಆಧಾರದ ಮೇಲೆ ಗುಜರಾತ್ ಹೊಸ ಎತ್ತರವನ್ನು ಏರುತ್ತಿದೆ.
"ಸೌನಿ(SAUNI) ಯೋಜನೆಯಡಿ ನರ್ಮದಾ ಮಾತೆಯು ಪ್ರತಿಯೊಂದು ಮೂಲೆ ಮೂಲೆಯನ್ನು ತಲುಪುತ್ತಿದ್ದಾಳೆ"
"ಕೋವಿಡ್ ಸಾಂಕ್ರಾಮಿಕ ಸಂಕಷ್ಟದಿಂದ ಹೊರಬರಲು 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ"
"ಜಾಮ್‌ನಗರವು ಉತ್ಪಾದನೆ ಮತ್ತು ಕರಾವಳಿ ಆಧಾರಿತ ಅಭಿವೃದ್ಧಿಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ"
"ಸುಮಾರು 33 ಸಾವಿರ ನಿಬಂಧನೆಗಳು ಮತ್ತು ನಿಯಮಗಳನ್ನು ರದ್ದುಪಡಿಸಲಾಗಿದೆ"
Posted On:
10 OCT 2022 8:32PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಜಾಮ್‌ನಗರದಲ್ಲಿ ನೀರಾವರಿ, ವಿದ್ಯುತ್, ನೀರು ಸರಬರಾಜು ಮತ್ತು ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸುಮಾರು 1450 ಕೋಟಿ ರೂ.ಗಳ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಕಲವಾಡ್/ಜಾಮ್ ನಗರ ತಾಲೂಕಿನ ʻಕಾಲವಾಡ್ ಗ್ರೂಪ್ ಆಗ್ಮೆಂಟೇಶನ್ʼ ನೀರು ಸರಬರಾಜು ಯೋಜನೆ, ʻಮೊರ್ಬಿ-ಮಾಲಿಯಾ-ಜೋಡಿಯಾ ಗ್ರೂಪ್ ಆಗ್ಮೆಂಟೇಶನ್ʼ ನೀರು ಸರಬರಾಜು ಯೋಜನೆ, ಲಾಲ್ಪುರ್ ಬೈಪಾಸ್ ಜಂಕ್ಷನ್ ಮೇಲ್ಸೇತುವೆ, ಹಪಾ ಮಾರ್ಕೆಟ್ ಯಾರ್ಡ್ ರೈಲ್ವೆ ಕ್ರಾಸಿಂಗ್ ಹಾಗೂ ಒಳಚರಂಡಿ ಸಂಗ್ರಹ ಪೈಪ್‌ಲೈನ್ ಮತ್ತು ಪಂಪಿಂಗ್ ಕೇಂದ್ರದ ನವೀಕರಣ ಸೇರಿವೆ. ಪ್ರಧಾನಮಂತ್ರಿ ಅವರು ʻಸೌರಾಷ್ಟ್ರ ಅವತರಣ್ ನೀರಾವರಿ (ಸೌನಿ) ಯೋಜನೆ ಲಿಂಕ್-3ʼರ (ಉಂದ್ ಅಣೆಕಟ್ಟಿನಿಂದ ಸೋನ್ಮತಿ ಅಣೆಕಟ್ಟಿಗೆ) ಪ್ಯಾಕೇಜ್ 7, ʻಸೌನಿ ಯೋಜನಾ ಲಿಂಕ್-1ʼರ ಪ್ಯಾಕೇಜ್-5 (ಉಂದ್-1 ಅಣೆಕಟ್ಟಿನಿಂದ ʻಸಾನಿʼ ಅಣೆಕಟ್ಟಿಗೆ) ಮತ್ತು 40 ಮೆಗಾವ್ಯಾಟ್ ಸಾಮರ್ಥ್ಯದ ʻಹರಿಪರ್ ಸೋಲಾರ್ ಪಿವಿʼ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಸ್ಥಳಕ್ಕೆ ತಮ್ಮ ಆಗಮನದ ಸಂದರ್ಭದಲ್ಲಿ ದೊರೆತ ಭವ್ಯ ಸ್ವಾಗತ ಮತ್ತು ಆಶೀರ್ವಾದಕ್ಕಾಗಿ ಜನತೆಗೆ ಧನ್ಯವಾದ ಅರ್ಪಿಸಿದರು. ನೀರು, ವಿದ್ಯುತ್ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಎಂಟು ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಗಾಗಿ ಪ್ರಧಾನಮಂತ್ರಿಯವರು ಜನರನ್ನು ಅಭಿನಂದಿಸಿದರು. ವಾಲ್ಮೀಕಿ ಸಮುದಾಯದ ಜನರಿಗಾಗಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇದು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಅವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರು ಎರಡು ದಶಕಗಳ ಹಿಂದೆ ಸಂಭವಿಸಿದ ಭೂಕಂಪದಿಂದ ಉಂಟಾದ ಹಾನಿಯನ್ನು ಸ್ಮರಿಸಿದರು. ಭೂಕಂಪದಿಂದ ಉಂಟಾದ ದುರಂತ ಮತ್ತು ವಿನಾಶವು ರಾಜ್ಯದಾದ್ಯಂತ ಹತಾಶೆಯ ವಾತಾವರಣವನ್ನು ಸೃಷ್ಟಿಸಿತ್ತು. ಆದಾಗ್ಯೂ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಬಲದಿಂದ ಗುಜರಾತ್ ಮತ್ತೊಮ್ಮೆ ಎದ್ದುನಿಂತಿತು. ಹತಾಶೆ ಮತ್ತು ವಿನಾಶವನ್ನು ಓಡಿಸಿ ರಾಷ್ಟ್ರದ ಅಗ್ರಸ್ಥಾನಕ್ಕೆ ಏರಿತು. ಕಛ್ ಭೂಕಂಪಕ್ಕೆ ಬಲಿಯಾದವರ ಸ್ಮರಣಾರ್ಥ ನಿರ್ಮಿಸಲಾದ ʻಸ್ಮೃತಿವನʼಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುವಂತೆ ಪ್ರಧಾನಮಂತ್ರಿಯವರು ಜಾಮ್‌ನಗರದ ಜನತೆಗೆ ಮನವಿ ಮಾಡಿದರು. ಭವ್ಯತೆ ಮತ್ತು ಗಾಂಭೀರ್ಯದ ದೃಷ್ಟಿಯಿಂದ, ಈ ಸ್ಮಾರಕವು 9/11 ಅಥವಾ ಹಿರೋಶಿಮಾ ಸ್ಮಾರಕಕ್ಕಿಂತ ಕಡಿಮೆಯಿಲ್ಲ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರು ಜಾಮ್‌ಸಾಹೇಬ್ ಮಹಾರಾಜ ದಿಗ್ವಿಜಯ್ ಸಿಂಗ್ ಅವರನ್ನು ಸ್ಮರಿಸಿದರು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲೆಂಡ್ ಜನತೆಯ ಬಗ್ಗೆ ಅವರಿಗಿದ್ದ ದಯೆಗೆ ಗೌರವ ನಮನ ಸಲ್ಲಿಸಿದರು. ಮಹಾರಾಜ ದಿಗ್ವಿಜಯ್ ಸಿಂಗ್ ಅವರ ನಡೆಯಿಂದಾಗಿ ಪೋಲೆಂಡ್ ಜನರು ಮತ್ತು ಭಾರತೀಯರ ನಡುವೆ ಶಾಶ್ವತವಾದ ಸ್ನೇಹ ಸಂಬಂಧ ಸೃಷ್ಟಿಯಾಯಿತು. ಇದು ಪ್ರಸ್ತುತ ಬಿಕ್ಕಟ್ಟಿನ ಸಮಯದಲ್ಲಿ ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಸಮಯದಲ್ಲಿ ಬಹಳಷ್ಟು ಸಹಾಯ ಮಾಡಿತು. "ಪೋಲೆಂಡ್ ಸರಕಾರದ ಸಹಾಯದ ಹಿಂದೆ, ಮಹಾರಾಜ ದಿಗ್ವಿಜಯ್ ಸಿಂಗ್ ಅವರ ದಯೆ ದೊಡ್ಡ ಪಾತ್ರವನ್ನು ವಹಿಸಿದೆ," ಎಂದು ಅವರು ಹೇಳಿದರು. ಜಾಮ್ ಸಾಹೇಬ್ ನಗರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಪ್ರಯತ್ನವಾಗಿದೆ ಎಂದು ಮೋದಿ ಅವರು ಹೇಳಿದರು. ಜಾಮ್ ನಗರವು ಕ್ರಿಕೆಟ್ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಸೌರಾಷ್ಟ್ರದ ರಣಜಿ ಕ್ರಿಕೆಟ್ ತಂಡವು 2020ರಲ್ಲಿ ಟ್ರೋಫಿಯನ್ನು ಮರಳಿ ತರುವ ಮೂಲಕ ಎಲ್ಲರಲ್ಲೂ ಹೆಮ್ಮೆ ಮೂಡಿಸಿತು ಎಂದರು.
ಅಭಿವೃದ್ಧಿಯ ಐದು ಸಂಕಲ್ಪಗಳು ಗುಜರಾತ್ ರಾಜ್ಯಕ್ಕೆ ಭದ್ರ ಬುನಾದಿಯನ್ನು ಸೃಷ್ಟಿಸಿವೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ಮೊದಲನೆಯದು ʻಜನಶಕ್ತಿ, ಎರಡನೆಯದು ʻಜ್ಞಾನ ಶಕ್ತಿʼ, ಮೂರನೆಯದು ʻಜಲ ಶಕ್ತಿʼ, ನಾಲ್ಕನೆಯದು ʻಊರ್ಜ ಶಕ್ತಿʼ(ಇಂಧನ ಶಕ್ತಿ) ಮತ್ತು ಅಂತಿಮವಾಗಿ ʻರಕ್ಷಾ ಶಕ್ತಿʼ. "ಈ ಸದೃಢ ಅಡಿಪಾಯಗಳ ಆಧಾರದ ಮೇಲೆ ಗುಜರಾತ್ ಹೊಸ ಎತ್ತರವನ್ನು ಏರುತ್ತಿದೆ," ಎಂದು ಶ್ರೀ ಮೋದಿ ಹೇಳಿದರು.
20-25 ವರ್ಷಗಳ ಹಿಂದೆ ಈ ಪ್ರದೇಶ ಮತ್ತು ರಾಜ್ಯದಲ್ಲಿ ಇದ್ದಂತಹ ಸಮಸ್ಯೆಗಳು ಈಗಿನ ಯುವ ಪೀಳಿಗೆಯ ಪಾಲಿಗೆ ಇಲ್ಲ, ಇದು ಅವರ ಅದೃಷ್ಟ ಎಂದು ಪ್ರಧಾನಿ ಗಮನಸೆಳೆದರು. ಮುಖ್ಯಮಂತ್ರಿಯೊಬ್ಬರು ನೀರಿನ ಟ್ಯಾಂಕ್ ಉದ್ಘಾಟನೆಗೆ ಬರುತ್ತಿದ್ದ ದಿನಗಳಿಂದ ಹಿಡಿದು, ಹಿಂದಿನ ಕಾಲದ ಆಯವ್ಯಯಕ್ಕಿಂತಲೂ ಅಧಿಕ ಮೌಲ್ಯದ ಯೋಜನೆಗಳ ಉದ್ಘಾಟನೆಗೆ ಸಾಕ್ಷಿಯಾಗುವ ಇಂದಿನ ಭೇಟಿಯವರೆಗೆ, ಸಾಕಷ್ಟು ಬದಲಾವಣೆಗಳು ಸಂಭವಿಸಿವೆ. ಇಂದು, ನರ್ಮದಾ ಮಾತೆಯು ʻಸೌನಿʼ ಯೋಜನೆಯಡಿ ಮೂಲೆ ಮೂಲೆಗೂ ತಲುಪುತ್ತಿದ್ದಾಳೆ ಎಂದು ಅವರು ಹೇಳಿದರು. ಅಂತೆಯೇ, ʻಜಲ ಜೀವನ್ ಯೋಜನೆʼಯು ಪ್ರತಿ ಮನೆಗೂ ಕೊಳವೆ ಮೂಲಕ ನೀರನ್ನು ತಲುಪಿಸುತ್ತಿದೆ ಎಂದರು. ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಣಾ ಭಾವದಿಂದ ಮತ್ತು ವೇಗವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಅವರು ಮುಖ್ಯಮಂತ್ರಿಗಳನ್ನು ಅವರು ಶ್ಲಾಘಿಸಿದರು.
ಬಡವರ ಕಲ್ಯಾಣವು ತಮ್ಮ ಸರಕಾರದ ಮೊದಲ ಆದ್ಯತೆ ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಯಾವುದೇ ಕುಟುಂಬವು ಹಸಿವಿನಿಂದ ಬಳಲದಂತೆ ಖಾತರಿಪಡಿಸಿಕೊಳ್ಳುವುದು ಸರಕಾರದ ಮೊದಲ ಕಾಳಜಿಯಾಗಿತ್ತು ಎಂದರು. ಜನರು ಹಸಿವಿನಿಂದ ಬಳಲದೆ ಸಾಂಕ್ರಾಮಿಕದ ಸಂಕಷ್ಟದಿಂದ ಹೊರಬರಲು ನೆರವಾಗುವ ನಿಟ್ಟಿನಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ʻಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆʼಯನ್ನು ಈ ವರ್ಷದ ಡಿಸೆಂಬರ್‌ವರೆಗೆ ವಿಸ್ತರಿಸಲಾಗಿದೆ. ಇದರಿಂದ ಯಾವುದೇ ಬಡ ಕುಟುಂಬವು ಎಂಥದ್ದೇ ಕಷ್ಟದ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಮಲಗುವುದನ್ನು ತಪ್ಪಿಸಲಾಗಿದೆ ಎಂದು ಪ್ರಧಾನಿ ಗಮನಸೆಳೆದರು. ʻಒಂದು ದೇಶ-ಒಂದು ಪಡಿತರ ಚೀಟಿʼ ಯೋಜನೆಯ ಪ್ರಯೋಜನಗಳನ್ನು ಉಲ್ಲೇಖಿಸಿದ ಅವರು, ಜೀವನೋಪಾಯಕ್ಕಾಗಿ ಭಾರತದ ಎಲ್ಲಾ ಭಾಗಗಳಿಂದ ಜಾಮ್ ನಗರಕ್ಕೆ ಬರುವ ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂದು ಅವರು ಹೇಳಿದರು.
ಜಾಮ್‌ನಗರದ ತೈಲ ಸಂಸ್ಕರಣಾಗಾರ ಮತ್ತು ತೈಲ ಮಿತವ್ಯಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ನೆಲದ ಮೇಲೆಯೇ ಕಚ್ಚಾತೈಲವನ್ನು ಸಂಸ್ಕರಿಸಲಾಗುತ್ತದೆ ಎಂಬ ಅಂಶವು ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆ ತರುತ್ತದೆ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯದ ʻಡಬಲ್ ಎಂಜಿನ್ʼ ಸರಕಾರವು ರಾಜ್ಯದ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ನಗರವು ಸಂಚಾರ ಸಮಸ್ಯೆಗಳ ಆಗರವಾಗಿದ್ದ ಸಮಯವನ್ನು ಸ್ಮರಿಸಿದ ಶ್ರೀ ಮೋದಿ, ನಾಗರಿಕರ ಜೀವನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಯೋಜಿತ ರಸ್ತೆಗಳು, ಮೇಲ್ಸೇತುವೆಗಳು ಮತ್ತು ಅಂಡರ್‌ಪಾಸ್‌ಗಳನ್ನು ನಿರ್ಮಿಸುವ ಮೂಲಕ ಸಂಪರ್ಕ ಸುಧಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು. 26,000 ಕೋಟಿ ರೂ.ಗಳ ವೆಚ್ಚದಲ್ಲಿ ʻಅಮೃತಸರ-ಭಟಿಂಡಾ-ಜಾಮ್ ನಗರʼ ಕಾರಿಡಾರ್ ಅನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಜಾಮ್‌ನಗರವು ಉತ್ಪಾದನೆ ಮತ್ತು ಕರಾವಳಿ ಆಧಾರಿತ ಅಭಿವೃದ್ಧಿಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಜಾಮ್‌ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ʻಅಂತಾರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಕೇಂದ್ರʼವು, ಜಾಮ್‌ನಗರದ ಆಯುರ್ವೇದಿಕ್ ವಿಶ್ವವಿದ್ಯಾಲಯಕ್ಕೆ ಮುಕುಟಪ್ರಾಯವಾಗಿದೆ. ಇದು ರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಾಮ್‌ನಗರವು ಬಳೆಗಳು, ಸಿಂಧೂರ, ಬಂಧನಿ ಮುಂತಾದ ಶುಭ ಕಾರ್ಯಗಳಿಗೆ ಸಂಬಂಧಿಸಿದ ವಸ್ತುಗಳ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಇದು 'ಸೌಭಾಗ್ಯ ನಗರ'ವಾಗಿ ಬದಲಾಗುತ್ತಿದೆ ಎಂದು ಪ್ರಧಾನಮಂತ್ರಿ ಬಣ್ಣಿಸಿದರು.
