ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಶ್ರೀಲಂಕಾ ಜಂಟಿ ಹೇಳಿಕೆ: ಪರಸ್ಪರ ಸಾಮಾನ್ಯ ಭವಿಷ್ಯಕ್ಕಾಗಿ ಪಾಲುದಾರಿಕೆಯ ಉತ್ತೇಜನ
Posted On:
16 DEC 2024 3:26PM by PIB Bengaluru
ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ಭಾರತಕ್ಕೆ ಅಧಿಕೃತ ಭೇಟಿಯ ಕೈಗೊಂಡಿರುವ ಶ್ರೀಲಂಕಾದ ಅಧ್ಯಕ್ಷರಾದ ಗೌರವಾನ್ವಿತ ಅನುರಾ ಕುಮಾರ ದಿಸ್ಸನಾಯಕೆ ಅವರು 2024ರ ಡಿಸೆಂಬರ್ 16 ರಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಮಗ್ರ ಮತ್ತು ಫಲಪ್ರದ ಚರ್ಚೆ ನಡೆಸಿದರು.
2. ಭಾರತ-ಶ್ರೀಲಂಕಾ ದ್ವಿಪಕ್ಷೀಯ ಪಾಲುದಾರಿಕೆಯು ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳು, ಭೌಗೋಳಿಕ ಸಾಮೀಪ್ಯ ಹಾಗೂ ಜನರ ನಡುವಿನ ಆಳ ಸಂಬಂಧದ ಮೇಲೆ ಆಧರಿತವಾಗಿದೆ ಎಂದು ಉಭಯ ನಾಯಕರು ಪುನರುಚ್ಚರಿಸಿದರು.
3. 2022ರಲ್ಲಿ ಭಾರಿ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಆ ನಂತರದ ದಿನಗಳಲ್ಲಿ ಶ್ರೀಲಂಕಾದ ಜನತೆಗೆ ಭಾರತ ನೀಡಿದ ಅಚಲ ಬೆಂಬಲಕ್ಕೆ ಅಧ್ಯಕ್ಷ ದಿಸ್ಸನಾಯಕೆ ತಮ್ಮ ಆಳವಾದ ಕೃತಕ್ಞತೆ ವ್ಯಕ್ತಪಡಿಸಿದರು. ಸಮೃದ್ಧ ಭವಿಷ್ಯ, ಹೆಚ್ಚಿನ ಅವಕಾಶಗಳು ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗಾಗಿ ಶ್ರೀಲಂಕಾದ ಜನರ ಆಕಾಂಕ್ಷೆಗಳನ್ನು ಪೂರೈಸುವ ತಮ್ಮ ಆಳವಾದ ಬದ್ಧತೆಯನ್ನು ಸ್ಮರಿಸಿದ ಅವರು, ಈ ಉದ್ದೇಶಗಳ ಸಾಧನೆಗೆ ಭಾರತದ ನಿರಂತರ ಬೆಂಬಲವನ್ನು ಎದುರು ನೋಡುತ್ತಿದ್ದೇವೆ ಎಂದರು. ಭಾರತದ 'ನೆರೆಹೊರೆಯವರಿಗೆ ಮೊದಲು' ನೀತಿ ಮತ್ತು 'ಸಾಗರ್' ದೃಷ್ಟಿಕೋನದಲ್ಲಿ ಶ್ರೀಲಂಕಾ ವಿಶೇಷ ಸ್ಥಾನವನ್ನು ಹೊಂದಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಈ ನಿಟ್ಟಿನಲ್ಲಿ ಭಾರತದ ಸಂಪೂರ್ಣ ಬದ್ಧತೆಯ ಆಶ್ವಾಸನೆಯನ್ನು ಅಧ್ಯಕ್ಷ ದಿಸ್ಸನಾಯಕ ಅವರಿಗೆ ನೀಡಿದರು.
4. ಹಲವು ವರ್ಷಗಳಿಂದ ದ್ವಿಪಕ್ಷೀಯ ಸಂಬಂಧಗಳು ಗಾಢವಾಗಿವೆ ಮತ್ತು ಶ್ರೀಲಂಕಾದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿವೆ ಎಂಬ ಬಗ್ಗೆ ಉಭಯ ನಾಯಕರು ಸಹಮತಿಸಿದರು. ಉಭಯ ನಾಯಕರು ಮತ್ತಷ್ಟು ಹೆಚ್ಚಿನ ಸಹಕಾರದ ಸಾಮರ್ಥ್ಯವನ್ನು ಒತ್ತಿಹೇಳುತ್ತಾ, ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧವನ್ನು ಎರಡೂ ದೇಶಗಳ ಜನರ ಯೋಗಕ್ಷೇಮಕ್ಕಾಗಿ ಪರಸ್ಪರ ಪ್ರಯೋಜನಕಾರಿಯಾಗಿ ಹಾಗೂ ಸಮಗ್ರ ಪಾಲುದಾರಿಕೆಯೊಂದಿಗೆ ಮುನ್ನಡೆಸುವ ಬದ್ಧತೆಯನ್ನು ಪುನರುಚ್ಚರಿಸಿದರು.
ರಾಜಕೀಯ ವಿನಿಮಯಗಳು
5. ಕಳೆದ ದಶಕದಲ್ಲಿ ಹೆಚ್ಚಿದ ರಾಜಕೀಯ ಸಂವಾದಗಳು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸುವಲ್ಲಿ ಅವುಗಳ ಕೊಡುಗೆಯನ್ನು ಸಹಮತಿಸಿದ ಇಬ್ಬರೂ ನಾಯಕರು, ನಾಯಕತ್ವ ಮತ್ತು ಸಚಿವರ ಮಟ್ಟದಲ್ಲಿ ರಾಜಕೀಯ ಕಾರ್ಯಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸಲು ಒಪ್ಪಿಕೊಂಡರು.
6. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉತ್ತೇಜಿಸಲು ಮತ್ತು ತಮ್ಮ ಸಾಂಸ್ಥಿಕ ಉತ್ತಮ ಕಾರ್ಯವಿಧಾನಗಳ ಬಗ್ಗೆ ಪರಿಣತಿಯನ್ನು ಹಂಚಿಕೊಳ್ಳಲು ನಿಯಮಿತ ಸಂಸದೀಯ ಮಟ್ಟದ ವಿನಿಮಯದ ಮಹತ್ವವನ್ನು ಉಭಯ ನಾಯಕರು ಒತ್ತಿ ಹೇಳಿದರು.
