ಸಂಪುಟ
ಕೋಲ್ಕೊತ್ತ ಬಂದರು ಮಂಡಳಿಯನ್ನು ಶ್ಯಾಂ ಪ್ರಸಾದ್ ಮುಖರ್ಜಿ ಮಂಡಳಿಯಾಗಿ ಮರುನಾಮಕರಣ ಮಾಡಲು ಸಂಪುಟದ ಅಂಗೀಕಾರ
Posted On:
03 JUN 2020 5:13PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕೋಲ್ಕೊತ್ತಾ ಬಂದರನ್ನು ಶ್ಯಾಂ ಪ್ರಸಾದ್ ಮುಖರ್ಜಿ ಬಂದರಾಗಿ ಮರುನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ.
2020 ರ ಫೆಬ್ರವರಿ 25 ರಂದು ನಡೆದ ಕೋಲ್ಕೊತ್ತಾ ಬಂದರು ಮಂಡಳಿಯ ಸಭೆಯಲ್ಲಿ ಬೋರ್ಡ್ ಆಫ್ ಟ್ರಸ್ಟೀಸ್ ಕೋಲ್ಕೊತ್ತಾ ಬಂದರನ್ನು ಶ್ಯಾಂ ಪ್ರಸಾದ್ ಮುಖರ್ಜಿ ಬಂದರು, ಕೋಲ್ಕೊತ್ತಾ ಎಂದು ಮರುನಾಮಕರಣ ಮಾಡುವುದಕ್ಕೆ ನಿರ್ಣಯವನ್ನು ಅಂಗೀಕರಿಸಿತ್ತು. ಜನಸಮೂಹದ ನಾಯಕ, ಶಿಕ್ಷಣ ತಜ್ಞ, ಚಿಂತಕ ಮತ್ತು ಪ್ರಖ್ಯಾತ ನ್ಯಾಯಶಾಸ್ತ್ರಜ್ಞರಾಗಿದ್ದ ಶ್ಯಾಂ ಪ್ರಸಾದ್ ಅವರ ಬಹು ಆಯಾಮದ ವ್ಯಕ್ತಿತ್ವವನ್ನು ಪರಿಗಣಿಸಿ ಈ ತೀರ್ಮಾನಕ್ಕೆ ಬರಲಾಗಿತ್ತು.
ಕೋಲ್ಕೊತ್ತಾ ಬಂದರಿನ ನೂರೈವತ್ತನೇ ವರ್ಷಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ 2020 ರ ಜನವರಿ 12 ರಂದು ಪಶ್ಚಿಮ ಬಂಗಾಳದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕೋಲ್ಕೊತ್ತಾ ಬಂದರನ್ನು ಡಾ. ಶ್ಯಾಂ ಪ್ರಸಾದ್ ಮುಖರ್ಜಿ ಅವರ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಘೋಷಿಸಲಾಗಿತ್ತು. ಪಶ್ಚಿಮ ಬಂಗಾಳದವರಾದ ಶ್ಯಾಂ ಪ್ರಸಾದ ಮುಖರ್ಜಿ ಅವರು ರಾಷ್ಟ್ರೀಯ ಸಮಗ್ರತೆಗಾಗಿ ಮುಂಚೂಣಿ ಹೋರಾಟ ಮಾಡಿದ್ದರು, ಬೆಂಗಾಲದ ಅಭಿವೃದ್ದಿಯ ಕನಸುಗಾರರಾಗಿದ್ದರು, ಕೈಗಾರಿಕೀಕರಣಕ್ಕೆ ಪ್ರೇರಣೆಯಾಗಿದ್ದರು ಮತ್ತು ಒಂದು ರಾಷ್ಟ್ರಕ್ಕೆ ಒಂದೇ ಕಾನೂನು ಎಂಬುದರ ಪ್ರಬಲ ಪ್ರತಿಪಾದಕರಾಗಿದ್ದರು.
ಹಿನ್ನೆಲೆ :
ಕೋಲ್ಕೊತ್ತಾ ಬಂದರು ದೇಶದ ಮೊದಲ ಪ್ರಮುಖ ಬಂದರು ಮತ್ತು ಅದು ದೇಶದ ಏಕೈಕ ನದಿ ತೀರದ ಬಂದರು ಆಗಿದೆ. 1870 ರ ಅಕ್ಟೋಬರ್ 17 ರಂದು ಕಲ್ಕತ್ತಾ ಬಂದರಿನ ಅಭಿವೃದ್ದಿಗೆ ಕಮಿಶನರುಗಳ ನೇಮಕವನ್ನು 1870 ರ ಕಾಯ್ದೆ V ಪ್ರಕಾರ ಮಾಡುವ ಮೂಲಕ ಅದನ್ನು ಮಂಡಳಿಯ (ಟ್ರಸ್ಟ್ ) ವ್ಯಾಪ್ತಿಗೆ ತರಲಾಯಿತು. ಭಾರತೀಯ ಬಂದರುಗಳ ಕಾಯ್ದೆ, 1908 ರ ಪ್ರಮುಖ ಬಂದರುಗಳ ಭಾಗ 1 ರ ಮೊದಲ ಪರಿಚ್ಚೇಧದ ಕ್ರಮ ಸಂಖ್ಯೆ1 ರಲ್ಲಿ ಈ ಬಂದರು ಇದೆ. ಮತ್ತು ಇದರ ಆಡಳಿತವನ್ನು ಪ್ರಮುಖ ಬಂದರು ಮಂಡಳಿಗಳ ಕಾಯ್ದೆ 1963ರಡಿಯಲ್ಲಿ ನಿರ್ವಹಿಸಲಾಗುತ್ತದೆ. ಕೋಲ್ಕೊತ್ತಾ ಬಂದರು 150 ವರ್ಷಗಳನ್ನು ಪೂರೈಸುತ್ತಿದ್ದು, ಮತ್ತು ಅದರ ಈ ಪ್ರಯಾಣದಲ್ಲಿ ಅದು ವ್ಯಾಪಾರ, ವಾಣಿಜ್ಯ, ಮತ್ತು ಆರ್ಥಿಕ ಅಭಿವೃದ್ದಿಯಲ್ಲಿ ಭಾರತದ ಮಹಾದ್ವಾರವಾಗಿದೆ. ಅದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ, ಒಂದನೇ ಮಹಾಯುದ್ದ ಮತ್ತು ಎರಡನೆ ಮಹಾಯುದ್ದಗಳಿಗೂ ಸಾಕ್ಷಿಯಾಗಿದೆ ಮತ್ತು ದೇಶದ ಅದರಲ್ಲೂ ಪೂರ್ವ ಭಾರತದ ಸಮಾಜೋ-ಸಾಂಸ್ಕೃತಿಕ ಬದಲಾವಣೆಗಳಿಗೂ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ಭಾರತದಲ್ಲಿಯ ಪ್ರಮುಖ ಬಂದರುಗಳನ್ನು ಒಂದೋ ನಗರದ ಹೆಸರಿಟ್ಟು ಅವುಗಳಿಗೆ ನಾಮಕರಣ ಮಾಡಲಾಗಿದೆ ಅಥವಾ ಅವುಗಳಿರುವ ಪಟ್ಟಣದ ಹೆಸರಿಡಲಾಗಿದೆ. ಕೆಲವು ಬಂದರುಗಳಿಗೆ ವಿಶೇಷ ಪ್ರಕರಣವಾಗಿ ಅಥವಾ ವ್ಯಾಪಕ ಪರಿಶೀಲನೆ ಬಳಿಕ ಪ್ರಮುಖ ನಾಯಕರು ನೀಡಿದ ಕೊಡುಗೆಯನ್ನು ಅನುಲಕ್ಷಿಸಿ ಹಿಂದಿನ ಪ್ರಮುಖ ನಾಯಕರ ಹೆಸರಿನೊಂದಿಗೆ ಮರುನಾಮಕರಣ ಮಾಡಲಾಗಿದೆ. ನವ್ ಶೇವಾ ಬಂದರನ್ನು 1989 ರಲ್ಲಿ ಸರಕಾರವು ಜವಾಹರಲಾಲ್ ನೆಹರೂ ಬಂದರು ಮಂಡಳಿ ಎಂದು ನಾಮಕರಣ ಮಾಡಿದೆ. ಟ್ಯುಟಿಕೋರಿನ್ ಬಂದರು ಮಂಡಳಿಯನ್ನು 2011 ರಲ್ಲಿ ವಿ.ಒ ಚಿದಂಬರಂ ಬಂದರು ಮಂಡಳಿ ಎಂದು ಮರು ನಾಮಕರಣ ಮಾಡಲಾಗಿದೆ. ಮತ್ತು ಎನ್ನೋರ್ ಬಂದರು ಲಿಮಿಟೆಡ್ ಅನ್ನು ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಶ್ರೀ. ಕೆ. ಕಾಮರಾಜರ್ ಅವರ ಗೌರವಾರ್ಥ ಕಾಮರಾಜರ್ ಬಂದರು ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿದೆ. ಇತ್ತೀಚೆಗೆ 2017ರಲ್ಲಿ ಕಾಂಡ್ಲಾ ಬಂದರನ್ನು ದೀನದಯಾಳ್ ಬಂದರು ಎಂದು ಮರುನಾಮಕರಣ ಮಾಡಲಾಗಿದೆ. ಇದಲ್ಲದೆ ಹಲವಾರು ವಿಮಾನ ನಿಲ್ದಾಣಗಳಿಗೆ ಭಾರತದ ರಾಷ್ಟ್ರೀಯ ನಾಯಕರ ಹೆಸರುಗಳನ್ನು ಇಡಲಾಗಿದೆ.
***
(Release ID: 1629327)
Visitor Counter : 323
Read this release in:
Punjabi
,
English
,
Urdu
,
Marathi
,
Hindi
,
Bengali
,
Assamese
,
Manipuri
,
Gujarati
,
Odia
,
Tamil
,
Telugu
,
Kannada
,
Malayalam