ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಸ್ವಚ್ಚತಾ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

Posted On: 08 AUG 2020 6:01PM by PIB Bengaluru

ಆಗಸ್ಟ್ 8,  ಒಂದು ಚಾರಿತ್ರಿಕ ದಿನ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ದಿನ. 1942 ರಲ್ಲಿ, ಈ ದಿನದಂದೇ ಸ್ವಾತಂತ್ರ್ಯಕ್ಕಾಗಿ ಜನಾಂದೋಲನವು ಗಾಂಧೀಜಿ ಅವರ ನಾಯಕತ್ವದಲ್ಲಿ ಆರಂಭವಾಯಿತು. ಬ್ರಿಟಿಷರ ವಿರುದ್ದ “ಭಾರತ ಬಿಟ್ಟು ತೊಲಗಿರಿ” (ಕ್ವಿಟ್ ಇಂಡಿಯಾ ) ಘೋಷಣೆಯನ್ನು ಮೊಳಗಿಸಲಾಯಿತು. ಅಂತಹ ಚಾರಿತ್ರಿಕ ದಿನದಂದು ರಾಜಘಾಟ್ ಬಳಿಯಲ್ಲಿ ರಾಷ್ಟ್ರೀಯ ಸ್ವಚ್ಚತಾ ಕೇಂದ್ರದ ಆರಂಭ ಅತ್ಯಂತ ಪ್ರಸ್ತುತ. ಈ ಕೇಂದ್ರವು ಬಾಪು ಅವರ ಸ್ವಚ್ಚಾಗ್ರಹಕ್ಕೆ 130 ಕೋಟಿ ಭಾರತೀಯರ ಒಂದು ಗೌರವದ ಸ್ಮರಣಾರ್ಹ ಕೊಡುಗೆ .

ಸ್ನೇಹಿತರೇ,

ಪೂಜ್ಯ ಬಾಪು ಅವರು  ಸ್ವಚ್ಚತೆಯಲ್ಲಿ ಸ್ವರಾಜ್ಯದ ಪ್ರತಿಬಿಂಬವನ್ನು ಕಾಣಲುದ್ದೇಶಿಸಿದ್ದರು. ಅವರು ನೈರ್ಮಲ್ಯವನ್ನು ಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನ ಹಾದಿ ಎಂದು ಪರಿಗಣಿಸಿದ್ದರು. ಸ್ವಚ್ಚತೆ ಮತ್ತು ನೈರ್ಮಲ್ಯಕ್ಕಾಗಿ ಆಗ್ರಹಿಸುತ್ತಿದ್ದ ಬಾಪೂಜಿ ಅವರಿಗೆ ಅರ್ಪಿಸಿದ ಆಧುನಿಕ ಸ್ಮಾರಕದ ಹೆಸರು  ರಾಜಘಾಟ್ ನೊಂದಿಗೆ ಮಿಳಿತಗೊಂಡಿರುವುದಕ್ಕೆ ನಾನು ಹರ್ಷಗೊಂಡಿದ್ದೇನೆ.

ಸ್ನೇಹಿತರೇ,

ರಾಷ್ಟ್ರೀಯ ಸ್ವಚ್ಚತಾ ಕೇಂದ್ರವು ಗಾಂಧೀಜಿ ಅವರ ಸ್ವಚ್ಚಾಗ್ರಹ ಅಥವಾ ಸ್ವಚ್ಚತೆಯ ಚಿಂತನೆಯನ್ನು ಒಳಗೊಂಡಿದೆ ಮತ್ತು ಆ ಚಿಂತನೆಗೆ ಸಂಬಂಧಿಸಿ ಭಾರತೀಯರ ತೀವ್ರವಾದ ಅರ್ಪಣಾ ಭಾವವನ್ನು ಒಂದೇ ಸ್ಥಳದಲ್ಲಿ  ಏಕೀಭವಿಸಿದಂತಿದೆ. ಸ್ವಲ್ಪ ಸಮಯದ ಹಿಂದೆ ನಾನು ಈ ಕೇಂದ್ರದ ಒಳಗೆ ಕೋಟ್ಯಾಂತರ ಭಾರತೀಯರ ಪ್ರಯತ್ನಗಳನ್ನು , ಸಾಧನೆಗಳನ್ನು ನೋಡುತ್ತಿದ್ದೆ, ನನಗೆ ಅವರಿಗೆ ನಮಸ್ಕರಿಸುವ ಭಾವನೆ ಮೂಡಿತು. ಕೆಂಪು ಕೋಟೆಯಿಂದ ಆರು ವರ್ಷಗಳ ಹಿಂದೆ ಆರಂಭವಾದ  ಪ್ರಯಾಣದ ಬಿಂಬಗಳು ಮತ್ತು ನೆನಪುಗಳು ನನ್ನ ಕಣ್ಣೆದುರು ಬಂದವು. 

ಕೋಟ್ಯಾಂತರ ಸ್ನೇಹಿತರು ಗಡಿಗಳನ್ನು, ಅಡೆ ತಡೆಗಳನ್ನು ದಾಟಿ, ಪ್ರತೀ ಮಿತಿಗಳನ್ನು ಮೀರಿ ಸ್ವಚ್ಚ ಭಾರತ್ ಅಭಿಯಾನವನ್ನು ಸಾಕಾರಗೊಳಿಸುವಲ್ಲಿ ಒಗ್ಗೂಡಿದರು. ಆ ಸ್ಪೂರ್ತಿಯನ್ನು ಈ ಕೇಂದ್ರದಲ್ಲಿ ಅಡಕಗೊಳಿಸಿಕೊಳ್ಳಲಾಗಿದೆ. ಈ ಕೇಂದ್ರದಲ್ಲಿ ಸತ್ಯಾಗ್ರಹದ ಪ್ರೇರಣೆಯೊಂದಿಗೆ ನಮ್ಮ ಸ್ವಚ್ಚಾಗ್ರಹದ ಪ್ರಯಾಣವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ವಿವರಿಸಲಾಗಿದೆ. ಮತ್ತು ಸ್ವಚ್ಚತಾ ರೊಬೋಟ್ ಇಲ್ಲಿಗೆ ಬರುವ ಮಕ್ಕಳಲ್ಲಿ ಬಹಳ ಜನಪ್ರಿಯವಾಗಿರುವುದನ್ನು ನಾನು ಗಮನಿಸಿದ್ದೇನೆ. ರೊಬೋಟ್ ಇಲ್ಲಿಗೆ ಬರುವ ಮಕ್ಕಳಲ್ಲಿ ಅವರ ಗೆಳೆಯನಂತೆ ಮಾತನಾಡುತ್ತದೆ. ಈಗ ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಮತ್ತು ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ನೈರ್ಮಲ್ಯದ ಚಿಂತನೆಗಳೊಂದಿಗೆ  ಇಂತಹದೇ ಸಂಪರ್ಕವನ್ನು ಅನುಭವಿಸುತ್ತಾನೆ ಮತ್ತು ಭಾರತದ ಹೊಸ ಪ್ರತಿಮೆಯನ್ನು ಅಳವಡಿಸಿಕೊಳ್ಳುತ್ತಾನೆ, ಹೊಸ ಪ್ರೇರೇಪಣೆಯನ್ನು ಪಡೆಯುತ್ತಾನೆ.

