ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗು ಬ್ರಿಟನ್ ನ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಡೊಮಿನಿಕ್ ರಾಬ್ ಭೇಟಿ

Posted On: 16 DEC 2020 1:18PM by PIB Bengaluru

ಬ್ರಿಟನ್ ನ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಡೊಮಿನಿಕ್ ರಾಬ್  ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗಿನ ಇತ್ತೀಚಿನ ದೂರವಾಣಿ ಸಂಭಾಷಣೆಯನ್ನು ಸ್ಮರಿಸಿಕೊಂಡ ಪ್ರಧಾನಿಯವರು, ಕೋವಿಡ್ ನಂತರದ ಜಗತ್ತಿನಲ್ಲಿ ಭಾರತ-ಬ್ರಿಟನ್ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ವಲಸೆ ಮತ್ತು ಸಂಚಾರ, ಶಿಕ್ಷಣ, ಇಂಧನ, ಹವಾಮಾನ ಬದಲಾವಣೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮಹತ್ವಾಕಾಂಕ್ಷೆಯ ಮತ್ತು ಫಲಿತಾಂಶ-ಆಧಾರಿತ ಸಮಗ್ರ ಮಾರ್ಗಸೂಚಿಗೆ ಅವರು  ಕರೆಕೊಟ್ಟರು.

ವಿದೇಶಾಂಗ ಕಾರ್ಯದರ್ಶಿ ರಾಬ್ ಅವರು ಪ್ರಧಾನಿ ಬೋರಿಸ್ ಜಾನ್ಸನ್ ಅವರ ಶುಭಾಶಯಗಳನ್ನು ಪ್ರಧಾನ ಮಂತ್ರಿಯವರಿಗೆ ತಿಳಿಸಿದರು. ಬ್ರಿಟನ್ ಸಹ-ಆಯೋಜನೆಯಲ್ಲಿ ಇತ್ತೀಚೆಗೆ ನಡೆದ ಹವಾಮಾನ ಮಹತ್ವಾಕಾಂಕ್ಷೆಯ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ತಿಳಿಸಿದರು. ಸಮಾನ ಮೌಲ್ಯಗಳು ಮತ್ತು ಆಸಕ್ತಿಗಳು ಮತ್ತು ಸಾಮಾನ್ಯ ಜಾಗತಿಕ ಸವಾಲುಗಳನ್ನು ಒಟ್ಟಾಗಿ ಎದುರಿಸುವ ಸಾಮರ್ಥ್ಯದ ಆಧಾರದ ಮೇಲೆ ಬ್ರಿಟನ್ ಸರ್ಕಾರವು ಭಾರತದೊಂದಿಗಿನ ಸಂಬಂಧವನ್ನು ವೃದ್ಧಿಸಲು ನೀಡಿರುವ ಆದ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.

2021 ರಲ್ಲಿ ಬ್ರಿಟನ್ ಅಧ್ಯಕ್ಷತೆ ವಹಿಸಲಿರುವ ಜಿ 7 ಶೃಂಗಸಭೆಗೆ ಪ್ರಧಾನ ಮಂತ್ರಿಯವರಿಗೆ ಆಹ್ವಾನ ನೀಡುವ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಪತ್ರವನ್ನು ವಿದೇಶಾಂಗ ಕಾರ್ಯದರ್ಶಿ ರಾಬ್ ಹಸ್ತಾಂತರಿಸಿದರು. ಪ್ರಧಾನಿಯವರು ಆಹ್ವಾನವನ್ನು ಸ್ವೀಕರಿಸಿ, ಧನ್ಯವಾದ ತಿಳಿಸಿದರು.

ಮುಂದಿನ ತಿಂಗಳು ಭಾರತದ 72 ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ನವದೆಹಲಿಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಬರಮಾಡಿಕೊಳ್ಳಲು ಕಾತರರಾಗಿರುವುದಾಗಿ ಪ್ರಧಾನಿ ತಿಳಿಸಿದರು.

***



(Release ID: 1681061) Visitor Counter : 163