ಪ್ರಧಾನ ಮಂತ್ರಿಯವರ ಕಛೇರಿ

ಚೆನ್ನೈನಲ್ಲಿ ಜರುಗಿದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಪಠ್ಯ

Posted On: 26 MAY 2022 8:58PM by PIB Bengaluru

ತಮಿಳುನಾಡು ರಾಜ್ಯಪಾಲ ಶ್ರೀ ಆರ್.ಎನ್. ರವಿ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕೆ.ಸ್ಟಾಲಿನ್, ಕೇಂದ್ರ ಸಚಿವ ಸಂಪುಟದ ಸಹೋದ್ಯೋಗಿಗಳು, ತಮಿಳುನಾಡು ಸರ್ಕಾರದ ಸಚಿವರು, ಸಂಸದರು, ತಮಿಳುನಾಡು ವಿಧಾನಸಭೆಯ ಸದಸ್ಯರು, ತಮಿಳುನಾಡಿನ ಸಹೋದರಿಯರು ಮತ್ತು ಸಹೋದರರು , ಎಲ್ಲರಿಗೂ ನನ್ನ ವಣಕ್ಕಂ!     

ತಮಿಳುನಾಡಿಗೆ ಪುನಃ ಬರುವುದು ಯಾವಾಗಲೂ ಅದ್ಭುತ ಅನುಭವ ನೀಡುತ್ತದೆ! ಈ ಭೂಮಿ ವಿಶೇಷವಾಗಿದೆ. ಈ ರಾಜ್ಯದ ಜನರು, ಸಂಸ್ಕೃತಿ ಮತ್ತು ಭಾಷೆ  ಎಲ್ಲವೂ ಅತ್ಯುತ್ತಮವಾಗಿದೆ. ಮಹಾನ್ ಭಾರತಿಯಾರ್ ಅವರು ಅದನ್ನು ಈ ರೀತಿಯಾಗಿ ಬಹಳ ಸುಂದರವಾಗಿ ವ್ಯಕ್ತಪಡಿಸಿದ್ದಾರೆ: 

ಸೆಂತಮಿಲ್ ನಾಡು ಎನ್ನಂ ಪೋತೀನಿಲೆ ಇನ್ನು ತೇನ ಬಂದು ಕಾದಿನೀಲೆ |

ಸ್ನೇಹಿತರೇ, 

ಪ್ರತಿಯೊಂದು ಕ್ಷೇತ್ರದಲ್ಲೂ ತಮಿಳುನಾಡಿನ ಯಾರೋ ಒಬ್ಬರು ಒಂದಲ್ಲಾ ಒಂದು ವಿಧದಲ್ಲಿ ಯಾವಾಗಲೂ ಮಿಂಚುತ್ತಿರುತ್ತಾರೆ. ಇತ್ತೀಚೆಗೆ, ನಾನು ನನ್ನ ನಿವಾಸದಲ್ಲಿ ಭಾರತೀಯ ಡೀಫ್ಲಿಂಪಿಕ್ಸ್ ತಂಡವನ್ನು ಸತ್ಕರಿಸುವ ಸಂವಾದ ಕೂಟವನ್ನುಆಯೋಜಿಸಿದ್ದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ಎಂಬುದು ನಿಮಗೆ ತಿಳಿದಿದೆ. ಆದರೆ, ನಾವು ಗೆದ್ದಿರುವ 16 ಪದಕಗಳಲ್ಲಿನ 6 ಪದಕಗಳಲ್ಲಿ ತಮಿಳುನಾಡಿನ ಯುವಕರ ಸಾಧನೆಯ ಪಾತ್ರವಿದೆ ಎಂಬುದು ನಿಮಗೆ ತಿಳಿದಿದೆಯೇ? ಇದು ತಂಡಕ್ಕೆ ನೀಡಿದ ಅತ್ಯುತ್ತಮ ಕೊಡುಗೆಯಾಗಿದೆ. ತಮಿಳು ಭಾಷೆ ಶಾಶ್ವತ ಮತ್ತು ತಮಿಳು ಸಂಸ್ಕೃತಿ ಜಾಗತಿಕವಾಗಿದೆ. ಚೆನ್ನೈನಿಂದ ಕೆನಡಾದವರೆಗೆ, ಮಧುರೈನಿಂದ ಮಲೇಷಿಯಾದವರೆಗೆ, ನಾಮಕ್ಕಲ್ ನಿಂದ ನ್ಯೂಯಾರ್ಕ್ವರೆಗೆ, ಸೇಲಂನಿಂದ ದಕ್ಷಿಣ ಆಫ್ರಿಕಾದವರೆಗೆ, ಪೊಂಗಲ್ ಮತ್ತು ಪುತಾಂಡುವಿನ ಸಂದರ್ಭಗಳನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಫ್ರಾನ್ಸ್ನ ಕಾನ್‌ ನಲ್ಲಿ ಚಿತ್ರೋತ್ಸವ ನಡೆಯುತ್ತಿದೆ. ಅಲ್ಲಿ ತಮಿಳುನಾಡಿನ ಈ ಮಹಾನ್ ಮಣ್ಣಿನ ಮಗ ತಿರು ಎಲ್. ಮುರುಗನ್ ಸಾಂಪ್ರದಾಯಿಕ ತಮಿಳು ಉಡುಗೆಯಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದರು. ಇದು ಪ್ರಪಂಚದಾದ್ಯಂತದ ತಮಿಳರನ್ನು ತುಂಬಾ ಹೆಮ್ಮೆಪಡುವಂತೆ ಮಾಡಿದೆ.

ಸ್ನೇಹಿತರೇ, 

ತಮಿಳುನಾಡಿನ ಅಭಿವೃದ್ಧಿ ಪಯಣದಲ್ಲಿ ಮತ್ತೊಂದು ಅದ್ಭುತ ಅಧ್ಯಾಯವನ್ನು ಆಚರಿಸಲು ನಾವು ಇಲ್ಲಿ ಸೇರಿದ್ದೇವೆ. ಮೂವತ್ತೊಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳು ಉದ್ಘಾಟನೆಯಾಗುತ್ತಿವೆ ಅಥವಾ ಶಂಕುಸ್ಥಾಪನೆಯಾಗುತ್ತಿವೆ. ನಾವು ಈ ಯೋಜನೆಗಳ ವಿವರಗಳನ್ನು ನೋಡಿದ್ದೇವೆ ಆದರೆ ನಾನು ಕೆಲವು ಅಂಶಗಳನ್ನು ಮಾಡಲು ಬಯಸುತ್ತೇನೆ. ರಸ್ತೆ ನಿರ್ಮಾಣಕ್ಕೆ ಒತ್ತು ನೀಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾವು ಹಾಗೆ ಮಾಡುತ್ತಿದ್ದೇವೆ ಏಕೆಂದರೆ ಇದು ಆರ್ಥಿಕ ಸಮೃದ್ಧಿಗೆ ನೇರವಾಗಿ ಸಂಬಂಧಿಸಿದೆ. ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ ವೇ ಎರಡು ಪ್ರಮುಖ ಬೆಳವಣಿಗೆಯ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಚೆನ್ನೈ ಬಂದರನ್ನು ಮಧುರವೊಯಲ್ಗೆ ಸಂಪರ್ಕಿಸುವ 4 ಲೇನ್ ಎಲಿವೇಟೆಡ್ ರಸ್ತೆಯು ಚೆನ್ನೈ ಬಂದರನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ನಗರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ನೇರಲೂರಿನಿಂದ ಧರ್ಮಪುರಿ ಮತ್ತು ಮೀನುಸುರುಟ್ಟಿಯಿಂದ ಚಿದಂಬರಂ ಭಾಗದ ವಿಸ್ತರಣೆಯಿಂದ ಜನರಿಗೆ ಅನೇಕ ಪ್ರಯೋಜನಗಳಿವೆ. 5 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡುತ್ತಿರುವುದಕ್ಕೆ ನನಗೆ ವಿಶೇಷವಾಗಿ ಸಂತೋಷವಾಗಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಆಧುನೀಕರಣ ಮತ್ತು ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, ಇದು ಸ್ಥಳೀಯ ಕಲೆ ಮತ್ತು ಸಂಸ್ಕೃತಿಯೊಂದಿಗೆ ವಿಲೀನಗೊಳ್ಳುತ್ತದೆ. ಮಧುರೈ ಮತ್ತು ಥೇಣಿ ನಡುವಿನ ಗೇಜ್ ಪರಿವರ್ತನೆಯು ನನ್ನ ರೈತ ಸಹೋದರಿಯರು ಮತ್ತು ಸಹೋದರರಿಗೆ ಸಹಾಯ ಮಾಡುತ್ತದೆ ಮತ್ತು ಅವರಿಗೆ ಹೆಚ್ಚಿನ ಮಾರುಕಟ್ಟೆಗಳ ಅವಕಾಶಗಳನ್ನು ನೀಡುತ್ತದೆ.

ಸ್ನೇಹಿತರೇ, 

ಪ್ರಧಾನಮಂತ್ರಿ-ಆವಾಸ್ ಯೋಜನೆಯಡಿ ಐತಿಹಾಸಿಕ ಚೆನ್ನೈ ಲೈಟ್ ಹೌಸ್ ಯೋಜನೆಯ ಭಾಗವಾಗಿ ಮನೆಗಳನ್ನು ಪಡೆಯುತ್ತಿರುವ ಎಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಇದು ನಮಗೆ ಅತ್ಯಂತ ತೃಪ್ತಿದಾಯಕ ಯೋಜನೆಯಾಗಿದೆ. ಕೈಗೆಟುಕುವ, ಬಾಳಿಕೆ ಬರುವ ಮತ್ತು ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸುವಲ್ಲಿ ಉತ್ತಮ ಅಭ್ಯಾಸಕ್ರಮಗಳನ್ನು ತೊಡಗಿಸಿಕೊಳ್ಳಲು ನಾವು ಜಾಗತಿಕ ಮಟ್ಟದ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದೇವೆ. ದಾಖಲೆಯ ಸಮಯದಲ್ಲಿ, ಅಂತಹ ಮೊದಲ ಲೈಟ್ ಹೌಸ್ ಯೋಜನೆಯು ಸಾಕಾರಗೊಂಡಿದೆ ಮತ್ತು ಅದು ಚೆನ್ನೈನಲ್ಲಿದೆ ಎಂದು ನನಗೆ ಸಂತೋಷವಾಗಿದೆ. ತಿರುವಳ್ಳೂರಿನಿಂದ ಬೆಂಗಳೂರಿಗೆ ಮತ್ತು ಎನ್ನೂರಿನಿಂದ ಚೆಂಗಲ್ಪಟ್ಟಿಗೆ ನೈಸರ್ಗಿಕ ಅನಿಲ ಪೈಪ್ಲೈನ್ ಉದ್ಘಾಟನೆಯೊಂದಿಗೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಜನರಿಗೆ ಸುಲಭವಾದ ಎಲ್.ಎನ್.ಜಿ. ಲಭ್ಯತೆ ಇರುತ್ತದೆ. ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಚೆನ್ನೈ ಬಂದರನ್ನು ಆರ್ಥಿಕ ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡುವ ದೃಷ್ಟಿಯೊಂದಿಗೆ, ಚೆನ್ನೈನಲ್ಲಿ ಬಹು ಮಾದರಿ ಲಾಜಿಸ್ಟಿಕ್ ಪಾರ್ಕ್ಗೆ ಇಂದು ಅಡಿಪಾಯ ಹಾಕಲಾಗಿದೆ. ದೇಶದ ಇತರ ಭಾಗಗಳಲ್ಲಿ ಇಂತಹ ಬಹುಮಾದರಿ ಲಾಜಿಸ್ಟಿಕ್ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಹು ಮಾದರಿ ಲಾಜಿಸ್ಟಿಕ್ ಪಾರ್ಕ್ಗಳು ನಮ್ಮ ದೇಶದ ಸರಕು ಸಾಗಣೆ ಪರಿಸರ ವ್ಯವಸ್ಥೆಯಲ್ಲಿ ಒಂದು ನೂತನ ಬದಲಾವಣೆಗೆ ಮಾದರಿಯಾಗಲಿವೆ. ವಿವಿಧ ವಲಯಗಳಲ್ಲಿ ಈ ಪ್ರತಿಯೊಂದು ಯೋಜನೆಗಳು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಮತ್ತು ಆತ್ಮನಿರ್ಭರ್ ಆಗಬೇಕೆಂಬ ನಮ್ಮ ಸಂಕಲ್ಪವನ್ನು ಹೆಚ್ಚಿಸುತ್ತದೆ.

ಸ್ನೇಹಿತರೇ, 

ನಿಮ್ಮ ಮಕ್ಕಳು ನಿಮಗಿಂತ ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬೇಕೆಂದು ನೀವು ಪ್ರತಿಯೊಬ್ಬರೂ ಬಯಸುತ್ತೀರಿ ಎಂದು ನನಗೆ ಖಾತ್ರಿಯಿದೆ. ನೀವು ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ಭವ್ಯವಾದ ಭವಿಷ್ಯವನ್ನು ಬಯಸುತ್ತೀರಿ. ಅದಕ್ಕಾಗಿ ಪ್ರಮುಖ ಪೂರ್ವಾಪೇಕ್ಷಿತಗಳಲ್ಲಿ ಉನ್ನತ ಗುಣಮಟ್ಟದ ಮೂಲಸೌಕರ್ಯವಾಗಿದೆ. ಮೂಲಸೌಕರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಂದ, ಅಭಿವೃದ್ಧಿ ಹೊಂದಿದ ದೇಶಗಳಾಗಿ ಪರಿವರ್ತನೆಯಾಗುತ್ತಿರುವ ಇತಿಹಾಸವು ನಮ್ಮ ಕಣ್ಣೆದುರುಗಿದೆ. ಭಾರತ ಸರ್ಕಾರವು ಉತ್ತಮ ಗುಣಮಟ್ಟದ ಮತ್ತು ಸುಸ್ಥಿರವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಸಂಪೂರ್ಣವಾಗಿ ಗಮನಹರಿಸಿದೆ. ನಾನು ಮೂಲಸೌಕರ್ಯದ ಬಗ್ಗೆ ಮಾತನಾಡುವಾಗ, ನಾನು ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯ ಎರಡನ್ನೂ ಉಲ್ಲೇಖಿಸುತ್ತೇನೆ. ಸಾಮಾಜಿಕ ಮೂಲಸೌಕರ್ಯಗಳನ್ನು ನವೀಕರಿಸುವ ಮೂಲಕ ನಾವು ಗರೀಬ್  ಕಲ್ಯಾಣವನ್ನು ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ಸಾಮಾಜಿಕ ಮೂಲಸೌಕರ್ಯಗಳ ಮೇಲಿನ ನಮ್ಮ ಉದ್ಧೇಶವು  ‘ಸರ್ವ ಜನಹಿತ, ಸರ್ವ ಜನ ಸುಖಯ’ದ ಪ್ರಧಾನತೆಗೆ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ಪ್ರಮುಖ ಯೋಜನೆಗಳಿಗೆ ಸ್ಯಾಚುರೇಶನ್ ಮಟ್ಟದ ವ್ಯಾಪ್ತಿಯನ್ನು ಸಾಧಿಸಲು ನಮ್ಮ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ. ಯಾವುದೇ ವಲಯವನ್ನು ತೆಗೆದುಕೊಳ್ಳಿ - ಶೌಚಾಲಯಗಳು, ವಸತಿ, ಆರ್ಥಿಕ ಸೇರ್ಪಡೆ... ನಾವು ಸಂಪೂರ್ಣ ವ್ಯಾಪ್ತಿಯ ಕಡೆಗೆ ಕೆಲಸ ಮಾಡುತ್ತಿದ್ದೇವೆ. ನಾವು ಪ್ರತಿ ಮನೆಗೆ ಕುಡಿಯುವ ನೀರನ್ನು ಖಾತ್ರಿಪಡಿಸುವ ಕೆಲಸ ಮಾಡುತ್ತಿದ್ದೇವೆ - ನಲ್ ಸೆ ಜಲ. ನಾವು ಅದನ್ನು ಮಾಡಿದಾಗ, ಹೊರಗಿಡುವಿಕೆ, ಭೇದಭಾವಕ್ಕೆ ಅಥವಾ ತಾರತಮ್ಯಕ್ಕೆ ಯಾವುದೇ ಅವಕಾಶವಿಲ್ಲ. ಭೌತಿಕ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸುವುದರೊಂದಿಗೆ, ಭಾರತದ ಯುವಕರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಇದು ಯುವಕರ ಆಕಾಂಕ್ಷೆಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ ಮತ್ತು ಯುವಜನತೆಯಲ್ಲಿ ಸಂಪತ್ತು ಮತ್ತು ಮೌಲ್ಯವನ್ನು ಸೃಷ್ಟಿಸಲು ಅವಕಾಶಕ್ಕೆ ಸಹಾಯ ಮಾಡುತ್ತದೆ.

ಸ್ನೇಹಿತರೇ, 

ನಮ್ಮ ಸರ್ಕಾರವು ಸಾಂಪ್ರದಾಯಿಕವಾಗಿ ಮೂಲಸೌಕರ್ಯ ಎಂದು ಕರೆಯುವುದನ್ನು ಮೀರಿ ಬಹುದೂರ ಸಾಗಿಹೋಗಿದೆ. ಕೆಲವು ವರ್ಷಗಳ ಹಿಂದೆ, ಮೂಲಸೌಕರ್ಯವು ರಸ್ತೆಗಳು, ವಿದ್ಯುತ್ ಮತ್ತು ನೀರನ್ನು ಉಲ್ಲೇಖಿಸುತ್ತದೆ. ಇಂದು ನಾವು ಭಾರತದ ಗ್ಯಾಸ್ ಪೈಪ್ಲೈನ್ ಜಾಲವನ್ನು ವಿಸ್ತರಿಸಲು ಕೆಲಸ ಮಾಡುತ್ತಿದ್ದೇವೆ. ಐ-ವೇಗಳಲ್ಲಿ ಕೆಲಸ ನಡೆಯುತ್ತಿದೆ. ಪ್ರತಿ ಹಳ್ಳಿಗೂ ಹೈಸ್ಪೀಡ್ ಇಂಟರ್ನೆಟ್ ಕೊಂಡೊಯ್ಯುವುದು ನಮ್ಮ ದೃಷ್ಟಿಯಾಗಿದೆ. ಇದರ ಪರಿವರ್ತಕ ಸಾಮರ್ಥ್ಯವನ್ನು ಕಲ್ಪಿಸಿಕೊಳ್ಳಿ. ಕೆಲವು ತಿಂಗಳ ಹಿಂದೆ ನಾವು ಪಿಎಂ-ಗತಿ ಶಕ್ತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ಕಾರ್ಯಕ್ರಮವು ಮುಂಬರುವ ವರ್ಷಗಳಲ್ಲಿ ಭಾರತವು ಉನ್ನತ ಗುಣಮಟ್ಟದ ಮೂಲಸೌಕರ್ಯವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ಎಲ್ಲಾ ಪಾಲುದಾರರು ಮತ್ತು ಸಚಿವಾಲಯಗಳನ್ನು ಒಟ್ಟುಗೂಡಿಸುತ್ತದೆ. ಕೆಂಪು ಕೋಟೆಯಿಂದ, ನಾನು ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಬಗ್ಗೆ ಮಾತನಾಡಿದ್ದೇನೆ. ಇದು ನೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದೇಶದಾದ್ಯಂತ ಹರಡಿರುವ ಯೋಜನೆಯಾಗಿದೆ. ಈ ದೃಷ್ಟಿಯನ್ನು ವಾಸ್ತವಕ್ಕೆ ಕೊಡೊಯ್ಯುವ ಕೆಲಸ ನಡೆಯುತ್ತಿದೆ. ಈ ವರ್ಷದ ಆಯವ್ಯಯದಲ್ಲಿ ಬಂಡವಾಳ ವೆಚ್ಚಕ್ಕಾಗಿ 7.5 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಇದು ಐತಿಹಾಸಿಕ ಏರಿಕೆಯಾಗಿದೆ. ಮೂಲಸೌಕರ್ಯಗಳನ್ನು ರಚಿಸುವಾಗ ನಾವು ಈ ಯೋಜನೆಗಳನ್ನು ಸಮಯಕ್ಕೆ ಮತ್ತು ಪಾರದರ್ಶಕ ರೀತಿಯಲ್ಲಿ ಪೂರ್ಣಗೊಳಿಸುವುದನ್ನು ಕೂಡಾ ಖಚಿತಪಡಿಸಿಕೊಳ್ಳುತ್ತೇವೆ.