ಸ್ನೇಹಿತರೇ,

ಇಂದಿನ ಜಗತ್ತಿಗೆ ಗಾಂಧೀಜಿ ಅವರಿಗಿಂತ ದೊಡ್ಡ ಪ್ರೇರೇಪಣೆ ಯಾವುದೂ ಇರಲಾರದು. ಇಡೀ ವಿಶ್ವವೇ ಇಂದು ಗಾಂಧೀಜಿ ಅವರ ತತ್ವ ಮತ್ತು ತತ್ವಜ್ಞಾನವನ್ನು ಅಂಗೀಕರಿಸಲು ಮುಂದೆ ಬರುತ್ತಿದೆ. ಕಳೆದ ವರ್ಷ ಗಾಂಧೀಜಿ ಅವರ 150 ನೇ ಜನ್ಮವರ್ಷವನ್ನು ವಿಶ್ವದಾದ್ಯಂತ ಅದ್ದೂರಿಯಿಂದ ಆಚರಿಸಿದಾಗ , ಅದು ಅಭೂತಪೂರ್ವವಾಗಿತ್ತು !. ಗಾಂಧೀಜಿಯವರ ಅತ್ಯಂತ ಪ್ರೀತಿಯ ಹಾಡಾದ “ವೈಷ್ಣವ್ ಜನ್ ತೇನೆ ಕಹಿಯೇ “ ಯನ್ನು ಹಲವು ದೇಶಗಳ ಹಾಡುಗಾರರು ಮತ್ತು ಸಂಗೀತಜ್ಞರು ಹಾಡಿದರು, ನುಡಿಸಿದರು. ಈ ಜನರು ಈ ಹಾಡನ್ನು ಭಾರತೀಯ ಭಾಷೆಯಲ್ಲಿ ಹಾಡುವ ಮೂಲಕ ದಾಖಲೆಯನ್ನು ನಿರ್ಮಿಸಿದರು. ಗಾಂಧೀಜಿ ಅವರ ಬೋಧನೆಗಳು ಮತ್ತು ಚಿಂತನೆ ಹಾಗು ಆದರ್ಶಗಳನ್ನು ವಿಶ್ವದ ಪ್ರಮುಖ ದೇಶಗಳಲ್ಲಿ  ಸ್ಮರಿಸಿಕೊಳ್ಳಲಾಯಿತು ಮತ್ತು ವಿಶ್ವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆಯಾಗಿತ್ತು. ಗಾಂಧೀಜಿ ಅವರು ಇಡೀ ವಿಶ್ವವನ್ನು ಒಂದು ದಾರದಲ್ಲಿ ಜೋಡಿಸಿದಂತೆ ಭಾಸವಾಗುತ್ತಿತ್ತು.

ಸ್ನೇಹಿತರೇ,

ಗಾಂಧೀಜಿ ಅವರ ಜನಪ್ರಿಯತೆ ಮತ್ತು ಅಂಗೀಕಾರಾರ್ಹತೆ ಕಾಲ ಮತ್ತು ಸ್ಥಳಗಳನ್ನು ಮೀರಿದ್ದು. ಇದಕ್ಕೆ ಒಂದು ಕಾರಣ ಸರಳ ವಿಧಾನಗಳ ಮೂಲಕ ಅಭೂತಪೂರ್ವ ಬದಲಾವಣೆಗಳನ್ನು ತರುವ ಅವರ ಸಾಮರ್ಥ್ಯ. ಅತ್ಯಂತ ಶಕ್ತಿ ಶಾಲಿ ಆಡಳಿತಗಾರನ ಕೈಯಿಂದ  ಸ್ವಾತಂತ್ರ್ಯ ಗಳಿಸುವ ಹಾದಿಯೂ ಸ್ವಚತೆಯಲ್ಲಿರಬಹುದೆಂದು ಜಗತ್ತಿನಲ್ಲಿ ಯಾರಾದರೂ ಭಾವಿಸಿದ್ದರೇ ?. ಗಾಂಧೀಜಿ ಅದರ ಬಗ್ಗೆ ಭಾವಿಸಿದ್ದು ಮಾತ್ರವಲ್ಲ ಅದನ್ನು ಸ್ವಾತಂತ್ರ್ಯದ ಸ್ಪೂರ್ತಿಯೊಂದಿಗೆ ಜೋಡಿಸಿದರು, ಅದನ್ನೊಂದು ಜನಾಂದೋಲನ ಮಾಡಿದರು.

ಸ್ನೇಹಿತರೇ,

ಗಾಂಧೀಜಿ ಹೇಳುತ್ತಿದ್ದರು-“ಸ್ವಚ್ಚತೆಗೆ ಅರ್ಪಣಾಭಾವದಿಂದ ದುಡಿಯುವವರು ಮತ್ತು ದೈರ್ಯವಂತರು ಮಾತ್ರ ಸ್ವರಾಜ್ಯ ತರಬಲ್ಲರು “ ಎಂದು. ಸ್ವಚ್ಚತೆ ಮತ್ತು ಸ್ವರಾಜ್ ನಡುವಿನ ಕೊಂಡಿಯನ್ನು ಗಾಂಧೀಜಿ ಮನಗಂಡಿದ್ದರು, ಅಶುಚಿತ್ವವು ಅಥವಾ ನೈರ್ಮಲ್ಯರಹಿತ ಸ್ಥಿತಿಯು ಬೇರೊಬ್ಬರಿಗೆ ಭಾರೀ ಹಾನಿ ತರಬಲ್ಲದು, ಅದು ಬಡವರಿಗೆ ತಟ್ಟುತ್ತದೆ, ಅಶುಚಿತ್ವವು ಬಡವರ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಭಾರತವು ಕೊಳಕು ಸ್ಥಿತಿಗಳಲ್ಲಿ ಇರುವವರೆಗೆ ಭಾರತೀಯರಲ್ಲಿ ಸ್ವಾಭಿಮಾನ ಮೂಡಿಸಲು, ಆತ್ಮ ವಿಶ್ವಾಸ ತರಲು ಸಾಧ್ಯವಿಲ್ಲ ಎಂಬುದನ್ನು ಗಾಂಧೀಜಿ ಅರಿತಿದ್ದರು. ಸಾರ್ವಜನಿಕವಾಗಿ ಅತ್ಮ ವಿಶ್ವಾಸ , ಆತ್ಮಬಲವನ್ನು ಮೂಡಿಸಲು ಸಾಧ್ಯವಿಲ್ಲದಿದ್ದರೆ , ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಹೇಗೆ ಸಾಧ್ಯವಾದೀತು ?. ಆದುದರಿಂದ ದಕ್ಷಿಣ ಆಫ್ರಿಕಾದಿಂದ ಚಂಪಾರಣ್ಯದವರೆಗೆ ಮತ್ತು ಸಾಬರಮತಿ ಆಶ್ರಮದವರೆಗೆ ಅವರು ನೈರ್ಮಲ್ಯವನ್ನು ತಮ್ಮ ಆಂದೋಲನದ ಪ್ರಮುಖ ಮಾಧ್ಯಮವಾಗಿಸಿದರು. 

ಸ್ನೇಹಿತರೇ,

ಗಾಂಧೀಜಿ ಅವರ ಪ್ರೇರಣೆಯೊಂದಿಗೆ, ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಸ್ವಚ್ಚಾಗ್ರಹಿಗಳು ಸ್ವಚ್ಚ ಭಾರತ ಅಭಿಯಾನವನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿರುವುದು ನನಗೆ ಸಂತೋಷದ ಸಂಗತಿ. ಈ ಕಾರಣದಿಂದ 60  ತಿಂಗಳಲ್ಲಿ ಸುಮಾರು 60 ಕೋಟಿ ಭಾರತೀಯರು ಶೌಚಾಲಯದ ಸೌಲಭ್ಯ ಹೊಂದುವಂತಾಯಿತು ಮತ್ತು ಅವರು ಈಗ ಆತ್ಮ ವಿಶ್ವಾಸ ಹೊಂದಿದ್ದಾರೆ. ಇದರ ಫಲಿತಾಂಶವಾಗಿ ಈ ದೇಶದ ಸಹೋದರಿಯರು ಗೌರವ, ಭದ್ರತೆ, ಮತ್ತು ಅನುಕೂಲತೆಗಳನ್ನು ಪಡೆಯುತ್ತಿದ್ದಾರೆ. ಈ ದೇಶದ ಕೋಟ್ಯಾಂತರ ಹೆಣ್ಣು ಮಕ್ಕಳು ಈಗ ನಿರಂತರ ಅಧ್ಯಯನದ ಬಗ್ಗೆ ವಿಶ್ವಾಸಯುಕ್ತ ಭರವಸೆ ಹೊಂದಿದವರಾಗಿದ್ದಾರೆ. ಲಕ್ಷಾಂತರ ಬಡ ಮಕ್ಕಳು ಈಗ ರೋಗಗಳನ್ನು ತಡೆಯಬಲ್ಲವರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದಲಿತರು , ನಿರ್ಲಕ್ಷ್ಯಕ್ಕೆ ಒಳಗಾದವರು , ಶೋಷಿತರು ಮತ್ತು ಬುಡಕಟ್ಟು ಜನಾಂಗದವರು ಸಮತಾವಾದಿ  ಸಮಾಜದ ವಿಶ್ವಾಸ ಕಾಣುತ್ತಿದ್ದಾರೆ.

ಸ್ನೇಹಿತರೇ,

ಸ್ವಚ್ಚ ಭಾರತ ಅಭಿಯಾನವು ದೇಶದ ಪ್ರತಿಯೊಬ್ಬರಲ್ಲೂ ಆತ್ಮ ವಿಶ್ವಾಸವನ್ನು ಉತ್ತೇಜಿಸಿದೆ. ಆದರೆ ಅದರ ಅತ್ಯಂತ ದೊಡ್ಡ ಪ್ರಯೋಜನವನ್ನು  ದೇಶದ ಬಡವರ ಬದುಕಿನಲ್ಲಿ ಕಾಣಬಹುದಾಗಿದೆ. ಸ್ವಚ್ಚ ಭಾರತ ಅಭಿಯಾನವು ನಮ್ಮ ಸಾಮಾಜಿಕ ಪ್ರಜ್ಞೆಯಲ್ಲಿ ಮತ್ತು ನಮ್ಮ ಸಮಾಜದ ವರ್ತನೆಯಲ್ಲಿ  ಖಾಯಂ ಬದಲಾವಣೆಯನ್ನು ತಂದಿದೆ. ನಾವು ನಮ್ಮ ಕೈಗಳನ್ನು ಆಗಾಗ ತೊಳೆಯಬೇಕಿದೆ. ಯದ್ವಾ ತದ್ವಾ ಉಗುಳುವುದನ್ನು ತಡೆಯಬೇಕಾಗಿದೆ. ಕಸವನ್ನು , ತ್ಯಾಜ್ಯವನ್ನು ಸರಿಯಾದ ಸ್ಥಳದಲ್ಲಿ ಹಾಕಬೇಕಾಗಿದೆ- ಈ ಎಲ್ಲಾ ವಿಷಯಗಳನ್ನು ಸುಲಭವಾಗಿ ತಿಳಿಸಲು ನಾವು ಸಮರ್ಥರಾಗಿದ್ದೇವೆ. ಮತ್ತು ಅದನ್ನು ಸಾಮಾನ್ಯ ಭಾರತೀಯರಿಗೂ ತ್ವರಿತವಾಗಿ ತಿಳಿಸಲು ನಮಗೆ ಸಾಧ್ಯವಾಗಿದೆ. ಕಸವನ್ನು,  ಕೊಳಕನ್ನು ಎಲ್ಲೆಡೆ ನೋಡಿಯೂ ಆರಾಮವಾಗಿರುವ ಮನೋಸ್ಥಿತಿಯಿಂದ ದೇಶವು ಹೊರಬರುತ್ತಿದೆ. ಈಗ ಮನೆಯಲ್ಲಿ ಅಥವಾ ರಸ್ತೆಗಳಲ್ಲಿ ಕಸ ಹಾಕುವವರು ಖಂಡಿಸಲ್ಪಡುತ್ತಿದ್ದಾರೆ. ಮತ್ತು ಈ ಕೆಲಸವನ್ನು ಯಾರು ಸಮರ್ಥವಾಗಿ ಮಾಡಬಲ್ಲರು ?. ನಮ್ಮ ಮಕ್ಕಳು, ನಮ್ಮ ಹದಿ ಹರೆಯದವರು ಮತ್ತು ನಮ್ಮ ಯುವ ಜನತೆ !.

ಸ್ನೇಹಿತರೇ,

ವೈಯಕ್ತಿಕ ಮತ್ತು ಸಾಮಾಜಿಕ ನೈರ್ಮಲ್ಯದ ಬಗ್ಗೆ ದೇಶದ ಮಕ್ಕಳಲ್ಲಿ ಮೂಡಿರುವ ಈ ಪ್ರಜ್ಞೆಯಿಂದಾಗಿ ಕೊರೊನಾವೈರಸ್ ವಿರುದ್ದದ ಹೋರಾಟದಲ್ಲಿ ನಮಗೆ ಬಹಳಷ್ಟು ಪ್ರಯೋಜನಗಳಾಗುತ್ತಿವೆ. ಸುಮ್ಮನೆ ಕಲ್ಪಿಸಿಕೊಳ್ಳಿ, ಜಾಗತಿಕ ಸಾಂಕ್ರಾಮಿಕದಂತಹ ಕೊರೊನಾ 2014 ಕ್ಕೆ ಮೊದಲು ಅಪ್ಪಳಿಸಿದ್ದರೆ ಏನಾಗುತ್ತಿತ್ತು ?. ಶೌಚಾಲಯಗಳ ಕೊರತೆ, ಗೈರುಹಾಜರಿಯಲ್ಲಿ ಅದರ ಸೋಂಕಿನ ಹರಡುವಿಕೆಯನ್ನು ನಮಗೆ ತಡೆಯಲಾಗುತ್ತಿತ್ತೇ? . ಭಾರತದ 60 ಶೇಕಡಾದಷ್ಟು ಜನ ಸಂಖ್ಯೆ ಬಯಲು ಬಹಿರ್ದೆಸೆಯನ್ನು ಅವಲಂಬಿಸುವ ಸ್ಥಿತಿಯಲ್ಲಿ ಲಾಕ್ ಡೌನ್ ನಂತಹ ವ್ಯವಸ್ಥೆ ಸಾಧ್ಯವಾಗುತ್ತಿತ್ತೇ ?. ಸ್ವಚ್ಚಾಗ್ರಹವು ನಮಗೆ ಕೊರೊನಾ ವಿರುದ್ದದ ಹೋರಾಟದಲ್ಲಿ ಭಾರೀ ಬೆಂಬಲವನ್ನು ತಂದುಕೊಟ್ಟಿತು.

ಸ್ನೇಹಿತರೇ,

ಸ್ವಚ್ಚತಾ ಆಂದೋಲನ ಎನ್ನುವುದು ಒಂದು ಪಯಣ, ಅದು ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಬಯಲು ಬಹಿರ್ದೆಸೆ ಮುಕ್ತವಾದ ಬಳಿಕ ಈಗ ಜವಾಬ್ದಾರಿ ಹೆಚ್ಚಿದೆ. ಒ.ಡಿ.ಎಫ್. ಬಳಿಕ ದೇಶವೀಗ ಒ.ಡಿ.ಎಫ್. ಪ್ಲಸ್ ಗುರಿ ಸಾಧನೆಯತ್ತ ಕಾರ್ಯೋನ್ಮುಖವಾಗಿದೆ. ನಾವೀಗ ತ್ಯಾಜ್ಯ ನಿರ್ವಹಣೆಯಲ್ಲಿ ಸುಧಾರಣೆ ತರಬೇಕಾಗಿದೆ. ಅದು ನಗರದಲ್ಲಿರಲಿ, ಹಳ್ಳಿಯಲ್ಲಿರಲಿ ಇದು ಆಗಲೇ ಬೇಕಾಗಿದೆ. ತ್ಯಾಜ್ಯದಿಂದ ಸಂಪತ್ತು ತಯಾರಿಸುವ ಕೆಲಸಕ್ಕೆ ವೇಗ ನೀಡಬೇಕಾಗಿದೆ. ಈ ನಿರ್ಧಾರ ಕೈಗೊಳ್ಳಲು  ಕ್ವಿಟ್ ಇಂಡಿಯಾ ಆಂದೋಲನದ ದಿನಕ್ಕಿಂತ ಉತ್ತಮ ದಿನ ಬೇರೆ ಯಾವುದಿದೆ ?.

ಸ್ನೇಹಿತರೇ,

ಭಾರತವನ್ನು ದುರ್ಬಲಗೊಳಿಸುವ ದುಷ್ಟ ಶಕ್ತಿಗಳು ಇಲ್ಲಿಂದ ತೊಲಗುವುದಕ್ಕಿಂತ ಉತ್ತಮವಾದ ಸಂಗತಿ ಬೇರಾವುದಿದ್ದೀತು ?. ಈ ಚಿಂತನೆಯೊಂದಿಗೆ , ಕಳೆದ 6 ವರ್ಷಗಳಿಂದ ದೇಶದಲ್ಲಿ ಕ್ವಿಟ್ ಇಂಡಿಯಾ ಆಂದೋಲನ ನಡೆಯುತ್ತಿದೆ. ಬಡತನವನ್ನು ತೊಲಗಿಸುವ ಕ್ವಿಟ್ ಇಂಡಿಯಾ!, ಬಯಲು ಬಹಿರ್ದೆಸೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನ ಕ್ವಿಟ್ ಇಂಡಿಯಾ !. ನೀರಿಗಾಗಿ ಅಲೆದಾಟ ತೊಡೆಯುವ ಕ್ವಿಟ್ ಇಂಡಿಯಾ !, ಏಕ ಬಳಕೆ ಪ್ಲಾಸ್ಟಿಕ್ ತೊಲಗಿಸುವ ಕ್ವಿಟ್ ಇಂಡಿಯಾ , ಭೇದ ಭಾವ ತೊಲಗಿಸುವ ಕ್ವಿಟ್ ಇಂಡಿಯಾ !. ಭ್ರಷ್ಟಾಚಾರ ತೊಲಗಿಸುವ ಕ್ವಿಟ್ ಇಂಡಿಯಾ !, ಭಯೋತ್ಪಾದನೆ ಮತ್ತು ಹಿಂಸಾಚಾರ ತೊಲಗಿಸುವ ಕ್ವಿಟ್ ಇಂಡಿಯಾ !.

ಸ್ನೇಹಿತರೇ,

ಕ್ವಿಟ್ ಇಂಡಿಯಾದ ಈ ಎಲ್ಲಾ ನಿರ್ಧಾರಗಳು ಸ್ವರಾಜ್ಯದಿಂದ ಸುರಾಜ್ಯದತ್ತ ಸಾಗುವ ಸ್ಪೂರ್ತಿಯೊಂದಿಗೆ ಕೈಗೊಂಡಂತಹವು. ಅದೇ ಸ್ಪೂರ್ತಿಯಲ್ಲಿ , ನಾವೆಲ್ಲರೂ ಕಸ ಹಾಕುವಿಕೆಯನ್ನು ತೊರೆಯುವ ನಿಟ್ಟಿನಲ್ಲಿಯೂ ನಮ್ಮ ನಿರ್ಧಾರವನ್ನು ಪುನರುಚ್ಚರಿಸಬೇಕಾಗಿದೆ. ಬನ್ನಿ ನಾವು ಇಂದಿನಿಂದ ಆಗಸ್ಟ್ 15 ರವರೆಗೆ,   ಅಂದರೆ ಸ್ವಾತಂತ್ರ್ಯೋತ್ಸವ ದಿನದವರೆಗೆ ದೇಶದಲ್ಲಿ ವಾರಾವಧಿಯ ಆಂದೋಲನವನ್ನು ಆರಂಭಿಸೋಣ . ಸ್ವರಾಜ್ಯದ ಗೌರವಾರ್ಥದ ಸಪ್ತಾಹ ಅಂದರೆ “ಕೊಳಕು ಮತ್ತು ಕಸ ತೊಡೆಯುವ ಕ್ವಿಟ್ ಇಂಡಿಯಾ ಸಪ್ತಾಹ’ ವಾಗಲಿ. ಈ ಆಂದೋಲನವನ್ನು ಪ್ರತೀ ಜಿಲ್ಲೆಗಳ ಜವಾಬ್ದಾರಿಯುತ ಅಧಿಕಾರಿಗಳು  ತಮ್ಮ ಜಿಲ್ಲೆಯ  ಎಲ್ಲಾ ಗ್ರಾಮಗಳಲ್ಲಿ ಸಮುದಾಯದ ಶೌಚಾಲಯಗಳನ್ನು ನಿರ್ಮಾಣ ಮಾಡುವುದಕ್ಕೆ ಬಳಸಿಕೊಳ್ಳಲಿ  ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಇದನ್ನು ಇತರ ರಾಜ್ಯಗಳ ಕಾರ್ಮಿಕ ಸ್ನೇಹಿತರು ವಾಸ್ತವ್ಯ ಇರುವ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ಅದೇ ರೀತಿಯಲ್ಲಿ ಕಸದಿಂದ , ತ್ಯಾಜ್ಯದಿಂದ , ಸಗಣಿಯಿಂದ ಕಂಪೋಸ್ಟ್ ತಯಾರಿಸಲು, ನೀರಿನ ಮರುಬಳಕೆ ಅಥವಾ ಏಕ ಬಳಕೆ ಪ್ಲಾಸ್ಟಿಕ್ ತಡೆ ಇತ್ಯಾದಿ ಕ್ರಮಗಳ ಮೂಲಕ ನಾವು ಒಗ್ಗೂಡಿ ಈ ನಿಟ್ಟಿನಲ್ಲಿ ಮುಂದುವರಿಯಬೇಕಾಗಿದೆ.

