ಪ್ರಧಾನ ಮಂತ್ರಿಯವರ ಕಛೇರಿ
ಎನ್.ಇ.ಪಿ ಜಾರಿಗಾಗಿ ಅಖಿಲ ಭಾರತೀಯ ಶಿಕ್ಷಾ ಸಮಾಗಂ ಉದ್ಘಾಟಿಸಿದ ಪ್ರಧಾನಮಂತ್ರಿ
ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲವೆಂದರೆ "ಸಂಕುಚಿತ ಚಿಂತನೆಯಿಂದ ಶಿಕ್ಷಣವನ್ನು ಬೇರ್ಪಡಿಸುವುದು ಮತ್ತು ಶಿಕ್ಷಣವನ್ನು 21 ನೇ ಶತಮಾನದ ಆಧುನಿಕ ಚಿಂತನೆಯೊಂದಿಗೆ ಜೋಡಿಸುವುದಾಗಿದೆ”
ಬ್ರಿಟಿಷರು ಸೃಜಿಸಿದ ಶಿಕ್ಷಣ ವ್ಯವಸ್ಥೆ ಎಂದಿಗೂ ಭಾರತದ ನೈತಿಕತೆಯ ಭಾಗವಾಗಿರಲಿಲ್ಲ
“ಯುವ ಸಮೂಹ ಕೌಶಲ್ಯ ಪಡೆಯಬೇಕು, ವಿಶ್ವಾಸಾರ್ಹತೆ ಮತ್ತು ವಾಸ್ತವಿಕತೆಯನ್ನು ಮೈಗೂಡಿಸಿಕೊಳ್ಳಬೇಕು, ಇದಕ್ಕಾಗಿ ಶಿಕ್ಷಣ ನೀತಿ ಭೂಮಿಕೆಯನ್ನು ಸಿದ್ಧಪಡಿಸಲಿದೆ”
ಮಹಿಳೆಯರಿಗೆ ಅವಕಾಶವೇ ಇರದಿದ್ದ ವಲಯಗಳಲ್ಲಿ ಅವರು ಇದೀಗ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ
“ನಾನಾ ಸಾಧ್ಯತೆಗಳನ್ನು ಅರಿತುಕೊಳ್ಳಲು ನಮಗೆ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಸಾಧನವನ್ನು ಕೊಟ್ಟಿದೆ”
Posted On:
07 JUL 2022 4:11PM by PIB Bengaluru
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿಂದು ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಉದ್ಘಾಟಿಸಿದರು. ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯ ನಾಥ್, ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಶ್ರೀಮತಿ ಅನುಪಮ ದೇವಿ, ಡಾ. ಸುಭಾಷ್ ಸರ್ಕಾರ್, ಡಾ. ರಾಜ್ ಕುಮಾರ್ ರಂಜನ್ ಸಿಂಗ್, ರಾಜ್ಯ ಸಚಿವರು, ಶಿಕ್ಷಣ ತಜ್ಞರು ಮತ್ತು ಇತರೆ ಪಾಲುದಾರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ‘ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಯುವ ಪೀಳಿಗೆ ‘ಅಮೃತ ಕಾಲ’ವನ್ನು ಸಾಕಾರಗೊಳಿಸುವಲ್ಲಿ ದೊಡ್ಡ ಪಾಲು ಹೊಂದಿದೆ ಎಂದರು. ಪ್ರಧಾನಮಂತ್ರಿ ಅವರು ಮಹಾಮಾನವ ಮದನ ಮೋಹನ ಮಾಳವೀಯ ಅವರಿಗೆ ವಂದಿಸಿ ಸಮಾಗಮ್ ಗೆ ಶುಭ ಕೋರಿದರು. ಇದಕ್ಕೂ ಮುನ್ನ ಪ್ರಧಾನಮಂತ್ರಿ ಅವರು ಎಲ್.ಟಿ. ಕಾಲೇಜಿನಲ್ಲಿ ಮಧ್ಯಾಹ್ನದ ಊಟ ಒದಗಿಸುವ ಅಕ್ಷಯ್ ಪಾತ್ರ ಅಡುಗೆ ಮನೆಯನ್ನು ಉದ್ಘಾಟಿಸಿದರು. ತಾವು ಉನ್ನತ ಮಟ್ಟದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿರುವುದನ್ನು ಸ್ಮರಿಸಿಕೊಂಡರಲ್ಲದೇ ಅಂತಹ ಉತ್ತಮ ಪ್ರತಿಭೆಗಳನ್ನು ಬಳಸಿಕೊಳ್ಳಲು ಇದು ಉತ್ತಮ ಸೂಚನೆಯಾಗಿದೆ ಎಂದರು.
“ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲವೆಂದರೆ ಸಂಕುಚಿತ ಚಿಂತನೆಯಿಂದ ಶಿಕ್ಷಣವನ್ನು ಬೇರ್ಪಡಿಸುವುದು ಮತ್ತು ಶಿಕ್ಷಣವನ್ನು 21 ನೇ ಶತಮಾನದ ಆಧುನಿಕ ಚಿಂತನೆಯೊಂದಿಗೆ ಜೋಡಿಸುವುದಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದೇಶದಲ್ಲಿ ಬುದ್ದಿವಂತಿಕೆ ಮತ್ತು ಪ್ರತಿಭೆಗಳಿಗೆ ಕೊರತೆಯಿಲ್ಲ. ಬ್ರಿಟಿಷರು ಸೃಜಿಸಿದ ಶಿಕ್ಷಣ ವ್ಯವಸ್ಥೆ ಎಂದಿಗೂ ಭಾರತದ ನೈತಿಕತೆಯ ಭಾಗವಾಗಿರಲಿಲ್ಲ ಎಂದರು. ಭಾರತೀಯ ಶಿಕ್ಷಣ ನೀತಿಯ ಬಹು ಆಯಾಮಗಳ ಬಗ್ಗೆ ಒತ್ತಿ ಹೇಳಿದ ಅವರು, ಭಾರತದಲ್ಲಿ ಆಧುನಿಕ ಶಿಕ್ಷಣವನ್ನು ಗುರುತಿಸುವ ಕೆಲಸವಾಗಬೇಕು. “ನಾವು ಪದವಿಧರರನ್ನಷ್ಟೇ ಸೃಷ್ಟಿಸಬಾರದು, ನಮ್ಮ ಶಿಕ್ಷಣ ವ್ಯವಸ್ಥೆ ದೇಶಕ್ಕೆ ಪೂರಕವಾಗಿರಬೇಕು, ರಾಷ್ಟ್ರವನ್ನು ಮುನ್ನಡೆಸಲು ಯಾವುದೇ ಮಾನವ ಸಂಪನ್ಮೂಲ ನಮಗೆ ಅಗತ್ಯವಾಗಿದೆ. ಈ ನಿರ್ಣಯವನ್ನು ನಮ್ಮ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮುನ್ನಡೆಸಬೇಕು. “ನವ ಭಾರತ ನಿರ್ಮಿಸಲು ಹೊಸ ವ್ಯವಸ್ಥೆ ಮತ್ತು ಆಧುನಿಕ ಪ್ರಕ್ರಿಯೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ನಾವು ಹಿಂದೆ ಏನನ್ನು ಕಲ್ಪನೆ ಮಾಡಿಕೊಂಡಿದ್ದೇವೋ, ಅದೀಗ ಸಾಕಾರಗೊಳ್ಳುತ್ತಿದೆ. “ನಾವು ಅತಿದೊಡ್ಡ ಸಾಂಕ್ರಾಮಿಕ ಕೊರೋನಾದಿಂದ ತ್ವರಿತವಾಗಿ ಚೇತರಿಸಿಕೊಂಡಿರುವುದಷ್ಟೇ ಅಲ್ಲ, ಜಗತ್ತಿನಲ್ಲಿ ಭಾರತ ಅತ್ಯಂತ ತ್ವರಿತವಾಗಿ ಆರ್ಥಿಕ ಬೆಳವಣಿಗೆಯಾಗುತ್ತಿರುವ ದೇಶವಾಗಿದೆ. ನಾವಿಂದು ಜಗತ್ತಿನ ಮೂರನೇ ಅತಿ ದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಈ ಮುನ್ನ ಈ ಕ್ಷೇತ್ರದಲ್ಲಿ ಸರ್ಕಾರವೇ ಎಲ್ಲವನ್ನೂ ಮಾಡುತ್ತಿತ್ತು. ಇದೀಗ ಯುವ ಸಮೂಹಕ್ಕಾಗಿ ಖಾಸಗಿ ವಲಯದ ಮೂಲಕ ಹೊಸ ಜಗತ್ತು ಸೃಷ್ಟಿಸಲಾಗಿದೆ. ಮಹಿಳೆಯರಿಗೆ ಅವಕಾಶವಿರದಿದ್ದ ವಲಯಗಳಲ್ಲೇ ಅವರು ಇದೀಗ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ ಎಂದರು.
ಹೊಸ ನೀತಿ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಮಕ್ಕಳ ಪ್ರತಿಭೆ ಮತ್ತು ಆಯ್ಕೆಗಳಿಗೆ ಅನುಗುಣವಾಗಿ ಅವರನ್ನು ಕೌಶಲ್ಯವಂತರನ್ನಾಗಿ ಮಾಡುವತ್ತ ಸರ್ಕಾರ ಗಮನಹರಿಸಿದೆ. “ನಮ್ಮ ಯುವ ಸಮೂಹ. ವಾಸ್ತವಿಕ ನೆಲೆಗಟ್ಟಿನಲ್ಲಿ ಮತ್ತು ಲೆಕ್ಕಾಚಾರದಿಂದ ಕೌಶಲ್ಯವಂತರಾಗಬೇಕು. ಇದಕ್ಕಾಗಿ ಶಿಕ್ಷಣ ನೀತಿ ಭೂಮಿಕೆ ಸಿದ್ಧಪಡಿಸುತ್ತಿದೆ” ಎಂದರು. “ಹೊಸ ಚಿಂತನಾ ಕ್ರಮದೊಂದಿಗೆ ಭವಿಷ್ಯಕ್ಕಾಗಿ ಕೆಲಸ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಇಂದಿನ ಮಕ್ಕಳು ಅತ್ಯಂತ ಸುಧಾರಿತ ಮಟ್ಟದ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಅವರ ಪ್ರತಿಭೆಯನ್ನು ಬಳಸಿಕೊಳ್ಳಲು ಮತ್ತು ಅವರಿಗೆ ಸಹಾಯ ಮಾಡಲು ನಾವು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ಎನ್.ಇ.ಪಿ ಸಿದ್ಧತೆಯಲ್ಲಿ ನಡೆದ ಪ್ರಯತ್ನವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು, ಆದಾಗ್ಯೂ ಈ ನೀತಿ ಸಿದ್ಧಗೊಂಡ ನಂತರ ಅನುಷ್ಠಾನದ ವೇಗ ಕಡಿಮೆಯಾಗಲಿಲ್ಲ ಎಂದು ಒತ್ತಿ ಹೇಳಿದರು. ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ನಿರಂತರ ಚರ್ಚೆ ಮತ್ತು ಕೆಲಸ ನಡೆಯುತ್ತಿದೆ. ನೀತಿ ಅನುಷ್ಠಾನ ಕುರಿತು ಹಲವಾರು ವಿಚಾರ ಸಂಕಿರಣಗಳು ಮತ್ತು ಕಾರ್ಯಕ್ರಮಗಳಲ್ಲಿ ತಾವು ಪಾಲ್ಗೊಂಡಿದ್ದನ್ನು ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡರು. ಇದರ ಫಲವಾಗಿ ದೇಶದ ಯುವ ಜನಾಂಗ ಅಭಿವೃದ್ಧಿಯಲ್ಲಿ ಸಕ್ರಿಯ ಪಾಲುದಾರರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ದೇಶದಲ್ಲಿ ಒಟ್ಟಾರೆ ಅತಿ ದೊಡ್ಡ ಶಿಕ್ಷಣದಲ್ಲಿ ಮೂಲ ಸೌಕರ್ಯ ಕುರಿತು ಪ್ರಧಾನಮಂತ್ರಿ ಅವರು ಮಾತನಾಡಿದರು. ಹಲವಾರು ಹೊಸ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಐಐಟಿಗಳು ಮತ್ತು ಐಐಎಂಗಳನ್ನು ದೇಶದಲ್ಲಿ ಆರಂಭಿಸಲಾಗಿದೆ. 2014 ರ ನಂತರ ಶೇ 55 ರಷ್ಟು ಹೆಚ್ಚು ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯಿಂದಾಗಿ ವಿವಿಗಳಲ್ಲಿ ಸುಲಭ ಮತ್ತು ಗುಣಮಟ್ಟದ ಪ್ರವೇಶಾವಕಾಶ ದೊರೆಯುತ್ತಿದೆ. “ರಾಷ್ಟ್ರೀಯ ಶಿಕ್ಷಣ ನೀತಿ ಇದೀಗ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಹಾದಿಯಾಗಿದೆ. ಇದೇ ರೀತಿಯಲ್ಲಿ ಭಾರತದ ಪ್ರಾಚೀನ ಭಾಷೆಗಳಾದ ಸಂಸ್ಕೃತವನ್ನು ಸಹ ಮುಂದಕ್ಕೆ ಕೊಂಡೊಯ್ಯಲು ಇದರಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಭಾರತ ಜಗತ್ತಿನ ಅತಿ ದೊಡ್ಡ ಶಿಕ್ಷಣ ಕೇಂದ್ರವಾಗಿ ಹೊರ ಹೊಮ್ಮಲಿದೆ ಎಂದು ಪ್ರಧಾನಮಂತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸನ್ನದ್ಧಗೊಳ್ಳುತ್ತಿದ್ದು, ಇದಕ್ಕಾಗಿ ಮಾರ್ಗಸೂಚಿ ಹೊರಡಿಸಲಾಗಿದೆ. 180 ವಿಶ್ವವಿದ್ಯಾಲಯಗಳಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿಶೇಷ ಕಚೇರಿಗಳನ್ನು ಸಹ ತೆರೆಯಲಾಗಿದ್ದು, ಜಾಗತಿಕ ವಿಷಯಗಳ ಕುರಿತು ಅರಿವು ಮೂಡಿಸುವಂತೆ ಅವರು ತಜ್ಞರಿಗೆ ಸೂಚಿಸಿದರು.
ವಾಸ್ತವಿಕ ಅನುಭವ ಮತ್ತು ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವ ಮಹತ್ವ ಕುರಿತು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, “ಪ್ರಯೋಗಾಲಯದಿಂದ ಭೂಮಿಗೆ” ಎನ್ನುವ ಮನೋಭಾವನೆ ರೂಢಿಸಿಕೊಳ್ಳುವಂತೆ ಸಲಹೆ ಮಾಡಿದರು. ಶಿಕ್ಷಣ ತಜ್ಞರು ತಮ್ಮ ಅನುಭವವನ್ನು ಪರೀಕ್ಷೆಯೊಂದಿಗೆ ಮೌಲ್ಯ ಮಾಪನ ಮಾಡುವಂತೆ ಸೂಚಿಸಿದರು. ಪುರಾವೆ ಆಧಾರಿತ ಸಂಶೋಧನೆ ಕೈಗೊಳ್ಳಬೇಕು. ಭಾರತದ ಜನಸಂಖ್ಯೆಯ ಲಾಭಗಳ ಬಗ್ಗೆ ಸಂಶೋಧನೆ ನಡೆಸುವ ಮತ್ತು ಇದನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು, ಈ ವಲಯದಲ್ಲಿ ಜಗತ್ತಿಗೆ ಸೂಕ್ತ ಪರಿಹಾರ ಕಂಡು ಹಿಡಿಯುವಂತೆ ಅವರು ಸಲಹೆ ಮಾಡಿದರು. ಈ ಹಿಂದೆ ಲಭ್ಯವಿರದ ಅಸಂಖ್ಯಾತ ಸಾಧ್ಯತೆಗಳನ್ನು ಸಾಕಾರಗೊಳಿಸಲು “ರಾಷ್ಟ್ರೀಯ ಶಿಕ್ಷಣ ನೀತಿ” ಒಂದು ಸಾಧನವಾಗಿ ನಮಗೆ ದೊರೆತಿದೆ. ಇದನ್ನು ನಾವು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಅಖಿಲ ಭಾರತೀಯ ಶಿಕ್ಷಾ ಸಮಾಗಮ್
ಶಿಕ್ಷಣ ಸಚಿವಾಲಯ ಜುಲೈ 7 ರಿಂದ 9 ರ ವರೆಗೆ ಶಿಕ್ಷಣ ಸಮಾಗಮ್ ಆಯೋಜಿಸಿದೆ. ಖ್ಯಾತ ಶಿಕ್ಷಣ ತಜ್ಞರು, ನೀತಿ ನಿರೂಪಕರು ಮತ್ತು ಶಿಕ್ಷಣ ಕ್ಷೇತ್ರದ ನಾಯಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿ [ಎನ್.ಇ.ಪಿ] 2020 ರ ಜಾರಿ ಕುರಿತ ಮಾರ್ಗಸೂಚಿಯ ಬಗ್ಗೆ ಚರ್ಚೆ ನಡೆಸಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಇದು ವೇದಿಕೆಯಾಗಿದೆ. ದೇಶಾದ್ಯಂತ 300 ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ಆಡಳಿತ ಪರಿಣಿತರು ಹಾಗೂ ವಿಶ್ವವಿದ್ಯಾಲಯಗಳ [ಕೇಂದ್ರ, ರಾಜ್ಯ, ಪರಿಗಣಿತ ಮತ್ತು ಖಾಸಗಿ] ಮತ್ತು ರಾಷ್ಟ್ರೀಯ ಮಹತ್ವದ ಸಂಸ್ಥೆಗಳ [ಐಐಟಿ. ಐಐಎಂ, ಎನ್ಐಟಿ, ಐಐಎಸ್ಇಆರ್] ನಾಯಕರಿಗೆ ಸಾಮಾರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ. ತಮ್ಮ ಸಂಸ್ಥೆಗಳಲ್ಲಿ ಎನ್.ಇ.ಪಿ ಜಾರಿ ಕುರಿತು ವಿವಿಧ ಪಾಲುದಾರರು ಕೈಗೊಂಡಿರುವ ಕ್ರಮಗಳ ಕುರಿತು ಇದೇ ಸಂದರ್ಭದಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ ಮತ್ತು ಅನುಷ್ಠಾನ ಹಂತದಲ್ಲಿ ದಾಖಲಾರ್ಹ ಉತ್ತಮ ಅಭ್ಯಾಸಗಳು ಹಾಗೂ ಯಶೋಗಾಥೆಗಳ ಬಗ್ಗೆಯೂ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಮೂರು ದಿನಗಳ ಶಿಕ್ಷಾ ಸಮಾಗಮ್ ನಲ್ಲಿ ಎನ್.ಇ.ಪಿ 2020 ಅಡಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ 9 ವಿಷಯಗಳ ಕುರಿತು ಚರ್ಚಾ ಗೋಷ್ಠಿ ನಡೆಯಲಿದೆ. ಬಹುಶಿಸ್ತೀಯ ಮತ್ತು ಸಮಗ್ರ ಶಿಕ್ಷಣ; ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶ; ಸಂಶೋಧನೆ, ನಾವೀನ್ಯತೆ ಹಾಗೂ ಉದ್ಯಮಶೀಲತೆ: ಗುಣಮಟ್ಟದ ಶಿಕ್ಷಣಕ್ಕಾಗಿ ಸಾಮರ್ಥ್ಯ ಅಭಿವೃದ್ಧಿ: ಗುಣಮಟ್ಟ, ಶ್ರೇಯಾಂಕ ಹಾಗೂ ಮಾನ್ಯತೆ, ಡಿಜಿಟಲ್ ಸಬಲೀಕರಣ ಮತ್ತು ಆನ್ ಲೈನ್ ಶಿಕ್ಷಣ: ಸಮಾನ ಮತ್ತು ಅಂತರ್ಗತ ಶಿಕ್ಷಣ; ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣ ಕುರಿತ ಗೋಷ್ಠಿಗಳು ನಡೆಯಲಿವೆ.
********
(Release ID: 1839990)
Visitor Counter : 300
Read this release in:
Bengali
,
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam