ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳ ದೃಷ್ಟಿಯಿಂದ ಪ್ರಮುಖ ವಲಯಗಳ ಕುರಿತು ಮಾಹಿತಿ


ಎಲ್ ಪಿ ಜಿ ನಿಯಂತ್ರಣ ಆದೇಶ ತಿದ್ದುಪಡಿ ಅನ್ವಯ ಪಿ ಎನ್ ಜಿ ಪೂರೈಕೆ ಹೊಂದಿರುವ ಗ್ರಾಹಕರು ಎಲ್ ಪಿ ಜಿ ಸಂಪರ್ಕಗಳನ್ನು ಬಿಟ್ಟುಕೊಡುವುದು ಕಡ್ಡಾಯ;  ಈ ನಿರ್ಧಾರವು ಎಲ್ ಪಿ ಜಿ ಲಭ್ಯತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ

ಎಲ್ ಪಿ ಜಿ ಸಿಲಿಂಡರ್‌ಗಳನ್ನು ಬುಕ್ ಮಾಡಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಗ್ರಾಹಕರಿಗೆ ಸಲಹೆ

ಸಾಧ್ಯವಾದಲ್ಲೆಲ್ಲಾ ಪಿ ಎನ್ ಜಿ ಆಯ್ಕೆ ಮಾಡಲು ನಾಗರಿಕರಿಗೆ ಪ್ರೋತ್ಸಾಹ

ಅಕ್ರಮ ದಾಸ್ತಾನು ಮತ್ತು ಬ್ಲಾಕ್ ಮಾರುಕಟ್ಟೆಯನ್ನು ಪರಿಶೀಲಿಸಲು ರಾಜ್ಯಗಳಲ್ಲಿ ಮುಂದುವರಿದ ದಾಳಿ ಕಾರ್ಯ

ಪರಿಸ್ಥಿತಿ ಮೇಲ್ವಿಚಾರಣೆಗೆ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಯಂತ್ರಣ ಕೊಠಡಿಗಳ ಸ್ಥಾಪನೆ; ಇತರೆ ರಾಜ್ಯಗಳೂ ಅದೇ ಪ್ರಕ್ರಿಯೆಯಲ್ಲಿ ತೊಡಗಿವೆ

ಫುಜೈರಾ ಟರ್ಮಿನಲ್ ಘಟನೆಯ ನಂತರ ಭಾರತೀಯ ಹಡಗು ಜಗ್ ಲಾಡ್ಕಿ ಭಾರತಕ್ಕೆ ಸುರಕ್ಷಿತ ಪ್ರಯಾಣ

ದೇಶಾದ್ಯಂತ ಬಂದರುಗಳಲ್ಲಿ ಹಡಗು ಸಂಚಾರ ಮತ್ತು ಸರಕು ಕಾರ್ಯಾಚರಣೆಗಳ ಮೇಲ್ವಿಚಾರಣೆ

ಪಶ್ಚಿಮ ಏಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರಾಯಭಾರ ಕಚೇರಿಗಳಿಂದ  24×7 ಸಹಾಯವಾಣಿ ನಿರ್ವಹಣೆ ಮತ್ತು ಭಾರತೀಯ ಸಮುದಾಯಕ್ಕೆ ನೆರವು

ಪ್ರಕಟಣಾ ದಿನಾಂಕ: 15 MAR 2026 3:50PM by PIB Bengaluru

ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಕೈಗೊಂಡಿರುವ ಸಿದ್ಧತೆ ಮತ್ತು ಪ್ರತಿಕ್ರಿಯೆ ಕ್ರಮಗಳ ಕುರಿತು ತಾಜಾ ಮಾಹಿತಿಯನ್ನು ಈ ಕೆಳಗಿನಂತೆ ಹಂಚಿಕೊಳ್ಳಲಾಗಿದೆ. ಇವು ಇಂಧನ ಪೂರೈಕೆ ನಿರ್ವಹನೆ, ಕಡಲ ಕಾರ್ಯಾಚರಣೆಗಳು, ಈ ಪ್ರದೇಶದ ಭಾರತೀಯ ಪ್ರಜೆಗಳ ಕಲ್ಯಾಣ ಮತ್ತು ಸಾರ್ವಜನಿಕ ಸಂವಹನ ಕ್ರಮಗಳಿಗೆ ಸಂಬಂಧಿಸಿವೆ.

ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ

ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿಯ ಸ್ಥಿರ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಯಮಿತ ಪೂರೈಕೆ ಮತ್ತು ವಿತರಣೆಯನ್ನು ನಿರ್ವಹಿಸಲು ಅಗತ್ಯ ವ್ಯವಸ್ಥೆಗಳು ಜಾರಿಯಲ್ಲಿವೆ. ಪ್ರಸ್ತುತ ಸ್ಥಾನ ಹೀಗಿದೆ;

ಕಚ್ಚಾ/ಸಂಸ್ಕರಣಾಗಾರಗಳು

  • ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳನ್ನು ನಿರ್ವಹಿಸುತ್ತಿವೆ. ನಮ್ಮ ದೇಶವು ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ ಮತ್ತು ದೇಶೀಯ ಬೇಡಿಕೆಯನ್ನು ಪೂರೈಸಲು ಪೆಟ್ರೋಲ್ ಮತ್ತು ಡೀಸೆಲ್ ಆಮದು ಅಗತ್ಯವಿಲ್ಲ.

ಚಿಲ್ಲರೆ ಮಾರಾಟ ಮಳಿಗೆಗಳು

  • ತೈಲ ಮಾರುಕಟ್ಟೆ ಕಂಪನಿಗಳು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಯಾವುದೇ ಇಂಧನ ಡ್ರೈ-ಔಟ್ಗಳ (ಸಂಪೂರ್ಣ ಬರಿದಾದ)  ಪ್ರಕರಣಗಳು ವರದಿಯಾಗಿಲ್ಲ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಗಳನ್ನು ನಿಯಮಿತವಾಗಿ ನಿರ್ವಹಿಸಲಾಗುತ್ತಿದೆ.
  • ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್‌ನ ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ನಾಗರಿಕರು ಭಯಪಟ್ಟುಕೊಂಡು ಖರೀದಿ ಮಾಡದಂತೆ ಸೂಚಿಸಲಾಗಿದೆ.

ನೈಸರ್ಗಿಕ ಅನಿಲ

  • ಪಿ ಎನ್ ಜಿ ಮತ್ತು ಸಿ ಎನ್ ಜಿ ಗೆ ಶೇ.100ರಷ್ಟು ಪೂರೈಕೆ ಸೇರಿದಂತೆ ಸಂರಕ್ಷಿತ ಅನಿಲ ಸರಬರಾಜುಗಳನ್ನು ಆದ್ಯತೆಯ ವಲಯಗಳು ಪಡೆಯುತ್ತಲೇ ಇವೆ, ಆದರೆ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಸರಬರಾಜುಗಳನ್ನು ಸುಮಾರು ಶೇ.80 ರಷ್ಟು ನಿಯಂತ್ರಿಸಲಾಗುತ್ತಿದೆ.
  • ಪ್ರಮುಖ ನಗರಗಳು ಮತ್ತು ನಗರ ಪ್ರದೇಶಗಳಲ್ಲಿನ ವಾಣಿಜ್ಯ ಎಲ್ ಪಿಜಿ ಗ್ರಾಹಕರು ಪಿಎನ್ ಜಿ ಸಂಪರ್ಕಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಮತ್ತು ಇಮೇಲ್, ಪತ್ರ ಅಥವಾ ನಗರ ಅನಿಲ ವಿತರಣೆ (ಸಿಜಿಡಿ) ಕಂಪನಿಗಳ ಗ್ರಾಹಕ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
  • ಪಿಎನ್ ಜಿ ಸಂಪರ್ಕಗಳ ಸ್ಥಿತಿ ಮತ್ತು ಎಲ್ ಪಿ ಜಿಯಿಂದ ಪಿಎನ್ ಜಿ ಪರಿವರ್ತನೆಯನ್ನು ಪರಿಶೀಲಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹಿರಿಯ ಅಧಿಕಾರಿಗಳು ಪಿಎನ್ ಜಿಅರ್ ಬಿ ಮತ್ತು ಸಿಜಿಡಿ ಘಟಕಗಳೊಂದಿಗೆ 2026ರ ಮಾರ್ಚ್ 14 ರಂದು ಸಭೆ ನಡೆಸಿದರು.

ಎಲ್ ಪಿ ಜಿ

  • ಸದ್ಯದ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ ಪಿ ಜಿ ಪೂರೈಕೆ ಮೇಲೆ ಮೇಲ್ವಿಚಾರಣೆ ಮಾಡಲಾಗುತ್ತಿದೆ.
  • ಎಲ್ ಪಿ ಜಿ ವಿತರಕರಲ್ಲಿ ಯಾವುದೇ ಡ್ರೈ-ಔಟ್ಗಳು (ಸಂಪೂರ್ಣ ಬರಿದಾದ) ವರದಿಯಾಗಿಲ್ಲ.
  • ಎಲ್ ಪಿಜಿ ಬುಕಿಂಗ್‌ಗಳು ಕುಸಿತವನ್ನು ತೋರಿಸುತ್ತಿವೆ, 2026 ಮಾರ್ಚ್ 13 ರಂದು 88.8 ಲಕ್ಷ ಬುಕಿಂಗ್ಗಳಿಗೆ ಹೋಲಿಸಿದರೆ ನಿನ್ನೆ ಸುಮಾರು 77 ಲಕ್ಷ ಬುಕಿಂಗ್ಗಳು ದಾಖಲಾಗಿವೆ.
  • ಆನ್‌ಲೈನ್ ಎಲ್ ಪಿ ಜಿ ಸಿಲಿಂಡರ್ ಬುಕಿಂಗ್‌ಗಳು ಶೇ.84 ರಿಂದ ಸುಮಾರು ಶೇ.87 ಕ್ಕೆ ಹೆಚ್ಚಳವಾಗಿವೆ.
  • ಬಿಹಾರ, ದೆಹಲಿ, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸರ್ಕಾರಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗೃಹೇತರ ಎಲ್ ಪಿ ಜಿ ಹಂಚಿಕೆಗೆ ಆದೇಶಗಳನ್ನು ಹೊರಡಿಸಿವೆ.
  • ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್‌ಗಳನ್ನು ಆದ್ಯತೆಯ ವಿತರಣೆಗಾಗಿ ರಾಜ್ಯ ಸರ್ಕಾರಗಳ ವಿಲೇವಾರಿಯಲ್ಲಿ ಇರಿಸಲಾಗಿದೆ ಮತ್ತು ಈಗ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗ್ರಾಹಕರಿಗೆ ಲಭ್ಯವಿದೆ.

ರಾಜ್ಯ ಸರ್ಕಾರಗಳು ನಡೆಸಿದ ಸಭೆಗಳು

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಮುಖ ಪಾತ್ರ ವಹಿಸುತ್ತಿವೆ.
  • ಎಲ್‌ಪಿಜಿ ಪೂರೈಕೆಯ ಮೇಲೆ ನಿಗಾ ಇಡಲು, ವಿತರಣೆಯಲ್ಲಿ ನಿರಂತರತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಕಾಳಸಂತೆ (ಬ್ಲಾಕ್ ಮಾರುಕಟ್ಟೆ೦ ಮತ್ತು ಭಯದಿಂದ ಬುಕಿಂಗ್ (ಪ್ಯಾನಿಕ್ ಬುಕಿಂಗ್) ಮಾಡುವುದನ್ನು ತಡೆಗಟ್ಟಲು ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಿವೆ.
  • ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ ಮತ್ತು ಹಲವಾರು ರಾಜ್ಯಗಳು ನಾಗರಿಕರಿಗೆ ಮಾಹಿತಿ ನೀಡಲು ಮಾಧ್ಯಮ ಗೋಷ್ಠಿಗಳನ್ನು ನಡೆಸುತ್ತಿವೆ.

ಜಾರಿ ಪ್ರಕ್ರಿಯೆ

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಸಂಗ್ರಹಣೆ ಮತ್ತು ಕಾಳಸಂತೆ (ಬ್ಲಾಕ್ ಮಾರುಕಟ್ಟೆ)ಯನ್ನು ತಡೆಗಟ್ಟಲು ರಾಜ್ಯ ಸರ್ಕಾರಗಳು ಜಾರಿ ಕ್ರಮಗಳನ್ನು ಕೈಗೊಳ್ಳುತ್ತಿವೆ.
  • ಆಂಧ್ರಪ್ರದೇಶ ಮತ್ತು ಬಿಹಾರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಸಂಗ್ರಹಣೆ ಮತ್ತು ಕಾಳ ಸಂತೆಯಲ್ಲಿ ಮಾರಾಟವನ್ನು ಪರಿಶೀಲಿಸಲು ದಾಳಿಗಳನ್ನು ನಡೆಸಲಾಗುತ್ತಿದೆ.
  • ಪಿಎಸ್‌ಯು ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳು ಸುಗಮ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅಕ್ರಮಗಳನ್ನು ತಡೆಗಟ್ಟಲು ಎಲ್‌ಪಿಜಿ ವಿತರಕರಲ್ಲಿ ಅನಿರೀಕ್ಷಿತ ತಪಾಸಣೆಗಳನ್ನು ನಡೆಸುತ್ತಿದ್ದಾರೆ.

ಸರ್ಕಾರದ ಇತರೆ ಕ್ರಮಗಳು

  •  ಸರ್ಕಾರವು ದೇಶೀಯ ಗ್ರಾಹಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದನ್ನು ಮುಂದುವರೆಸಿದೆ ಮತ್ತು ವಿಶೇಷವಾಗಿ ಮನೆಗಳು ಮತ್ತು ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಆದ್ಯತೆಯ ವಲಯಗಳಿಗೆ ಅಡೆತಡೆಯಿಲ್ಲದ ಎಲ್ ಪಿಜಿ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳುತ್ತಿದೆ.
  • ಸಂಸ್ಕರಣಾಗಾರಗಳಿಂದ ದೇಶೀಯ ಎಲ್ ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸಲಾಗಿದೆ ಮತ್ತು ಹಲವಾರು ಪೂರೈಕೆ ಮತ್ತು ಬೇಡಿಕೆ ಆಧಾರಿತ ಕ್ರಮಗಳನ್ನು ಜಾರಿಗೆ ತರಲಾಗಿದೆ.
  • 2026ರ ಮಾರ್ಚ್ 14 ರಂದು ಹೊರಡಿಸಲಾದ ಎಲ್ ಪಿಜಿ ನಿಯಂತ್ರಣ ಆದೇಶಕ್ಕೆ ತಿದ್ದುಪಡಿ ಮಾಡಿ ಪಿಎನ್ ಜಿ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ದೇಶೀಯ ಎಲ್ ಪಿಜಿ ಸಂಪರ್ಕಗಳನ್ನು ಬಿಟ್ಟುಕೊಡಬೇಕಾಗುತ್ತದೆ ಮತ್ತು ಪಿಎನ್ ಜಿ ಗ್ರಾಹಕರಿಗೆ ಹೊಸ ಎಲ್ ಪಿಜಿ  ಸಂಪರ್ಕಗಳನ್ನು ನಿಷೇಧಿಸುತ್ತದೆ. 
  • ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಬುಕಿಂಗ್ ಮಧ್ಯಂತರಗಳನ್ನು ನಗರ ಪ್ರದೇಶಗಳಲ್ಲಿ 25 ದಿನಗಳವರೆಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಏಕರೂಪಗೊಳಿಸಲಾಗಿದೆ.
  • ಪರ್ಯಾಯ ಇಂಧನ ಅಗತ್ಯಗಳನ್ನು ಬೆಂಬಲಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 48,000 KL ಸೀಮೆಎಣ್ಣೆಯ ಹೆಚ್ಚುವರಿ ಹಂಚಿಕೆಯನ್ನು ಒದಗಿಸಲಾಗಿದೆ.
  • ಎಲ್ ಪಿಜಿ ಪೂರೈಕೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಆತಿಥ್ಯ ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಕೆಲವು ವಲಯಗಳಿಗೆ ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಸಕ್ರಿಯಗೊಳಿಸಲಾಗಿದೆ.
  • ಪಿಎಸ್ ಯು ತೈಲ ಮಾರುಕಟ್ಟೆ ಕಂಪನಿಗಳು ಡಿಜಿಟಲ್ ಬುಕಿಂಗ್‌ಗಳನ್ನು ಉತ್ತೇಜಿಸುತ್ತಿವೆ, ಭಯದಿಂದ ಬುಕಿಂಗ್ ಮಾಡುವುದನ್ನು ( ಪ್ಯಾನಿಕ್ ಬುಕಿಂಗ್‌ಗಳನ್ನು) ನಿರುತ್ಸಾಹಗೊಳಿಸುತ್ತಿವೆ ಮತ್ತು ಸುಗಮ ಪೂರೈಕೆಯನ್ನು ಸುಗಮಗೊಳಿಸಲು ಭಾನುವಾರದಂದು ಎಲ್ ಪಿಜಿ ವಿತರಣೆಯನ್ನು ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕರಿಗೆ ಸಲಹೆ

  • ಮನೆಗಳು ಮತ್ತು ಅಗತ್ಯ ವಲಯಗಳಿಗೆ ಸಾಕಷ್ಟು ಎಲ್‌ಪಿಜಿ ಲಭ್ಯತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿರುವುದರಿಂದ ನಾಗರಿಕರು ಭಯಭೀತರಾಗದಂತೆ ಸೂಚಿಸಲಾಗಿದೆ.
  • ಐವಿಆರ್‌ಎಸ್ ಕರೆಗಳು, ಎಸ್‌ಎಂಎಸ್ ಬುಕಿಂಗ್, ವಾಟ್ಸಾಪ್ ಬುಕಿಂಗ್ ಮತ್ತು ತೈಲ ಮಾರುಕಟ್ಟೆ ಕಂಪನಿಗಳ ಮೊಬೈಲ್ ಅಪ್ಲಿಕೇಶನ್‌ಗಳು ಸೇರಿದಂತೆ ಬಹು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು.
  • ಗ್ರಾಹಕರು ಭಯದಿಂದ ಬುಕಿಂಗ್‌ ಮಾಡುವುದನ್ನು ತಪ್ಪಿಸಲು, ಡಿಜಿಟಲ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಮತ್ತು ಎಲ್‌ಪಿಜಿ ವಿತರಕರಿಗೆ ಅನಗತ್ಯ ಭೇಟಿಗಳನ್ನು ತಪ್ಪಿಸಲು ವಿನಂತಿಸಲಾಗಿದೆ.
  • ನಾಗರಿಕರು ಸಾಧ್ಯವಾದಲ್ಲೆಲ್ಲಾ ಪಿಎನ್‌ಜಿಯಂತಹ ಪರ್ಯಾಯ ಇಂಧನಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ.
  • ಸರ್ಕಾರ ಮತ್ತು ಪಿಎಸ್‌ಯು ತೈಲ ಮಾರುಕಟ್ಟೆ ಕಂಪನಿಗಳು ನಿರಂತರ ಎಲ್‌ಪಿಜಿ ವಿತರಣೆಗಳು ಮತ್ತು ಇತ್ತೀಚಿನ ಭಯದಿಂದ ಬುಕಿಂಗ್ ಗಳ ಕುಸಿತದ ಬಗ್ಗೆ ಜಾಗೃತಿ ಮೂಡಿಸುವುದನ್ನು ಮುಂದುವರೆಸಿವೆ.
  • ನಾಗರಿಕರು ಮತ್ತು ಮಾಧ್ಯಮ ಸಂಸ್ಥೆಗಳು ಅಧಿಕೃತ ಮಾಹಿತಿ ಮೂಲಗಳನ್ನು ಅವಲಂಬಿಸಿ ಅನಗತ್ಯ ಭಯವನ್ನು ತಪ್ಪಿಸಲು ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡಲು ಸಹಾಯ ಮಾಡುವಂತೆ ವಿನಂತಿಸಲಾಗಿದೆ.

ಸಾಗರ ಸುರಕ್ಷತೆ ಮತ್ತು ಹಡುಗುಗಳ ಕಾರ್ಯಾಚರಣೆ

ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸುಗಮ ಕಡಲ ಕಾರ್ಯಾಚರಣೆಗಳನ್ನು ಬೆಂಬಲಿಸಲು ಹಡಗು ಅಧಿಕಾರಿಗಳು ಮತ್ತು ಉದ್ಯಮದ ಪಾಲುದಾರರೊಂದಿಗೆ ಸಮನ್ವಯವನ್ನು ಕಾಯ್ದುಕೊಳ್ಳಲಾಗುತ್ತಿದೆ.

  • ಈ ಪ್ರದೇಶದ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ನಾವಿಕರು ಒಳಗೊಂಡ ಯಾವುದೇ ಹಡಗು ದುರಂತದ ಘಟನೆ ವರದಿಯಾಗಿಲ್ಲ.
  • 2026ರ ಮಾರ್ಚ್ 14 ರಂದು ಭಾರತೀಯ ಧ್ವಜದ ಹಡಗು ಜಗ್ ಲಾಡ್ಕಿ ಫುಜೈರಾ ಸಿಂಗಲ್ ಪಾಯಿಂಟ್ ಮೂರಿಂಗ್‌ನಲ್ಲಿ ಕಚ್ಚಾ ತೈಲವನ್ನು ಲೋಡ್ ಮಾಡುತ್ತಿದ್ದಾಗ ಫುಜೈರಾ ತೈಲ ಟರ್ಮಿನಲ್ ಮೇಲೆ ದಾಳಿ ಮಾಡಲಾಯಿತು. ಈ ಹಡಗು ಇಂದು ಬೆಳಿಗ್ಗೆ 10.30 ಕ್ಕೆ ಫುಜೈರಾದಿಂದ ಸುಮಾರು 80,800 ಮೆಟ್ರಿಕ್ ಟನ್ ಮುರ್ಬನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತಕ್ಕೆ ಪ್ರಯಾಣ ಬೆಳೆಸಿದೆ. ಹಡಗು ಮತ್ತು ಅದರಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ.
  • 2026ರ ಮಾರ್ಚ್ 14 ರಂದು ಹಾರ್ಮುಜ್ ಜಲಸಂಧಿಯನ್ನು ದಾಟಿದ ಸುಮಾರು 92,712 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ಎರಡು ಭಾರತೀಯ ಧ್ವಜ ಎಲ್‌ಪಿಜಿ ವಾಹಕಗಳಾದ ಶಿವಾಲಿಕ್ ಮತ್ತು ನಂದಾ ದೇವಿ, ಸದ್ಯ ಭಾರತಕ್ಕೆ ಸಂಚಾರ ಕೈಗೊಂಡಿದ್ದು, ಮಾರ್ಚ್ 16 ರಂದು ಕ್ರಮವಾಗಿ ಮುಂದ್ರಾ ಬಂದರನ್ನು ಮತ್ತು ಮಾರ್ಚ್ 17 ರಂದು ಕಾಂಡ್ಲಾ ಬಂದರನ್ನು ತಲುಪುವ ನಿರೀಕ್ಷೆಯಿದೆ.
  • ಸದ್ಯ 611 ನಾವಿಕರನ್ನು ಹೊಂದಿರುವ 22 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪರ್ಷಿಯನ್ ಕೊಲ್ಲಿ ಪ್ರದೇಶದ ಪಶ್ಚಿಮಕ್ಕೆ ಉಳಿದಿವೆ. ಹಡಗು ಮಾಲೀಕರು, ಆರ್‌ಪಿಎಸ್‌ಎಲ್ ಏಜೆನ್ಸಿಗಳು ಮತ್ತು ಭಾರತೀಯ ಮಿಷನ್‌ಗಳೊಂದಿಗೆ ಸಮನ್ವಯದೊಂದಿಗೆ ಹಡಗು ನಿರ್ದೇಶನಾಲಯವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ.
  • ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಿದಾಗಿನಿಂದ ಮಾಹಿತಿ ಮತ್ತು ಸಹಾಯವನ್ನು ಬಯಸುವ ನಾವಿಕರು, ಅವರ ಕುಟುಂಬಗಳು ಮತ್ತು ಕಡಲ ಪಾಲುದಾರರಿಂದ 2,995 ಫೋನ್ ಕರೆಗಳು ಮತ್ತು 5,357 ಕ್ಕೂ ಅಧಿಕ  ಇಮೇಲ್‌ಗಳನ್ನು ನಿರ್ವಹಿಸಲಾಗಿದೆ.
  • ಡಿಜಿ ಶಿಪ್ಪಿಂಗ್  ಈವರೆಗೆ ಗಲ್ಫ್ ಪ್ರದೇಶದಿಂದ 276 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಲು ಅನುಕೂಲ ಮಾಡಿಕೊಟ್ಟಿದ್ದು, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ವಿಮಾನ ನಿಲ್ದಾಣಗಳು ಮತ್ತು ಪ್ರಾದೇಶಿಕ ಸ್ಥಳಗಳಿಂದ 23 ವಾಪಸಾತಿಗಳು ಸೇರಿವೆ.
  • ದೇಶಾದ್ಯಂತದ ಬಂದರುಗಳು ಸಮುದ್ರ ಪರಿಸ್ಥಿತಿಯ ವಿಕಸನವನ್ನು ಗಮನದಲ್ಲಿಟ್ಟುಕೊಂಡು ಹಡಗು ಚಲನವಲನಗಳು ಮತ್ತು ಸರಕು ಕಾರ್ಯಾಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
  • ಸಮುದ್ರ ವ್ಯಾಪಾರ ಮತ್ತು ಬಂದರು ಕಾರ್ಯಾಚರಣೆಗಳ ನಿರಂತರತೆಯನ್ನು ಕಾಯ್ದುಕೊಳ್ಳುವಾಗ ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳ ಹಡಗುಗಳು, ಹಡಗು ಕಂಪನಿಗಳು ಮತ್ತು ಸಮುದ್ರ ಪಾಲುದಾರರೊಂದಿಗೆ ಸಮನ್ವಯ ಸಾಧಿಸುವುದನ್ನು ಮುಂದುವರಿಸಿದೆ.

ಪ್ರದೇಶದಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ

ಭಾರತೀಯ ರಾಯಭಾರ ಕಚೇರಿಗಳು ಮತ್ತು ಪೋಸ್ಟ್‌ಗಳು ಭಾರತೀಯ ಸಮುದಾಯದೊಂದಿಗೆ ನಿರಂತರ ಸಂಪರ್ಕದಲ್ಲಿವೆ ಮತ್ತು ಅಗತ್ಯವಿರುವಲ್ಲೆಲ್ಲಾ ಸಹಾಯವನ್ನು ನೀಡುತ್ತಿವೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ.

  • ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ಪ್ರದೇಶದಲ್ಲಿನ ಬೆಳವಣಿಗೆಗಳು ಮತ್ತು ಅಲ್ಲಿನ ಪರಿಸ್ಥಿತಿಯನ್ನು ವಿದೇಶಾಂಗ ಸಚಿವಾಲಯವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳ ಸುರಕ್ಷತೆ, ಯೋಗಕ್ಷೇಮ ಮತ್ತು ಭದ್ರತೆಯು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ.
  • ಭಾರತೀಯ ಪ್ರಜೆಗಳು ಮತ್ತು ಅವರ ಕುಟುಂಬಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮೀಸಲಾದ ಎಂಇಎ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯವನ್ನು ಸಹ ನಿರ್ವಹಿಸಲಾಗುತ್ತಿದೆ.
  • ಭಾರತೀಯ ಪ್ರಜೆಗಳು ಮತ್ತು ಅವರ ಕುಟುಂಬಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮೀಸಲಾದ ಎಂಇಎ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯವನ್ನು ಸಹ ನಿರ್ವಹಿಸಲಾಗುತ್ತಿದೆ.
  • ಪ್ರದೇಶದಾದ್ಯಂತದ ಭಾರತೀಯ ರಾಯಭಾರ ಕಚೇರಿಗಳು ಮತ್ತು ಪೋಸ್ಟ್‌ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, 24×7 ಸಹಾಯವಾಣಿಗಳನ್ನು ನಿರ್ವಹಿಸುತ್ತಿವೆ. ಭಾರತೀಯ ಸಮುದಾಯ ಸಂಸ್ಥೆಗಳೊಂದಿಗೆ ಸಂಪರ್ಕವನ್ನು ಕಾಯ್ದುಕೊಳ್ಳುತ್ತಿವೆ ಮತ್ತು ನಿಯಮಿತ ಸಲಹೆಗಳನ್ನು ನೀಡುತ್ತಿವೆ.
  • ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಮತ್ತು ವೀಸಾ ಬೆಂಬಲ, ಲಾಜಿಸ್ಟಿಕಲ್ ಸಹಾಯ ಮತ್ತು ಸಾರಿಗೆ ಸೌಲಭ್ಯ ಸೇರಿದಂತೆ ಸಿಕ್ಕಿಬಿದ್ದ ಭಾರತೀಯರು ಮತ್ತು ಅಲ್ಪಾವಧಿಯ ಸಂದರ್ಶಕರಿಗೆ ಸಹಾಯವನ್ನು ನೀಡುತ್ತಿವೆ. ಈ ಪ್ರದೇಶದಲ್ಲಿನ ಭಾರತೀಯ ನಾವಿಕರಿಗೆ ಮಿಷನ್‌ಗಳು ಸಹ ಬೆಂಬಲ ನೀಡುತ್ತಿವೆ.
  • 2026ರ ಫೆಬ್ರವರಿ 28 ರಿಂದ ಸುಮಾರು 1,94,000 ಪ್ರಯಾಣಿಕರು ಆ ಪ್ರದೇಶದಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ.
  • ಯುಎಇಯಲ್ಲಿ, ಯುಎಇ ನಾಗರಿಕ ವಿಮಾನಯಾನ ಅಧಿಕಾರಿಗಳ ಸೂಚನೆಗಳ ಪ್ರಕಾರ ವಿಮಾನಯಾನ ಸಂಸ್ಥೆಗಳು ಪರಿಷ್ಕೃತ ಮತ್ತು ಸೀಮಿತ ವಿಮಾನ ವೇಳಾಪಟ್ಟಿಗಳನ್ನು ನಿರ್ವಹಿಸುತ್ತಿವೆ. ಅಬುಧಾಬಿ, ದುಬೈ, ರಾಸ್ ಅಲ್ ಖೈಮಾ,  ಶಾರ್ಜಾ ಮತ್ತು ಫುಜೈರಾದಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಪರಿಷ್ಕೃತ  ವೇಳಾಪಟ್ಟಿಗಳಿಗಾಗಿ ಪ್ರಯಾಣಿಕರು ಆಯಾ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸಲು ಸೂಚಿಸಲಾಗಿದೆ.
  • ಸೌದಿ ಅರೇಬಿಯಾದಲ್ಲಿ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
  • ಒಮಾನ್‌ನಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಸಹ ಕಾರ್ಯನಿರ್ವಹಿಸುತ್ತಿವೆ.
  • ಕತಾರ್ ವಾಯುಪ್ರದೇಶವು ಭಾಗಶಃ ತೆರೆದಿದ್ದು, ಕತಾರ್ ಏರ್‌ವೇಸ್ ಇಂದು ದೆಹಲಿಗೆ ಒಂದು ವಿಮಾನ ಸೇರಿದಂತೆ ಭಾರತಕ್ಕೆ ಸೀಮಿತ ವಿಮಾನಗಳ ಕಾರ್ಯಾಚರಣೆ ನಡೆಸಿದೆ.
  • ವಾಯುಪ್ರದೇಶವು ಮುಚ್ಚಲ್ಪಟ್ಟಿರುವ ಬಹ್ರೇನ್, ಕುವೈತ್ ಮತ್ತು ಇರಾಕ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ, ಸೌದಿ ಅರೇಬಿಯಾ ಮೂಲಕ ಸಾಗಣೆಗೆ ಅನುಕೂಲ ಕಲ್ಪಿಸಲಾಗುತ್ತಿದೆ.
  • ಹಿಂದಿನ ಘಟನೆಗಳಲ್ಲಿ, ಹಾಲಿ ನಡೆಯುತ್ತಿರುವ ಸಂಘರ್ಷದಲ್ಲಿ ದುರದೃಷ್ಟವಶಾತ್ ಐದು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬ ಭಾರತೀಯ ಪ್ರಜೆ ಕಾಣೆಯಾಗಿದ್ದಾನೆ. ಓಮನ್, ಇರಾಕ್ ಮತ್ತು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಕಾಣೆಯಾದ ವ್ಯಕ್ತಿಯ ಬಗ್ಗೆ ಮತ್ತು ಮೃತರ ಮೃತದೇಹಗಳನ್ನು ಆದಷ್ಟು ಬೇಗ ಸ್ವದೇಶಕ್ಕೆ ತಲುಪಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ.

ಸರ್ಕಾರವು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಸಂಸ್ಥೆಗಳ ನಡುವೆ ಸಮನ್ವಯವನ್ನು ಕಾಯ್ದುಕೊಳ್ಳುವುದನ್ನು ಮುಂದುವರೆಸಿದೆ ಮತ್ತು ಪ್ರಮುಖ ಕ್ಷೇತ್ರಗಳಲ್ಲಿ ಸಿದ್ಧತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

 

*****


(ಪ್ರಕಟಣೆ ಐ.ಡಿ.: 2240384) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati , Odia , Tamil , Telugu , Malayalam