ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮಗೋಷ್ಠಿ


ದುರುಪಯೋಗ/ಬೇರೆಡೆಗೆ ತಿರುಗಿಸುವುದನ್ನು ತಡೆಯಲು ವಿತರಣಾ ದೃಢೀಕರಣ ಕೋಡ್ (ಡಿಎಸಿ) ಆಧಾರಿತ ವಿತರಣೆಗಳು ಸುಮಾರು ಶೇಕಡಾ 96 ಕ್ಕೆ ಏರಿಕೆ

ಕಳೆದ 4 ದಿನಗಳಲ್ಲಿ ಸುಮಾರು 1.78 ಕೋಟಿ ಎಲ್‌ ಪಿ ಜಿ ಸಿಲಿಂಡರ್‌ ಗಳ ಬುಕಿಂಗ್‌ ಗೆ ಪ್ರತಿಯಾಗಿ ಸುಮಾರು 1.80 ಕೋಟಿ ಎಲ್‌ ಪಿ ಜಿ ಸಿಲಿಂಡರ್‌ ಗಳ ವಿತರಣೆ

28.05.2026 ರವರೆಗೆ ಸುಮಾರು 60,400 ಪಿ ಎನ್‌ ಜಿ ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ ಎಲ್‌ ಪಿ ಜಿ ಸಂಪರ್ಕಗಳನ್ನು ವಾಪಸ್ ಒಪ್ಪಿಸಿದ್ದಾರೆ

ಭಾರತಕ್ಕಾಗಿ ಸರಿಸುಮಾರು 270,000 ಮೆಟ್ರಿಕ್ ಟನ್ ಕಚ್ಚಾ ತೈಲದ ಸರಕನ್ನು ಹೊತ್ತೊಯ್ಯುತ್ತಿರುವ, ಮಾರ್ಷಲ್ ಐಲ್ಯಾಂಡ್ಸ್ ಧ್ವಜದ 'ನಿಸೋಸ್ ಕೆರೋಸ್' ಕಚ್ಚಾ ತೈಲ ಟ್ಯಾಂಕರ್ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, 03 ಜೂನ್ 2026 ರಂದು ವಿಶಾಖಪಟ್ಟಣಕ್ಕೆ ಆಗಮಿಸುವ ನಿರೀಕ್ಷೆಯಿದೆ

ತೆಹರಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 2,557 ಭಾರತೀಯ ನಾಗರಿಕರು ಭೂ ಗಡಿ ಮಾರ್ಗಗಳ ಮೂಲಕ ಇರಾನ್‌ ನಿಂದ ಹೊರಹೋಗಲು ಅನುಕೂಲ ಮಾಡಿಕೊಟ್ಟಿದೆ

ಪ್ರಕಟಣಾ ದಿನಾಂಕ: 29 MAY 2026 7:22PM by PIB Bengaluru

ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ನಡುವೆ, ಭಾರತ ಸರ್ಕಾರವು ನಿಯಮಿತ ನವೀಕರಣಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡುವ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ, ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಠಿ ನಡೆಯಿತು. ಅಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಅಧಿಕಾರಿಗಳು ಇಂಧನ ಲಭ್ಯತೆ ಮತ್ತು ಪ್ರಮುಖ ವಲಯಗಳಾದ್ಯಂತ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಸ್ತುತ ಇಂಧನ ಪೂರೈಕೆ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿತು. ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ ನಿರಂತರವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿತು:

ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ, ನಾಗರಿಕರು ಇವುಗಳನ್ನು ಆತಂಕದಿಂದ ಮುಗಿಬಿದ್ದು ಖರೀದಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
  • ವದಂತಿಗಳ ಬಗ್ಗೆ ಎಚ್ಚರದಿಂದಿರಲು ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಲು ಸೂಚಿಸಲಾಗಿದೆ.
  • ಎಲ್‌ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ವೇದಿಕೆಗಳನ್ನು ಬಳಸಲು ಮತ್ತು ವಿತರಕರ ಬಳಿ ಖುದ್ದಾಗಿ ಭೇಟಿ ನೀಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
  • ನಾಗರಿಕರು ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಸ್ಟೌವ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತಿದೆ.
  • ಸಗಟು ಮತ್ತು ಕೈಗಾರಿಕಾ ಗ್ರಾಹಕರು ಅಧಿಕೃತ ಖರೀದಿ ಮಾರ್ಗಗಳಿಂದಲೇ ಡೀಸೆಲ್ ಪಡೆಯಲು ವಿನಂತಿಸಲಾಗಿದೆ.
  • ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.