ಸುಗಮ ವ್ಯಾಪಾರ ವಹಿವಾಟನ್ನು ಖಾತ್ರಿಪಡಿಸುವ ತಮ್ಮ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಅನುಸರಣೆಯ ಹೊರೆಯನ್ನು ಕಡಿಮೆ ಮಾಡುವ ಬಗ್ಗೆ ಅವರು ಮಾತನಾಡಿದರು. ಸುಮಾರು 33 ಸಾವಿರ ಅನುಸರಣೆಗಳು ಮತ್ತು ನಿಯಮಗಳನ್ನು ತೆಗೆದುಹಾಕಲಾಗಿದೆ. ಅಂತೆಯೇ, ಕಂಪನಿಯ ಕಾನೂನುಗಳ ಅಪರಾಧಮುಕ್ತೀಕರಣವು ಸಹ ವ್ಯಾಪಾರ ಸಮುದಾಯಕ್ಕೆ ಸಹಾಯ ಮಾಡುತ್ತಿದೆ ಎಂದರು. ವಿವಿಧ ಆರ್ಥಿಕ ಸೂಚ್ಯಂಕಗಳಲ್ಲಿ ಭಾರತದ ಪ್ರಗತಿ ಬಗ್ಗೆಯೂ ಅವರು ಮಾತನಾಡಿದರು. ವಿಶೇಷವಾಗಿ ಭಾರತೀಯ ಆರ್ಥಿಕತೆಯ ಬಗ್ಗೆ ಉಲ್ಲೇಖಿಸಿದರು. 2014ರಲ್ಲಿ 10ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ಪ್ರಸ್ತುತ 5ನೇ ಸ್ಥಾನಕ್ಕೆ ಏರಿದೆ. ಸುಗಮ ವ್ಯಾಪಾರದಲ್ಲೂ (ಈಸ್ ಆಫ್ ಡೂಯಿಂಗ್ ಬಿಸಿನೆಸ್) ಭಾರತವು ಅತ್ಯುತ್ತಮ ಪ್ರಗತಿ ಸಾಧಿಸಿದ್ದು, 2014ರಲ್ಲಿದ್ದ 142ನೇ ಸ್ಥಾನದಲ್ಲಿದ್ದ ಭಾರತ, 2020ರಲ್ಲಿ 63ನೇ ಸ್ಥಾನಕ್ಕೆ ಜಿಗಿದಿದೆ ಎಂದರು. ಪ್ರಗತಿಪರ ಕೈಗಾರಿಕಾ ನೀತಿಯನ್ನು ಹೊರತಂದ ರಾಜ್ಯ ಸರಕಾರವನ್ನು ಮೋದಿ ಶ್ಲಾಘಿಸಿದರು. ಅತಿಕ್ರಮಣವನ್ನು ತೆರವುಗೊಳಿಸುವಲ್ಲಿ ಮತ್ತು ರಾಜ್ಯದ ಕರಾವಳಿ ತೀರವನ್ನು ಸ್ವಚ್ಛಗೊಳಿಸುವಲ್ಲಿ ರಾಜ್ಯ ಸರಕಾರದ ಕಾರ್ಯವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಜಾಮ್‌ನಗರ ಕರಾವಳಿಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ಇದು ಜೀವವೈವಿಧ್ಯತೆಯ ಸಂಪತ್ತನ್ನು ಹೊಂದಿದೆ ಎಂದರು.
ಗುಜರಾತ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸುಧಾರಣೆ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ನರೇಂದ್ರ-ಭೂಪೇಂದ್ರ ಸರಕಾರವು ಅಭಿವೃದ್ಧಿ ಯೋಜನೆಯನ್ನು ಸಮರ್ಪಣಾ ಭಾವ ಮತ್ತು ವೇಗದಿಂದ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಹಾಗೂ ಸಂಸದರಾದ ಶ್ರೀ ಸಿ.ಆರ್. ಪಾಟೀಲ್, ಶ್ರೀಮತಿ ಪೂನಂಬೆನ್ ಮದಾಮ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ಗುಜರಾತ್‌ನ ಜಾಮ್‌ನಗರದಲ್ಲಿ ಸುಮಾರು 1450 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಈ ಯೋಜನೆಗಳು ನೀರಾವರಿ, ವಿದ್ಯುತ್, ನೀರು ಸರಬರಾಜು ಮತ್ತು ನಗರ ಮೂಲಸೌಕರ್ಯಗಳಿಗೆ ಸಂಬಂಧಿಸಿದವಾಗಿವೆ.
ಪ್ರಧಾನಮಂತ್ರಿ ಅವರು ʻಸೌರಾಷ್ಟ್ರ ಅವತರಣ್ ನೀರಾವರಿ (ಸೌನಿ) ಯೋಜನೆ ಲಿಂಕ್-3ʼರ (ಉಂದ್ ಅಣೆಕಟ್ಟಿನಿಂದ ಸೋನ್ಮತಿ ಅಣೆಕಟ್ಟಿಗೆ) ಪ್ಯಾಕೇಜ್ 7, ʻಸೌನಿ ಯೋಜನಾ ಲಿಂಕ್-1ʼರ ಪ್ಯಾಕೇಜ್-5 (ಉಂದ್-1 ಅಣೆಕಟ್ಟಿನಿಂದ ʻಸಾನಿʼ ಅಣೆಕಟ್ಟಿಗೆ) ಮತ್ತು 40 ಮೆಗಾವ್ಯಾಟ್ ಸಾಮರ್ಥ್ಯದ ʻಹರಿಪರ್ ಸೋಲಾರ್ ಪಿವಿʼ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳಲ್ಲಿ ಕಲವಾಡ್/ಜಾಮ್‌ನಗರ ತಾಲೂಕಿನ ʻಕಾಲವಾಡ್ ಗ್ರೂಪ್ ಆಗ್ಮೆಂಟೇಶನ್ʼ ನೀರು ಸರಬರಾಜು ಯೋಜನೆ, ʻಮೊರ್ಬಿ-ಮಾಲಿಯಾ-ಜೋಡಿಯಾ ಗ್ರೂಪ್ ಆಗ್ಮೆಂಟೇಶನ್ʼ ನೀರು ಸರಬರಾಜು ಯೋಜನೆ, ಲಾಲ್ಪುರ್ ಬೈಪಾಸ್ ಜಂಕ್ಷನ್ ಮೇಲ್ಸೇತುವೆ, ಹಪಾ ಮಾರ್ಕೆಟ್ ಯಾರ್ಡ್ ರೈಲ್ವೆ ಕ್ರಾಸಿಂಗ್ ಹಾಗೂ ಒಳಚರಂಡಿ ಸಂಗ್ರಹ ಪೈಪ್‌ಲೈನ್ ಮತ್ತು ಪಂಪಿಂಗ್ ಕೇಂದ್ರದ ನವೀಕರಣಗಳು ಸೇರಿವೆ.
*****
(Release ID: 1866793)
Visitor Counter : 174
Read this release in:
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam