ಹಣಕಾಸು ಸಚಿವಾಲಯ
azadi ka amrit mahotsav

ಭಾರತವನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು ಕೌಶಲ್ಯಾಭಿವೃದ್ಧಿ ಅಗತ್ಯವಿದೆ: ಆರ್ಥಿಕ ಸಮೀಕ್ಷೆ 2025-2026


ಕೃತಕ ಬುದ್ಧಿಮತ್ತೆ, ಇಂಟೆರ್ ನೆಟ್ ಆಫ್ ಥಿಂಗ್ಸ್ (IoT), ನವೀಕರಿಸಬಹುದಾದ ಇಂಧನ ಮತ್ತು 3ಡಿ ಭವಿಷ್ಯದ ಕೌಶಲ್ಯ ಕೋರ್ಸ್‌ಗಳು ಭಾರತದಲ್ಲಿ ಕೌಶಲ್ಯ ಕ್ರಾಂತಿಗೆ ಕಾರಣವಾಗಿವೆ

ಐಟಿಐಗಳ ಉನ್ನತೀಕರಣಕ್ಕಾಗಿ ದೇಶವ್ಯಾಪಿ ಯೋಜನೆಯಡಿ 1000 ಸರ್ಕಾರಿ ಐಟಿಐಗಳನ್ನು ನವೀಕರಿಸಲಾಗುವುದು

ರಾಷ್ಟ್ರೀಯ ಶಿಷ್ಯವೃತ್ತಿ ಉತ್ತೇಜನ ಯೋಜನೆ (PM-NAPS) ಅಡಿಯಲ್ಲಿ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 43.47 ಲಕ್ಷಕ್ಕೂ ಹೆಚ್ಚು ತರಬೇತುದಾರರು ತೊಡಗಿಸಿಕೊಂಡಿದ್ದಾರೆ

प्रविष्टि तिथि: 29 JAN 2026 1:52PM by PIB Bengaluru

ಭಾರತವು ತನ್ನ ಜನಸಾಂಖ್ಯಿಕ ಲಾಭವನ್ನು ಬಳಸಿಕೊಳ್ಳಲು ಮತ್ತು ಬದಲಾಗುತ್ತಿರುವ ಕಾರ್ಮಿಕ ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸಲು ಉತ್ತಮವಾಗಿ ಏಕೀಕೃತ ಹಾಗೂ ಮುಂದಾಳತ್ವದ ಕೌಶಲ್ಯಾಭಿವೃದ್ಧಿ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸುತ್ತಿದೆ ಎಂದು ಇಂದು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆರ್ಥಿಕ ಸಮೀಕ್ಷೆ 2025-2026 ವಿವರಿಸಲಾಗಿದೆ. 

ಕೌಶಲ್ಯಗಳಿಗೆ ಪ್ರವೇಶವನ್ನು ವಿಸ್ತರಿಸುವುದು ಮತ್ತು ಅವುಗಳ ಗುಣಮಟ್ಟವನ್ನು ಸುಧಾರಿಸುವುದಕ್ಕೆ ಸಮಗ್ರವಾಗಿ ಏಕೀಕೃತ ಕೌಶಲ್ಯಾಭಿವೃದ್ಧಿ ಪರಿಸರ ವ್ಯವಸ್ಥೆ ಅಗತ್ಯವಾಗಿದೆ. ಕೌಶಲ್ಯ ನೀತಿ ಶಿಕ್ಷಣ, ಕಾರ್ಮಿಕ ಮಾರುಕಟ್ಟೆ ಮತ್ತು ಕೈಗಾರಿಕೆಗಳ ಸಂಧಿಯ ಕಾಲದಲ್ಲಿದ್ದು, ವಿವಿಧ ಹಿತಾಸಕ್ತಿದಾರರ ನಡುವೆ ಸಮನ್ವಯ ಮತ್ತು ಸಹಕಾರ ಅತ್ಯಂತ ಅಗತ್ಯವಾಗಿದೆ. ಇದರಲ್ಲಿ ಅನೇಕ ಸಂಸ್ಥೆಗಳು, ಸಚಿವಾಲಯಗಳು, ವಿವಿಧ ಹಂತದ ಸರ್ಕಾರಗಳು, ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಮಿಕರು, ಉದ್ಯೋಗದಾತರು, ಕಾರ್ಮಿಕ ಸಂಘಗಳು ಮತ್ತು ಇತರ ಸಂಬಂಧಿತ ಘಟಕಗಳು ಸೇರಿವೆ.

ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) 2023-24 ವರದಿಯ ಪ್ರಕಾರ, 15–59 ವಯೋವರ್ಗದೊಳಗಿನ ಕೆಲವೊಂದು ರೀತಿಯ ವೃತ್ತಿಪರ ಅಥವಾ ತಾಂತ್ರಿಕ ತರಬೇತಿ ಪಡೆದವರ ಪ್ರಮಾಣವು 2017-18ರಲ್ಲಿ ಶೇಕಡಾ 8.1 ರಿಂದ 2023-24ರಲ್ಲಿ ಶೇಕಡಾ 34.7 ಕ್ಕೆ ಏರಿಕೆಯಾಗಿದೆ. ಇದು ಭಾರತದಲ್ಲಿ ಕೈಗೊಳ್ಳಲಾಗಿರುವ ಕೌಶಲ್ಯಾಭಿವೃದ್ಧಿ ಕ್ರಮಗಳ ಸಕಾರಾತ್ಮಕ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.

ಭವಿಷ್ಯ ಕೌಶಲ್ಯ ಕೋರ್ಸ್‌ಗಳು

NSQF (ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು) ಅನುಗುಣ ತರಬೇತಿಯನ್ನು 169 ವೃತ್ತಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿಸ್ತರಿಸಲಾಗಿದೆ. ಇದರಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ (IoT), ನವೀಕರಿಸಬಹುದಾದ ಇಂಧನ ಮತ್ತು 3D ಮುದ್ರಣ ಮೊದಲಾದ ಕ್ಷೇತ್ರಗಳಲ್ಲಿ 31 ಭವಿಷ್ಯ ಕೌಶಲ್ಯ ಕೋರ್ಸ್‌ಗಳು ಸೇರಿವೆ. ಇವುಗಳನ್ನು ದೇಶವ್ಯಾಪಿ ಐಟಿಐಗಳು ಮತ್ತು ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳ ಜಾಲದ ಮೂಲಕ ಒದಗಿಸಲಾಗುತ್ತಿದೆ.

ಐಟಿಐಗಳ ಮೂಲಕ ಕೌಶಲ್ಯ ಪರಿಸರ ವ್ಯವಸ್ಥೆಯ ಬಲವರ್ಧನೆ

ಐಟಿಐ ಮಟ್ಟದಲ್ಲಿ ತರಬೇತಿಯ ಗುಣಮಟ್ಟ, ಕೈಗಾರಿಕಾ ಪ್ರಸ್ತುತತೆ ಮತ್ತು ಸಂಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸುಧಾರಣೆಗಳು ಕೈಗೊಳ್ಳಲಾಗುತ್ತಿವೆ. ಐಟಿಐಗಳ ಉನ್ನತೀಕರಣಕ್ಕಾಗಿ ರಾಷ್ಟ್ರೀಯ ಯೋಜನೆ 1,000 ಸರ್ಕಾರಿ ಐಟಿಐಗಳನ್ನು ನವೀಕರಿಸಲು ಪ್ರಸ್ತಾಪಿಸುತ್ತದೆ. ಇದರಲ್ಲಿ 200 ಹಬ್ ಐಟಿಐಗಳು ಮತ್ತು 800 ಸ್ಪೋಕ್ ಐಟಿಐಗಳು ಸೇರಿವೆ. ಸ್ಮಾರ್ಟ್ ತರಗತಿಗಳು, ಆಧುನಿಕ ಪ್ರಯೋಗಾಲಯಗಳು, ಡಿಜಿಟಲ್ ವಿಷಯಗಳು ಮತ್ತು ಕೈಗಾರಿಕಾ ಅಗತ್ಯಗಳಿಗೆ ಹೊಂದುವ ದೀರ್ಘ ಹಾಗೂ ಅಲ್ಪಾವಧಿ ಕೋರ್ಸ್‌ಗಳ ಮೂಲಕ ಉನ್ನತೀಕರಣ ಕೆಲಸ ನಡೆಯಲಿದೆ. 

ಕೌಶಲ್ಯಾಭಿವೃದ್ಧಿಯನ್ನು ಕೈಗಾರಿಕೆಗೆ ಸಂಪರ್ಕಿಸುವುದು

ಪಠ್ಯಕ್ರಮ, ತರಬೇತಿ, ಶಿಷ್ಯವೃತ್ತಿ ಹಾಗೂ ಮೌಲ್ಯಮಾಪನಗಳಲ್ಲಿ ಕೈಗಾರಿಕೆಯ ಭಾಗವಹಿಸುವಿಕೆ ಕೌಶಲ್ಯಾಭಿವೃದ್ಧಿಯನ್ನು ಮಾರುಕಟ್ಟೆ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡುವ ಉದ್ದೇಶ ಹೊಂದಿದೆ. ವಿವಿಧ ಸಂಸ್ಥೆಗಳು, ಮಾನದಂಡಗಳು ಹಾಗೂ ಕಾರ್ಯಕ್ರಮ ಮೇಲ್ವಿಚಾರಣೆಯಾದ್ಯಂತ ಕೈಗಾರಿಕಾ ಪಾಲ್ಗೊಳ್ಳುವಿಕೆಯನ್ನು ಅಳವಡಿಸುವುದರಿಂದ ತರಬೇತಿಯ ಪ್ರಸ್ತುತತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಬಹುದು.

ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY) 4.0 ಅಡಿಯಲ್ಲಿ ಕೈಗಾರಿಕೆ ನೇತೃತ್ವದ ವಲಯ ಕೌಶಲ್ಯ ಮಂಡಳಿಗಳು (Sector Skill Councils - SSC) ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (NSQF) ಹೊಂದಾಣಿಕೆಯ ಉದ್ಯೋಗ ಪಾತ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಜೊತೆಗೆ, ಹಲವಾರು ಕೋರ್ಸ್‌ಗಳನ್ನು ನೇರವಾಗಿ ಕೈಗಾರಿಕಾ ಆವರಣದಲ್ಲಿಯೇ ನಡೆಸಲಾಗುತ್ತಿದೆ. ತರಬೇತುದಾರರನ್ನು ಉದ್ಯೋಗದಾತರ ಪರಿಸರ ವ್ಯವಸ್ಥೆಯಿಂದ ಆಯ್ಕೆ ಮಾಡಲಾಗುತ್ತಿದೆ.

ಇದಲ್ಲದೆ, ನಿಯಮಿತವಾಗಿ ನಡೆಯುವ ರೋಜ್ ಗಾರ್ ಮೇಳಗಳು ಮತ್ತು ರಾಷ್ಟ್ರೀಯ ವೃತ್ತಿಪರ ಶಿಷ್ಯ ತರಬೇತಿ ಮೇಳಗಳು ಉದ್ಯೋಗದಾತರು ಮತ್ತು ಉದ್ಯೋಗ ಹುಡುಕುವವರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತವೆ.

ಉದ್ಯೋಗದಾತರನ್ನು ಉದ್ಯೋಗ ಹುಡುಕುವವರೊಂದಿಗೆ ಸಂಪರ್ಕಿಸುವುದು

ಸಮೀಕ್ಷೆಯ ಪ್ರಕಾರ, ನಿಯಮಿತ ರೋಜ್ ಗಾರ್ ಮೇಳಗಳು ಮತ್ತು ರಾಷ್ಟ್ರೀಯ ವೃತ್ತಿಪರ ಶಿಷ್ಯ ತರಬೇತಿ ಮೇಳಗಳು ಉದ್ಯೋಗದಾತರು ಮತ್ತು ಉದ್ಯೋಗಾರ್ಥಿಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತವೆ.

ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY 4.0) ಅಡಿಯಲ್ಲಿ ಡಿಜಿಟಲ್ ತಂತ್ರಜ್ಞಾನಗಳು, ಹಸಿರು ಇಂಧನ, ಆರೋಗ್ಯ ಸೇವೆಗಳು, ಸುಧಾರಿತ ಕೃಷಿ, ಹಣಕಾಸು ಸೇವೆಗಳು ಹಾಗೂ ಇ-ಕಾಮರ್ಸ್ ಕ್ಷೇತ್ರಗಳ ಮೇಲೆ ನೀಡಲಾಗಿರುವ ವಲಯಾಧಾರಿತ ಒತ್ತು, ಭಾರತದಲ್ಲಿನ ದೀರ್ಘಕಾಲೀನ ಬೆಳವಣಿಗೆಯ ಚಾಲಕಶಕ್ತಿಗಳು ಮತ್ತು ಜಾಗತಿಕ ಆರ್ಥಿಕತೆಯಲ್ಲಿನ ಹೊಸ ಅವಕಾಶಗಳತ್ತ ಕೌಶಲ್ಯ ಹೂಡಿಕೆಗಳನ್ನು ಮಾರ್ಗದರ್ಶಿಸುವ ಸಮತೋಲನಯುತ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.

ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ (SIDH), ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ (NCS) ಮತ್ತು ಇ ಶ್ರಮ್ ಪೋರ್ಟಲ್‌ಗಳ ಏಕೀಕರಣವು ಬಲಿಷ್ಠ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸಿದೆ. ಇದನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಬಳಸಬಹುದು. ತರಬೇತಿ ದಾಖಲೆಗಳನ್ನು ಉದ್ಯೋಗ ಫಲಿತಾಂಶಗಳು, ಉದ್ಯೋಗದಾತರ ಬೇಡಿಕೆ ಮತ್ತು ವೈಯಕ್ತಿಕ ಕೌಶಲ್ಯಾಭಿವೃದ್ಧಿ ಹಾದಿಗಳೊಂದಿಗೆ ಸಂಪರ್ಕಿಸುವಲ್ಲಿ ಇದು ಸಹಕಾರಿಯಾಗುತ್ತದೆ. 

ಭಾರತದ ವೃತ್ತಿಪರ ಶಿಷ್ಯ ತರಬೇತಿ ರೂಪರೇಖೆ

ವೃತ್ತಿಪರ ಶಿಷ್ಯ ತರಬೇತಿ ಪರಿಸರ ವ್ಯವಸ್ಥೆಯು ನೀತಿ ಮತ್ತು ರಚನಾತ್ಮಕ ಪರಿವರ್ತನೆಯನ್ನೂ ಕಂಡಿದೆ. ರಾಷ್ಟ್ರೀಯ ಶಿಷ್ಯ ತರಬೇತಿ ಕಾರ್ಯಕ್ರಮ ಉತ್ತೇಜನ ಯೋಜನೆ (NAPS) ಮತ್ತು ರಾಷ್ಟ್ರೀಯ ಶಿಷ್ಯವೃತ್ತಿ ತರಬೇತಿ ಯೋಜನೆ (NATS) ಯೋಜನೆಗಳನ್ನು ಹೆಚ್ಚಿನ ವಲಯಗಳು ಮತ್ತು ಸಂಸ್ಥೆಗಳನ್ನು ಒಳಗೊಳ್ಳುವಂತೆ ವಿಸ್ತರಿಸಲಾಗಿದೆ.

ಪ್ರಧಾನಮಂತ್ರಿ ರಾಷ್ಟ್ರೀಯ ಶಿಷ್ಯವೃತ್ತಿ ಮೇಳ (PM-NAPS ) ಅಡಿಯಲ್ಲಿ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 43.47 ಲಕ್ಷಕ್ಕೂ ಹೆಚ್ಚು ಶಿಷ್ಯರನ್ನು ತೊಡಗಿಸಿಕೊಳ್ಳಲಾಗಿದೆ. ಇದರಲ್ಲಿ 51,000ಕ್ಕೂ ಹೆಚ್ಚು ಸಂಸ್ಥೆಗಳ ಪಾಲ್ಗೊಳ್ಳುವಿಕೆ ಇದೆ. ಮಹಿಳಾ ಪಾಲ್ಗೊಳ್ಳುವಿಕೆ ಶೇಕಡಾ 20ಕ್ಕೆ ತಲುಪಿದೆ.

ರಾಷ್ಟ್ರೀಯ ಶಿಷ್ಯವೃತ್ತಿ ತರಬೇತಿ ಯೋಜನೆ (NATS) ಕಾರ್ಯಕ್ರಮವು ಸಹ ಆರ್ಥಿಕ ವರ್ಷ 2025ರಲ್ಲಿ 5.23 ಲಕ್ಷ ವೃತ್ತಿ ತರಬೇತುದಾರರ ಭಾಗವಹಿಸುವಿಕೆಯನ್ನು ದಾಖಲಿಸಿದ್ದು, ಭಾರತದ ಶಿಷ್ಯವೃತ್ತಿ ವ್ಯವಸ್ಥೆಯ ವಿಸ್ತರಿಸುತ್ತಿರುವ ಪ್ರಮಾಣ ಮತ್ತು ಸಂಸ್ಥಾತ್ಮಕ ಪರಿಪಕ್ವತೆಯನ್ನು ತೋರಿಸುತ್ತದೆ.

ಭವಿಷ್ಯದ ಹಾದಿ 

ಭಾರತ ತನ್ನ ಬೆಳವಣಿಗೆಯ ಪಯಣವನ್ನು ಮುಂದುವರಿಸುತ್ತಿರುವಂತೆ, ಸಂಸ್ಥಾತ್ಮಕ ಸಮನ್ವಯವನ್ನು ಮುಂದುವರಿಸುವುದು ಮತ್ತು ಸಂಪೂರ್ಣ ಸರ್ಕಾರದ ದೃಷ್ಟಿಕೋನವನ್ನು ಉತ್ತೇಜಿಸುವುದು ಕೌಶಲ್ಯ ಮತ್ತು ಉದ್ಯೋಗ ಯೋಜನೆಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಇದು ಕೈಗಾರಿಕಾ ನೇತೃತ್ವದ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ವೇದಿಕೆಯನ್ನು ಸೃಷ್ಟಿಸಬಹುದು. ಉದ್ಯೋಗಕ್ಕೆ ಸಿದ್ಧ ಪ್ರತಿಭೆಯನ್ನು ರೂಪಿಸುವುದು ಮತ್ತು ಕೌಶಲ್ಯ-ಕೈಗಾರಿಕೆ ಸಂಪರ್ಕವನ್ನು ಬಲಪಡಿಸುವುದರಲ್ಲಿ ಇದು ಪ್ರಮುಖವಾಗಿದೆ.


(रिलीज़ आईडी: 2220036) आगंतुक पटल : 9
इस विज्ञप्ति को इन भाषाओं में पढ़ें: English , हिन्दी , Marathi , Gujarati , Malayalam