ಹಣಕಾಸು ಸಚಿವಾಲಯ
ಆರ್ಥಿಕ ಸೇರ್ಪಡೆಗಾಗಿ ರಾಷ್ಟ್ರೀಯ ಉಪಕ್ರಮವಾದ ʻಪ್ರಧಾನ ಮಂತ್ರಿ ಜನ್ ಧನ್ ಯೋಜನೆʼಯು (ಪಿಎಂಜೆಡಿವೈ) ಪರಿವರ್ತನಾತ್ಮಕ ಪರಿಣಾಮದೊಂದಿಗೆ 11 ವರ್ಷಗಳನ್ನು ಪೂರ್ಣಗೊಳಿಸಿದೆ
ಕಳೆದ 11 ವರ್ಷಗಳಲ್ಲಿ 56 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಒಟ್ಟು ಠೇವಣಿ ಶಿಲ್ಕು 2.68 ಲಕ್ಷ ಕೋಟಿ ರೂ: ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್
ಗ್ರಾಮೀಣ ಅಥವಾ ಅರೆ-ನಗರ ಪ್ರದೇಶಗಳಲ್ಲಿ 67% ಖಾತೆಗಳನ್ನು ತೆರೆಯಲಾಗಿದೆ, ಮಹಿಳೆಯರು 56% ಖಾತೆಗಳನ್ನು ಹೊಂದಿದ್ದಾರೆ; ದೂರದ ಪ್ರದೇಶಗಳಲ್ಲಿ ವಾಸಿಸುವ ದೀನದಲಿತ ವ್ಯಕ್ತಿಗಳನ್ನು ಔಪಚಾರಿಕ ಹಣಕಾಸು ಕ್ಷೇತ್ರಕ್ಕೆ ತರಲಾಗಿದೆ: ಶ್ರೀಮತಿ ನಿರ್ಮಲಾ ಸೀತಾರಾಮನ್
ಜನ್ ಧನ್ ಯೋಜನೆಯು ಜನರ ಘನತೆ, ಸಬಲೀಕರಣ ಮತ್ತು ಅವಕಾಶಕ್ಕೆ ಸಂಬಂಧಿಸಿದ್ದಾಗಿದೆ; ʻಪಿಎಂಜೆಡಿವೈʼ ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಯಶಸ್ವಿ ಆರ್ಥಿಕ ಸೇರ್ಪಡೆ ಉಪಕ್ರಮಗಳಲ್ಲಿ ಒಂದಾಗಿದೆ: ಹಣಕಾಸು ಖಾತೆ ಸಹಾಯಕ ಸಚಿವ ಶ್ರೀ ಪಂಕಜ್ ಚೌಧರಿ
ʻಜನ್ ಧನ್-ಆಧಾರ್-ಮೊಬೈಲ್ʼ (ಜೆಎಎಂ) ಎಂಬ ತ್ರಿಮೂರ್ತಿ ವ್ಯವಸ್ಥೆಯು, ಪ್ರಧಾನಮಂತ್ರಿ ಜನಧನ ಯೋಜನೆಯನ್ನು ಕೇಂದ್ರವಾಗಿಟ್ಟುಕೊಂಡು, ಸಬ್ಸಿಡಿ ವಿತರಣೆಗೆ ಹೊಸ ಸೋರಿಕೆ ರಹಿತ ಕಾರ್ಯವಿಧಾನವನ್ನು ಪರಿಚಯಿಸಿದೆ; 2024-25ರ ಹಣಕಾಸು ವರ್ಷದಲ್ಲಿ ವಿವಿಧ ʻಡಿಬಿಟಿʼ ಯೋಜನೆಗಳ ಅಡಿಯಲ್ಲಿ ಬ್ಯಾಂಕ್ ಖಾತೆಗಳಿಗೆ 6.9 ಲಕ್ಷ ಕೋಟಿ ರೂ. ಒದಗಿಸಲಾಗಿದೆ
Posted On:
28 AUG 2025 9:33AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014ರ ಆಗಸ್ಟ್ 28 ರಂದು ಪ್ರಾರಂಭಿಸಿದ ʻಪ್ರಧಾನಮಂತ್ರಿ ಜನ್ ಧನ್ ಯೋಜನೆʼಯು(ಪಿಎಂಜೆಡಿವೈ) ಈಗ ಭಾರತದ ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಪರಿಣಾಮದ 11 ವರ್ಷಗಳನ್ನು ಪೂರೈಸಿದೆ. ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಉಪಕ್ರಮವಾಗಿ, ಜನ್‌ಧನ್ ಯೋಜನೆಯು ಲಕ್ಷಾಂತರ ದುರ್ಬಲ ನಾಗರಿಕರಿಗೆ ಬ್ಯಾಂಕಿಂಗ್ ಪ್ರವೇಶವನ್ನು ಮರುವ್ಯಾಖ್ಯಾನಿಸುತ್ತಲೇ ಇದೆ.
ಈ ಸಂದರ್ಭದಲ್ಲಿ ಸಂದೇಶ ನೀಡಿರುವ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, "ಆರ್ಥಿಕ ಸೇರ್ಪಡೆಯು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಮುಖ ಚಾಲಕ ಶಕ್ತಿಯಾಗಿದೆ. ಬ್ಯಾಂಕ್ ಖಾತೆಗಳಿಗೆ ಸಾರ್ವತ್ರಿಕ ಪ್ರವೇಶವು ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರಿಗೆ ಔಪಚಾರಿಕ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಮತ್ತು ಅದರ ಅವಕಾಶಗಳಿಂದ ಪ್ರಯೋಜನ ಪಡೆಯಲು ಅನುವು ಮಾಡಿಕೊಡುತ್ತದೆ,ʼʼ ಎಂದು ಹೇಳಿದರು.
ʻನೇರ ಲಾಭ ವರ್ಗಾವಣೆʼ(ಡಿಬಿಟಿ) ಬಳಸಿಕೊಂಡು ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ತಲುಪಿಸಲು, ಸಾಲ ಸೌಲಭ್ಯಗಳನ್ನು ಒದಗಿಸಲು, ಸಾಮಾಜಿಕ ಭದ್ರತೆ ಹಾಗೂ ಉಳಿತಾಯ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಪ್ರಮುಖ ಮಾರ್ಗಗಳಲ್ಲಿ ಜನ್‌ಧನ್ ಯೋಜನೆಯು ಒಂದಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ತಿಳಿಸಿದರು.
ಕಳೆದ 11 ವರ್ಷಗಳಲ್ಲಿ 56 ಕೋಟಿಗೂ ಹೆಚ್ಚು ಜನ್ ಧನ್ ಖಾತೆಗಳನ್ನು ತೆರೆಯಲಾಗಿದ್ದು, ಒಟ್ಟು 2.68 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಮೊತ್ತ ಠೇವಣಿಗಳಲ್ಲಿ ಸಂಗ್ರಹವಾಗಿದೆ. 38 ಕೋಟಿಗೂ ಹೆಚ್ಚು ಉಚಿತ ʻರುಪೇʼ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಇದರಿಂದ ಡಿಜಿಟಲ್ ವಹಿವಾಟಿಗೆ ಅನುಕೂಲವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
"ಜನ್ ಧನ್ ಯೋಜನೆ ಅಡಿಯಲ್ಲಿ, ಗ್ರಾಮೀಣ ಅಥವಾ ಅರೆ-ನಗರ ಪ್ರದೇಶಗಳಲ್ಲಿ 67% ಖಾತೆಗಳನ್ನು ತೆರೆಯಲಾಗಿದೆ ಮತ್ತು ಶೇ. 56ರಷ್ಟು ಖಾತೆಗಳನ್ನು ಮಹಿಳೆಯರು ತೆರೆದಿದ್ದಾರೆ ಎಂಬುದು ಗಮನಾರ್ಹ ವಿಷಯ. ಇದು ದೇಶದ ದೂರದ ಪ್ರದೇಶಗಳಲ್ಲಿ ವಾಸಿಸುವ ದೀನದಲಿತ ವ್ಯಕ್ತಿಗಳನ್ನು ಔಪಚಾರಿಕ ಹಣಕಾಸು ಕ್ಷೇತ್ರಕ್ಕೆ ಹೇಗೆ ತರಲಾಗಿದೆ ಎಂಬುದನ್ನು ಸೂಚಿಸುತ್ತದೆ," ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ನೀಡಿದ ತಮ್ಮ ಸಂದೇಶದಲ್ಲಿ, ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವರಾದ ಶ್ರೀ ಪಂಕಜ್ ಚೌಧರಿ ಅವರು, "ಜನ್‌ಧನ್ ಯೋಜನೆಯು ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ಹಣಕಾಸು ಸೇರ್ಪಡೆ ಉಪಕ್ರಮಗಳಲ್ಲಿ ಒಂದಾಗಿದೆ. ಜನ್ ಧನ್ ಯೋಜನೆಯು ಜನರ ಘನತೆ, ಸಬಲೀಕರಣ ಮತ್ತು ಅವಕಾಶಗಳಿಗೆ ಸಂಬಂಧಿಸಿದ್ದಾಗಿದೆ,ʼʼ ಎಂದು ಹೇಳಿದರು.
"ಪ್ರಧಾನಿಯವರು ತಮ್ಮ 2021ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರತಿ ಕುಟುಂಬವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಮತ್ತು ಪ್ರತಿಯೊಬ್ಬ ವಯಸ್ಕರು ವಿಮೆ ಮತ್ತು ಪಿಂಚಣಿ ರಕ್ಷಣೆಯನ್ನು ಹೊಂದಿರಬೇಕು ಎಂದು ಘೋಷಿಸಿದರು. ದೇಶಾದ್ಯಂತ ವಿವಿಧ ಅನುಷ್ಠಾನ ಪರಿಪೂರ್ಣತೆಯ ಅಭಿಯಾನಗಳ ಮೂಲಕ ಈ ನಿಟ್ಟಿನಲ್ಲಿ ನಡೆಸಿದ ನಿರಂತರ ಪ್ರಯತ್ನಗಳಿಂದ, ನಾವು ಬ್ಯಾಂಕ್ ಖಾತೆಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ್ದೇವೆ. ಜೊತೆಗೆ ದೇಶಾದ್ಯಂತ ವಿಮೆ ಮತ್ತು ಪಿಂಚಣಿ ವ್ಯಾಪ್ತಿಯಲ್ಲಿ ನಿರಂತರ ಹೆಚ್ಚಳ ಕಂಡುಬಂದಿದೆ ," ಎಂದು ಶ್ರೀ ಪಂಕಜ್ ಚೌಧರಿ ಹೇಳಿದರು.
"ನಾವು ಅನುಷ್ಠಾನ ಪರಿಪೂರ್ಣತೆಯ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಇದರ ಅಡಿಯಲ್ಲಿ ದೇಶದ 2.7 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ಒಂದು ಶಿಬಿರವನ್ನು ನಡೆಸಲಾಗುವುದು. ಈ ಶಿಬಿರಗಳಲ್ಲಿ ಅರ್ಹ ವ್ಯಕ್ತಿಗಳು ಜನ್ ಧನ್ ಖಾತೆಗಳನ್ನು ತೆರೆಯಬಹುದು, ಜನಸುರಕ್ಷಾ ಯೋಜನೆಗಳಿಗೆ ನೋಂದಾಯಿಸಿಕೊಳ್ಳಬಹುದು ಮತ್ತು ತಮ್ಮ ರೀ-ಕೆವೈಸಿ ಪ್ರಕ್ರಿಯೆಯನ್ನೂ ಮಾಡಬಹುದು, ಅಲ್ಲದೆ ತಮ್ಮ ಬ್ಯಾಂಕ್ ಖಾತೆಗಳಲ್ಲಿ ನಾಮನಿರ್ದೇಶನಗಳನ್ನು ನವೀಕರಿಸಬಹುದು. ಹಣಕಾಸು ಸೇವೆಗಳನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ತರುವುದು ನಮ್ಮ ಪ್ರಯತ್ನವಾಗಿದೆ. ಅನುಷ್ಠಾನ ಪರಿಪೂರ್ಣತೆಯ ಅಭಿಯಾನವು ಸೆಪ್ಟೆಂಬರ್ 30ರಂದು ಮುಕ್ತಾಯಗೊಳ್ಳಲಿದ್ದು, ಆರಂಭಿಕ ವರದಿಗಳು ಪ್ರೋತ್ಸಾಹದಾಯಕವಾಗಿವೆ ಮತ್ತು ಈ ಅಭಿಯಾನದಿಂದ ಸಂಪೂರ್ಣ ಪ್ರಯೋಜನಗಳನ್ನು ಪಡೆಯುವಂತೆ ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ," ಎಂದು ಹಣಕಾಸು ಖಾತೆ ಸಹಾಯಕ ಸಚಿವರು ಹೇಳಿದರು.
"ಎಲ್ಲಾ ಪಾಲುದಾರರು, ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ, ನಾವು ಹೆಚ್ಚು ಹೆಚ್ಚು ಆರ್ಥಿಕವಾಗಿ ಎಲ್ಲರನ್ನೂ ಒಳಗೊಂಡ ಸಮಾಜದತ್ತ ಸಾಗುತ್ತಿದ್ದೇವೆ. ದೇಶದಲ್ಲಿ ಆರ್ಥಿಕ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಜನ್ ಧನ್ ಯೋಜನೆಯನ್ನು ಹೊಸ ʻಕ್ರಾಂತಿʼಯನ್ನಾಗಿ ಸದಾ ಸ್ಮರಿಸಲಾಗುತ್ತದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ಸಮರೋಪಾದಿ ಆಡಳಿತದ ಪ್ರಮುಖ ಉದಾಹರಣೆಯಾಗಿ ಕಾರ್ಯನಿರ್ವಹಿಸುವುದಲ್ಲದೆ, ಜನರ ಕಲ್ಯಾಣಕ್ಕೆ ಬದ್ಧವಾಗಿದ್ದರೆ ಸರ್ಕಾರವು ಏನೆಲ್ಲಾ ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ ," ಎಂದು ಶ್ರೀ ಪಂಕಜ್ ಚೌಧರಿ ಹೇಳಿದರು.
ಆರ್ಥಿಕ ಸೇರ್ಪಡೆ ವಿಸ್ತರಣೆ:
ದೃಢವಾದ ಹಣಕಾಸು ಸೇರ್ಪಡೆ ಕಾರ್ಯತಂತ್ರಗಳ ಮೂಲಕ ಸಮಾಜದ ಅಂಚಿನಲ್ಲಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಬೆಂಬಲಿಸಲು ಹಣಕಾಸು ಸಚಿವಾಲಯ ಬದ್ಧವಾಗಿದೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆಯು ಪ್ರತಿಯೊಬ್ಬ ಬ್ಯಾಂಕ್ ಖಾತೆ ರಹಿತರಿಗೂ ಬ್ಯಾಂಕ್ ಖಾತೆಗೆ - ಶೂನ್ಯ ಬ್ಯಾಲೆನ್ಸ್ ಮತ್ತು ಯಾವುದೇ ನಿರ್ವಹಣಾ ಶುಲ್ಕಗಳಿಲ್ಲದ ಖಾತೆಗೆ ಪ್ರವೇಶವನ್ನು ಖಚಿತಪಡಿಸುತ್ತದೆ.
ಪ್ರತಿ ಖಾತೆದಾರರಿಗೂ ಉಚಿತ ʻರುಪೇʼ ಡೆಬಿಟ್ ಕಾರ್ಡ್ ನೀಡಲಾಗುತ್ತದೆ, 2 ಲಕ್ಷ ರೂ.ಗಳ ಅಪಘಾತ ವಿಮಾ ರಕ್ಷಣೆಯನ್ನು ನೀಡುತ್ತದೆ, ಆ ಮೂಲಕ ಡಿಜಿಟಲ್ ವಹಿವಾಟು ಮತ್ತು ಆರ್ಥಿಕ ಭದ್ರತೆಯನ್ನು ಉತ್ತೇಜಿಸುತ್ತದೆ. ಖಾತೆದಾರರು 10,000 ರೂ.ಗಳವರೆಗೆ ಓವರ್ ಡ್ರಾಫ್ಟ್ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ, ಇದು ತುರ್ತು ಸಂದರ್ಭಗಳಲ್ಲಿ ಸುರಕ್ಷತೆಯನ್ನು ಒದಗಿಸುತ್ತದೆ.
ʻಪಿಎಂಜೆಡಿವೈʼ ಖಾತೆಗಳ ವೈಶಿಷ್ಟ್ಯಗಳು:
- ಸಂಪೂರ್ಣ ಕೆವೈಸಿ ಅನುಸರಣೆಯ ಪಿಎಂ ಜನ್ ಧನ್ ಖಾತೆಗಳಲ್ಲಿ ಬ್ಯಾಲೆನ್ಸ್ ಅಥವಾ ವಹಿವಾಟಿನ ಮೊತ್ತಕ್ಕೆ ಯಾವುದೇ ನಿರ್ಬಂಧವಿಲ್ಲ. ಇದು ʻಬಿಎಸ್‌ಬಿಡಿʼ ಖಾತೆಯಾಗಿದೆ. ʻಪಿಎಂಜೆಡಿವೈʼ ಖಾತೆದಾರರಿಗೆ ಈ ಕೆಳಗಿನ ಉಚಿತ ಸೌಲಭ್ಯಗಳನ್ನು ಒದಗಿಸಲಾಗಿದೆ:
- ಬ್ಯಾಂಕ್ ಶಾಖೆ ಮತ್ತು ಎಟಿಎಂಗಳು / ಸಿಡಿಎಂಗಳಲ್ಲಿ ನಗದು ಜಮೆ.
- ಯಾವುದೇ ವಿದ್ಯುನ್ಮಾನ ಮಾರ್ಗದ ಮೂಲಕ ಅಥವಾ ಕೇಂದ್ರ / ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳು ಪಡೆದ ಚೆಕ್‌ಗಳ ಜಮೆ / ಸಂಗ್ರಹದ ಮೂಲಕ ಹಣವನ್ನು ಸ್ವೀಕರಿಸುವುದು / ಜಮೆ ಮಾಡುವುದು.
- ಒಂದು ತಿಂಗಳಲ್ಲಿ ಮಾಡಬಹುದಾದ ಠೇವಣಿಗಳ ಸಂಖ್ಯೆ ಮತ್ತು ಮೌಲ್ಯಕ್ಕೆ ಯಾವುದೇ ಮಿತಿಯಿಲ್ಲ.
- ಮೆಟ್ರೋ ಎಟಿಎಂ ಸೇರಿದಂತೆ ಯಾವುದೇ ಎಟಿಎಂನಲ್ಲಿ ಹಣ ಹಿಂಪಡೆಯುವಿಕೆ ಸೇರಿದಂತೆ ತಿಂಗಳಲ್ಲಿ ಕನಿಷ್ಠ ನಾಲ್ಕು ಉಚಿತ ಹಿಂಪಡೆಯುವಿಕೆ. ನಂತರದ ಹಿಂಪಡೆಯುವಿಕೆಗೆ ಬ್ಯಾಂಕುಗಳು ಶುಲ್ಕ ವಿಧಿಸಬಹುದು.
- 2 ಲಕ್ಷ ರೂ.ಗಳ ಅಪಘಾತ ವಿಮಾ ರಕ್ಷಣೆಯೊಂದಿಗೆ ಉಚಿತ ʻರುಪೇ ಡೆಬಿಟ್ ಕಾರ್ಡ್ʼ.
ದಶಕಕ್ಕೂ ಮೀರಿದ ಪರಿವರ್ತನೆಯ ಶಕೆ:
ಕಳೆದ 11 ವರ್ಷಗಳಲ್ಲಿ, ಪ್ರಧನಮಂತ್ರಿ ಜನ್ ಧನ್ ಯೋಜನೆಯು ಕ್ರಾಂತಿಕಾರಿ ಮತ್ತು ಊದ್ದೇಶಿತ ದಿಕ್ಕಿನಲ್ಲಿ ಬದಲಾವಣೆಗೆ ವೇಗ ನೀಡಿದೆ. ಬಡ ಮತ್ತು ಅತ್ಯಂತ ದೂರದ ನಾಗರಿಕರಿಗೆ ಸೇವೆ ಸಲ್ಲಿಸಲು ಬ್ಯಾಂಕಿಂಗ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಿದೆ. ಇದು ನೇರ ಲಾಭ ವರ್ಗಾವಣೆಗೆ (ಡಿಬಿಟಿ) ಮೂಲಾಧಾರವಾಗಿದೆ, ಇದು ಸರ್ಕಾರದ ಸಬ್ಸಿಡಿಗಳು ಮತ್ತು ಪಾವತಿಗಳನ್ನು ಪಾರದರ್ಶಕ, ದಕ್ಷ ಮತ್ತು ಭ್ರಷ್ಟಾಚಾರ ಮುಕ್ತ ರೀತಿಯಲ್ಲಿ ವಿತರಣೆ ಮಾಡಲು ಅನುವು ಮಾಡಿಕೊಡುತ್ತದೆ.
ಜನ ಸುರಕ್ಷಾ ಯೋಜನೆಗಳು- ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಂತಹ ಯೋಜನೆಗಳ ಮೂಲಕ ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರಿಗೆ ಜೀವ ಮತ್ತು ಅಪಘಾತ ವಿಮೆಯನ್ನು ವಿಸ್ತರಿಸುವಲ್ಲಿ ಜನ್ ಧನ್ ಖಾತೆಗಳು ಪ್ರಮುಖ ಪಾತ್ರ ವಹಿಸಿವೆ.
