ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ವಾಣಿಜ್ಯ ಮಹಾಮಂಡಳಿ (ICC) ವಾರ್ಷಿಕ ಸರ್ವಸದಸ್ಯರ ಸಭೆಯನ್ನುದ್ದೇಶಿಸಿ ಪ್ರಧಾನಿ ಭಾಷಣ

Posted On: 11 JUN 2020 2:37PM by PIB Bengaluru

ಭಾರತೀಯ ವಾಣಿಜ್ಯ ಮಹಾಮಂಡಳಿ (ICC) ವಾರ್ಷಿಕ ಸರ್ವಸದಸ್ಯರ ಸಭೆಯನ್ನುದ್ದೇಶಿಸಿ ಪ್ರಧಾನಿ ಭಾಷಣ

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪ್ರಧಾನಿ ಕರೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತೀಯ ವಾಣಿಜ್ಯ ಮಹಾ ಮಂಡಳಿಯ (ಐಸಿಸಿ) 95 ನೇ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ ಉದ್ಘಾಟನಾ ಭಾಷಣ ಮಾಡಿದರು.

ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಸಮರವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, ಭಾರತವು ಇಡೀ ಪ್ರಪಂಚದ ಜೊತೆಗೆ ದಿಟ್ಟತನವನ್ನು ತೋರುತ್ತಿದೆ ಎಂದರು. ಮಿಡತೆ ದಾಳಿ, ಆಲಿಕಲ್ಲು ಮಳೆ, ತೈಲ ಬಾವಿಗೆ ಬೆಂಕಿ, ಲಘು ಭೂಕಂಪಗಳ ಸರಣಿ ಮತ್ತು ಎರಡು ಚಂಡಮಾರುತಗಳಂತಹ ವಿಪತ್ತುಗಳಿಂದ ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ, ಆದರೆ ರಾಷ್ಟ್ರವು ಸಮಸ್ಯೆಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿದೆ ಎಂದು ಅವರು ಹೇಳಿದರು.

ಇಂತಹ ಸಂಕಷ್ಟದ ಸಂದರ್ಭ ಭಾರತವನ್ನು ಹೆಚ್ಚು ದೃಢಗೊಳಿಸಿವೆ ಎಂದು ಪ್ರಧಾನಿ ಹೇಳಿದರು. ದೃಢ ನಿಶ್ಚಯ, ಇಚ್ಛಾಶಕ್ತಿ ಮತ್ತು ಏಕತೆಯು ರಾಷ್ಟ್ರದ ಶಕ್ತಿ, ಇದು ದೇಶವನ್ನು ಎಲ್ಲಾ ಬಿಕ್ಕಟ್ಟುಗಳ ವಿರುದ್ಧ ಹೋರಾಡುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ಯಾವುದೇ ಬಿಕ್ಕಟ್ಟು ಸ್ವಾವಲಂಬಿ ಭಾರತವನ್ನು (ಆತ್ಮ ನಿರ್ಭರ ಭಾರತ್) ನಿರ್ಮಿಸಲು ನಮಗೆ ಒಂದು ಮಹತ್ವದ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಸ್ವಾವಲಂಬಿ ಭಾರತ

ಹಲವಾರು ವರ್ಷಗಳಿಂದ ಸ್ವಾವಲಂಬನೆ ಭಾರತದ ಆಕಾಂಕ್ಷೆಯಾಗಿದೆ ಎಂದು ಪ್ರಧಾನಿ ಹೇಳಿದರು.

"ಈಗ ದೇಶದ ಪ್ರತಿ ಹಳ್ಳಿಯನ್ನು, ಜಿಲ್ಲೆಯನ್ನು ಸ್ವಾವಲಂಬಿಯನ್ನಾಗಿ ಮಾಡುವ ಸಮಯ ಬಂದಿದೆ. ಮತ್ತು ಭಾರತೀಯ ಆರ್ಥಿಕತೆಯನ್ನು 'ಕಮಾಂಡ್ ಅಂಡ್ ಕಂಟ್ರೋಲ್' ಮೋಡ್ನಿಂದ ಹೊರತೆಗೆದು ಅದನ್ನು 'ಪ್ಲಗ್ ಅಂಡ್ ಪ್ಲೇ' ಮೋಡ್ನತ್ತ ಕೊಂಡೊಯ್ಯಬೇಕುಎಂದು ಅವರು ಕರೆ ನೀಡಿದರು.

ದಿಟ್ಟತನದ ನಿರ್ಧಾರಗಳು ಮತ್ತು ಹೂಡಿಕೆಗಳಿಗೆ ಇದು ಸಂದರ್ಭವಾಗಿದೆ, ಜಾಗತಿಕವಾಗಿ ಸ್ಪರ್ಧಾತ್ಮಕ ದೇಶೀಯ ಪೂರೈಕೆ ಸರಪಳಿಯನ್ನು ಸಿದ್ಧಪಡಿಸಬೇಕೇ ಹೊರತು ಸಂಪ್ರದಾಯವಾದಿ ವಿಧಾನಗಳಿಗೆ ಅಲ್ಲ ಎಂದ ಅವರು, ಭಾರತವು ಸ್ವಾವಲಂಬನೆಯನ್ನು ಸಾಧಿಸಬೇಕಾದ ಕ್ಷೇತ್ರಗಳನ್ನು ಪಟ್ಟಿ ಮಾಡಿದರು.

 “ಸ್ವಾವಲಂಬನೆಯ ಗುರಿ ದೇಶದ ನೀತಿ ಮತ್ತು ಆಚರಣೆಯಲ್ಲಿ ಪ್ರಮುಖವಾಗಿದೆ ಮತ್ತು ಈಗ ಕೊರೊನಾ ಸಾಂಕ್ರಾಮಿಕವು ಅದನ್ನು ಹೇಗೆ ವೇಗಗೊಳಿಸಬೇಕು ಎಂಬ ಬಗ್ಗೆ ನಮಗೆ ಪಾಠ ಕಲಿಸಿದೆ. ಪಾಠದಿಂದಲೇ  ಆತ್ಮನಿರ್ಭರ ಭಾರತ ಅಭಿಯಾನ ಪ್ರಾರಂಭವಾಗಿದೆ." ಎಂದು ಪ್ರಧಾನಿ ಹೇಳಿದರು.

ಭಾರತವು ಈಗ ಆಮದು ಮಾಡಿಕೊಳ್ಳುತ್ತಿರುವ ಎಲ್ಲಾ ಉತ್ಪನ್ನಗಳನ್ನು ರಫ್ತು ಮಾಡುವಂತಾಗಲು ನಾವೆಲ್ಲರೂ ಕೆಲಸ ಮಾಡಬೇಕು ಎಂದು ಪ್ರಧಾನಿಯವರು, ಸಣ್ಣ ವ್ಯಾಪಾರಿಗಳ ಪ್ರಯತ್ನವನ್ನು ಶ್ಲಾಘಿಸಿದ ಅವರು, ನಾವು ಅವರಿಂದ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿದರೆ, ನಾವು ಅವರ ಸರಕು ಮತ್ತು ಸೇವೆಗಳಿಗೆ ಮಾತ್ರ ಪಾವತಿಸುವುದಿಲ್ಲ, ಬದಲಿಗೆ ಅವರ ಕೊಡುಗೆಗಳಿಗೆ ಪುರಸ್ಕಾರ ನೀಡುತ್ತೇವೆ ಎಂದು ಹೇಳಿದರು.

'ಪ್ರಸ್ತುತ ನಾವು ಕೆಲಸ ಮಾಡಬೇಕಾದ ಸರಳ ವಿಧಾನವೆಂದರೆ ಭಾರತೀಯರು ತಮ್ಮದೇ ಉತ್ಪನ್ನಗಳನ್ನು ಬಳಸುವಂತೆ ಪ್ರೇರೇಪಿಸುವುದು ಮತ್ತು ಇತರ ದೇಶಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆಗಳನ್ನು ಪಡೆಯುವುದು' ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಉಲ್ಲೇಖಿಸಿದ ಅವರು, ಸ್ವಾಮಿ ವಿವೇಕಾನಂದರು ತೋರಿಸಿದ ಮಾರ್ಗವು ಭಾರತಕ್ಕೆ ಕೋವಿಡ್ ನಂತರದ ಜಗತ್ತಿಗೆ ಸ್ಫೂರ್ತಿಯಾಗಿದೆ ಎಂದರು.

ಎಂಎಸ್ಎಂಇಗಳ ವ್ಯಾಖ್ಯಾನದ ವ್ಯಾಪ್ತಿಯ ವಿಸ್ತರಣೆ, ಎಂಎಸ್ಎಂಇಗಳನ್ನು ಬೆಂಬಲಿಸಲು ವಿಶೇಷ ಹಣವನ್ನು ವ್ಯವಸ್ಥೆ, ಐಬಿಸಿಗೆ ಸಂಬಂಧಿಸಿದ ನಿರ್ಧಾರ, ಹೂಡಿಕೆಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಯೋಜನಾಭಿವೃದ್ಧಿ ಘಟಕಗಳ ಸ್ಥಾಪನೆ ಮುಂತಾದ ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಘೋಷಿಸಲಾದ ಪ್ರಮುಖ ಸುಧಾರಣೆಗಳನ್ನು ಪ್ರಧಾನಿಯವರು ಪಟ್ಟಿ ಮಾಡಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ

ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ಕೈಗೊಂಡ ನೀತಿ ನಿರ್ಧಾರಗಳನ್ನು ಶ್ಲಾಘಿಸಿದ ಪ್ರಧಾನಿಯವರು, ಕೃಷಿ ಆರ್ಥಿಕತೆಯು ಹಲವಾರು ವರ್ಷಗಳ ನಿರ್ಬಂಧಗಳಿಂದ ಮುಕ್ತವಾಗಿದೆ ಎಂದು ಹೇಳಿದರು. ಈಗ ಭಾರತದ ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದರು.

ಸಾವಯವ ಕೃಷಿಯ ಕೇಂದ್ರವಾಗಿ ಈಶಾನ್ಯ

ಸ್ಥಳೀಯ ಉತ್ಪನ್ನಗಳಿಗೆ ಸರ್ಕಾರದ ಪ್ರಸ್ತುತ ಕ್ಲಸ್ಟರ್ ಆಧಾರಿತ ವಿಧಾನವು ಎಲ್ಲರಿಗೂ ಅವಕಾಶವನ್ನು ಒದಗಿಸುತ್ತದೆ. ಇವುಗಳಿಗೆ ಸಂಬಂಧಿಸಿದ ಕ್ಲಸ್ಟರ್ಗಳನ್ನು ಅವರು ಹುಟ್ಟಿದ ಜಿಲ್ಲೆಗಳಲ್ಲಿ, ಬ್ಲಾಕ್ಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದರು. “ಇದರೊಂದಿಗೆ ಬಿದಿರು ಮತ್ತು ಸಾವಯವ ಉತ್ಪನ್ನಗಳಿಗೂ ಕ್ಲಸ್ಟರ್ಗಳನ್ನು ತಯಾರಿಸಲಾಗುವುದು. ಸಿಕ್ಕಿಂ ರಾಜ್ಯದಂತೆ, ಇಡೀ ಈಶಾನ್ಯ ಪ್ರದೇಶವೇ ಸಾವಯವ ಕೃಷಿಗೆ ದೊಡ್ಡ ಕೇಂದ್ರವಾಗಬಹುದುಎಂದರು. ಸಾವಯವ ಕೃಷಿಯನ್ನು ಜಾಗತಿಕ ಗುರುತನ್ನಾಗಿ ಮಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದರೆ ಈಶಾನ್ಯದಲ್ಲಿ ಬೃಹತ್ ಆಂದೋಲನವಾಗಬಹುದು ಎಂದು ಅವರು ಹೇಳಿದರು.

ಜನತೆ, ಭೂಮಿ ಮತ್ತು ಲಾಭ  ಪರಸ್ಪರ ಸಂಬಂಧ ಹೊಂದಿವೆ

ತಯಾರಿಕಾ ಕ್ಷೇತ್ರದಲ್ಲಿ ಬಂಗಾಳದ ಐತಿಹಾಸಿಕ ಶ್ರೇಷ್ಠತೆಯನ್ನು ಪುನರುಜ್ಜೀವನಗೊಳಿಸುವಂತೆ ಪ್ರಧಾನಿ ಕರೆ ನೀಡಿದರು. "ಬಂಗಾಳ ಇಂದು ಏನು ಯೋಚಿಸುತ್ತಿದೆಯೋ, ಭಾರತ ನಾಳೆ ಅದನ್ನೇ ಯೋಚಿಸುತ್ತದೆ" ಎಂಬ ಮಾತಿನಿಂದ ಸ್ಫೂರ್ತಿ ಪಡೆದು ಉದ್ಯಮವು ಮುಂದುವರಿಯಬೇಕೆಂದು ಪ್ರಧಾನಿ ಕರೆಕೊಟ್ಟರು. ಜನತೆ, ಭೂಮಿ ಮತ್ತು ಲಾಭಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಅವರು ಹೇಳಿದರು. ಮೂರೂ ಏಕಕಾಲದಲ್ಲಿ ಅಭಿವೃದ್ಧಿ ಹೊಂದಬಹುದು ಮತ್ತು ಸಹಬಾಳ್ವೆ ನಡೆಸಬಹುದು. ಇದನ್ನೇ ಇನ್ನೂ ವಿಸ್ತಾರವಾಗಿ ಹೇಳಲು ಅವರು, ಎಲ್ಇಡಿ ಬಲ್ಬ್ಗಳ ಆರು ವರ್ಷಗಳ ಹಿಂದಿನ ಬೆಲೆಯನ್ನು ಉದಾಹರಣೆಯಾಗಿ ನೀಡಿದರು, ಎಲ್ಇಡಿ ಬಲ್ಬ್ಗಳ ಬೆಲೆ ಕಡಿತದಿಂದ  ಪ್ರತಿವರ್ಷ ಸುಮಾರು 19 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ಗಳಲ್ಲಿ ಉಳಿತಾಯಕ್ಕೆ ಕಾರಣವಾಯಿತು. ಅಂದರೆ, ಜನರಿಗೆ ಮತ್ತು ಭೂಮಿಗೆ ಲಾಭವಾಯಿತು ಎಂದರು. ಕಳೆದ 5-6 ವರ್ಷಗಳಲ್ಲಿ ಸರ್ಕಾರದ ಇತರ ಯೋಜನೆಗಳು ಮತ್ತು ನಿರ್ಧಾರಗಳು ಜನರು, ಗ್ರಹ ಮತ್ತು ಲಾಭದ ಪರಿಕಲ್ಪನೆಯನ್ನು ಆಧರಿಸಿವೆ ಎಂದು ಅವರು ಹೇಳಿದರು. ಜಲಮಾರ್ಗಗಳನ್ನು ಬಳಸುವುದರಿಂದ ಜನರು ಹೇಗೆ ಪ್ರಯೋಜನ ಪಡೆಯುತ್ತಾರೆ, ಇದು ಲಾಜಿಸ್ಟಿಕ್ಸ್ ವೆಚ್ಚವನ್ನು ಹೇಗೆ ಕಡಿಮೆ ಮಾಡುತ್ತದೆ ಮತ್ತು ಭೂಮಿಯು ಕಡಿಮೆ ಇಂಧನ ಸುಡುವಿಕೆಯಿಂದ ಹೇಗೆ ಪ್ರಯೋಜನ ಪಡೆಯುತ್ತದೆ ಎಂದು ಅವರು ವಿವರಿಸಿದರು.

ಜನ ಕೇಂದ್ರಿತ, ಜನರಿಂದ ಚಾಲಿತ ಮತ್ತು ಗ್ರಹ ಸ್ನೇಹಿ ಅಭಿವೃದ್ಧಿಯ ವಿಧಾನ

ಪ್ರಧಾನಿಯವರು ದೇಶವನ್ನು ಏಕ ಬಳಕೆಯ ಪ್ಲಾಸ್ಟಿಕ್ನಿಂದ ಮುಕ್ತಗೊಳಿಸುವ ಅಭಿಯಾನದ ಮತ್ತೊಂದು ಉದಾಹರಣೆಯನ್ನು ಉಲ್ಲೇಖಿಸಿದರು. ಇದರಿಂದ ಸೆಣಬಿನ ವ್ಯವಹಾರವನ್ನು ಹೆಚ್ಚಿಸುವ ಮೂಲಕ ಪಶ್ಚಿಮ ಬಂಗಾಳಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. ಉದ್ಯಮವು ಅವಕಾಶವನ್ನು ಮತ್ತಷ್ಟು ಬಳಸಿಕೊಳ್ಳಬೇಕೆಂದು ಅವರು ಕರೆಕೊಟ್ಟರು. ಜನ ಕೇಂದ್ರಿತ, ಜನರಿಂದ ಚಾಲಿತ ಮತ್ತು ಗ್ರಹ ಸ್ನೇಹಿ ಅಭಿವೃದ್ಧಿಯ ವಿಧಾನಗಳು ಈಗ ದೇಶದಲ್ಲಿ ಆಡಳಿತದ ಒಂದು ಭಾಗವಾಗಿವೆ ಎಂದ ಅವರು, "ನಮ್ಮ ತಾಂತ್ರಿಕ ಮಧ್ಯಸ್ಥಿಕೆಗಳು ಜನತೆ, ಗ್ರಹ ಮತ್ತು ಲಾಭದ ಕಲ್ಪನೆಗೆ ಹೊಂದಿಕೊಳ್ಳುತ್ತವೆ." ಎಂದರು.

ರುಪೇ ಕಾರ್ಡ್ ಮತ್ತು ಯುಪಿಐ

ಬ್ಯಾಂಕಿಂಗ್ ಸೇವೆಗಳು ಸ್ಪರ್ಶ ರಹಿತ, ಸಂಪರ್ಕ ರಹಿತ, ಹಾಗೂ ನಗದು ರಹಿತವಾಗಿ  ಮಾರ್ಪಟ್ಟಿವೆ ಮತ್ತು ಯುಪಿಐ ಮೂಲಕ ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಹೇಳಿದರು. ಭೀಮ್ ಆ್ಯಪ್ ನಿಂದ ವ್ಯವಹಾರಗಳು ಈಗ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ರುಪೇ ಕಾರ್ಡ್ ಈಗ ಬಡವರು, ರೈತರು, ಮಧ್ಯಮ ವರ್ಗದವರು ಮತ್ತು ದೇಶದ ಪ್ರತಿಯೊಂದು ವರ್ಗದವರ ನೆಚ್ಚಿನ ಕಾರ್ಡ್ ಆಗುತ್ತಿದೆ. ಸ್ವಾವಲಂಬಿ ಭಾರತವನ್ನು ನಿರ್ಮಿಸಲು ರುಪೇ ಕಾರ್ಡ್ಗಳನ್ನು ಬಳಸಬೇಕೆಂದು ಅವರು ಆಗ್ರಹಿಸಿದರು. ಈಗ ದೇಶದ ಬ್ಯಾಂಕಿಂಗ್ ಸೇವೆಗಳು ಬಡವರಿಗೆ ಸಹ ಬಡವರಿಗ ತಲುಪಿವೆ ಎಂದು ಅವರು ಹೇಳಿದರು. ಡಿಬಿಟಿ, ಜೆಎಎಂ (ಜನಧನ್ ಆಧಾರ್ ಮೊಬೈಲ್) ಮೂಲಕ ಸೋರಿಕೆಯನ್ನು ತಡೆಗಟ್ಟಿ ಲಕ್ಷಾಂತರ ಫಲಾನುಭವಿಗಳಿಗೆ ಅಗತ್ಯ ನೆರವು ನೀಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಸಣ್ಣ ಸ್ವಸಹಾಯ ಗುಂಪುಗಳು, ಎಂಎಸ್ಎಂಇಗಳು ತಮ್ಮ ಸರಕು ಮತ್ತು ಸೇವೆಗಳನ್ನು ನೇರವಾಗಿ ಭಾರತ ಸರ್ಕಾರಕ್ಕೆ GeM ವೇದಿಕೆಯ ಮೂಲಕ ಒದಗಿಸಿ ಹೇಗೆ ಪ್ರಯೋಜನ ಪಡೆಯುತ್ತಿವೆ ಎಂಬ ಬಗ್ಗೆ ಪ್ರಧಾನಿ ತಿಳಿಸಿದರು.

ದೇಶದಲ್ಲಿ ಸೌರ ಫಲಕದ ವಿದ್ಯುತ್ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ಯಮವು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಮತ್ತು ಉತ್ತಮ ಬ್ಯಾಟರಿಗಳ ತಯಾರಿಕೆಯಲ್ಲಿ ಹೂಡಿಕೆ ಮಾಡಬೇಕೆಂದು ಅವರು ಒತ್ತಾಯಿಸಿದರು. ಕೆಲಸದಲ್ಲಿ ತೊಡಗಿರುವ ಅಂತಹ ಸಂಸ್ಥೆಗಳು, ಎಂಎಸ್ಎಂಇಗಳಿಗೆ ಬೆಂಬಲ ನೀಡುವಂತೆಯೂ ಅವರು ಕರೆ ನೀಡಿದರು.

ಗುರುವರ್ಯ ರವೀಂದ್ರನಾಥ ಟ್ಯಾಗೋರ್ ಅವರ ಪ್ರಸಿದ್ಧ ಕವಿತೆನೂತನ್ ಜುಗರ್ ಭೋರ್ನ್ನು ಉಲ್ಲೇಖಿಸಿದ ಪ್ರಧಾನಿಯವರು, ಪ್ರಸ್ತುತ ಸವಾಲುಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಅರ್ಥಮಾಡಿಕೊಳ್ಳುವಂತೆ ಉದ್ಯಮಕ್ಕೆ ಸೂಚಿಸಿದರು. ನಡೆಯುವ ಕಾಲು ಮಾತ್ರ ಹೊಸ ಹಾದಿಯನ್ನು ಸೃಷ್ಟಿಸಬಹುದು. ಈಗ ಯಾವುದೇ ವಿಳಂಬ ಮಾಡಬಾರದು ಎಂದು ಹೇಳಿದರು.

ಪೂರ್ವ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಭಾರತೀಯ ವಾಣಿಜ್ಯ ಮಹಾಮಂಡಳಿಯ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು.

***



(Release ID: 1630894) Visitor Counter : 239