ಪ್ರಧಾನ ಮಂತ್ರಿಯವರ ಕಛೇರಿ

100 ನೇ ಕಿಸಾನ್ ರೈಲಿಗೆ ಚಾಲನೆ: ಪ್ರಧಾನಮಂತ್ರಿ ಭಾಷಣ

Posted On: 28 DEC 2020 9:25PM by PIB Bengaluru

ಕೇಂದ್ರ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ಥೋಮರ್ ಜೀ, ರೈಲ್ವೇ ಸಚಿವರಾದ ಶ್ರೀ ಪೀಯುಷ್ ಗೋಯಲ್ ಜೀ, ಇತರ ಸಂಸತ್ ಸದಸ್ಯರೇ, ಶಾಸಕರೇ ಮತ್ತು ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ. ಮೊದಲಿಗೆ ನಾನು ದೇಶದ ಮಿಲಿಯಾಂತರ ರೈತರನ್ನು ಅಭಿನಂದಿಸುತ್ತೇನೆ.

ರೈತರಿಗೆ ಮತ್ತು ಕೃಷಿಗಾಗಿ ಎಂದು ಪೂರ್ಣವಾಗಿ ಮೀಸಲಾಗಿದ್ದ ದೇಶದ ಮೊದಲ ರೈಲು ಆಗಸ್ಟ್ ನಲ್ಲಿ ಆರಂಭವಾಗಿತ್ತು. ಉತ್ತರ-ದಕ್ಷಿಣ ಮತ್ತು ಪೂರ್ವಪಶ್ಚಿಮಗಳ ಎಲ್ಲಾ ವಲಯಗಳ ರೈತರಿಗೆ ಮತ್ತು ಕೃಷಿ ಉತ್ಪನ್ನಗಳಿಗೆ ಇದು ಉತ್ತಮ ಸಂಪರ್ಕವನ್ನು ಒದಗಿಸಿತು. ಕಳೆದ ನಾಲ್ಕು ತಿಂಗಳಲ್ಲಿ, ಅದರಲ್ಲೂ ಕೊರೊನಾ ಜಾಗತಿಕ ಸಾಂಕ್ರಾಮಿಕ ಉಂಟು ಮಾಡಿದ ಸವಾಲುಗಳ ನಡುವೆಯೂ, ಕಿಸಾನ್ ರೈಲಿನ ಜಾಲ ಇಂದು 100 ಸಂಖ್ಯೆಯನ್ನು ತಲುಪಿದೆ. ಇಂದು, ಕೆಲ ಸಮಯದ ಹಿಂದೆ 100 ನೇ ಕಿಸಾನ್ ರೈಲು ಮಹಾರಾಷ್ಟ್ರದ ಸಾಂಗೋಲಾದಿಂದ ಪಶ್ಚಿಮ ಬಂಗಾಳದ ಶಾಲಿಮಾರಿಗೆ ಪ್ರಯಾಣ ಬೆಳೆಸಿತು. ಮೂಲಕ, ಪಶ್ಚಿಮ ಬಂಗಾಳದ ರೈತರಿಗೆ ಸಂಪರ್ಕ ಲಭ್ಯತೆ, ಪಶುಪಾಲಕರಿಗೆ ಮತ್ತು ಮೀನುಗಾರರಿಗೆ ಮಹಾರಾಷ್ಟ್ರದ ದೊಡ್ಡ ಮಾರುಕಟ್ಟೆಗಳಾದ ಮುಂಬಯಿ, ಪುಣೆ, ಮತ್ತು ನಾಗಪುರಗಳ ಸಂಪರ್ಕವನ್ನು ಖಾತ್ರಿಪಡಿಸಿದಂತಾಗಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿಯ ಸ್ನೇಹಿತರಿಗೆ ಪಶ್ಚಿಮ ಬಂಗಾಳದ ಮಾರುಕಟ್ಟೆಗಳಿಗೆ ಕೈಗೆಟಕುವ ದರದಲ್ಲಿ ಸಂಪರ್ಕ ಸೌಲಭ್ಯಗಳು ಲಭ್ಯವಾದಂತಾಗಿವೆ. ರೈಲ್ವೇಯು, ಇದುವರೆಗೆ ಇಡೀ ದೇಶವನ್ನು ಬೆಸೆಯುತ್ತಿತ್ತು, ಅದೀಗ ದೇಶಾದ್ಯಂತ ಕೃಷಿ ಮಾರುಕಟ್ಟೆಗಳನ್ನು ಬೆಸೆಯುತ್ತಿದೆ.

ಸ್ನೇಹಿತರೇ,

ಕಿಸಾನ್ ರೈಲು ಸೇವೆಯು ದೇಶದ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಕ್ರಮ. ಇದು ದೇಶದ ಕೃಷಿ  ಆರ್ಥಿಕತೆಯಲ್ಲಿ ಪ್ರಮುಖ ಬದಲಾವಣೆಯನ್ನು ತರಲಿದೆ. ಇದು ದೇಶದ ಶೀತಲ ಪೂರೈಕೆ ಸರಪಳಿಯನ್ನು ಬಲಪಡಿಸಲಿದೆ. ಪ್ರಮುಖ ಸಂಗತಿ ಎಂದರೆ ದೇಶದ 80 ಶೇಖಡಾಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ರೈತರು ಕಿಸಾನ್ ರೈಲಿನಿಂದ ಬಹಳ ದೊಡ್ಡ ಉತ್ತೇಜನ ಪಡೆದಿದ್ದಾರೆ. ಇದನ್ನು ನಾನು ಯಾಕೆ ಹೇಳುತ್ತಿದ್ದೇನೆ ಎಂದರೆ ರೈತರಿಗೆ ಕನಿಷ್ಟ ಪ್ರಮಾಣವನ್ನು ನಿಗದಿ ಮಾಡಿಲ್ಲ. ರೈತರು 50-100 ಕಿಲೋ ಗ್ರಾಂ ಪಾರ್ಸೆಲ್ ಕಳುಹಿಸಲು ಇಚ್ಛಿಸಿದರೂ , ಅವರು ಅದನ್ನು ಕಳುಹಿಸಬಹುದು. ಅಂದರೆ ಸಣ್ಣ ರೈತರ ಅತಿ ಸಣ್ಣ ಉತ್ಪಾದನೆ ಕೂಡಾ ಅತಿ ಕಡಿಮೆ ದರದಲ್ಲಿ ಸುರಕ್ಷಿತವಾಗಿ ದೊಡ್ಡ ಮಾರುಕಟ್ಟೆಯನ್ನು ತಲುಪಬಲ್ಲದು. ನಾನೆಲ್ಲೋ ಓದಿದ್ದೆ, ಕಿಸಾನ್ ರೈಲಿನ ಮೂಲಕ ಕಳುಹಿಸಲಾದ ಅತಿ ಸಣ್ಣ ಸರಕು ಪಾರ್ಸೆಲ್ ದಾಳಿಂಬೆಯ ಮೂರು ಕೆ.ಜಿ. ತೂಕದ ಪಾರ್ಸೆಲ್ ಎಂಬುದಾಗಿ. ಅಷ್ಟು ಮಾತ್ರವಲ್ಲ, ಕೋಳಿ ಸಾಕಾಣಿಕೆದಾರರೊಬ್ಬರು ಕಿಸಾನ್ ರೈಲಿನ ಮೂಲಕ 17 ಡಜನ್ ಮೊಟ್ಟೆಗಳನ್ನು ಕಳುಹಿಸಿದ್ದರು.

ಸ್ನೇಹಿತರೇ,

ದಾಸ್ತಾನು ಮತ್ತು ಶೀತಲ ದಾಸ್ತಾನುಗಾರಗಳ ಕೊರತೆಯಿಂದ ದೇಶದ ರೈತರಿಗೆ ಆಗುತ್ತಿರುವ ನಷ್ಟ ಸದಾ ಒಂದು ದೊಡ್ಡ ಸವಾಲು. ನಮ್ಮ ಸರಕಾರ ಆಧುನಿಕ ದಾಸ್ತಾನು ವ್ಯವಸ್ಥೆಗಳ ಮೇಲೆ ಮತ್ತು ಪೂರೈಕೆ ಸರಪಳಿಗಳ ಆಧುನೀಕರಣದ ಮೇಲೆ ಮಿಲಿಯಾಂತರ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಹೊಸ ಉಪಕ್ರಮಗಳಾದ ಕಿಸಾನ್ ರೈಲುಗಳ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ. ಭಾರತವು ಸ್ವಾತಂತ್ರ್ಯಕ್ಕೆ ಮೊದಲೇ ಬೃಹತ್ ರೈಲ್ವೇ ಜಾಲವನ್ನು ಹೊಂದಿತ್ತು. ಶೀತಲ ದಾಸ್ತಾನು ತಂತ್ರಜ್ಞಾನ ಕೂಡಾ ಈಗಾಗಲೇ ಲಭ್ಯವಿದೆ. ಈಗ ಇದನ್ನು ಕಿಸಾನ್ ರೈಲಿನ ಮೂಲಕ ಹೆಚ್ಚು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿದೆ.

ಸ್ನೇಹಿತರೇ,

ಸಣ್ಣ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೊಸ ಮತ್ತು ದೊಡ್ಡ ಮಾರುಕಟ್ಟೆಗಳನ್ನು ಒದಗಿಸಬೇಕು ಎನ್ನುವ ನಮ್ಮ ಧ್ಯೇಯೋದ್ದೇಶಗಳು ಮತ್ತು ನೀತಿಗಳು ಬಹಳ ಸ್ಪಷ್ಟವಾಗಿವೆ. ಬಜೆಟ್ಟಿನಲ್ಲಿಯೇ ನಾವು ಬಗ್ಗೆ ಪ್ರಮುಖ ಘೋಷಣೆಗಳನ್ನು ಮಾಡಿದ್ದೆವು. ಮೊದಲನೇಯದ್ದು ಕಿಸಾನ್ ರೈಲು ಮತ್ತು ಎರಡನೆಯದ್ದು ಕೃಷಿ ಉಡಾನ್ (ಕೃಷಿ ವಿಮಾನಗಳು). ದೇಶದ ದೂರ ಪ್ರದೇಶಗಳಿಗೆ ರೈತರ ತಲುಪುವಿಕೆಯನ್ನು ನಾವು ಹೇಳುವಾಗ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅವರ ಉತ್ಪನ್ನಗಳನ್ನು ತಲುಪಿಸುವುದಾಗಿ ಹೇಳಿದಾಗ  ಸರಕಾರ ನಿರ್ವಾತದಲ್ಲಿ ಮಾತುಗಳನ್ನು ಹೇಳಿದ್ದಲ್ಲ. ನಾನು ಪೂರ್ಣ ಭರವಸೆ ಮತ್ತು ವಿಶ್ವಾಸದಿಂದ ಹೇಳುತ್ತೇನೆ ನಾವು ಸರಿಯಾದ ಹಾದಿಯಲ್ಲಿದ್ದೇವೆ.

ಸ್ನೇಹಿತರೇ,

ಮೊದಲಿಗೆ, ಕಿಸಾನ್ ರೈಲು ಸಾಪ್ತಾಹಿಕ ಸೇವೆಯಾಗಿತ್ತು. ಕೆಲವೇ ದಿನಗಳಲ್ಲಿ, ರೈಲಿಗೆ ಬೇಡಿಕೆ ಹೆಚ್ಚಾಯಿತು ಮತ್ತು ಈಗ ವಾರಕ್ಕೆ ಮೂರು ದಿನ ರೈಲು ಓಡಾಟ ಮಾಡುತ್ತಿದೆ. ಕಲ್ಪಿಸಿಕೊಳ್ಳಿ, ಇಷ್ಟು ಕಡಿಮೆ ಅವಧಿಯಲ್ಲಿ 100 ನೇ ಕಿಸಾನ್ ರೈಲು!. ಇದು ಸಾಮಾನ್ಯ ಸಂಗತಿ ಅಲ್ಲ. ಇದು ದೇಶದ ರೈತರು ಏನನ್ನು ಅಪೇಕ್ಷಿಸುತ್ತಾರೆ ಎಂಬುದರ ಸ್ಪಷ್ಟ ಸಂದೇಶ

ಸ್ನೇಹಿತರೇ,

ಇದು ರೈತರ ಸೇವೆಯ ನಿಟ್ಟಿನಲ್ಲಿ ನಮಗಿರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಆದರೆ ಇದು ನಮ್ಮ ರೈತರು ಹೊಸ ಸಾಧ್ಯತೆಗಳಿಗೆ ಎಷ್ಟು ತ್ವರಿತವಾಗಿ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ ಎಂಬುದಕ್ಕೂ ಒಂದು ಸಾಕ್ಷಿ. ಕಿಸಾನ್ ರೈಲ್ ಮತ್ತು ಕೃಷಿ ಉಡಾನ್ ರೈತರು ತಮ್ಮ ಉತ್ಪನ್ನಗಳನ್ನು ಇತರ ರಾಜ್ಯಗಳಲ್ಲಿ ಮಾರಾಟ ಮಾಡಬಹುದು ಎಂಬುದನ್ನು ಖಾತ್ರಿಪಡಿಸುವಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತವೆ. ದೇಶದ ಈಶಾನ್ಯದ ರೈತರು ಕೃಷಿ ಉಡಾನ್ ನಿಂದಾಗಿ ಪ್ರಯೋಜನಗಳನ್ನು ಪಡೆಯಲು ಆರಂಭಿಸಿರುವುದು ನನಗೆ ಬಹಳ ತೃಪ್ತಿ ತಂದಿದೆ. ಇಂತಹ ಬಲಿಷ್ಟ ವ್ಯವಸ್ಥೆಗಳನ್ನು ಮಾಡಿದ ಬಳಿಕವೇ ನಾವು ಚಾರಿತ್ರಿಕ ಕೃಷಿ ಸುಧಾರಣೆಗಳ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆವು.