ಸರ್ಕಾರದ ಸನ್ನದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು

  • ಪ್ರಸ್ತುತ ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಗೃಹಬಳಕೆಯ ಎಲ್‌ ಪಿ ಜಿ, ಗೃಹಬಳಕೆಯ ಪಿ ಎನ್‌ ಜಿ ಮತ್ತು ಸಿ ಎನ್‌ ಜಿ-ಸಾರಿಗೆಗೆ ಶೇಕಡಾ 100 ರಷ್ಟು ಪೂರೈಕೆಯನ್ನು ಸರ್ಕಾರ ಖಚಿತಪಡಿಸಿದೆ.
  • ವಾಣಿಜ್ಯ ಎಲ್‌ ಪಿ ಜಿ ಗಾಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದಲ್ಲದೆ ಫಾರ್ಮಾ (ಔಷಧ), ಉಕ್ಕು, ಆಟೋಮೊಬೈಲ್, ಬೀಜ, ಕೃಷಿ ಮುಂತಾದ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ, ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳ ಪೂರೈಕೆಯನ್ನು 2026 ರ ಮಾರ್ಚ್ 2 ಮತ್ತು 3 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ.
  • ರಿಫೈನರಿ (ಸಂಸ್ಕರಣಾಗಾರ) ಉತ್ಪಾದನೆಯನ್ನು ಹೆಚ್ಚಿಸುವುದು, ಸಿಲಿಂಡರ್ ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿದಂತೆ ಪೂರೈಕೆ ಮತ್ತು ಬೇಡಿಕೆ ಎರಡೂ ರಂಗಗಳಲ್ಲಿ ಸರ್ಕಾರವು ಈಗಾಗಲೇ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತಂದಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು

  • ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದಾಸ್ತಾನು ಹಾಗೂ ಕಾಳಸಂತೆ ದಂಧೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗುತ್ತದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ ಗಳ ಮೂಲಕ ಇದನ್ನೇ ಪುನರುಚ್ಚರಿಸಿದೆ.
  • ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಸಕ್ರಿಯ ಸಾರ್ವಜನಿಕ ಸಂವಹನದ ಅಗತ್ಯವನ್ನು ಭಾರತ ಸರ್ಕಾರವು ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ ಗಳ ಮೂಲಕ ಒತ್ತಿಹೇಳಿದೆ.
  • ಮತ್ತೊಮ್ಮೆ, ಭಾರತ ಸರ್ಕಾರವು 26.05.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾವಾರು ಎಚ್‌ ಎಸ್‌ ಡಿ/ಎಂಎಸ್ ಬಳಕೆಯ ಮಾದರಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಪರಿಶೀಲಿಸಲು ಜಿಲ್ಲಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ವಿನಂತಿಸಿದೆ. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರು ಚಿಲ್ಲರೆ ಮಾರಾಟ ಕೇಂದ್ರಗಳ ಮೂಲಕ ಅನಧಿಕೃತವಾಗಿ ಎಚ್‌ ಎಸ್‌ ಡಿ ಖರೀದಿಸುವುದನ್ನು ತಡೆಯಲು ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ಪ್ರಮುಖ ಸಾರಿಗೆ/ಕೈಗಾರಿಕಾ ಕಾರಿಡಾರ್‌ ಗಳಲ್ಲಿ ತಪಾಸಣೆ ಮತ್ತು ಜಾರಿ ಚಟುವಟಿಕೆಗಳನ್ನು ತೀವ್ರಗೊಳಿಸಲು ಹಾಗೂ ಉಲ್ಲಂಘಿಸುವವರ ವಿರುದ್ಧ ತಕ್ಷಣದ ದಂಡನಾತ್ಮಕ ಕ್ರಮವನ್ನು ಪ್ರಾರಂಭಿಸಲು ವಿನಂತಿಸಿದೆ.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ದಾಸ್ತಾನು ಮತ್ತು ಕಾಳಸಂತೆ ದಂಧೆಯನ್ನು ತಡೆಗಟ್ಟಲು ದೇಶಾದ್ಯಂತ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಜಾರಿ ಕ್ರಮಗಳು ಮುಂದುವರಿದಿವೆ.
  • ಎಲ್ಪಿ ಜಿಗೆ ಸಂಬಂಧಿಸಿದ ಜಾರಿ ಕ್ರಮಗಳು: ಕಳೆದ 4 ದಿನಗಳಲ್ಲಿ, ದೇಶಾದ್ಯಂತ 6500 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, 380 ಕ್ಕೂ ಹೆಚ್ಚು ಸಿಲಿಂಡರ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ, 5 ಎಫ್‌ ಐ ಆರ್‌ ಗಳನ್ನು ದಾಖಲಿಸಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ.
  • ಪೆಟ್ರೋಲ್, ಡೀಸೆಲ್ಗೆ ಸಂಬಂಧಿಸಿದ ಜಾರಿ ಕ್ರಮಗಳು: ಕಳೆದ 2 ದಿನಗಳಲ್ಲಿ, ದೇಶಾದ್ಯಂತ ಸುಮಾರು 900 ದಾಳಿಗಳನ್ನು ನಡೆಸಲಾಗಿದ್ದು, ಅದರಲ್ಲಿ 417 ಲೀಟರ್ ಪೆಟ್ರೋಲ್ ಮತ್ತು 75,715 ಲೀಟರ್ ಡೀಸೆಲ್ ಅನ್ನು ವಶಪಡಿಸಿಕೊಳ್ಳಲಾಗಿದೆ, 12 ಎಫ್‌ ಐ ಆರ್‌ ಗಳನ್ನು ದಾಖಲಿಸಲಾಗಿದೆ ಮತ್ತು 15 ಜನರನ್ನು ಬಂಧಿಸಲಾಗಿದೆ.
  • ಇದೇ ರೀತಿ, ಪಿ ಎಸ್‌ ಯು ಒಎಂಸಿ ಅಧಿಕಾರಿಗಳ ದಿಢೀರ್ ತಪಾಸಣೆಗಳೂ ಮುಂದುವರಿದಿವೆ-
    • ಎಲ್ಪಿ ಜಿ ವಿತರಕ ಕೇಂದ್ರಗಳು: ಕಳೆದ 4 ದಿನಗಳಲ್ಲಿ, 800 ಕ್ಕೂ ಹೆಚ್ಚು ಎಲ್‌ ಪಿ ಜಿ ವಿತರಕ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗಿದೆ. 45 ಎಲ್‌ ಪಿ ಜಿ ವಿತರಕ ಕೇಂದ್ರಗಳ ಮೇಲೆ ದಂಡ ವಿಧಿಸಲಾಗಿದೆ.
    • ಚಿಲ್ಲರೆ ಮಾರಾಟ ಕೇಂದ್ರಗಳು: ಕಳೆದ 4 ದಿನಗಳಲ್ಲಿ, 4660 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗಿದೆ. 73 ಚಿಲ್ಲರೆ ಮಾರಾಟ ಕೇಂದ್ರಗಳ ಮೇಲೆ ದಂಡವನ್ನು ವಿಧಿಸಲಾಗಿದೆ ಮತ್ತು 562 ಚಿಲ್ಲರೆ ಮಾರಾಟ ಕೇಂದ್ರಗಳನ್ನು ಅಮಾನತುಗೊಳಿಸಲಾಗಿದೆ.

ಎಲ್ಪಿ ಜಿ ಪೂರೈಕೆ

ಗೃಹಬಳಕೆಯ ಎಲ್ಪಿ ಜಿ ಪೂರೈಕೆ ಸ್ಥಿತಿ:

  • ಪ್ರಸ್ತುತ ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್‌ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
  • ಗೃಹಬಳಕೆಯ ಮನೆಗಳಿಗೆ ಎಲ್‌ ಪಿ ಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ.
  • ಎಲ್‌ ಪಿ ಜಿ ವಿತರಕ ಕೇಂದ್ರಗಳಲ್ಲಿ ಯಾವುದೇ ದಾಸ್ತಾನು ಖಾಲಿಯಾದ ವರದಿಯಾಗಿಲ್ಲ.
  • ನಿನ್ನೆ ಉದ್ಯಮದ ವರದಿಯಂತೆ ಆನ್‌ಲೈನ್ ಎಲ್‌ ಪಿ ಜಿ ಸಿಲಿಂಡರ್ ಬುಕಿಂಗ್ ಸುಮಾರು ಶೇಕಡಾ 99 ಕ್ಕೆ ಏರಿದೆ.
  • ಬೇರೆಡೆಗೆ ತಿರುಗಿಸುವುದನ್ನು ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಆಧಾರಿತ ವಿತರಣೆಗಳು ಸುಮಾರು ಶೇಕಡಾ 96 ಕ್ಕೆ ಏರಿವೆ. ಡಿಎಸಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.
  • ಕಳೆದ 4 ದಿನಗಳಲ್ಲಿ, ಸುಮಾರು 1.78 ಕೋಟಿ ಎಲ್‌ ಪಿ ಜಿ ಸಿಲಿಂಡರ್‌ ಬುಕಿಂಗ್‌ ಗೆ ಪ್ರತಿಯಾಗಿ ಸುಮಾರು 1.80 ಕೋಟಿ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ವಿತರಿಸಲಾಗಿದೆ.

ವಾಣಿಜ್ಯ ಎಲ್ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:

  • ಬಿಕ್ಕಟ್ಟಿನ ಮುಂಚಿನ ಮಟ್ಟದ ಶೇಕಡಾ 70 ರಷ್ಟನ್ನು ವಾಣಿಜ್ಯ ಬಳಕೆಗೆ ಒಟ್ಟು ಹಂಚಿಕೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ, ಇದರಲ್ಲಿ ಶೇಕಡಾ 10 ರಷ್ಟು ಸುಧಾರಣೆ ಆಧಾರಿತ ಹಂಚಿಕೆಯೂ ಸೇರಿದೆ.
  • ಕಳೆದ 4 ದಿನಗಳಲ್ಲಿ, ಸುಮಾರು 2.42 ಲಕ್ಷ – 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳನ್ನು ಮಾರಾಟ ಮಾಡಲಾಗಿದೆ.
  • ನಿನ್ನೆ, ಸುಮಾರು 176 ಶಿಬಿರಗಳ ಮೂಲಕ ಸುಮಾರು 2,537 - 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳನ್ನು ಮಾರಾಟ ಮಾಡಲಾಗಿದೆ.
  • ಕಳೆದ 4 ದಿನಗಳಲ್ಲಿ, ಒಟ್ಟು 29,814 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ ಪಿ ಜಿ ಮಾರಾಟವಾಗಿದೆ.
  • ಕಳೆದ 4 ದಿನಗಳಲ್ಲಿ, ಪಿ ಎಸ್‌ ಯು ಒಎಂಸಿಗಳು ಸುಮಾರು 954 ಮೆಟ್ರಿಕ್ ಟನ್ ಆಟೋ ಎಲ್‌ ಪಿ ಜಿಯನ್ನು ಮಾರಾಟ ಮಾಡಿವೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್ಜಿ ವಿಸ್ತರಣೆ ಉಪಕ್ರಮಗಳು

  • ಡಿ-ಪಿ ಎನ್‌ ಜಿ ಮತ್ತು ಸಿ ಎನ್‌ ಜಿ-ಸಾರಿಗೆಗೆ ಶೇಕಡಾ 100 ರಷ್ಟು ಪೂರೈಕೆಯೊಂದಿಗೆ ಗ್ರಾಹಕರಿಗೆ ಆದ್ಯತೆ ನೀಡಲಾಗಿದೆ.
  • ಕಾರ್ಯನಿರ್ವಹಿಸುತ್ತಿರುವ ಯೂರಿಯಾ ಸ್ಥಾವರಗಳಿಗೆ ಪೂರೈಕೆಯು ಪ್ರಸ್ತುತ ಅವುಗಳ ಹಿಂದಿನ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇಕಡಾ 99 ರಷ್ಟಿದೆ.
  • ಸಿಜಿಡಿ ನೆಟ್‌ವರ್ಕ್‌ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ಶೇಕಡಾ 80 ರವರೆಗೆ ಹೆಚ್ಚಿಸಲಾಗಿದೆ.
  • ವಾಣಿಜ್ಯ ಎಲ್‌ ಪಿ ಜಿಯ ಲಭ್ಯತೆಯ ಆತಂಕಗಳನ್ನು ಪರಿಹರಿಸಲು, ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಎಲ್ಲಾ ಜಿಎಗಳಾದ್ಯಂತ ಪಿ ಎನ್‌ ಜಿ ಸಂಪರ್ಕಗಳಿಗೆ ಆದ್ಯತೆ ನೀಡುವಂತೆ ಸಿಜಿಡಿ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.
  • ಸಿಜಿಡಿ ನೆಟ್‌ವರ್ಕ್‌ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ವೇಗಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಲಾಗಿದೆ.
  • ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ದೀರ್ಘಾವಧಿಯಲ್ಲಿ ಎಲ್‌ ಪಿ ಜಿಯಿಂದ ಪಿ ಎನ್‌ ಜಿಗೆ ಪರಿವರ್ತನೆಯಾಗಲು ಸಹಾಯ ಮಾಡಿದರೆ, ರಾಜ್ಯಗಳಿಗೆ ಹೆಚ್ಚುವರಿ ಶೇಕಡಾ 10 ರಷ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ನೀಡಲು ಮುಂದಾಗಿದೆ.
  • 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿ ಎನ್‌ ಜಿ ವಿಸ್ತರಣೆ ಸುಧಾರಣೆಗಳಿಗೆ ಲಿಂಕ್ ಮಾಡಲಾದ ಹೆಚ್ಚುವರಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಪಡೆಯುತ್ತಿವೆ.
  • ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ ಮತ್ತು ಇತರ ಸೌಲಭ್ಯಗಳ ಅಳವಡಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026 ಅನ್ನು ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಸಮಯಬದ್ಧ ಚೌಕಟ್ಟನ್ನು ಒದಗಿಸುತ್ತದೆ, ಅನುಮೋದನೆಗಳು ಮತ್ತು ಭೂಮಿಯ ಲಭ್ಯತೆಯಲ್ಲಿನ ವಿಳಂಬವನ್ನು ಪರಿಹರಿಸುತ್ತದೆ ಮತ್ತು ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ವೇಗವಾಗಿ ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಇದು ಪಿ ಎನ್‌ ಜಿ ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸುವ, ಕೊನೆಯ ಹಂತದ ಸಂಪರ್ಕವನ್ನು ಹೆಚ್ಚಿಸುವ ಮತ್ತು ಸ್ವಚ್ಛ ಇಂಧನಗಳ ಕಡೆಗೆ ಪರಿವರ್ತನೆಯನ್ನು ಬೆಂಬಲಿಸುವ ನಿರೀಕ್ಷೆಯಿದೆ, ಆ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.
  • ಡಿ-ಪಿ ಎನ್‌ ಜಿ ಸಂಪರ್ಕಗಳನ್ನು ವೇಗಗೊಳಿಸಲು ಪಿ ಎನ್‌ ಜಿ ಆರ್‌ ಬಿ ಸಂಸ್ಥೆಯು ಸಿಜಿಡಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಪಿ ಎನ್‌ ಜಿ ವಿಸ್ತರಣೆಯ ವೇಗವನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ಪಿ ಎನ್‌ ಜಿ ಡ್ರೈವ್ 2.0 ಅನ್ನು 30.06.2026 ರವರೆಗೆ ವಿಸ್ತರಿಸಲಾಗಿದೆ.
  • ಸ್ವಚ್ಛ, ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಉತ್ತೇಜಿಸಲು, ಭಾರತ ಸರ್ಕಾರವು ಮಾದರಿ ಕರಡು ರಾಜ್ಯ ಸಿಬಿಜಿ ನೀತಿಯನ್ನು ಅಭಿವೃದ್ಧಿಪಡಿಸಿದೆ. ಈ ಮಾದರಿ ನೀತಿಯು ರಾಜ್ಯಗಳು ಸಿಬಿಜಿ ಅಭಿವೃದ್ಧಿಗಾಗಿ ತಮ್ಮದೇ ಆದ ಹೂಡಿಕೆದಾರ ಸ್ನೇಹಿ ಮತ್ತು ಅನುಷ್ಠಾನ ಆಧಾರಿತ ಪರಿಸರ ವ್ಯವಸ್ಥೆಯನ್ನು ರಚಿಸಲು ಅನುವು ಮಾಡಿಕೊಡುವ ಸಮಗ್ರ ಹೊಂದಿಕೊಳ್ಳುವ ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಇದನ್ನು ಆಯ್ಕೆ ಮಾಡಿಕೊಳ್ಳುವ ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿಯ ಮುಂದಿನ ಕಂತಿನ ಹೆಚ್ಚುವರಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
  • ಭಾರತ ಸರ್ಕಾರದ 25.05.2026 ರ ಗೆಜೆಟ್ ಅಧಿಸೂಚನೆಯ ಪ್ರಕಾರ, ಪಿ ಎನ್‌ ಜಿ ಸಂಪರ್ಕಗಳನ್ನು ಹೊಂದಿರುವ ಎಲ್‌ ಪಿ ಜಿ ಗ್ರಾಹಕರು ಈ ಕೆಳಗಿನ ಆಯ್ಕೆಗಳನ್ನು ಹೊಂದಿರುತ್ತಾರೆ:
    • ಗ್ರಾಹಕರು ಪಿ ಎನ್‌ ಜಿ ಸಂಪರ್ಕವನ್ನು ಪಡೆದ 30 ದಿನಗಳ ಒಳಗೆ ಎಲ್‌ ಪಿ ಜಿ ಸಂಪರ್ಕವನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಬಹುದು; ಅಥವಾ
    • ಗ್ರಾಹಕರು ಪಿ ಎನ್‌ ಜಿ ಅಲ್ಲದ ಪ್ರದೇಶದಲ್ಲಿ ಭವಿಷ್ಯದಲ್ಲಿ ಎಲ್‌ ಪಿ ಜಿ ಸಂಪರ್ಕವನ್ನು ಮರುಸ್ಥಾಪಿಸಲು ವರ್ಗಾವಣೆ ವೌಚರ್ ಅನ್ನು ಪಡೆಯಬಹುದು.
  • ಮಾರ್ಚ್ 2026 ರಿಂದ, ಸುಮಾರು 8.3 ಲಕ್ಷ ಪಿ ಎನ್‌ ಜಿ ಸಂಪರ್ಕಗಳಿಗೆ ಅನಿಲ ಒದಗಿಸಲಾಗಿದೆ ಮತ್ತು ಹೆಚ್ಚುವರಿ 2.91 ಲಕ್ಷ ಸಂಪರ್ಕಗಳಿಗೆ ಮೂಲಸೌಕರ್ಯವನ್ನು ರಚಿಸಲಾಗಿದೆ, ಇದು ಒಟ್ಟು ಸಂಪರ್ಕಗಳನ್ನು 11.21 ಲಕ್ಷಕ್ಕೆ ಕೊಂಡೊಯ್ದಿದೆ. ಇದಲ್ಲದೆ, ಹೊಸ ಸಂಪರ್ಕಗಳಿಗಾಗಿ ಸುಮಾರು 8.53 ಲಕ್ಷ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.
  • 28.05.2026 ರವರೆಗೆ, ಸುಮಾರು 60,400 ಪಿ ಎನ್‌ ಜಿ ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ ಎಲ್‌ ಪಿ ಜಿ ಸಂಪರ್ಕಗಳನ್ನು ವಾಪಸ್‌ ಒಪ್ಪಿಸಿದ್ದಾರೆ.

ಕಚ್ಚಾ ತೈಲದ ಸ್ಥಿತಿ ಮತ್ತು ರಿಫೈನರಿ ಕಾರ್ಯಾಚರಣೆಗಳು

  • ಎಲ್ಲಾ ರಿಫೈನರಿಗಳು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ, ಅದೇ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಸಾಕಷ್ಟು ದಾಸ್ತಾನುಗಳನ್ನು ಕಾಯ್ದುಕೊಳ್ಳಲಾಗುತ್ತಿದೆ.
  • ದೇಶೀಯ ಬಳಕೆಯನ್ನು ಬೆಂಬಲಿಸಲು ರಿಫೈನರಿಗಳಿಂದ ದೇಶೀಯ ಎಲ್‌ ಪಿ ಜಿ ಉತ್ಪಾದನೆಯನ್ನು ದಿನಕ್ಕೆ ಸುಮಾರು 52 ಟಿಎಂಟಿ ಗೆ ಹೆಚ್ಚಿಸಲಾಗಿದೆ.
  • ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ-ಸಚಿವಾಲಯ ಜಂಟಿ ಕಾರ್ಯಪಡೆಯನ್ನು ರಚಿಸಲಾಗಿದೆ. ತರುವಾಯ, ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ ತೈಲ ಸಂಸ್ಕರಣಾ ಕಂಪನಿಗಳಿಗೆ ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣಗಳಿಗೆ ಹೈ ಟೆಕ್ನಾಲಜಿ ಕೇಂದ್ರವು ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ನಿರ್ದಿಷ್ಟ ಕನಿಷ್ಠ ಪ್ರಮಾಣದ ಸಿ3 ಮತ್ತು ಸಿ4 ಸ್ಟ್ರೀಮ್‌ ಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿಸಿದೆ.
  • ಫಾರ್ಮಾಸ್ಯುಟಿಕಲ್ಸ್ ಇಲಾಖೆ, ಕೆಮಿಕಲ್ಸ್ ಮತ್ತು ಪೆಟ್ರೋ ಕೆಮಿಕಲ್ಸ್ ಇಲಾಖೆ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಯಿಂದ ಬಂದ ವಿನಂತಿಗಳ ಆಧಾರದ ಮೇಲೆ, ಎಲ್‌ ಪಿ ಜಿ ಪೂಲ್‌ ನಿಂದ ದಿನಕ್ಕೆ 1120 ಮೆಟ್ರಿಕ್ ಟನ್ ಸಿ3-ಸಿ4 ಮಾಲೆಕ್ಯೂಲ್ಸ್‌  ನಿಬಂಧನೆಯನ್ನು ಫಾರ್ಮಾ, ಕೆಮಿಕಲ್ ಮತ್ತು ಪೇಂಟ್ ವಲಯದ ಕಂಪನಿಗಳಿಗೆ ಮಾಡಲಾಗಿದೆ.
  • 1 ಮೇ 2026 ರಿಂದ, ಮುಂಬೈ, ಕೊಚ್ಚಿ, ವೈಜಾಗ್, ಚೆನ್ನೈ, ಮಥುರಾ ಮತ್ತು ಗುಜರಾತ್ ರಿಫೈನರಿಗಳಿಂದ ಕೆಮಿಕಲ್, ಫಾರ್ಮಾ ಮತ್ತು ಪೇಂಟ್ ಉದ್ಯಮಕ್ಕೆ 13870 ಮೆಟ್ರಿಕ್ ಟನ್‌ ಗಿಂತ ಹೆಚ್ಚು ಸಿ3-ಸಿ4 ಮಾಲೆಕ್ಯೂಲ್ಸ್‌ (ಪ್ರೊಪಿಲೀನ್ ಮತ್ತು ಬ್ಯುಟಿಲೀನ್ ಒಳಗೊಂಡಿರುವ) ಮತ್ತು 5380 ಮೆಟ್ರಿಕ್ ಟನ್‌ ಗಿಂತ ಹೆಚ್ಚು ಬ್ಯುಟೈಲ್ ಅಕ್ರಿಲೇಟ್ ಅನ್ನು ಮಾರಾಟ ಮಾಡಲಾಗಿದೆ.

ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು

  • ದೇಶಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಕೇಂದ್ರಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
  • ಮಧ್ಯಪ್ರಾಚ್ಯ ಬಿಕ್ಕಟ್ಟು ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಗಿದೆ. ಗ್ರಾಹಕರನ್ನು ಈ ಪರಿಣಾಮದಿಂದ ರಕ್ಷಿಸಲು, ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ ಗೆ 10 ರೂಪಾಯಿಗಳಷ್ಟು ಕಡಿತಗೊಳಿಸುವ ಮೂಲಕ ಈ ಹೊರೆಯ ಒಂದು ಭಾಗವನ್ನು ತಾನೇ ಭರಿಸಲು ನಿರ್ಧರಿಸಿದೆ.
  • ಕೆಲವು ಪ್ರದೇಶಗಳಲ್ಲಿ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಅಸಹಜವಾಗಿ ಹೆಚ್ಚಿನ ಮಾರಾಟ ಮತ್ತು ಭಾರಿ ಜನಸಂದಣಿ ಕಂಡುಬಂದಿದೆ. ಆದಾಗ್ಯೂ, ದೇಶದ ಎಲ್ಲಾ ಪೆಟ್ರೋಲ್ ಪಂಪ್‌ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ.
  • 150 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಶೇಕಡಾ 30 ರಷ್ಟು ಹೆಚ್ಚಾಗಿದೆ.
  • ಖಾಸಗಿ ತೈಲ ಮಾರುಕಟ್ಟೆ ಕಂಪನಿಗಳ ಮಾರಾಟದಲ್ಲಿ ಕುಸಿತ (-38%) ಮತ್ತು ಪಿ ಎಸ್‌ ಯು ಒಎಂಸಿಗಳ ಸಗಟು ಮಾರಾಟದಲ್ಲಿ ಕುಸಿತ (-29%) ಕಂಡುಬಂದಿದೆ. ಈ ಪ್ರಮಾಣವು ಪಿ ಎಸ್‌ ಯು ಒಎಂಸಿಗಳ ಚಿಲ್ಲರೆ ಮಾರಾಟ ಕೇಂದ್ರಗಳಿಗೆ ಸ್ಥಳಾಂತರಗೊಂಡಿದೆ.
  • ಅಗತ್ಯ ವಸ್ತುಗಳ ಕಾಯ್ದೆ ಮತ್ತು ಅದರ ಅಡಿಯಲ್ಲಿ ಹೊರಡಿಸಲಾದ ನಿಯಂತ್ರಣ ಆದೇಶಗಳ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ, ಚಿಲ್ಲರೆ ಗ್ರಾಹಕರಿಗಾಗಿ ಮೀಸಲಿಟ್ಟ ಪೂರೈಕೆಯನ್ನು ಪಡೆಯುವ ಸಗಟು ಗ್ರಾಹಕರು ಮತ್ತು ದಾಸ್ತಾನುದಾರರ ದುಷ್ಕೃತ್ಯಗಳು, ಕಾಳಸಂತೆ ದಂಧೆ, ಅನಧಿಕೃತ ದಾಸ್ತಾನು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಬೇರೆಡೆಗೆ ತಿರುಗಿಸುವುದರ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ತಂಡಗಳನ್ನು ರಚಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ವಿನಂತಿಸಲಾಗಿದೆ.
  • ಉದ್ಯಮ ಸಂಘಟನೆಗಳು ತಮ್ಮ ಸದಸ್ಯರಿಗೆ ಅಧಿಕೃತ ಖರೀದಿ ಮಾರ್ಗಗಳಿಂದಲೇ ಡೀಸೆಲ್ ಖರೀದಿಸಲು ಸಲಹೆ ನೀಡುವಂತೆ ವಿನಂತಿಸಲಾಗಿದೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್‌ ನಲ್ಲಿನ ಪ್ರಸ್ತುತ ಕಡಲ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿತು, ಈ ಪ್ರದೇಶದಲ್ಲಿ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಈ ಕೆಳಗಿನಂತೆ ವಿವರಿಸಿತು:

  • ಹಡಗಿನ ಮಾಹಿತಿ: ಹೆಚ್‌ ಪಿ ಸಿ ಎಲ್ ಚಾರ್ಟರ್ ಅಡಿಯಲ್ಲಿ ಭಾರತಕ್ಕಾಗಿ ಸರಿಸುಮಾರು 270,000 ಮೆಟ್ರಿಕ್ ಟನ್ ಕಚ್ಚಾ ತೈಲದ ಸರಕನ್ನು ಹೊತ್ತೊಯ್ಯುತ್ತಿರುವ, ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ಕಚ್ಚಾ ತೈಲ ಟ್ಯಾಂಕರ್ ಆದ 'ನಿಸೋಸ್ ಕೆರೋಸ್', 25 ವಿದೇಶಿ ಸಿಬ್ಬಂದಿಯನ್ನು ಹೊಂದಿದ್ದು (ಯಾವುದೇ ಭಾರತೀಯ ನಾವಿಕರು ಇಲ್ಲದೆ), 25/26 ಮೇ 2026 ರಂದು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿದೆ ಮತ್ತು 03 ಜೂನ್ 2026 ರಂದು ವಿಶಾಖಪಟ್ಟಣಕ್ಕೆ ಆಗಮಿಸುವ ನಿರೀಕ್ಷೆಯಿದೆ.
  • ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ನಾವಿಕರ ಕಲ್ಯಾಣ ಮತ್ತು ತಡೆರಹಿತ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರಿಸಿದೆ.
  • ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 96 ಗಂಟೆಗಳಲ್ಲಿ ಭಾರತೀಯ ಧ್ವಜದ ಹಡಗುಗಳು ಅಥವಾ ಭಾರತೀಯ ಸಿಬ್ಬಂದಿಯನ್ನು ಹೊಂದಿರುವ ವಿದೇಶಿ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
  • ಹಡಗು ಮಹಾನಿರ್ದೇಶನಾಲಯದ ನಿಯಂತ್ರಣ ಕೊಠಡಿಯು ಸಕ್ರಿಯಗೊಂಡ ದಿನದಿಂದ 10,841 ಕರೆಗಳು ಮತ್ತು 24,098 ಕ್ಕೂ ಹೆಚ್ಚು ಇಮೇಲ್‌ ಗಳನ್ನು ನಿರ್ವಹಿಸಿದೆ. ಕಳೆದ 96 ಗಂಟೆಗಳಲ್ಲಿ, ನಾವಿಕರು, ಅವರ ಕುಟುಂಬಗಳು ಮತ್ತು ಕಡಲ ಪಾಲುದಾರರಿಂದ ಒಟ್ಟು 509 ಕರೆಗಳು ಮತ್ತು 1,332 ಇಮೇಲ್‌ ಗಳು ಸ್ವೀಕೃತವಾಗಿವೆ.
  • ಸಚಿವಾಲಯವು, ಹಡಗು ಮಹಾನಿರ್ದೇಶನಾಲಯದ ಮೂಲಕ, ಗಲ್ಫ್ ಪ್ರದೇಶದ ವಿವಿಧ ಸ್ಥಳಗಳಿಂದ ಕಳೆದ 96 ಗಂಟೆಗಳಲ್ಲಿ 47 ನಾವಿಕರು ಸೇರಿದಂತೆ ಇದುವರೆಗೆ 3,422 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿ ಕರೆತರಲು ಅನುಕೂಲ ಮಾಡಿಕೊಟ್ಟಿದೆ.
  • ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ.

ಪ್ರದೇಶದಲ್ಲಿನ ಭಾರತೀಯ ನಾಗರಿಕರ ಸುರಕ್ಷತೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ, ಈ ಪ್ರದೇಶದಲ್ಲಿನ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಗಮನ ಹರಿಸಿದೆ. ಈ ಕೆಳಗಿನ ಮಾಹಿತಿಗಳನ್ನು ನೀಡಲಾಯಿತು:

  • ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ಹಂಚಿಕೆ ಮತ್ತು ಪ್ರಯತ್ನಗಳ ಉತ್ತಮ ಹೊಂದಾಣಿಕೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದೆ.
  • ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ಸಕಾಲಿಕ ಸಹಾಯವನ್ನು ಒದಗಿಸಲು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ನಡೆಸುತ್ತಿವೆ ಮತ್ತು ನಮ್ಮ ನಾಗರಿಕರಿಗೆ ಸಕ್ರಿಯವಾಗಿ ಸಹಾಯ ಮಾಡುತ್ತಿವೆ. ಅವರು ಸ್ಥಳೀಯ ಸರ್ಕಾರಗಳೊಂದಿಗೂ ನಿಕಟ ಸಂಪರ್ಕದಲ್ಲಿದ್ದಾರೆ.
  • ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಮತ್ತು ಪ್ರಯಾಣದ ಪರಿಸ್ಥಿತಿಗಳು, ದೂತಾವಾಸ ಸೇವೆಗಳು ಮತ್ತು ಸಮುದಾಯಕ್ಕಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಕಲ್ಯಾಣ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡ ಸಲಹೆಗಳನ್ನು ನೀಡಲಾಗುತ್ತಿದೆ.
  • ಭಾರತೀಯ ರಾಯಭಾರ ಕಚೇರಿಗಳು ಅಲ್ಲಿ ವಾಸಿಸುವ ಭಾರತೀಯ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಅವರ ಆತಂಕಗಳನ್ನು ಪರಿಹರಿಸಲು ಅವರು ಭಾರತೀಯ ಸಮುದಾಯದ ಸಂಘಗಳು, ಸಂಸ್ಥೆಗಳು, ವೃತ್ತಿಪರ ಗುಂಪುಗಳು ಮತ್ತು ಭಾರತೀಯ ಕಂಪನಿಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ.
  • ಈ ಪ್ರದೇಶದಲ್ಲಿರುವ ಭಾರತೀಯ ನಾವಿಕರ ಕಲ್ಯಾಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುವುದು, ದೂತಾವಾಸದ ನೆರವು ನೀಡುವುದು ಮತ್ತು ಭಾರತಕ್ಕೆ ಮರಳುವ ವಿನಂತಿಗಳಿಗೆ ಸಹಾಯ ಮಾಡುವುದು ಸೇರಿದಂತೆ ಅವರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿವೆ.
  • ಈ ಪ್ರದೇಶದಿಂದ ಭಾರತದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಒಟ್ಟಾರೆ ವಿಮಾನ ಪರಿಸ್ಥಿತಿ ಸುಧಾರಿಸುತ್ತಿದೆ.
  • ಯುಎಇ ವಾಯುಪ್ರದೇಶ ಮುಕ್ತವಾಗಿದೆ. ಭಾರತೀಯ ಮತ್ತು ಯುಎಇ ವಿಮಾನಯಾನ ಸಂಸ್ಥೆಗಳು ಯುಎಇಯಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿವೆ.
  • ಸೌದಿ ಅರೇಬಿಯಾ ಮತ್ತು ಒಮಾನ್‌ ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
  • ಕತಾರ್ ವಾಯುಪ್ರದೇಶವು ಭಾಗಶಃ ಮುಕ್ತವಾಗಿದೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ ಪ್ರೆಸ್, ಇಂಡಿಗೋ ಮತ್ತು ಕತಾರ್ ಏರ್ವೇಸ್ ಕತಾರ್‌ ನಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿವೆ.
  • ಕುವೈತ್ ವಾಯುಪ್ರದೇಶ ಮುಕ್ತವಾಗಿದೆ. ಜಜೀರಾ ಏರ್ವೇಸ್ ಮತ್ತು ಕುವೈತ್ ಏರ್ವೇಸ್ ಕುವೈತ್‌ ನಿಂದ ಭಾರತಕ್ಕೆ ವಿಮಾನಗಳನ್ನು ನಿರ್ವಹಿಸುತ್ತಿವೆ. ಭಾರತೀಯ ವಿಮಾನಯಾನ ಸಂಸ್ಥೆಗಳೂ ಶೀಘ್ರದಲ್ಲೇ ಕುವೈತ್‌ ನಿಂದ ಭಾರತಕ್ಕೆ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರೀಕ್ಷೆಯಿದೆ.
  • ಬಹ್ರೇನ್ ವಾಯುಪ್ರದೇಶ ಮುಕ್ತವಾಗಿದೆ. ಏರ್ ಇಂಡಿಯಾ ಎಕ್ಸ್‌ ಪ್ರೆಸ್, ಇಂಡಿಗೋ ಮತ್ತು ಗಲ್ಫ್ ಏರ್ ಬಹ್ರೇನ್‌ ನಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿವೆ.
  • ಇರಾಕ್ ವಾಯುಪ್ರದೇಶವು ಮುಕ್ತವಾಗಿದ್ದು, ಈ ಪ್ರದೇಶದ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆಗಳಿವೆ, ಇದನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು.
  • ಇರಾನ್ ವಾಯುಪ್ರದೇಶವು ಭಾಗಶಃ ಮುಕ್ತವಾಗಿದೆ. ಭಾರತೀಯ ನಾಗರಿಕರು ಇರಾನ್‌ ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸಚಿವಾಲಯ ಸಲಹೆ ನೀಡಿದೆ ಮತ್ತು ಈಗಾಗಲೇ ಅಲ್ಲಿರುವವರು ಭಾರತೀಯ ರಾಯಭಾರ ಕಚೇರಿಯ ಬೆಂಬಲದೊಂದಿಗೆ ಹೊರಡುವಂತೆ ಒತ್ತಾಯಿಸಿದೆ. ಇದುವರೆಗೆ, ತೆಹರಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 2,557 ಭಾರತೀಯ ನಾಗರಿಕರು ಭೂ ಗಡಿ ಮಾರ್ಗಗಳ ಮೂಲಕ ಇರಾನ್‌ ನಿಂದ ಹೊರಹೋಗಲು ಅನುಕೂಲ ಮಾಡಿಕೊಟ್ಟಿದೆ.
  • ಇಸ್ರೇಲ್ ವಾಯುಪ್ರದೇಶ ಮುಕ್ತವಾಗಿದೆ ಮತ್ತು ಈ ಪ್ರದೇಶದ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ, ಇದನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು.

 

*****


(ಪ್ರಕಟಣೆ ಐ.ಡಿ.: 2266869) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Odia , Tamil , Malayalam