ಸ್ನೇಹಿತರೇ, 

ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಭಾರತ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ. ಈ ವರ್ಷದ ಜನವರಿಯಲ್ಲಿ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ ಹೊಸ ಕ್ಯಾಂಪಸ್ ಅನ್ನು ಚೆನ್ನೈನಲ್ಲಿ ಉದ್ಘಾಟಿಸಲಾಯಿತು. ಹೊಸ ಕ್ಯಾಂಪಸ್ ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಹಣವನ್ನು ಹೊಂದಿದೆ. ಇದು ವಿಶಾಲವಾದ ಗ್ರಂಥಾಲಯ, ಇ-ಲೈಬ್ರರಿ, ಸೆಮಿನಾರ್ ಹಾಲ್ಗಳು ಮತ್ತು ಮಲ್ಟಿಮೀಡಿಯಾ ಹಾಲ್ಗಳನ್ನು ಹೊಂದಿದೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ತಮಿಳು ಅಧ್ಯಯನದ ಕುರಿತು 'ಸುಬ್ರಮಣ್ಯ ಭಾರತಿ ಪೀಠ'ವನ್ನು ಇತ್ತೀಚೆಗೆ ಘೋಷಿಸಲಾಯಿತು. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ನನ್ನ ಲೋಕಸಭಾ ಕ್ಷೇತ್ರದಲ್ಲಿ ನೆಲೆಗೊಂಡಿರುವುದರಿಂದ, ನನಗೆ ಬಹಳ ಸಂತೋಷ ಹಾಗೂ ವಿಶೇಷತೆ ಅನುಭವವಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತೀಯ ಭಾಷೆಗಳನ್ನು ಉತ್ತೇಜಿಸಲು ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ತಾಂತ್ರಿಕ ಮತ್ತು ವೈದ್ಯಕೀಯ ಕೋರ್ಸ್ಗಳನ್ನು ಸ್ಥಳೀಯ ಭಾಷೆಗಳಲ್ಲಿ ಮಾಡಬಹುದು. ಮುಂಬರುವ ದಿನಗಳಲ್ಲಿ ತಮಿಳುನಾಡಿನ ಯುವಕರು ಇದರ ಲಾಭ ಪಡೆಯಲಿದ್ದಾರೆ.

ಸ್ನೇಹಿತರೇ, 

ಶ್ರೀಲಂಕಾ ಕಷ್ಟದ ಸಮಯದಲ್ಲಿ ಹಾದುಹೋಗುತ್ತಿದೆ. ಅಲ್ಲಿನ ಬೆಳವಣಿಗೆಗಳ ಬಗ್ಗೆ ನಿಮಗೆ ಕಾಳಜಿ ಇದೆ ಎಂದು ನನಗೆ ಖಾತ್ರಿಯಿದೆ. ಆಪ್ತ ಸ್ನೇಹಿತ ಮತ್ತು ನೆರೆಯ ರಾಷ್ಟ್ರವಾಗಿ ಭಾರತವು ಶ್ರೀಲಂಕಾಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದೆ. ಇದು ಹಣಕಾಸಿನ ನೆರವು, ಇಂಧನ, ಆಹಾರ, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳ ಬೆಂಬಲವನ್ನು ಒಳಗೊಂಡಿರುತ್ತದೆ. ಶ್ರೀಲಂಕಾದ ಉತ್ತರದಲ್ಲಿ, ಪೂರ್ವದಲ್ಲಿ ಮತ್ತು ಮಲೆನಾಡಿನಲ್ಲಿರುವ ತಮಿಳರು ಸೇರಿದಂತೆ ಶ್ರೀಲಂಕಾದಲ್ಲಿರುವ ತಮ್ಮ ಸಹೋದರ ಸಹೋದರಿಯರಿಗೆ ಅನೇಕ ಭಾರತೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಹಾಯವನ್ನು ಕಳುಹಿಸಿದ್ದಾರೆ. ಶ್ರೀಲಂಕಾಕ್ಕೆ ಆರ್ಥಿಕ ಬೆಂಬಲವನ್ನು ವಿಸ್ತರಿಸಲು ಭಾರತವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಉತ್ತಮ ಸಂವಹನ ಮಾಡಿದೆ. ಭಾರತವು ಶ್ರೀಲಂಕಾದ ಜನರೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ ಮತ್ತು ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಭಾರತ ಬೆಂಬಲ ನೀಡುತ್ತದೆ. 

ಸ್ನೇಹಿತರೇ,  
 

ಕೆಲವು ವರ್ಷಗಳ ಹಿಂದೆ ನಾನು ಜಾಫ್ನಾಗೆ ಭೇಟಿ ನೀಡಿದ್ದು ಮರೆಯಲು ಸಾಧ್ಯವಿಲ್ಲ. ಜಾಫ್ನಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಮಂತ್ರಿ ನಾನು. ಶ್ರೀಲಂಕಾದಲ್ಲಿರುವ ತಮಿಳು ಜನರಿಗೆ ಸಹಾಯ ಮಾಡಲು ಭಾರತ ಸರ್ಕಾರವು ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಈ ಯೋಜನೆಗಳು ಆರೋಗ್ಯ, ಸಾರಿಗೆ, ವಸತಿ ಮತ್ತು ಸಂಸ್ಕೃತಿಯನ್ನು ಒಳಗೊಂಡಿವೆ.

ಸ್ನೇಹಿತರೇ, 

ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯ ಇದು. 75 ವರ್ಷಗಳ ಹಿಂದೆ ನಾವು ಸ್ವತಂತ್ರ ರಾಷ್ಟ್ರವಾಗಿ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ದೇಶಕ್ಕಾಗಿ ಅನೇಕ ಕನಸುಗಳನ್ನು ಹೊಂದಿದ್ದರು. ಅವುಗಳನ್ನು ಪೂರೈಸುವುದು ನಮ್ಮ ಕರ್ತವ್ಯ ಮತ್ತು ನಾವು ಅದನ್ನು ಮಾಡುತ್ತೇವೆ ಎಂದು ನನಗೆ ವಿಶ್ವಾಸವಿದೆ. ಒಟ್ಟಾಗಿ, ನಾವು ಭಾರತವನ್ನು ಬಲಿಷ್ಠ ಮತ್ತು ಹೆಚ್ಚು ಸಮೃದ್ಧಗೊಳಿಸುತ್ತಿದ್ದೇವೆ. ಮತ್ತೊಮ್ಮೆ ಆರಂಭಗೊಂಡಿರುವ ಈ ನೂತನ ಅಭಿವೃದ್ಧಿ ಕಾಮಗಾರಿಗಳಿಗೆ ಅಭಿನಂದನೆಗಳು.

ವನಕ್ಕಂ!

ಧನ್ಯವಾದಗಳು!

***



(Release ID: 1828935) Visitor Counter : 194