ಸ್ನೇಹಿತರೇ.

ರೈತರು ಕಿಸಾನ್ ರೈಲಿನಿಂದಾಗಿ ಹೇಗೆ ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿದ್ದಾರೆ, ಹೇಗೆ ಅವರ ಆದಾಯ ಉತ್ತಮಗೊಳ್ಳುತ್ತಿದೆ ಮತ್ತು ಖರ್ಚು ಹೇಗೆ ಕಡಿಮೆಯಾಗುತ್ತಿದೆ ಎಂಬುದಕ್ಕೆ ನಾನು ಒಂದು ಉದಾಹರಣೆ ಕೊಡುತ್ತೇನೆ. ಹಲವು ಸಲ ನಾವು ವರದಿಗಳನ್ನು ನೋಡುತ್ತೇವೆ. ಟೊಮ್ಯಾಟೋ ದರ ಒಂದು ಸ್ಥಳದಲ್ಲಿ ಕುಸಿದಾಗ, ರೈತರಿಗೆ ಏನಾಗುತ್ತದೆ. ಇದು ಬಹಳ ನೋವಿನ ಪರಿಸ್ಥಿತಿ. ತನ್ನ ಕಣ್ಣೆದುರೇ, ತಾನು ಶ್ರಮ ವಹಿಸಿ ಬೆಳೆದ ಬೆಳೆ ಹಾಳಾಗುವುದನ್ನು ರೈತರು ಅಸಹಾಯಕರಾಗಿ ನೋಡಬೇಕಾಗುತ್ತದೆ. ಆದರೆ, ಈಗ ಹೊಸ ಕೃಷಿ ಸುಧಾರಣೆಗಳ ಬಳಿಕ ಮತ್ತು ಕಿಸಾನ್ ರೈಲಿನ ನಂತರ ಆವರಿಗೆ ಹೊಸ ಅವಕಾಶ ದೊರೆತಿದೆ. ಈಗ, ನಮ್ಮ ರೈತರು ತಮ್ಮ ಉತ್ಪಾದನೆಯನ್ನುಟೊಮ್ಯಾಟೋಗಳನ್ನು  ಹೆಚ್ಚು ಬೇಡಿಕೆ ಇರುವ ಮತ್ತು ತಮಗೆ ಎಲ್ಲಿ ಉತ್ತಮ ಬೆಲೆ ದೊರೆಯುತ್ತದೋ ಅಲ್ಲಿಗೆ, ದೇಶದ ಯಾವುದೇ ಭಾಗಕ್ಕಾದರೂ ಕೊಂಡೊಯ್ಯಬಹುದು. ಅವರು ಹಣ್ಣುಗಳು ಮತ್ತು ತರಕಾರಿಗಳ ಸಾಗಾಟಕ್ಕೆ ಸಬ್ಸಿಡಿಯನ್ನೂ ಪಡೆಯಬಹುದು.

