ಹಣಕಾಸು ಸಚಿವಾಲಯ
azadi ka amrit mahotsav

‘ಹರ್ ಘರ್, ನಲ್ ಸೇ ಜಲ್’ಯೋಜನೆಗೆ 60,000 ಕೋಟಿ ರೂ. ಹಂಚಿಕೆ; 3.8 ಕೋಟಿ ಮನೆಗಳಿಗೆ ಕೊಳಾಯಿ ನೀರು


ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 80 ಲಕ್ಷ ಮನೆಗಳನ್ನು 48,000 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು

ಉತ್ತರ ಗಡಿಭಾಗದ ಗ್ರಾಮಗಳನ್ನು ರೋಮಾಂಚಕ ಗ್ರಾಮಗಳ ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು

ಹಿಂದುಳಿದಿರುವ ತಾಲ್ಲೂಕುಗಳು ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮದ ಕೇಂದ್ರಬಿಂದುವಾಗಿರುತ್ತವೆ

Posted On: 01 FEB 2022 1:13PM by PIB Bengaluru

2022-23ರಲ್ಲಿ 3.8 ಕೋಟಿ ಮನೆಗಳಿಗೆ ನಲ್ಲಿಯ ಮೂಲಕ ನೀರು ಒದಗಿಸಲು ಹರ್ ಘರ್, ನಲ್ ಸೇ ಜಲ್ ಯೋಜನೆಯಡಿ 60,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕೇಂದ್ರ ಬಜೆಟ್ 2022-23 ಅನ್ನು ಮಂಡಿಸಿದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, 2014 ರಿಂದ ಸರ್ಕಾರದ ಗಮನವು ನಾಗರಿಕರ, ವಿಶೇಷವಾಗಿ ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರ ಸಬಲೀಕರಣದ ಮೇಲೆ ಕೇಂದ್ರೀಕೃತವಾಗಿದೆ ಎಂದು ಹೇಳಿದರು. ಇವುಗಳು ವಸತಿ, ವಿದ್ಯುತ್, ಅಡುಗೆ ಅನಿಲ ಮತ್ತು ನೀರು ಒದಗಿಸುವ ಕಾರ್ಯಕ್ರಮಗಳನ್ನು ಒಳಗೊಂಡಿವೆ ಎಂದರು. ಹರ್ ಘರ್, ನಲ್ ಸೇ ಜಲ್‌ನ ಪ್ರಸ್ತುತ ವ್ಯಾಪ್ತಿ 8.7 ಕೋಟಿ ಮನೆಗಳಾಗಿದ್ದು, ಈ ಪೈಕಿ 5.5 ಕೋಟಿ ಮನೆಗಳಿಗೆ ಕಳೆದ 2 ವರ್ಷಗಳಲ್ಲಿಯೇ ನಲ್ಲಿ ನೀರನ್ನು ನೀಡಲಾಗಿದೆ ಎಂದು ಹೇಳಿದರು.

6. All Inclusive Welfare Focus For 2022-23.jpg

ಪ್ರಧಾನ ಮಂತ್ರಿ ಆವಾಸ್ ಯೋಜನೆ

2022-23ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಗುರುತಿಸಲಾದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು 48,000 ಕೋಟಿ ರೂ. ಹಂಚಿಕೆಯನ್ನು ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು. ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರದ ವಸತಿಗಳನ್ನು ಉತ್ತೇಜಿಸಲು, ಎಲ್ಲಾ ಭೂಮಿ ಮತ್ತು ನಿರ್ಮಾಣ ಸಂಬಂಧಿತ ಅನುಮೋದನೆಗಳಿಗೆ ಅಗತ್ಯವಿರುವ ಸಮಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತದೆ ಎಂದರು. ಮಧ್ಯವರ್ತಿ ವೆಚ್ಚದಲ್ಲಿ ಕಡಿತದ ಜೊತೆಗೆ ಬಂಡವಾಳದ ಪ್ರವೇಶವನ್ನು ವಿಸ್ತರಿಸಲು ಸರ್ಕಾರವು ಹಣಕಾಸು ವಲಯದ ನಿಯಂತ್ರಣ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

ವೈಬ್ರಂಟ್ ವಿಲೇಜ್ ಕಾರ್ಯಕ್ರಮ

ಹೊಸ ವೈಬ್ರಂಟ್ ವಿಲೇಜ್ ಕಾರ್ಯಕ್ರಮದ ಅಡಿಯಲ್ಲಿ ಉತ್ತರದ ಗಡಿಯಲ್ಲಿರುವ ಗ್ರಾಮಗಳನ್ನು ಸೇರಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು. "ವಿರಳ ಜನಸಂಖ್ಯೆ, ಸೀಮಿತ ಸಂಪರ್ಕ ಮತ್ತು ಮೂಲಸೌಕರ್ಯ ಹೊಂದಿರುವ ಗಡಿ ಗ್ರಾಮಗಳು ಸಾಮಾನ್ಯವಾಗಿ ಅಭಿವೃದ್ಧಿಯ ಲಾಭಗಳಿಂದ ಹೊರಗುಳಿಯುತ್ತವೆ. ಉತ್ತರದ ಗಡಿಯಲ್ಲಿರುವ ಅಂತಹ ಗ್ರಾಮಗಳನ್ನು ಹೊಸ ವೈಬ್ರಂಟ್ ವಿಲೇಜ್ ಕಾರ್ಯಕ್ರಮದ ಅಡಿಯಲ್ಲಿ ತರಲಾಗುತ್ತದೆ. ಗ್ರಾಮ ಮೂಲಸೌಕರ್ಯಗಳ ನಿರ್ಮಾಣ, ವಸತಿ, ಪ್ರವಾಸಿ ಕೇಂದ್ರಗಳು, ರಸ್ತೆ ಸಂಪರ್ಕ, ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನವನ್ನು ಒದಗಿಸುವುದು, ದೂರದರ್ಶನ ಮತ್ತು ಶೈಕ್ಷಣಿಕ ಚಾನಲ್‌ಗಳಿಗೆ ನೇರ ಮನೆ ಪ್ರವೇಶ ಮತ್ತು ಜೀವನೋಪಾಯದ ಉತ್ಪಾದನೆಗೆ ಬೆಂಬಲದಂತಹ ಚಟುವಟಿಕೆಗಳು ಇದರಲ್ಲಿರುತ್ತವೆ. ಈ ಚಟುವಟಿಕೆಗಳಿಗೆ ಹೆಚ್ಚುವರಿ ಹಣವನ್ನು ಒದಗಿಸಲಾಗುವುದು. ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಸಂಯೋಜಿಸಲಾಗುವುದು. ನಾವು ಅವುಗಳ ಫಲಿತಾಂಶಗಳನ್ನು ವ್ಯಾಖ್ಯಾನಿಸುತ್ತೇವೆ ಮತ್ತು ಅವುಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ” ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

ಮಹತ್ವಾಕಾಂಕ್ಷೆಯ ತಾಲ್ಲೂಕುಗಳ ಕಾರ್ಯಕ್ರಮ

2022-23ರಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವು ಪ್ರಮುಖ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯನ್ನು ತೋರಿಸದ ತಾಲ್ಲೂಕುಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಹೇಳಿದರು. “ಮಹತ್ವಾಕಾಂಕ್ಷೆ ಜಿಲ್ಲೆಗಳ ಕಾರ್ಯಕ್ರಮದ ಮೂಲಕ ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳ ನಾಗರಿಕರ ಜೀವನದ ಮಟ್ಟವನ್ನು ಸುಧಾರಿಸುವ ನಮ್ಮ ದೃಷ್ಟಿಕೋನವನ್ನು ಕಡಿಮೆ ಸಮಯದಲ್ಲಿ ಸಾಕಾರಗೊಳಿಸಲಾಗಿದೆ. ಆ 112 ಜಿಲ್ಲೆಗಳು ಶೇಕಡಾ 95 ರಷ್ಟು ಪ್ರಮುಖ ಕ್ಷೇತ್ರಗಳಾದ ಆರೋಗ್ಯ, ಪೋಷಣೆ, ಆರ್ಥಿಕ ಸೇರ್ಪಡೆ ಮತ್ತು ಮೂಲ ಸೌಕರ್ಯಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಅವುಗಳು ರಾಜ್ಯದ ಸರಾಸರಿ ಮೌಲ್ಯಗಳನ್ನು ಮೀರಿವೆ. ಆದರೆ, ಆ ಜಿಲ್ಲೆಗಳಲ್ಲಿ ಕೆಲವು ತಾಲ್ಲೂಕುಗಳು ಹಿಂದುಳಿದಿವೆ. 2022-23 ರಲ್ಲಿ, ಕಾರ್ಯಕ್ರಮವು ಆ ಜಿಲ್ಲೆಗಳಲ್ಲಿ ಅಂತಹ ತಾಲ್ಲೂಕುಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.” ಎಂದು ಹಣಕಾಸು ಸಚಿವರು ಹೇಳಿದರು.

***


(Release ID: 1794550) Visitor Counter : 340