ಸ್ನೇಹಿತರೇ,

ಗಂಗಾ ಜೀ ಯ ಸ್ವಚ್ಚತೆಗೆ ಸಂಬಂಧಿಸಿ ನಾವೀಗ ಉತ್ತೇಜನಕಾರಿ ಫಲಿತಗಳನ್ನು ಪಡೆಯುತ್ತಿದ್ದೇವೆ. ಅದೇ ರೀತಿ ನಾವು ದೇಶದ ಇತರ ನದಿಗಳನ್ನೂ ಮಾಲಿನ್ಯ ಮುಕ್ತಗೊಳಿಸಬೇಕಾಗಿದೆ. ಯಮುನಾ ಜೀ ಇಲ್ಲಿಯೇ ಸನಿಹದಲ್ಲಿದೆ. ನಾವು ಕೊಳಕು ಚರಂಡಿಗಳಿಂದ ಯಮುನೆಯನ್ನು ಮುಕ್ತಗೊಳಿಸುವ ಆಂದೋಲನವನ್ನು ತ್ವರಿತಗೊಳಿಸಬೇಕಾಗಿದೆ. ಇದಕ್ಕೆ ಯಮುನೆಯ ಸುತ್ತಲಿನ ಪ್ರತೀ ಗ್ರಾಮಗಳಲ್ಲಿ , ನಗರಗಳಲ್ಲಿ ಜೀವಿಸುತ್ತಿರುವ ಸಹಚರರ ಸಹಕಾರ ಬಹಳ ಮುಖ್ಯ. ಮತ್ತು ಹೌದು, ಇದನ್ನು ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮುಖಗವಸು ಧರಿಸಿಕೊಳ್ಳುವುದು ಅವಶ್ಯಕ. ಈ ನಿಯಮವನ್ನು ಮರೆಯಬೇಡಿ. ಕೊರೊನಾ ವೈರಸ್ ನಮ್ಮ ಮುಖ ಮತ್ತು ಮೂಗಿನ ಮೂಲಕ ಹರಡುತ್ತದೆ ಮತ್ತು ಅಲ್ಲಿ ನೆಲೆಸುತ್ತದೆ. ಇಂತಹ ಸ್ಥಿತಿಯಲ್ಲಿ ಮುಖಗವಸಿನ ನಿಯಮ, ಸಾಮಾಜಿಕ ಅಂತರ ಪಾಲನೆ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಿರುವುದನ್ನು ಕಡ್ಡಾಯವಾಗಿ ಅನುಸರಿಸಬೇಕು. ನಮ್ಮನ್ನು ಸುರಕ್ಷಿತವಾಗಿರಿಸಿಕೊಂಡು , ನಾವೆಲ್ಲರೂ ಈ ಬೃಹತ್  ಆಂದೋಲನವನ್ನು ಯಶಸ್ವಿಗೊಳಿಸೋಣ !. ಇದೇ ನಂಬಿಕೆಯೊಂದಿಗೆ ಮತ್ತೊಮ್ಮೆ ರಾಷ್ಟ್ರೀಯ ಸ್ವಚ್ಚತಾ ಕೇಂದ್ರಕ್ಕೆ ಹಲವು ಅಭಿನಂದನೆಗಳು!.

ತುಂಬಾ ಧನ್ಯವಾದಗಳು !!

***



(Release ID: 1648419) Visitor Counter : 223