ಪ್ರಧಾನ ಮಂತ್ರಿಯವರ ಕಛೇರಿ

ಔಷಧ ಉದ್ಯಮದ ಮುಖಂಡರೊಂದಿಗೆ ಪ್ರಧಾನಿ ಸಂವಾದ

Posted On: 19 APR 2021 8:08PM by PIB Bengaluru

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಔಷಧ ಉದ್ಯಮದ ಮುಖಂಡರೊಂದಿಗೆ ಸಂವಾದ ನಡೆಸಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಫಾರ್ಮಾ ಕ್ಷೇತ್ರವು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಪ್ರಧಾನಿಯವರು ಶ್ಲಾಘಿಸಿದರು.

ಸವಾಲಿನ ಪರಿಸ್ಥಿತಿಯಲ್ಲಿಯೂ ಫಾರ್ಮಾ ಉದ್ಯಮದ ಕಾರ್ಯನಿರ್ವಹಣಾ ವಿಧಾನದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಔಷಧ ಉದ್ಯಮದ ಪರಿಶ್ರಮದಿಂದಾಗಿ ಇಂದು ಭಾರತವನ್ನು ವಿಶ್ವದ ಫಾರ್ಮಸಿಎಂದು ಗುರುತಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಸಾಂಕ್ರಾಮಿಕದ ಸಮಯದಲ್ಲಿ ವಿಶ್ವದ 150 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಿಗಳು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ಹೇಳಿದರು. ಎಲ್ಲಾ ಸವಾಲುಗಳ ನಡುವೆಯೂ, ಭಾರತದ ಔಷಧ ಉದ್ಯಮವು ಕಳೆದ ವರ್ಷ ರಫ್ತುಗಳಲ್ಲಿ ಶೇ 18 ರಷ್ಟು ಬೆಳವಣಿಗೆಯನ್ನು ದಾಖಲಿಸಿರುವುದು ಅದರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು.

ವೈರಸ್ ಎರಡನೇ ಅಲೆ ಮತ್ತು ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯ ಬಗ್ಗೆ ಗಮನ ಸೆಳೆದ ಪ್ರಧಾನಿಯವರು, ಹಲವಾರು ಅಗತ್ಯ ಔಷಧಿಗಳ ಉತ್ಪಾದನೆಯನ್ನು ಹೆಚ್ಚಿಸಲು ಮಾಡಿರುವ ಪ್ರಯತ್ನಕ್ಕಾಗಿ ಫಾರ್ಮಾ ಉದ್ಯಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರೆಮ್ಡೆಸಿವಿರ್ ನಂತಹ ಚುಚ್ಚುಮದ್ದಿನ ಬೆಲೆಯನ್ನು ಕಡಿಮೆ ಮಾಡಿದ್ದಕ್ಕಾಗಿ ಅವರು ಫಾರ್ಮಾ ಉದ್ಯಮದ ಮುಖಂಡರನ್ನು ಶ್ಲಾಘಿಸಿದರು. ಔಷಧಿಗಳು ಮತ್ತು ಅಗತ್ಯ ವೈದ್ಯಕೀಯ ಸಾಧನಗಳ ಪೂರೈಕೆ ಸುಗಮವಾಗಿ ನಡೆಯಲು, ಔಷಧ ಉದ್ಯಮವು ತಡೆರಹಿತ ಪೂರೈಕೆ ಸರಪಳಿಗಳನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಪ್ರಧಾನಿಯವರು ಕರೆಕೊಟ್ಟರು. ಲಾಜಿಸ್ಟಿಕ್ಸ್, ಸಾರಿಗೆಯಂತಹ ಸೌಲಭ್ಯಗಳಿಗೆ ಸರ್ಕಾರ ಬೆಂಬಲ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.

ಕೋವಿಡ್ ಜೊತೆಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ಆರೋಗ್ಯದ ಅಪಾಯಗಳ  ಬಗ್ಗೆ ಉದ್ಯಮವು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದ ಅವರು. ಇದು ವೈರಸ್ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಫಾರ್ಮಾ ಉದ್ಯಮದ ಸಹಕಾರವನ್ನು ಕೋರಿದ ಪ್ರಧಾನಿಯವರು, ಹೊಸ ಔಷಧಗಳು ಮತ್ತು ನಿಯಂತ್ರಕ ಪ್ರಕ್ರಿಯೆಗಳಲ್ಲಿ ಸರ್ಕಾರ ಸುಧಾರಣೆಗಳನ್ನು ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.

ಸರ್ಕಾರ ನೀಡಿದ ಸಕ್ರಿಯ ನೆರವು ಮತ್ತು ಬೆಂಬಲದ ಬಗ್ಗೆ ಫಾರ್ಮಾ ಉದ್ಯಮದ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ಪಾದನೆ ಮತ್ತು ಔಷಧಿಗಳ ಲಭ್ಯತೆಯನ್ನು ಖಾತರಿಪಡಿಸುವಲ್ಲಿ ಕಳೆದ ಒಂದು ವರ್ಷದಿಂದ ಮಾಡಿದ ಪ್ರಯತ್ನಗಳನ್ನು ಅವರು ವಿವರಿಸಿದರು. ಉತ್ಪಾದನೆ, ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಪೂರಕ ಸೇವೆಗಳಿಗಾಗಿ ಫಾರ್ಮಾ ಹಬ್ಗಳಲ್ಲಿನ ಕಾರ್ಯಾಚರಣೆಯನ್ನು ಗರಿಷ್ಠ ಮಟ್ಟದಲ್ಲಿ ನಿರ್ವಹಿಸಲಾಗುತ್ತಿದೆ. ಕೋವಿಡ್ ಚಿಕಿತ್ಸಾ ಶಿಷ್ಟಾಚಾರದಲ್ಲಿ ಕೆಲವು ಔಷಧಿಗಳ ಬೇಡಿಕೆಯಲ್ಲಿ ಅಸಾಧಾರಣ ಹೆಚ್ಚಳದ ಹೊರತಾಗಿಯೂ, ದೇಶದ ಒಟ್ಟಾರೆ ಔಷಧಿ ಬೇಡಿಕೆಯನ್ನು ಪೂರೈಸಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಉದ್ಯಮದ ಮುಖಂಡರು ವಿವರಿಸಿದರು.

ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಶ್ರೀ ಹರ್ಷವರ್ಧನ್, ಆರೋಗ್ಯ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ವಿ.ಕೆ. ಪಾಲ್, ನೀತಿ ಆಯೋಗದ (ಆರೋಗ್ಯ) ಸದಸ್ಯ, ಸಂಪುಟ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ, ಕೇಂದ್ರ ಔಷಧ ಕಾರ್ಯದರ್ಶಿ, ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ, ಕೇಂದ್ರ ಸರ್ಕಾರದ ಸಚಿವಾಲಯಗಳು / ಇಲಾಖೆಗಳ ಇತರ ಅಧಿಕಾರಿಗಳು ಭಾಗವಹಿಸಿದ್ದರು.

***


(Release ID: 1712775) Visitor Counter : 239