ಪ್ರಧಾನ ಮಂತ್ರಿಯವರ ಕಛೇರಿ

ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣ

Posted On: 12 NOV 2020 9:05PM by PIB Bengaluru

ಮೊದಲಿಗೆ, ಎಲ್ಲಾ ಯುವಜನರು ಘೋಷಣೆ ಕೂಗಬೇಕೆಂದು ನನ್ನ ಮನವಿ, ಸ್ವಾಮಿ ವಿವೇಕಾನಂದ ಎಂದು ನಾನು ಹೇಳುತ್ತೇನೆ - ನೀವು ದೀರ್ಘಕಾಲ ಬದುಕಬೇಕು, ದೀರ್ಘಕಾಲ ಬಾಳ ಬೇಕು ಎಂದು ಹೇಳಬೇಕು.

ಸ್ವಾಮಿ ವಿವೇಕಾನಂದರು ದೀರ್ಘಕಾಲ ಬದುಕಬೇಕು. ಸ್ವಾಮಿ ವಿವೇಕಾನಂದರು ದೀರ್ಘಕಾಲ ಬಾಳಬೇಕು.

ದೇಶದ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರೇ, ಜೆಎನ್‌ಯು ಉಪಕುಲಪತಿ ಪ್ರೊಫೆಸರ್ ಜಗದೇಶ್ ಕುಮಾರ್ ಅವರೇ, ಉಪಕುಲಪತಿ ಪ್ರೊಫೆಸರ್ ಆರ್.ಪಿ.ಸಿಂಗ್ ಅವರೇ, ಇಂದು ಈ ಕಾರ್ಯಕ್ರಮವನ್ನು ಸಾಕಾರಗೊಳಿಸಿದ ಜೆಎನ್‌ಯು ಹಳೆಯ ವಿದ್ಯಾರ್ಥಿ ಡಾ.ಮನೋಜ್ ಕುಮಾರ್ ಅವರೇ, ಶಿಲ್ಪಿ ಶ್ರೀ ನರೇಶ್ ಕುಮಾವಾತ್ ಅವರೇ, ಈ ಕಾರ್ಯಕ್ರಮದಲ್ಲಿ ವಿವಿಧ ಸ್ಥಳಗಳಿಂದ ಭಾಗವಹಿಸುತ್ತಿರುವ ಬೋಧಕವರ್ಗದವರು ಮತ್ತು ನನ್ನ ಎಲ್ಲಾ ಯುವ ಸ್ನೇಹಿತರೇ. ಈ ಮಹತ್ವದ ಸಂದರ್ಭದಲ್ಲಿ ಜೆಎನ್‌ಯು ಆಡಳಿತ, ಎಲ್ಲ ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು.

ಸ್ನೇಹಿತರೇ,

 “ಪ್ರತಿಮೆಯ ಮೇಲಿನ ನಂಬಿಕೆಯ ರಹಸ್ಯವೆಂದರೆ, ನೀವು ಅದರಿಂದ ದೈವತ್ವದ ದೃಷ್ಟಿಯನ್ನು ಬೆಳೆಸಿಕೊಳ್ಳುತ್ತೀರಿ.” ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಜೆಎನ್‌ಯುನಲ್ಲಿರುವ ವಿವೇಕಾನಂದರ ಈ ಪ್ರತಿಮೆ ಎಲ್ಲರಿಗೂ ಸ್ಫೂರ್ತಿ ನೀಡಲಿ ಮತ್ತು ಶಕ್ತಿ ತುಂಬಲಿ ಎಂದು ನಾನು ಬಯಸುತ್ತೇನೆ. ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ವ್ಯಕ್ತಿಯಲ್ಲೂ ನೋಡಲು ಬಯಸಿದ್ದ ಧೈರ್ಯವನ್ನು ಈ ಪ್ರತಿಮೆ ನೀಡಲಿ! ಈ ಪ್ರತಿಮೆಯು ಅವರ ಸಿದ್ಧಾಂತದ ಮುಖ್ಯ ಆಧಾರವಾಗಿರುವ ಸಹಾನುಭೂತಿಯನ್ನು ಕಲಿಸಲಿ.

ಈ ಪ್ರತಿಮೆಯು ರಾಷ್ಟ್ರದ ಬಗೆಗಿನ ಗಾಢವಾದ ಸಮರ್ಪಣೆ, ನಮ್ಮ ದೇಶದ ಮೇಲಿನ ತೀವ್ರವಾದ ಪ್ರೀತಿಯನ್ನು ನಮಗೆ ಕಲಿಸಲಿ, ಇದು ಸ್ವಾಮೀಜಿಯ ಜೀವನದ ಪ್ರಮುಖ ಸಂದೇಶವಾಗಿದೆ. ಈ ಪ್ರತಿಮೆಯು ದೇಶವನ್ನು ಏಕತೆಯ ದೃಷ್ಟಿಗೆ ಪ್ರೇರೇಪಿಸಲಿ, ಅದು ಸ್ವಾಮೀಜಿಯ ಚಿಂತನೆಯ ಪ್ರೇರಣೆಯಾಗಿದೆ. ಈ ಪ್ರತಿಮೆ ಸ್ವಾಮಿಜಿಯ ನಿರೀಕ್ಷೆಯಾಗಿರುವ ಯುವಕರ ನೇತೃತ್ವದ ಅಭಿವೃದ್ಧಿಯ ದೃಷ್ಟಿಕೋನದಿಂದ ದೇಶವನ್ನು ಮುಂದುವರಿಸಲು ಪ್ರೇರೇಪಿಸಲಿ. ಬಲವಾದ-ಸಮೃದ್ಧ ಭಾರತದ ಸ್ವಾಮೀಜಿಯ ಕನಸನ್ನು ನನಸಾಗಿಸಲು ಈ ಪ್ರತಿಮೆ ನಮಗೆ ಪ್ರೇರಣೆ ನೀಡಲಿ.

ಸ್ನೇಹಿತರೇ,

ಇದು ಕೇವಲ ಪ್ರತಿಮೆಯಲ್ಲ, ಆದರೆ ಇದು ಒಬ್ಬ ಯೋಗಿಯು ಭಾರತವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕಲ್ಪನೆಗೆ ಸಂಕೇತವಾಗಿದೆ. ಅವರಿಗೆ ವೇದಾಂತದ ಆಳವಾದ ಜ್ಞಾನವಿತ್ತು. ಅವರಿಗೆ ದೃಷ್ಟಿ ಇತ್ತು. ಭಾರತವು ಜಗತ್ತಿಗೆ ಏನು ನೀಡಬಹುದೆಂದು ಅವರಿಗೆ ತಿಳಿದಿತ್ತು. ಅವರು ವಿಶ್ವಕ್ಕೆ ಭ್ರಾತೃತ್ವದ ಸಂದೇಶವನ್ನು ಹರಡಿದರು. ಭಾರತದ ಸಾಂಸ್ಕೃತಿಕ ವೈಭವ, ವಿಚಾರಗಳು ಮತ್ತು ಸಂಪ್ರದಾಯಗಳನ್ನು ಅವರು ಅದ್ಭುತ ರೀತಿಯಲ್ಲಿ ಜಗತ್ತಿನ ಮುಂದೆ ಮಂಡಿಸಿದರು.

ನಿರಾಶೆ ಮತ್ತು ಹತಾಶೆಯೇ ಸುತ್ತಲೂ ಕವಿದಿದ್ದಾಗ ಮತ್ತು ನಾವು ಗುಲಾಮಗಿರಿಯಲ್ಲಿದ್ದಾಗ ಅಮೆರಿಕದ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಸ್ವಾಮೀಜಿಯವರು ಏನು ಮಾತನಾಡಿದರೆಂದು ನೀವು ಊಹಿಸಬಲ್ಲಿರಾ? ಮತ್ತು ಅವರು ಅದನ್ನು ಹೇಳಿದ್ದು ಕಳೆದ ಶತಮಾನದ ಆರಂಭದಲ್ಲಿಯೇ. ಅವರು ಏನು ಹೇಳಿದರು? ಭಾರತದ ಈ ಯೋಗಿಯು ಘೋಷಣೆ ಮಾಡಿದರು ಮತ್ತು ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ತತ್ವಜ್ಞಾನವನ್ನು ಪ್ರದರ್ಶಿಸಿದರು.

ಈ ಶತಮಾನವು ನಿಮಗೆ ಸೇರಿದೆ ಎಂದು ಅವರು ಹೇಳಿದರು. ಕಳೆದ ಶತಮಾನದ ಆರಂಭದಲ್ಲಿ ಅವರು ಹೇಳಿದ್ದು- “ಈ ಶತಮಾನವು ನಿಮಗೆ ಸೇರಿದೆ, ಆದರೆ 21 ನೇ ಶತಮಾನ ಖಂಡಿತವಾಗಿಯೂ ಭಾರತಕ್ಕೆ ಸೇರಿದ್ದು.” ಎಂದು. ಅವರ ಮಾತುಗಳು ಸತ್ಯವೆಂದು ಕಳೆದ ಶತಮಾನದಲ್ಲಿ ಸಾಬೀತಾಗಿವೆ. ಈ ಶತಮಾನದಲ್ಲಿ ಅವರ ಮಾತುಗಳನ್ನು ಸಾಬೀತುಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ.

ಈ ಪ್ರತಿಮೆಯು ಭಾರತೀಯರ ಆತ್ಮ ವಿಶ್ವಾಸ ಮತ್ತು ಮನೋಭಾವದ ಸಾಕಾರವಾಗಿದೆ. ಈ ಪ್ರತಿಮೆಯು ದೀರ್ಘಾವಧಿಯ ಗುಲಾಮಗಿರಿಯಿಂದಾಗಿ ತನ್ನ ಸಾಮರ್ಥ್ಯ ಮತ್ತು ಗುರುತನ್ನು ಮರೆತುಹೋಗಿದ್ದ ಭಾರತವನ್ನು ಜಾಗೃತಗೊಳಿಸಿದ ತತ್ವವನ್ನು ಪ್ರತಿನಿಧಿಸುತ್ತದೆ.

ಸ್ನೇಹಿತರೇ,

ಇಂದು, ದೇಶವು ಸ್ವಾವಲಂಬಿ ಭಾರತದ ಗುರಿ ಮತ್ತು ಸಂಕಲ್ಪದೊಂದಿಗೆ ಸಾಗುತ್ತಿದೆ. ಇಂದು, ಸ್ವಾವಲಂಬಿ ಭಾರತದ ಕಲ್ಪನೆಯು 130 ಕೋಟಿಗೂ ಹೆಚ್ಚು ಭಾರತೀಯರ ಸಾಮೂಹಿಕ ಪ್ರಜ್ಞೆ ಮತ್ತು ಆಕಾಂಕ್ಷೆಗಳ ಭಾಗವಾಗಿದೆ. ಸ್ವಾವಲಂಬಿ ಭಾರತದ ಗುರಿಯು ಕೇವಲ ಭೌತಿಕವಾದ ಅಥವಾ ವಸ್ತುವಿನ ಸ್ವಾವಲಂಬನೆಗೆ ಸೀಮಿತವಾಗಿಲ್ಲ. ಸ್ವಾವಲಂಬನೆಯ ಅರ್ಥವು ಅಗಾಧವಾಗಿದೆ, ಅದರ ವ್ಯಾಪ್ತಿ ಬಹಳ ವಿಸ್ತಾರವಾಗಿದೆ. ಸಂಪನ್ಮೂಲಗಳಲ್ಲಿ ಮಾತ್ರವಲ್ಲದೆ ಆಲೋಚನೆ ಮತ್ತು ಸಂಸ್ಕೃತಿಗಳಲ್ಲಿಯೂ ಸ್ವಾವಲಂಬಿಗಳಾದಾಗ ಮಾತ್ರ ಸ್ವಾವಲಂಬಿ ರಾಷ್ಟ್ರವು ಸಾಕಾರಗೊಳ್ಳುತ್ತದೆ.

ಒಮ್ಮೆ ವಿದೇಶದಲ್ಲಿ ಸ್ವಾಮೀಜಿಯನ್ನು ಯಾರೋ ಒಬ್ಬರು, ನೀವು ಸಂಭಾವಿತರಂತೆ ಕಾಣುವ ಉಡುಪನ್ನು ಏಕೆ ಧರಿಸಬಾರದು ಎಂದು ಕೇಳುತ್ತಾರೆ.  ಅದಕ್ಕೆ ಸ್ವಾಮೀಜಿಯವರು ನೀಡಿದ ಉತ್ತರವು ಭಾರತದ ಆತ್ಮ ವಿಶ್ವಾಸ ಮತ್ತು ಮೌಲ್ಯಗಳನ್ನು ಒತ್ತಿಹೇಳುತ್ತದೆ. ನಿಮ್ಮ ಸಂಸ್ಕೃತಿಯಲ್ಲಿ ಒಬ್ಬ ದರ್ಜಿಯು ಒಬ್ಬ ಸಂಭಾವಿತ ವ್ಯಕ್ತಿಯನ್ನು ರೂಪಿಸುತ್ತಾನೆ. ಆದರೆ ಸಂಭಾವಿತರನ್ನು ನಿರ್ಣಯಿಸುವ ಲಕ್ಷಣವು ನಮ್ಮ ಸಂಸ್ಕೃತಿಯಲ್ಲಿಯೇ ಇದೆ ಎಂದು ಸ್ವಾಮೀಜಿ ಆ ಸಂಭಾವಿತ ವ್ಯಕ್ತಿಗೆ ಉತ್ತರಿಸಿದರು, ಈ ಆವರಣ ಮತ್ತು ನಿಮ್ಮಂತಹ ಯುವಜನರು ಸ್ವಾವಲಂಬನೆಯ ಚಿಂತನೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತಾರೆ.

ಸ್ನೇಹಿತರೇ,

ದೇಶದ ಯುವಕರು ವಿಶ್ವದಾದ್ಯಂತ ಭಾರತದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನಮ್ಮ ಯುವಕರು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿ ಬಗ್ಗೆ ಹೆಮ್ಮೆ ಪಡುವುದು ಮಾತ್ರವಲ್ಲ, 21 ನೇ ಶತಮಾನದಲ್ಲಿ ಭಾರತದ ಹೊಸ ಗುರುತನ್ನು ರೂಪಿಸುವುದು. ಈ ಹಿಂದೆ ನಾವು ಜಗತ್ತಿಗೆ ಏನು ನೀಡಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮತ್ತು ಹೇಳುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಆತ್ಮವಿಶ್ವಾಸದ ಆಧಾರದ ಮೇಲೆ ನಾವು ಭವಿಷ್ಯಕ್ಕಾಗಿ ಕೆಲಸ ಮಾಡಬೇಕು. 21 ನೇ ಶತಮಾನದಲ್ಲಿ ಭಾರತವು ಜಗತ್ತಿಗೆ ಏನು ಕೊಡುಗೆ ನೀಡಬಹುದು ಎಂಬುದನ್ನು ಅನ್ವೇಷಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ.

ಸ್ನೇಹಿತರೇ,

ದೇಶದ ನೀತಿ ಮತ್ತು ಯೋಜನೆಗೆ ಪ್ರಮುಖ ಕೊಂಡಿಯಾಗಿರುವ ನಮ್ಮ ಯುವ ಸ್ನೇಹಿತರು ಸ್ವಾವಲಂಬನೆಯ ಎಂದರೆ ಏನು ಎಂಬ ಪ್ರಶ್ನೆಯನ್ನು ಹೊಂದಿರಬೇಕು. ಅದು ಯಾರೊಬ್ಬರಿಗೆ ಮಾತ್ರ ಸೀಮಿತವೇ? ಸ್ವಾಮಿ ವಿವೇಕಾನಂದರ ಸಿದ್ಧಾಂಗಳಲ್ಲಿಯೂ ನಾವು ಇದಕ್ಕೆ ಉತ್ತರವನ್ನು ಪಡೆಯುತ್ತೇವೆ. ಒಮ್ಮೆ ವಿವೇಕಾನಂದರಿಗೆ ಒಬ್ಬರು ಕೇಳುತ್ತಾರೆ, ತನ್ನ ದೇಶವೊಂದರ ಬದಲು ಎಲ್ಲ ದೇಶಗಳನ್ನು ಯಾಕೆ ಅಪ್ಪಿಕೊಳ್ಳಬಾರದು ಎಂದು. ‘ತನ್ನ ತಾಯಿಗೆ ವಾತ್ಸಲ್ಯವನ್ನು ನೀಡಲು ಸಾಧ್ಯವಾಗದವರು, ಬೇರೆಯವರ ತಾಯಂದಿರ ಬಗ್ಗೆ ಹೇಗೆ ಚಿಂತಿಸುತ್ತಾನೆ?’ ಎಂದು ಅವರು ಸಹಜವಾಗಿ ಉತ್ತರಿಸುತ್ತಾರೆ. ಆದ್ದರಿಂದ, ನಮ್ಮ ಸ್ವಾವಲಂಬನೆಯು ಇಡೀ ಮಾನವೀಯತೆಯ ಕಲ್ಯಾಣಕ್ಕಾಗಿ ಮತ್ತು ನಾವು ಇದನ್ನು ತೋರಿಸುತ್ತಿದ್ದೇವೆ. ಭಾರತದ ಶಕ್ತಿ ಹೆಚ್ಚಾದಾಗಲೆಲ್ಲಾ ಜಗತ್ತಿಗೆ ಲಾಭವಾಗಿದೆ. ಭಾರತದ ಸ್ವಾವಲಂಬನೆಯ ಪರಿಕಲ್ಪನೆಯು ಇಡೀ ಪ್ರಪಂಚದ ಕಲ್ಯಾಣಕ್ಕೆ ಕಾರಣವಾಗುತ್ತದೆ.

ಸ್ನೇಹಿತರೇ,

ಇಂದು ಪ್ರತಿಯೊಂದು ವಲಯದಲ್ಲೂ ಸ್ವಾವಲಂಬನೆಯ ಮನೋಭಾವದಿಂದ ಅಭೂತಪೂರ್ವ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸುಧಾರಣೆಗಳನ್ನು ದೇಶದ ಜನರು ಮತದಾನದ ಮೂಲಕವೂ ಬೆಂಬಲಿಸಿದ್ದಾರೆ. ನೀವೆಲ್ಲರೂ ಜೆಎನ್‌ಯುನಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಗಂಭೀರವಾಗಿ ಅಧ್ಯಯನ ಮಾಡುತ್ತೀರಿ. ಭಾರತದಲ್ಲಿನ ಸುಧಾರಣೆಗಳ ಬಗ್ಗೆ ಏನು ಹೇಳಲಾಗುತ್ತಿದೆ ಎಂದು ನಿಮಗಿಂತ ಚೆನ್ನಾಗಿ ಬಲ್ಲವರು ಯಾರು? ಉತ್ತಮ ಸುಧಾರಣೆಗಳನ್ನು ಭಾರತದಲ್ಲಿ ಕೆಟ್ಟ ರಾಜಕೀಯವೆಂದು ಪರಿಗಣಿಸಲಾಗಿತ್ತು ಎಂಬುದು ನಿಜವಲ್ಲವೇ? ಹಾಗಾದರೆ, ಉತ್ತಮ ಸುಧಾರಣೆಗಳು ಉತ್ತಮ ರಾಜಕಾರಣವಾಗುವುದು ಹೇಗೆ?

ಭಾರತದಲ್ಲಿ ಕೆಟ್ಟ ರಾಜಕೀಯ? ಹಾಗಾದರೆ, ಉತ್ತಮ ಸುಧಾರಣೆಗಳು ಉತ್ತಮ ರಾಜಕಾರಣವಾಗುವುದು ಹೇಗೆ?

ಜೆಎನ್‌ಯುನಲ್ಲಿ ನೀವೆಲ್ಲರೂ ಇದರ ಬಗ್ಗೆ ಸಂಶೋಧನೆ ನಡೆಸಬೇಕು. ನನ್ನ ಅನುಭವದ ಆಧಾರದ ಮೇಲೆ, ಒಂದು ಅಂಶವನ್ನು ನಿಮ್ಮ ಮುಂದೆ ಇಡುತ್ತೇನೆ. ಇಂದು ವ್ಯವಸ್ಥೆಯಲ್ಲಿ ಎಷ್ಟು ಮಾಡಲಾಗುತ್ತಿರುವ ಸುಧಾರಣೆಗಳ ಹಿಂದಿನ ಸಂಕಲ್ಪವೆಂದರೆ ಭಾರತವನ್ನು ಎಲ್ಲ ರೀತಿಯಲ್ಲೂ ಉತ್ತಮಗೊಳಿಸುವುದು. ಇಂದು ನಡೆಯುತ್ತಿರುವ ಸುಧಾರಣೆಗಳ ಉದ್ದೇಶಗಳು ಮತ್ತು ಸಮಗ್ರತೆಯು ಪವಿತ್ರವಾಗಿದೆ. ಇಂದು ಸುಧಾರಣೆಗಳನ್ನು ಕೈಗೊಳ್ಳುವ ಮೊದಲು ಸುರಕ್ಷತಾ ಜಾಲವನ್ನು ರಚಿಸಲಾಗುತ್ತಿದೆ. ಈ ಸುರಕ್ಷತಾ ಜಾಲದಲ್ಲಿ ಪ್ರಮುಖವಾದುದು ನಂಬಿಕೆ. ಉದಾಹರಣೆಗೆ, ರೈತ ಪರ ಸುಧಾರಣೆಗಳ ಬಗ್ಗೆ ಮಾತನಾಡೋಣ. ದಶಕಗಳಿಂದ, ರೈತ ರಾಜಕೀಯ ಚರ್ಚೆಯ ವಿಷಯವಾಗಿದ್ದನು. ಅವರ ಹಿತಾಸಕ್ತಿಗಳನ್ನು ಕಾಯುವ ಯಾವುದೇ ಕ್ರಮಗಳು ಆಗಲಿಲ್ಲ.

ಕಳೆದ 5-6 ವರ್ಷಗಳಲ್ಲಿ, ನಾವು ನೀರಾವರಿಗಾಗಿ ಉತ್ತಮ ಮೂಲಸೌಕರ್ಯ, ಮಾರುಕಟ್ಟೆಗಳು ಆಧುನೀಕರಣದಲ್ಲಿ ಹೂಡಿಕೆ, ಯೂರಿಯಾ ಲಭ್ಯತೆ, ಮಣ್ಣಿನ ಆರೋಗ್ಯ ಕಾರ್ಡ್‌ಗಳು, ಉತ್ತಮ ಬೀಜಗಳು, ಬೆಳೆ ವಿಮಾ ಯೋಜನೆ ಮತ್ತು ರೈತರಿಗೆ ಸುರಕ್ಷತಾ ಜಾಲವನ್ನು ಅಭಿವೃದ್ಧಿಪಡಿಸಿದ್ದೇವೆ. ಉತ್ಪನ್ನಗಳ ವೆಚ್ಚದ ಎಂಎಸ್‌ಪಿ ಅರ್ಧದಷ್ಟು ಹೆಚ್ಚಳ, ಆನ್‌ಲೈನ್ ಮಾರುಕಟ್ಟೆಗೆ ಇ-ನಾಮ್ ಅಥವಾ ಪ್ರಧಾನಿ ಸಮ್ಮಾನ್ ನಿಧಿ ಯೋಜನೆಯಡಿ ನೇರ ನೆರವು ನೀಡುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ, ಎಂಎಸ್ಪಿಯನ್ನು ಹಲವಾರು ಬಾರಿ ಹೆಚ್ಚಿಸಲಾಗಿದೆ ಮತ್ತು ರೈತರಿಂದ ದಾಖಲೆಯ ಖರೀದಿ ಮಾಡಲಾಗಿದೆ. ರೈತರ ಸುತ್ತಲೂ ಸುರಕ್ಷತಾ ಜಾಲವನ್ನು ಹೆಣೆದ ನಂತರವೇ ಮತ್ತು ಅವರ ನಂಬಿಕೆಯನ್ನು ಹೆಚ್ಚಿಸಿದ ನಂತರವೇ ನಾವು ಕೃಷಿ ಸುಧಾರಣೆಗಳನ್ನು ತಂದಿದ್ದೇವೆ.

ಈ ಮೊದಲು ನಾವು ರೈತರ ಅವಶ್ಯಕತೆಗಳ ಬಗ್ಗೆ ಕೆಲಸ ಮಾಡಿದ್ದೆವು, ಈಗ ರೈತರ ಆಕಾಂಕ್ಷೆಗಳನ್ನು ಈಡೇರಿಸುವ ಕೆಲಸ ನಡೆಯುತ್ತಿದೆ. ಈಗ ರೈತರು ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ವಿಧಾನಗಳಿಗಿಂತ ಹೆಚ್ಚಿನ ಆಯ್ಕೆಗಳನ್ನು ಪಡೆಯುತ್ತಿದ್ದಾರೆ. ಹೆಚ್ಚು ಆಯ್ಕೆಗಳು ಖರೀದಿದಾರರಲ್ಲಿ ಸ್ಪರ್ಧೆಯನ್ನು ಹೆಚ್ಚಿಸುತ್ತವೆ ಮತ್ತು ಇದು ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಸುಧಾರಣೆಗಳು ಈಗ ರೈತ ಉತ್ಪಾದಕ ಸಂಘಟನೆಗಳ ಮೂಲಕ ಅಂದರೆ ಎಫ್‌ಪಿಒಗಳ ಮೂಲಕ ರೈತರು ನೇರವಾಗಿ ರಫ್ತುದಾರರಾಗಲು ದಾರಿ ಮಾಡಿಕೊಟ್ಟಿವೆ.

ಸ್ನೇಹಿತರೇ,

ಬಡವರ ಮತ್ತು ರೈತರ ಹಿತದೃಷ್ಟಿಯಿಂದ ಸುಧಾರಣೆಗಳ ಸಂದರ್ಭದಲ್ಲಿ ಇದೇ ಹಾದಿಯನ್ನು ಅನುಸರಿಸಲಾಗುತ್ತಿದೆ. ಬಹಳಕಾಲದವರೆಗೂ, ಬಡವರಿಗೆ ಸುಧಾರಣೆಗಳು ಘೋಷಣೆಗಳಲ್ಲಿ ಮಾತ್ರ ಇದ್ದವು. ವಾಸ್ತವವೆಂದರೆ ದೇಶದ ಬಡವರನ್ನು ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಯಾವುದೇ ಪ್ರಯತ್ನಗಳು ನಡೆಯಲಿಲ್ಲ. ಬಡವರು ಹೆಚ್ಚು ನಿರ್ಲಕ್ಷ್ಯಕ್ಕೊಳಗಾದರು, ಹೆಚ್ಚು ಸಂಪರ್ಕವಿಲ್ಲದಂತಾದರು ಮತ್ತು ಆರ್ಥಿಕವಾಗಿ ಹೊರಗುಳಿದವರಾದರು. ಈಗ ಬಡವರು ತಮ್ಮ ಸ್ವಂತ ಮನೆ, ಶೌಚಾಲಯ, ವಿದ್ಯುತ್, ಅನಿಲ, ಶುದ್ಧ ಕುಡಿಯುವ ನೀರು, ಡಿಜಿಟಲ್ ಬ್ಯಾಂಕಿಂಗ್, ಕೈಗೆಟುಕುವ ಮೊಬೈಲ್ ಸಂಪರ್ಕ ಮತ್ತು ಇತರ ನಾಗರಿಕರಿಗೆ ಲಭ್ಯವಿರುವಂತೆ ವೇಗವಾಗಿ ಇಂಟರ್ನೆಟ್ ಸಂಪರ್ಕವನ್ನು ಪಡೆಯುತ್ತಿದ್ದಾರೆ. ಇದು ಬಡವರ ಸುತ್ತಲೂ ನೇಯ್ದ ಸುರಕ್ಷತಾ ಜಾಲವಾಗಿದೆ, ಇದು ಅವನ ಆಕಾಂಕ್ಷೆಗಳ ಈಡೇರಿಕೆಗೆ ಅವಶ್ಯಕವಾಗಿದೆ.

ಸ್ನೇಹಿತರೇ,

ಇನ್ನೂ ಒಂದು ಸುಧಾರಣೆಯೆಂದರೆ ರಾಷ್ಟ್ರೀಯ ಶಿಕ್ಷಣ ನೀತಿ, ಇದು ಜೆಎನ್‌ಯುನಂತಹ ದೇಶದ ವಿವಿ ಕ್ಯಾಂಪಸ್‌ಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಮೌಲ್ಯಗಳಾದ ಆತ್ಮವಿಶ್ವಾಸ, ದೃಢನಿಶ್ಚಯ ಮತ್ತು ಮನೋಭಾವದೊಂದಿಗೆ ಯುವ ಭಾರತವನ್ನು ಸೃಷ್ಟಿಸುವುದು. ಇದು ವಿವೇಕಾನಂದರ ದೃಷ್ಟಿ. ಭಾರತದಲ್ಲಿ ಶಿಕ್ಷಣವು ಎಲ್ಲಾ ರೀತಿಯಲ್ಲೂ ಸ್ವಾವಲಂಬಿಯಾಗಿರಬೇಕೆಂದು ಅವರು ಬಯಸಿದ್ದರು.

ಎರಡೂವರೆ ದಶಕಗಳ ನಂತರ ಪಡೆಯುವ ಆತ್ಮವಿಶ್ವಾಸವು ಶಾಲಾ ಜೀವನದ ಆರಂಭದಲ್ಲಿಯೇ ಯುವಕರಿಗೆ ಏಕೆ ಸಿಗಬಾರದು? ಅಂಕಪಟ್ಟಿ, ಪದವಿ ಅಥವಾ ಡಿಪ್ಲೊಮಾವನ್ನು ಗುರುತಿಸಲು ಯುವ ಶಕ್ತಿಯನ್ನು ಕೇವಲ ಪುಸ್ತಕದ ಜ್ಞಾನದ ಸಂಕೋಲೆಗಳಿಂದ  ಏಕೆ ಬಂಧಿಸಬೇಕು? ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಗರಿಷ್ಠ ಗಮನವು ಇದರ ಮೇಲೆ ಇದೆ. ಎಲ್ಲರನ್ನೂ ಒಳಗೊಳ್ಳುವುದು ಹೊಸ ಎನ್‌ಇಪಿಯ ಕೇಂದ್ರಭಾಗದಲ್ಲಿದೆ. ಈ ಎನ್ಇಪಿಯ ಪ್ರಮುಖ ಅಂಶವೆಂದರೆ, ಇಲ್ಲಿ ಭಾಷೆ ಕೇವಲ ಮಾಧ್ಯಮವಾಗಿದೆ ಮತ್ತು ಅದು ಜ್ಞಾನದ ಅಳತೆಗೋಲ್ಲ. ದೇಶದ ಕಡುಬಡವರು, ಹೆಣ್ಣುಮಕ್ಕಳು, ತಮ್ಮ ಅಗತ್ಯತೆಗಳಿಗೆ ಮತ್ತು ಅವರ ಅನುಕೂಲಕ್ಕೆ ಅನುಗುಣವಾಗಿ ಉತ್ತಮ ಶಿಕ್ಷಣದ ಹಕ್ಕನ್ನು ಪಡೆಯುವುದನ್ನು ಖಾತ್ರಿಪಡಿಸಲಾಗಿದೆ.

ಸ್ನೇಹಿತರೇ,

ಸುಧಾರಣೆಗಳನ್ನು ಕೇವಲ ನಿರ್ಧರಿಸುವುರಿಂದ  ಏನೇನೂ ಆಗುವುದಿಲ್ಲ. ನಾವು ಅವುಗಳನ್ನು ನಮ್ಮ ಜೀವನದಲ್ಲಿ ಹೇಗೆ ಅನುಷ್ಠಾನಗೊಳಿಸುತ್ತೇವೆ ಎಂಬುದು ಮುಖ್ಯ. ನಾವು, ನೀವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಬದಲಾವಣೆಯು ಬರುತ್ತದೆ. ಇದು ವಿಶೇಷವಾಗಿ ನಮ್ಮ ಶಿಕ್ಷಕ ಮತ್ತು ಬೌದ್ಧಿಕ ವರ್ಗದ ಅತ್ಯುನ್ನತ ಜವಾಬ್ದಾರಿಯಾಗಿದೆ. ಸ್ನೇಹಿತರೇ, ಈ ಜೆಎನ್‌ಯು ಕ್ಯಾಂಪಸ್‌ನಲ್ಲಿ ಒಂದು ಬಹಳ ಜನಪ್ರಿಯ ಸ್ಥಳವಿದೆ. ಅದು ಯಾವುದು? ಸಬರಮತಿ ಢಾಬಾ? ಅಲ್ಲವೇ? ಅಲ್ಲಿ ಎಷ್ಟು ವಿದ್ಯಾರ್ಥಿಗಳ ಲೆಕ್ಕದ ಖಾತೆಗಳಿವೆ? ನಿಮ್ಮ ತರಗತಿಗಳ ನಂತರ ನೀವು ಈ ಢಾಬಾಗೆ ಹೋಗಿ ಚಹಾ ಮತ್ತು ಪರಾಟ ಸೇವಿಸುತ್ತಾ ಚರ್ಚೆ ಮತ್ತು ವಿಚಾರ ವಿನಿಮಯ ಮಾಡಿಕೊಳ್ಳುತ್ತೀರಿ ಎಂದು ನಾನು ಕೇಳಿದ್ದೇನೆ. ಹೊಟ್ಟೆ ತುಂಬಿದ್ದರೆ, ಯಾರಾದರೂ ಚರ್ಚೆಯನ್ನು ಆನಂದಿಸುತ್ತಾರೆ. ಇದುವರೆಗೆ, ಸಬರಮತಿ ಢಾಬಾವು ನಿಮ್ಮ ವಿಚಾರಗಳು ಮತ್ತು ಚರ್ಚೆಗಳ ಹಸಿವನ್ನು ತಣಿಸುತ್ತಿತ್ತು. ಈಗ ವಿವೇಕಾನಂದರ ಈ ಪ್ರತಿಮೆಯು ನಿಮಗೆ ಮತ್ತೊಂದು ಅಂತಹ ಸ್ಥಳವಾಗಿದೆ.

ಸ್ನೇಹಿತರೇ,

ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರಿ ಹಾನಿ ಉಂಟುಮಾಡಿದ ಒಂದು ವಿಷಯವಿದ್ದರೆ, ಅದು ರಾಷ್ಟ್ರೀಯ ಹಿತಾಸಕ್ತಿಗಿಂತಲೂ ಸಿದ್ಧಾಂತಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದು. ನನ್ನ ಸಿದ್ಧಾಂತದ ಪ್ರಕಾರ ದೇಶದ ಹಿತಾಸಕ್ತಿಯ ಬಗ್ಗೆ ನಾನು ಯೋಚಿಸುತ್ತೇನೆ ಎನ್ನುವುದು. ಇದು ಸರಿಯಾದ ವಿಧಾನವಲ್ಲ. ಸ್ನೇಹಿತರೇ, ಇದು ತಪ್ಪು. ಪ್ರತಿಯೊಬ್ಬರೂ ತಮ್ಮ ಸಿದ್ಧಾಂತದ ಬಗ್ಗೆ ಹೆಮ್ಮೆ ಪಡುತ್ತಾರೆ. ಇದು ಸಹಜ. ಆದರೆ, ನಮ್ಮ ಸಿದ್ಧಾಂತವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ರಾಷ್ಟ್ರದೊಂದಿಗೆ ಪ್ರತಿಫಲಿಸಬೇಕೇ ಹೊರತು, ರಾಷ್ಟ್ರದ ವಿರುದ್ಧವಾಗಿರಬಾರದು.

ದೇಶದ ಇತಿಹಾಸವನ್ನು ನೋಡಿ. ಹಿಂದೆ, ದೇಶವು ಕಠಿಣ ಸಮಯವನ್ನು ಎದುರಿಸಿದಾಗಲೆಲ್ಲಾ, ವಿವಿಧ ಸಿದ್ಧಾಂತಗಳ ಜನರು ರಾಷ್ಟ್ರದ ಹಿತದೃಷ್ಟಿಯಿಂದ ಒಗ್ಗೂಡುತ್ತಾರೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಮಹಾತ್ಮ ಗಾಂಧೀಯವರ ನಾಯಕತ್ವದಲ್ಲಿ ವೈವಿಧ್ಯಮಯ ಆಲೋಚನೆಗಳ ಜನರು ಒಗ್ಗೂಡಿದರು. ಅವರು ದೇಶಕ್ಕಾಗಿ ಒಟ್ಟಾಗಿ ಹೋರಾಡಿದ್ದರು

ಬಾಪು ಅವರ ನಾಯಕತ್ವದಲ್ಲಿ ಯಾವುದೇ ವ್ಯಕ್ತಿಯು ತನ್ನ ಸಿದ್ಧಾಂತವನ್ನು ಬಿಟ್ಟುಕೊಡಬೇಕಾಗಿರಲಿಲ್ಲ. ಪ್ರತಿಯೊಬ್ಬರೂ ಸಾಮಾನ್ಯ ಕಾರಣಕ್ಕೆ ಆದ್ಯತೆ ನೀಡುವ ಸಂದರ್ಭಗಳು ಇವೆ. ತುರ್ತು ಪರಿಸ್ಥಿತಿಯಲ್ಲೂ ದೇಶವು ಇದೇ ರೀತಿಯ ಏಕತೆಯನ್ನು ತೋರಿಸಿತು. ಆ ಚಳವಳಿಯ ಭಾಗವಾಗಿದ್ದ ನಾನು ಅದೃಷ್ಟಶಾಲಿ. ನನ್ನ ಕಣ್ಣಿನಿಂದ ಎಲ್ಲವನ್ನೂ ನೋಡಿದ್ದೇನೆ, ಅದನ್ನು ಅನುಭವಿಸಿದ್ದೇನೆ ಮತ್ತು ನಾನು ನೇರ ಸಾಕ್ಷಿಯಾಗಿದ್ದೇನೆ.

ಕಾಂಗ್ರೆಸ್ಸಿನ ಮಾಜಿ ನಾಯಕರು ಮತ್ತು ಕಾರ್ಯಕರ್ತರು, ಆರ್‌ಎಸ್‌ಎಸ್ ಮತ್ತು ಜನ ಸಂಘದ ಕಾರ್ಯಕರ್ತರು, ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಇದರಲ್ಲಿ ಇದ್ದರು. ಜೆಎನ್‌ಯುನಿಂದ ಅನೇಕ ಮಂದಿ ತುರ್ತು ಪರಿಸ್ಥಿತಿಯ ವಿರುದ್ಧ ಒಟ್ಟಾಗಿ ಹೋರಾಡಿದರು. ಈ ಹೋರಾಟದ ವಿರುದ್ಧ ಅವರ ಸಿದ್ಧಾಂತದಲ್ಲಿ ಯಾರೂ ರಾಜಿ ಮಾಡಿಕೊಳ್ಳಲಿಲ್ಲ. ಒಂದೇ ಒಂದು ಗುರಿ ಇತ್ತು - ರಾಷ್ಟ್ರೀಯ ಹಿತಾಸಕ್ತಿ. ಈ ಗುರಿ ಅತ್ಯುನ್ನತವಾಗಿತ್ತು. ಆದ್ದರಿಂದ, ಸ್ನೇಹಿತರೇ, ರಾಷ್ಟ್ರೀಯ ಸಮಗ್ರತೆ ಅಥವಾ ಹಿತಾಸಕ್ತಿಯ ಪ್ರಶ್ನೆ ಬಂದಾಗ, ಕೈಗೊಳ್ಳುವ ನಿರ್ಧಾರಗಳು ಸಿದ್ಧಾಂತದಿಂದ ಹೇರಲ್ಪಟ್ಟರೆ ದೇಶದ ಹಿತಾಸಕ್ತಿಗೆ ಹಾನಿಯಾಗುತ್ತದೆ.

ಹೌದು, ಅವಕಾಶವಾದ ಅಥವಾ ಸ್ವಾರ್ಥಕ್ಕಾಗಿ ನಮ್ಮ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದು ತಪ್ಪು ಎಂದು ನಾನು ಒಪ್ಪುತ್ತೇನೆ. ಈ ಮಾಹಿತಿ ಯುಗದಲ್ಲಿ, ಅಂತಹ ಅವಕಾಶವಾದವು ಯಶಸ್ವಿಯಾಗುವುದಿಲ್ಲ, ನಾವು ಅದಕ್ಕೆ ಸಾಕ್ಷಿಯಾಗಿದ್ದೇವೆ. ನಾವು ಅವಕಾಶವಾದದಿಂದ ದೂರವಿರಬೇಕು, ಆದರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆಯನ್ನು ಜೀವಂತವಾಗಿರಿಸಿಕೊಳ್ಳಬೇಕು.

ಸ್ನೇಹಿತರೇ, ಇಲ್ಲಿನ ಹಾಸ್ಟೆಲ್‌ಗಳಿಗೆ ಗಂಗಾ, ಸಬರಮತಿ, ಗೋದಾವರಿ, ತಪತಿ, ಕಾವೇರಿ, ನರ್ಮದಾ, ಝೇಲಂ, ಸಟ್ಲೆಜ್ ಮುಂತಾದ ನದಿಗಳ ಹೆಸರಿಡಲಾಗಿದೆ. ಈ ನದಿಗಳಂತೆ ನೀವು ದೇಶದ ವಿವಿಧ ಭಾಗಗಳಿಂದ ಮತ್ತು ವೈವಿಧ್ಯಮಯ ಆಲೋಚನೆಗಳೊಂದಿಗೆ ಇಲ್ಲಿಗೆ ಬರುತ್ತೀರಿ. ಹೊಸ ಆಲೋಚನೆಗಳ ಈ ಹಂಚಿಕೆ ಮುಂದುವರಿಯಬೇಕು. ಅದು ಒಣಗಲು ಬಿಡಬಾರದು. ನಮ್ಮ ದೇಶವು ವಿಭಿನ್ನ ಬೌದ್ಧಿಕ ವಿಚಾರಗಳ ಬೀಜಗಳು ಮೊಳಕೆಯೊಡೆದ, ಅಭಿವೃದ್ಧಿ ಹೊಂದಿದ ಭೂಮಿಯಾಗಿದೆ. ಈ ಪರಂಪರೆಯನ್ನು ಬಲಪಡಿಸುವುದು ನಿಮ್ಮಂತಹ ಯುವಕರಿಗೆ ಮುಖ್ಯವಾಗಿದೆ. ಈ ಸಂಪ್ರದಾಯದಿಂದಾಗಿ, ಭಾರತವು ವಿಶ್ವದ ಅತ್ಯಂತ ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.

ನಮ್ಮ ದೇಶದ ಯುವಕರು ಯಥಾಸ್ಥಿತಿಯನ್ನು ಎಂದೂ ಒಪ್ಪಬಾರದು ಎಂದು ನಾನು ಬಯಸುತ್ತೇನೆ. ಯಾರಾದರೂ ಏನಾದರೂ ಹೇಳಿದರೆ ಅದನ್ನು ಒಪ್ಪಿಕೊಳ್ಳಬೇಕು ಎಂದೇನಿಲ್ಲ. ಅದರ ಬಗ್ಗೆ ನೀವು ವಾದ, ಆರೋಗ್ಯಕರ ಚರ್ಚೆ, ಸಂವಹನ ನಡೆಸಿ, ತದನಂತರ ಫಲಿತಾಂಶವನ್ನು ಪಡೆಯುತ್ತೀರಿ.

ಸ್ವಾಮಿ ವಿವೇಕಾನಂದರು ಎಂದಿಗೂ ಯಥಾಸ್ಥಿತಿಯನ್ನು ಸ್ವೀಕರಿಸಲಿಲ್ಲ. ನಾನು ಒತ್ತಿ ಹೇಳಲು ಬಯಸುವ ಮತ್ತೊಂದು ಒಂದು ವಿಷಯವೆಂದರೆ ಹಾಸ್ಯಪ್ರಜ್ಞೆ. ಇದು ಬಹಳ ದೊಡ್ಡ ಶಕ್ತಿ. ನಿಮ್ಮೊಳಗಿನ ಹಾಸ್ಯ ಪ್ರಜ್ಞೆಯನ್ನು ಜೀವಂತವಾಗಿರಿಸಿಕೊಳ್ಳಿ. ಕೆಲವೊಮ್ಮೆ, ಇಡೀ ಪ್ರಪಂಚವೇ ತಲೆಯ ಮೇಲೆ ಬಿದ್ದಂತಿರುವ ಅನೇಕ ಯುವಕರನ್ನು ನಾನು ನೋಡಿದ್ದೇನೆ. ನಮ್ಮ ಕ್ಯಾಂಪಸ್ ಜೀವನ, ಅಧ್ಯಯನ ಮತ್ತು ಕ್ಯಾಂಪಸ್ ರಾಜಕೀಯದಿಮದಾಗಿ ನಾವು ಹಾಸ್ಯವನ್ನು ಮರೆತುಬಿಡುತ್ತೇವೆ. ನಾವು ಅದನ್ನು ಸಂರಕ್ಷಿಸಬೇಕು ಮತ್ತು ಹಾಸ್ಯ ಪ್ರಜ್ಞೆಯನ್ನು ಬಿಡಬಾರದು.

ಯುವ ಸ್ನೇಹಿತರೇ, ವಿದ್ಯಾರ್ಥಿ ಜೀವನವು ತನ್ನನ್ನು ಗುರುತಿಸಿಕೊಳ್ಳಲು ಒಂದು ಉತ್ತಮ ಅವಕಾಶ. ಸ್ವಯಂ ಸಾಕ್ಷಾತ್ಕಾರವು ಜೀವನದ ಒಂದು ಪ್ರಮುಖ ಹೆಜ್ಜೆಯಾಗಿದೆ. ನೀವು ಅದನ್ನು ಪೂರ್ಣವಾಗಿ ಬಳಸಿಕೊಳ್ಳಬೇಕೆಂಬುದು ನನ್ನ ಆಶಯ. ಜೆಎನ್‌ಯು ಕ್ಯಾಂಪಸ್‌ನಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯು ಇಲ್ಲಿಗೆ ಬರುವ ಪ್ರತಿಯೊಬ್ಬ ಯುವಕರಿಗೆ ರಾಷ್ಟ್ರ ನಿರ್ಮಾಣ, ರಾಷ್ಟ್ರ ಪ್ರೀತಿ ಮತ್ತು ರಾಷ್ಟ್ರೀಯ ಜಾಗೃತಿಗೆ ಸ್ಫೂರ್ತಿ ನೀಡಲಿ. ಈ ಹಾರೈಕೆಯೊಂದಿಗೆ, ನಿಮ್ಮೆಲ್ಲರಿಗೂ ಶುಭಾಶಯಗಳು!

ನಿಮ್ಮೆಲ್ಲರಿಗೂ ಯಶಸ್ಸು ಸಿಗಲಿ, ಆರೋಗ್ಯ ಇರಲಿ.  ಮುಂಬರುವ ಹಬ್ಬಗಳನ್ನು ಆಚರಿಸಿ. ನೀವು ಇಲ್ಲಿ ದೀಪಾವಳಿಯನ್ನು ಅದೇ ಮನೋಭಾವದಿಂದ ಆಚರಿಸುತ್ತಿದ್ದೀರಿ ಎಂಬ ತೃಪ್ತಿ ನಿಮ್ಮ ಕುಟುಂಬಕ್ಕೆ ಬರಲಿ. ಈ ನಿರೀಕ್ಷೆಯೊಂದಿಗೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

ತುಂಬು ಧನ್ಯವಾದಗಳು!

****(Release ID: 1673428) Visitor Counter : 565