ಪ್ರಧಾನ ಮಂತ್ರಿಯವರ ಕಛೇರಿ
ದೆಹಲಿಯ ಮೆಟ್ರೋ ನೇರಳೆ ಮಾರ್ಗದಲ್ಲಿ ಚಾಲಕ ರಹಿತ ರೈಲು ಕಾರ್ಯಾಚರಣೆ ಉದ್ಘಾಟನೆ ವೇಳೆ ಪ್ರಧಾನಿ ಭಾಷಣ
Posted On:
28 DEC 2020 1:29PM by PIB Bengaluru
ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಹರ್ ದೀಪ್ ಸಿಂಗ್ ಪುರಿ ಜಿ, ದೆಹಲಿಯ ಮುಖ್ಯಮಂತ್ರಿಯವರಾದ ಶ್ರೀ ಅರವಿಂದ್ ಕೇಜ್ರಿವಾಲ್ ಜಿ, ಡಿಎಂಆರ್ ಸಿ ಯ ವ್ಯವಸ್ಥಾಪಕ ನಿರ್ದೇಶಕರಾದ ಮಂಗು ಸಿಂಗ್ ಜಿ, ದೇಶದಲ್ಲಿ ನಡೆಯುತ್ತಿರುವ ಮೆಟ್ರೋ ಯೋಜನೆಗಳ ಹಿರಿಯ ಅಧಿಕಾರಿಗಳು ಮತ್ತು ನನ್ನ ಆತ್ಮೀಯ ಸಹೋದರ ಸಹೋದರಿಯರೇ.
ಸುಮಾರು ಮೂರು ವರ್ಷಗಳ ಹಿಂದೆ ಮೆಜೆಂಟಾ ಮಾರ್ಗವನ್ನು ಉದ್ಘಾಟಿಸುವ ಭಾಗ್ಯ ನನಗೆ ಸಿಕ್ಕಿತ್ತು. ಇಂದು, ಅದೇ ಮಾರ್ಗದಲ್ಲಿ, ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಮೆಟ್ರೊವನ್ನು ಉದ್ಘಾಟಿಸಲು ನನಗೆ ಅವಕಾಶ ಸಿಕ್ಕಿದೆ, ಇದನ್ನು ನಾವು ಆಡುಮಾತಿನಲ್ಲಿ 'ಡ್ರೈವರ್‌ಲೆಸ್ ಮೆಟ್ರೋ' ಎಂದೂ ಕರೆಯುತ್ತೇವೆ. ಭಾರತವು ಸ್ಮಾರ್ಟ್ ಸಿಸ್ಟಮ್ ಕಡೆಗೆ ಎಷ್ಟು ವೇಗವಾಗಿ ಸಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಇಂದು, ದೆಹಲಿ ಮೆಟ್ರೋ ರಾಷ್ಟ್ರೀಯ ಕಾಮನ್ ಮೊಬಿಲಿಟಿ ಕಾರ್ಡ್‌ನೊಂದಿಗೆ ಸಂಪರ್ಕವನ್ನು ಪಡೆಯುತ್ತಿದೆ. ಇದು ಕಳೆದ ವರ್ಷ ಅಹಮದಾಬಾದ್‌ನಿಂದ ಪ್ರಾರಂಭವಾಯಿತು. ಇಂದು, ಇದನ್ನು ದೆಹಲಿ ಮೆಟ್ರೋದ ಏರ್ ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗಕ್ಕೆ ವಿಸ್ತರಿಸಲಾಗುತ್ತಿದೆ. ಇಂದಿನ ಸಮಾರಂಭವು ನಗರದ ಅಭಿವೃದ್ಧಿಗಾಗಿ, ನಗರೀಕರಣಕ್ಕೆ ಮತ್ತು ಭವಿಷ್ಯವನ್ನು ಸಿದ್ಧಪಡಿಸುವ ಪ್ರಯತ್ನವಾಗಿದೆ.
ಸ್ನೇಹಿತರೇ,
ಭವಿಷ್ಯದ ಅವಶ್ಯಕತೆಗಳಿಗಾಗಿ ಇಂದು ದೇಶವನ್ನು ಸಿದ್ಧಪಡಿಸುವುದು ಮತ್ತು ಇಂದು ಕೆಲಸವನ್ನು ಮಾಡುವುದು ಆಡಳಿತದ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ ಕೆಲವು ದಶಕಗಳ ಹಿಂದೆ, ನಗರೀಕರಣದ ಪರಿಣಾಮ ಮತ್ತು ಭವಿಷ್ಯವು ಸ್ಪಷ್ಟವಾಗಿ ಗೋಚರವಾಗಿದ್ದಾಗ, ದೇಶವು ಸಂಪೂರ್ಣವಾಗಿ ವಿಭಿನ್ನ ಮನೋಭಾವವನ್ನು ಕಂಡಿತು. ಭವಿಷ್ಯದ ಅಗತ್ಯತೆಗಳ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ, ಅರೆಮನಸ್ಸಿನಿಂದ ಕೆಲಸಗಳನ್ನು ಮಾಡಲಾಯಿತು ಮತ್ತು ಗೊಂದಲದ ಸ್ಥಿತಿ ಇತ್ತು. ಆ ಸಮಯದಲ್ಲಿ ತೀವ್ರ ನಗರೀಕರಣವಾಗುತ್ತಿತ್ತು, ಆದರೆ ನಮ್ಮ ನಗರಗಳನ್ನು ಅದರ ಪರಿಣಾಮಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿರಲಿಲ್ಲ. ಇದರ ಪರಿಣಾಮವಾಗಿ ದೇಶದ ಅನೇಕ ಭಾಗಗಳಲ್ಲಿ ನಗರದ ಮೂಲಸೌಕರ್ಯಗಳ ಬೇಡಿಕೆ ಮತ್ತು ಪೂರೈಕೆ ನಡುವೆ ದೊಡ್ಡ ಅಂತರವೇರ್ಪಟ್ಟಿತು.
ಸ್ನೇಹಿತರೇ,
ಈ ಚಿಂತನೆಯಂತಲ್ಲದೆ, ಆಧುನಿಕೀಕರಣದ ಚಿಂತನೆಯು ನಗರೀಕರಣವನ್ನು ಒಂದು ಸವಾಲಾಗಿ ನೋಡದೆ ಅದನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಹೇಳುತ್ತದೆ. ಇದು ದೇಶದಲ್ಲಿ ಉತ್ತಮ ಮೂಲಸೌಕರ್ಯಗಳನ್ನು ನಾವು ರಚಿಸುವ ಅವಕಾಶ! ನಾವು ಜೀವನದ ಸುಲಭತೆಯನ್ನು ಸುಧಾರಿಸುವ ಅವಕಾಶ! ಈ ಚಿಂತನೆಯ ಈ ವ್ಯತ್ಯಾಸವು ನಗರೀಕರಣದ ಪ್ರತಿಯೊಂದು ಆಯಾಮದಲ್ಲೂ ಪ್ರತಿಫಲಿಸುತ್ತದೆ. ದೇಶದಲ್ಲಿ ಮೆಟ್ರೋ ರೈಲು ನಿರ್ಮಾಣವೂ ಒಂದು ಉದಾಹರಣೆಯಾಗಿದೆ. ಮೆಟ್ರೊವನ್ನು ದೆಹಲಿಯಲ್ಲಿ ಹಲವು ವರ್ಷಗಳಿಂದ ಚರ್ಚಿಸಿಕೊಂಡೇ ಬರಲಾಯಿತು. ಆದರೆ ಮೊದಲ ಮೆಟ್ರೋ ಓಡಿದ್ದು ಅಟಲ್ ಜಿ ಅವರ ಪ್ರಯತ್ನದಿಂದಾಗಿ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಮೆಟ್ರೋ ಸೇವೆಯ ಅನೇಕ ತಜ್ಞರಿಗೂ ಮೆಟ್ರೊ ನಿರ್ಮಾಣದ ಸ್ಥಿತಿ ಏನಾಗಿತ್ತು ಎಂದು ಚೆನ್ನಾಗಿ ತಿಳಿದಿದೆ.
ಸ್ನೇಹಿತರೇ,
2014 ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಕೇವಲ ಐದು ನಗರಗಳಲ್ಲಿ ಮಾತ್ರ ಮೆಟ್ರೊ ರೈಲು ಇತ್ತು. ಇಂದು, 18 ನಗರಗಳಲ್ಲಿ ಮೆಟ್ರೋ ರೈಲು ಸೇವೆ ಇದೆ. 2025 ರ ಹೊತ್ತಿಗೆ ನಾವು ಅದನ್ನು 25 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲಿದ್ದೇವೆ. 2014 ರಲ್ಲಿ ದೇಶದಲ್ಲಿ ಕೇವಲ 248 ಕಿಲೋಮೀಟರ್ ಮೆಟ್ರೋ ಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದವು. ಇಂದು, ಇದು ಸುಮಾರು ಮೂರು ಪಟ್ಟು, ಅಂದರೆ 700 ಕಿಲೋಮೀಟರ್ಗಳಿಗಿಂತ ಹೆಚ್ಚಾಗಿವೆ. 2025 ರ ಹೊತ್ತಿಗೆ ಅದನ್ನು 1700 ಕಿಲೋಮೀಟರ್‌ಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. 2014 ರಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನಕ್ಕೆ 17 ಲಕ್ಷವಿತ್ತು. ಈಗ, ಈ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಈಗ ಪ್ರತಿದಿನ 85 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣ ಮಾಡುತ್ತಾರೆ. ನೆನಪಿಡಿ, ಇವು ಕೇವಲ ಅಂಕಿ ಅಂಶಗಳಲ್ಲ; ಇವು ಲಕ್ಷಾಂತರ ಭಾರತೀಯರ ಜೀವನದಲ್ಲಿ ಅನುಕೂಲಕರವಾಗಿ ಬದುಕುವ ಪುರಾವೆಗಳಾಗಿವೆ. ಇವು ಕೇವಲ ಇಟ್ಟಿಗೆ ಕಲ್ಲುಗಳು, ಕಾಂಕ್ರೀಟ್ ಮತ್ತು ಕಬ್ಬಿಣದಿಂದ ಮಾಡಿದ ಮೂಲಸೌಕರ್ಯಗಳಲ್ಲ, ಆದರೆ ನಾಗರಿಕರ ಮತ್ತು ದೇಶದ ಮಧ್ಯಮ ವರ್ಗದವರ ಆಕಾಂಕ್ಷೆಯು ಪೂರೈಸಿರುವುದರ ಸಾಕ್ಷಿಯಾಗಿದೆ.
ಸ್ನೇಹಿತರೇ,
ಹಾಗಾದರೆ, ಈ ಬದಲಾವಣೆಗಳು ಹೇಗೆ ಬಂದವು? ಅದೇ ಅಧಿಕಾರವರ್ಗ, ಅದೇ ಜನರು , ಹಾಗಾದರೆ ಕೆಲಸಗಳು ಹೇಗೆ ಇಷ್ಟು ವೇಗವಾಗಿ ನಡೆಯಿತು? ಏಕೆಂದರೆ ನಾವು ನಗರೀಕರಣವನ್ನು ಸಮಸ್ಯೆಯೆಂದುಕೊಳ್ಳದೆ ಅದನ್ನು ಒಂದು ಅವಕಾಶವನ್ನಾಗಿ ಕಂಡೆವು. ಈ ಮೊದಲು ನಮ್ಮ ದೇಶದಲ್ಲಿ ಮೆಟ್ರೊ ಬಗ್ಗೆ ಯಾವುದೇ ನೀತಿ ಇರಲಿಲ್ಲ. ಯಾವುದೇ ನಾಯಕರು ಎಲ್ಲೋ ಭರವಸೆ ನೀಡುತ್ತಾರೆ, ಯಾವುದೇ ಸರ್ಕಾರವು ಯಾರನ್ನಾದರೂ ತೃಪ್ತಿಪಡಿಸಲು ಮೆಟ್ರೋ ಸೌಲಭ್ಯವನ್ನು ಘೋಷಿಸುತ್ತದೆ. ನಮ್ಮ ಸರ್ಕಾರವು ಈ ಓಲೈಕೆಯ ಘೋಷಣೆಯ ಮನೋಭಾವದಿಂದ ಹೊರಬರುವ ಮೂಲಕ ಮೆಟ್ರೊ ಕುರಿತು ಒಂದು ನೀತಿಯನ್ನು ರೂಪಿಸಿತು ಮತ್ತು ಅದನ್ನು ಸರ್ವತೋಮುಖ ಕಾರ್ಯತಂತ್ರದಿಂದ ಜಾರಿಗೆ ತಂದಿತು. ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ಕೆಲಸ ಮಾಡಲು ನಾವು ಒತ್ತು ನೀಡಿದ್ದೇವೆ, ಸ್ಥಳೀಯ ಮಾನದಂಡಗಳನ್ನು ಉತ್ತೇಜಿಸಲು ನಾವು ಒತ್ತು ನೀಡಿದ್ದೇವೆ, ಮೇಕ್ ಇನ್ ಇಂಡಿಯಾದ ಹೆಚ್ಚಿನ ವಿಸ್ತರಣೆಗೆ ನಾವು ಒತ್ತು ನೀಡಿದ್ದೇವೆ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಗೆ ನಾವು ಒತ್ತು ನೀಡಿದ್ದೇವೆ.
ಸ್ನೇಹಿತರೇ,
ದೇಶದ ವಿವಿಧ ನಗರಗಳು ವಿಭಿನ್ನ ಅಗತ್ಯತೆಗಳು, ಆಕಾಂಕ್ಷೆಗಳು ಮತ್ತು ಸವಾಲುಗಳನ್ನು ಹೊಂದಿವೆ ಎಂದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ನಾವು ಒಂದೇ ಮಾದರಿಯಲ್ಲಿ ಮೆಟ್ರೋ ರೈಲು ಚಲಾಯಿಸಬೇಕಾದರೆ, ಅದರ ಶೀಘ್ರ ವಿಸ್ತರಣಾ ಕಾರ್ಯವು ಸಾಧ್ಯವಾಗಲಿಲ್ಲ. ಮೆಟ್ರೊ ವಿಸ್ತರಣೆ ಮತ್ತು ಆಧುನಿಕ ಸಾರಿಗೆ ವಿಧಾನಗಳ ಬಳಕೆಯನ್ನು ನಗರದ ಜನರ ಅಗತ್ಯತೆ ಮತ್ತು ಅಲ್ಲಿನ ವೃತ್ತಿಪರ ಜೀವನಶೈಲಿಗೆ ಅನುಗುಣವಾಗಿ ಮಾಡಬೇಕು ಎನ್ನುವುದನ್ನು ನಾವು ಗಮನಿಸಿದ್ದೇವೆ. ಅದಕ್ಕಾಗಿಯೇ ವಿವಿಧ ನಗರಗಳಲ್ಲಿ ವಿಭಿನ್ನ ಮೆಟ್ರೋ ಹಳಿಗಳನ್ನು ನಿರ್ಮಿಸಲಾಗುತ್ತಿದೆ. ನಾನು ನಿಮಗೆ ಕೆಲವು ಉದಾಹರಣೆಗಳನ್ನು ನೀಡುತ್ತೇನೆ - ಆರ್‌ಆರ್‌ಟಿಎಸ್ ಅಂದರೆ, ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ದೆಹಲಿ-ಮೀರತ್ ಆರ್‌ಆರ್‌ಟಿಎಸ್‌ನ ಭವ್ಯವಾದ ಮಾದರಿಯು ದೆಹಲಿ ಮತ್ತು ಮೀರತ್ ನಡುವಿನ ಅಂತರವನ್ನು ಒಂದು ಗಂಟೆಗಿಂತ ಕಡಿಮೆ ಮಾಡುತ್ತದೆ.
ಮೆಟ್ರೋ ಲೈಟ್ - ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ನಗರಗಳಲ್ಲಿ ಮೆಟ್ರೋ ಲೈಟ್ ಆವೃತ್ತಿಯನ್ನು ರೂಪಿಸಲಾಗುತ್ತಿದೆ. ಇದು ಸಾಮಾನ್ಯ ಮೆಟ್ರೊದ ಶೇಕಡಾ 40ರ ವೆಚ್ಚದಲ್ಲಿ ಸಿದ್ಧವಾಗಿದೆ. ಮೆಟ್ರೋ ನಿಯೋ - ಪ್ರಯಾಣಿಕರು ಇನ್ನೂ ಕಡಿಮೆ ಇರುವ ನಗರಗಳಲ್ಲಿ ಮೆಟ್ರೋ ನಿಯೋ ಕೆಲಸ ನಡೆಯುತ್ತಿದೆ. ಇದು ಸಾಮಾನ್ಯ ಮೆಟ್ರೊದ ಶೇಕಡಾ 25ರ ವೆಚ್ಚದಲ್ಲಿ ಸಿದ್ಧವಾಗಿದೆ. ಹಾಗೆಯೇ, ವಾಟರ್ ಮೆಟ್ರೋ ಇದೆ - ಇದು ಒಂದು ವಿಭಿನ್ನ ಆಲೋಚನೆಯ ಒಂದು ಉದಾಹರಣೆಯಾಗಿದೆ. ದೊಡ್ಡ ಜಲಮೂಲಗಳಿರುವ ನಗರಗಳಿಗೆ ಈಗ ವಾಟರ್ ಮೆಟ್ರೋ ಸಿದ್ಧಪಡಿಸಲಾಗುತ್ತಿದೆ. ಇದು ನಗರಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಹತ್ತಿರವಿರುವ ದ್ವೀಪಗಳ ಜನರಿಗೆ ಸಂಪರ್ಕದ ಪ್ರಯೋಜನಗಳನ್ನು ನೀಡುತ್ತದೆ. ಕೊಚ್ಚಿಯಲ್ಲಿ ಈ ಕೆಲಸ ಶೀಘ್ರಗತಿಯಲ್ಲಿ ಸಾಗುತ್ತಿದೆ.
ಸ್ನೇಹಿತರೇ,
ಮೆಟ್ರೋ ಇಂದು ಕೇವಲ ಸಾರ್ವಜನಿಕ ಸಾರಿಗೆ ಸೌಲಭ್ಯವಾಗಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಇದು ಮಾಲಿನ್ಯವನ್ನು ಕಡಿಮೆ ಮಾಡುವ ಅತ್ಯುತ್ತಮ ಸಾಧನವಾಗಿದೆ. ಮಾಲಿನ್ಯ ಮತ್ತು ಮೆಟ್ರೋ ನೆಟ್‌ವರ್ಕ್‌ನಿಂದಾಗಿ ಟ್ರಾಫಿಕ್ ಜಾಮ್‌ಗೆ ಕಾರಣವಾದ ಸಾವಿರಾರು ವಾಹನಗಳು ರಸ್ತೆಗಳಿಗೆ ಇಳಿಯುವುದು ಇಲ್ಲವಾಗಿದೆ.
ಸ್ನೇಹಿತರೇ,
ಮೆಟ್ರೋ ಸೇವೆಗಳ ವಿಸ್ತರಣೆಗಾಗಿ ಮೇಕ್ ಇನ್ ಇಂಡಿಯಾ ಕೂಡ ಅಷ್ಟೇ ಮುಖ್ಯವಾಗಿದೆ. ಮೇಕ್ ಇನ್ ಇಂಡಿಯಾ ವೆಚ್ಚವನ್ನು ಕಡಿಮೆ ಮಾಡುತ್ತದೆ, ವಿದೇಶಿ ವಿನಿಮಯವನ್ನು ಉಳಿಸುತ್ತದೆ ಮತ್ತು ದೇಶದ ಜನರಿಗೆ ಹೆಚ್ಚಿನ ಉದ್ಯೋಗಗಳು ಸಿಗುತ್ತವೆ. ರೈಲ್ವೇ ಉತ್ಪನ್ನಗಳ ಪ್ರಮಾಣೀಕರಣದಿಂದ ಭಾರತೀಯ ತಯಾರಕರು ಲಾಭ ಪಡೆದಿದ್ದರೆ, ಪ್ರತಿ ಕೋಚ್‌ನ ವೆಚ್ಚವು ಈಗ ರೂ. 12 ಕೋಟಿಯಿಂದ ರೂ. 8 ಕೋಟಿಗೆ ಇಳಿದಿದೆ.
ಸ್ನೇಹಿತರೇ,
ಇಂದು, ನಾಲ್ಕು ದೊಡ್ಡ ಕಂಪನಿಗಳು ದೇಶದಲ್ಲಿ ಮೆಟ್ರೋ ಬೋಗಿಗಳನ್ನು ನಿರ್ಮಿಸುತ್ತಿವೆ. ಮೆಟ್ರೊಗೆ ಸಂಬಂಧಪಟ್ಟ ವಸ್ತುಗಳನ್ನು ನಿರ್ಮಿಸುವಲ್ಲಿ ಹಲವಾರು ಕಂಪನಿಗಳು ತೊಡಗಿಕೊಂಡಿವೆ. ಇದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಸಹಾಯ ಮಾಡುತ್ತಿದೆ.
ಸ್ನೇಹಿತರೇ,
ಆಧುನಿಕ ತಂತ್ರಜ್ಞಾನದ ಬಳಕೆಯು ಈಗಿನಅವಶ್ಯಕತೆಯಾಗಿದೆ. ಈಗ, ಚಾಲಕರಹಿತ ಮೆಟ್ರೋ ರೈಲು ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿದೆ. ಇಂದು ಈ ಸಾಧನೆಯೊಂದಿಗೆ, ಅಂತಹ ಸೌಲಭ್ಯವಿರುವ ವಿಶ್ವದ ಆಯ್ದ ದೇಶಗಳಿಗೆ ನಮ್ಮ ದೇಶ ಸೇರಿದೆ. ನಾವು ಬ್ರೇಕಿಂಗ್ ಸಿಸ್ಟಮ್ ಅನ್ನು ಸಹ ಪ್ರಯೋಗಿಸುತ್ತಿದ್ದೇವೆ, ಇದರಲ್ಲಿ ಬ್ರೇಕ್ಗಳಲ್ಲಿ ಬಿಡುಗಡೆಯಾಗುವ ಶೇಕಡಾ 50 ರಷ್ಟು ಶಕ್ತಿಯು ಗ್ರಿಡ್ಗೆ ಹಿಂತಿರುಗುತ್ತದೆ. ಇಂದು, ಮೆಟ್ರೋ ರೈಲುಗಳಲ್ಲಿ 130 ಮೆಗಾವ್ಯಾಟ್ ಸೌರಶಕ್ತಿ ಬಳಸಲಾಗುತ್ತಿದ್ದು, ಇದನ್ನು 600 ಮೆಗಾವ್ಯಾಟ್‌ಗೆ ಹೆಚ್ಚಿಸಲಾಗುವುದು. ಕೃತಕ ಬುದ್ಧಿಮತ್ತೆಯನ್ನು ಹೊಂದಿದ ಪ್ಲ್ಯಾಟ್‌ಫಾರ್ಮ್‌ಗಳು ಮತ್ತು ಸ್ಕ್ರೀನಿಂಗ್ ಬಾಗಿಲುಗಳಂತಹ ಆಧುನಿಕ ತಂತ್ರಜ್ಞಾನಗಳ ಮೇಲೆ ಕೆಲಸವು ವೇಗವಾಗಿ ನಡೆಯುತ್ತಿದೆ.
ಸ್ನೇಹಿತರೇ,
ಆಧುನೀಕರಣಕ್ಕೆ ಒಂದೇ ರೀತಿಯ ಮಾನದಂಡಗಳು ಮತ್ತು ಸೌಲಭ್ಯಗಳನ್ನು ಒದಗಿಸುವುದು ಬಹಳ ಮುಖ್ಯ. ರಾಷ್ಟ್ರಮಟ್ಟದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಈ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್‌ನ ಗುರಿ ಬಹಳ ಸ್ಪಷ್ಟವಾಗಿದೆ. ಈ ಕಾರ್ಡ್ ನೀವು ಪ್ರಯಾಣಿಸುವಲ್ಲೆಲ್ಲಾ ಸಮಗ್ರ ಪ್ರವೇಶವನ್ನು ನೀಡುತ್ತದೆ ಮತ್ತು ಯಾವುದೇ ರೀತಿಯ ಸಾರ್ವಜನಿಕ ಸಾರಿಗೆಯನ್ನು ಬಳಸಲು ಸಹಾಯ ಮಾಡುತ್ತದೆ. ಅಂದರೆ, ಎಲ್ಲಾ ಕಡೆ ಒಂದೇ ಕಾರ್ಡ್ ಸಾಕು. ಇದು ಎಲ್ಲೆಡೆ ಅನ್ವಯವಾಗುತ್ತದೆ.
ಸ್ನೇಹಿತರೇ,
ಮೆಟ್ರೊದಲ್ಲಿ ಪ್ರಯಾಣಿಸುವವರಿಗೆ ಟೋಕನ್ ತೆಗೆದುಕೊಳ್ಳಲು ಎಷ್ಟು ಸಮಯ ಕ್ಯೂನಲ್ಲಿ ನಿಲ್ಲಬೇಕಾಗಿತ್ತು ಎಂದು ತಿಳಿದಿದೆ. ಕಚೇರಿಗೆ ಅಥವಾ ಕಾಲೇಜನ್ನು ತಲುಪಲು ತಡವಾಗುತ್ತಿದ್ದರೆ ನಂತರ ಟಿಕೆಟನ್ನು ಪಡೆಯುವ ಜಂಜಾಟವಿರುತ್ತದೆ. ಒಮ್ಮೆ ನೀವು ಮೆಟ್ರೊದಿಂದ ಹೊರಬಂದ ನಂತರ ಬಸ್ ಟಿಕೆಟ್ ಖರೀದಿಸಬೇಕು. ಇಂದು, ಪ್ರತಿಯೊಬ್ಬರಿಗೂ ಸಮಯದ ಕೊರತೆಯಿರುವಾಗ, ಪ್ರಯಾಣದಲ್ಲಿ ಸಮಯವನ್ನು ಕಳೆದುಕೊಳ್ಳಲಾಗುವುದಿಲ್ಲ. ಅಂತಹ ತೊಂದರೆಗಳು ದೇಶದ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಇರಬಾರದು ಎಂದು ಖಚಿತಪಡಿಸಿಕೊಳ್ಳಲು ನಾವು ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ.
ಸ್ನೇಹಿತರೇ,
ದೇಶದ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ದೇಶದ ಅಭಿವೃದ್ಧಿಯಲ್ಲಿ ಸರಿಯಾಗಿ ಬಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂದು, ಎಲ್ಲಾ ವ್ಯವಸ್ಥೆಗಳನ್ನು ಕ್ರೋಡೀಕರಿಸುವ ಮೂಲಕ ದೇಶದ ಬಲವನ್ನು ಹೆಚ್ಚಿಸಲಾಗುತ್ತಿದೆ. ಏಕ್ ಭಾರತ್-ಶ್ರೇಷ್ಠ ಭಾರತ್ ಬಲಗೊಳ್ಳುತ್ತಿದೆ. ಒನ್ ನೇಷನ್ ಮತ್ತು ಒನ್ ಮೊಬಿಲಿಟಿ ಕಾರ್ಡ್‌ನಂತೆ, ನಮ್ಮ ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿ ದೇಶದ ವ್ಯವಸ್ಥೆಗಳನ್ನು ಕ್ರೋಢೀಕರಿಸಲು ಅನೇಕ ಕೆಲಸಗಳನ್ನು ಮಾಡಿದೆ. ಒನ್ ನೇಷನ್, ಒನ್ ಫಾಸ್ಟ್ಯಾಗ್ ದೇಶಾದ್ಯಂತ ಹೆದ್ದಾರಿಗಳಲ್ಲಿ ತಡೆರಹಿತ ಪ್ರಯಾಣವನ್ನು ಖಚಿತಪಡಿಸಿದೆ. ಅನಗತ್ಯ ಹಸ್ತಕ್ಷೇಪ ನಿಲ್ಲಿಸಿದೆ. ಜಾಮ್ಗಳಿಂದ ಪರಿಹಾರ ಸಿಕ್ಕಿದೆ, ದೇಶದ ಸಮಯ ಮತ್ತು ವಿಳಂಬದಿಂದ ಉಂಟಾಗುವ ನಷ್ಟವನ್ನು ಕಡಿಮೆ ಮಾಡಲಾಗಿದೆ. ಒನ್ ನೇಷನ್, ಒನ್ ಟ್ಯಾಕ್ಸ್, ಅಂದರೆ, ಜಿಎಸ್ಟಿ ದೇಶಾದ್ಯಂತ ತೆರಿಗೆ ಜಾಮ್ ಅನ್ನು ತೆಗೆದುಹಾಕಿದೆ; ನೇರ ತೆರಿಗೆಯ ಏಕರೂಪದ ವ್ಯವಸ್ಥೆ ಇದೆ. ಒನ್ ನೇಷನ್, ಒನ್ ಪವರ್ ಗ್ರಿಡ್ ದೇಶದ ಪ್ರತಿಯೊಂದು ಭಾಗದಲ್ಲೂ ಸಾಕಷ್ಟು ಮತ್ತು ತಡೆರಹಿತ ವಿದ್ಯುತ್ ಲಭ್ಯತೆಯನ್ನು ಖಾತ್ರಿಪಡಿಸುತ್ತಿದೆ.
ವಿದ್ಯುತ್ ಶಕ್ತಿಯ ನಷ್ಟ ಕಡಿಮೆಯಾಗಿದೆ. ಒನ್ ನೇಷನ್, ಒನ್ ಗ್ಯಾಸ್ ಗ್ರಿಡ್ ಸಮುದ್ರದಿಂದ ದೂರದಲ್ಲಿರುವ ದೇಶದ ಅನಿಲ ಆಧಾರಿತ ಜೀವನ ಮತ್ತು ಆರ್ಥಿಕತೆಯು ಕನಸಾಗಿದ್ದ ಆ ಭಾಗಗಳಿಗೆ ತಡೆರಹಿತ ಅನಿಲ ಸಂಪರ್ಕವನ್ನು ಖಾತ್ರಿಪಡಿಸುತ್ತಿದೆ. ಲಕ್ಷಾಂತರ ಜನರು ಆಯುಷ್ಮಾನ್ ಭಾರತದಂತಹ ಒನ್ ನೇಷನ್, ಒನ್ ಹೆಲ್ತ್ ಇನ್ಶುರೆನ್ಸ್ ಸ್ಕೀಮ್ ನಿಂದ ಒಂದು ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಎಲ್ಲಿಯಾದರೂ ಲಾಭ ಪಡೆಯುತ್ತಿದ್ದಾರೆ. ಒನ್ ನೇಷನ್, ಒನ್ ರೇಷನ್ ಕಾರ್ಡ್ ಸಹ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವ ನಾಗರಿಕರನ್ನು ಹೊಸ ಪಡಿತರ ಚೀಟಿಗಳಿಂದ ಮುಕ್ತಗೊಳಿಸಿದೆ. ಒಂದು ಪಡಿತರ ಚೀಟಿ ದೇಶದಲ್ಲಿ ಯಾರಿಗಾದರೂ ಅಗ್ಗದ ಪಡಿತರವನ್ನು ಪಡೆಯುವುದನ್ನು ಸುಗಮಗೊಳಿಸಲು ಸಾಧ್ಯವಾಗಿಸಿದೆ. ಅಂತೆಯೇ, ಹೊಸ ಕೃಷಿ ಸುಧಾರಣೆಗಳು ಮತ್ತು ಇ-ನ್ಯಾಮ್‌ನಂತಹ ವ್ಯವಸ್ಥೆಗಳೊಂದಿಗೆ, ದೇಶವು ಒಂದು ರಾಷ್ಟ್ರ ಒಂದು ಕೃಷಿ ಮಾರುಕಟ್ಟೆಯತ್ತ ಸಾಗುತ್ತಿದೆ.
ಸ್ನೇಹಿತರೇ,
ದೇಶದ ಪ್ರತಿಯೊಂದು ಸಣ್ಣ ನಗರವು 21 ನೇ ಶತಮಾನದ ಭಾರತದ ಆರ್ಥಿಕತೆಯ ದೊಡ್ಡ ಕೇಂದ್ರವಾಗಲಿದೆ. 21 ನೇ ಶತಮಾನದ ಭಾರತವು ಜಗತ್ತಿನಲ್ಲಿ ಹೊಸ ಗುರುತನ್ನು ರೂಪಿಸುತ್ತಿರುವಾಗ, ಆ ಭವ್ಯತೆಯನ್ನು ನಮ್ಮ ರಾಜಧಾನಿ ದೆಹಲಿಯಲ್ಲಿ ಪ್ರತಿಬಿಂಬಿಸಬೇಕು. ದೆಹಲಿ ಹಳೆಯ ನಗರವಾಗಿರುವುದರಿಂದ ಹಲವು ಸವಾಲುಗಳಿವೆ, ಆದರೆ ಈ ಸವಾಲುಗಳೊಂದಿಗೆ, ನಾವು ಅದಕ್ಕೆ ಆಧುನಿಕತೆಯ ಹೊಸ ಗುರುತನ್ನು ನೀಡಬೇಕಾಗಿದೆ. ಆದ್ದರಿಂದ, ಇಂದು ದೆಹಲಿಗೆ ಆಧುನಿಕ ಆಕಾರ ನೀಡಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ. ದೆಹಲಿಯಲ್ಲಿ ವಿದ್ಯುತ್ ಚಲನಶೀಲತೆಯನ್ನು ಹೆಚ್ಚಿಸುವ ಸಲುವಾಗಿ, ಸರ್ಕಾರವು ಅದರ ಖರೀದಿಯ ಮೇಲಿನ ತೆರಿಗೆಗೆ ಕೂಡ ವಿನಾಯಿತಿ ನೀಡಿದೆ.
ಇದು ದೆಹಲಿಯ ನೂರಾರು ಪ್ರದೇಶಗಳನ್ನು ಕ್ರಮಬದ್ಧಗೊಳಿಸುವುದಾಗಲಿ ಅಥವಾ ಕೊಳೆಗೇರಿ ಕುಟುಂಬಗಳಿಗೆ ಉತ್ತಮ ವಸತಿ ಸೌಕರ್ಯವನ್ನು ಒದಗಿಸುವ ಪ್ರಯತ್ನವಾಗಲಿ, ದೆಹಲಿಯ ಹಳೆಯ ಸರ್ಕಾರಿ ಕಟ್ಟಡಗಳನ್ನು ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಪರಿಸರ ಸ್ನೇಹಿಯನ್ನಾಗಿ ಮಾಡಲಾಗುತ್ತಿದೆ. ಹಳೆಯ ಮೂಲಸೌಕರ್ಯವನ್ನು ಆಧುನಿಕ ತಂತ್ರಜ್ಞಾನ ಆಧಾರಿತ ಮೂಲಸೌಕರ್ಯಗಳೊಂದಿಗೆ ಬದಲಾಯಿಸಲಾಗುತ್ತಿದೆ.
ಸ್ನೇಹಿತರೇ,
ದೆಹಲಿಯಲ್ಲಿ, ಹಳೆಯ ಪ್ರವಾಸಿ ತಾಣಗಳ ಹೊರತಾಗಿ, 21 ರ ಹೊಸ ಆಕರ್ಷಣೆಯನ್ನು ಹೊಂದುವ ಕೆಲಸ ಪ್ರಗತಿಯಲ್ಲಿದೆ. ದೆಹಲಿಯು ಅಂತರರಾಷ್ಟ್ರೀಯ ಸಮ್ಮೇಳನಗಳು, ಅಂತರರಾಷ್ಟ್ರೀಯ ಪ್ರದರ್ಶನಗಳು ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಲಿದೆ. ಇದಕ್ಕಾಗಿ, ದೇಶದ ಅತಿದೊಡ್ಡ ಕೇಂದ್ರ ದ್ವಾರಕಾದಲ್ಲಿ ಬರಲಿದೆ. ಹಾಗೆಯೇ, ಹೊಸ ಸಂಸತ್ ಭವನದ ನಿರ್ಮಾಣದ ಪ್ರಾರಂಭದ ಜೊತೆಗೆ ಬೃಹತ್ ಭಾರತ್ ವಂದನಾ ಉದ್ಯಾನವನವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಅಂತಹ ಪ್ರತಿಯೊಂದು ಕೆಲಸವೂ ದೆಹಲಿಯ ಜನರಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಮತ್ತು ನಗರದ ಚಿತ್ರವೂ ಬದಲಾಗುತ್ತಿದೆ.
ದೆಹಲಿಯು 130 ಕೋಟಿಗೂ ಹೆಚ್ಚು ಜನರ ರಾಜಧಾನಿ ಮತ್ತು ವಿಶ್ವದ ದೊಡ್ಡ ಆರ್ಥಿಕ ಮತ್ತು ಕಾರ್ಯತಂತ್ರದ ಶಕ್ತಿಯಾಗಿದೆ ಹಾಗಾಗಿ ಅದೇ ವೈಭವವನ್ನು ಇಲ್ಲಿ ಪ್ರತಿಬಿಂಬಿಸಬೇಕು. ದೆಹಲಿಯ ನಾಗರಿಕರ ಜೀವನವನ್ನು ಸುಧಾರಿಸಲು ಮತ್ತು ದೆಹಲಿಯನ್ನು ಹೆಚ್ಚು ಆಧುನಿಕವಾಗಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ನನಗೆ ವಿಶ್ವಾಸವಿದೆ.
ಮತ್ತೊಮ್ಮೆ, ಹೊಸ ಸೌಲಭ್ಯಗಳನ್ನು ಹೊಂದುತ್ತಿರುವ ದೇಶ ಮತ್ತು ದೆಹಲಿಯ ಜನರನ್ನು ಅಭಿನಂದಿಸುತ್ತೇನೆ.
ಧನ್ಯವಾದಗಳು!
***
(Release ID: 1684361)
Visitor Counter : 305
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam