ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯಗಳ ಸಂಕ್ಷಿಪ್ತ ಮಾಹಿತಿ
ಭಾರತೀಯ ತೈಲ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದ ಬಳಕೆಯಲ್ಲಿ ಕಾರ್ಯನಿರ್ವಹಿಸುತ್ತಿವೆ
ಚಿಲ್ಲರೆ ಮಾರಾಟ ಮಳಿಗೆಗಳು ಸಾಕಷ್ಟು ದಾಸ್ತಾನುಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ
ಪ್ರತಿದಿನ 50 ಲಕ್ಷ ಸಿಲಿಂಡರ್ ಗಳನ್ನು ವಿತರಿಸಲಾಗುತ್ತಿದೆ
ದೇಶೀಯ ಎಲ್ ಪಿ ಜಿ ಉತ್ಪಾದನೆಯು ಶೇಕಡಾ 28 ರಷ್ಟು ಹೆಚ್ಚಾಗಿದೆ
ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸ್ಥಿರವಾಗಿವೆ
ಮೂಲಸೌಕರ್ಯ, ಹಣಕಾಸು ಸುಗಮಗೊಳಿಸುವಿಕೆ, ಇಂಧನ ಭದ್ರತೆಯ ಮೇಲ್ವಿಚಾರಣೆ ಮತ್ತು ಹಡಗು ಸುರಕ್ಷತಾ ಕಾರ್ಯಾಚರಣೆಗಳಾದ್ಯಂತ ಸರ್ಕಾರವು ಸಮನ್ವಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ
ರಾಯಭಾರ ಕಚೇರಿಗಳು ಭಾರತೀಯ ಸಮುದಾಯದ ಸದಸ್ಯರೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದು, ವಾಣಿಜ್ಯ ವಿಮಾನಯಾನ ಆಯ್ಕೆಗಳು ಮತ್ತು ವೀಸಾಗಳ ಮಾಹಿತಿಯೊಂದಿಗೆ ಅವರಿಗೆ ಸಹಾಯ ಮಾಡುತ್ತಿವೆ
ಎಲ್ ಪಿ ಜಿ ಸಿಲಿಂಡರ್ ಗಳನ್ನು ಆತಂಕದಿಂದ ಬುಕಿಂಗ್ ಮಾಡುವುದನ್ನು ತಪ್ಪಿಸುವಂತೆ ನಾಗರಿಕರಿಗೆ ಒತ್ತಾಯಿಸಲಾಗಿದೆ
ತಪ್ಪು ಮಾಹಿತಿ ಮತ್ತು ವದಂತಿಗಳ ಬಗ್ಗೆ ಜಾಗರೂಕರಾಗಿರಲು ನಾಗರಿಕರಿಗೆ ಮನವಿ
ಪ್ರಕಟಣಾ ದಿನಾಂಕ:
12 MAR 2026 7:53PM by PIB Bengaluru
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಕೈಗೊಂಡಿರುವ ಇತ್ತೀಚಿನ ಕ್ರಮಗಳ ಬಗ್ಗೆ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಅಂತರ-ಸಚಿವಾಲಯದ ಸಭೆಯು ಇಂಧನ ಪೂರೈಕೆಯ ಪರಿಸ್ಥಿತಿ, ಅಡೆತಡೆಯಿಲ್ಲದ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರದ ಸಿದ್ಧತೆ, ಸಮುದ್ರ ಸುರಕ್ಷತೆ ಮತ್ತು ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಕಲ್ಯಾಣದ ಕುರಿತಾದ ನವೀಕರಣಗಳನ್ನು ಒಳಗೊಂಡಿತ್ತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ನಾಗರಿಕರಲ್ಲಿ ಪ್ಯಾನಿಕ್ ಬುಕಿಂಗ್ (ಆತಂಕದಿಂದ ಮುಂಗಡ ಕಾಯ್ದಿರಿಸುವಿಕೆ) ಮಾಡದಂತೆ ಮತ್ತು ಸುಳ್ಳು ಸುದ್ದಿಗಳನ್ನು ಹಾಗೂ ವದಂತಿಗಳನ್ನು ನಂಬದಂತೆ ಮನವಿ ಮಾಡಿದರು.
ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ:
ಅಡೆತಡೆಯಿಲ್ಲದ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ಪ್ರತಿದಿನ 50 ಲಕ್ಷ ಸಿಲಿಂಡರ್ ಗಳನ್ನು ವಿತರಿಸಲಾಗುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಭರವಸೆ ನೀಡಿದೆ.
ಕಚ್ಚಾ ತೈಲ ಮತ್ತು ಸಂಸ್ಕರಣಾಗಾರಗಳು-
- ಇದು ಯುದ್ಧದ 13ನೇ ದಿನವಾಗಿದ್ದು, ದಾಖಲಿತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗು ಸಂಚಾರಕ್ಕೆ ಪರಿಣಾಮಕಾರಿಯಾಗಿ ಮುಚ್ಚಲಾಗಿದೆ. 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಪಡೆಯಲಾಗುತ್ತಿದೆ ಮತ್ತು ನಮ್ಮ ಕಚ್ಚಾ ತೈಲದ ಶೇಕಡಾ 70 ರಷ್ಟು ಈಗ ಹಾರ್ಮುಜ್ ಜಲಸಂಧಿಯ ಹೊರತಾದ ಇತರ ಮಾರ್ಗಗಳಿಂದ ಬರುತ್ತಿದೆ. ನಮ್ಮ ದೈನಂದಿನ ಬಳಕೆಯು 5.5 ಮಿಲಿಯನ್ ಬ್ಯಾರೆಲ್ ಗಳಾಗಿದ್ದು, ಭಾರತವು ದೇಶದಲ್ಲಿ 22 ಸಂಸ್ಕರಣಾಗಾರಗಳನ್ನು ಹೊಂದಿರುವ ವಿಶ್ವದ 4ನೇ ಅತಿದೊಡ್ಡ ಸಂಸ್ಕರಣಾ ರಾಷ್ಟ್ರವಾಗಿದೆ ಎಂಬ ಮಾಹಿತಿಯನ್ನು ಸಹ ನೀಡಲಾಯಿತು. ಇದಲ್ಲದೆ, ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದ ಬಳಕೆಯಲ್ಲಿ ಕಾರ್ಯನಿರ್ವಹಿಸುತ್ತಿವೆ; ಹಲವಾರು ಸಂದರ್ಭಗಳಲ್ಲಿ, ಅವು ಶೇಕಡಾ 100 ಕ್ಕಿಂತ ಹೆಚ್ಚು ಕಾರ್ಯನಿರ್ವಹಿಸುತ್ತಿವೆ.
- ಭಾರತದ ಬೃಹತ್ ಸಂಸ್ಕರಣಾ ಸಾಮರ್ಥ್ಯವು ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆಯ ವಿಷಯದಲ್ಲಿ ನಮಗೆ ಹೆಚ್ಚು ಆರಾಮದಾಯಕ ಸ್ಥಿತಿಯನ್ನು ನೀಡುತ್ತಿದೆ ಮತ್ತು ಬಿಕ್ಕಟ್ಟನ್ನು ಎದುರಿಸಲು ಸಹಾಯ ಮಾಡುತ್ತಿದೆ.
- ನಾವು ಚಿಲ್ಲರೆ ಮಾರಾಟ ಮಳಿಗೆಗಳ ವಿಶಾಲವಾದ ಜಾಲವನ್ನು ಹೊಂದಿದ್ದೇವೆ. ಸುಮಾರು 1 ಲಕ್ಷ ಚಿಲ್ಲರೆ ಮಾರಾಟ ಮಳಿಗೆಗಳಿವೆ. ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಸಾಕಷ್ಟು ದಾಸ್ತಾನುಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.
ನೈಸರ್ಗಿಕ ಅನಿಲ-
- 'ಫೋರ್ಸ್ ಮೆಜರ್' (force majeure) ಪರಿಸ್ಥಿತಿಗಳಿಂದಾಗಿ ಬಾಧಿತವಾಗಿರುವ ನೈಸರ್ಗಿಕ ಅನಿಲ ಪೂರೈಕೆಗಾಗಿ, ಈ ವ್ಯತ್ಯಯವನ್ನು ಸರಿದೂಗಿಸಲು ಪರ್ಯಾಯ ಮಾರ್ಗಗಳು ಮತ್ತು ಪೂರೈಕೆದಾರರ ಮೂಲಕ ಸಂಗ್ರಹಣೆ ಪ್ರಕ್ರಿಯೆ ನಡೆಯುತ್ತಿದೆ. ಈ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಪೂರೈಕೆಗೆ ಆದ್ಯತೆ ನೀಡುವ ಸಲುವಾಗಿ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆಯಡಿ 9 ಮಾರ್ಚ್ 2026 ರಂದು 'ನೈಸರ್ಗಿಕ ಅನಿಲ ನಿಯಂತ್ರಣ ಆದೇಶ'ವನ್ನು ಹೊರಡಿಸಿದೆ.
ಎಲ್‌ಪಿಜಿ (LPG) ಪೂರೈಕೆ-
ಇದು ಯುದ್ಧದ ಪರಿಸ್ಥಿತಿಯಾಗಿದ್ದು, ಭಾರತವು ತನ್ನ ಎಲ್‌ಪಿಜಿ ಬಳಕೆಯ ಸುಮಾರು ಶೇಕಡಾ 60 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಅದರ ಸುಮಾರು ಶೇಕಡಾ 90 ರಷ್ಟು ಪ್ರಸ್ತುತ ಮುಚ್ಚಲ್ಪಟ್ಟಿರುವ ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಜಾಗತಿಕ ಪರಿಸ್ಥಿತಿಯು ಸವಾಲಿನಿಂದ ಕೂಡಿದೆ. ಬೇಡಿಕೆ ಮತ್ತು ಪೂರೈಕೆಯ ಸಮತೋಲನವನ್ನು ಕಾಯ್ದುಕೊಳ್ಳಲು ಸರ್ಕಾರವು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.
• ಸಂಸ್ಕರಣಾಗಾರಗಳಿಂದ ಎಲ್‌ಪಿಜಿ (LPG) ಉತ್ಪಾದನೆಯ ಹೆಚ್ಚಳ- 9 ಮಾರ್ಚ್ 2026 ರಂದು ಹೊರಡಿಸಲಾದ ಎಲ್ ಪಿ ಜಿ ನಿಯಂತ್ರಣ ಆದೇಶವು ಎಲ್ ಪಿಜಿ ಇಳುವರಿಯನ್ನು ಗರಿಷ್ಠಗೊಳಿಸಲು ಮತ್ತು ಪ್ರೊಪೇನ್, ಬ್ಯುಟೇನ್, ಪ್ರೊಪಿಲೀನ್ ಮತ್ತು ಬ್ಯುಟೇನ್ ಒಳಗೊಂಡಿರುವ C3 ಮತ್ತು C4 ಹೈಡ್ರೋಕಾರ್ಬನ್ ಸ್ಟ್ರೀಮ್ ಗಳ ಸಂಪೂರ್ಣ ಉತ್ಪಾದನೆಯನ್ನು ದೇಶೀಯ ಅಡುಗೆ ಅನಿಲಕ್ಕಾಗಿ ಕೇವಲ ಮೂರು ತೈಲ ಮಾರುಕಟ್ಟೆ ಕಂಪನಿಗಳಿಗೆ ಮಾತ್ರವೇ ಒದಗಿಸುವಂತೆ ಎಲ್ಲಾ ಸಂಸ್ಕರಣಾಗಾರಗಳಿಗೆ ನಿರ್ದೇಶನ ನೀಡಿದೆ. ಆದ್ದರಿಂದ, ಕಳೆದ 5 ದಿನಗಳಲ್ಲಿ, ಸಂಸ್ಕರಣಾಗಾರಗಳ ನಿರ್ದೇಶನಗಳ ಮೂಲಕ ಎಲ್ ಪಿ ಜಿ ಉತ್ಪಾದನೆಯು ಶೇಕಡಾ 28 ರಷ್ಟು ಹೆಚ್ಚಾಗಿದೆ. ಮುಂದಿನ ಸಂಗ್ರಹಣೆ ಪ್ರಕ್ರಿಯೆಯು ಸಕ್ರಿಯವಾಗಿ ನಡೆಯುತ್ತಿದೆ.
• ನಾವು ದೇಶಾದ್ಯಂತ 25,000 ಕ್ಕೂ ಹೆಚ್ಚು ವಿತರಕರನ್ನು ಹೊಂದಿದ್ದೇವೆ. ದಾಸ್ತಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ವರದಿ ಮಾಡಲಾಗುತ್ತಿದೆ. ಯಾವುದೇ ದಾಸ್ತಾನು ಖಾಲಿಯಾದ ವರದಿಯಾಗಿಲ್ಲ. ಪ್ರತಿದಿನ 50 ಲಕ್ಷಕ್ಕೂ ಹೆಚ್ಚು ಸಿಲಿಂಡರ್ ಗಳನ್ನು ವಿತರಿಸಲಾಗುತ್ತಿದೆ. ಆತಂಕದಿಂದಾಗಿ ಬುಕಿಂಗ್ ನಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. ನಾಗರಿಕರು ಆತಂಕದಿಂದ ಬುಕಿಂಗ್ ಮಾಡುವುದನ್ನು ತಪ್ಪಿಸಲು, ಅಧಿಕಾರಿಗಳೊಂದಿಗೆ ಸಹಕರಿಸಲು ಮತ್ತು ಜಾಗತಿಕ ಅನಿಶ್ಚಿತತೆಯ ಈ ಅವಧಿಯಲ್ಲಿ ಸಾಧ್ಯವಿರುವಲ್ಲಿ ಇಂಧನವನ್ನು ಉಳಿಸಲು ನಾವು ವಿನಂತಿಸುತ್ತೇವೆ.
• ಗೃಹೇತರ ಎಲ್ ಪಿ ಜಿಗೆ ಸಂಬಂಧಿಸಿದಂತೆ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ವಲಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ರೆಸ್ಟೋರೆಂಟ್ ಗಳು, ಹೋಟೆಲ್ ಗಳು ಮತ್ತು ಇತರ ವಾಣಿಜ್ಯ ಬಳಕೆದಾರರಿಗೆ ಹಂಚಿಕೆಯನ್ನು ಪರಿಶೀಲಿಸಲು IOCL, HPCL ಮತ್ತು BPCL ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಲಭ್ಯವಿರುವ ಎಲ್ ಪಿ ಜಿಯನ್ನು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಯೋಜನೆಯನ್ನು ಅಂತಿಮಗೊಳಿಸಲು ಸಮಿತಿಯು ರಾಜ್ಯ ಅಧಿಕಾರಿಗಳು ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಒಂದು ಪ್ರಮುಖ ನಿರ್ಧಾರದಲ್ಲಿ, ದಾಸ್ತಾನು ಅಥವಾ ಕಾಳಸಂತೆ ಮಾರಾಟವಾಗದಂತೆ ನೋಡಿಕೊಳ್ಳಲು, ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ಇಂದಿನಿಂದ OMCs ಸರಾಸರಿ ಮಾಸಿಕ ವಾಣಿಜ್ಯ ಎಲ್ ಪಿ ಜಿ ಅವಶ್ಯಕತೆಯ ಶೇಕಡಾ 20 ರಷ್ಟನ್ನು ಹಂಚಿಕೆ ಮಾಡಲಿವೆ.
• ವಾಣಿಜ್ಯ ಸಿಲಿಂಡರ್ ಗಳ ವಿತರಣೆಗಾಗಿ OMCs ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಸಂಪರ್ಕಿಸುತ್ತಿವೆ. ವಾಣಿಜ್ಯ ಸಿಲಿಂಡರ್ ಗಳ ವಿತರಣೆಗಾಗಿ ಇಂದು ದೆಹಲಿಯ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚೆಗಳು ನಡೆದಿವೆ.
• ಎಲ್ ಪಿ ಜಿ ಮತ್ತು ಅನಿಲ ಮಾರ್ಗಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪರ್ಯಾಯ ಇಂಧನ ಆಯ್ಕೆಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ಸೀಮೆಎಣ್ಣೆಯನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ ಮತ್ತು ಕೈಗಾರಿಕಾ ಹಾಗೂ ವಾಣಿಜ್ಯ ಗ್ರಾಹಕರಿಗೆ ಇಂಧನ ತೈಲವನ್ನು ಒದಗಿಸಲಾಗುತ್ತಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC), ಈ ಬಿಕ್ಕಟ್ಟಿನ ಅವಧಿಯಲ್ಲಿ 1 ತಿಂಗಳ ಕಾಲ ಹೋಟೆಲ್ ಮತ್ತು ರೆಸ್ಟೋರೆಂಟ್ ವಿಭಾಗಕ್ಕೆ ಪರ್ಯಾಯ ಇಂಧನವಾಗಿ ಜೈವಿಕ ರಾಶಿ (biomass), ಆರ್‌ಡಿಎಫ್ (RDF) ಪೆಲೆಟ್‌ಗಳು ಮತ್ತು ಸೀಮೆಎಣ್ಣೆ/ಕಲ್ಲಿದ್ದಲನ್ನು ಬಳಸಲು ಅನುಮತಿ ನೀಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸಲಹೆ ನೀಡಿದೆ. ಇದು ಹೆಚ್ಚಿನ ಸಂಸ್ಥೆಗಳಿಗೆ ಇಂಧನ ಬದಲಿಸಲು ಮತ್ತು ಆದ್ಯತೆಯ ಗ್ರಾಹಕರಿಗೆ ಎಲ್ ಪಿ ಜಿ ಯನ್ನು ಮುಕ್ತಗೊಳಿಸಲು ಅನುವು ಮಾಡಿಕೊಡುತ್ತದೆ.
• ನಿನ್ನೆ ಕಲ್ಲಿದ್ದಲು ಸಚಿವಾಲಯವು ರಾಜ್ಯ ನಾಮನಿರ್ದೇಶಿತ ಏಜೆನ್ಸಿಗಳಿಗೆ ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಹಂಚಿಕೆ ಮಾಡಲು ಆದೇಶ ಹೊರಡಿಸಿದೆ ಮತ್ತು ಇವುಗಳನ್ನು ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಹಂಚಿಕೆ ಮಾಡಿದೆ.
• ಈಗಾಗಲೇ ಒಂದು ತ್ರೈಮಾಸಿಕಕ್ಕೆ ಅಡುಗೆ ಇಂಧನವಾಗಿ ಬಳಸಲು ಹಂಚಿಕೆ ಮಾಡಲಾದ 1 ಲಕ್ಷ ಕೆಎಲ್‌ಗಳಿಗಿಂತ (KLs) ಅಧಿಕ ಪ್ರಮಾಣದ ಜೊತೆಗೆ, ಹೆಚ್ಚುವರಿಯಾಗಿ 48,000 ಕೆಎಲ್‌ಗಿಂತ ಹೆಚ್ಚಿನ ಪ್ರಮಾಣವನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ.
