ಗೃಹ ವ್ಯವಹಾರಗಳ ಸಚಿವಾಲಯ
ಅಸ್ಸಾಂ ರೈಫಲ್ಸ್ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ 'ಏಕತಾ ಉತ್ಸವ - ಒಂದು ಧ್ವನಿ, ಒಂದು ರಾಷ್ಟ್ರ' ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಪ್ರವಾಸೋದ್ಯಮದಿಂದ ತಂತ್ರಜ್ಞಾನದವರೆಗೆ, ಕ್ರೀಡೆಯಿಂದ ಬಾಹ್ಯಾಕಾಶದವರೆಗೆ, ಕೃಷಿಯಿಂದ ಉದ್ಯಮಶೀಲತೆಯವರೆಗೆ ಮತ್ತು ಬ್ಯಾಂಕಿಂಗ್ ನಿಂದ ವ್ಯವಹಾರದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮೋದಿ ಸರ್ಕಾರ ಈಶಾನ್ಯಕ್ಕೆ ಹಲವಾರು ಅವಕಾಶ ಮಾರ್ಗಗಳನ್ನು ತೆರೆದಿದೆ
ಮೋದಿ ಸರ್ಕಾರದ ಅಡಿಯಲ್ಲಿ ಈಶಾನ್ಯದಲ್ಲಿ ಹಿಂಸಾತ್ಮಕ ಘಟನೆಗಳಲ್ಲಿ 70% ಮತ್ತು ನಾಗರಿಕ ಸಾವುಗಳಲ್ಲಿ 85% ರಷ್ಟು ಕಡಿಮೆಯಾಗಿದೆ, ಇದು ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ಜೊತೆಗೆ ಸಾಂಸ್ಕೃತಿಕ ಅಭಿವೃದ್ಧಿಯೂ ಆಗುತ್ತಿದೆ ಎಂಬುದನ್ನು ಸೂಚಿಸುತ್ತದೆ
2027ರ ವೇಳೆಗೆ ಈಶಾನ್ಯದ ಎಲ್ಲಾ 8 ರಾಜ್ಯಗಳನ್ನು ರೈಲು ಮತ್ತು ವಾಯು ಸಂಪರ್ಕದ ಮೂಲಕ ದಿಲ್ಲಿಗೆ ಸಂಪರ್ಕಿಸಲಾಗುವುದು
ಇಡೀ ಭಾರತವು ಈಶಾನ್ಯದ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತದೆ, ಈಶಾನ್ಯವಿಲ್ಲದ ಭಾರತ ಮತ್ತು ಭಾರತವಿಲ್ಲದೆ ಈಶಾನ್ಯ ಅಪೂರ್ಣ
5 ದಿನಗಳ ಏಕತಾ ಉತ್ಸವದ ಮೂಲಕ ಈಶಾನ್ಯದ ಏಕತೆಯನ್ನು ದಿಲ್ಲಿಯಲ್ಲಿ ಪ್ರದರ್ಶಿಸಲಾಗಿದೆ
ಅಸ್ಸಾಂ ರೈಫಲ್ಸ್ ಭಾರತದ ಅತ್ಯಂತ ಹಳೆಯ ಅರೆಸೈನಿಕ ಪಡೆ, ಇದನ್ನು 'ಈಶಾನ್ಯದ ಸ್ನೇಹಿತ' ಎಂದು ಗುರುತಿಸಲಾಗಿದೆ, ಈಶಾನ್ಯವನ್ನು ಹಲವಾರು ಬಿಕ್ಕಟ್ಟುಗಳಿಂದ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ
2036ರ ಒಲಿಂಪಿಕ್ಸ್ ನಲ್ಲಿ ಪದಕ ಪಟ್ಟಿಯಲ್ಲಿ ಭಾರತ ಅಗ್ರ 10ರಲ್ಲಿ ಸ್ಥಾನ ಪಡೆಯಲಿದ್ದು, ಈಶಾನ್ಯ ರಾಜ್ಯಗಳು ಪ್ರಮುಖ ಪಾತ್ರ ವಹಿಸಲಿವೆ
Posted On:
20 FEB 2025 7:30PM by PIB Bengaluru
ಹೊಸದಿಲ್ಲಿಯಲ್ಲಿ ಇಂದು ಅಸ್ಸಾಂ ರೈಫಲ್ಸ್ ಆಯೋಜಿಸಿದ್ದ 'ಏಕತಾ ಉತ್ಸವ್ - ಒಂದು ಧ್ವನಿ, ಒಂದು ರಾಷ್ಟ್ರ' ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಸ್ಸಾಂ ರೈಫಲ್ಸ್ ಮಹಾನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಮ್ಮ ಭಾಷಣದಲ್ಲಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಏಕತೆ ಎಂಬ ಪದವು ಈಶಾನ್ಯಕ್ಕೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯದ ನಂತರದ ಅನೇಕ ವರ್ಷಗಳವರೆಗೆ, ಈಶಾನ್ಯದ ವಿಶಾಲ ಪ್ರದೇಶವು ಭೌತಿಕವಾಗಿ ಮತ್ತು ಭಾವನಾತ್ಮಕವಾಗಿ ದಿಲ್ಲಿಯಿಂದ ದೂರವಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಪರ್ಕದ ಮೂಲಕ ಈಶಾನ್ಯ ಮತ್ತು ದಿಲ್ಲಿ ನಡುವಿನ ಭೌತಿಕ ಮತ್ತು ಭಾವನಾತ್ಮಕ ಅಂತರವನ್ನು ನಿವಾರಿಸಿದ್ದಾರೆ ಎಂದು ಅವರು ಹೇಳಿದರು. ಇಂದು ಈಶಾನ್ಯವು ಇಡೀ ಭಾರತಕ್ಕೆ ಸೇರಿದೆ ಮತ್ತು ಇಡೀ ಭಾರತವು ಈಶಾನ್ಯಕ್ಕೆ ಸೇರಿದೆ. ಮೋದಿ ಸರ್ಕಾರವು ಈಶಾನ್ಯಕ್ಕೆ ನೂರಾರು ಬಜೆಟ್ ಕೊಡುಗೆಗಳನ್ನು ಹೆಚ್ಚಿಸಿದೆ ಮತ್ತು ಈಶಾನ್ಯಕ್ಕೆ 3-4 ಪಟ್ಟು ಹೆಚ್ಚು ಬಜೆಟ್ ನೀಡಿದೆ ಎಂದು ಶ್ರೀ ಶಾ ಹೇಳಿದರು. 2027 ರ ವೇಳೆಗೆ ಈಶಾನ್ಯದ ಎಲ್ಲಾ ಎಂಟು ರಾಜ್ಯಗಳನ್ನು ರೈಲು ಮತ್ತು ವಾಯು ಸಂಪರ್ಕದ ಮೂಲಕ ದಿಲ್ಲಿಗೆ ಸಂಪರ್ಕಿಸಲಾಗುವುದು ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರು ಈಶಾನ್ಯವನ್ನು ಅಷ್ಟಲಕ್ಷ್ಮಿ ಎಂದು ದೇಶಾದ್ಯಂತ ಜನಪ್ರಿಯಗೊಳಿಸಿದ್ದಾರೆ ಮತ್ತು ಈ ಪ್ರದೇಶದ ಎಲ್ಲಾ 8 ರಾಜ್ಯಗಳು ದೇಶವನ್ನು ಪ್ರತಿಯೊಂದು ಅಂಶದಲ್ಲೂ ಶ್ರೀಮಂತಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದೂ ಗೃಹ ಸಚಿವರು ಹೇಳಿದರು. ಈಶಾನ್ಯದ ಯುವಜನರಿಗೆ ಆರ್ಥಿಕ, ಸಾಂಸ್ಕೃತಿಕ, ಭದ್ರತೆ, ಕ್ರೀಡೆ ಮತ್ತು ಸಂಶೋಧನೆ ಹಾಗು ಅಭಿವೃದ್ಧಿ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ ಎಂದು ಅವರು ಹೇಳಿದರು. ಪ್ರವಾಸೋದ್ಯಮದಿಂದ ತಂತ್ರಜ್ಞಾನದವರೆಗೆ, ಕ್ರೀಡೆಯಿಂದ ಬಾಹ್ಯಾಕಾಶದವರೆಗೆ, ಕೃಷಿಯಿಂದ ಉದ್ಯಮಶೀಲತೆಯವರೆಗೆ ಮತ್ತು ಬ್ಯಾಂಕಿಂಗ್ ನಿಂದ ವ್ಯವಹಾರದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮೋದಿ ಸರ್ಕಾರ ಈಶಾನ್ಯಕ್ಕೆ ಹಲವಾರು ಅವಕಾಶ ಮಾರ್ಗಗಳನ್ನು ತೆರೆದಿದೆ ಎಂದು ಅವರು ನುಡಿದರು.
ನಮ್ಮ ಈಶಾನ್ಯದಲ್ಲಿ 220 ಕ್ಕೂ ಹೆಚ್ಚು ಜನಾಂಗೀಯ ಗುಂಪುಗಳು ಮತ್ತು 160 ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ, 200 ಕ್ಕೂ ಹೆಚ್ಚು ಉಪಭಾಷೆಗಳು ಮತ್ತು ಭಾಷೆಗಳನ್ನು ಮಾತನಾಡಲಾಗುತ್ತದೆ, 50 ಕ್ಕೂ ಹೆಚ್ಚು ವಿಶಿಷ್ಟ ಹಬ್ಬಗಳನ್ನು ಆಚರಿಸಲಾಗುತ್ತದೆ ಮತ್ತು 30 ಕ್ಕೂ ಹೆಚ್ಚು ಸಾಂಪ್ರದಾಯಿಕ ನೃತ್ಯಗಳು ಹಾಗು 100 ಕ್ಕೂ ಹೆಚ್ಚು ಪಾಕಪದ್ಧತಿಗಳು ಈ ಪ್ರದೇಶದಲ್ಲಿ ಅಸ್ತಿತ್ವದಲ್ಲಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇವೆಲ್ಲವೂ ಇಡೀ ಭಾರತಕ್ಕೆ ಶ್ರೀಮಂತ ಪರಂಪರೆಯ ನಿಧಿಯಾಗಿದೆ, ತನ್ನ ಈ ಪರಂಪರೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದು ಅವರು ಹೇಳಿದರು. ಈಶಾನ್ಯ ಇಲ್ಲದ ಭಾರತ ಮತ್ತು ಭಾರತವಿಲ್ಲದೆ ಈಶಾನ್ಯ ಅಪೂರ್ಣ ಎಂದೂ ಶ್ರೀ ಶಾ ಅಭಿಪ್ರಾಯಪಟ್ಟರು.
ಈಶಾನ್ಯ ಏಕತಾ ಉತ್ಸವದ ಶೀರ್ಷಿಕೆ 'ಒಂದು ಧ್ವನಿ, ಒಂದು ರಾಷ್ಟ್ರ' ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ನಮ್ಮ ದೇಶವು ಅನೇಕ ಭಾಷೆಗಳು, ಸಂಸ್ಕೃತಿಗಳು, ಪಾಕಪದ್ಧತಿಗಳು ಮತ್ತು ವೇಷಭೂಷಣಗಳ ಅದ್ಭುತ ಮಿಶ್ರಣವಾಗಿದೆ ಮತ್ತು ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ ಮತ್ತು ಅತಿದೊಡ್ಡ ಶಕ್ತಿಯಾಗಿದೆ ಎಂದು ಅವರು ಹೇಳಿದರು. 5 ದಿನಗಳ ಏಕತಾ ಉತ್ಸವದ ಮೂಲಕ ಈಶಾನ್ಯದ ಏಕತೆಯನ್ನು ದಿಲ್ಲಿಯಲ್ಲಿ ಪ್ರದರ್ಶಿಸಲಾಗಿದೆ. ಅಸ್ಸಾಂ ರೈಫಲ್ಸ್ ಭಾರತದ ಅತ್ಯಂತ ಹಳೆಯ ಅರೆಸೈನಿಕ ಪಡೆ ಮತ್ತು ಈ ಪಡೆಯನ್ನು 'ಈಶಾನ್ಯದ ಸ್ನೇಹಿತ' ಎಂದು ಗುರುತಿಸಲಾಗಿದೆ ಎಂದೂ ಶ್ರೀ ಶಾ ಹೇಳಿದರು. ಈಶಾನ್ಯವನ್ನು ಹಲವಾರು ಬಿಕ್ಕಟ್ಟುಗಳಿಂದ ರಕ್ಷಿಸುವಲ್ಲಿ ಅಸ್ಸಾಂ ರೈಫಲ್ಸ್ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದ ಮೂಲಕ ಇಂದು ಅಸ್ಸಾಂ ರೈಫಲ್ಸ್ ಈಶಾನ್ಯದ ಏಕತೆ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಇಡೀ ದೇಶಕ್ಕೆ ಮತ್ತು ಜಗತ್ತಿಗೆ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಕಾರ್ಯಕ್ರಮದ ಕ್ರೀಡಾ ಸ್ಪರ್ಧೆಗಳಲ್ಲಿ 212 ತಂಡಗಳು ಮತ್ತು 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ಹೆಚ್ಚಿನ ಬಹುಮಾನಗಳನ್ನು ಮಣಿಪುರ ಪಡೆದುಕೊಂಡಿದೆ, ಇದು ಮಣಿಪುರದಲ್ಲಿ ಕ್ರೀಡೆಗೆ ಇರುವ ಮಹತ್ವವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಈಶಾನ್ಯದಲ್ಲಿ ಕ್ರೀಡೆಯ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಣಿಪುರದಲ್ಲಿ ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧರಿಸಿದರು ಎಂದು ಶ್ರೀ ಶಾ ಹೇಳಿದರು. ಎಲ್ಲರಿಗೂ ಕ್ರೀಡೆ, ಶ್ರೇಷ್ಠತೆಗಾಗಿ/ಉತ್ಕೃಷ್ಟತೆಗಾಗಿ ಕ್ರೀಡೆಗಳು ಎಂಬುದು ಭಾರತದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಸೂತ್ರವಾಗಿದೆ ಎಂದು ಅವರು ಹೇಳಿದರು. 2036 ರಲ್ಲಿ ಭಾರತವು ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲಿದೆ ಮತ್ತು ದೇಶವು ಅಗ್ರ 10 ರಲ್ಲಿ ಸ್ಥಾನ ಪಡೆಯುತ್ತದೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು, ಈ ಸಾಧನೆಯಲ್ಲಿ ಈಶಾನ್ಯ ರಾಜ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕಳೆದ 10 ವರ್ಷಗಳಲ್ಲಿ, ವಿಶೇಷವಾಗಿ ಕಳೆದ 5 ವರ್ಷಗಳಲ್ಲಿ, ಈಶಾನ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈಶಾನ್ಯದಲ್ಲಿ ಹಿಂಸಾತ್ಮಕ ಘಟನೆಗಳು ಮತ್ತು ಭದ್ರತಾ ಸಿಬ್ಬಂದಿಯ ಸಾವುಗಳು ಶೇಕಡಾ 70 ರಷ್ಟು ಮತ್ತು ನಾಗರಿಕರ ಸಾವುಗಳು ಶೇಕಡಾ 85 ರಷ್ಟು ಕಡಿಮೆಯಾಗಿವೆ ಎಂದು ಅವರು ಹೇಳಿದರು. ಹಿಂಸಾಚಾರದ ಅಂಕಿಅಂಶಗಳಲ್ಲಿನ ಈ ಇಳಿಕೆಯು ಈಶಾನ್ಯದಲ್ಲಿ ಕ್ರಮೇಣ ಶಾಂತಿ ನೆಲೆಸಿದೆ ಮತ್ತು ಅಭಿವೃದ್ಧಿ ಹಾಗು ಸಾಂಸ್ಕೃತಿಕ ಅಭಿವೃದ್ಧಿಯ ಹೊಸ ಯುಗ ಪ್ರಾರಂಭವಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದೂ ಶ್ರೀ ಶಾ ಹೇಳಿದರು.
2014 ರಿಂದ ಈಶಾನ್ಯದಲ್ಲಿ 10,500 ಕ್ಕೂ ಹೆಚ್ಚು ಭಯೋತ್ಪಾದಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಮತ್ತು 2019 ಮತ್ತು 2024 ರ ನಡುವೆ ಈ ಪ್ರದೇಶದಲ್ಲಿ 12 ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದಶಕಗಳಿಂದ ಇಲ್ಲಿ ಅನೇಕ ವಿವಾದಗಳು ನಡೆಯುತ್ತಿವೆ, ಆದರೆ ಮೋದಿ ಸರ್ಕಾರವು ಎರಡು ಹೆಜ್ಜೆ ಮುಂದೆ ಹೋಗಿ ಯುವಜನರಿಗೆ ಸಾಕಷ್ಟು ಅವಕಾಶಗಳು ಲಭ್ಯವಿದೆ ಎಂದು ನಂಬುವಂತೆ ಮಾಡಿದೆ ಎಂದು ಅವರು ಹೇಳಿದರು. ಹಿಂಸಾಚಾರದಲ್ಲಿ ತೊಡಗಿರುವ ಯುವಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಮೂಲಕ ಮುಖ್ಯವಾಹಿನಿಗೆ ಸೇರಬೇಕೆಂದು ಕೇಂದ್ರ ಗೃಹ ಸಚಿವರು ಮನವಿ ಮಾಡಿದರು.
ಇಂದು ಈಶಾನ್ಯವನ್ನು ತನ್ನದು ಎಂದು ಪರಿಗಣಿಸದ ಮತ್ತು ಈ ಪ್ರದೇಶದ ಜನರ ಬಗ್ಗೆ ಪ್ರೀತಿಯಿಲ್ಲದ ಭಾಗ ಭಾರತದಲ್ಲಿ ಇಲ್ಲ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ದೇಶದ ಪ್ರತಿಯೊಂದು ರಾಜ್ಯದ ಜನರು ತಮ್ಮ ಹೃದಯದಲ್ಲಿ ಈಶಾನ್ಯದ ಜನರಿಗೆ ವಿಶೇಷ ಸ್ಥಾನವನ್ನು ಹೊಂದಿದ್ದಾರೆ ಮತ್ತು ಈಶಾನ್ಯದ ಪ್ರತಿಯೊಂದು ರಾಜ್ಯವೂ ಮುಂದೆ ಬಂದು ಇಡೀ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು. ಈಶಾನ್ಯವು ಈಗ ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತದೆ ಮತ್ತು ಭಾರತದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸಲು ಬಯಸುತ್ತದೆ ಎಂದೂ ಶ್ರೀ ಶಾ ಹೇಳಿದರು.
*****
(Release ID: 2105242)
Visitor Counter : 10
Read this release in:
Odia
,
Tamil
,
Khasi
,
English
,
Urdu
,
Nepali
,
Hindi
,
Bengali-TR
,
Assamese
,
Bengali
,
Punjabi
,
Gujarati
,
Malayalam