ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 12ರಂದು ʻಅಂತಾರಾಷ್ಟ್ರೀಯ ಡೈರಿ ಫೆಡರೇಷನ್ ವಿಶ್ವ ಡೈರಿ ಶೃಂಗಸಭೆ-2022ʼ ಉದ್ಘಾಟಿಸಲಿರುವ ಪ್ರಧಾನಿ

Posted On: 10 SEP 2022 9:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 12 ರಂದು ಬೆಳಗ್ಗೆ 10:30ಕ್ಕೆ ಗ್ರೇಟರ್ ನೋಯ್ಡಾದ `ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್ʼನಲ್ಲಿ ಆಯೋಜಿಸಲಾಗಿರುವ ʻಅಂತಾರಾಷ್ಟ್ರೀಯ ಡೈರಿ ಫೆಡರೇಷನ್ ವಿಶ್ವ ಡೈರಿ ಶೃಂಗಸಭೆ-2022ʼ (ಐಡಿಎಫ್‌ ಡಬ್ಲ್ಯೂಡಿಎಸ್-2022) ಅನ್ನು ಉದ್ಘಾಟಿಸಲಿದ್ದಾರೆ.

ಸೆಪ್ಟೆಂಬರ್ 12ರಿಂದ 15ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ  ಈ ಶೃಂಗಸಭೆಯು 'ಪೌಷ್ಟಿಕಾಂಶ ಮತ್ತು ಜೀವನೋಪಾಯಕ್ಕಾಗಿ ಹೈನುಗಾರಿಕೆ' ಎಂಬ ವಿಷಯಾಧಾರಿತವಾಗಿದ್ದು, ಕೈಗಾರಿಕೋದ್ಯಮಿಗಳು, ತಜ್ಞರು, ರೈತರು ಮತ್ತು ನೀತಿ ನಿರೂಪಕರು ಸೇರಿದಂತೆ ಜಾಗತಿಕ ಮತ್ತು ಭಾರತೀಯ ಡೈರಿವಲಯದವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ʻಐಡಿಎಫ್ ಡಬ್ಲ್ಯೂಡಿಎಸ್-2022ʼದಲ್ಲಿ 50 ದೇಶಗಳಿಂದ ಸುಮಾರು 1500 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇಂತಹ ಹಿಂದಿನ ಶೃಂಗಸಭೆಯು ಸುಮಾರು ಅರ್ಧ ಶತಮಾನದ ಹಿಂದೆ 1974ರಲ್ಲಿ ಭಾರತದಲ್ಲಿ ನಡೆದಿತ್ತು.

ಭಾರತೀಯ ಹೈನುಗಾರಿಕೆ ಉದ್ಯಮವು ಸಣ್ಣ ಮತ್ತು ಅತಿಸಣ್ಣ ಹೈನುಗಾರರನ್ನು, ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಹಕಾರಿ ಮಾದರಿಯನ್ನು ಆಧರಿಸಿರುವುದರಿಂದ ಅನನ್ಯವೆನಿಸಿದೆ. ಪ್ರಧಾನ ಮಂತ್ರಿಯವರ ದೂರದೃಷ್ಟಿಯಿಂದ ಪ್ರೇರೇಪಿತವಾಗಿ ಕೇಂದ್ರ ಸರಕಾರವು ಹೈನುಗಾರಿಕೆ ಕ್ಷೇತ್ರದ ಸುಧಾರಣೆಗಾಗಿ ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದು, ಇದರ ಪರಿಣಾಮವಾಗಿ ಕಳೆದ ಎಂಟು ವರ್ಷಗಳಲ್ಲಿ ಹಾಲಿನ ಉತ್ಪಾದನೆಯು ಶೇ.44 ಕ್ಕೂ ಅಧಿಕ ಪ್ರಮಾಣದಲ್ಲಿ ವೃದ್ಧಿಸಿದೆ. ಜಾಗತಿಕ ಹಾಲಿನ ಉತ್ಪಾದನೆಯಲ್ಲಿ ಸುಮಾರು 23 ಪ್ರತಿಶತದಷ್ಟಿರುವ, ವಾರ್ಷಿಕವಾಗಿ ಸುಮಾರು 210 ದಶಲಕ್ಷ ಟನ್‌ ಹಾಲು ಉತ್ಪಾದಿಸುವ ಮತ್ತು 8 ಕೋಟಿಗೂ ಹೆಚ್ಚು ಹೈನುಗಾರರನ್ನು ಸಬಲೀಕರಣಗೊಳಿತ್ತಿರುವ ಭಾರತೀಯ ಡೈರಿ ಉದ್ಯಮದ ಯಶೋಗಾಥೆಯನ್ನು ʻಐಡಿಎಫ್ ಡಬ್ಲ್ಯೂಡಿಎಸ್-2022ʼದಲ್ಲಿ ಪ್ರದರ್ಶಿಸಲಾಗುವುದು. ಈ ಶೃಂಗಸಭೆಯು ಭಾರತೀಯ ಹೈನುಗಾರರಿಗೆ ಜಾಗತಿಕವಾದ ಅತ್ಯುತ್ತಮ ಕಾರ್ಯವಿಧಾನಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.

*****


(Release ID: 1858463) Visitor Counter : 236