ಸಾಗರ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್ ಪ್ರದೇಶದ ಸಾಗರ ಪರಿಸ್ಥಿತಿ ಮತ್ತು ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಕಾಪಾಡಲು ಹಾಗೂ ಭಾರತದ ಸಾಗರ ಹಿತಾಸಕ್ತಿಗಳನ್ನು ರಕ್ಷಿಸಲು ಸಚಿವಾಲಯವು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಇತ್ತೀಚಿನ ನವೀಕರಣಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ. ಈ ಕೆಳಗಿನ ಮಾಹಿತಿಯನ್ನು ನೀಡಲಾಯಿತು-
• ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಧ್ವಜದ ಹಡಗುಗಳ ಸಂಖ್ಯೆ 28 ರಲ್ಲಿ ಬದಲಾಗದೆ ಉಳಿದಿದೆ, ಅವುಗಳಲ್ಲಿ 24 ಹಡಗುಗಳು ಹಾರ್ಮುಜ್ ಜಲಸಂಧಿಯ ಪಶ್ಚಿಮಕ್ಕೆ ನೆಲೆಗೊಂಡಿವೆ ಮತ್ತು 677 ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿವೆ, ಹಾಗೂ 4 ಹಡಗುಗಳು 101 ಭಾರತೀಯ ನಾವಿಕರೊಂದಿಗೆ ಜಲಸಂಧಿಯ ಪೂರ್ವ ಭಾಗದಲ್ಲಿವೆ.
• ಎಲ್ಲಾ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
• ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವೈದ್ಯಕೀಯ ನೆರವು ನೀಡಲು ಅಧಿಕಾರಿಗಳು, ಹಡಗು ವ್ಯವಸ್ಥಾಪಕರು ಮತ್ತು ನೇಮಕಾತಿ ಏಜೆನ್ಸಿಗಳು ಭಾರತೀಯ ರಾಯಭಾರ ಕಚೇರಿಗಳು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿವೆ.
• ಭಾರತೀಯ ನಾವಿಕರು, ಭಾರತೀಯ ಧ್ವಜದ ಹಡಗುಗಳು ಮತ್ತು ಸಾಗರ ವ್ಯಾಪಾರ ಕಾರ್ಯಾಚರಣೆಗಳನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳ ಕುರಿತು 28 ಫೆಬ್ರವರಿ 2026 ರಂದು ಡಿಜಿ ಶಿಪ್ಪಿಂಗ್ (DG Shipping) ಹೊರಡಿಸಿದ ಸಲಹೆಗಳು ಜಾರಿಯಲ್ಲಿವೆ.
• ಭಾರತದಾದ್ಯಂತ ಒಟ್ಟಾರೆ ಬಂದರು ಕಾರ್ಯಾಚರಣೆಗಳು ಸ್ಥಿರವಾಗಿವೆ.
• ಸಂಬಂಧಿತ ಪಾಲುದಾರರ ಸಮನ್ವಯ ಮತ್ತು ಸಮಯೋಚಿತ ಕುಂದುಕೊರತೆ ನಿವಾರಣೆಯ ಮೂಲಕ ಶಿಪ್ಪಿಂಗ್ ಲೈನ್‌ಗಳು ಮತ್ತು ರಫ್ತುದಾರರಿಗೆ ಸಕ್ರಿಯವಾಗಿ ಅನುಕೂಲ ಮಾಡಿಕೊಡಲು ಎಲ್ಲಾ ಪ್ರಮುಖ ಬಂದರುಗಳು/ರಾಜ್ಯ ಸಾಗರ ಮಂಡಳಿಗಳಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (SOP) ಹೊರಡಿಸಲಾಗಿದೆ.
• ಎಲ್ಲಾ ಪ್ರಮುಖ ಬಂದರುಗಳಿಂದ ಏಕೈಕ ಸಂಪರ್ಕ ಕೇಂದ್ರವಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.
• ಎಲ್ ಪಿ ಜಿ (LPG) ಹಡಗುಗಳಿಗೆ ಆದ್ಯತೆಯ ಮೇರೆಗೆ ಬರ್ತಿಂಗ್ (berthing) ಸೌಲಭ್ಯ ಒದಗಿಸಲು ಪ್ರಮುಖ ಬಂದರುಗಳಿಗೆ ನಿರ್ದೇಶನ ನೀಡಲಾಗಿದೆ.
• ಪಶ್ಚಿಮ ಏಷ್ಯಾಕ್ಕೆ ಹೋಗಬೇಕಿದ್ದ ಸರಕುಗಳನ್ನು ಇತರೆಡೆಗೆ ವರ್ಗಾಯಿಸುವ ಸರಕುಗಳಾಗಿ ಸಂಗ್ರಹಿಸಲು ಅನುಮತಿ ನೀಡುವುದು, ಹೆಚ್ಚುವರಿ ಶೇಖರಣಾ ಸ್ಥಳವನ್ನು ಹಂಚಿಕೆ ಮಾಡುವುದು, ತಾತ್ಕಾಲಿಕ ಹಡಗು ಬರ್ತಿಂಗ್ ಸೌಲಭ್ಯ ಒದಗಿಸುವುದು, ಬೇಗನೆ ಹಾಳಾಗುವ ಮತ್ತು ಹಿಂತಿರುಗುವ ರಫ್ತು ಸರಕುಗಳ ನಿರ್ವಹಣೆಗೆ ಆದ್ಯತೆ ನೀಡುವುದು, ಕಸ್ಟಮ್ಸ್‌ನೊಂದಿಗೆ ಸಮನ್ವಯ ಸಾಧಿಸಿ "ಬ್ಯಾಕ್ ಟು ಟೌನ್" ಪ್ರಕ್ರಿಯೆಯನ್ನು ವೇಗಗೊಳಿಸುವುದು ಮತ್ತು ಸಾಧ್ಯವಿರುವಲ್ಲೆಲ್ಲಾ ಬಂಕರಿಂಗ್ ಬೆಂಬಲವನ್ನು ಹೆಚ್ಚಿಸುವಂತಹ ಸುಗಮಗೊಳಿಸುವ ಕ್ರಮಗಳನ್ನು ಬಂದರುಗಳು ಜಾರಿಗೆ ತಂದಿವೆ.
• ಬಿಕ್ಕಟ್ಟಿನ ಅವಧಿಯಲ್ಲಿ ತಡೆರಹಿತ ಲಾಜಿಸ್ಟಿಕ್ಸ್ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಕಸ್ಟಮ್ಸ್ ಮತ್ತು ಡಿಜಿಎಫ್ಟಿ (DGFT) ಅಂತಹ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸಲು, ಬಂದರು ಶುಲ್ಕಗಳಲ್ಲಿ ರಿಯಾಯಿತಿಯನ್ನು ಪರಿಗಣಿಸಲು ಮತ್ತು ಸಚಿವಾಲಯಕ್ಕೆ ಪ್ರತಿದಿನ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಲು ಪ್ರಮುಖ ಬಂದರುಗಳಿಗೆ ಸಲಹೆ ನೀಡಲಾಗಿದೆ.
• ಮೂಲಸೌಕರ್ಯ, ಹಣಕಾಸು ಸುಗಮಗೊಳಿಸುವಿಕೆ, ಇಂಧನ ಭದ್ರತೆಯ ಮೇಲ್ವಿಚಾರಣೆ ಮತ್ತು ಹಡಗು ಸುರಕ್ಷತಾ ಕಾರ್ಯಾಚರಣೆಗಳಾದ್ಯಂತ ಸರ್ಕಾರವು ಸಮನ್ವಯ ಕ್ರಮಗಳನ್ನು ತೆಗೆದುಕೊಂಡಿದೆ.
• ಸಚಿವಾಲಯ (28 ಫೆಬ್ರವರಿ 2026) ಮತ್ತು ಶಿಪ್ಪಿಂಗ್ ಮಹಾನಿರ್ದೇಶನಾಲಯ ಎರಡರಲ್ಲೂ ಮೀಸಲಾದ 24 ಗಂಟೆಗಳ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದೆ. ಸಕಾಲಿಕ ನವೀಕರಣಗಳು ಮತ್ತು ಅಗತ್ಯ ನೆರವು ನೀಡಲು ನಿರ್ದೇಶನಾಲಯವು ಹಡಗು ಮಾಲೀಕರು, ನಿರ್ವಾಹಕರು ಮತ್ತು ನಾವಿಕರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದೆ.
• ವಿದೇಶಿ ಧ್ವಜದ ಹಡಗುಗಳಲ್ಲಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ಸಾಗರ ಅಪಘಾತಗಳು ಸಂಭವಿಸಿವೆ. ಈ ಹಡಗುಗಳಲ್ಲಿ 78 ಭಾರತೀಯ ನಾವಿಕರಿದ್ದರು. ಇವರಲ್ಲಿ 70 ಮಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಮತ್ತು 04 ಮಂದಿ ಗಾಯಗೊಂಡಿದ್ದು ಅವರ ಸ್ಥಿತಿ ಸ್ಥಿರವಾಗಿದೆ. ದುರದೃಷ್ಟವಶಾತ್, 03 ಸಾವುಗಳು ಸಂಭವಿಸಿವೆ ಮತ್ತು ಒಬ್ಬ ನಾವಿಕ ನಾಪತ್ತೆಯಾಗಿದ್ದಾರೆ.
• ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿನ ಪ್ರಚಲಿತ ಸಾಗರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಆ ಪ್ರದೇಶದಲ್ಲಿ ಬದಲಾಗುತ್ತಿರುವ ಸಾಗರ ಪರಿಸ್ಥಿತಿಯ ದೃಷ್ಟಿಯಿಂದ ಮೇಲ್ವಿಚಾರಣೆ ಮತ್ತು ಸಿದ್ಧತಾ ಕ್ರಮಗಳನ್ನು ಬಲಪಡಿಸಿದೆ.
• ಎಲ್ಲಾ ರೀತಿಯ ನೆರವು ನೀಡಲು ಉದ್ಯಮ ಮತ್ತು ಪಾಲುದಾರರೊಂದಿಗೆ ನಿಯಮಿತ ಸಂವಾದವನ್ನು ಕಾಯ್ದುಕೊಳ್ಳಲಾಗುತ್ತಿದೆ.
• ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಹಾಗೂ ಭಾರತದ ಸಾಗರ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರವು ಸಂಪೂರ್ಣ ಬದ್ಧವಾಗಿದೆ.
ಈ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳ ಸುರಕ್ಷತೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜಿಸಿಸಿ (GCC) ಮತ್ತು ಇರಾನ್‌ನಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಕಲ್ಯಾಣದ ಕುರಿತು ನವೀಕೃತ ಮಾಹಿತಿಯನ್ನು ನೀಡಿದೆ. ಈ ಕೆಳಗಿನ ವಿಷಯಗಳನ್ನು ಹಂಚಿಕೊಳ್ಳಲಾಗಿದೆ-
• ನಮ್ಮ ರಾಯಭಾರ ಕಚೇರಿಗಳು ಭಾರತೀಯ ಸಮುದಾಯದ ಸದಸ್ಯರೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದು, ವಾಣಿಜ್ಯ ವಿಮಾನಯಾನ ಆಯ್ಕೆಗಳ ಮಾಹಿತಿಯೊಂದಿಗೆ ಅವರಿಗೆ ಸಹಾಯ ಮಾಡುತ್ತಿವೆ. ಕೆಲವು ಸಂದರ್ಭಗಳಲ್ಲಿ, ಅವರು ವೀಸಾಗಳಿಗೂ ಸಹಾಯ ಮಾಡುತ್ತಿದ್ದಾರೆ.
• ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ವಾಣಿಜ್ಯ ವಿಮಾನಗಳಲ್ಲಿ ಮರಳಲು ಇಚ್ಛಿಸುವ ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿ ಸಹಾಯ ಮಾಡುತ್ತಿದೆ. ವೀಸಾಗಳು ಮತ್ತು ಭೂ-ಗಡಿ ದಾಟುವಿಕೆಗಳಿಗೆ ರಾಯಭಾರ ಕಚೇರಿ ಅನುಕೂಲ ಮಾಡಿಕೊಡುತ್ತಿದೆ.
• ನಡೆಯುತ್ತಿರುವ ಸಂಘರ್ಷದಲ್ಲಿ ನಾವು ಮೂವರು ಭಾರತೀಯ ಪ್ರಜೆಗಳನ್ನು ಕಳೆದುಕೊಂಡಿದ್ದೇವೆ. ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿರುವ ಬಗ್ಗೆಯೂ ವರದಿಯಾಗಿದೆ.
• ಈ ನಾಲ್ಕೂ ಭಾರತೀಯ ಪ್ರಜೆಗಳು ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗುಗಳಲ್ಲಿನ ಸಿಬ್ಬಂದಿಗಳಾಗಿದ್ದರು.
• ಓಮನ್ ಮತ್ತು ಇರಾಕ್ ನಲ್ಲಿರುವ ನಮ್ಮ ರಾಯಭಾರ ಕಚೇರಿಗಳು ಮತ್ತು ದುಬೈನಲ್ಲಿರುವ ನಮ್ಮ ದೂತಾವಾಸವು ಮೃತರ ಪಾರ್ಥಿವ ಶರೀರಗಳನ್ನು ಆದಷ್ಟು ಬೇಗ ಭಾರತಕ್ಕೆ ತರಲು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿವೆ.
• ಯಾವುದೇ ಕಡೆಯಿಂದ ವಾಣಿಜ್ಯ ಹಡಗುಗಳ ಮೇಲೆ ನಡೆಯುವ ದಾಳಿಗಳನ್ನು ಭಾರತವು ಬಲವಾಗಿ ಖಂಡಿಸಲು ಇದೂ ಸಹ ಕಾರಣ ಎಂದು ಇದೇ ಸಂದರ್ಭದಲ್ಲಿ ಸೇರಿಸಲಾಯಿತು.
• ಇತ್ತೀಚಿನ ಸಾವು ಮಾರ್ಷಲ್ ಐಲೆಂಡ್ ಧ್ವಜದ ಹಡಗಾದ 'ಸೇಫ್‌ಸೀ ವಿಷ್ಣು' (Safesea Vishnu) ನಲ್ಲಿ ಸಂಭವಿಸಿದೆ. ಇದು ಇರಾಕ್ ಬಳಿ ಸಂಭವಿಸಿದೆ.
• ಹಡಗಿನಲ್ಲಿ 16 ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 28 ಸಿಬ್ಬಂದಿಗಳಿದ್ದರು. ಅವರಲ್ಲಿ ಒಬ್ಬರು ದುರದೃಷ್ಟವಶಾತ್ ಮೃತಪಟ್ಟಿದ್ದಾರೆ. ನಾವು ನಮ್ಮ ಸಂತಾಪವನ್ನು ಸೂಚಿಸುತ್ತೇವೆ. ಉಳಿದ ಎಲ್ಲಾ 15 ಪ್ರಜೆಗಳನ್ನು ರಕ್ಷಿಸಲಾಗಿದೆ ಮತ್ತು ಪ್ರಸ್ತುತ ಬಸ್ರಾದಲ್ಲಿದ್ದಾರೆ. ನಮ್ಮ ರಾಯಭಾರ ಕಚೇರಿಯು ಅವರೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿದೆ.
• ಈವರೆಗೆ ಸಂಘರ್ಷದಲ್ಲಿ ಎರಡು ಡಜನ್ ಗಿಂತಲೂ ಹೆಚ್ಚು ಭಾರತೀಯರು ಗಾಯಗೊಂಡಿದ್ದಾರೆ. ಅವರಲ್ಲಿ ಅನೇಕರು ಚಿಕಿತ್ಸೆಯ ನಂತರ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕೆಲವರು ಇನ್ನೂ ಆಸ್ಪತ್ರೆಯಲ್ಲಿದ್ದಾರೆ.
ಮಾಧ್ಯಮಗಳ ಮೂಲಕ ನಾಗರಿಕರಿಗೆ ಮನವಿ:
ವಾರ್ತಾ ಮತ್ತು ಪ್ರಸಾರ ಸಚಿವಾಲಯವು:
• ಸಿಲಿಂಡರ್ ಗಳ ಆತಂಕದ ಬುಕಿಂಗ್ (panic booking) ಮಾಡದಂತೆ ಮಾಧ್ಯಮಗಳ ಮೂಲಕ ಎಲ್ಲಾ ನಾಗರಿಕರಿಗೆ ಮನವಿ ಮಾಡಿದೆ ಮತ್ತು ಅಡೆತಡೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
• ತಳಮಟ್ಟದಲ್ಲಿ ಎಲ್ ಪಿ ಜಿ ಸಿಲಿಂಡರ್ ಗಳ ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳು ಮತ್ತು ರಾಜ್ಯ ಸರ್ಕಾರಗಳ ಪಾತ್ರವನ್ನು ಎತ್ತಿ ತೋರಿಸಿದೆ.
• ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡದಂತೆ ಮತ್ತು ಕೇವಲ ವಿಶ್ವಾಸಾರ್ಹ ಹಾಗೂ ಪರಿಶೀಲಿಸಿದ ವಿಷಯಗಳನ್ನು ಮಾತ್ರ ಪೋಸ್ಟ್ ಮಾಡುವಂತೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಮನವಿ ಮಾಡಿದೆ.
• ಪರಿಸ್ಥಿತಿಯು ಬದಲಾಗುತ್ತಿರುವುದರಿಂದ ಒಂದೇ ದೃಶ್ಯಗಳನ್ನು ಪದೇ ಪದೇ ಪ್ರಸಾರ ಮಾಡದಂತೆ ಟಿವಿ ಚಾನೆಲ್ ಗಳಿಗೆ ಮನವಿ ಮಾಡಿದೆ. ಘಟನೆಯು ನಡೆದ ದಿನಾಂಕ ಮತ್ತು ಸಮಯದ ಮುದ್ರೆಯೊಂದಿಗೆ ದೃಶ್ಯಗಳನ್ನು ಪ್ರಸಾರ ಮಾಡುವಂತೆ ಚಾನೆಲ್ ಗಳಿಗೆ ವಿನಂತಿಸಲಾಗಿದೆ, ಇದರಿಂದ ನಾಗರಿಕರಿಗೆ ಆ ಘಟನೆಯು ಯಾವಾಗ ನಡೆದಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ದೊರೆಯುತ್ತದೆ.
• ಅಗತ್ಯ ವಸ್ತುಗಳ ಕಾಳಸಂತೆ ಸಂಗ್ರಹಣೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ಅಗತ್ಯ ವಸ್ತುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2239288)
ವಿಸಿಟರ್ ಕೌಂಟರ್ : 9