ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಹೆದ್ದಾರಿ-19 ರ ವಾರಣಾಸಿ-ಪ್ರಯಾಗರಾಜ್ ವಿಭಾಗದ ಷಟ್ಪಥ ವಿಸ್ತರಣಾ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 30 NOV 2020 6:40PM by PIB Bengaluru

ಹರ ಹರ ಮಹಾದೇವ್ !

ಕಾಶಿಯ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ,

ನಿಮ್ಮೆಲ್ಲರಿಗೂ, ಅದರಲ್ಲೂ ವಿಶೇಷವಾಗಿ ರಾಜತಲಾಬ್, ಮಿರ್ಜಾಮುರಾದ್, ಕಚ್ಚಾವಾ, ಕಾಪ್ಸೇತಿ, ರೊಹಾನಿಯಾ ಮತ್ತು ಸೇವಾಪುರಿ ವಲಯಗಳ ರೈತರಿಗೆ ಪ್ರಣಾಮಗಳು.

ದೇವ್ ದೀಪಾವಳಿ ಅಂಗವಾಗಿ ಮತ್ತು ಗುರುಪುರಾಬ್ ಅಂಗವಾಗಿ ನಿಮಗೆಲ್ಲರಿಗೂ ಬಹಳ ಬಹಳ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.

ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜೀ, ಉಪ ಮುಖ್ಯಮಂತ್ರಿ ಶ್ರೀ ಕೇಶವ ಪ್ರಸಾದ್ ಮೌರ್ಯ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಗಳಾದ ಭಾಯಿ ರಮೇಶ ಚಂದ ಜೀ ಮತ್ತು ಇಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿರುವ ಕಾಶಿಯ ನನ್ನ ಪ್ರೀತಿಯ ಸಹೋದರಿಯರೇ ಮತ್ತು ಸಹೋದರರೇ.

ದೇವ್ ದೀಪಾವಳಿ ಮತ್ತು ಗುರು ನಾನಕ್ ದೇವ್ ಜೀ  ಪ್ರಕಾಶೋತ್ಸವ ಸಂದರ್ಭದಲ್ಲಿ ಕಾಶಿ ಆಧುನಿಕ ಮೂಲಸೌಕರ್ಯದ ಇನ್ನೊಂದು ಕೊಡುಗೆಯನ್ನು ಪಡೆಯುತ್ತಿದೆ. ಇದು ಕಾಶಿ ಮತ್ತು ಪ್ರಯಾಗರಾಜ್ ಜನತೆಗೆ ಪ್ರಯೋಜನಕಾರಿಯಾಗಲಿದೆ. ನಿಮ್ಮೆಲ್ಲರಿಗೂ ಬಹಳ ಬಹಳ ಅಭಿನಂದನೆಗಳು.

ನನಗೆ ನೆನಪಿದೆ ನನ್ನ ಮೊದಲ ಸಾರ್ವಜನಿಕ ಸಭೆ 2013 ರಲ್ಲಿ ಇದೇ ಮೈದಾನದಲ್ಲಿ ನಡೆದಿತ್ತು. ಮತ್ತು ಇದರ ಮೂಲಕ ಹಾದು ಹೋಗುವ ಹೆದ್ದಾರಿ ಚತುಷ್ಪಥವಾಗಿತ್ತು. ಇಂದು ಬಾಬಾ ವಿಶ್ವನಾಥ್ ಅವರ ಆಶೀರ್ವಾದದೊಂದಿಗೆ, ಈ ಹೆದ್ದಾರಿ ಷಟ್ಪಥವಾಗಿದೆ. ಹಂಡಿಯಾದಿಂದ ರಾಜಾತಾಲಾಬ್ ವರೆಗೆ ಪ್ರಯಾಣಿಸುತ್ತಿದ್ದ ಜನರಿಗೆ ಈ ಹೆದ್ದಾರಿಯ ಸಮಸ್ಯೆಗಳು ಏನು ಎಂಬುದು ತಿಳಿದಿದೆ. ಇಲ್ಲಿ ಆಗಾಗ ಸಂಚಾರ ಜಾಮ್ ಆಗುತ್ತಿತ್ತು, ಸಂಚಾರ ನಿಧಾನಗತಿಯಲ್ಲಾಗುತ್ತಿತ್ತು. ದಿಲ್ಲಿ ಮತ್ತು ಇತರ ಕಡೆಯಿಂದ ಬರುತ್ತಿದ್ದ ಜನರು ಈ ಮಾರ್ಗದಲ್ಲಿ ತೊಂದರೆ, ಅಡೆ -ತಡೆಗಳನ್ನು ಅನುಭವಿಸುತ್ತಿದ್ದರು. ಈ 70 ಕಿಲೋ ಮೀಟರ್ ಪ್ರಯಾಣ ಈಗ ಸುಖಕರವಾಗಿದೆ ಮತ್ತು ಇದರಲ್ಲಿ ವೇಗದಿಂದ ಸಾಗಲು ಸಾಧ್ಯವಾಗಿದೆ. ಈ ಹೆದ್ದಾರಿಯ ಅಗಲೀಕರಣದಿಂದ, ಕಾಶಿ ಮತ್ತು ಪ್ರಯಾಗದ ನಡುವಣ ಪ್ರಯಾಣ ಸುಲಭಸಾಧ್ಯವಾಗಿದೆ. ಕನ್ವಾಡಿಯಾದವರು ಕಾವಡ್ ಯಾತ್ರಾ ಸಮಯದಲ್ಲಿ ಎದುರಿಸುತ್ತಿದ್ದ ಕಷ್ಟ ಮತ್ತು ಇತರರು ಎದುರಿಸುತ್ತಿದ್ದ ಕಷ್ಟ ಈಗ ಕೊನೆಗೊಳ್ಳುತ್ತಿದೆ. ಅದು ಮಾತ್ರವಲ್ಲ, ಇದರ ಪ್ರಯೋಜನಗಳು ಕುಂಭದಲ್ಲೂ ದೃಗ್ಗೋಚರವಾಗಲಿವೆ.

ಸಹೋದರರೇ ಮತ್ತು ಸಹೋದರಿಯರೇ,

ಅದು ನಂಬಿಕೆಯ ಸ್ಥಳವಾಗಿರಲಿ ಅಥವಾ ಒಂದು ನಿರ್ದಿಷ್ಟ ಸ್ಥಳವಾಗಿರಲಿ, ಜನರು ಯಾವಾಗಲೂ ಅಲ್ಲಿಗೆ ಎಷ್ಟು ಸುಲಭವಾಗಿ ಭೇಟಿ ನೀಡಲು ಸಾಧ್ಯ ಎಂಬ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇಂತಹ ಸವಲತ್ತುಗಳು ದೇಶೀಯ ಮತ್ತು ವಿದೇಶೀ ಪ್ರವಾಸಿಗರನ್ನು ಹಾಗು ಭಕ್ತಾದಿಗಳನ್ನು ಉತ್ತೇಜಿಸುತ್ತಿರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಕಾಶಿಯಲ್ಲಾಗಿರುವ ಸುಂದರೀಕರಣ ಮತ್ತು ಸಂಪರ್ಕಕ್ಕೆ ಸಂಬಂಧಪಟ್ಟ ಕಾಮಗಾರಿಗಳ ಲಾಭ ಏನು ಎಂಬುದನ್ನು ಯಾರು ಬೇಕಾದರೂ ನೋಡಬಹುದು. ಬನಾರಾಸ್ ಮತ್ತು  ಸಮೀಪದ ಪ್ರದೇಶಗಳಲ್ಲಿ ಆಗುತ್ತಿರುವ ಕಾಮಗಾರಿಯ ಪ್ರಮಾಣಕ್ಕೆ ಹೋಲಿಸಿದರೆ ಸ್ವಾತಂತ್ರ್ಯಾನಂತರ ಎಂದೆಂದೂ ಇಂತಹ ವೇಗದಲ್ಲಿ ಕೆಲಸ ಆಗಿರಲಿಲ್ಲ. ಅದು ನೂತನ ಹೆದ್ದಾರಿಗಳ ನಿರ್ಮಾಣವಿರಲಿ, ಮೇಲ್ಸೇತುವೆಗಳಿರಲಿ, ಅಥವಾ ಸಾರಿಗೆ ಸ್ಥ್ಯಾಗಿತ್ಯವನ್ನು ನಿವಾರಿಸಲು  ರಸ್ತೆಗಳ ಅಗಲೀಕರಣವಿರಲಿ, ಈ ಎಲ್ಲಾ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಬನಾರಸ್ಸಿನ ಸೇವಕನಾಗಿ ನನ್ನ ಇರಾದೆ ಏನೆಂದರೆ ಬನಾರಸ್ಸಿನ ಜನರ ಸಮಸ್ಯೆಗಳನ್ನು ಕಡಿಮೆ ಮಾಡುವುದು ಮತ್ತು ಅವರ ಬದುಕನ್ನು ಸುಲಭಗೊಳಿಸುವುದು. ಕಳೆದ ಆರು ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ತ್ವರಿತವಾಗಿ ಪೂರ್ಣಗೊಂಡಿವೆ ಮತ್ತು ಹಲವು ಯೋಜನೆಗಳು ಪ್ರಗತಿಯಲ್ಲಿವೆ. ವಿಮಾನ ನಿಲ್ದಾಣವನ್ನು ಪಟ್ಟಣಗಳೊಂದಿಗೆ ಸಂಪರ್ಕಿಸುವ  ರಸ್ತೆಗಳು ಬನಾರಸ್ಸಿನ ಅಭಿವೃದ್ಧಿ ಕಾಮಗಾರಿಯ ಗುರುತಾಗಿವೆ. ರೈಲು ನಿಲ್ದಾಣಗಳ ಸಂಪರ್ಕ ಸುಧಾರಣೆಯಾಗಿದೆ. ವರ್ತುಲ ರಸ್ತೆ ಹಂತ –II ರ ಕಾಮಗಾರಿ ಕೂಡಾ ಇಲ್ಲಿಂದ ಸ್ವಲ್ಪ ದೂರದಲ್ಲಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡರೆ, ಸುಲ್ತಾನ್ ಪುರ, ಅಜಮ್ ಘರ್ ಮತ್ತು ಘಾಜಿಪುರ ಮೂಲಕ ಸಾಗುವ ಭಾರೀ ವಾಹನಗಳು ಈ ಹೊಸ ಷಟ್ಪಥ ಹೆದ್ದಾರಿಯನ್ನು ನಗರ ಪ್ರವೇಶ ಮಾಡದೆಯೇ ಬಳಸಲು ಶಕ್ತವಾಗಲಿವೆ. ಇತರ ಹೆದ್ದಾರಿಗಳ ಕಾಮಗಾರಿಯನ್ನು ಕೂಡಾ ಸಾಧ್ಯವಾದಷ್ಟು  ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಗಳು ನಡೆದಿವೆ. ಈ ಎಲ್ಲಾ ಹೆದ್ದಾರಿಗಳು ಪೂರ್ಣಗೊಂಡರೆ ವಾರಾಣಾಸಿ, ಲಕ್ನೋ, ಅಜಮ್ ಘರ್ ಮತ್ತು ಗೋರಖ್ ಪುರ ಪ್ರಯಾಣಕ್ಕೆ ಬಹಳ ಅನುಕೂಲಕರವಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಉತ್ತಮ ರಸ್ತೆಗಳು, ಉತ್ತಮ ರೈಲ್ವೇ, ಉತ್ತಮ ಮತ್ತು ಕೈಗೆಟಕುವ ದರದಲ್ಲಿ ವಾಯು ಯಾನ ಸೌಲಭ್ಯ, ಸಮಾಜದ ಎಲ್ಲಾ ವರ್ಗಗಳಿಗೂ ಅನುಕೂಲತೆಗಳು, ಅದರಲ್ಲೂ ಬಡವರಿಗೆ, ಸಣ್ಣ ಉದ್ಯಮಿಗಳಿಗೆ, ಮಧ್ಯಮ ವರ್ಗಕ್ಕೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ನಿರ್ಮಾಣ ಕಾಮಗಾರಿ ಜಾರಿಯಲ್ಲಿರುವಾಗ, ಹಲವು ಜನರಿಗೆ ಉದ್ಯೋಗ ದೊರೆಯುತ್ತದೆ. ಈ ಯೋಜನೆಗಳು ಪೂರ್ಣಗೊಂಡಾಗ, ಅದು ಸಮಯವನ್ನು ಉಳಿಸುತ್ತದೆ, ಹಣವನ್ನು ಉಳಿತಾಯ ಮಾಡುತ್ತದೆ ಮತ್ತು ಸಮಸ್ಯೆಗಳ ಭಾರವನ್ನು ಕಡಿಮೆ ಮಾಡುತ್ತದೆ. ಕೊರೊನಾ ಅವಧಿಯಲ್ಲಿಯೂ, ಈ ಮೂಲಸೌಕರ್ಯ ಯೋಜನೆಗಳು ಕಾರ್ಮಿಕ ಗೆಳೆಯರಿಗೆ ಭಾರೀ ದೊಡ್ಡ ಉದ್ಯೋಗದಾತ ಮಾಧ್ಯಮವಾದವು.

ಸಹೋದರರೇ ಮತ್ತು ಸಹೋದರಿಯರೇ,

ಉತ್ತರ ಪ್ರದೇಶದಲ್ಲಿ ಯೋಗೀ ಜೀ ಅವರು ಸರಕಾರ ರಚಿಸಿದಂದಿನಿಂದ ಮೂಲಸೌಕರ್ಯ ನಿರ್ಮಾಣದಲ್ಲಿ ಅಭೂತಪೂರ್ವ ಬೆಳವಣಿಗೆಯಾಗಿರುವುದಕ್ಕೆ ನನಗೆ ಸಂತಸವಿದೆ. ಉತ್ತರ ಪ್ರದೇಶದಲ್ಲಿ ಇದಕ್ಕೆ ಮೊದಲು ಮೂಲಸೌಕರ್ಯ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ತಮಗೆ ಚೆನ್ನಾಗಿ ತಿಳಿದಿದೆ. ಇಂದು ಉತ್ತರ ಪ್ರದೇಶವನ್ನು ಎಕ್ಸ್ ಪ್ರೆಸ್ ಪ್ರದೇಶ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಮೊತ್ತದ ಸಂಪರ್ಕಕ್ಕೆ ಸಂಬಂಧಿಸಿದ ಬೃಹತ್ ಯೋಜನೆಗಳ ಕಾಮಗಾರಿ ಏಕಕಾಲಕ್ಕೆ ಪ್ರಗತಿಯಲ್ಲಿದೆ. ಪೂರ್ವಾಂಚಲ ಇರಲಿ, ಬುಂದೇಲ್ಖಂಡ ಇರಲಿ, ಅಥವಾ ಪಶ್ಚಿಮ ಉತ್ತರ ಪ್ರದೇಶವೇ ಇರಲಿ, ಪ್ರತೀ ಮೂಲೆಯನ್ನೂ ಎಕ್ಸ್ ಪ್ರೆಸ್ ಹೆದ್ದಾರಿ ಮೂಲಕ ಜೋಡಿಸುವ ಕೆಲಸ ನಡೆಯುತ್ತಿದೆ. ದೇಶದ ಎರಡು ಬೃಹತ್ ಮತ್ತು ಆಧುನಿಕ ರಕ್ಷಣಾ ಕಾರಿಡಾರುಗಳಲ್ಲಿ ಒಂದನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ರಸ್ತೆಗಳಲ್ಲದೆ. ವಾಯು ಸಂಪರ್ಕವನ್ನು ಕೂಡಾ ಸುಧಾರಿಸಲಾಗಿದೆ. 3-4 ವರ್ಷಗಳ ಹಿಂದಿನವರೆಗೆ ಉತ್ತರ ಪ್ರದೇಶದಲ್ಲಿ ಬರೇ ಎರಡು ಪ್ರಮುಖ ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿದ್ದವು. ಇಂದು ಸುಮಾರು ಡಜನ್ ವಿಮಾನ ನಿಲ್ದಾಣಗಳು ಉತ್ತರ ಪ್ರದೇಶದಲ್ಲಿ ಸಿದ್ದಗೊಂಡಿವೆ. ವಾರಾಣಾಸಿ ವಿಮಾನ ನಿಲ್ದಾಣದ ವಿಸ್ತರಣಾ ಕಾಮಗಾರಿ ಇಲ್ಲಿ ನಡೆಯುತ್ತಿದೆ. ಪ್ರಯಾಗ್ ರಾಜ್ ನಲ್ಲಿ ಯಾವ ವೇಗದಲ್ಲಿ ವಿಮಾನ ನಿಲ್ದಾಣ ಟರ್ಮಿನಲ್ ನಿರ್ಮಿಸಲಾಯಿತೋ, ಅದು ದಾಖಲೆಯನ್ನು ಬರೆದಿದೆ. ಇದರ ಜೊತೆಗೆ ಕುಶಿನಗರ್ ವಿಮಾನ ನಿಲ್ದಾಣವನ್ನು ಕೂಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ನೊಯಿಡಾದ ಜೇವಾರ್ ನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ತ್ವರಿತಗತಿಯಲ್ಲಿ ಮುನ್ನಡೆದಿದೆ. 

ಸ್ನೇಹಿತರೇ,

ಆಧುನಿಕ ಸಂಪರ್ಕ ವಿಸ್ತರಿಸುತ್ತಾ ಹೋದಂತೆ ನಮ್ಮ ರೈತರು ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಪ್ರಯೋಜನವಾಗುತ್ತದೆ. ಹಲವು ವರ್ಷಗಳಿಂದ ಗೋದಾಮುಗಳು ಮತ್ತು ಶೀತಲೀಕೃತ ದಾಸ್ತಾನುಗಾರಗಳನ್ನು ಗ್ರಾಮಗಳಲ್ಲಿ ಆಧುನಿಕ ರಸ್ತೆಗಳೊಂದಿಗೆ ನಿರ್ಮಿಸುವ, ಮೂಲ ಸೌಕರ್ಯಗಳನ್ನು ನಿರ್ಮಾಣ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ರೈತರಿಗಾಗಿ 1 ಲಕ್ಷ ಕೋ.ರೂ. ಗಳ ವಿಶೇಷ ನಿಧಿಯನ್ನು ರೂಪಿಸಲಿಡಲಾಗಿದೆ. ಈ ವರ್ಷ ದೇಶದ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಚಲಿಸುವ ಶೀತಲಗೃಹಗಳನ್ನು ಅಂದರೆ ಕಿಸಾನ್ ರೈಲನ್ನು ಆರಂಭಿಸಲಾಗಿದೆ. ರೈತರಿಗೆ ಹೊಸ ಮಾರುಕಟ್ಟೆಗಳು ಲಭ್ಯವಾಗುತ್ತಿವೆ, ದೊಡ್ಡ ನಗರಗಳ ಜೊತೆ ಸಂಪರ್ಕ ಹೆಚ್ಚುತ್ತಿದೆ ಮತ್ತು ಅದರಿಂದ ಅವರ ಆದಾಯದ ಮೇಲೆ ನೇರ ಪರಿಣಾಮವುಂಟಾಗುತ್ತಿದೆ, ಇದಕ್ಕೆಲ್ಲ ಈ ಪ್ರಯತ್ನಗಳು ಕಾರಣವಾಗಿವೆ.

ಸ್ನೇಹಿತರೇ,

ವಾರಾಣಾಸಿ ಸಹಿತ ಪೂರ್ವಾಂಚಲದಲ್ಲಿ ನಿರ್ಮಾಣ ಮಾಡಲಾಗಿರುವ ಅದ್ಭುತ ಮೂಲಸೌಕರ್ಯ ಇಡೀ ವಲಯಕ್ಕೆ ಭಾರೀ ಪ್ರಯೋಜನಕಾರಿಯಾಗಿದೆ. ವಾರಾಣಾಸಿಯಲ್ಲಿ ಬೇಗ ಹಾಳಾಗುವಂತಹ ಸರಕುಗಳ ಕೇಂದ್ರ ರಚನೆಯಿಂದಾಗಿ ರೈತರಿಗೆ ಈಗ ದಾಸ್ತಾನು ಮಾಡಲು ಮತ್ತು ಹಣ್ಣುಗಳು ಹಾಗು ತರಕಾರಿಗಳನ್ನು ಸುಲಭವಾಗಿ ಮಾರಾಟ ಮಾಡಲು ದೊಡ್ಡ ಪ್ರಮಾಣದ ಅನುಕೂಲತೆಗಳು ಲಭ್ಯವಾಗಿವೆ. ಈ ದಾಸ್ತಾನು ಸೌಲಭ್ಯದಿಂದಾಗಿ, ರೈತರ ಉತ್ಪಾದನೆಗಳು ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಗುತ್ತಿವೆ. ಇಂದು ಲಂಗ್ಡಾ ಮತ್ತು ದಾಶೇರಿ ತಳಿಯ ಮಾವುಗಳು ಲಂಡನ್ ಮತ್ತು ಮಧ್ಯಪೂರ್ವದಲ್ಲಿ ಪ್ರಖ್ಯಾತವಾಗಿವೆ. ಬನಾರಾಸಿನ ಮಾವಿನ ಹಣ್ಣಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇಲ್ಲಿ ಪ್ಯಾಕೇಜಿಂಗ್ ಸೌಲಭ್ಯ ಸಿದ್ದಗೊಳ್ಳುತ್ತಿದ್ದಂತೆ,  ಆಗ ಪ್ಯಾಕೇಜಿಗಾಗಿ ದೊಡ್ಡ ಪಟ್ಟಣಗಳಿಗೆ ಹೋಗಬೇಕಾಗಿಲ್ಲ. ಮಾವಿನ ಹಣ್ಣುಗಳಲ್ಲದೆ, ತಾಜಾ ತರಕಾರಿಗಳು ಕೂಡಾ ಈ ವರ್ಷ ದುಬೈ, ಮತ್ತು ಲಂಡನ್ ಮಾರುಕಟ್ಟೆಯನ್ನು ತಲುಪಿವೆ. ಈ ರಫ್ತನ್ನು ವಾಯು ಮಾರ್ಗದ ಮೂಲಕ ಮಾಡಲಾಗಿದೆ. ಅಂದರೆ ಇಲ್ಲಿಯ ಸಣ್ಣ ರೈತರು ಕೂಡಾ ಉತ್ತಮ ವಾಯುಯಾನದ ನೇರ ಲಾಭವನ್ನು ಪಡೆಯುತ್ತಿದ್ದಾರೆ. ಗಂಗಾನದಿಯ ಮೇಲಣ ಮೊದಲ ದೇಶೀಯ  ಜಲಮಾರ್ಗದ ಮೂಲಕ ರೈತರ ಉತ್ಪನ್ನಗಳನ್ನು ಹೇಗೆ ಸಾಗಾಟ ಮಾಡಬಹುದು ಎಂಬ ಬಗ್ಗೆ  ಪ್ರಕ್ರಿಯೆ ಈಗ ಪ್ರಗತಿಯಲ್ಲಿದೆ.

ಸ್ನೇಹಿತರೇ,

ಚಾಂದೌಲಿಯ ಕಪ್ಪು ಅಕ್ಕಿ ಸರಕಾರದ ಪ್ರಯತ್ನಗಳು ಮತ್ತು ಆಧುನಿಕ ಮೂಲಸೌಕರ್ಯದಿಂದ ರೈತರು ಹೇಗೆ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ. ಈ ಅಕ್ಕಿಯು ಚಾಂದೌಲಿಯ ರೈತರಿಗೆ ಸಮೃದ್ಧಿಯನ್ನು ತರುತ್ತಿದೆ. ರೈತರ ಆದಾಯವನ್ನು ಹೆಚ್ಚಿಸಲು ಎರಡು ವರ್ಷಗಳ ಹಿಂದೆ ಕಪ್ಪು ಅಕ್ಕಿಯ ವೈವಿಧ್ಯವನ್ನು ಇಲ್ಲಿ ಪ್ರಯೋಗ ಮಾಡಲಾಯಿತು. ಕಳೆದ ವರ್ಷ ಸುಮಾರು 400 ರೈತರಿಗೆ ಖಾರೀಫ್ ಅವಧಿಯಲ್ಲಿ ಬೆಳೆಯಲು ಇದನ್ನು ನೀಡಲಾಯಿತು. ರೈತರ ಸಮಿತಿಯನ್ನು ರಚಿಸಲಾಯಿತು ಮತ್ತು ಇದಕ್ಕಾಗಿ ಮಾರುಕಟ್ಟೆಯನ್ನು ಹುಡುಕಲಾಯಿತು. ಸಾಮಾನ್ಯ ಅಕ್ಕಿಯು ಕಿಲೋ ಒಂದರ 35-40 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದರೆ, ಈ ಕಪ್ಪು ಅಕ್ಕಿ ಕಿಲೋ ಒಂದರ 300 ರೂ. ಗಳಂತೆ ಮಾರಾಟವಾಗುತ್ತಿತ್ತು. ಪಮುಖವಾಗಿ, ಕಪ್ಪು ಅಕ್ಕಿಗೆ ವಿದೇಶೀ ಮಾರುಕಟ್ಟೆಯೂ ದೊರೆಯಿತು. ಇದೇ ಮೊದಲ ಬಾರಿಗೆ, ಈ ಅಕ್ಕಿಯನ್ನು ಆಸ್ಟ್ರೇಲಿಯಾಕ್ಕೆ ಕಿಲೋ ಒಂದಕ್ಕೆ 850 ರೂ. ದರದಲ್ಲಿ ರಫ್ತು ಮಾಡಲಾಯಿತು. ಇಲ್ಲಿ ಈ ಭತ್ತದ ಕನಿಷ್ಟ ಬೆಂಬಲ ಬೆಲೆ  1800 ರೂ. ಇದ್ದಾಗ, ಕಪ್ಪು ಅಕ್ಕಿ ಕ್ವಿಂಟಾಲ್ ಒಂದಕ್ಕೆ 8,000 ರೂ. ದರದಲ್ಲಿ ಮಾರಾಟವಾಯಿತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಸುಮಾರು 1000 ರೈತ ಕುಟುಂಬಗಳು ಈ ಹಂಗಾಮಿನಲ್ಲಿ ಕಪ್ಪು ಅಕ್ಕಿಯನ್ನು ಬೆಳೆಯುತ್ತಿವೆ ಎಂದು ನನಗೆ ತಿಳಿಸಲಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಸಣ್ಣ ರೈತರನ್ನು ಸಂಘಟಿಸಿ ಮತ್ತು ಅವರ ಆದಾಯವನ್ನು ಹೆಚ್ಚಿಸಿ ಅವರನ್ನು ದೊಡ್ಡ ಶಕ್ತಿಯನ್ನಾಗಿಸುವುದಕ್ಕಾಗಿ ರೈತರಿಗೆ ಆಧುನಿಕ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಕಳೆದ ಕೆಲವು ವರ್ಷಗಳಲ್ಲಿ, ಬೆಳೆ ವಿಮೆ ಇರಲಿ, ನೀರಾವರಿ ಇರಲಿ, ಬೀಜಗಳು, ಮಾರುಕಟ್ಟೆಗಳು ಸಹಿತ ಎಲ್ಲಾ ಮಟ್ಟದಲ್ಲಿಯೂ ಕೆಲಸಗಳು ನಡೆದಿವೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಾದಿಂದ ಸುಮಾರು ನಾಲ್ಕು ಕೋಟಿ ರೈತ ಕುಟುಂಬಗಳಿಗೆ ಲಾಭವಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನಾದಿಂದಾಗಿ ಸುಮಾರು 47 ಲಕ್ಷ ಹೆಕ್ಟೇರ್ ಭೂಮಿ ಕಿರು ನೀರಾವರಿ ಯೋಜನೆ ವ್ಯಾಪ್ತಿಗೆ ಬಂದಿದೆ. ಸುಮಾರು 77,000 ಕೋ.ರೂ. ಗಳ ಮೊತ್ತದ ಹಲವಾರು ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. 

ಆದರೆ ಸ್ನೇಹಿತರೇ, ಯಶಸ್ವೀ ಯೋಜನೆಗಳು ಸಾಕಾಗಲಾರವು. ಇದೇ ವೇಳೆ ರೈತರಿಗೆ ದೇಶದ ಮತ್ತು ಜಗತ್ತಿನ ವಿಸ್ತಾರ ಮತ್ತು ದೊಡ್ಡ ಮಾರುಕಟ್ಟೆಗಳ ಪ್ರಯೋಜನವೂ ದೊರೆಯುವಂತಾಗಬೇಕು. ಆದುದರಿಂದ, ರೈತರ ಸಶಕ್ತೀಕರಣಕ್ಕೆ ಪರ್ಯಾಯಗಳ ಮೂಲಕ ಮುಂದಾಗಲಾಯಿತು. ರೈತರಿಗೆ ಇಂತಹ ಆಯ್ಕೆಗಳನ್ನು ಕೊಡುವುದಕ್ಕಾಗಿಯೇ, ಅವರ ಹಿತಾಸಕ್ತಿಯನ್ನು ರಕ್ಷಿಸಲು ಕೃಷಿ ಸುಧಾರಣೆಗಳನ್ನು ಮಾಡಲಾಯಿತು. ರೈತರಿಗೆ ತಮ್ಮ ಹೊಲಗಳಿಂದಲೇ, ಅವರ ಉತ್ಪಾದನೆಯನ್ನು ನೇರವಾಗಿ ಕೊಂಡುಕೊಳ್ಳುವವರು ಸಿಕ್ಕಿದರೆ, ಅವರು ಸಾರಿಗೆಯಿಂದ ಹಿಡಿದು ಸಾಗಾಟದ ವ್ಯವಸ್ಥೆ ಮಾಡಿದರೆ ಮತ್ತು ಉತ್ತಮ ಬೆಲೆ ನೀಡುವಂತಾದರೆ, ಆಗ ರೈತರಿಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯ ಸಿಗಬಾರದೇ?. ಭಾರತದ ಕೃಷಿ ಉತ್ಪನ್ನಗಳು ಜಗತ್ತಿನಲ್ಲಿಯೇ ಪ್ರಸಿದ್ದವಾಗಿವೆ. ಈ ದೊಡ್ಡ ಮಾರುಕಟ್ಟೆಗಳಿಗೆ ತಲುಪುವ ಮತ್ತು ಉತ್ತಮ ಬೆಲೆಗೆ ಮಾರಾಟ ಮಾಡುವ ಅವಕಾಶ ರೈತರಿಗೆ ಲಭ್ಯವಾಗಬಾರದೇ?. ಮತ್ತು ಯಾರಾದರೂ ಹಳೆಯ ವ್ಯವಸ್ಥೆಯನ್ನೇ ಆಯ್ಕೆ ಮಾಡಿಕೊಳ್ಳುವುದಾದರೆ, ಆಗ ಅದಕ್ಕೆ ಈ ಕಾನೂನಿನಲ್ಲಿ ನಿರ್ಬಂಧಗಳು ಎಲ್ಲಿವೆ?.

ಸ್ನೇಹಿತರೇ,

ಹೊಸ ಕೃಷಿ ಸುಧಾರಣೆಗಳು ರೈತರಿಗೆ ಹೊಸ ಆಯ್ಕೆಗಳನ್ನು ಮತ್ತು ಹೊಸ ಕಾನೂನು ರಕ್ಷಣೆಯನ್ನು ನೀಡಿವೆ. ಮೊದಲು ಮಂಡಿಯ ಹೊರಗೆ ಹಣ ವರ್ಗಾವಣೆ ಅಕ್ರಮ ಎಂದು ಭಾವಿಸಲಾಗುತ್ತಿತ್ತು. ಮತ್ತು ಅದರ ಫಲಿತವಾಗಿ ಅನೇಕ ಸಣ್ಣ ರೈತರು ವಂಚನೆಗೆ ಒಳಗಾಗುತ್ತಿದ್ದರು. ಮತ್ತು ಅಲ್ಲಿ ವಿವಾದಗಳಾಗುತ್ತಿದ್ದವು. ಯಾಕೆಂದರೆ ಸಣ್ಣ ರೈತರಿಗೆ ಮಂಡಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ. ಈಗ ಮಂಡಿಯ ಹೊರಗೆ ನಡೆದ ವರ್ಗಾವಣೆಗೂ ಸಣ್ಣ ರೈತರು ಕಾನೂನು ಕ್ರಮ ಕೈಗೊಳ್ಳಬಹುದು. ಅಂದರೆ ರೈತರಿಗೆ ಹೊಸ ಆಯ್ಕೆ ದೊರೆತಿರುವುದು ಮಾತ್ರವಲ್ಲದೆ, ಅವರಿಗೆ ವಂಚನೆಯಿಂದ ರಕ್ಷಿಸಿಕೊಳ್ಳಲು ಕಾನೂನಿನ ರಕ್ಷಣೆ ದೊರೆತಿದೆ. ರೈತರಿಗೆ ಯೋಜನೆಗಳ ಜೊತೆಗೆ ಹೊಸ ಪರ್ಯಾಯಗಳನ್ನು ನೀಡುವುದರಿಂದ ಮಾತ್ರ ನಮ್ಮ ಕೃಷಿ ವಲಯಕ್ಕೆ ಪುನಶ್ಚೇತನ ನೀಡಬಹುದು. ಸರಕಾರದಿಂದ ಯೋಜನೆಗಳು ಮತ್ತು ರೈತರಿಗೆ ಪರ್ಯಾಯಗಳು ಪರಸ್ಪರ ಒಂದರೊಡಗೂಡಿ ಸಾಗಿದರೆ, ಆಗ ಮಾತ್ರ ದೇಶವು ಪುನಶ್ಚೇತನಗೊಳ್ಳುತ್ತದೆ.

ಸ್ನೇಹಿತರೇ,

ಸರಕಾರ ನೀತಿಗಳನ್ನು ಮಾಡುತ್ತದೆ, ಕಾನೂನು ಮತ್ತು ನಿಯಂತ್ರಣಗಳನ್ನು ಜಾರಿಗೆ ತರುತ್ತದೆ. ನೀತಿಗಳು ಮತ್ತು ಕಾನೂನು ಬೆಂಬಲವನ್ನು ಪಡೆಯುತ್ತದೆ ಮತ್ತು ಅವು ಪ್ರಶ್ನಾರ್ಹ ಕೂಡಾ. ಇದು ಪ್ರಜಾಪ್ರಭುತ್ವದ ಭಾಗ. ಮತ್ತು ಇದು ಭಾರತದ ರೋಮಾಂಚಕ ಸಂಪ್ರದಾಯ. ಆದರೆ ಕಳೆದ ಕೆಲ ಕಾಲದಿಂದ ದೇಶದಲ್ಲಿ ಬೇರೆಯದೇ ರೀತಿಯ ಬೆಳವಣಿಗೆ ಕಾಣುತ್ತಿದೆ. ಕಾಶಿಯ ನೀವೆಲ್ಲ ಪ್ರಜ್ಞಾವಂತ ಸಹೋದ್ಯೋಗಿಗಳಿಗೆ ಇದರ ಅನುಭವವಾಗಿರಬಹುದು. ಮೊದಲು ಸರಕಾರದ ಯಾವುದಾದರೊಂದು ನಿರ್ಧಾರ ಯಾರಿಗಾದರೂ ಸರಿ ಬರದಿದ್ದರೆ ಅದನ್ನು ವಿರೋಧಿಸಲಾಗುತ್ತಿತ್ತು. ಆದರೆ ಈಗ ನಾವು ಹೊಸ ಬೆಳವಣಿಗೆಯನ್ನು ಕಾಣುತಿದ್ದೇವೆ, ಟೀಕೆ ನಿರ್ಧಾರಗಳನ್ನು ಅನುಸರಿಸಿ ಆಗುತ್ತಿಲ್ಲ, ಬದಲು ಗೊಂದಲಗಳನ್ನು ಹರಡಿ ಮತ್ತು ಭವಿಷ್ಯದಲ್ಲಿ ಏನಾಗುತ್ತದೋ ಎಂಬ ಆತಂಕ, ಕಳವಳಗಳನ್ನು ಹರಡಿ ಮಾಡಲಾಗುತ್ತಿದೆ. ಇದು ನಿರ್ಧಾರ ಸರಿಯಾಗಿದೆ ಎಂಬುದನ್ನು ಪ್ರಚುರಪಡಿಸುತ್ತದೆ. ಆದರೆ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ, ಯಾವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಗೊತ್ತಿಲ್ಲ ಎಂದು ಪ್ರಚಾರ ಮಾಡಲಾಗುತ್ತಿದೆ. ಇದುವರೆಗೆ ಏನು ಆಗಿಲ್ಲವೋ, ಮುಂದೆಂದೂ ಆಗಲು ಸಾಧ್ಯವಿಲ್ಲವೋ   ಅದರ ಬಗ್ಗೆ ಸಮಾಜದಲ್ಲಿ ಗೊಂದಲವನ್ನು ಹರಡಲಾಗುತ್ತಿದೆ.  ಇದೇ ಆಟವನ್ನು ಆಡಲಾಗುತ್ತಿದೆ. ಅದೇ ಆಟವನ್ನು ಚಾರಿತ್ರಿಕ ಕೃಷಿ ಸುಧಾರಣೆಗಳ ವಿಷಯದಲ್ಲಿಯೂ ಉದ್ದೇಶಪೂರ್ವಕವಾಗಿ ಆಡಲಾಗುತ್ತಿದೆ. ದಶಕಗಳಿಂದ ರೈತರನ್ನು ಸತತವಾಗಿ ಮೋಸ  ಮಾಡಿದ ಜನರೇ ಇವರು ಎಂಬುದನ್ನು ನಾವು ನೆನಪಿಡಬೇಕು. ಉದಾಹರಣೆಗೆ, ಎಂ.ಎಸ್.ಪಿ.ಯನ್ನು ಘೋಷಿಸಲಾಗುತ್ತಿತ್ತು, ಆದರೆ ಬರೇ ಸಣ್ಣ ಪ್ರಮಾಣದ ಎಂ.ಎಸ್.ಪಿ. ಖರೀದಿಯನ್ನು ಮಾಡಲಾಗುತ್ತಿತ್ತು. ಅಲ್ಲಿ ಘೋಷಣೆಗಳಿರುತ್ತಿದ್ದವು, ಆದರೆ ಖರೀದಿ ಇರುತ್ತಿರಲಿಲ್ಲ. ಎಂ.ಎಸ್.ಪಿ.ಯಿಂದ ಈ ಹಿಂದೆಸರಿಯುವಿಕೆ ಹಲವಾರು ವರ್ಷಗಳ ಕಾಲ ನಡೆಯಿತು. ರೈತರ ಹೆಸರಿನಲ್ಲಿ ಬೃಹತ್ ಸಾಲ ಮನ್ನಾ ಯೋಜನೆಗಳನ್ನು ಘೋಷಿಸಲಾಯಿತು, ಆದರೆ ಸಣ್ಣ ಮತ್ತು ಮಧ್ಯಮ ರೈತರನ್ನು ತಲುಪಲಿಲ್ಲ. ಅಂದರೆ ಸಾಲ ಮನ್ನಾದಿಂದಲೂ ಹಿಂದೆ ಸರಿಯಲಾಯಿತು. ರೈತರ ಹೆಸರಿನಲ್ಲಿ ಬೃಹತ್ ಯೋಜನೆಗಳನ್ನು ಪ್ರಕಟಿಸಲಾಯಿತು, ಮತ್ತು ಅವರೇ ಒಪ್ಪಿಕೊಂಡರು ಒಂದು ರೂಪಾಯಿಯಲ್ಲಿ ಬರೇ ೧೫ ಪೈಸೆ ಮಾತ್ರ ರೈತರಿಗೆ ತಲುಪುತ್ತದೆ ಎಂಬುದಾಗಿ, ಇದು ಕೂಡಾ ರೈತರ ಹೆಸರಿನಲ್ಲಿ ರೂಪಿಸಿದ ಯೋಜನೆಗಳಲ್ಲಿಯ  ವಂಚನೆ.

ರೈತರ ಹೆಸರಿನಲ್ಲಿ, ರಸಗೊಬ್ಬರಕ್ಕೆ ಭಾರೀ ಪ್ರಮಾಣದ ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಆದರೆ ಈ ರಸಗೊಬ್ಬರವು ಕೃಷಿಗೆ ಬದಲು ಕಾಳ ಸಂತೆಗೆ ಹೋಗುತ್ತಿತ್ತು. ಯೂರಿಯಾ ಹೆಸರಲ್ಲಿ ವಂಚನೆ ಆಗುತ್ತಿತ್ತು. ರೈತರಿಗೆ ಉತ್ಪಾದಕತೆ ಹೆಚ್ಚಿಸುವಂತೆ ಹೇಳಲಾಗುತ್ತಿತ್ತು. ಆದರೆ ರೈತರಿಗೆ ಬದಲು ಇನ್ಯಾರಿಗೋ ಲಾಭವನ್ನು ಖಾತ್ರಿ ಮಾಡಲಾಗುತ್ತಿತ್ತು. ಮತಕ್ಕಾಗಿ ಭರವಸೆ ನೀಡಲಾಗುತ್ತಿತ್ತು ಮತ್ತು ಆ ಬಳಿಕ ಹಿಂದೆ ಸರಿಯಲಾಗುತ್ತಿತ್ತು. ಇಂತಹದೇ ಆಟ ದೇಶದಲ್ಲಿ ಬಹಳ ಧೀರ್ಘ ಕಾಲದಿಂದ ನಡೆಯುತ್ತಿದೆ.

ಸ್ನೇಹಿತರೇ,

ಇತಿಹಾಸವು ವಂಚನೆಯಿಂದ ತುಂಬಿದಾಗ, ಎರಡು ಸಂಗತಿಗಳು ಸಹಜವಾಗುತ್ತವೆ. ಮೊದಲನೆಯದ್ದು, ರೈತರು ಸರಕಾರಗಳ ಭರವಸೆಯ ಬಗ್ಗೆ ಆತಂಕದಿಂದಿರುವುದಕ್ಕೆ ದಶಕಗಳ ಚರಿತ್ರೆಯೇ ಇದೆ. ಎರಡನೇಯದ್ದು, ಇಂತಹ ಭರವಸೆಗಳ ಬಗ್ಗೆ ಕಾಳಜಿ ಇಲ್ಲದವರು ಮತ್ತು ಅವುಗಳನ್ನು ಈಡೇರಿಸದಿರುವವರು ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಹಿಂದೆ ನಡೆದಂತಹದೇ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಈ ಸರಕಾರದ ಸಾಧನಾ ಪಥವನ್ನು ನೀವು ನೋಡಿದರೆ, ಸತ್ಯವು ತನ್ನಿಂದ ತಾನಾಗಿಯೇ ಹೊರಬರುತ್ತದೆ. ನಾವು ಯೂರಿಯಾದ ಕಾಳಸಂತೆಯನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದೆವು ಮತು ರೈತರಿಗೆ ಸಾಕಷ್ಟು ಯೂರಿಯಾವನ್ನು ಒದಗಿಸುತ್ತೇವೆ ಎಂದು ಹೇಳಿದ್ದೆವು. ಕಳೆದ ಆರು ವರ್ಷಗಳಲ್ಲಿ ಯೂರಿಯಾ ಕೊರತೆ ಇರಲಿಲ್ಲ. ಈ ಮೊದಲು ಯೂರಿಯಾವನ್ನು ಕಾಳಸಂತೆಯಲ್ಲಿ ಖರೀದಿಸಬೇಕಾಗುತ್ತಿತ್ತು. ಜನರು ಮಧ್ಯರಾತ್ರಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ತೆರೆದ ಜಾಗದಲ್ಲಿ, ಚಳಿಯ ರಾತ್ರಿಯಲ್ಲಿಯೂ ರೈತರು ಮಲಗುತ್ತಿದ್ದರು. ಯೂರಿಯಾಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಅನೇಕ ರೈತರ ಮೇಲೆ ಲಾಠಿ ಚಾರ್ಜ್ ಆಗುತ್ತಿತ್ತು. ಇದೆಲ್ಲ ಈಗ ನಿಂತಿದೆ. ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಎಲ್ಲಾ ಚಟುವಟಿಕೆಗಳು ನಿಂತಿದ್ದರೂ ಯೂರಿಯಾ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಂಡಿದ್ದೆವು. ಸ್ವಾಮಿನಾಥನ್ ಸಮಿತಿಯ ಶಿಫಾರಸಿನನ್ವಯ ನಾವು ವೆಚ್ಚವನ್ನು ಪರಿಗಣಿಸಿ  1.5 ಪಟ್ಟು ಕನಿಷ್ಟ ಬೆಂಬಲ ಬೆಲೆ ಕೊಡುತ್ತೇವೆ ಎಂದು ಭರವಸೆ ನೀಡಿದ್ದೆವು. ಇದು ಕಾಗದದ ಮೇಲಣ ಭರವಸೆಯಲ್ಲ, ನಾವದನ್ನು ಅನುಷ್ಟಾನಿಸಿದ್ದೇವೆ ಮತ್ತು ಹಣ ರೈತರ ಬ್ಯಾಂಕ್ ಖಾತೆಗಳಿಗೆ ಹೋಗುವಂತೆ ಖಾತ್ರಿಪಡಿಸಿದ್ದೇವೆ.

ಸ್ನೇಹಿತರೇ,

ಬೇಳೆ ಕಾಳುಗಳ ಬಗ್ಗೆ ನಾವು ಮಾತನಾಡುವುದಾದರೆ, ಆಗ ಐದು ವರ್ಷಗಳ ಹಿಂದೆ 2014 ರಲ್ಲಿ ಹಿಂದಿನ ಸರಕಾರ 650 ಕೋ.ರೂ.ಗಳ ಬೇಳೆ,  ಕಾಳುಗಳನ್ನು ರೈತರಿಂದ ಖರೀದಿ ಮಾಡಿತ್ತು. ಬರೇ 650 ಕೋ.ರೂ.ಗಳ ಬೇಳೆ ಕಾಳುಗಳು!. ನಾವು ಅಧಿಕಾರಕ್ಕೆ ಬಂದ ನಂತರ ಐದು ವರ್ಷಗಳಲ್ಲಿ ಏನು ಮಾಡಿದೆವು?. ಬಳಿಕದ ಐದು ವರ್ಷಗಳಲ್ಲಿ, ನಾವು 49,000 ಕೋ.ರೂ. ಮೌಲ್ಯದ ಬೇಳೆ ಕಾಳುಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದೆವು. ಅಂದರೆ ಸುಮಾರು 75 ಪಟ್ಟು ಹೆಚ್ಚಳ. 650 ಕೋ.ರೂ. ಮತ್ತು ಸುಮಾರು 50,000 ಕೋ.ರೂ.ಗಳ ನಡುವೆ ಎಲ್ಲಿಂದೆಲ್ಲಿಯ ಹೋಲಿಕೆ?. 2014 ಕ್ಕೆ ಐದು ವರ್ಷಗಳ ಮೊದಲು, ನಾನು ಅವರ ಕೊನೆಯ ಸರಕಾರದ ಬಗ್ಗೆ ಮಾತನಾಡುತ್ತಿದ್ದೇನೆ, ಭತ್ತ ಸುಮಾರು 2 ಲಕ್ಷ ಕೋ.ರೂ. ಮೌಲ್ಯದಷ್ಟನ್ನು ಇಡೀ ದೇಶದಲ್ಲಿ ಖರೀದಿಸಲಾಗಿತ್ತು. ಆದರೆ, ಸ್ನೇಹಿತರೇ ನಮ್ಮ ಐದು ವರ್ಷಗಳ ಅವಧಿಯಲ್ಲಿ ರೈತರಿಗೆ ಭತ್ತಕ್ಕೆ 5 ಲಕ್ಷ ಕೋ.ರೂ.ಗಳನ್ನು ಬೆಂಬಲ ಬೆಲೆಗಾಗಿ ಲಭ್ಯ ಇರುವಂತೆ ಮಾಡಿದೆವು. ಅಂದರೆ ಎರಡೂವರೆ ಪಟ್ಟು ಹೆಚ್ಚು ಹಣ ರೈತರಿಗೆ ತಲುಪಿದಂತಾಯಿತು. 2014ಕ್ಕೆ ಮೊದಲಿನ ಐದು ವರ್ಷಗಳಲ್ಲಿ  ಗೋಧಿ ಖರೀದಿಯಲ್ಲಿ ರೈತರಿಗೆ 1.5 ಲಕ್ಷ ಕೋ.ರೂ, ಲಭಿಸಿತ್ತು. ಆ ಸರಕಾರದ ಐದು ವರ್ಷದಲ್ಲಿ 1.5 ಲಕ್ಷ ಕೋ.ರೂ. ಮಾತ್ರ!. ಬಳಿಕದ 5 ವರ್ಷಗಳಲ್ಲಿ , ಗೋಧಿ ಬೆಳೆಗಾರರು 3 ಲಕ್ಷ ಕೋ.ರೂ.ಗಳನ್ನು ಪಡೆದುಕೊಂಡರು. ಅಂದರೆ ಸುಮಾರು ಎರಡು ಪಟ್ಟು. ಈಗ, ನಾವು ಮಂಡಿಗಳನ್ನು ಮತ್ತು ಕನಿಷ್ಟ ಬೆಂಬಲ ಬೆಲೆಯನ್ನು ತೆಗೆದುಹಾಕುವುದೇ ಆಗಿದ್ದಲ್ಲಿ, ನೀವು ಹೇಳಿ,  ನಾವು ಇಷ್ಟು ದೊಡ್ಡ ಮೊತ್ತವನ್ನು ಯಾಕೆ ವ್ಯಯ ಮಾಡುತ್ತಿದ್ದೆವು?. ನಮ್ಮ ಸರಕಾರವು ಮಂಡಿಗಳನ್ನು ಆಧುನೀಕರಣ ಮಾಡಲು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ನೀವು ನೆನಪಿಡಬೇಕು, ಈ ಜನರೇ ಪಿ.ಎಂ. ಕಿಸಾನ್ ಸಮ್ಮಾನ್  ನಿಧಿಯ ಬಗ್ಗೆ ದೇಶದ ಮೂಲೆ-ಮೂಲೆಗಳಲ್ಲೂ ಪ್ರಶ್ನೆಗಳನ್ನು ಎತ್ತಿದ್ದರು. ಪ್ರತೀ ಪತ್ರಿಕಾಗೋಷ್ಟಿಗಳಲ್ಲೂ ಮತ್ತು ಟ್ವಿಟರ್ ನಲ್ಲಿಯೂ ಪ್ರಶ್ನಿಸುತ್ತಿದ್ದರು. ಮೋದಿ ಅವರು ಈ ಕಿಸಾನ್ ಸಮ್ಮಾನ್ ನಿಧಿಯನ್ನು ಚುನಾವಣೆಗಳ ಹಿನ್ನೆಲೆಯಲ್ಲಿ ತಂದಿದ್ದಾರೆ ಎಂದು ಗಾಳಿ ಸುದ್ದಿ ಹರಡಿದ್ದರು. ಅವರು ಒಮ್ಮೆ 2000 ರೂ. ಕೊಟ್ಟರೆ,  ಮತ್ತೆ ಅವರು ಹಣ ಕೊಡುವುದಿಲ್ಲ ಎಂದಿದ್ದರು. ಅವರು ಹರಡುತ್ತಿದ್ದ ಇನ್ನೊಂದು ಸುಳ್ಳೆಂದರೆ ಕೊಡುವ 2000 ರೂ. ಗಳನ್ನು ಮುಂದೆ ಬಡ್ಡಿಯೊಂದಿಗೆ ಮರು ವಸೂಲು ಮಾಡಲಾಗುತ್ತದೆ ಎಂದಿದ್ದರು. ಒಂದು ನಿರ್ದಿಷ್ಟ ರಾಜ್ಯದಲ್ಲಿ ಎಷ್ಟೊಂದು ಸುಳ್ಳುಗಳನ್ನು ಹೇಳಲಾಯಿತೆಂದರೆ, ಅಲ್ಲಿಯ ರೈತರು 2000 ರೂಪಾಯಿಗಳನ್ನು ಪಡೆದುಕೊಳ್ಳಲು ನಿರಾಕರಿಸಿದರು. ಅಲ್ಲಿ ಕೆಲವು ರಾಜ್ಯಗಳಿವೆ, ಮತ್ತು ರೈತರ ಪರವಾಗಿ ಮಾತನಾಡುವ ಇಂತಹ ಒಂದು ರಾಜ್ಯವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ತನ್ನ ರಾಜ್ಯದಲ್ಲಿ ಜಾರಿ ಮಾಡಲು ಅವಕಾಶ ನೀಡಲಿಲ್ಲ. ಯಾಕೆಂದರೆ ರೈತರಿಗೆ ಹಣ ತಲುಪಿದರೆ, ಮತ್ತು ರೈತರು ಮೋದಿಯನ್ನು ಕೊಂಡಾಡಿದರೆ ತನ್ನ ರಾಜಕೀಯ ಕೊನೆಗೊಳ್ಳುತ್ತದೆ ಎಂಬ ಅವರ ಭೀತಿ ಇದಕ್ಕೆ ಕಾರಣ. ಅದು ರೈತರ ಕಿಸೆಗೆ ಹಣ ಹೋಗಲು ಬಿಡಲಿಲ್ಲ. ಆ ರಾಜ್ಯಗಳ ರೈತರಿಗೆ ನಾನು ಹೇಳುತ್ತೇನೆ, ನಮ್ಮ ಸರಕಾರ ಯಾವಾಗ ರಚನೆಯಾಗುತ್ತದೋ, ಆಗ ಈ ಹಣವನ್ನು ನಾನು ರೈತರಿಗೆ ಕೊಡುತ್ತೇನೆ.

ಸ್ನೇಹಿತರೇ,

ದೇಶದ 10 ಕೋಟಿಗೂ ಅಧಿಕ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತಿದೆ. ಮತ್ತು ಅದನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ಮಾಡಲಾಗುತ್ತಿದೆ. ನಾವು ವರ್ಷಕ್ಕೆ ಮೂರು ಬಾರಿ ಹಣವನ್ನು ನೀಡುತ್ತಿದ್ದೇವೆ ಮತ್ತು ಸುಮಾರು 1 ಲಕ್ಷ ಕೋ. ರೂ. ಗಳಷ್ಟು ಹಣ ರೈತರನ್ನು ತಲುಪಿದೆ.

ಸ್ನೇಹಿತರೇ,

ನಾವು ರೈತರಿಗೆ ಪೆನ್ಷನ್ ಯೋಜನೆಯನ್ನು ತಯಾರಿಸುವ ಬಗ್ಗೆ ಭರವಸೆ ನೀಡಿದ್ದೆವು.ಇಂದು ಪಿ.ಎಂ. ಕಿಸಾನ್ ಮಾನಧನ ಯೋಜನಾ ಜಾರಿಯಲ್ಲಿದೆ ಮತ್ತು 21 ಲಕ್ಷ ರೈತ ಕುಟುಂಬಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಈ ಯೋಜನೆಗೆ ಸೇರ್ಪಡೆಗೊಂಡಿವೆ.

ಸಹೋದರರೇ ಮತ್ತು ಸಹೋದರಿಯರೇ,

ಇದೇ ರೀತಿಯಲ್ಲಿ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದಕ್ಕಾಗಿ,  ರೈತರ ಹಿತಾಸಕ್ತಿಯ ಹಿನ್ನೆಲೆಯಲ್ಲಿ  ಹೊಸ ಕೃಷಿ ಸುಧಾರಣಾ ಕಾಯ್ದೆಗಳನ್ನು ತರಲಾಗಿದೆ. ಒಂದು ದಿನ, ನಾವು ಈ ಕಾಯ್ದೆಗಳು ರೈತರಿಗೆ ನ್ಯಾಯವನ್ನು ನೀಡುವಲ್ಲಿ ಎಷ್ಟು ಪ್ರಯೋಜನಕಾರಿ ಎಬುದನ್ನು ಖಚಿತವಾಗಿ ಅರಿಯಲಿದ್ದೇವೆ. ನಮಗೆ ಅದರ ಅನುಭವ ಆಗಲಿದೆ ಮತ್ತು ಮಾಧ್ಯಮಗಳಲ್ಲಿ ಧನಾತ್ಮಕ ಚರ್ಚೆ ನಡೆಯುತ್ತದೆ ಎಂಬುದಾಗಿ ನಾನು ಆಶಿಸುತ್ತೇನೆ. ಮತ್ತು ನಾವದನ್ನು ಓದುತ್ತೇವೆ ಮತ್ತು ನೋಡುತ್ತೇವೆ ಎಂಬುದಾಗಿಯೂ ಆಶಿಸುತ್ತೇನೆ. ದಶಕಗಳ ವಂಚನೆಯು ರೈತರನ್ನು ಆತಂಕಕ್ಕೆ ತಳ್ಳಿದೆ ಎಂಬುದರ ಬಗ್ಗೆ ನನಗೆ ಅರಿವಿದೆ. ಇದಕ್ಕೆ ರೈತರನ್ನು ದೂರಲಾಗದು. ಆದರೆ ನಾನು ದೇಶವಾಸಿಗಳಿಗೆ ಹೇಳಬಯಸುತ್ತೇನೆ ಏನೆಂದರೆ, ನನ್ನ ರೈತ ಸಹೋದರರೇ ಮತ್ತು ಸಹೋದರಿಯರೇ, ಆ ಕೆಲಸವನ್ನು ಗಂಗಾಜಲದಂತೆ ಪವಿತ್ರವಾದ ಮತ್ತು ಶುದ್ದವಾದ ಉದ್ದೇಶಗಳಿಂದ ಮಾಡಲಾಗಿದೆ. ಇದನ್ನು ನಾನು ಗಂಗೆಯ ದಡಗಳಿಂದ , ಪವಿತ್ರ ನಗರಿ ಕಾಶಿಯಿಂದ ಹೇಳಲು ಇಚ್ಚಿಸುತ್ತಿದ್ದೇನೆ.

ಸಹೋದರರೇ ಮತ್ತು ಸಹೋದರಿಯರೇ,

ನಿರಂತರವಾಗಿ ಬರೇ ಕಳವಳಗಳ ಆಧಾರದ ಮೇಲೆ ಭ್ರಮೆಗಳನ್ನು ಹರಡುತ್ತಿರುವ ಜನರ ಹಿಂದಿನ ಸತ್ಯವನ್ನು ದೇಶದೆದುರು ನಿರಂತರವಾಗಿ ಬಯಲು ಮಾಡಲಾಗುತ್ತಿದೆ. ರೈತರು ಅವರ ಸುಳ್ಳುಗಳನ್ನು ತಿಳಿದುಕೊಂಡಾಗ, ಅವರು ಇನ್ನೊಂದು ವಿಷಯದಲ್ಲಿ ಸುಳ್ಳುಗಳನ್ನು ಹರಡಲು ಆರಂಭ ಮಾಡುತ್ತಾರೆ. ಇದು ಅವರ 24/7 ಕೆಲಸ. ದೇಶದ ರೈತರಿಗೆ ಇದೆಲ್ಲದರ ಬಗ್ಗೆ ತಿಳಿದಿದೆ. ಇನ್ನೂ ಕೂಡಾ ಕೆಲವು ಕಳವಳ, ಆತಂಕಗಳನ್ನು ವ್ಯಕ್ತಪಡಿಸುತ್ತಾ, ಪ್ರಶ್ನೆಗಳನ್ನು ಕೇಳುತ್ತಿರುವ ರೈತ ಕುಟುಂಬಗಳಿಗೆ ಸರಕಾರ ನಿರಂತರವಾಗಿ ಉತ್ತರಿಸುತ್ತಿದೆ. ಮತ್ತು ಅದು ಪರಿಹಾರಗಳನ್ನು ಹುಡುಕಲು ಗರಿಷ್ಟ ಪ್ರಯತ್ನಗಳನ್ನು ನಡೆಸುತ್ತಿದೆ. ಅನ್ನಪೂರ್ಣ ತಾಯಿಯ ಆಶೀರ್ವಾದದಿಂದ,  ನಮ್ಮ ರೈತರು ಸ್ವಾವಲಂಬಿ ಭಾರತ ಆಂದೋಲನವನ್ನು ಮುನ್ನಡೆಸಲಿದ್ದಾರೆ. ಇಂದು ಕೃಷಿ ಸುಧಾರಣೆಗಳ ಬಗ್ಗೆ ಕೆಲವು ಸಂಶಯಗಳುಳ್ಳ ರೈತರು ಭವಿಷ್ಯದಲ್ಲಿ ಈ ಕೃಷಿ ಸುಧಾರಣೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ ಮತ್ತು ಅವರ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳುತ್ತಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಇದು,  ನನ್ನ ದೃಢ ವಿಶ್ವಾಸ.

ಕೊನೆಯಲ್ಲಿ, ನಾನು ಈ ಆಧುನಿಕ ಹೆದ್ದಾರಿಗಾಗಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಕಾಶಿಯನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲು ನಮ್ಮ ಪ್ರಯತ್ನಗಳು ಮುಂದುವರೆಯುತ್ತವೆ. ಬನಾರಾಸಿನಲ್ಲಿ ನನಗೆ ಹಲವು ಕಾರ್ಯಕ್ರಮಗಳಿವೆ, ಅಲ್ಲಿಯೂ ನಾನು ಹಲವು ವಿಷಯಗಳ ಬಗ್ಗೆ ವಿವರವಾಗಿ ಮಾತನಾಡಲಿದ್ದೇನೆ. ಈ ಬಾರಿ ನಾನು ಕೊರೊನಾದಿಂದಾಗಿ ವಿಳಂಬವಾಗಿ ಬಂದಿದ್ದೇನೆ. ಆದರೆ ನಾನು ತಮ್ಮನ್ನು ಭೇಟಿಯಾದ ಬಳಿಕ ಹೆಚ್ಚಿನ ಚೈತನ್ಯವನ್ನು ಪಡೆದುಕೊಂಡಿದ್ದೇನೆ. ನಿಮ್ಮ ಆಶೀರ್ವಾದದೊಂದಿಗೆ, ಕೆಲಸ ಮಾಡಲು ನನಗೆ ಹೊಸ ಶಕ್ತಿ ಬಂದಿದೆ. ಇದು ನನ್ನ ಶಕ್ತಿ, ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ನೀವು ಬಂದಿದ್ದೀರಿ, ಇದು ನನಗೆ ಆಶೀರ್ವಾದ, ಇದು ನನ್ನ ಶಕ್ತಿ. ನಾನು ನಿಮಗೆ ಅಭಾರಿಯಾಗಿದ್ದೇನೆ. ನಿಮ್ಮ ಮುಷ್ಟಿಯನ್ನು ಬಿಗಿ ಮಾಡಿ, ಪೂರ್ಣ ಶಕ್ತಿಯೊಂದಿಗೆ ಹೇಳಿ-ಭಾರತ್ ಮಾತಾ ಕೀ ಜೈ.

ಬಹಳ ಬಹಳ ಧನ್ಯವಾದಗಳು!

***(Release ID: 1678224) Visitor Counter : 21