57th International Film Festival of India 2026
20 – 28 Nov 2026

‘ಗಡಿಗಳಿಲ್ಲದ ಕಥೆಗಳು’: ಭೌಗೋಳಿಕ ಮತ್ತು ಸಾಮಾಜಿಕ ಸಾಂಸ್ಕೃತಿಕ ಗಡಿಗಳನ್ನು ಮೀರಿದ ಸಿನಿಮಾವನ್ನು ಗೌರವಿಸಲಿರುವ  ಐಎಫ್‌ಎಫ್‌ಐ 57


57ನೇ ಆವೃತ್ತಿಯ ದೃಷ್ಟಿಕೋನವನ್ನು ವಿವರಿಸಿದ ಉತ್ಸವದ ನಿರ್ದೇಶಕ ಅಶುತೋಷ್ ಗೋವಾರಿಕರ್; ವೈವಿಧ್ಯಮಯ ಸಿನಿಮಾ ವಿಭಾಗಗಳನ್ನು ಅನ್ವೇಷಿಸಲು ಮತ್ತು ಉತ್ಸವದ ಜಾಗತಿಕ ಆಯಾಮವನ್ನು ಉಲ್ಲೇಖಿಸಲು ಮಾಧ್ಯಮಗಳಿಗೆ ಕರೆ

ಪ್ರಕಟಣಾ ದಿನಾಂಕ: 20 NOV 2026 2:09PMby PIB Bengaluruಪ್ರಕಟಣೆ ಐ.ಡಿ.: 2339160Views: 15

ಭಾರತದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಹಿನ್ನೆಲೆಯಲ್ಲಿ ಇಂದು ಗೋವಾದ ಪಣಜಿಯಲ್ಲಿರುವ ಪಿಐಬಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಪತ್ರಿಕಾ ಗೋಷ್ಠಿಯಲ್ಲಿ ಐಎಫ್‌ಎಫ್‌ಐ 57ರ ಉತ್ಸವದ ನಿರ್ದೇಶಕ ಶ್ರೀ ಅಶುತೋಷ್ ಗೋವಾರಿಕರ್ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್ ಎಫ್ ಡಿ ಸಿ) ವ್ಯವಸ್ಥಾಪಕ ನಿರ್ದೇಶಕ ಶ್ರೀ ಧೀರಜ್ ಸಿಂಗ್ ಭಾಗವಹಿಸಿದ್ದರು. ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ಮಹಾನಿರ್ದೇಶಕರಾದ (ಪಶ್ಚಿಮ) ಶ್ರೀಮತಿ ಸ್ಮಿತಾ ವತ್ಸ್ ಶರ್ಮಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶ್ರೀ ಅಶುತೋಷ್ ಗೋವಾರಿಕರ್ ಅವರು, ‘ಗಡಿಗಳಿಲ್ಲದ ಕಥೆಗಳು’  ಎನ್ನುವ ವಿಷಯದ ಸುತ್ತ ಐಎಫ್‌ಎಫ್‌ಐ 57ರ ಆವೃತ್ತಿಯ ಕುರಿತ ತಮ್ಮ ದೃಷ್ಟಿಕೋನವನ್ನು ವಿವರಿಸಿದರು. ಈ ಧ್ಯೇಯವಾಕ್ಯವು ಕೇವಲ ಭೌಗೋಳಿಕ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿ, ಜಾತಿ, ಸಾಮಾಜಿಕ ಭಿನ್ನಾಭಿಪ್ರಾಯಗಳು ಮತ್ತು ಇತರ ಸಾಮಾಜಿಕ-ಸಾಂಸ್ಕೃತಿಕ ವಾಸ್ತವಗಳಿಂದ ಉಂಟಾಗುವ ಕುಟುಂಬ ಹಾಗೂ ಸಮಾಜದೊಳಗಿನ ವಿಭಜನೆಗಳನ್ನೂ ಅನ್ವೇಷಿಸುತ್ತದೆ ಎಂದು ಅವರು ವಿವರಿಸಿದರು. ಇಂತಹ ಗಡಿಗಳನ್ನು ಮೀರಿ ನಿಲ್ಲುವ ಮತ್ತು ವಿವಿಧ ಸಂಸ್ಕೃತಿಗಳ ನಡುವಿನ ಸಮಾನವಾದ ಮಾನವ ಅನುಭವಗಳನ್ನು ಪ್ರತಿಬಿಂಬಿಸುವ ಕಥೆಗಳನ್ನು ಒಂದೆಡೆ ತರುವುದು ಈ ಉತ್ಸವದ ಆಶಯವಾಗಿದೆ ಎಂದು ಹೇಳಿದರು.

ಉತ್ಸವದ ವೈವಿಧ್ಯಮಯ ಸಿನಿಮಾ ಕೊಡುಗೆಗಳ ಕುರಿತು ಮಾತನಾಡಿದ ಶ್ರೀ ಗೋವಾರಿಕರ್, ಈ ವರ್ಷ ಅನಿಮೇಷನ್, ಸಾಕ್ಷ್ಯಚಿತ್ರ  ಮತ್ತು ಚಲನಚಿತ್ರಗಳ ಕುರಿತ ಚಲನಚಿತ್ರಗಳು ಎನ್ನುವ ಮೂರು ಹೊಸ ವಿಭಾಗಗಳನ್ನು ಪರಿಚಯಿಸುತ್ತಿರುವುದಾಗಿ ಘೋಷಿಸಿದರು. ಸಾಕ್ಷ್ಯಚಿತ್ರಗಳ ಹೆಚ್ಚುತ್ತಿರುವ ಮಹತ್ವವನ್ನು ಒತ್ತಿಹೇಳಿದ ಅವರು, ಸಾಕ್ಷ್ಯಚಿತ್ರ ನಿರ್ಮಾಪಕರಿಗೆ ಹೆಚ್ಚಿನ ಮನ್ನಣೆ ಮತ್ತು ಅವಕಾಶಗಳನ್ನು ಒದಗಿಸುವ ಅಗತ್ಯವಿದೆ ಎಂದರು. ಈ ಉಪಕ್ರಮದ ಭಾಗವಾಗಿ, ಇತ್ತೀಚೆಗೆ ಮುಕ್ತಾಯಗೊಂಡ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಜೇತರ ಚಲನಚಿತ್ರಗಳನ್ನು ಒಳಗೊಂಡ ವಿಶೇಷ ಪ್ರದರ್ಶನವನ್ನು ಐಎಫ್‌ಎಫ್‌ಐ  ಆಯೋಜಿಸಲಿದೆ.

ಉತ್ಸವದ ವೈವಿಧ್ಯಮಯ ಕಾರ್ಯಕ್ರಮಗಳ ಮಹತ್ವದ ಬಗ್ಗೆ ತಿಳಿಸಿದ ಅವರು, ಅವಲೋಕನ ವಿಶೇಷವಾಗಿ ಆಯ್ಕೆ ಮಾಡಲಾದ ಪ್ರದರ್ಶನಗಳು  ಮತ್ತು ವಿಶೇಷ ಪ್ರದರ್ಶನಗಳು  ಸೇರಿದಂತೆ ಪ್ರತಿಯೊಂದು ವಿಭಾಗವೂ ಸಿನಿಮಾದ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಪ್ರಸ್ತುತಪಡಿಸಲು ಕೊಡುಗೆ ನೀಡುತ್ತದೆ ಎಂದರು. ಮಾಧ್ಯಮದವರು ತಮ್ಮ ವೈಯಕ್ತಿಕ ಸಿನಿಮಾ ಅಭಿರುಚಿಗಳನ್ನು ಮೀರಿ ಉತ್ಸವವನ್ನು ಅನ್ವೇಷಿಸಬೇಕು ಮತ್ತು ಗಾಲಾ ಪ್ರದರ್ಶನಗಳು, ರೆಡ್-ಕಾರ್ಪೆಟ್ ಕಾರ್ಯಕ್ರಮಗಳು, ಅಂತಾರಾಷ್ಟ್ರೀಯ ಪತ್ರಿಕಾಗೋಷ್ಠಿಗಳು ಹಾಗೂ ಪನೋರಮಾ ಸಂವಾದಗಳಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಪ್ರೋತ್ಸಾಹಿಸಿದರು. ಇಂತಹ ಪಾಲ್ಗೊಳ್ಳುವಿಕೆಗಳು ಚಲನಚಿತ್ರ ನಿರ್ಮಾಪಕರು ಮತ್ತು ಬಂದ  ಪ್ರತಿನಿಧಿಗಳಿಗೆ ತಮ್ಮಕೆಲಸಗಳನ್ನು ಪ್ರಸ್ತುತಪಡಿಸಲು ಅವಕಾಶ ನೀಡುವುದರ ಜೊತೆಗೆ, ಪ್ರೇಕ್ಷಕರಿಗೆ ವೈವಿಧ್ಯಮಯ ಸಿನಿಮಾ ದೃಷ್ಟಿಕೋನಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಉತ್ಸವದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಮಾಧ್ಯಮಗಳ ಪಾತ್ರವನ್ನು ಒತ್ತಿಹೇಳಿದ ಶ್ರೀ ಗೋವಾರಿಕರ್, ಮಾಧ್ಯಮ ಪ್ರತಿನಿಧಿಗಳು ತಮ್ಮ ಸ್ವತಂತ್ರ ವಿವೇಚನೆ ಮತ್ತು ವಿಮರ್ಶಾತ್ಮಕ ದೃಷ್ಟಿಕೋನಗಳನ್ನು ಕಾಯ್ದುಕೊಂಡು, ಅವಲೋಕನ ವಿಭಾಗವೂ ಸೇರಿದಂತೆ ವಿವಿಧ ವಿಭಾಗಗಳ ಚಲನಚಿತ್ರಗಳನ್ನು ವೀಕ್ಷಿಸಿ ವರದಿ ಮಾಡುವಂತೆ ಮನವಿ ಮಾಡಿದರು. ಐಎಫ್ಎಫ್ಐ ಕಥೆಗಳು ಮತ್ತು ಸಿನಿಮಾ ಕೊಡುಗೆಗಳನ್ನು ದೇಶಾದ್ಯಂತದ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾಲ್ಗೊಳ್ಳುವಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದ ಉದ್ದಕ್ಕೂ ಉತ್ಸವದ ತಂಡ ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಅರ್ಥಪೂರ್ಣ ಮತ್ತು ಅನೌಪಚಾರಿಕ ಸಂವಾದಗಳಿಗೆ ಅವಕಾಶ ಕಲ್ಪಿಸಲು ತಾವು ಉತ್ಸುಕರಾಗಿರುವುದಾಗಿ ಅವರು ಹೇಳಿದರು. ಮಾಧ್ಯಮ ಸಿಬ್ಬಂದಿಯ ವೃತ್ತಿಪರ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಉತ್ಸವದ ಚಟುವಟಿಕೆಗಳ ವರದಿಗಾರಿಕೆಗೆ ಹೆಚ್ಚಿನ ಅನುಕೂಲ ಮತ್ತು ಸಾಕಷ್ಟು ಸಮಯ ಸಿಗುವಂತೆ ಸಂವಾದಗಳ ವೇಳಾಪಟ್ಟಿಯನ್ನು ಹೊಂದಿಸಲಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಶ್ರೀ ಅಶುತೋಷ್ ಗೋವಾರಿಕರ್ ಅವರು 57ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ಕೈಪಿಡಿಯನ್ನುಸಹ ಬಿಡುಗಡೆ ಮಾಡಿದರು.

ಈ ಮಾಧ್ಯಮ ಸಂವಾದವು ಉತ್ಸವದ ದೃಷ್ಟಿಕೋನ ಮತ್ತು ಕಾರ್ಯಕ್ರಮಗಳ ಆದ್ಯತೆಗಳ ಕುರಿತು ಸಮಗ್ರ ಚಿತ್ರಣವನ್ನು ನೀಡುವುದರ ಜೊತೆಗೆ, ಸಿನಿಮಾ ಮತ್ತು ಅಂತರ-ಸಾಂಸ್ಕೃತಿಕ ವಿನಿಮಯದ ಅಂತಾರಾಷ್ಟ್ರೀಯ ವೇದಿಕೆಯಾಗಿ ಐ ಎಫ್ ಎಫ್ ಐ ಅನ್ನು ಬಲಪಡಿಸುವಲ್ಲಿ ಮಾಧ್ಯಮಗಳ ಪಾಲ್ಗೊಳ್ಳುವಿಕೆ ಮತ್ತು ಸಾಮೂಹಿಕ ಪ್ರಯತ್ನಗಳ ಮಹತ್ವವನ್ನು ಉಲ್ಲೇಖಿಸಿತು.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2339160
•
Media Centre: Goa
•
Festival Dates: Nov 20 – 28, 2026