ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಗೀತೆ ʻವಂದೇ ಮಾತರಂʼನ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ವರ್ಷವಿಡೀ ನಡೆಯಲಿರುವ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಭಾರತ, ಭಾರತ ಮಾತೆ, ಭಾರತದ ಅನಂತ ಕಲ್ಪನೆಯು ʻವಂದೇ ಮಾತರಂʼನ ಮೂಲತತ್ವವಾಗಿದೆ: ಪ್ರಧಾನಮಂತ್ರಿ
ಭಾರತವು ಸ್ವತಂತ್ರವಾಗಲಿದೆ, ಭಾರತ ಮಾತೆಯು ತನ್ನ ಕೈಗಳಿಂದ ಬಂಧನದ ಸರಪಳಿಗಳನ್ನು ತುಂಡರಿಸುತ್ತಾಳೆ ಮತ್ತು ಭಾರತ ಮಾತೆಯ ಮಕ್ಕಳು ಅವರ ಭವಿಷ್ಯಕ್ಕೆ ಅವರೇ ವಾಸ್ತುಶಿಲ್ಪಿಗಳಾಗುತ್ತಾರೆ ಎಂಬ ಸಾಮೂಹಿಕ ಸಂಕಲ್ಪದ ಘೋಷಣೆಯಾಗಿ ವಸಾಹತುಶಾಹಿ ಯುಗದಲ್ಲಿ ʻವಂದೇ ಮಾತರಂʼ ಹೊರಹೊಮ್ಮಿತು: ಪ್ರಧಾನಮಂತ್ರಿ
ʻವಂದೇ ಮಾತರಂʼ ಭಾರತದ ಸ್ವಾತಂತ್ರ್ಯ ಹೋರಾಟದ ಧ್ವನಿಯಾಯಿತು, ಪ್ರತಿಯೊಬ್ಬ ಕ್ರಾಂತಿಕಾರಿಯ ತುಟಿಗಳಲ್ಲಿ ಪ್ರತಿಧ್ವನಿಸುವ ಮಂತ್ರವಾಯಿತು, ಪ್ರತಿಯೊಬ್ಬ ಭಾರತೀಯನು ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಧ್ವನಿಯಾಯಿತು: ಪ್ರಧಾನಮಂತ್ರಿ
ʻವಂದೇ ಮಾತರಂʼ, ಸ್ವಾತಂತ್ರ್ಯ ಹೋರಾಟದ ಹುತಾತ್ಮರ ಗೀತೆಯಾಗಿದ್ದರೂ, ಕಾಲಾತೀತ ಸ್ಫೂರ್ತಿಯಾಗಿಯೂ ಕಾರ್ಯನಿರ್ವಹಿಸುತ್ತದೆ, ಇದು ನಮ್ಮ ಸ್ವಾತಂತ್ರ್ಯವನ್ನು ಗಳಿಸಿದ್ದು ಹೇಗೆ ಎಂಬುದನ್ನು ಮಾತ್ರವಲ್ಲದೆ, ನಾವು ಅದನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ನೆನಪಿಸುತ್ತದೆ: ಪ್ರಧಾನಮಂತ್ರಿ
ರಾಷ್ಟ್ರಧ್ವಜವು ಎಲ್ಲೇ ಹಾರಿದರೂ ನಮ್ಮ ಹೃದಯದೊಳಗಿಂದ ಸಹಜವಾಗಿ - ʻಭಾರತ್ ಮಾತಾ ಕೀ ಜೈʼ! ʻವಂದೇ ಮಾತರಂʼ! ಪದಗಳು ಅಪ್ರಯತ್ನವಾಗಿ ಹೊರಹೊಮ್ಮುತ್ತವೆ: ಪ್ರಧಾನಮಂತ್ರಿ
Posted On:
07 NOV 2025 12:17PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಇಂದು ರಾಷ್ಟ್ರೀಯ ಗೀತೆ ʻವಂದೇ ಮಾತರಂʼನ 150ನೇ ವರ್ಷಾಚರಣೆಯ ಸ್ಮರಣಾರ್ಥ ವರ್ಷವಿಡೀ ನಡೆಯಲಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ʻವಂದೇ ಮಾತರಂʼ ಕೇವಲ ಒಂದು ಪದವಲ್ಲ, ಅದೊಂದು ಮಂತ್ರ, ಅದೊಂದು ಶಕ್ತಿ, ಅದೊಂದು ಕನಸು ಮತ್ತು ಒಕ್ಕೊರಲ ಸಂಕಲ್ಪ ಎಂದು ಹೇಳಿದರು. ʻವಂದೇ ಮಾತರಂʼ ಭಾರತ ಮಾತೆಯ ಮೇಲಿನ ಭಕ್ತಿ ಮತ್ತು ಆಧ್ಯಾತ್ಮಿಕ ಸಮರ್ಪಣೆ ಸಾಕಾರರೂಪ ಎಂದು ಅವರು ಒತ್ತಿ ಹೇಳಿದರು. ʻವಂದೇ ಮಾತರಂʼ ಎಂಬ ಒಂದೇ ಒಂದು ಪದವು ನಮ್ಮನ್ನು ನಮ್ಮ ಇತಿಹಾಸದೊಂದಿಗೆ ಬೆಸೆಯುತ್ತದೆ, ನಮ್ಮ ವರ್ತಮಾನಕ್ಕೆ ಆತ್ಮವಿಶ್ವಾಸವನ್ನು ತುಂಬುತ್ತದೆ. ಜೊತೆಗೆ, ಈಡೇರಸಿಕೊಳ್ಳಲಾಗದಂತಹ ಯಾವುದೇ ಸಂಕಲ್ಪವಿಲ್ಲ ಮತ್ತು ಸಾಧಿಸಲಾಗದಂತಹ ಗುರಿ ಯಾವುದೂ ಇಲ್ಲ ಎಂದು ನಂಬುವ ಧೈಯವನ್ನು ನಮ್ಮಲ್ಲಿ ನೆಲೆಗೊಳಿಸುವ ಮೂಲಕ ನಮ್ಮ ಭವಿಷ್ಯಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ʻವಂದೇ ಮಾತರಂʼನ ಸಾಮೂಹಿಕ ಗಾಯನವು ಅಭಿವ್ಯಕ್ತಿಯನ್ನು ಮೀರಿದ ಭವ್ಯ ಅನುಭವ ಎಂದು ಶ್ರೀ ಮೋದಿ ಬಣ್ಣಿಸಿದರು. ಧ್ವನಿಗಳು ಅನೇಕವಾದರೂ ಒಂದೇ ಲಯ, ಒಂದೇ ಸ್ವರ, ಮತ್ತು ಒಂದೇ ರೋಮಾಂಚನದ ಮೂಲಕ ತಡೆರಹಿತ ಹರಿವು ʻವಂದೇಮಾತರಂʼ ಗಾಯನದಲ್ಲಿ ಹೊರಹೊಮ್ಮುತ್ತದೆ ಎಂದು ಹೇಳಿದರು. ಹೃದಯದಲ್ಲಿ ಶಕ್ತಿ ತುಂಬಿದ ಸೌಹಾರ್ದತೆಯ ಅಲೆಗಳು ಮತ್ತು ಅನುರಣನಗಳ ಬಗ್ಗೆ ಅವರು ಮಾತನಾಡಿದರು. ರಾಷ್ಟ್ರವು ʻವಂದೇ ಮಾತರಂʼನ 150ನೇ ವರ್ಷವನ್ನು ಆಚರಿಸುತ್ತಿರುವುದರಿಂದ ನವೆಂಬರ್ 7 ಒಂದು ಐತಿಹಾಸಿಕ ದಿನವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಪವಿತ್ರ ಸಂದರ್ಭವು ನಮ್ಮ ನಾಗರಿಕರಿಗೆ ಹೊಸ ಸ್ಫೂರ್ತಿಯನ್ನು ನೀಡುತ್ತದೆ ಮತ್ತು ಹೊಸ ಶಕ್ತಿಯನ್ನು ತುಂಬುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇತಿಹಾಸದ ಪುಟಗಳಲ್ಲಿ ಈ ದಿನವನ್ನು ಗುರುತಿಸಲು, ʻವಂದೇ ಮಾತರಂʼಗೆ ಸಮರ್ಪಿತವಾದ ವಿಶೇಷ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಭಾರತ ಮಾತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಭಾರತದ ಎಲ್ಲಾ ಕೆಚ್ಚೆದೆಯ ವೀರರು ಮತ್ತು ದಿಗ್ಗಜರಿಗೆ ಗೌರವ ನಮನ ಸಲ್ಲಿಸಿದ ಶ್ರೀ ಮೋದಿ ಅವರು, ಉಪಸ್ಥಿತರಿದ್ದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ʻವಂದೇ ಮಾತರಂʼ ಗೀತೆ 150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಪ್ರಧಾನಮಂತ್ರಿ ಶುಭಾಶಯಗಳನ್ನು ತಿಳಿಸಿದರು.
ಪ್ರತಿಯೊಂದು ಗೀತೆ ಮತ್ತು ಪ್ರತಿಯೊಂದು ಕವಿತೆಯು ಆಳವಾದ ಭಾವನೆ ಮತ್ತು ಸಂದೇಶವನ್ನು ಹೊಂದಿರುತ್ತದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ʻವಂದೇ ಮಾತರಂʼ ಮೂಲ ತತ್ವವೇನು? ಎಂದು ಪ್ರಶ್ನಿಸಿದರು. ಭಾರತದ ಚಿರಂತನ ಕಲ್ಪನೆಯಾದ ʻಭಾರತಮಾತೆʼ - ʻಭಾರತಿʼಯೇ ವಂದೇಮಾತರಂ ಗೀತೆಯ ಮೂಲ ತತ್ವ ಎಂದು ಅವರು ಹೇಳಿದರು. ಈ ಕಲ್ಪನೆಯು ಮಾನವ ನಾಗರಿಕತೆಯ ಉದಯದಿಂದಲೂ ರೂಪುಗೊಳ್ಳಲು ಪ್ರಾರಂಭಿಸಿತು, ಪ್ರತಿ ಯುಗವನ್ನು ಒಂದು ಅಧ್ಯಾಯವಾಗಿ ಓದಿತು; ವಿವಿಧ ರಾಷ್ಟ್ರಗಳ ಉದಯ, ವಿವಿಧ ಶಕ್ತಿಗಳ ಉದಯ, ಹೊಸ ನಾಗರಿಕತೆಗಳ ವಿಕಸನ, ಶೂನ್ಯದಿಂದ ಶ್ರೇಷ್ಠತೆಯತ್ತ ಅವುಗಳ ಪ್ರಯಾಣ ಮತ್ತು ಅಂತಿಮವಾಗಿ ಶೂನ್ಯಕ್ಕೆ ಅವುಗಳ ನಶ್ವರತೆಗೆ ಸಾಕ್ಷಿಯಾಗಿದೆ ಎಂದು ಅವರು ವಿವರಿಸಿದರು. ಚರಿತ್ರೆಯ ರಚನೆ ಮತ್ತು ಮರುರಚನೆ, ಬದಲಾಗುತ್ತಿರುವ ಪ್ರಪಂಚದ ಭೌಗೋಳಿಕತೆಯನ್ನು ಭಾರತ ಗಮನಿಸಿದೆ ಎಂದು ಅವರು ಹೇಳಿದರು. ಈ ಅನಂತ ಮಾನವ ಪ್ರಯಾಣದಿಂದ, ಭಾರತವು ಕಲಿತಿದೆ, ಹೊಸ ತೀರ್ಮಾನಗಳನ್ನು ಕೈಗೊಂಡಿದೆ ಮತ್ತು ಅವುಗಳನ್ನು ಆಧರಿಸಿ, ಅದರ ನಾಗರಿಕತೆಯ ಮೌಲ್ಯಗಳು ಮತ್ತು ಆದರ್ಶಗಳನ್ನು ರೂಪಿಸಿದೆ, ವಿಶಿಷ್ಟ ಸಾಂಸ್ಕೃತಿಕ ಅಸ್ಮಿತೆಯನ್ನು ರೂಪಿಸಿದೆ. ಭಾರತವು ಶಕ್ತಿ ಮತ್ತು ನೈತಿಕತೆಯ ನಡುವಿನ ಸಮತೋಲನವನ್ನು ಅರ್ಥಮಾಡಿಕೊಂಡಿದೆ ಮತ್ತು ಆ ಮೂಲಕ ಶುದ್ಧ ಚಿನ್ನದಂತೆ ಸಂಸ್ಕರಿಸಿದ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಭಾರತದ ಪರಿಕಲ್ಪನೆ ಮತ್ತು ಅದರ ಹಿಂದಿನ ತಾತ್ವಿಕ ಶಕ್ತಿಯು ಜಾಗತಿಕ ಶಕ್ತಿಗಳ ಏಳಿಗೆ ಮತ್ತು ಪತನಕ್ಕಿಂತ ಭಿನ್ನವಾಗಿದೆ. ಇದು ಸ್ವತಂತ್ರ ಅಸ್ತಿತ್ವದ ವಿಶಿಷ್ಟ ಅರ್ಥದಲ್ಲಿ ಬೇರೂರಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ಪ್ರಜ್ಞೆಯನ್ನು ಲಿಖಿತ ಮತ್ತು ಲಯಬದ್ಧ ರೂಪದಲ್ಲಿ ವ್ಯಕ್ತಪಡಿಸಿದಾಗ, ಅದು ʻವಂದೇ ಮಾತರಂʼನಂತಹ ಸೃಷ್ಟಿಗೆ ಕಾರಣವಾಯಿತು ಎಂದು ಹೇಳಿದರು. "ಹಾಗಾಗಿಯೇ, ವಸಾಹತುಶಾಹಿ ಯುಗದಲ್ಲಿ, ʻವಂದೇ ಮಾತರಂʼ ಗೀತೆಯು ಭಾರತವು ಸ್ವತಂತ್ರವಾಗುತ್ತದೆ, ಭಾರತ ಮಾತೆಯು ತನ್ನ ಕೈಗಳಿಂದ ಬಂಧನದ ಸರಪಳಿಗಳನ್ನು ತುಂಡರಿಸುತ್ತಾಳೆ ಮತ್ತು ಭಾರತ ಮಾತೆಯ ಮಕ್ಕಳು ಅವರ ಹಣೆಬರಹಕ್ಕೆ ಅವರೇ ವಾಸ್ತುಶಿಲ್ಪಿಗಳಾಗುತ್ತಾರೆ ಎಂಬ ಸಾಮೂಹಿಕ ಸಂಕಲ್ಪದ ಘೋಷಣೆಯಾಗಿ ಹೊರಹೊಮ್ಮಿತು," ಎಂದು ಶ್ರೀ ಮೋದಿ ಹೇಳಿದರು.
ಬಂಕಿಮಚಂದ್ರ ಅವರ ʻಆನಂದಮಠʼ ಕೇವಲ ಕಾದಂಬರಿಯಲ್ಲ - ಅದು ಸ್ವತಂತ್ರ ಭಾರತದ ಕನಸು ಎಂಬ ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಮಾತುಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ʻಆನಂದಮಠದʼದಲ್ಲಿನ ʻವಂದೇಮಾತರಂʼನ ಆಳವಾದ ಮಹತ್ವವನ್ನು ಒತ್ತಿ ಹೇಳಿದರು. ಬಂಕಿಮ್ ಬಾಬು ಅವರ ರಚನೆಯಲ್ಲಿನ ಪ್ರತಿಯೊಂದು ಸಾಲು, ಪ್ರತಿ ಪದ ಮತ್ತು ಪ್ರತಿಯೊಂದು ಭಾವನೆಯು ಆಳವಾದ ಅರ್ಥವನ್ನು ಹೊಂದಿದೆ ಎಂದು ಪ್ರತಿಪಾದಿಸಿದರು. ಈ ಗೀತೆಯನ್ನು ವಸಾಹತುಶಾಹಿ ಯುಗದಲ್ಲಿ ಸಂಯೋಜಿಸಲಾಗಿದ್ದರೂ, ಅದರಲ್ಲಿ ಬರುವ ಪದಗಳು ಶತಮಾನಗಳ ಕಾಲದ ಗುಲಾಮಗಿರಿಯ ಛಾಯೆಗಷ್ಟೇ ಎಂದಿಗೂ ಸೀಮಿತವಾಗಿಲ್ಲ ಎಂದು ಶ್ರೀ ಮೋದಿ ಹೇಳಿದರು. ಇದು ದಾಸ್ಯದ ನೆನಪುಗಳಿಂದ ಮುಕ್ತವಾಗಿದೆ. ಹಾಗಾಗಿಯೇ ʻವಂದೇ ಮಾತರಂʼ ಪ್ರತಿ ಯುಗ ಮತ್ತು ಪ್ರತಿ ಶಕೆಯಲ್ಲೂ ಪ್ರಸ್ತುತವಾಗಿದೆ ಎಂದರು. ಗೀತೆಯ ಮೊದಲ ಸಾಲಾದ - "ಸುಜಲಾಂ ಸುಫಲಂ ಮಲಯಜ ಶೀತಲಂ ಸಸ್ಯಶ್ಯಾಮಲಂ ಮಾತರಂ" ಉಲ್ಲೇಖಿಸಿದ ಶ್ರೀ ಮೋದಿ ಅವರು ಇದು ಪ್ರಕೃತಿಯ ದೈವಿಕ ಆಶೀರ್ವಾದದಿಂದ ಅಲಂಕರಿಸಲ್ಪಟ್ಟ ನಮ್ಮ ತಾಯ್ನಾಡಿಗೆ ಗೌರವ ಎಂದು ವ್ಯಾಖ್ಯಾನಿಸಿದರು.
ಇದು ಸಾವಿರಾರು ವರ್ಷಗಳಿಂದ ಭಾರತದ ಅಸ್ಮಿತೆಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು ನದಿಗಳು, ಪರ್ವತಗಳು, ಕಾಡುಗಳು, ಮರಗಳು ಮತ್ತು ಫಲವತ್ತಾದ ಮಣ್ಣು ಯಾವಾಗಲೂ ಸಮೃದ್ಧಿಯನ್ನು ನೀಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು. ಶತಮಾನಗಳಿಂದ ಜಗತ್ತು ಭಾರತದ ಸಮೃದ್ಧಿಯ ಕಥೆಗಳನ್ನು ಕೇಳುತ್ತಿತ್ತು. ಕೆಲವೇ ಶತಮಾನಗಳ ಹಿಂದೆ, ಭಾರತವು ಜಾಗತಿಕ ʻಜಿಡಿಪಿʼಯಲ್ಲಿ ಸುಮಾರು ನಾಲ್ಕನೇ ಒಂದು ಭಾಗವನ್ನು ಹೊಂದಿತ್ತು. ಆದರೆ, ಬಂಕಿಮ್ ಬಾಬು ಅವರು ʻವಂದೇ ಮಾತರಂʼ ರಚಿಸುವ ವೇಳೆಗೆ, ಭಾರತವು ಅಂತಹ ಸುವರ್ಣ ಯುಗದಿಂದ ದೂರ ಸರಿದಿತ್ತು. ವಿದೇಶೀ ಆಕ್ರಮಣಗಳು, ಲೂಟಿ ಮತ್ತು ಶೋಷಣೆಯ ವಸಾಹತುಶಾಹಿ ನೀತಿಗಳು ದೇಶವನ್ನು ಬಡತನ ಮತ್ತು ಹಸಿವಿನಿಂದ ನರಳುವಂತೆ ಮಾಡಿದ್ದವು. ಆದರೂ, ಬಂಕಿಮ್ ಬಾಬು ಅವರು ಸಮೃದ್ಧ ಭಾರತದ ದೃಷ್ಟಿಕೋನವನ್ನು ಕಲ್ಪಿಸಿಕೊಂಡರು. ಸವಾಲುಗಳು ಎಷ್ಟೇ ದೊಡ್ಡದಿದ್ದರೂ, ಭಾರತವು ತನ್ನ ಸುವರ್ಣಯುಗವನ್ನು ಪುನರುಜ್ಜೀವನಗೊಳಿಸಬಹುದು ಎಂಬ ನಂಬಿಕೆಯಿಂದ ಇದು ಪ್ರೇರಿತವಾಗಿತ್ತು. ಹೀಗಾಗಿ, ಅವರು ʻವಂದೇ ಮಾತರಂʼ ಎಂಬ ಕಹಳೆಯನ್ನು ಮೊಳಗಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು.
ವಸಾಹತುಶಾಹಿ ಯುಗದಲ್ಲಿ, ಬ್ರಿಟಿಷರು ಭಾರತವನ್ನು ಕೀಳು ಮತ್ತು ಹಿಂದುಳಿದ ದೇಶ ಎಂದು ಬಿಂಬಿಸುವ ಮೂಲಕ ತಮ್ಮ ಆಡಳಿತವನ್ನು ಸಮರ್ಥಿಸಲು ಪ್ರಯತ್ನಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು. ʻವಂದೇ ಮಾತರಂʼನ ಮೊದಲ ಸಾಲಿನಲ್ಲಿಯೇ ಈ ಸುಳ್ಳು ಪ್ರಚಾರವನ್ನು ಶಕ್ತಿಯುತವಾಗಿ ಹತ್ತಿಕ್ಕಲಾಯಿತು ಎಂದು ಅವರು ಒತ್ತಿ ಹೇಳಿದರು. ಆದ್ದರಿಂದ, ʻವಂದೇ ಮಾತರಂʼ ಕೇವಲ ಸ್ವಾತಂತ್ರ್ಯದ ಗೀತೆಯಾಗಿರಲಿಲ್ಲ - ಅದು ಸ್ವತಂತ್ರ ಭಾರತ ಹೇಗಿರಬಹುದು ಎಂಬ ದೃಷ್ಟಿಕೋನವನ್ನು ಲಕ್ಷಾಂತರ ಭಾರತೀಯರಿಗೆ ಪ್ರಸ್ತುತಪಡಿಸಿತು: ʻಸುಜಲಾಂ ಸುಫಲಾಂʼ ಭಾರತದ ಕನಸನ್ನು ಬಿತ್ತಿತ್ತು ಎಂದು ಪ್ರಧಾನಮಂತ್ರಿ ಹೇಳಿದರು.
ʻವಂದೇ ಮಾತರಂʼನ ಅಸಾಧಾರಣ ಪ್ರಯಾಣ ಮತ್ತು ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಈ ದಿನವು ಅವಕಾಶವನ್ನು ನೀಡುತ್ತದೆ ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. 1875ರಲ್ಲಿ ಬಂಕಿಮ್ ಬಾಬು ಅವರು ಬಂಗದರ್ಶನದಲ್ಲಿ ʻವಂದೇ ಮಾತರಂʼ ಪ್ರಕಟಿಸಿದಾಗ, ಕೆಲವರು ಕೇವಲ ಅದೊಂದು ಹಾಡು ಎಂದು ನಂಬಿದ್ದರು. ಆದರೆ ಶೀಘ್ರದಲ್ಲೇ, ʻವಂದೇ ಮಾತರಂʼ ಭಾರತದ ಸ್ವಾತಂತ್ರ್ಯ ಹೋರಾಟದ ಧ್ವನಿಯಾಯಿತು - ಪ್ರತಿಯೊಬ್ಬ ಕ್ರಾಂತಿಕಾರಿಯ ತುಟಿಯ ಮೇಲಿನ ಮಂತ್ರವಾಯಿತು, ಪ್ರತಿಯೊಬ್ಬ ಭಾರತೀಯನ ಭಾವನೆಗಳ ಅಭಿವ್ಯಕ್ತಿಯಾಯಿತು. ʻವಂದೇ ಮಾತರಂʼ ಇಲ್ಲದ ಸ್ವಾತಂತ್ರ್ಯ ಚಳವಳಿಯ ಯಾವುದೇ ಅಧ್ಯಾಯವೇ ಇಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. 1896ರಲ್ಲಿ, ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರು ಕಲ್ಕತ್ತಾ ಅಧಿವೇಶನದಲ್ಲಿ ʻವಂದೇ ಮಾತರಂʼ ಹಾಡಿದರು. 1905ರಲ್ಲಿ ಬಂಗಾಳ ವಿಭಜನೆ ಮೂಲಕ ರಾಷ್ಟ್ರವನ್ನು ಒಡೆಯಲು ಬ್ರಿಟಿಷರು ಅಪಾಯಕಾರಿ ಪ್ರಯೋಗ ಮಾಡಿದಾಗ - ʻವಂದೇ ಮಾತರಂʼ ಅಂತಹ ಷಡ್ಯಂತ್ರಗಳ ವಿರುದ್ಧ ಬಂಡೆಯಂತೆ ನಿಂತಿತು. ಬಂಗಾಳ ವಿಭಜನೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಬೀದಿಗಳಲ್ಲಿ ಒಕ್ಕೊರಲಿನ ʻವಂದೇ ಮಾತರಂʼ ದನಿ ಪ್ರತಿಧ್ವನಿಸಿತು ಪ್ರಧಾನಮಂತ್ರಿ ಸ್ಮರಿಸಿದರು.
ʻಬಾರಿಸಾಲ್ʼ ಅಧಿವೇಶನದ ಸಮಯದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದಾಗಲೂ, ಅವರ ತುಟಿಯ ಮೇಲಿನ ʻವಂದೇ ಮಾತರಂʼ ಎಂಬ ಪದಗಳು ಉಳಿದಿದ್ದವು ಎಂದು ಸ್ಮರಿಸಿದ ಶ್ರೀ ಮೋದಿ, ವಿದೇಶದಿಂದ ಕೆಲಸ ಮಾಡುತ್ತಿದ್ದ ವೀರ್ ಸಾವರ್ಕರ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರು ಪರಸ್ಪರ ವಂದೇ ಮಾತರಂ ಮೂಲಕ ಶುಭಾಶಯ ಕೋರಿದರು ಎಂದು ಒತ್ತಿ ಹೇಳಿದರು. ಅನೇಕ ಕ್ರಾಂತಿಕಾರಿಗಳು ನೇಣುಗಂಬದ ಬಳಿ ನಿಂತಾಗಲೂ ʻವಂದೇ ಮಾತರಂʼ ಉಚ್ಚರಿಸಿದರು. ವೈವಿಧ್ಯಮಯ ಪ್ರದೇಶಗಳು ಮತ್ತು ಭಾಷೆಗಳನ್ನು ಹೊಂದಿರುವ ವಿಶಾಲ ರಾಷ್ಟ್ರದಲ್ಲಿ ಇಂತಹ ಅಸಂಖ್ಯಾತ ಘಟನೆಗಳು, ಇತಿಹಾಸದಲ್ಲಿ ಹಲವಾರು ದಿನಾಂಕಗಳನ್ನು ಕಾಣಬಹುದು. ಅಲ್ಲಿ ಒಂದು ಘೋಷಣೆ, ಒಂದು ಸಂಕಲ್ಪ, ಒಂದು ಗೀತೆ ಎಲ್ಲರ ದನಿಯಾಗಿ ಪ್ರತಿಧ್ವನಿಸಿತು – ಅದೇ ʻವಂದೇ ಮಾತರಂʼ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ʻವಂದೇ ಮಾತರಂʼ ಅವಿಭಜಿತ ಭಾರತದ ಚಿತ್ರಣವನ್ನು ನಮ್ಮ ಮುಂದೆ ಪ್ರಸ್ತುತಪಡಿಸುತ್ತದೆ ಎಂಬ ಮಹಾತ್ಮ ಗಾಂಧಿ ಅವರ 1927ರ ಹೇಳಿಕೆಯನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಶ್ರೀ ಅರಬಿಂದೋ ಅವರು ʻವಂದೇ ಮಾತರಂʼ ಕೇವಲ ಒಂದು ಗೀತೆ ಮಾತ್ರವಲ್ಲ, ಅದು ಆಂತರಿಕ ಶಕ್ತಿಯನ್ನು ಜಾಗೃತಗೊಳಿಸುವ ಮಂತ್ರ ಎಂದು ಬಣ್ಣಿಸಿದ್ದಾರೆ ಎಂದು ಪ್ರಧಾನಮಂತ್ರಿ ಸ್ಮರಿಸಿದರು. ಭಿಕಾಜಿ ಕಾಮಾ ಅವರು ವಿನ್ಯಾಸಗೊಳಿಸಿದ ಧ್ವಜವು ಅದರ ಮಧ್ಯದಲ್ಲಿ ʻವಂದೇ ಮಾತರಂʼ ಎಂಬ ಪದಗಳನ್ನು ಹೊಂದಿತ್ತು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
ಭಾರತದ ರಾಷ್ಟ್ರಧ್ವಜವು ಕಾಲಾನಂತರದಲ್ಲಿ, ತನ್ನ ಆರಂಭಿಕ ರೂಪಗಳಿಂದ ಹಿಡಿದು ಇಂದಿನ ತ್ರಿವರ್ಣ ಧ್ವಜದವರೆಗೆ ವಿಕಸನಗೊಂಡಿದ್ದರೂ, ಅದರ ವಿಚಾರದಲ್ಲಿ ಒಂದು ವಿಷಯ ಮಾತ್ರ ಬದಲಾಗದೆ ಉಳಿದಿದೆ – ತ್ರಿವರ್ಣ ಧ್ವಜವನ್ನು ಹಾರಿಸಿದಾಗಲೆಲ್ಲಾ, ಪ್ರತಿಯೊಬ್ಬ ಭಾರತೀಯನ ಹೃದಯದಿಂದ ಸಹಜವಾಗಿ ಹೊರಹೊಮ್ಮುವ ಪದಗಳೆಂದರೆ ಅವು ʻಭಾರತ್ ಮಾತಾ ಕಿ ಜೈʼ! ಮತ್ತು ʻವಂದೇ ಮಾತರಂʼ! ಎಂದು ಪ್ರಧಾನಮಂತ್ರಿ ಹೇಳಿದರು. ದೇಶವು ರಾಷ್ಟ್ರೀಯ ಗೀತೆ ʻವಂದೇ ಮಾತರಂʼನ 150ನೇ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಇದು ದೇಶದ ಮಹಾನ್ ವೀರರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಒತ್ತಿ ಹೇಳಿದರು. ʻವಂದೇ ಮಾತರಂʼ ಮೊಳಗಿಸುತ್ತಲೇ ನೇಣುಗಂಬಕ್ಕೇರಿದ ಅಸಂಖ್ಯಾತ ಹುತಾತ್ಮರಿಗೆ ಸಲ್ಲಿಸುವ ಗೌರವ ಇದಾಗಿದೆ, ಮೈಮೇಲೆ ಚಾಟಿ ಏಟು ಬೀಳುತ್ತಿದ್ದರೂ ʻವಂದೇ ಮಾತರಂʼ ಪಠಿಸುವುದನ್ನು ನಿಲ್ಲಿಸದ ವೀರ ಕಲಿಗಳಿಗೆ, ಮಂಜುಗಡ್ಡೆಯ ಮೇಲೆ ನಿಂತಿದ್ದರೂ ದೃಢ ನಿಶ್ಚಯದಿಂದ ʻವಂದೇ ಮಾತರಂʼ ಮಂತ್ರವನ್ನು ಪಠಿಸುವವರಿಗೆ ಸಲ್ಲಿಸುವ ಗೌರವ ಇದಾಗಿದೆ,ʼʼ ಎಂದು ಶ್ರೀ ಮೋದಿ ಹೇಳಿದರು.
ಇತಿಹಾಸದ ಪುಟಗಳಲ್ಲಿ ಎಲ್ಲಿಯೂ ದಾಖಲಾಗದ ಆದರೆ, ʻವಂದೇ ಮಾತರಂʼ ಪಠಿಸುತ್ತಲೇ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಪ್ರತಿಯೊಬ್ಬ ಪರಿಚಿತ, ಅಜ್ಞಾತ ಮತ್ತು ಎಲೆಮರೆಯ ಕಾಯಿಯಂತಹ ವ್ಯಕ್ತಿಗಳಿಗೆ ಇಂದು ಎಲ್ಲಾ 140 ಕೋಟಿ ಭಾರತೀಯರು ಗೌರವ ಸಲ್ಲಿಸುತ್ತಾರೆ ಎಂದು ಪ್ರಧಾನಮಂತ್ರಿ ಘೋಷಿಸಿದರು.
ಈ ಭೂಮಿ ನಮ್ಮ ತಾಯಿ, ಈ ರಾಷ್ಟ್ರ ನಮ್ಮ ತಾಯಿ ಮತ್ತು ನಾವು ಅವಳ ಮಕ್ಕಳು ಎಂದು ದೃಢೀಕರಿಸುವ ವೈದಿಕ ಶ್ಲೋಕವನ್ನು ಉಲ್ಲೇಖಿಸಿದ ಶ್ರೀ ಮೋದಿ, ವೈದಿಕ ಯುಗದಿಂದಲೂ ಭಾರತದ ಜನರು ಮಾತೃ ರೂಪದಲ್ಲಿ ರಾಷ್ಟ್ರವನ್ನು ಪೂಜಿಸುತ್ತಿದ್ದಾರೆ ಎಂದು ಹೇಳಿದರು. ಈ ವೈದಿಕ ಚಿಂತನೆಯು ʻವಂದೇ ಮಾತರಂʼ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಪ್ರಜ್ಞೆಯನ್ನು ತುಂಬಿತು ಎಂದು ಅವರು ಒತ್ತಿ ಹೇಳಿದರು.
ರಾಷ್ಟ್ರವನ್ನು ಕೇವಲ ಭೌಗೋಳಿಕ ರಾಜಕೀಯ ಘಟಕವಾಗಿ ನೋಡುವವರಿಗೆ, ರಾಷ್ಟ್ರವನ್ನು ತಾಯಿ ಎಂದು ಪರಿಗಣಿಸುವ ಕಲ್ಪನೆಯು ಆಶ್ಚರ್ಯಕರವಾಗಿ ಕಾಣಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ಭಾರತ ವಿಭಿನ್ನವಾಗಿದೆ. ಭಾರತದಲ್ಲಿ ಜನ್ಮ ನೀಡುವವಳು, ಪೋಷಿಸುವವಳು ಮತ್ತು ಅವಳ ಮಕ್ಕಳು ಅಪಾಯದಲ್ಲಿದ್ದಾಗ ದುಷ್ಟರನ್ನು ನಾಶಪಡಿಸುವವಳು ತಾಯಿಯೇ ಎಂದು ಅವರು ವಿವರಿಸಿದರು. ʻವಂದೇ ಮಾತರಂʼನ ಸಾಲುಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಭಾರತ ಮಾತೆ ಅತ್ಯಂತ ಶಕ್ತಿಯುತಳು, ಪ್ರತಿಕೂಲ ಪರಿಸ್ಥಿತಿಯಲ್ಲಿ ಅವಳು ನಮಗೆ ಮಾರ್ಗದರ್ಶನ ನೀಡುತ್ತಾಳೆ ಮತ್ತು ಶತ್ರುಗಳನ್ನು ಬಗ್ಗು ಬಡಿಯುತ್ತಾಳೆ ಎಂದು ಒತ್ತಿ ಹೇಳಿದರು. ರಾಷ್ಟ್ರವೆಂದರೆ ತಾಯಿ ಮತ್ತು ತಾಯಿ ಎಂದರೆ ಅವಳು ದೈವಿಕ ಶಕ್ತಿಯ ಮೂರ್ತರೂಪ ಎಂಬ ಭಾವನೆಯು ಸ್ವಾತಂತ್ರ್ಯ ಚಳವಳಿಗೆ ಕಾರಣವಾಯಿತು.ಇದು ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಸಮಾನವಾಗಿ ಒಟ್ಟುಗೂಡಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ಈ ದೃಷ್ಟಿಕೋನವೇ ನಾರಿ ಶಕ್ತಿಯ ನೇತೃತ್ವದಲ್ಲಿ ರಾಷ್ಟ್ರ ನಿರ್ಮಾಣದ ಕನಸು ಕಾಣಲು ಭಾರತಕ್ಕೆ ಅನುವು ಮಾಡಿಕೊಟ್ಟಿತು ಎಂದು ಪ್ರಧಾನಮಂತ್ರಿ ಹೇಳಿದರು.
ʻವಂದೇ ಮಾತರಂʼ, ಸ್ವಾತಂತ್ರ್ಯದ ಹುತಾತ್ಮರ ಗೀತೆಯಾಗಿದ್ದರೂ, ಆ ಸ್ವಾತಂತ್ರ್ಯವನ್ನು ರಕ್ಷಿಸಲು ಅದು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು. ಬಂಕಿಮ್ ಬಾಬು ಅವರ ಮೂಲ ರಚನೆಯ ಸಾಲುಗಳನ್ನು ಉಲ್ಲೇಖಿಸಿದ ಅವರು, ಭಾರತ ಮಾತೆಯು ಜ್ಞಾನದಾತ ಸರಸ್ವತಿ; ಸಂಪತ್ತಿನ ಅಧಿದೇವತೆ ಲಕ್ಷ್ಮಿ ಹಾಗೂ ಶಸ್ತ್ರ ಮತ್ತು ಶಕ್ತಿದಾತೆ ದುರ್ಗಾಮಾತೆಯ ಸಾಕಾರ ರೂಪವಾಗಿದ್ದಾಳೆ ಎಂದು ಎತ್ತಿ ತೋರಿದರು. ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ; ಕಲಿಕೆ ಮತ್ತು ನಾವೀನ್ಯತೆಯ ಶಕ್ತಿಯಿಂದ ಹೊಂದಿರುವ; ಮತ್ತು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಸ್ವಾವಲಂಬಿಯಾದ ರಾಷ್ಟ್ರವನ್ನು ನಿರ್ಮಿಸುವುದು ನಮ್ಮ ದೃಷ್ಟಿಕೋನವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ, ಭಾರತದ ನೈಜ ರೂಪದ ಉದಯಕ್ಕೆ ಜಗತ್ತು ಸಾಕ್ಷಿಯಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ಅಭೂತಪೂರ್ವ ಪ್ರಗತಿ ಮತ್ತು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತದ ಉನ್ನತಿಯನ್ನು ಎತ್ತಿ ತೋರಿದರು. ಶತ್ರುಗಳು ಭಯೋತ್ಪಾದನೆಯ ಮೂಲಕ ದೇಶದ ಭದ್ರತೆ ಮತ್ತು ಗೌರವಕ್ಕೆ ಧಕ್ಕೆ ತರುವ ಧೈರ್ಯ ಮಾಡಿದಲ್ಲಿ, ಮಾನವೀಯತೆಯ ಸೇವೆಯಲ್ಲಿ ʻಕಮಲಾʼ ಮತ್ತು ʻವಿಮಲಾʼಳ ಅವತಾರ ಹೊಂದಿರುವ ಅದೇ ʻನವ ಭಾರತʼವು, ಭಯೋತ್ಪಾದನೆಯನ್ನು ನಾಶಪಡಿಸಲು ಹೇಗೆ ದಶಾಸ್ತ್ರಗಳನ್ನು ಹೊಂದಿರುವ ದುರ್ಗೆಯ ಅವತಾರ ಎತ್ತಬಲ್ಲದು ಎಂಬುದನ್ನು ಜಗತ್ತು ನೋಡಿದೆ ಎಂದು ಮೋದಿ ಹೇಳಿದರು.
ʻವಂದೇ ಮಾತರಂʼಗೆ ಸಂಬಂಧಿಸಿದ ಮತ್ತೊಂದು ನಿರ್ಣಾಯಕ ಅಂಶದ ಕುರಿತು ಮಾತನಾಡಿದ ಶ್ರೀ ಮೋದಿ ಅವರು, ʻವಂದೇ ಮಾತರಂʼನ ಚೈತನ್ಯವು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇಡೀ ರಾಷ್ಟ್ರವನ್ನು ಬೆಳಗಿಸಿತು ಎಂದು ಹೇಳುವ ಮೂಲಕ ಆ ಗೀತೆಯ ಮಹತ್ವವನ್ನು ಒತ್ತಿ ಹೇಳಿದರು. ಆದಾಗ್ಯೂ, 1937ರಲ್ಲಿ, ʻವಂದೇ ಮಾತರಂʼನ ಪ್ರಮುಖ ಸಾಲುಗಳನ್ನು ತೆಗೆದುಹಾಕಲಾಯಿತು ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಗೀತೆಯು ಛಿದ್ರಗೊಂಡಿತ್ತು. ಈ ವಿಚ್ಛಿನ್ನತೆಯು ದೇಶದ ವಿಭಜನೆಯ ಬೀಜಗಳನ್ನು ಬಿತ್ತಿತು ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಈ ಮಹಾನ್ ರಾಷ್ಟ್ರೀಯ ಮಂತ್ರಕ್ಕೆ ಅನ್ಯಾಯ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಪ್ರಧಾನಮಂತ್ರಿ, ಇಂದಿನ ಪೀಳಿಗೆಯು ಈ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದು ಒತ್ತಿ ಹೇಳಿದರು. ಅದೇ ವಿಭಜನಕಾರಿ ಮನಸ್ಥಿತಿಯು ಇಂದಿಗೂ ದೇಶದ ಪಾಲಿಗೆ ಸವಾಲಾಗಿ ಉಳಿದಿದೆ ಎಂದು ಅವರು ಎಚ್ಚರಿಸಿದರು.
ನಾವು ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಬೇಕು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಇದನ್ನು ಸಾಧಿಸುವ ಶಕ್ತಿ ಭಾರತ ಮತ್ತು ಅದರ ಜನರಲ್ಲಿ ಅಡಗಿದೆ ಎಂದು ದೃಢವಾಗಿ ಹೇಳಿದರು. ಈ ಸಂಕಲ್ಪವನ್ನು ಸಾಕಾರಗೊಳಿಸಲು ಆತ್ಮ ವಿಶ್ವಾಸದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಈ ಪ್ರಯಾಣದಲ್ಲಿ, ನಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸುವವರು; ಅನುಮಾನ ಮತ್ತು ಹಿಂಜರಿಕೆಯನ್ನು ಬಿತ್ತಲು ಪ್ರಯತ್ನಿಸುವ ನಕಾರಾತ್ಮಕ ಮನಸ್ಥಿತಿಯವರನ್ನು ನಾವು ಎದುರಿಸಬೇಕಾಗಿದೆ ಎಂದು ಶ್ರೀ ಮೋದಿ ಎಚ್ಚರಿಕೆ ನೀಡಿದರು. ಅಂತಹ ಸಂದರ್ಭಗಳಲ್ಲಿ, ʻಆನಂದಮಠʼ ಕಾದಂಬರಿಯಲ್ಲಿ ಭಾವಾನಂದ್ ಪಾತ್ರವು ʻವಂದೇ ಮಾತರಂʼ ಹಾಡುವ ಪ್ರಸಂಗವನ್ನು ನೆನಪಿಸಿಕೊಳ್ಳುವಂತೆ ಅವರು ದೇಶದ ಜನರನ್ನು ಒತ್ತಾಯಿಸಿದರು. ಅಲ್ಲಿ ಭಾವಾನಂದ್ ʻವಂದೇಮಾತರಂʼ ಹಾಡಿದಾಗ ಮತ್ತೊಂದು ಪಾತ್ರವು ಏಕಮಾತ್ರ ವ್ಯಕ್ತಿಯಿಂದ ಏನು ಸಾಧಿಸಲು ಸಾಧ್ಯ ಎಂದು ಪ್ರಶ್ನಿಸುತ್ತದೆ. ಆಗ ʻವಂದೇ ಮಾತರಂʼನ ಸ್ಫೂರ್ತಿ ಉದ್ಭವಿಸುತ್ತದೆ - ಕೋಟ್ಯಂತರ ಮಕ್ಕಳು ಮತ್ತು ಕೋಟ್ಯಂತರ ಕೈಗಳನ್ನು ಹೊಂದಿರುವ ತಾಯಿ ಶಕ್ತಿಹೀನಳಾಗಲು ಹೇಗೆ ಸಾಧ್ಯ? ಇಂದು, ಭಾರತ ಮಾತೆಯು 140 ಕೋಟಿ ಮಕ್ಕಳನ್ನು ಮತ್ತು 280 ಕೋಟಿ ಕೈಗಳನ್ನು ಹೊಂದಿದ್ದಾಳೆ. ಅವರಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಯುವಕರೇ ಇದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ವಿಶ್ವದ ಅತಿದೊಡ್ಡ ಜನಸಂಖ್ಯಾ ಪ್ರಯೋಜನವನ್ನು ಹೊಂದಿದೆ, ಇದು ನಮ್ಮ ರಾಷ್ಟ್ರ ಮತ್ತು ಭಾರತ ಮಾತೆಯ ಶಕ್ತಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ಇಂದು ನಮಗೆ ನಿಜವಾಗಿಯೂ ಅಸಾಧ್ಯವಾದುದು ಯಾವುದಾದರೂ ಇದೆಯೇ? ʻವಂದೇ ಮಾತರಂʼನ ಮೂಲ ಕನಸನ್ನು ಈಡೇರಿಸುವುದನ್ನು ತಡೆಯಲು ಶಕ್ತಿಗಾದರೂ ಸಾಧ್ಯವೇ? ಎಂದು ಶ್ರೀ ಮೋದಿ ಪ್ರಶ್ನಿಸಿದರು.
ಇಂದು, ಆತ್ಮನಿರ್ಭರ ಭಾರತದ ದೃಷ್ಟಿಕೋನವು ಯಶಸ್ಸು ಕಾಣುತ್ತಿರುವಾಗ, ʻಮೇಕ್ ಇನ್ ಇಂಡಿಯಾʼದ ಸಂಕಲ್ಪದೊಂದಿಗೆ ರಾಷ್ಟ್ರವು ಮುನ್ನಡೆಯುತ್ತಿರುವಾಗ, ಮತ್ತು ನಾವು 2047ರ ವೇಳೆಗೆ ʻಅಭಿವೃದ್ಧಿ ಹೊಂದಿದ ಭಾರತʼವಾಗುವ ಗುರಿಯತ್ತ ಸ್ಥಿರವಾಗಿ ಸಾಗುತ್ತಿರುವಾಗ, ಈ ಅಭೂತಪೂರ್ವ ಯುಗದಲ್ಲಿ ಪ್ರತಿಯೊಂದು ಹೊಸ ಸಾಧನೆಯು ಸ್ವಯಂಪ್ರೇರಿತವಾದ ʻವಂದೇ ಮಾತರಂʼ ಘೋಷಣೆಯನ್ನು ಪ್ರಚೋದಿಸುತ್ತದೆ ಎಂದು ಶ್ರೀ ಮೋದಿ ಬಣ್ಣಿಸಿದರು. ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾದಾಗ, ನವ ಭಾರತದ ಪ್ರತಿಧ್ವನಿಯು ಬಾಹ್ಯಾಕಾಶದ ಮೂಲೆಗಳನ್ನು ತಲುಪಿದಾಗ, ಪ್ರತಿಯೊಬ್ಬ ನಾಗರಿಕರ ಹೆಮ್ಮೆಯಿಂದ ಹೇಳುವುದು - ವಂದೇ ಮಾತರಂ! ನಮ್ಮ ಹೆಣ್ಣುಮಕ್ಕಳು ಬಾಹ್ಯಾಕಾಶ ತಂತ್ರಜ್ಞಾನದಿಂದ ಕ್ರೀಡೆಯವರೆಗಿನ ಕ್ಷೇತ್ರಗಳಲ್ಲಿ ಉತ್ತುಂಗವನ್ನು ತಲುಪುವುದನ್ನು ನಾವು ನೋಡಿದಾಗ, ಅವರು ಯುದ್ಧ ವಿಮಾನಗಳನ್ನು ಹಾರಿಸುವುದನ್ನು ನಾವು ನೋಡಿದಾಗ, ಪ್ರತಿಯೊಬ್ಬ ಹೆಮ್ಮೆಯ ಭಾರತೀಯನಿಂದ ಹೊರಹೊಮ್ಮುವ ಘೋಷಣೆ - ʻವಂದೇ ಮಾತರಂʼ ಎಂದು ಪ್ರಧಾನಮಂತ್ರಿ ಹೇಳಿದರು.
ʻಸಮಾನ ಶ್ರೇಣಿ-ಸಮಾನ ಪಿಂಚಣಿʼ ವ್ಯವಸ್ಥೆ ಜಾರಿಗೆ ಬಂದು ಇಂದು 11 ವರ್ಷಗಳು ತುಂಬುತ್ತಿವೆ ಎಂದು ಹೇಳಿದ ಶ್ರೀ ಮೋದಿ ಅವರು, ನಮ್ಮ ಸಶಸ್ತ್ರ ಪಡೆಗಳು ಶತ್ರುವಿನ ದುಷ್ಟ ಉದ್ದೇಶಗಳನ್ನು ಹತ್ತಿಕ್ಕಿದಾಗ, ಭಯೋತ್ಪಾದನೆ, ನಕ್ಸಲಿಸಂ ಮತ್ತು ಮಾವೋವಾದಿ ಬಂಡಾಯವನ್ನು ನಿರ್ಣಾಯಕವಾಗಿ ಸೋಲಿಸಿದಾಗ, ನಮ್ಮ ಭದ್ರತಾ ಪಡೆಗಳು ಉದ್ಗರಿಸುರುವುದು - ʻವಂದೇ ಮಾತರಂʼ ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತ ಮಾತೆಯ ಮೇಲಿನ ಈ ಗೌರವದ ಮನೋಭಾವವು ʻಅಭಿವೃದ್ಧಿ ಹೊಂದಿದ ಭಾರತʼದ ಗುರಿಯತ್ತ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ʻವಂದೇ ಮಾತರಂʼ ಮಂತ್ರವು ಈ ಅಮೃತ ಕಾಲದ ಪ್ರಯಾಣದುದ್ದಕ್ಕೂ ಭಾರತ ಮಾತೆಯ ಅಸಂಖ್ಯಾತ ಮಕ್ಕಳನ್ನು ಸಬಲೀಕರಣಗೊಳಿಸುತ್ತದೆ ಮತ್ತು ಅವರಿಗೆ ಸ್ಫೂರ್ತಿ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ʻವಂದೇ ಮಾತರಂʼ 150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅವರು ಮತ್ತೊಮ್ಮೆ ಎಲ್ಲಾ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದರು.
ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ, ದೆಹಲಿಯ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಇಂದಿನ ಕಾರ್ಯಕ್ರಮವು 2025ರ ನವೆಂಬರ್ 7ರಿಂದ 2026ರ ನವೆಂಬರ್ 7ರವರೆಗೆ ಒಂದು ವರ್ಷವಿಡೀ ರಾಷ್ಟ್ರವ್ಯಾಪಿ ನಡೆಯುವ ʻವಂದೇ ಮಾತರಂʼ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಚಾಲನೆಯನ್ನು ಸಂಕೇತಿಸುತ್ತದೆ. ಇದು ಭಾರತದ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಹಾಗೂ ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯನ್ನು ಪ್ರೇರೇಪಿಸುವ ಈ ಕಾಲಾತೀತ ರಚನೆಯ 150 ವರ್ಷಗಳನ್ನು ಆಚರಿಸುತ್ತದೆ.
ದೆಹಲಿಯಲ್ಲಿ ನಡೆದ ಮುಖ್ಯ ಕಾರ್ಯಕ್ರಮದ ಜೊತೆಗೆ ದೇಶಾದ್ಯಂತ ಹಮ್ಮಿಕೊಳ್ಳಲಾದ ʻವಂದೇ ಮಾತರಂʼ ಪೂರ್ಣ ಆವೃತ್ತಿ ಗಾಯನಕ್ಕೂ ಇಂದಿನ ಸಂಭ್ರಮಾಚರಣೆ ಸಾಕ್ಷಿಯಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ನಡೆದ ಗಾಯನದಲ್ಲಿ ಸಮಾಜದ ಎಲ್ಲಾ ವರ್ಗಗಳ ನಾಗರಿಕರು ಭಾಗವಹಿಸಿದರು.
2025ನೇ ವರ್ಷವು ʻವಂದೇ ಮಾತರಂʼನ 150ನೇ ವರ್ಷಾಚರಣೆಯನ್ನು ಸಂಕೇತಿಸುತ್ತದೆ. ಬಂಕಿಮಚಂದ್ರ ಚಟರ್ಜಿ ಅವರು ನಮ್ಮ ರಾಷ್ಟ್ರೀಯ ಗೀತೆಯಾದ "ವಂದೇ ಮಾತರಂ" ಅನ್ನು 1875ರ ನವೆಂಬರ್ 7ರಂದು ʻಅಕ್ಷಯ ನವಮಿʼಯ ಶುಭ ಸಂದರ್ಭದಲ್ಲಿ ರಚಿಸಿದರು. ʻವಂದೇ ಮಾತರಂʼ ಗೀತೆಯು ಚಟರ್ಜಿ ಅವರ ಕಾದಂಬರಿಯಾದ ʻಆನಂದಮಠʼದ ಭಾಗವಾಗಿ ಸಾಹಿತ್ಯ ನಿಯತಕಾಲಿಕೆ ʻಬಂಗದರ್ಶನದʼಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. ತಾಯ್ನಾಡನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವೆಂದು ಕರೆಯುವ ಈ ಗೀತೆಯು, ಭಾರತದ ಏಕತೆ ಮತ್ತು ಸ್ವಾಭಿಮಾನದ ಜಾಗೃತಿಗೆ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ನೀಡಿತು. ಇದು ಅತ್ಯಲ್ಪ ಕಾಲದಲ್ಲೇ ದೇಶ ಭಕ್ತಿಯ ಶಾಶ್ವತ ಸಂಕೇತವಾಯಿತು.
*****
(Release ID: 2187404)
Visitor Counter : 7
Read this release in:
Marathi
,
Tamil
,
Khasi
,
English
,
Urdu
,
हिन्दी
,
Bengali
,
Manipuri
,
Assamese
,
Gujarati
,
Odia
,
Telugu
,
Malayalam