ಪ್ರಧಾನ ಮಂತ್ರಿಯವರ ಕಛೇರಿ
ಇಂಡಿಯಾ ಐಡಿಯಾಸ್ ಶೃಂಗಸಭೆ: ಪ್ರಧಾನಿಯವರಿಂದ ಮುಖ್ಯ ಭಾಷಣ
Posted On:
22 JUL 2020 9:25PM by PIB Bengaluru
ಬಲವಾದ ದೇಶೀಯ ಆರ್ಥಿಕ ಸಾಮರ್ಥ್ಯಗಳಿಂದ ಜಾಗತಿಕ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಸಾಧಿಸಬಹುದು: ಪ್ರಧಾನಿ
‘ಆತ್ಮನಿರ್ಭರ ಭಾರತ’ ದ ಸ್ಪಷ್ಟ ಕರೆಯ ಮೂಲಕ ಭಾರತ ಸಮೃದ್ಧ ಮತ್ತು ಸ್ಥಿತಿಸ್ಥಾಪಕ ಜಗತ್ತಿಗೆ ಕೊಡುಗೆ ನೀಡುತ್ತಿದೆ: ಪ್ರಧಾನಿ
ಭಾರತದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ಸಂದರ್ಭ ಯಾವಗಲೂ ಬಂದಿರಲಿಲ್ಲ: ಪ್ರಧಾನಿ
ಭಾರತವು ಅವಕಾಶಗಳ ತಾಣವಾಗಿಹೊರಹೊಮ್ಮುತ್ತಿದೆ: ಪ್ರಧಾನಿ
ಸಾಂಕ್ರಾಮಿಕ ರೋಗದ ನಂತರ ಜಗತ್ತು ವೇಗವಾಗಿ ಪುಟಿದೇಳಲು ಭಾರತ-ಅಮೆರಿಕಾ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸುತ್ತದೆ: ಪ್ರಧಾನಿ
ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮುಖ್ಯ ಭಾಷಣ ಮಾಡಿದರು. ಶೃಂಗಸಭೆಯನ್ನು ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಆಯೋಜಿಸುತ್ತಿದೆ. ಈ ವರ್ಷದ ಶೃಂಗಸಭೆಯ ವಿಷಯ ‘ಉತ್ತಮ ಭವಿಷ್ಯದ ನಿರ್ಮಾಣ’.
ಯುಎಸ್ಐಬಿಸಿ ಈ ವರ್ಷ 45 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದಕ್ಕೆ ಪ್ರಧಾನಿ ಅಭಿನಂದಿಸಿದರು. ಭಾರತ-ಅಮೆರಿಕಾ ಆರ್ಥಿಕ ಸಹಭಾಗಿತ್ವವನ್ನು ಹೆಚ್ಚಿಸುವ ಬದ್ಧತೆಯ ಯುಎಸ್ಐಬಿಸಿ ನಾಯಕತ್ವಕ್ಕೆ ಅವರು ಧನ್ಯವಾದ ತಿಳಿಸಿದರು.
ಬಲವಾದ ದೇಶೀಯ ಆರ್ಥಿಕ ಸಾಮರ್ಥ್ಯಗಳ ಮೂಲಕ ಜಾಗತಿಕ ಆರ್ಥಿಕ ಸ್ಥಿತಿಸ್ಥಾಪಕತ್ವ
ಬಡವರನ್ನು ಮತ್ತು ದುರ್ಬಲರನ್ನು ಬೆಳವಣಿಗೆಯ ಕಾರ್ಯಸೂಚಿಯಲ್ಲಿ ಸೇರಿಸಿಕೊಳ್ಳುವ ಅಗತ್ಯದ ಬಗ್ಗೆ ಪ್ರಧಾನಿ ಮಾತನಾಡಿದರು. ‘ಸುಗಮ ಜೀವನ’ವು ‘ಸುಗಮ ವ್ಯವಹಾರ’ದಷ್ಟೇ ಮುಖ್ಯ ಎಂದು ಅವರು ಒತ್ತಿಹೇಳಿದರು. ಸಾಂಕ್ರಾಮಿಕ ರೋಗವು ಬಾಹ್ಯ ಆಘಾತಗಳ ವಿರುದ್ಧ ಜಾಗತಿಕ ಆರ್ಥಿಕತೆಯ ಸ್ಥಿತಿಸ್ಥಾಪಕತ್ವದ ಮಹತ್ವವನ್ನು ನಮಗೆ ನೆನಪಿಸಿದೆ, ಇದನ್ನು ಬಲವಾದ ದೇಶೀಯ ಆರ್ಥಿಕ ಸಾಮರ್ಥ್ಯದಿಂದ ಸಾಧಿಸಬಹುದು. ‘ಆತ್ಮನಿರ್ಭರ ಭಾರತ’ದ ಸ್ಪಷ್ಟ ಕರೆಯ ಮೂಲಕ ಭಾರತ ಸಮೃದ್ಧ ಮತ್ತು ಸ್ಥಿತಿಸ್ಥಾಪಕ ಜಗತ್ತಿಗೆ ಕೊಡುಗೆ ನೀಡುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಭಾರತವು ಮುಕ್ತತೆ, ಅವಕಾಶಗಳು ಮತ್ತು ಆಯ್ಕೆಗಳ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತಿದೆ
ಭಾರತದ ಬಗ್ಗೆ ಜಗತ್ತಿಗೆ ಆಶಾವಾದವಿದೆ ಎಂದು ಪ್ರಧಾನಿ ಹೇಳಿದರು. ಏಕೆಂದರೆ ಇದು ಮುಕ್ತತೆ, ಅವಕಾಶಗಳು ಮತ್ತು ಆಯ್ಕೆಗಳ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತದೆ. ಕಳೆದ ಆರು ವರ್ಷಗಳಲ್ಲಿ, ನಮ್ಮ ಆರ್ಥಿಕತೆಯನ್ನು ಹೆಚ್ಚು ಮುಕ್ತ ಮತ್ತು ಸುಧಾರಣಾ ದೃಷ್ಟಿಕೋನದಿಂದ ಮಾಡಲು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದರು, ಸುಧಾರಣೆಗಳು ಹೆಚ್ಚಿನ ಸ್ಪರ್ಧಾತ್ಮಕತೆ, ವರ್ಧಿತ ಪಾರದರ್ಶಕತೆ, ವಿಸ್ತರಿತ ಡಿಜಿಟಲೀಕರಣ, ಹೆಚ್ಚಿನ ನಾವೀನ್ಯತೆ ಮತ್ತು ಹೆಚ್ಚಿನ ನೀತಿ ಸ್ಥಿರತೆಯನ್ನು ಖಚಿತಪಡಿಸಿವೆ ಎಂದು ಹೇಳಿದರು.
ಇತ್ತೀಚಿನ ವರದಿಯೊಂದನ್ನು ಉಲ್ಲೇಖಿಸಿದ ಪ್ರಧಾನಿಯವರು, ದೇಶದಲ್ಲಿ ನಗರ ಅಂತರ್ಜಾಲ ಬಳಕೆದಾರರಿಗಿಂತ ಹೆಚ್ಚಿನ ಗ್ರಾಮೀಣ ಅಂತರ್ಜಾಲ ಬಳಕೆದಾರರಿದ್ದಾರೆ ಎಂದರು. ಭಾರತವನ್ನು ಅವಕಾಶಗಳ ತಾಣ ಎಂದು ಬಣ್ಣಿಸಿದ ಅವರು, ದೇಶದಲ್ಲಿ ಈಗ ಸುಮಾರು ಅರ್ಧ ಶತಕೋಟಿ ಸಕ್ರಿಯ ಇಂಟರ್ನೆಟ್ ಬಳಕೆದಾರರಿದ್ದಾರೆ,ಅಂದರೆ ಅರ್ಧ ಶತಕೋಟಿಗೂ ಹೆಚ್ಚು ಜನರು ಸಂಪರ್ಕ ಹೊಂದಿದ್ದಾರೆ ಎಂದರು. 5 ಜಿ, ಬಿಗ್ ಡಾಟಾ ಅನಾಲಿಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಬ್ಲಾಕ್-ಚೈನ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್‌ನಂತಹ ಮುಂಚೂಣಿ ತಂತ್ರಜ್ಞಾನಗಳಲ್ಲಿನ ಅವಕಾಶಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ವ್ಯಾಪಕ ಅವಕಾಶಗಳು
ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ವ್ಯಾಪಕ ಅವಕಾಶಗಳಿವೆ ಎಂದು ಪ್ರಧಾನಿ ಒತ್ತಿಹೇಳಿದರು. ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ಕೈಗೊಂಡ ಐತಿಹಾಸಿಕ ಸುಧಾರಣೆಗಳ ಕುರಿತು ಮಾತನಾಡಿದ ಅವರು, ಕೃಷಿ ಸಾಧನಗಳು ಮತ್ತು ಯಂತ್ರೋಪಕರಣಗಳು, ಕೃಷಿ ಪೂರೈಕೆ ಸರಪಳಿ, ಆಹಾರ ಸಂಸ್ಕರಣಾ ಕ್ಷೇತ್ರ, ಮೀನುಗಾರಿಕೆ ಮತ್ತು ಸಾವಯವ ಉತ್ಪನ್ನಗಳು ಸೇರಿದಂತೆ ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಅವಕಾಶಗಳಿವೆ ಎಂದು ಹೇಳಿದರು. ಭಾರತದಲ್ಲಿ ಆರೋಗ್ಯ ಕ್ಷೇತ್ರವು ಪ್ರತಿವರ್ಷ ಶೇ.22 ಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಮತ್ತು ವೈದ್ಯಕೀಯ-ತಂತ್ರಜ್ಞಾನ, ಟೆಲಿ-ಮೆಡಿಸಿನ್ ಮತ್ತು ಡಯಾಗ್ನೋಸ್ಟಿಕ್ಸ್ ನಲ್ಲಿ ಭಾರತೀಯ ಕಂಪನಿಗಳ ಪ್ರಗತಿಯ ಬಗ್ಗೆ ತಿಳಿಸಿದ ಅವರು, ಭಾರತದ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆಯನ್ನು ವಿಸ್ತರಿಸಲು ಇದು ಉತ್ತಮ ಸಮಯ ಎಂದು ಹೇಳಿದರು.
ಹೂಡಿಕೆ ಮಾಡಲು ಅಪಾರ ಅವಕಾಶಗಳಿರುವ ಹಲವಾರು ಕ್ಷೇತ್ರಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ಇಂಧನ ಕ್ಷೇತ್ರ, ಮನೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ನಿರ್ಮಾಣ, ರಸ್ತೆಗಳು, ಹೆದ್ದಾರಿಗಳು ಮತ್ತು ಬಂದರುಗಳು, ಪ್ರಮುಖ ಖಾಸಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ಮುಂಬರುವ ದಶಕದಲ್ಲಿ ಸಾವಿರಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಸೇರಿಸಲು ಯೋಜಿಸುತ್ತಿರುವ ನಾಗರಿಕ ವಿಮಾನಯಾನ ಕ್ಷೇತ್ರವು, ಭಾರತದಲ್ಲಿ ತಯಾರಿಕಾ ಸೌಲಭ್ಯಗಳನ್ನು ಸ್ಥಾಪಿಸಲು ಮತ್ತು ನಿರ್ವಹಣೆ ದುರಸ್ತಿ ಮತ್ತು ಕಾರ್ಯಾಚರಣೆ ಸೌಲಭ್ಯಗಳನ್ನು ಸ್ಥಾಪಿಸಲು ಹೂಡಿಕೆದಾರರಿಗೆ ಅವಕಾಶವನ್ನು ತೆರೆಯುತ್ತದೆ. ಭಾರತವು ರಕ್ಷಣಾ ಕ್ಷೇತ್ರದಲ್ಲಿ ವಿದೇಶೀ ನೇರ ಹೂಡಿಕೆ ಮಿತಿಯನ್ನು ಶೇ. 74 ಕ್ಕೆ ಏರಿಸುತ್ತಿದೆ ಎಂದರು. ರಕ್ಷಣಾ ಉಪಕರಣಗಳು ಮತ್ತು ಸಾಧನಗಳ ಉತ್ಪಾದನೆಯನ್ನು ಉತ್ತೇಜಿಸಲು ಎರಡು ರಕ್ಷಣಾ ಕಾರಿಡಾರ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಖಾಸಗಿ ಮತ್ತು ವಿದೇಶಿ ಹೂಡಿಕೆದಾರರಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಅವರು ಹೇಳಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ಸುಧಾರಣಾ ಮಾರ್ಗಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಹಣಕಾಸು ಮತ್ತು ವಿಮಾ ಕ್ಷೇತ್ರದಲ್ಲಿ ಹೂಡಿಕೆಗೆ ಆಹ್ವಾನಿಸಿದ ಪ್ರಧಾನಿಯವರು, ವಿಮಾ ಹೂಡಿಕೆಗಾಗಿ ಭಾರತ ವಿದೇಶಿ ನೇರ ಹೂಡಿಕೆ ಇತಿಯನ್ನು ಶೇ. 49 ಕ್ಕೆ ಏರಿಸಿದೆ ಮತ್ತು ವಿಮಾ ಮಧ್ಯವರ್ತಿಗಳಲ್ಲಿ ಹೂಡಿಕೆ ಮಾಡಲು ಶೇ.100 ಎಫ್‌ಡಿಐಗೆ ಅನುಮತಿ ಇದೆ ಎಂದು ಹೇಳಿದರು. ಆರೋಗ್ಯ, ಕೃಷಿ, ವ್ಯವಹಾರ ಮತ್ತು ಜೀವ ವಿಮೆಯಲ್ಲಿ ವಿಮಾ ರಕ್ಷಣೆಯನ್ನು ಹೆಚ್ಚಿಸಲು ದೊಡ್ಡ ಅವಕಾಶಗಳಿವೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಹೆಚ್ಚುತ್ತಿರುವ ಹೂಡಿಕೆಗಳು
ವಿಶ್ವ ಬ್ಯಾಂಕಿನ ಸುಗಮ ವ್ಯವಹಾರ ಶ್ರೇಯಾಂಕದಲ್ಲಿ ಭಾರತದ ಏರಿಕೆ ಕುರಿತು ಪ್ರಧಾನಿ ಮಾತನಾಡಿದರು. ಪ್ರತಿ ವರ್ಷ ಭಾರತವು ಎಫ್‌ಡಿಐನಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದೆ ಎಂದು ಅವರು ಒತ್ತಿಹೇಳಿದರು, 2019-20ರಲ್ಲಿ ಭಾರತದಲ್ಲಿ ಎಫ್‌ಡಿಐ ಒಳಹರಿವು 74 ಬಿಲಿಯನ್ ಡಾಲರ್‌ಗಳಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.20 ರಷ್ಟು ಹೆಚ್ಚಾಗಿದೆ. ಸಾಂಕ್ರಾಮಿಕದ ಸಮಯದಲ್ಲಿಯೂ, ಈ ವರ್ಷದ ಏಪ್ರಿಲ್ ಮತ್ತು ಜುಲೈ ನಡುವೆ ಭಾರತವು 20 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ಹೂಡಿಕೆಗೆ ಉತ್ತಮ ಸಮಯ
ಜಾಗತಿಕ ಆರ್ಥಿಕ ಚೇತರಿಕೆಗೆ ಶಕ್ತಿ ತುಂಬುವುದು ಭಾರತಕ್ಕೆ ಬೇಕಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಪ್ರಗತಿ ಎಂದರೆ: ನೀವು ನಂಬಬಹುದಾದ ರಾಷ್ಟ್ರದೊಂದಿಗಿನ ವ್ಯಾಪಾರ ಅವಕಾಶಗಳ ಪ್ರಗತಿ, ಹೆಚ್ಚುತ್ತಿರುವ ಮುಕ್ತತೆಯೊಂದಿಗೆ ಜಾಗತಿಕ ಏಕೀಕರಣದ ಪ್ರಗತಿ, ಬೃಹತ್ ಪ್ರಮಾಣದ ಮಾರುಕಟ್ಟೆಯ ಲಭ್ಯತೆಯೊಂದಿಗೆ ನಿಮ್ಮ ಸ್ಪರ್ಧಾತ್ಮಕತೆಯ ಪ್ರಗತಿ ಮತ್ತು ಕೌಶಲ್ಯಭರಿತ ಮಾನವ ಸಂಪನ್ಮೂಲಗಳ ಲಭ್ಯತೆಯೊಂದಿಗೆ ಹೂಡಿಕೆಯ ಮೇಲಿನ ನಿಮ್ಮ ಆದಾಯದ ಪ್ರಗತಿ. ಅಮೆರಿಕಾ ಮತ್ತು ಭಾರತವನ್ನು ಸಹಜ ಪಾಲುದಾರರು ಎಂದು ಕರೆದ ಅವರು, ಸಾಂಕ್ರಾಮಿಕ ರೋಗದ ನಂತರ ಜಗತ್ತು ವೇಗವಾಗಿ ಪುಟಿದೇಳಲು ಸಹಾಯ ಮಾಡುವಲ್ಲಿ ಈ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಭಾರತದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ಸಮಯ ಎಂದೂ ಬಂದಿರಲಿಲ್ಲ ಎಂದು ಅಮೆರಿಕದ ಹೂಡಿಕೆದಾರರಿಗೆ ಅವರು ಹೇಳಿದರು.
***
(Release ID: 1641090)
Visitor Counter : 240
Read this release in:
Tamil
,
Marathi
,
English
,
Urdu
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam