ಪ್ರಧಾನ ಮಂತ್ರಿಯವರ ಕಛೇರಿ

ಜಿ20 ನವದೆಹಲಿ ನಾಯಕರ ಘೋಷಣೆಯ ಅನುಷ್ಠಾನದಲ್ಲಿ ಆಗಿರುವ ಪ್ರಗತಿಯನ್ನು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರು ಪರಿಶೀಲಿಸಿದರು.


ಹಂಚಿಕೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಗತ್ಯ ಪ್ರಮುಖ ವಿಷಯಗಳನ್ನು ಒಳಗೊಂಡ ಏಳು ವೆಬ್ನಾರ್ ಗಳನ್ನು ಆಯೋಜಿಸಲಾಗುವುದು.

ದೇಶದಾದ್ಯಂತದ ಚಿಂತಕರ ವೇದಿಕೆಗಳನ್ನು ಒಳಗೊಂಡ ಒಂದು ಸೆಮಿನಾರ್ ಯೋಜಿಸಲಾಗಿದೆ.

ಜಿ20 ವರ್ಚುವಲ್ ಶೃಂಗಸಭೆ ಮತ್ತು ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮ್ಮಿಟ್ 2.0 ಗಾಗಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಲಾಯಿತು

Posted On: 18 OCT 2023 7:27PM by PIB Bengaluru

ಜಿ20 ನವದೆಹಲಿ ನಾಯಕರ ಘೋಷಣೆಯ ಅನುಷ್ಠಾನದಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಲು ಇಂದು ನಡೆದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರು ವಹಿಸಿದ್ದರು. ಸಭೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷರು, ಜಿ20 ಶೆರ್ಪಾ, ಜಿ20 ಮುಖ್ಯ ಸಂಯೋಜಕರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ), ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಕಾರ್ಯಚಟುವಟಿಕೆಗಳ ಮುನ್ನಡೆಗಾಗಿ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ, ಆಯಾ ಸಚಿವಾಲಯಗಳು ನೇತೃತ್ವ ವಹಿಸುವ ಕುರಿತು ಮತ್ತು ಎಲ್ಲಾ ಸಂಬಂಧಿತ ಇಲಾಖೆಗಳನ್ನು ಒಳಗೊಂಡಂತೆ ಏಳು ವೆಬ್ನಾರ್ ಗಳ ಸರಣಿಯನ್ನು ಆಯೋಜಿಸಲು ಪ್ರಸ್ತಾಪಿಸಲಾಗಿದೆ. ವೆಬ್ನಾರ್ಗಳನ್ನು ಈ ರೀತಿ ವಿಭಾಗಿಸಲಾಗಿದೆ. ಅವುಗಳೆಂದರೆ, (i) ಬಲವಾದ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ, (ii) ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ವೇಗವರ್ಧನೆ (ಎಸ್.ಡಿ.ಜಿ.ಗಳು) (iii) ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ, (iv) 21 ನೇ ಶತಮಾನದ ಬಹುಪಕ್ಷೀಯ ಸಂಸ್ಥೆಗಳ ವಿಷಯಗಳ ಕುರಿತು ಪ್ರಸ್ತಾವನೆಗಳು, (v) ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, (vi) ಮಹಿಳಾ ನೇತೃತ್ವದ ಅಭಿವೃದ್ಧಿ, ಮತ್ತು (vii) ಭಯೋತ್ಪಾದನೆ ಎದುರಿಸುವುದು ಮತ್ತು ಹಣ ವರ್ಗಾವಣೆಯನ್ನು ಸುಲಭಗೊಳಿಸುವುದು


ಜಿ20 ನವದೆಹಲಿ ನಾಯಕರ ಘೋಷಣೆಯ ಪರಿಣಾಮಕಾರಿ ಅನುಷ್ಠಾನದ ಕುರಿತು, ಹೆಚ್ಚುವರಿಯಾಗಿ,  ಪ್ರದೇಶದ ತಜ್ಞರಿಂದ ಮಾಹಿತಿ, ಸಲಹೆ, ಒಳನೋಟಗಳನ್ನು ಸಂಗ್ರಹಿಸಲು ದೇಶಾದ್ಯಂತ ವಿವಿಧ ಚಿಂತಕರ-ವೇದಿಕೆ (ಚಾವಡಿ/ಟ್ಯಾಂಕ್) ಗಳನ್ನು ತೊಡಗಿಸಿಕೊಳ್ಳಲು ಸೆಮಿನಾರ್ ಅನ್ನು ಯೋಜಿಸಲಾಗಿದೆ.


ಜಿ20 ನವದೆಹಲಿ ನಾಯಕರ ಘೋಷಣೆಯ ಅನುಷ್ಠಾನವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಉನ್ನತ ಮಟ್ಟದ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿಯವರು ಹೇಳಿದರು.

ಪ್ರಧಾನ ಕಾರ್ಯದರ್ಶಿಯವರು ಮುಂಬರುವ ಜಿ20 ವರ್ಚುವಲ್ ಶೃಂಗಸಭೆಯ ಬಗ್ಗೆಯೂ ಚರ್ಚಿಸಿದರು. ನವದೆಹಲಿ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಹೇಳಿರುವ ತಮ್ಮ ಹೇಳಿಕೆಗಳಲ್ಲಿ ವಿಷಯಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಮುಖ್ಯ ಶೃಂಗಸಭೆಯ ನಂತರ ಯಾವುದೇ ದೇಶವು ಇಂತಹ ವರ್ಚುವಲ್ ಶೃಂಗಸಭೆಯನ್ನು ಈ ತನಕ ಆಯೋಜಿಸಿಲ್ಲ, ಈ ರೀತಿ ಆಯೋಜಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಎಲ್ಲಾ ಸದಸ್ಯ-ರಾಜ್ಯಗಳು ಮತ್ತು ಅತಿಥಿ ರಾಷ್ಟ್ರಗಳಿಗೆ ತ್ವರಿತವಾಗಿ ಮಾಹಿತಿಯ ಪ್ರಸಾರದ ಹಾಗೂ ವಿತರಣೆಯ ಜೊತೆಗೆ ಜವಾಬ್ದಾರಿಗಳ ಹಂಚುವಿಕೆಯ ಅಗತ್ಯವನ್ನು ಪ್ರಧಾನ ಕಾರ್ಯದರ್ಶಿಯವರು ವಿವರಣೆ ಮೂಲಕ ತಿಳಿಸಿದರು.


ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಶ್ರೀ ವಿನಯ್ ಕ್ವಾತ್ರಾ ಅವರು ಪ್ರಧಾನ ಕಾರ್ಯದರ್ಶಿಯವರಿಗೆ ನವೆಂಬರ್ 2023 ರಲ್ಲಿ ನಡೆಯಲಿರುವ ಎರಡನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಸಿದ್ಧತೆಗಳ ಕುರಿತು ವಿವರಿಸಿದರು.


ಜಿ20 ನವದೆಹಲಿ ನಾಯಕರ ಘೋಷಣೆಯ  ಯಶಸ್ವಿ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳುವ ಭಾರತ ಸರ್ಕಾರದ ಬದ್ಧತೆಯನ್ನು ಹಾಗೂ ಅಭಿವೃದ್ಧಿ ಮತ್ತು ಕಲ್ಯಾಣದ ಕಾರ್ಯಚಟುವಟಿಕೆಗಳಲ್ಲಿ ಜಾಗತಿಕ ಸಹಕಾರವನ್ನು ಉತ್ತೇಜಿಸುವ ಭಾರತ ಸರ್ಕಾರದ  ಸಮರ್ಪಣೆಯನ್ನು ಈ ಸಭೆಯು ಮತ್ತೊಮ್ಮ ದೃಢೀಕರಿಸಿತು.

***



(Release ID: 1968962) Visitor Counter : 70