ʻಜನ್ ಧನ್-ಆಧಾರ್-ಮೊಬೈಲ್ʼ(ಜೆಎಎಂ): ಕ್ರಾಂತಿಕಾರಿ ʻತ್ರಿಮೂರ್ತಿʼ:
ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನು ಅನ್ನು ಕೇಂದ್ರವಾಗಿಟ್ಟುಕೊಂಡು ʻಜನ್-ಧನ್-ಆಧಾರ್-ಮೊಬೈಲ್ʼ(ಜೆಎಎಂ) ರೂಪಿಸಲಾದ ʻತ್ರಿಮೂರ್ತಿʼ ವ್ಯವಸ್ಥೆಯು ಸೋರಿಕೆ ರಹಿತ ಸಬ್ಸಿಡಿ ವಿತರಣೆಗೆ ಹೇಳಿ ಮಾಡಿಸಿದಂತಹ ಕಾರ್ಯವಿಧಾನವೆಂದು ಸಾಬೀತಾಗಿದೆ. ʻಜೆಎಎಂʼ ಮೂಲಕ, ಸರ್ಕಾರವು ಕಲ್ಯಾಣ ಪ್ರಯೋಜನಗಳನ್ನು ನೇರವಾಗಿ ದೀನದಲಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದೆ, ಮಧ್ಯವರ್ತಿಗಳ ಹಾವಳಿ ಮತ್ತು ವಿಳಂಬಗಳನ್ನು ನಿವಾರಿಸಿದೆ. 2024-25ರ ಹಣಕಾಸು ವರ್ಷದಲ್ಲಿ ವಿವಿಧ ʻಡಿಬಿಟಿʼ ಯೋಜನೆಗಳ ಅಡಿಯಲ್ಲಿ ಒಟ್ಟು 6.9 ಲಕ್ಷ ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.
ಹಣಕಾಸು ಸೇರ್ಪಡೆ ಯೋಜನೆಗಳ ಪರಿಪೂರ್ಣ ಅನುಷ್ಠಾನ ಅಭಿಯಾನ (01.07.2025 - 30.09.2025): ʻಕೆವೈಸಿʼ ವಿವರಗಳನ್ನು ನವೀಕರಿಸಲು, ಹೊಸ ಖಾತೆಗಳನ್ನು ತೆರೆಯಲು ಮತ್ತು ವಿಮೆ ಮತ್ತು ಪಿಂಚಣಿ ಯೋಜನೆಗಳನ್ನು ಉತ್ತೇಜಿಸಲು ಬ್ಯಾಂಕುಗಳು ಜುಲೈ 1, 2025 ರಿಂದ ಸೆಪ್ಟೆಂಬರ್ 30, 2025 ರವರೆಗೆ ಶಿಬಿರಗಳನ್ನು ಆಯೋಜಿಸುತ್ತಿವೆ. ಬ್ಯಾಂಕಿಂಗ್ ಸೇವೆಗಳ ಬಳಕೆಯನ್ನು ಗರಿಷ್ಠಗೊಳಿಸಲು ಮತ್ತು ನಿಷ್ಕ್ರಿಯತೆಯನ್ನು ತಡೆಗಟ್ಟಲು ಖಾತೆದಾರರಿಗೆ ಶಿಕ್ಷಣ ನೀಡಲು ನಿರಂತರ ಒತ್ತು ನೀಡಲಾಗುತ್ತಿದೆ. ಖಾತೆದಾರರನ್ನು ಸಂಪರ್ಕಿಸುವ ಮೂಲಕ ಜನ್ ಧನ್ ಯೋಜನೆ ಅಡಿಯಲ್ಲಿ ನಿಷ್ಕ್ರಿಯ ಖಾತೆಗಳನ್ನು ಕಡಿಮೆ ಮಾಡಲು ಬ್ಯಾಂಕುಗಳು ಪ್ರಯತ್ನಗಳನ್ನು ಮಾಡುತ್ತಿವೆ. ಜುಲೈ 1, 2025 ರಂದು ಅಭಿಯಾನವನ್ನು ಪ್ರಾರಂಭಿಸಿದಾಗಿನಿಂದ, ಪ್ರಮುಖ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ನೋಂದಣಿಗೆ ಅನುಕೂಲವಾಗುವಂತೆ ಮತ್ತು ಆರ್ಥಿಕ ಸಾಕ್ಷರತೆಯನ್ನು ಉತ್ತೇಜಿಸಲು ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,77,102 ಶಿಬಿರಗಳನ್ನು ನಡೆಸಲಾಗಿದೆ.
ಮೈಲುಗಲ್ಲುಗಳು ಮತ್ತು ಸಾಧನೆಗಳು:
ಎ. ಪಿಎಂ ಜನ್ ಧನ್ ಖಾತೆಗಳು: 56.16 ಕೋಟಿ (ಆಗಸ್ಟ್ 13, 2025ರಂತೆ)
ಆಗಸ್ಟ್ 13, 2025 ರ ಹೊತ್ತಿಗೆ, ಒಟ್ಟು ಜನ್ ಧನ್ ಖಾತೆಗಳ ಸಂಖ್ಯೆ 56.16 ಕೋಟಿಗೆ ತಲುಪಿದೆ; ಈ ಪೈಕಿ 55.7% (31.31 ಕೋಟಿ) ಜನ್-ಧನ್ ಖಾತೆದಾರರು ಮಹಿಳೆಯರು ಮತ್ತು 66.7% (37.48 ಕೋಟಿ) ಜನ್‌ಧನ್ ಖಾತೆಗಳು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿವೆ

ಬಿ. ಜನ್ ಧನ್ ಖಾತೆಗಳ ಅಡಿಯಲ್ಲಿ ಶಿಲ್ಕು- 2.68 ಲಕ್ಷ ಕೋಟಿ (ಆಗಸ್ಟ್ 13, 25 ರಂತೆ)
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಖಾತೆಗಳ ಅಡಿಯಲ್ಲಿ ಒಟ್ಟು ಠೇವಣಿ ಶಿಲ್ಕು 2,67,756 ಕೋಟಿ ರೂ.ಗೆ ತಲುಪಿದೆ. ಖಾತೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದ್ದರೆ, ಒಟ್ಟು ಠೇವಣಿಗಳು ಸುಮಾರು 12 ಪಟ್ಟು ಹೆಚ್ಚಾಗಿವೆ. (ಆಗಸ್ಟ್ 2025 / ಆಗಸ್ಟ್ 2015)

ಸಿ. ಜನ್ ಧನ್ ಖಾತೆಗೆ ಸರಾಸರಿ ಠೇವಣಿ - 4768 ರೂ. (ಆಗಸ್ಟ್ 13, 2025 ರಂತೆ)
13.08.2025ರಂದು ಇದ್ದಂತೆ ಪ್ರತಿ ಖಾತೆಯ ಸರಾಸರಿ ಠೇವಣಿ 4,768 ರೂ. ಆಗಿದೆ. ಆಗಸ್ಟ್ 2015ಕ್ಕೆ ಹೋಲಿಸಿದರೆ ಪ್ರತಿ ಖಾತೆಗೆ ಸರಾಸರಿ ಠೇವಣಿ ಪ್ರಮಾಣ 3.7 ಪಟ್ಟು ಹೆಚ್ಚಾಗಿದೆ. ಸರಾಸರಿ ಠೇವಣಿಯ ಹೆಚ್ಚಳವು ಖಾತೆಗಳ ಹೆಚ್ಚಿದ ಬಳಕೆ ಮತ್ತು ಖಾತೆದಾರರಲ್ಲಿ ಉಳಿತಾಯ ಅಭ್ಯಾಸವನ್ನು ಬೆಳೆಸುವ ಮತ್ತೊಂದು ಸೂಚನೆಯಾಗಿದೆ.

ಡಿ. ಜನ್ ಧನ್ ಖಾತೆದಾರರಿಗೆ ನೀಡಲಾದ ʻರುಪೇ ಕಾರ್ಡ್ʼ: 38.68 ಕೋಟಿ (ಆಗಸ್ಟ್ 13, 25 ರಂತೆ)
ಪಿಎಂ ಜನ್ ಧನ್ ಖಾತೆದಾರರಿಗೆ 38.68 ಕೋಟಿ ʻರುಪೇʼ ಕಾರ್ಡ್‌ಗಳನ್ನು ವಿತರಿಸಲಾಗಿದೆ: ʻರುಪೇʼ ಕಾರ್ಡ್‌ಗಳ ಸಂಖ್ಯೆ ಮತ್ತು ಕಾಲಕ್ರಮೇಣ ಅವುಗಳ ಬಳಕೆ ಹೆಚ್ಚಾಗಿದೆ.

ಪಿಎಂ ಜನ್ ಧನ್ ಯೋಜನೆ ಅಡಿಯಲ್ಲಿ 38.68 ಕೋಟಿ ʻರುಪೇʼ ಡೆಬಿರ್ಡ್‌ಗಳ ವಿತರಣೆ, 1.11 ಕೋಟಿ ʻಪಿಒಎಸ್ʼ / ʻಎಂಪಿಒಎಸ್ʼ ಯಂತ್ರಗಳ ಸ್ಥಾಪನೆ ಮತ್ತು ʻಯುಪಿಐʼನಂತಹ ಮೊಬೈಲ್ ಆಧಾರಿತ ಪಾವತಿ ವ್ಯವಸ್ಥೆಗಳ ಪರಿಚಯದೊಂದಿಗೆ, ಒಟ್ಟು ಡಿಜಿಟಲ್ ವಹಿವಾಟುಗಳ ಸಂಖ್ಯೆ 2018-19ರ ಹಣಕಾಸು ವರ್ಷದಲ್ಲಿದ್ದ 2,338 ಕೋಟಿ ರೂ.ನಿಂದ 2024-25ರ ಹಣಕಾಸು ವರ್ಷದಲ್ಲಿ 22,198 ಕೋಟಿ ರೂ.ಗೆ ಏರಿದೆ. ʻಯುಪಿಐʼ ಹಣಕಾಸು ವಹಿವಾಟುಗಳ ಒಟ್ಟು ಸಂಖ್ಯೆ 2018-19ರ ಹಣಕಾಸು ವರ್ಷದಲ್ಲಿದ್ದ 535 ಕೋಟಿ ರೂ.ನಿಂದ 2024-25ರ ಹಣಕಾಸು ವರ್ಷದಲ್ಲಿ 18,587 ಕೋಟಿ ರೂ.ಗೆ ಏರಿದೆ. ಅಂತೆಯೇ, ʻಪಿಒಎಸ್ʼ ಮತ್ತು ʻಇ-ಕಾಮರ್ಸ್ʼನಲ್ಲಿ ಒಟ್ಟು ʻರುಪೇʼ ಕಾರ್ಡ್ ವಹಿವಾಟುಗಳ ಸಂಖ್ಯೆ 2017-18ರ ಹಣಕಾಸು ವರ್ಷದಲ್ಲಿ 67 ಕೋಟಿ ರೂ.ನಿಂದ 2024-25ರ ಹಣಕಾಸು ವರ್ಷದಲ್ಲಿ 93.85 ಕೋಟಿ ರೂ.ಗೆ ಏರಿದೆ.
ಪಿಎಂ ಜನ್ ಧನ್ ಯೋಜನೆಯ ಯಶಸ್ಸು, ಅದರ ಸಮರೋಪಾದ ಕಾರ್ಯವಿಧಾನ, ನಿಯಂತ್ರಕ ಬೆಂಬಲ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ಬಯೋಮೆಟ್ರಿಕ್ ಪರಿಶೀಲನೆಗಾಗಿ ಆಧಾರ್‌ನಂತಹ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಏಕೀಕರಣದಿಂದ ಪ್ರೇರಿತವಾಗಿದೆ.
ಇದು ಈ ಹಿಂದೆ ಔಪಚಾರಿಕ ಹಣಕಾಸಿನಿಂದ ಹೊರಗುಳಿದವರಿಗೆ ಉಳಿತಾಯ ಮತ್ತು ಸಾಲದ ಪ್ರವೇಶವನ್ನು ಸಕ್ರಿಯಗೊಳಿಸಿದೆ. ಗೋಚರಿಸುವ ಉಳಿತಾಯ ಮಾದರಿಗಳೊಂದಿಗೆ, ಖಾತೆದಾರರು ʻಮುದ್ರಾʼ ಸಾಲಗಳು ಸೇರಿದಂತೆ ಹಲವು ಸಾಲಗಳನ್ನು ಸಹ ಪಡೆಯುತ್ತಿದ್ದಾರೆ, ಆ ಮೂಲಕ ವ್ಯಕ್ತಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮತ್ತು ಆರ್ಥಿಕ ಸದೃಢತೆಯನ್ನು ನಿರ್ಮಿಸಲು ಸಶಕ್ತರಾಗುತ್ತಾರೆ.
ಪಿಎಂ ಜನ್‌ಧನ್ ಯೋಜನೆಯು ತನ್ನ 12ನೇ ವರ್ಷವನ್ನು ಪ್ರವೇಶಿಸುತ್ತಿದ್ದಂತೆ, ಇದು ಎಲ್ಲರನ್ನೂ ಒಳಗೊಂಡ ಬೆಳವಣಿಗೆ, ಡಿಜಿಟಲ್ ನಾವೀನ್ಯತೆ ಮತ್ತು ಆರ್ಥಿಕ ಸಬಲೀಕರಣದ ಹೆಗ್ಗುರುತಾಗಿ ಮುಂದುವರೆದಿದೆ. ಯೋಜನೆಯ ನಿರಂತರ ಯಶಸ್ಸು ಆರ್ಥಿಕ ಸ್ವಾತಂತ್ರ್ಯದ ಪ್ರಯಾಣದಲ್ಲಿ ಯಾವೊಬ್ಬ ನಾಗರಿಕರೂ ಹಿಂದೆ ಉಳಿಯದಂತೆ ಖಚಿತಪಡಿಸಿಕೊಳ್ಳುವ ಭಾರತದ ಬದ್ಧತೆಯನ್ನು ಸೂಚಿಸುತ್ತದೆ.
*****
(Release ID: 2161426)
Visitor Counter : 15
Read this release in:
Odia
,
English
,
Urdu
,
Marathi
,
Nepali
,
Hindi
,
Manipuri
,
Bengali
,
Bengali-TR
,
Assamese
,
Punjabi
,
Tamil
,
Telugu
,
Malayalam