ಅಭಿವೃದ್ಧಿ ಸಹಕಾರ
7. ಶ್ರೀಲಂಕಾಕ್ಕೆ ಭಾರತದ ಅಭಿವೃದ್ಧಿ ನೆರವಿನ ಧನಾತ್ಮಕ ಮತ್ತು ಪರಿಣಾಮಕಾರಿ ಪಾತ್ರವನ್ನು ಉಭಯ ನಾಯಕರು ಒಪ್ಪಿಕೊಂಡರು, ಇದು ಎರಡೂ ದೇಶಗಳ ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡಿದೆ. ಸಾಲ ಪುನರ್‌ರಚನೆಯ ಹೊರತಾಗಿಯೂ ಯೋಜನೆಗಳ ಅನುಷ್ಠಾನಕ್ಕೆ ಭಾರತದ ನಿರಂತರ ಬೆಂಬಲವನ್ನು ಅಧ್ಯಕ್ಷ ದಿಸ್ಸನಾಯಕ ಶ್ಲಾಘಿಸಿದರು. ಮೂಲತಃ ʻಲೈನ್ಸ್ ಆಫ್ ಕ್ರೆಡಿಟ್ʼ ಮೂಲಕ ಕೈಗೊಳ್ಳಲಾದ ಯೋಜನೆಗಳಿಗೆ ಅನುದಾನದ ನೆರವು ವಿಸ್ತರಿಸುವ ಭಾರತದ ನಿರ್ಧಾರವನ್ನು ಅವರು ಶ್ಲಾಘಿಸಿದರು, ಆ ಮೂಲಕ ಶ್ರೀಲಂಕಾದ ಸಾಲದ ಹೊರೆಯನ್ನು ಕಡಿಮೆ ಮಾಡುವಲ್ಲಿ ಭಾರತದ ನೆರವನ್ನು ಸ್ಮರಿಸಿದರು.
8. ಜನಾಧಾರಿತ ಅಭಿವೃದ್ಧಿ ಪಾಲುದಾರಿಕೆಯನ್ನು ಮತ್ತಷ್ಟು ತೀವ್ರಗೊಳಿಸುವಲ್ಲಿ ನಿಕಟವಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದ ಉಭಯ ನಾಯಕರು ಈ ಕೆಳಗಿನವುಗಳಿಗೆ ಸಮ್ಮತಿಸಿದರು:
i. ಭಾರತೀಯ ವಸತಿ ಯೋಜನೆಯ ಹಂತ-3 ಮತ್ತು-4; 3 (ಮೂರು) ದ್ವೀಪಗಳ ನವೀಕರಿಸಬಹುದಾದ ಹೈಬ್ರಿಡ್ ಇಂಧನ ಯೋಜನೆ ಮತ್ತು ಶ್ರೀಲಂಕಾದಾದ್ಯಂತ ಹೆಚ್ಚಿನ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳಂತಹ ಕಾರ್ಯಕ್ರಮಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸಲು ಒಟ್ಟಾಗಿ ಕೆಲಸ ಮಾಡುವುದು;
ii. ಭಾರತೀಯ ಮೂಲದ ತಮಿಳು ಸಮುದಾಯ, ಪೂರ್ವ ಪ್ರಾಂತ್ಯ ಮತ್ತು ಶ್ರೀಲಂಕಾದ ಧಾರ್ಮಿಕ ಸ್ಥಳಗಳ ಸೌರ ವಿದ್ಯುದ್ದೀಕರಣದ ಯೋಜನೆಗಳ ಸಕಾಲಿಕ ಅನುಷ್ಠಾನಕ್ಕೆ ಸಂಪೂರ್ಣ ಬೆಂಬಲವನ್ನು ವಿಸ್ತರಿಸುವುದು;
iii. ಶ್ರೀಲಂಕಾ ಸರ್ಕಾರದ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಪಾಲುದಾರಿಕೆಗಾಗಿ ಹೊಸ ಯೋಜನೆಗಳು ಮತ್ತು ಸಹಕಾರದ ಕ್ಷೇತ್ರಗಳನ್ನು ಗುರುತಿಸುವುದು.
ತರಬೇತಿ ಮತ್ತು ಸಾಮರ್ಥ್ಯ ವರ್ಧನೆ
9. ಶ್ರೀಲಂಕಾಕ್ಕೆ ಸಾಮರ್ಥ್ಯ ವರ್ಧನೆ ಬೆಂಬಲವನ್ನು ವಿಸ್ತರಿಸುವಲ್ಲಿ ಭಾರತದ ಪಾತ್ರವನ್ನು ಒತ್ತಿಹೇಳಲು ಮತ್ತು ಶ್ರೀಲಂಕಾದ ವಿವಿಧ ಕ್ಷೇತ್ರಗಳಲ್ಲಿ ವೈಯಕ್ತೀಕರಿಸಿದ ತರಬೇತಿ ಮತ್ತು ಸಾಮರ್ಥ್ಯ ವರ್ಧನೆಯ ಅಗತ್ಯವನ್ನು ಒತ್ತಿಹೇಳುತ್ತಾ, ಉಭಯ ನಾಯಕರು:
i. ʻಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಕೇಂದ್ರʼದ ಮೂಲಕ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿನ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಾದ್ಯಂತ ಶ್ರೀಲಂಕಾದ 1500 ನಾಗರಿಕ ಸೇವಕರಿಗೆ ಕೇಂದ್ರೀಕೃತ ತರಬೇತಿಯನ್ನು ಆಯೋಜಿಸಲು ಒಪ್ಪಿಕೊಂಡರು; ಮತ್ತು
ii. ಶ್ರೀಲಂಕಾದ ಅಗತ್ಯಗಳಿಗೆ ಅನುಗುಣವಾಗಿ ಶ್ರೀಲಂಕಾದ ಅಧಿಕಾರಿಗಳಿಗೆ ನಾಗರಿಕ, ರಕ್ಷಣೆ ಮತ್ತು ಕಾನೂನು ಕ್ಷೇತ್ರಗಳಲ್ಲಿ ಹೆಚ್ಚಿನ ತರಬೇತಿ ಕಾರ್ಯಕ್ರಮಗಳನ್ನು ಅನ್ವೇಷಿಸಲು ಬದ್ಧತೆ ವ್ಯಕ್ತಪಡಿಸಿದರು.
ಸಾಲ ಪುನರ್‌ಚನೆ
10. ತುರ್ತು ಹಣಕಾಸು ಮತ್ತು 4 ಶತಕೋಟಿ ಡಾಲರ್ ಮೌಲ್ಯದ ವಿದೇಶಿ ವಿನಿಮಯ ಬೆಂಬಲ ಸೇರಿದಂತೆ ಸಾಟಿಯಿಲ್ಲದ ಮತ್ತು ಬಹುಮುಖಿ ಸಹಾಯದ ಮೂಲಕ ಶ್ರೀಲಂಕಾದ ಆರ್ಥಿಕತೆಯನ್ನು ಸ್ಥಿರಗೊಳಿಸುವಲ್ಲಿ ಭಾರತದ ಬೆಂಬಲಕ್ಕಾಗಿ ಅಧ್ಯಕ್ಷ ದಿಸ್ಸನಾಯಕ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಅಧಿಕೃತ ಸಾಲಗಾರರ ಸಮಿತಿಯ (ಒಸಿಸಿ) ಸಹ-ಅಧ್ಯಕ್ಷತೆ ಸೇರಿದಂತೆ ಶ್ರೀಲಂಕಾದ ಸಾಲ ಪುನರತ್‌ರಚನೆ ಪ್ರಕ್ರಿಯೆಯಲ್ಲಿ ಭಾರತದ ನಿರ್ಣಾಯಕ ಸಹಾಯವನ್ನು ಅವರು ಒಪ್ಪಿಕೊಂಡರು, ಸಾಲ ಪುನರ್‌ರಚನೆ ಚರ್ಚೆಗಳನ್ನು ಸಮಯೋಚಿತವಾಗಿ ಅಂತಿಮಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ. ಅಸ್ತಿತ್ವದಲ್ಲಿರುವ ʻಲೈನ್ಸ್ ಆಫ್ ಕ್ರೆಡಿಟ್ʼ ಅಡಿಯಲ್ಲಿ ಪೂರ್ಣಗೊಂಡ ಯೋಜನೆಗಳಿಗೆ ಶ್ರೀಲಂಕಾದಿಂದ ಬಾಕಿ ಇರುವ ಪಾವತಿಗಳನ್ನು ಇತ್ಯರ್ಥಪಡಿಸಲು 20.66 ದಶಲಕ್ಷ ಡಾಲರ್ ಆರ್ಥಿಕ ಸಹಾಯವನ್ನು ವಿಸ್ತರಿಸಿದ್ದಕ್ಕಾಗಿ ಅವರು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಶ್ರೀಲಂಕಾದೊಂದಿಗಿನ ನಿಕಟ ಮತ್ತು ವಿಶೇಷ ಸಂಬಂಧಗಳನ್ನು ಒತ್ತಿಹೇಳುತ್ತಾ, ಅಗತ್ಯವಾದ ಸಮಯದಲ್ಲಿ ಮತ್ತು ಆರ್ಥಿಕ ಚೇತರಿಕೆ, ಸುಸ್ಥಿರತೆ ಮತ್ತು ದೇಶದ ಜನರ ಸಮೃದ್ಧಿಗೆ ಭಾರತದ ನಿರಂತರ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಸಾಲ ಪುನರ್‌ರಚನೆ ಕುರಿತ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದದ ಬಗ್ಗೆ ಚರ್ಚೆಗಳನ್ನು ಅಂತಿಮಗೊಳಿಸುವಂತೆ ನಾಯಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
11. ಸಾಲ ಚಾಲಿತ ಮಾದರಿಗಳಿಂದ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಆಧಾರಿತ ಪಾಲುದಾರಿಕೆಯತ್ತ ಕಾರ್ಯತಂತ್ರದ ಬದಲಾವಣೆಯು ಶ್ರೀಲಂಕಾದಲ್ಲಿ ಆರ್ಥಿಕ ಚೇತರಿಕೆ, ಅಭಿವೃದ್ಧಿ ಮತ್ತು ಸಮೃದ್ಧಿಗೆ ಹೆಚ್ಚು ಸುಸ್ಥಿರ ಮಾರ್ಗವನ್ನು ಖಚಿತಪಡಿಸುತ್ತದೆ ಎಂದು ಉಭಯ ನಾಯಕರು ಒಪ್ಪಿಕೊಂಡರು.
ಸಂಪರ್ಕ ನಿರ್ಮಾಣ
12. ನಾಯಕರು ಹೆಚ್ಚಿನ ಸಂಪರ್ಕದ ಮಹತ್ವವನ್ನು ಒತ್ತಿಹೇಳಿದರು ಮತ್ತು ಎರಡೂ ಆರ್ಥಿಕತೆಗಳ ನಡುವೆ ಪೂರಕತೆಯ ಉಪಸ್ಥಿತಿಯನ್ನು ಒಪ್ಪಿಕೊಂಡರು, ಇದನ್ನು ಎರಡೂ ದೇಶಗಳ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ:
i. ನಾಗಪಟ್ಟಿಣಂ ಮತ್ತು ಕಂಕೆಸಂತುರೈ ನಡುವಿನ ಪ್ರಯಾಣಿಕರ ದೋಣಿ ಸೇವೆಯನ್ನು ಪುನರಾರಂಭಿಸಿದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ರಾಮೇಶ್ವರಂ ಮತ್ತು ತಲೈಮನ್ನಾರ್ ನಡುವಿನ ಪ್ರಯಾಣಿಕರ ದೋಣಿ ಸೇವೆಯನ್ನು ಶೀಘ್ರವಾಗಿ ಪುನರಾರಂಭಿಸಲು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಹಮತ ವ್ಯಕ್ತಪಡಿಸಿದರು.
ii. ಶ್ರೀಲಂಕಾದ ಕಂಕೆಸಂತುರೈ ಬಂದರಿನ ಪುನರ್ವಸತಿಗಾಗಿ ಜಂಟಿಯಾಗಿ ಕೆಲಸ ಮಾಡುವ ಸಾಧ್ಯತೆಯನ್ನು ಅನ್ವೇಷಿಸಿ, ಇದನ್ನು ಭಾರತ ಸರ್ಕಾರದ ಅನುದಾನದ ನೆರವಿನೊಂದಿಗೆ ಕಾರ್ಯಗತಗೊಳಿಸಲಾಗುವುದು.
ಇಂಧನ ಅಭಿವೃದ್ಧಿ
13. ಇಂಧನ ಭದ್ರತೆಯನ್ನು ಖಾತರಿಪಡಿಸಿಕೊಳ್ಳಲು ಮತ್ತು ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಸಮಯೋಚಿತ ಇಂಧನ ಸಂಪನ್ಮೂಲಗಳ ಅಗತ್ಯವನ್ನು ಒತ್ತಿ ಹೇಳಿದ ಉಭಯ ನಾಯಕರು, ಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಮಹತ್ವವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಮತ್ತು ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಇಂಧನ ಸಹಕಾರ ಯೋಜನೆಗಳ ಸಮಯೋಚಿತ ಅನುಷ್ಠಾನಕ್ಕೆ ಅನುಕೂಲ ಮಾಡಿಕೊಡುವ ಮಹತ್ವವನ್ನು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ನಾಯಕರು ಈ ಕೆಳಗಿನವುಗಳಿಗೆ ಸಮ್ಮತಿಸಿದರು:
i. ಸಂಪುರದಲ್ಲಿ ಸೌರ ವಿದ್ಯುತ್ ಯೋಜನೆಯ ಅನುಷ್ಠಾನಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಶ್ರೀಲಂಕಾದ ಅಗತ್ಯಗಳಿಗೆ ಅನುಗುಣವಾಗಿ ಅದರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವುದು.
ii. ಚರ್ಚೆಯ ವಿವಿಧ ಹಂತಗಳಲ್ಲಿರುವ ಹಲವಾರು ಪ್ರಸ್ತಾಪಗಳ ಪರಿಗಣನೆಯನ್ನು ಮುಂದುವರಿಸುವುದು:
(ಎ) ಭಾರತದಿಂದ ಶ್ರೀಲಂಕಾಕ್ಕೆ ʻಎಲ್‌ಎನ್‌ಜಿʼ ಪೂರೈಕೆ.
(ಬಿ) ಭಾರತ ಮತ್ತು ಶ್ರೀಲಂಕಾ ನಡುವೆ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಗ್ರಿಡ್ ಅಂತರ್ ಸಂಪರ್ಕ ಸ್ಥಾಪನೆ.
(ಸಿ) ಕೈಗೆಟುಕುವ ಮತ್ತು ವಿಶ್ವಾಸಾರ್ಹ ಇಂಧನ ಪೂರೈಕೆಗಾಗಿ ಭಾರತದಿಂದ ಶ್ರೀಲಂಕಾಕ್ಕೆ ಬಹು ಉತ್ಪನ್ನ ಪೈಪ್ ಲೈನ್ ಅಳವಡಿಸಲು ಭಾರತ, ಶ್ರೀಲಂಕಾ ಮತ್ತು ಯುಎಇ ನಡುವೆ ಸಹಕಾರ.
(ಡಿ) ಪ್ರಾಣಿ ಮತ್ತು ಸಸ್ಯ ಸೇರಿದಂತೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಜೊತೆಗೆ ಪಾಕ್ ಜಲಸಂಧಿಯಲ್ಲಿ ಕಡಲಾಚೆಯ ಪವನ ಶಕ್ತಿ ಸಾಮರ್ಥ್ಯದ ಜಂಟಿ ಅಭಿವೃದ್ಧಿ.
14. ʻಟ್ರಿಂಕೋಮಲಿ ಟ್ಯಾಂಕ್ ಫಾರ್ಮ್ʼಗಳ ಅಭಿವೃದ್ಧಿಯಲ್ಲಿ ನಡೆಯುತ್ತಿರುವ ಸಹಕಾರವನ್ನು ಸಹಮತಿಸಿದ ಇಬ್ಬರೂ ನಾಯಕರು, ಟ್ರಿಂಕೋಮಲಿಯನ್ನು ಪ್ರಾದೇಶಿಕ ಇಂಧನ ಮತ್ತು ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಬೆಂಬಲಿಸಲು ನಿರ್ಧರಿಸಿದರು.
ಜನ ಕೇಂದ್ರಿತ ಡಿಜಿಟಲೀಕರಣ
15. ಆಡಳಿತವನ್ನು ಸುಧಾರಿಸಲು, ಸೇವಾ ವಿತರಣೆಯನ್ನು ಪರಿವರ್ತಿಸಲು, ಪಾರದರ್ಶಕತೆಯನ್ನು ತರಲು ಮತ್ತು ಸಾಮಾಜಿಕ ಕಲ್ಯಾಣಕ್ಕೆ ಕೊಡುಗೆ ನೀಡಲು ಸಹಾಯ ಮಾಡಿದ ಜನ ಕೇಂದ್ರಿತ ಡಿಜಿಟಲೀಕರಣದಲ್ಲಿ ಭಾರತದ ಯಶಸ್ವಿ ಅನುಭವವನ್ನು ಗುರುತಿಸಿದ ಅಧ್ಯಕ್ಷ ದಿಸ್ಸನಾಯಕೆ ಅವರು, ಭಾರತದ ನೆರವಿನೊಂದಿಗೆ ಶ್ರೀಲಂಕಾದಲ್ಲಿ ಇದೇ ರೀತಿಯ ವ್ಯವಸ್ಥೆಗಳನ್ನು ಸ್ಥಾಪಿಸುವ ತಮ್ಮ ಸರ್ಕಾರದ ಆಸಕ್ತಿಯನ್ನು ತಿಳಿಸಿದರು. ಈ ನಿಟ್ಟಿನಲ್ಲಿ ಶ್ರೀಲಂಕಾದ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಈ ಹಿನ್ನೆಲೆಯಲ್ಲಿ, ಇಬ್ಬರೂ ನಾಯಕರು ಈ ಕೆಳಗಿನವುಗಳಿಗೆ ಸಮ್ಮತಿಸಿದರು:
i. ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳ ವಿತರಣೆಯನ್ನು ಸುಧಾರಿಸುವ ಪ್ರಯತ್ನಗಳಲ್ಲಿ ದೇಶಕ್ಕೆ ಸಹಾಯ ಮಾಡಲು ಶ್ರೀಲಂಕಾ ವಿಶಿಷ್ಟ ಡಿಜಿಟಲ್ ಗುರುತು (ಎಸ್ಎಲ್‌ಯುಡಿಐ) ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸುವುದು;
ii. ಭಾರತದ ನೆರವಿನೊಂದಿಗೆ ಶ್ರೀಲಂಕಾದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವನ್ನು(ಡಿಪಿಐ) ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಮಾರ್ಗಗಳಲ್ಲಿ ಸಹಯೋಗ.
iii. ಶ್ರೀಲಂಕಾದಲ್ಲಿ ʻಡಿಜಿಲಾಕರ್ʼ ಅನುಷ್ಠಾನದ ಬಗ್ಗೆ ನಡೆಯುತ್ತಿರುವ ತಾಂತ್ರಿಕ ಚರ್ಚೆಗಳನ್ನು ಮುಂದುವರಿಸುವುದು ಸೇರಿದಂತೆ ಭಾರತದಲ್ಲಿ ಈಗಾಗಲೇ ಅನುಷ್ಠಾನಗೊಳಿಸಲಾದ ವ್ಯವಸ್ಥೆಗಳು ಮತ್ತು ಅನುಭವದ ಆಧಾರದ ಮೇಲೆ ಶ್ರೀಲಂಕಾದಲ್ಲಿ ʻಡಿಪಿಐ ಸ್ಟ್ಯಾಕ್ʼ ಅನುಷ್ಠಾನವನ್ನು ಅನ್ವೇಷಿಸಲು ಜಂಟಿ ಕಾರ್ಯ ಪಡೆಯನ್ನು ಸ್ಥಾಪಿಸುವುದು.
iv. ಎರಡೂ ದೇಶಗಳ ಪ್ರಯೋಜನಕ್ಕಾಗಿ ಯುಪಿಐ ಡಿಜಿಟಲ್ ಪಾವತಿಗಳ ಬಳಕೆಯನ್ನು ವಿಸ್ತರಿಸುವ ಮೂಲಕ ಮತ್ತು ಎರಡೂ ದೇಶಗಳ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ನಿಯಂತ್ರಕ ಮಾರ್ಗಸೂಚಿಗಳಿಗೆ ಅನುಗುಣವಾಗಿ ಡಿಜಿಟಲ್ ಹಣಕಾಸು ವಹಿವಾಟುಗಳನ್ನು ಉತ್ತೇಜಿಸುವುದು.
v. ಶ್ರೀಲಂಕಾದಲ್ಲಿ ಸಮಾನ ವ್ಯವಸ್ಥೆಗಳನ್ನು ಸ್ಥಾಪಿಸುವ ಪ್ರಯೋಜನಗಳನ್ನು ಅನ್ವೇಷಿಸುವ ಉದ್ದೇಶದಿಂದ ಭಾರತದ ʻಆಧಾರ್ʼ ವೇದಿಕೆ, ʻಜಿಇಎಂ ಪೋರ್ಟಲ್ʼ, ʻಪಿಎಂ ಗತಿಶಕ್ತಿʼ ಡಿಜಿಟಲ್ ವೇದಿಕೆ, ಡಿಜಿಟಲೀಕೃತ ಕಸ್ಟಮ್ಸ್ ಮತ್ತು ಇತರ ತೆರಿಗೆ ಕಾರ್ಯವಿಧಾನಗಳಿಂದ ಕಲಿಕೆಗಳನ್ನು ವಿಸ್ತರಿಸಲು ದ್ವಿಪಕ್ಷೀಯ ವಿನಿಮಯವನ್ನು ಮುಂದುವರಿಸುವುದು.
ಶಿಕ್ಷಣ ಮತ್ತು ತಂತ್ರಜ್ಞಾನ
16. ಶ್ರೀಲಂಕಾದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಬೆಂಬಲಿಸುವ ಹಾಗೂ ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸುವ ದೃಷ್ಟಿಯಿಂದ, ಉಭಯ ನಾಯಕರು ಇವುಗಳಿಗೆ ಸಹಮತಿಸಿದರು:
i. ಕೃಷಿ, ಜಲಚರ ಸಾಕಣೆ, ಡಿಜಿಟಲ್ ಆರ್ಥಿಕತೆ, ಆರೋಗ್ಯ ಮತ್ತು ಪರಸ್ಪರ ಆಸಕ್ತಿಯ ಇತರ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಯೋಗವನ್ನು ವಿಸ್ತರಿಸಲು ಪ್ರಯತ್ನಿಸುವುದು.
ii. ಎರಡೂ ದೇಶಗಳ ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರವನ್ನು ಅನ್ವೇಷಿಸುವುದು.
iii. ʻಸ್ಟಾರ್ಟ್ ಅಪ್ ಇಂಡಿಯಾʼ ಮತ್ತು ಶ್ರೀಲಂಕಾದ ಮಾಹಿತಿ ಸಂವಹನ ತಂತ್ರಜ್ಞಾನ ಸಂಸ್ಥೆ(ಐಸಿಟಿಎ) ನಡುವೆ ಸಹಕಾರವನ್ನು ಉತ್ತೇಜಿಸುವುದು, ಶ್ರೀಲಂಕಾದ ನವೋದ್ಯಮಗಳಿಗೆ ಮಾರ್ಗದರ್ಶನ ನೀಡುವುದು.
ವ್ಯಾಪಾರ ಮತ್ತು ಹೂಡಿಕೆ ಸಹಕಾರ
17. ಭಾರತ-ಶ್ರೀಲಂಕಾ ಮುಕ್ತ ವ್ಯಾಪಾರ ಒಪ್ಪಂದ(ಐಎಸ್ಎಫ್‌ಟಿಎ) ಉಭಯ ದೇಶಗಳ ನಡುವಿನ ವ್ಯಾಪಾರ ಪಾಲುದಾರಿಕೆಯನ್ನು ಹೆಚ್ಚಿಸಿದೆ ಎಂದು ಉಭಯ ನಾಯಕರು ಶ್ಲಾಘಿಸಿದರು, ಆದರೆ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಅಪಾರ ಸಾಮರ್ಥ್ಯವಿದೆ ಎಂದು ಒಪ್ಪಿಕೊಂಡರು. ಭಾರತದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಅವಕಾಶಗಳ ವೇಗ, ಬೆಳೆಯುತ್ತಿರುವ ಮಾರುಕಟ್ಟೆ ಗಾತ್ರ ಹಾಗೂ ಶ್ರೀಲಂಕಾಕ್ಕೆ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಒತ್ತಿಹೇಳಿದರು. ಈ ಕೆಳಗಿನವುಗಳಿಗೆ ಬದ್ಧರಾಗುವ ಮೂಲಕ ವ್ಯಾಪಾರ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಇದು ಈಗ ಸೂಕ್ತವಾಗಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು:
i. ಆರ್ಥಿಕ ಮತ್ತು ತಾಂತ್ರಿಕ ಸಹಕಾರ ಒಪ್ಪಂದದ ಬಗ್ಗೆ ಚರ್ಚೆಗಳನ್ನು ಮುಂದುವರಿಸುವುದು.
ii. ಎರಡೂ ದೇಶಗಳ ನಡುವೆ ʻಐಎನ್‌ಆರ್-ಎಲ್‌ಕೆಆರ್ʼ ವ್ಯಾಪಾರ ವಸಾಹತುಗಳನ್ನು ಹೆಚ್ಚಿಸುವುದು.
iii. ಶ್ರೀಲಂಕಾದ ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು.
18. ಉದ್ದೇಶಿತ ದ್ವಿಪಕ್ಷೀಯ ಸಾಮಾಜಿಕ ಭದ್ರತಾ ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸಲು ಚರ್ಚೆಗಳನ್ನು ಮುಂದುವರಿಸುವ ಅಗತ್ಯವನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.
ಕೃಷಿ ಮತ್ತು ಪಶುಸಂಗೋಪನೆ
19. ಸ್ವಾವಲಂಬನೆ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಉತ್ತೇಜಿಸುವ ಉದ್ದೇಶದಿಂದ ಶ್ರೀಲಂಕಾದಲ್ಲಿ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ನಡೆಯುತ್ತಿರುವ ಸಹಯೋಗವನ್ನು ಇಬ್ಬರೂ ನಾಯಕರು ಶ್ಲಾಘಿಸಿದರು.
20. ಅಧ್ಯಕ್ಷ ದಿಸ್ಸನಾಯಕ ಅವರು ಕೃಷಿ ಆಧುನೀಕರಣಕ್ಕೆ ಒತ್ತು ನೀಡಿರುವುದನ್ನು ಗಮನಿಸಿದ ಉಭಯ ನಾಯಕರು, ಶ್ರೀಲಂಕಾದಲ್ಲಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸಾಧ್ಯತೆಗಳನ್ನು ಪರಿಶೀಲಿಸಲು ಜಂಟಿ ಕಾರ್ಯಪಡೆ ಸ್ಥಾಪಿಸಲು ಸಮ್ಮತಿಸಿದರು.
ವ್ಯೂಹಾತ್ಮಕ ಮತ್ತು ರಕ್ಷಣಾ ಸಹಕಾರ
21. ಭಾರತ ಮತ್ತು ಶ್ರೀಲಂಕಾದ ಹಂಚಿಕೆಯ ಭದ್ರತಾ ಹಿತಾಸಕ್ತಿಗಳನ್ನು ಗುರುತಿಸಿದ ಇಬ್ಬರೂ ನಾಯಕರು, ಪರಸ್ಪರ ನಂಬಿಕೆ ಮತ್ತು ಪಾರದರ್ಶಕತೆಯ ಆಧಾರದ ಮೇಲೆ ನಿಯಮಿತ ಮಾತುಕತೆಯ ಮಹತ್ವವನ್ನು ಒಪ್ಪಿಕೊಂಡರು. ಇದೇ ವೇಳೆ, ಪರಸ್ಪರರ ಭದ್ರತಾ ಕಾಳಜಿಗಳಿಗೆ ಆದ್ಯತೆ ವ್ಯಕ್ತಪಡಿಸಿದರು. ಸ್ವಾಭಾವಿಕ ಪಾಲುದಾರರಾಗಿ, ಉಭಯ ನಾಯಕರು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಉಭಯ ದೇಶಗಳು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳನ್ನು ಒತ್ತಿಹೇಳಿದರು. ಈ ಭಾಗದಲ್ಲಿ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಅಪಾಯಗಳನ್ನು ಎದುರಿಸಲು, ಮುಕ್ತ ಹಾಗೂ ಸುರಕ್ಷಿತ ಹಿಂದೂ ಮಹಾಸಾಗರ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತವು ಶ್ರೀಲಂಕಾದ ನಿಕಟ ಕಡಲ ನೆರೆಯ ರಾಷ್ಟ್ರವಾಗಿರುವುದರಿಂದ, ಭಾರತದ ಭದ್ರತೆಗೆ ಮತ್ತು ಪ್ರಾದೇಶಿಕ ಸ್ಥಿರತೆಗೆ ವಿರುದ್ಧವಾದ ಯಾವುದೇ ರೀತಿಯಲ್ಲಿ ತನ್ನ ಭೂಪ್ರದೇಶವನ್ನು ಬಳಸಲು ಅನುಮತಿಸುವುದಿಲ್ಲ ಎಂಬ ಶ್ರೀಲಂಕಾದ ಘೋಷಿತ ನಿಲುವನ್ನು ಅಧ್ಯಕ್ಷ ದಿಸ್ಸನಾಯಕೆ ಪುನರುಚ್ಚರಿಸಿದರು.
22. ತರಬೇತಿ, ವಿನಿಮಯ ಕಾರ್ಯಕ್ರಮಗಳು, ಹಡಗು ಭೇಟಿಗಳು, ದ್ವಿಪಕ್ಷೀಯ ಸಮರಾಭ್ಯಾಸಗಳು ಮತ್ತು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹಾಲಿ ನಡೆಯುತ್ತಿರುವ ರಕ್ಷಣಾ ಸಹಕಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಉಭಯ ನಾಯಕರು, ಕಡಲ ಮತ್ತು ಭದ್ರತಾ ಸಹಯೋಗವನ್ನು ಮುಂದುವರಿಸಲು ಒಪ್ಪಿಕೊಂಡರು.
23. ಕಡಲ ಕಣ್ಗಾವಲುಗಾಗಿ ʻಡಾರ್ನಿಯರ್ʼ ವಿಮಾನದ ಒದಗಣೆ; ಕಡಲ ಪಾರುಗಾಣಿಕಾ ಮತ್ತು ಸಮನ್ವಯ ಕೇಂದ್ರದ ಸ್ಥಾಪನೆ ಹಾಗೂ ಇತರ ನೆರವುಗಳ ಮೂಲಕ ಶ್ರೀಲಂಕಾದ ಕಡಲ ಕ್ಷೇತ್ರದ ಜಾಗೃತಿಯನ್ನು ಹೆಚ್ಚಿಸಲು ಬೆಂಬಲ ನೀಡಿದ್ದಕ್ಕಾಗಿ ಅಧ್ಯಕ್ಷ ದಿಸ್ಸನಾಯಕೆ ಅವರು ಭಾರತಕ್ಕೆ ಧನ್ಯವಾದ ಅರ್ಪಿಸಿದರು;
ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕ್ಷೇತ್ರದಲ್ಲಿ ಶ್ರೀಲಂಕಾಕ್ಕೆ 'ಮೊದಲ ಪ್ರತಿಕ್ರಿಯೆ' ನೀಡುವ ಭಾರತದ ಪಾತ್ರವನ್ನು ಅವರು ಶ್ಲಾಘಿಸಿದರು. ಮುಖ್ಯವಾಗಿ, ದೊಡ್ಡ ಪ್ರಮಾಣದ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಹಡಗುಗಳನ್ನು ಶಂಕಿತರೊಂದಿಗೆ ವಶಪಡಿಸಿಕೊಳ್ಳುವಲ್ಲಿ ಭಾರತ ಮತ್ತು ಶ್ರೀಲಂಕಾ ನೌಕಾಪಡೆಗಳ ಸಹಯೋಗದ ಪ್ರಯತ್ನಗಳಲ್ಲಿ ಇತ್ತೀಚಿನ ಯಶಸ್ಸನ್ನು ಉಲ್ಲೇಖಿಸಲಾಯಿತು. ಈ ನಿಟ್ಟಿನಲ್ಲಿ ಅಧ್ಯಕ್ಷ ದಿಸ್ಸನಾಯಕೆ ಅವರು ಭಾರತೀಯ ನೌಕಾಪಡೆಗೆ ಕೃತಜ್ಞತೆ ಸಲ್ಲಿಸಿದರು.
24. ಶ್ರೀಲಂಕಾದ ವಿಶ್ವಾಸಾರ್ಹ ಮತ್ತು ನಂಬಿಕಾರ್ಹ ಪಾಲುದಾರನಾಗಿ, ಭಾರತವು ಆ ದೇಶದ ರಕ್ಷಣಾ ಮತ್ತು ಕಡಲ ಭದ್ರತಾ ಅಗತ್ಯಗಳನ್ನು ಮುನ್ನಡೆಸುವಲ್ಲಿ ನಿಕಟವಾಗಿ ಕೆಲಸ ಮಾಡುವ ನಿರಂತರ ಬದ್ಧತೆಯನ್ನು ವ್ಯಕ್ತಪಡಿಸಿತು. ಜೊತೆಗೆ ಅದರ ಕಡಲ ಸವಾಲುಗಳನ್ನು ಎದುರಿಸಲು ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸಲು ಅಗತ್ಯ ಸಹಾಯವನ್ನು ವಿಸ್ತರಿಸುವ ಭರವಸೆ ನೀಡಿತು.
25. ಭಯೋತ್ಪಾದನೆ, ಮಾದಕವಸ್ತು/ ಮಾದಕದ್ರವ್ಯ ಕಳ್ಳಸಾಗಣೆ, ಅಕ್ರಮ ಹಣ ವರ್ಗಾವಣೆಯಂತಹ ವಿವಿಧ ಭದ್ರತಾ ಅಪಾಯಗಳನ್ನು ಉಲ್ಲೇಖಿಸಿದ ಉಭಯ ನಾಯಕರು ತರಬೇತಿ, ಸಾಮರ್ಥ್ಯ ವರ್ಧನೆ ಮತ್ತು ಗುಪ್ತಚರ ಹಾಗೂ ಮಾಹಿತಿ ಹಂಚಿಕೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು ಸಹಮತಿಸಿದರು. ಈ ಹಿನ್ನೆಲೆಯಲ್ಲಿ, ಅವರು ಈ ಕೆಳಗಿನವುಗಳಿಗೆ ಸಮ್ಮತಿಸಿದರು:
i. ರಕ್ಷಣಾ ಸಹಕಾರಕ್ಕಾಗಿ ನೀತಿ ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆಯನ್ನು ಅನ್ವೇಷಿಸುವುದು;
ii. ಜಲವಿಜ್ಞಾನದಲ್ಲಿ ಸಹಕಾರವನ್ನು ಉತ್ತೇಜಿಸುವುದು;
iii. ಶ್ರೀಲಂಕಾದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ರಕ್ಷಣಾ ವೇದಿಕೆಗಳು ಮತ್ತು ಸ್ವತ್ತುಗಳನ್ನು ಒದಗಿಸುವುದು;
iv. ಜಂಟಿ ಸಮರಾಭ್ಯಾಸಗಳು, ಕಡಲ ಕಣ್ಗಾವಲು, ರಕ್ಷಣಾ ಚರ್ಚೆಗಳು ಹಾಗೂ ವಿನಿಮಯಗಳ ಮೂಲಕ ಸಹಯೋಗವನ್ನು ತೀವ್ರಗೊಳಿಸುವುದು;
v. ತರಬೇತಿ, ಜಂಟಿ ಸಮರಾಭ್ಯಾಸ ಮತ್ತು ಉತ್ತಮ ಅಭ್ಯಾಸಗಳ ಪರಸ್ಪರ ಹಂಚಿಕೆ ಸೇರಿದಂತೆ ವಿಪತ್ತು ತಗ್ಗಿಸುವಿಕೆ, ಪರಿಹಾರ ಮತ್ತು ಪುನರ್ವಸತಿಯಲ್ಲಿ ಶ್ರೀಲಂಕಾದ ಸಾಮರ್ಥ್ಯಗಳನ್ನು ಬಲಪಡಿಸಲು ನೆರವು ವಿಸ್ತರಿಸುವುದು; ಮತ್ತು
vi. ಶ್ರೀಲಂಕಾದ ರಕ್ಷಣಾ ಪಡೆಗಳಿಗೆ ಸಾಮರ್ಥ್ಯ ವರ್ಧನೆ ಮತ್ತು ತರಬೇತಿಯನ್ನು ಹೆಚ್ಚಿಸುವುದು ಜೊತೆಗೆ ಅಗತ್ಯವಿರುವಲ್ಲಿ ಸೂಕ್ತವಾದ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು.
ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ
26. ತಮ್ಮ ಸಾಂಸ್ಕೃತಿಕ ಸಂಬಂಧ, ಭೌಗೋಳಿಕ ಸಾಮೀಪ್ಯ ಮತ್ತು ನಾಗರಿಕ ಸಂಬಂಧಗಳನ್ನು ಒತ್ತಿಹೇಳುತ್ತಾ, ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಂಪರ್ಕಗಳನ್ನು ಮತ್ತಷ್ಟು ಉತ್ತೇಜಿಸುವ ಅಗತ್ಯವನ್ನು ಉಭಯ ನಾಯಕರು ಒಪ್ಪಿಕೊಂಡರು. ಭಾರತವು ಶ್ರೀಲಂಕಾಕ್ಕೆ ಪ್ರವಾಸೋದ್ಯಮದ ಅತಿದೊಡ್ಡ ಮೂಲವಾಗಿರುವುದರಿಂದ, ಉಭಯ ನಾಯಕರು ಈ ಕೆಳಗಿನವುಗಳಿಗೆ ಬದ್ಧತೆ ವ್ಯಕ್ತಪಡಿಸಿದರು:
i. ಚೆನ್ನೈ ಮತ್ತು ಜಾಫ್ನಾ ನಡುವೆ ವಿಮಾನಯಾನವನ್ನು ಯಶಸ್ವಿಯಾಗಿ ಪುನರಾರಂಭಿಸಿರುವುದನ್ನು ಉಲ್ಲೇಖಿಸಿದ ಅವರು, ಭಾರತ ಮತ್ತು ಶ್ರೀಲಂಕಾದ ವಿವಿಧ ಸ್ಥಳಗಳಿಗೆ ವಾಯು ಸಂಪರ್ಕವನ್ನು ಹೆಚ್ಚಿಸುವ ಬಯಕೆ ವ್ಯಕ್ತಪಡಿಸಿದರು.
ii. ಶ್ರೀಲಂಕಾದಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಯ ಬಗ್ಗೆ ನಿರಂತರ ಚರ್ಚೆ.
iii. ಶ್ರೀಲಂಕಾದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಭಾರತೀಯ ಹೂಡಿಕೆಗಳನ್ನು ಉತ್ತೇಜಿಸುವುದು.
iv. ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಅನುಕೂಲಕರ ನೀತಿ-ಚೌಕಟ್ಟು ಸ್ಥಾಪಿಸುವುದು.
v. ಎರಡೂ ದೇಶಗಳ ನಡುವೆ ಸಾಂಸ್ಕೃತಿಕ ಮತ್ತು ಭಾಷಾ ಸಂಬಂಧಗಳ ಉತ್ತೇಜನ ಮತ್ತು ಪ್ರಗತಿಗಾಗಿ ಶಿಕ್ಷಣ ಸಂಸ್ಥೆಗಳ ನಡುವೆ ಶೈಕ್ಷಣಿಕ ಸಂಪರ್ಕವನ್ನು ಉತ್ತೇಜಿಸುವುದು.
ಮೀನುಗಾರಿಕೆ ಸಮಸ್ಯೆಗಳು
27. ಉಭಯ ದೇಶಗಳ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಜೀವನೋಪಾಯದ ಕಳವಳವನ್ನು ಪರಿಗಣಿಸಿ, ಇವುಗಳನ್ನು ಮಾನವೀಯ ರೀತಿಯಲ್ಲಿ ಪರಿಹರಿಸುವುದನ್ನು ಮುಂದುವರಿಸುವ ಅಗತ್ಯವನ್ನು ನಾಯಕರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ಯಾವುದೇ ಆಕ್ರಮಣಕಾರಿ ನಡವಳಿಕೆ ಅಥವಾ ಹಿಂಸಾಚಾರವನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಅವರು ಒತ್ತಿಹೇಳಿದರು. ಕೊಲಂಬೋದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮೀನುಗಾರಿಕೆ ಕುರಿತ 6ನೇ ಜಂಟಿ ಕಾರ್ಯ ಪಡೆಯ ಸಭೆಯನ್ನು ಅವರು ಸ್ವಾಗತಿಸಿದರು. ಮಾತುಕತೆ ಮತ್ತು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ದೀರ್ಘಕಾಲೀನ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಸಾಧಿಸಬಹುದು ಎಂಬ ವಿಶ್ವಾಸವನ್ನು ನಾಯಕರು ವ್ಯಕ್ತಪಡಿಸಿದರು. ಭಾರತ ಮತ್ತು ಶ್ರೀಲಂಕಾ ನಡುವಿನ ವಿಶೇಷ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು, ಈ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ತೊಡಗಿಸಿಕೊಳ್ಳುವಿಕೆಯನ್ನು ಮುಂದುವರಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
28. ʻಪಾಯಿಂಟ್ ಪೆಡ್ರೊʼ ಮೀನುಗಾರಿಕಾ ಬಂದರಿನ ಅಭಿವೃದ್ಧಿ, ಕಾರೈನಗರ ಬೋಟ್ ಯಾರ್ಡ್‌ನ ಪುನರ್ವಸತಿ ಹಾಗೂ ಭಾರತದ ನೆರವಿನ ಮೂಲಕ ಜಲಚರ ಸಾಕಣೆಯಲ್ಲಿ ಸಹಕಾರ ಸೇರಿದಂತೆ ಶ್ರೀಲಂಕಾದಲ್ಲಿ ಮೀನುಗಾರಿಕೆಯ ಸುಸ್ಥಿರ ಮತ್ತು ವಾಣಿಜ್ಯ ಅಭಿವೃದ್ಧಿಗೆ ಕೈಗೊಂಡ ಉಪಕ್ರಮಗಳಿಗಾಗಿ ಅಧ್ಯಕ್ಷ ದಿಸ್ಸನಾಯಕೆ ಅವರು ಭಾರತಕ್ಕೆ ಧನ್ಯವಾದ ಅರ್ಪಿಸಿದರು.
ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರ
29. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪರಸ್ಪರ ಸಮಾನ ಕಡಲ ಭದ್ರತಾ ಹಿತಾಸಕ್ತಿಗಳನ್ನು ಗುರುತಿಸಿ, ದ್ವಿಪಕ್ಷೀಯವಾಗಿ ಮತ್ತು ಅಸ್ತಿತ್ವದಲ್ಲಿರುವ ಪ್ರಾದೇಶಿಕ ನೀತಿಗಳ ಮೂಲಕ ಪ್ರಾದೇಶಿಕ ಕಡಲ ಭದ್ರತೆಯನ್ನು ಬಲಪಡಿಸಲು ಜಂಟಿಯಾಗಿ ಕ್ರಮಗಳನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ಇತ್ತೀಚೆಗೆ ಕೊಲಂಬೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ʻಕೊಲಂಬೊ ಭದ್ರತಾ ಸಮಾವೇಶʼದ ಸಂಸ್ಥಾಪಕ ದಾಖಲೆಗಳಿಗೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು. ಸಮಾವೇಶದ ಉದ್ದೇಶಗಳನ್ನು ಮುನ್ನಡೆಸುವಲ್ಲಿ ಭಾರತವು ಶ್ರೀಲಂಕಾಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿತು.
30. ʻಐಒಆರ್‌ಎʼ ಅಧ್ಯಕ್ಷತೆಯನ್ನು ಶ್ರೀಲಂಕಾ ವಹಿಸಿರುವುದಕ್ಕೆ ಭಾರತ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿತು. ಈ ಪ್ರದೇಶದ ಎಲ್ಲರ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ʻಐಒಆರ್‌ಎʼ ಸದಸ್ಯ ರಾಷ್ಟ್ರಗಳು ಗಣನೀಯ ಕ್ರಿಯಾ ಯೋಜನೆ ಹೊಂದಿರುವ ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು.
31. ʻಬಿಮ್‌ಸ್ಟಿಕ್ʼ ಅಡಿಯಲ್ಲಿ ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮತ್ತು ಹೆಚ್ಚಿಸುವ ಬದ್ಧತೆಯನ್ನು ಉಭಯ ನಾಯಕರು ಒತ್ತಿ ಹೇಳಿದರು.
32. ʻಬ್ರಿಕ್ಸ್ʼ ಸದಸ್ಯ ರಾಷ್ಟ್ರವಾಗಲು ಶ್ರೀಲಂಕಾದ ಅರ್ಜಿಗೆ ಬೆಂಬಲ ನೀಡುವಂತೆ ಅಧ್ಯಕ್ಷ ದಿಸ್ಸನಾಯಕೆ ಅವರು ಪ್ರಧಾನಿ ಮೋದಿ ಅವರನ್ನು ಕೋರಿದರು.
33. 2028-2029ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತವಲ್ಲದ ಸದಸ್ಯನ ಸ್ಥಾನಕ್ಕಾಗಿ ಭಾರತದ ಉಮೇದುವಾರಿಕೆಗೆ ಶ್ರೀಲಂಕಾದ ಬೆಂಬಲವನ್ನು ಪ್ರಧಾನಿ ಮೋದಿ ಸ್ವಾಗತಿಸಿದರು.
ಉಪಸಂಹಾರ
34. ಪರಸ್ಪರ ಅಂಗೀಕರಿಸಿದ ಕ್ರಮಗಳ ಪರಿಣಾಮಕಾರಿ ಮತ್ತು ಸಮಯೋಚಿತ ಅನುಷ್ಠಾನವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸುತ್ತದೆ. ಜೊತೆಗೆ ಸ್ನೇಹ ಮತ್ತು ನೆರೆಹೊರೆಯ ಸಂಬಂಧಗಳ ವಿಚಾರದಲ್ಲಿ ಈ ನಂಟನ್ನು ಹೊಸ ಮಾನದಂಡವಾಗಿ ಪರಿವರ್ತಿಸುತ್ತದೆ ಎಂದು ನಾಯಕರು ಹೇಳಿದರು. ಅದರಂತೆ, ಒಪ್ಪಂದಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲು ನಾಯಕರು ತಮ್ಮ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು ಅಗತ್ಯವಿರುವಲ್ಲಿ ಮಾರ್ಗದರ್ಶನವನ್ನು ವಿಸ್ತರಿಸಲು ಸಹಮತಿಸಿದದರು. ಪರಸ್ಪರ ಲಾಭದಾಯಕವಾದ ದ್ವಿಪಕ್ಷೀಯ ಸಂಬಂಧಗಳನ್ನು ಗುಣಾತ್ಮಕವಾಗಿ ಹೆಚ್ಚಿಸಲು, ಶ್ರೀಲಂಕಾದ ಸುಸ್ಥಿರ ಅಭಿವೃದ್ಧಿ ಅಗತ್ಯಗಳನ್ನು ಪೂರೈಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದ ಸ್ಥಿರತೆಗೆ ಕೊಡುಗೆ ನೀಡಲು ನಾಯಕತ್ವದ ಮಟ್ಟದಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸಲು ಉಭಯ ನಾಯಕರು ನಿರ್ಧರಿಸಿದರು. ಅಧ್ಯಕ್ಷ ದಿಸ್ಸನಾಯಕೆ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ತಮ್ಮ ಅನುಕೂಲಕರ ಸಮಯದಲ್ಲಿ ಶ್ರೀಘ್ರದಲ್ಲೇ ಶ್ರೀಲಂಕಾಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.
*****
(Release ID: 2085041)
Visitor Counter : 24
Read this release in:
Tamil
,
English
,
Urdu
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam