ಹಣಕಾಸು ಸಚಿವಾಲಯ
azadi ka amrit mahotsav

ಕೃಷಿ ಆಡಳಿತದಲ್ಲಿ ರಾಜ್ಯ ಮಟ್ಟದ ನಾವಿನ್ಯತೆಗಳಿಂದ ಸಕಾರಾತ್ಮಕ ಫಲಿತಾಂಶ: ಆರ್ಥಿಕ ಸಮೀಕ್ಷೆ 


ಭೂಮಿ ಮತ್ತು ಸಂಪನ್ಮೂಲ ಆಡಳಿತ, ಮಾರುಕಟ್ಟೆ ಸುಧಾರಣೆಗಳು, ಜಲ ನಿರ್ವಹಣೆ ಹಾಗೂ ತಂತ್ರಜ್ಞಾನ ಮತ್ತು ಡಿಜಿಟಲ್ ಕೃಷಿ ಸೇರಿದಂತೆ ವಿವಿಧ ವಲಯಗಳಲ್ಲಿ ನಾವಿನ್ಯತೆ

प्रविष्टि तिथि: 29 JAN 2026 2:00PM by PIB Bengaluru

ಇತ್ತೀಚಿನ ವರ್ಷಗಳಲ್ಲಿ ಹಲವು ಭಾರತೀಯ ರಾಜ್ಯಗಳು ಭೂ ಆಡಳಿತ, ಮಾರುಕಟ್ಟೆಗಳು, ನೀರು ನಿರ್ವಹಣೆ, ತಂತ್ರಜ್ಞಾನ ಅಳವಡಿಕೆ ಮತ್ತು ಬೆಳೆ ವೈವಿಧ್ಯೀಕರಣ ಒಳಗೊಂಡಂತೆ ಉದ್ದೇಶಿತ ಕೃಷಿ ಸುಧಾರಣೆಗಳನ್ನು ಕೈಗೊಂಡಿವೆ. ಈ ಉಪಕ್ರಮಗಳು ಕೃಷಿ ಫಲಿತಾಂಶಗಳನ್ನು ಸುಧಾರಿಸಿವೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಇಂದು ಮಂಡಿಸಿದ 2025-26ರ ಆರ್ಥಿಕ ಸಮೀಕ್ಷೆ ಹೇಳಿದೆ.

ವಿವಿಧ ರಾಜ್ಯಗಳು ಕೈಗೊಂಡ ಕೆಲವು ಪ್ರಮುಖ ಉಪಕ್ರಮಗಳು ಹಾಗೂ ಆಡಳಿತ ಮತ್ತು ಯೋಜನೆ ಆಧಾರಿತ ಉಪಕ್ರಮಗಳ ಫಲಿತಾಂಶಗಳು ಈ ಕೆಳಗಿನಂತಿವೆ:

ಭೂಮಿ ಮತ್ತು ಸಂಪನ್ಮೂಲ ಆಡಳಿತ: ಆಂಧ್ರಪ್ರದೇಶವು ಡ್ರೋನ್ ಗಳು , ನಿರಂತರವಾಗಿ ಕಾರ್ಯನಿರ್ವಹಿಸುವ ರೆಫರೆನ್ಸ್ ಕೇಂದ್ರ (CORS) ಮತ್ತು GIS ಬಳಕೆಯೊಂದಿಗೆ ಆಂಧ್ರಪ್ರದೇಶ ಮರುಸಮೀಕ್ಷೆ ಯೋಜನೆಯನ್ನು (2021) ಜಾರಿಗೆ ತಂದಿದ್ದು, ಮಾರ್ಪಡಿಸಲಾಗದ (ಟ್ಯಾಂಪರ್ ಪ್ರೂಫ್) ಭೂಮಿ ಹಕ್ಕನ್ನು ಡಿಜಿಟಲ್‌ ರೂಪದಲ್ಲಿ ನೀಡಿದೆ. 2025ರ ವೇಳೆಗೆ, 6,901 ಹಳ್ಳಿಗಳು ಇದರ ವ್ಯಾಪ್ತಿಗೆ ಸೇರಿದ್ದು, 81 ಲಕ್ಷ ಭೂ ಭಾಗಗಳನ್ನು ಮರುಸರ್ವೆ ಮಾಡಲಾಗಿದೆ ಮತ್ತು ಸರಿಸುಮಾರು 86,000 ಗಡಿ ವಿವಾದಗಳನ್ನು ಪರಿಹರಿಸಲಾಗಿದೆ.

ಬಿಹಾರವು 22 ಜಿಲ್ಲೆಗಳಲ್ಲಿ 1,933 ಹೆಕ್ಟೇರ್‌ ಗಳಷ್ಟು ಪ್ರದೇಶವನ್ನು ಮೀನು ಆಧಾರಿತ ಉತ್ಪಾದನೆಯಡಿಯಲ್ಲಿ ಜಲಕೃಷಿಗಾಗಿ ಚೌರ್ ಭೂಮಿಯಾಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಸಮೇಕಿತ್ ಚೌರ್ ವಿಕಾಸ್ ಯೋಜನೆ (2025) ಜಾರಿಗೊಳಿಸಿದೆ.

ಮಾರುಕಟ್ಟೆ ಸುಧಾರಣೆಗಳು: ಮಧ್ಯಪ್ರದೇಶದ ಸೌದಾ ಪತ್ರಕ್ ಉಪಕ್ರಮ (2021) ರೈತರಿಂದ ಡಿಜಿಟಲ್ ವೇದಿಕೆಯ ಮೂಲಕ ನೇರ ಕನಿಷ್ಠ ಬೆಂಬಲ ಬೆಲೆ (MSP) ಆಧಾರಿತ ಖರೀದಿಗಳನ್ನು ಸಾಧ್ಯವಾಗಿಸಿದ್ದು, ಮಂಡಿಯಲ್ಲಿ ದಟ್ಟಣೆ ತಗ್ಗಿಸುತ್ತಾ ಪಾವತಿ ಪಾರದರ್ಶಕತೆಯನ್ನು ಸುಧಾರಿಸಿದೆ. ಡಿಸೆಂಬರ್ 2025 ರ ವೇಳೆಗೆ, 1.03 ಲಕ್ಷಕ್ಕೂ ಹೆಚ್ಚು ವಹಿವಾಟುಗಳನ್ನು ನಡೆದಿವೆ. 
ಆಂಧ್ರಪ್ರದೇಶದ ಇ - ಫಾರ್ಮ್ ಮಾರ್ಕೆಟ್ ವೇದಿಕೆಯು ರೈತು ಭರೋಸಾ ಕೇಂದ್ರಗಳ ಮೂಲಕ ರೈತರು ಮತ್ತು ವರ್ತಕರನ್ನು ಸಂಪರ್ಕಿಸಿದೆ. 

ಜಲ ನಿರ್ವಹಣೆ: ಹೊಸ ಯೋಜನೆಗಳು ಮತ್ತು ಸೌರ ಪಂಪ್ ಗಳ ಮೂಲಕ ನೀರಾವರಿ ಭೂಮಿಯ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಅಸ್ಸಾಂ ರಾಜ್ಯ ನೀರಾವರಿ ಯೋಜನೆ (2022) ಹೊಂದಿದ್ದು, 2024–25 ರ ವೇಳೆಗೆ ಒಟ್ಟು ನೀರಾವರಿ ಪ್ರದೇಶವು ಕೃಷಿ ಭೂಮಿಯ ಶೇಕಡ 24.28 ಕ್ಕೆ ಹೆಚ್ಚಾಗಿದೆ.  

ಉತ್ತರ ಪ್ರದೇಶ ಅಂತರ್ಜಲ ನಿಯಮಗಳು (2020) ಉತ್ಖನನ ನಿಯಂತ್ರಣವನ್ನು ಬಲಪಡಿಸಿದ್ದು, ಹೊರತೆಗೆಯುವಿಕೆಯ ತೀವ್ರತೆ ಹೆಚ್ಚಾಗಿದ್ದರೂ ಕೂಡ 2025 ರ ವೇಳೆಗೆ ಅಂತರ್ಜಲ ಮರುಪೂರಣ ಪ್ರಮಾಣ ತುಸು ಏರಿಕೆಯಾಗಿದೆ.  

ತಂತ್ರಜ್ಞಾನ ಮತ್ತು ಡಿಜಿಟಲ್ ಕೃಷಿ: ಕರ್ನಾಟಕದ FRUITS ವೇದಿಕೆ (2020) ಸುಮಾರು 55 ಲಕ್ಷ ರೈತರು ಮತ್ತು ಬಹು ಯೋಜನೆಗಳನ್ನು ಒಳಗೊಂಡು ನೇರ ನಗದು ವರ್ಗಾವಣೆ (DBT), ಕನಿಷ್ಠ ಬೆಂಬಲ ಬೆಲೆ (MSP) ಸಂಗ್ರಹಣೆ ಮತ್ತು ಬೆಳೆ ಸಮೀಕ್ಷೆಗಳನ್ನು ಬೆಂಬಲಿಸುವ ಏಕೀಕೃತ ರೈತ ದತ್ತಾಂಶವನ್ನು ಸೃಜಿಸಿದೆ. 

ಕೃಷಿ ಮಟ್ಟದ ಟ್ರ್ಯಾಕಿಂಗ್ ಮತ್ತು ಹವಾಮಾನ-ಮಾಹಿತಿಯುತ ಯೋಜನೆಯನ್ನು ಸಕ್ರಿಯಗೊಳಿಸಲು ಜಾರ್ಖಂಡ್ ರಾಜ್ಯವು GIS-ಆಧಾರಿತ ಹವಾಮಾನ ಸ್ಮಾರ್ಟ್ ಕೃಷಿ ಮತ್ತು ಕೃಷಿ ಸ್ಟ್ಯಾಕ್ ಯೋಜನೆ (2024) ಅನ್ನು ಪ್ರಾರಂಭಿಸಿದ್ದು, ಫಲಿತಾಂಶ ಸೂಚಕಗಳು ಇನ್ನೂ ಅಭಿವೃದ್ಧಿಯ ಹಂತದಲ್ಲಿವೆ. ಬಿಹಾರದ ನಾಲ್ಕನೇ ಕೃಷಿ ಮಾರ್ಗಸೂಚಿ (2023–28) ಹಿಂದಿನ ಮಾರ್ಗಸೂಚಿಗಳನ್ನು ಆಧರಿಸಿದ್ದು, ಇದು ಈಗಾಗಲೇ ಮೀನು ಮತ್ತು ಹಾಲು ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗಿದೆ.

ಭಾರತದ ಕೃಷಿ ಬೆಳವಣಿಗೆಯ ಗಾಥೆಯು ಕೃಷಿ ಆಡಳಿತದಲ್ಲಿ ರಾಜ್ಯ ಮಟ್ಟದ ನಾವಿನ್ಯತೆಗಳಿಂದ ಚಾಲಿತವಾಗಿ ಹೇಗೆ ಸಕಾರಾತ್ಮಕ ಫಲಿತಾಂಶ ಪಡೆದಿದೆ ಎಂಬುದನ್ನು ಮೇಲಿನ ಉದಾಹರಣೆಗಳು ಪ್ರದರ್ಶಿಸುತ್ತವೆ.

 

*****


(रिलीज़ आईडी: 2220085) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Punjabi , Gujarati , Malayalam