ಸಹೋದರರೇ ಮತ್ತು ಸಹೋದರಿಯರೇ,

ಕಿಸಾನ್ ರೈಲಿಗೆ ಸಂಬಂಧಿಸಿ ಇನ್ನೊಂದು ಬಹಳ ಪ್ರಮುಖ ಸಂಗತಿ ಇದೆ. ಕಿಸಾನ್ ರೈಲು ಕೂಡಾ ಒಂದು ರೀತಿಯ ಶೀತಲ ದಾಸ್ತಾನುಗಾರದಂತೆ. ಅಂದರೆ, ಬೇಗ ಹಾಳಾಗುವ ಉತ್ಪನ್ನಗಳಾದ ಹಣ್ಣುಗಳು, ತರಕಾರಿಗಳು, ಮತ್ತು ಮೀನು ಸುರಕ್ಷಿತ ರೀತಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಟವಾಗುತ್ತದೆ. ಮೊದಲು, ರೈತರು ಸರಕನ್ನು ಟ್ರಕ್ಕುಗಳಲ್ಲಿ ರಸ್ತೆ ಮೂಲಕ ಸಾಗಾಟ ಮಾಡುತ್ತಿದ್ದರು. ರಸ್ತೆ ಮೂಲಕ ಸಾಗಾಟ ಮಾಡುವುದರಲ್ಲಿ ಹಲವು ಸಮಸ್ಯೆಗಳು ಇದ್ದವು. ಒಂದನೆಯದಾಗಿ ಇದು ಬಹಳ ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ಎರಡನೆಯದಾಗಿ ದರ ಕೂಡಾ ಹೆಚ್ಚಾಗುತ್ತಿತ್ತು. ಅಂದರೆ ಇದು ಗ್ರಾಮಗಳಲ್ಲಿ ಇರುವ ಉತ್ಪಾದಕನಿಗೂ ದುಬಾರಿ ಮತ್ತು ನಗರದಲ್ಲಿಯ ಬಳಕೆದಾರನಿಗೂ ದುಬಾರಿ. ಈಗ ಪಶ್ಚಿಮ ಬಂಗಾಳಕ್ಕೆ ಹೊರಟ ರೈಲು ಮಹಾರಾಷ್ಟ್ರದಿಂದ ದಾಳಿಂಬೆ, ದ್ರಾಕ್ಷಿ, ಕಿತ್ತಳೆ ಮತ್ತು ಸೀತಾಫಲಗಳಂತಹ ಹಣ್ಣುಗಳನ್ನು  ಕೊಂಡೊಯ್ಯುತ್ತಿದೆ.

ರೈಲು ಸುಮಾರು 40 ಗಂಟೆಗಳಲ್ಲಿ ಅಲ್ಲಿಗೆ ತಲುಪುತ್ತದೆ. ಆದರೆ ರಸ್ತೆ ಮೂಲಕವಾದರೆ 2,000 ಕಿಲೋಮೀಟರ್ ದೂರವನ್ನು ಕ್ರಮಿಸಲು ಹಲವು ದಿನಗಳು ಬೇಕಾಗುತ್ತವೆ. ರೈಲು ಹಲವಾರು ರಾಜ್ಯಗಳ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಅಲ್ಲಿಂದ ರೈತರು ಯಾವುದಾದರು ಉತ್ಪನ್ನಗಳನ್ನು ಕಳುಹಿಸಲು ಇಚ್ಛಿಸಿದರೆ ಅಥವಾ ಅಲ್ಲಿಂದ ಪಾರ್ಸೆಲ್ ಇದ್ದರೆ ಅದನ್ನು ಕಿಸಾನ್ ರೈಲಿನ ಮೂಲಕ ಸಾಗಿಸಬಹುದು. ಅಂದರೆ, ಕಿಸಾನ್ ರೈಲು ರೈತರ ಸರಕುಗಳನ್ನು  ನಿಗದಿತ ಸ್ಥಳಕ್ಕೆ ಸಾಗುವ ಹಾದಿಯಲ್ಲಿ ಹಲವಾರು ಮಾರುಕಟ್ಟೆಗಳಿಗೆ ಸಾಗಾಟ-ಮರು ಸಾಗಾಟಗಳನ್ನು ಮಾಡುತ್ತದೆ. ದರಕ್ಕೆ ಸಂಬಂಧಿಸಿ ಹೇಳುವುದಾದರೆ ಮಾರ್ಗದಲ್ಲಿ ಟ್ರಕ್ಕಿನ ದರಕ್ಕಿಂತ 1700 ರೂ. ಕಡಿಮೆ. ಸರಕಾರ ಕಿಸಾನ್ ರೈಲಿನಲ್ಲಿ 50 ಶೇಖಡಾ ರಿಯಾಯತಿ ನೀಡುತ್ತಿದೆ. ಇದರಿಂದಲೂ ರೈತರಿಗೆ ಲಾಭವಾಗುತ್ತಿದೆ.

ಸ್ನೇಹಿತರೇ,

ಕಿಸಾನ್ ರೈಲಿನಂತಹ ಸೌಲಭ್ಯಗಳು ಆರ್ಥಿಕ  ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಹೆಚ್ಚಿನ ದರವನ್ನು ತರುತ್ತವೆ ಹಾಗು ಹೆಚ್ಚು ಪೋಷಕಾಂಶಯುಕ್ತ ಬೆಳೆಗಳನ್ನು ಉತ್ತೇಜಿಸುತ್ತವೆ. ಮೊದಲು ಸಣ್ಣ ರೈತರು ಇಂತಹ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಶೀತಲ ದಾಸ್ತಾನು ಸೌಲಭ್ಯ ಲಭಿಸುತ್ತಿರಲಿಲ್ಲ ಮತ್ತು ದೊಡ್ಡ ಮಾರುಕಟ್ಟೆಯನ್ನು ತಲುಪುವುದು ಕಷ್ಟಸಾಧ್ಯವಾಗುತ್ತಿತ್ತು. ದೂರದ ಮಾರುಕಟ್ಟೆಗಳಿಗೆ ಸರಕು ಸಾಗಿಸುವುದಕ್ಕೆ ಆತನಿಗೆ ಹೆಚ್ಚು ಹಣ ಖರ್ಚಾಗುತ್ತಿತ್ತು. ಸಮಸ್ಯೆಯನ್ನು ಗಮನಿಸಿ, ನಮ್ಮ ಸರಕಾರ ಟೊಮ್ಯಾಟೋ, ನೀರುಳ್ಳಿ, ಮತ್ತು ಬಟಾಟೆಗಳ ಸಾಗಾಟಕ್ಕೆ ಮೂರು ವರ್ಷಗಳ ಹಿಂದೆ 50 ಶೇಖಡಾ ಸಹಾಯಧನ ನೀಡಿತ್ತು. ಈಗ ಆತ್ಮ ನಿರ್ಭರ ಆಂದೋಲನ ಅಡಿಯಲ್ಲಿ, ಇದನ್ನು ಡಜನ್ನಿನಷ್ಟು ಇತರ ಹಣ್ಣುಗಳು ಮತ್ತು ತರಕಾರಿಗಳಿಗೆ ವಿಸ್ತರಿಸಲಾಗಿದೆ. ಇದರಿಂದ ದೇಶದ ರೈತರಿಗೆ ನೇರ ಲಾಭವಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು, ಪಶ್ಚಿಮ ಬಂಗಾಳದ ರೈತರು ಸೌಲಭ್ಯದೊಂದಿಗೆ ಜೋಡಿಸಲ್ಪಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಟಾಟೆ, ಹಲಸಿನ ಹಣ್ಣು, ಕ್ಯಾಬೇಜ್ ಮತ್ತು ಬದನೆಯಂತಹ  ತರಕಾರಿ-ಹಣ್ಣುಗಳು ಯಥೇಚ್ಛವಾಗಿ ಇವೆ. ಅದೇ ರೀತಿ ರೈತರು ಅನಾನಾಸು, ಲಿಚಿ, ಮಾವು, ಬಾಳೇ ಹಣ್ಣು ಇತ್ಯಾದಿಗಳನ್ನೂ ಬೆಳೆಯುತ್ತಾರೆ. ಅದು ಸಿಹಿ ನೀರಿನ ಮೀನು ಅಥವಾ ಉಪ್ಪು ನೀರಿನ ಮೀನು ಇರಬಹುದು ಪಶ್ಚಿಮ ಬಂಗಾಳದಲ್ಲಿ ಅದಕ್ಕೆ ಕೊರತೆ ಇಲ್ಲ. ಸಮಸ್ಯೆ ಇರುವುದು ಅದನ್ನು ದೇಶಾದ್ಯಂತ ಮಾರುಕಟ್ಟೆಗೆ ತಲುಪಿಸುವುದರಲ್ಲಿ. ಈಗ ಪಶ್ಚಿಮ ಬಂಗಾಳದ ಲಕ್ಷಾಂತರ ಸಣ್ಣ ರೈತರು ಕಿಸಾನ್ ರೈಲಿನಂತಹ ಸೌಲಭ್ಯಗಳ ಆಯ್ಕೆಯ ಅವಕಾಶವನ್ನು ಪಡೆದಿದ್ದಾರೆ. ಮತ್ತು ಅವಕಾಶ ರೈತರಿಗೆ ಲಭ್ಯ ಇರುವಂತೆಯೇ ಸ್ಥಳೀಯ ಮಾರುಕಟ್ಟೆಯಲ್ಲಿಯ ಸಣ್ಣ ವ್ಯಾಪಾರಸ್ಥರಿಗೂ ಲಭ್ಯವಿದೆ. ಅವರು ರೈತರಿಂದ ಹೆಚ್ಚು ದರದಲ್ಲಿ ಹೆಚ್ಚು ಉತ್ಪನ್ನಗಳನ್ನು ಖರೀದಿ ಮಾಡಬಹುದು ಮತ್ತು ಅವುಗಳನ್ನು ಇತರ ರಾಜ್ಯಗಳಲ್ಲಿ ಕಿಸಾನ್ ರೈಲಿನ ಮೂಲಕ ಮಾರಾಟ ಮಾಡಬಹುದು.

ಸಹೋದರರೇ ಮತ್ತು ಸಹೋದರಿಯರೇ,

ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಗರಿಷ್ಟ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ರೈತರ ಜೀವನವನ್ನು ಸುಧಾರಿಸಲು ಹೊಸ ಸವಲತ್ತುಗಳನ್ನು ಸೃಷ್ಟಿಸಲು ಹೊಸ ಪರಿಹಾರಗಳು ಅವಶ್ಯವಾಗಿವೆ. ಗುರಿಯೊದಿಗೆ ಒಂದರ ಹಿಂದೆ ಒಂದರಂತೆ ಕೃಷಿ ಸುಧಾರಣೆಗಳನ್ನು ಮಾಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ತೊಡಗಿರುವ ತಜ್ಞರ ಮತ್ತು ವಿಶ್ವದ ಎಲ್ಲೆಡೆಯ ಅನುಭವ ಮತ್ತು ಹೊಸ ತಂತ್ರಜ್ಞಾನಗಳನ್ನು ಭಾರತೀಯ ಕೃಷಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ದಾಸ್ತಾನಿಗೆ ಸಂಬಂಧಿಸಿದ ಮೂಲಸೌಕರ್ಯ ಇರಲಿ, ಅಥವಾ ಕೃಷಿ ಉತ್ಪಾದನೆಗಳಿಗೆ ಮೌಲ್ಯವರ್ಧನೆ ಮಾಡುವ ಸಂಸ್ಕರಣಾ ಕೈಗಾರಿಕೆಗಳಿಗೆ ಸಂಬಂಧಿಸಿದ ಮೂಲಸೌಕರ್ಯವಾಗಿರಲಿ, ಇವೆಲ್ಲಕ್ಕೂ ಸರಕಾರ ಆದ್ಯತೆ ನೀಡುತ್ತದೆ. ಬೇಗ ಹಾಳಾಗುವ ಆಹಾರ ವಸ್ತುಗಳ ಸಾಗಾಣಿಕಾ ಕೇಂದ್ರಗಳನ್ನು ದೇಶದ ರೈಲ್ವೇ ನಿಲ್ದಾಣಗಳ ಬಳಿಯಲ್ಲಿ ಸ್ಥಾಪಿಸಲಾಗುತ್ತದೆ, ಅಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ದಾಸ್ತಾನು ಮಾಡಬಹುದು. ಹಣ್ಣುಗಳು ಮತ್ತು ತರಕಾರಿಗಳನ್ನು ನೇರವಾಗಿ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚುವರಿ ಉತ್ಪಾದನೆಯನ್ನು ಜ್ಯೂಸ್, ಸಾಸ್, ಚಟ್ನಿ, ಚಿಪ್ಸ್ ಇತ್ಯಾದಿಗಳನ್ನು ಮಾಡುವ ಉದ್ಯಮಿಗಳಿಗೆ ನೀಡುವಂತಹ ವ್ಯವಸ್ಥೆಯಾಗಬೇಕು.

ಪ್ರಧಾನ ಮಂತ್ರಿ ಕೃಷಿ ಸಂಪದ ಯೋಜನಾ ಅಡಿಯಲ್ಲಿ  ಬೃಹತ್ ಆಹಾರ ಪಾರ್ಕ್ ಗಳು, ಶೀತಲೀಕೃತ ದಾಸ್ತಾನು ಸರಪಳಿ ಮೂಲಸೌಕರ್ಯ, ಕೃಷಿ ಉತ್ಪನ್ನ ಸಂಸ್ಕರಣೆ ಗುಚ್ಛಗಳು, ಸಂಸ್ಕರಣಾ ಘಟಕಗಳು, ಸಹಿತ ಸುಮಾರು 6,500 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಇದರಲ್ಲಿ ಹಲವಾರು ಯೋಜನೆಗಳು ಪೂರ್ಣಗೊಂಡಿವೆ ಮತ್ತು ಲಕ್ಷಾಂತರ ರೈತ ಕುಟುಂಬಗಳು ಪ್ರಯೋಜನಗಳನ್ನು ಪಡೆಯುತ್ತಿವೆ. ಸ್ವಾವಲಂಬಿ ಪ್ರಚಾರಾಂದೋಲನ ಪ್ಯಾಕೇಜಿನಡಿ 10,000 ಕೋಟಿ ರೂಪಾಯಿಗಳನ್ನು ಕಿರು ಆಹಾರ ಸಂಸ್ಕ್ರಣಾ ಕೈಗಾರಿಕೆಗಳಿಗೆ ಮಂಜೂರು ಮಾಡಲಾಗಿದೆ.

ಸ್ನೇಹಿತರೇ,

ಇಂದು, ಸರಕಾರವು ದೇಶವಾಸಿಗಳ ಸಾಮಾನ್ಯ ಆವಶ್ಯಕತೆಗಳನ್ನು ಪೂರೈಸಲು ಸಮರ್ಥವಾದರೆ ಅದು ಸಹಭಾಗಿತ್ವದಿಂದ. ಕೃಷಿ ಕ್ಷೇತ್ರದಲ್ಲಿಯ ಎಲ್ಲಾ ಸುಧಾರಣೆಗಳ ಅತಿ ದೊಡ್ಡ ಶಕ್ತಿ ಎಂದರೆ ಅದು ಗ್ರಾಮೀಣ ಜನರ ಪಾಲುದಾರಿಕೆ, ರೈತರು ಮತ್ತು ಯುವಜನರ ಪಾಲುದಾರಿಕೆ. ರೈತರ ಉತ್ಪಾದನಾ ಸಂಘಟನೆಗಳಿಗೆ (ಎಫ್.ಪಿ..) , ಇತರ ಸಹಕಾರಿ ಸಂಘಟನೆಗಳಿಗೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ , ಕೃಷಿ ವ್ಯಾಪಾರ ಮತ್ತು ಕೃಷಿ ಮೂಲಸೌಕರ್ಯಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಹೊಸ ಕೃಷಿ ಸುಧಾರಣೆಗಳ ದೊಡ್ಡ ಪ್ರಯೋಜನಗಳೆಂದರೆ ಅದು ಕೃಷಿ ಸಂಬಂಧಿತ ವ್ಯಾಪಾರೋದ್ಯಮ ಬೆಳವಣಿಗೆಗೆ ಕಾರಣವಾಗಲಿದೆ ಮತ್ತು ರೈತರ ಸಂಘಟನೆಗಳಿಗೆ, ಗ್ರಾಮೀಣ ಯುವ ಜನತೆ ಮತ್ತು ಮಹಿಳೆಯರಿಗೆ ಪ್ರಯೋಜನಗಳನ್ನು ಒದಗಿಸಲಿದೆ.

ಕೃಷಿ ವ್ಯವಹಾರ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಸರಕಾರದ ಪ್ರಯತ್ನಗಳನ್ನು ಉತ್ತೇಜಿಸಬಲ್ಲದು. ಭಾರತೀಯ ಕೃಷಿ ಮತ್ತು ರೈತರನ್ನು ಪೂರ್ಣ ಬಲದೊಂದಿಗೆ ಮತ್ತು ಪ್ರಾಮಾಣಿಕವಾಗಿ ಸಶಕ್ತೀಕರಣ ಮಾಡುವ ಹಾದಿಯಲ್ಲಿ ನಾವು ನಿರಂತರವಾಗಿ ಮುನ್ನಡೆಯಲಿದ್ದೇವೆ. ಮತ್ತೊಮ್ಮೆ, ನಾನು 100ನೇ ಕಿಸಾನ್ ರೈಲಿಗಾಗಿ ಮತ್ತು ಹೊಸ ಸಾಧ್ಯತೆಗಳಿಗಾಗಿ ದೇಶದ ರೈತರನ್ನು ಅಭಿನಂದಿಸುತ್ತೇನೆ. ರೈಲ್ವೇ ಸಚಿವಾಲಯ ಮತ್ತು ಕೃಷಿ ಸಚಿವಾಲಯಗಳನ್ನೂ ಅಭಿನಂದಿಸುತ್ತೇನೆ ಮತ್ತು ದೇಶದ ರೈತರಿಗೆ ನನ್ನ ಶುಭಾಶಯಗಳನ್ನು ಹೇಳುತ್ತೇನೆ.

ಬಹಳ ಬಹಳ ಧನ್ಯವಾದಗಳು !

***


(Release ID: 1684950) Visitor Counter : 209