ಗೃಹ ವ್ಯವಹಾರಗಳ ಸಚಿವಾಲಯ

ಆರೋಗ್ಯ ಸೌಲಭ್ಯಗಳಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಕೋವಿಡ್ -19 ಸೌಲಭ್ಯಗಳಲ್ಲಿ ಅಗ್ನಿ ಅನಾಹುತಗಳಾಗದಂತೆ ಖಚಿತಪಡಿಸಲು ಕ್ರಿಯಾ ಯೋಜನೆಯ ಅಗತ್ಯದ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗಮನ ಸೆಳೆದ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.)


ಕೋವಿಡ್ ಗಾಗಿಯೇ ಮೀಸಲಾಗಿರಿಸಿದ ಸೌಲಭ್ಯಗಳು ಸೇರಿದಂತೆ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಲ್ಲಿ ಅಡೆತಡೆರಹಿತ ವಿದ್ಯುತ್ ಪೂರೈಕೆ ಅಗತ್ಯದ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಮುಖವಾಗಿ ಸೂಚನೆ ನೀಡಿದ ಎಂ.ಎಚ್.ಎ.

Posted On: 05 MAY 2021 1:04PM by PIB Bengaluru

ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್..)ವು ಶಾರ್ಟ್ ಸರ್ಕ್ಯೂಟ್ ಗಳಿಂದಾಗಿ ಆಸ್ಪತ್ರೆಗಳಲ್ಲಿ ಮತ್ತು ನರ್ಸಿಂಗ್ ಹೋಮ್ ಗಳಲ್ಲಿ ಇತ್ತೀಚೆಗೆ ಸಂಭವಿಸಿರುವ ಅಗ್ನಿ ಅಕಸ್ಮಿಕಗಳ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರಕಾರಗಳ ಗಮನ ಸೆಳೆದಿದೆ.

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಇಂದು ರವಾನಿಸಿರುವ ಸೂಚನೆಗಳಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅವರು ಆರೋಗ್ಯ ಸೌಲಭ್ಯಗಳಲ್ಲಿ ಇತ್ತೀಚಿನ ಅಗ್ನಿ ಅಕಸ್ಮಿಕಗಳ ಹಿನ್ನೆಲೆಯಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಬೇಸಿಗೆ ಋತುವಿನ ಕಾರಣದಿಂದಾಗಿ ಹೆಚ್ಚಿನ ಉಷ್ಣಾಂಶದಿಂದ, ಆಂತರಿಕ ವಯರಿಂಗ್ ವ್ಯವಸ್ಥೆಯಲ್ಲಿ ಹೆಚ್ಚಿನ ಹೊರೆ ನಿರ್ವಹಣೆ ಮಾಡಲಾಗದ ಪರಿಸ್ಥಿತಿಯಿಂದ  ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತಿದೆ, ಅದರಿಂದಾಗಿ ಅಗ್ನಿ ಅಕಸ್ಮಿಕಗಳಾಗಿ ಜೀವಾಪಾಯ ಉಂಟಾಗುತ್ತಿರುವ ಬಗ್ಗೆ ಮತ್ತು ಅವಶ್ಯ ಮೂಲಸೌಕರ್ಯಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಸೂಚನೆಗಳಲ್ಲಿ ಕ್ರಿಯಾ ಯೋಜನೆಯ ಬಗ್ಗೆ ಗಮನ ಹರಿಸಬೇಕು  ಎಂದೂ ಹೇಳಲಾಗಿದೆ. ಸರಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಸೌಲಭ್ಯಗಳಲ್ಲಿ (ನಿರ್ದಿಷ್ಟವಾಗಿ ಕೋವಿಡ್ -19ಕ್ಕೆ ಮೀಸಲಾಗಿರುವ ಸೌಲಭ್ಯಗಳಲ್ಲಿ) ಯಾವುದೇ ಅಗ್ನಿ ಅಕಸ್ಮಿಕ ಸಂಭವಿಸದಂತೆ ಮುಂಜಾಗರೂಕತೆಯನ್ನು ವಹಿಸಲು ಕ್ರಿಯಾ ಯೋಜನೆಯನ್ನು ಜಾರಿಗೆ ತರುವಂತೆ ತಿಳಿಸಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ, ವಿದ್ಯುತ್ ಮತ್ತು ಅಗ್ನಿ ಇಲಾಖೆಗಳ ಅಧಿಕಾರಿಗಳ ಜೊತೆ ವಿವರವಾದ ಪರಾಮರ್ಶೆ ನಡೆಸುವಂತೆ ಕೋರಲಾಗಿದೆ ಮತ್ತು ಎಲ್ಲಾ ಆಸ್ಪತ್ರೆಗಳು ಹಾಗು ಆರೋಗ್ಯ ಸೌಲಭ್ಯಗಳಲ್ಲಿ ಅಗ್ನಿ ಸುರಕ್ಷಾ ಕ್ರಮಗಳನ್ನು ಖಾತ್ರಿಪಡಿಸುವಂತಹ ವಿವರವಾದ ಕ್ರಿಯಾ ಯೋಜನೆಯನ್ನು ತಯಾರಿಸುವಂತೆಯೂ ತಿಳಿಸಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿಯ ಕ್ಷೇತ್ರ ಮಟ್ಟದ ಅಧಿಕಾರಿಗಳು ಆರೋಗ್ಯ ಸೌಲಭ್ಯಗಳಿಗೆ ಭೇಟಿ ನೀಡಿ ಆಂತರಿಕ ವಯರಿಂಗ್ ಪರಿಶೀಲಿಸುವಂತೆ ಹಾಗು ಸುರಕ್ಷಾ ಮಾನದಂಡಗಳ ಅನ್ವಯ ಕಾರ್ಯಾಚರಣಾ ಸ್ಥಿತಿಯಲ್ಲಿರುವ ಸುರಕ್ಷಾ ಸಲಕರಣೆಗಳು ಲಭ್ಯ ಇರುವ ಬಗ್ಗೆ  ಮತ್ತು ಒಂದು ವೇಳೆ ವ್ಯತ್ಯಯಗಳು ಕಂಡು ಬಂದಿದ್ದಲ್ಲಿ ಅವಶ್ಯ ಪರಿಹಾರ ಕ್ರಮಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳುವ ಬಗ್ಗೆ ವಿವಿಧ ಸ್ಥರಗಳಲ್ಲಿ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡುವಂತೆಯೂ ಕೋರಲಾಗಿದೆ.

ಇತ್ತೀಚೆಗೆ ಎಂ.ಎಚ್.. ಮಹಾ ನಿರ್ದೇಶಕರು (ಅಗ್ನಿ ಶಾಮಕ ಸೇವೆಗಳು, ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ದಳ) ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಲ್ಲಿಯ ಅಗ್ನಿ ಸುರಕ್ಷೆಗೆ ಸಂಬಂಧಿಸಿ ನೀಡಿರುವ ಸಲಹಾ ನಿಯಮಾವಳಿಯ ಬಗ್ಗೆಯೂ ಗೃಹ ವ್ಯವಹಾರಗಳ ಸಚಿವಾಲಯವು ಗಮನ ಸೆಳೆದಿದೆ

ದೇಶಾದ್ಯಂತ ಕೋವಿಡ್ ಗಾಗಿಯೇ ಮೀಸಲಿರಿಸಿರುವ ಆರೋಗ್ಯ ಸೌಲಭ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ -19 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ಪ್ರಮುಖವಾಗಿ ಪ್ರಕಟಣೆಯಲ್ಲಿ ಪ್ರಸ್ತಾಪಿಸಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ, ಆಕ್ಸಿಜನ್ ಸವಲತ್ತು ಇರುವ ಹಾಸಿಗೆಗಳು, .ಸಿ.ಯು ಹಾಸಿಗೆಗಳು, ಮತ್ತು ವೆಂಟಿಲೇಟರುಗಳ ವ್ಯವಸ್ಥೆಗಳಲ್ಲಿ ಸಂಕೀರ್ಣ ರೀತಿಯ ಮಧ್ಯಪ್ರವೇಶ ಅವಶ್ಯ ಇರುತ್ತದೆ. ಆದುದರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಮತ್ತು ವೈದ್ಯಕೀಯ ಸೌಲಭ್ಯಗಳಲ್ಲಿ ನಿಯಮಿತವಾಗಿ 24*7 ಆಧಾರದಲ್ಲಿ ಅನಿರ್ಬಂಧಿತ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸುವುದು  ಬಹಳ ಮುಖ್ಯ ಎಂದು  ಸೂಚನೆಗಳಲ್ಲಿ ಹೇಳಲಾಗಿದೆ.

ಪ್ರಕಟಣೆಯಲ್ಲಿ ಪ್ರತಿಯೊಂದು ಜೀವವನ್ನು ಉಳಿಸುವುದು ಆದ್ಯತೆಯಾಗಬೇಕು ಎಂಬುದನ್ನು ಒತ್ತಿ ಹೇಳಲಾಗಿದೆಯಲ್ಲದೆ, ಸಮರ್ಪಕ ಆರೋಗ್ಯ ರಕ್ಷಣಾ ಸೇವೆಯನ್ನು ಕೋವಿಡ್ -19 ರೋಗಿಗಳಿಗೆ ಒದಗಿಸುವಲ್ಲಿ ಯಾವುದೇ ತೊಂದರೆಗಳುಂಟಾಗದಂತೆ ನೋಡಿಕೊಳ್ಳಲು ಯಾವುದೇ ದುರ್ಘಟನೆಯಾಗುವುದನ್ನು ತಪ್ಪಿಸಲು ಅವಶ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವುದನ್ನು ಖಾತ್ರಿಪಡಿಸುವಂತೆ ತಿಳಿಸಲಾಗಿದೆ.

***


(Release ID: 1716204) Visitor Counter : 285