ಪ್ರಧಾನ ಮಂತ್ರಿಯವರ ಕಛೇರಿ
ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಛತ್ತೀಸ್‌ಗಢ ವಿಧಾನಸಭಾ ನೂತನ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಇಂದು, ಛತ್ತೀಸ್‌ಗಢ ತನ್ನ ಆಕಾಂಕ್ಷೆಗಳ ಹೊಸ ಶಿಖರವನ್ನು ಏರಿದೆ; ಈ ಹೆಮ್ಮೆಯ ಸಂದರ್ಭದಲ್ಲಿ, ಈ ರಾಜ್ಯದ ರಚನೆಗೆ ಕಾರಣವಾದ ದೂರದೃಷ್ಟಿಯ ಮತ್ತು ಕರುಣಾಳು ನಾಯಕ - ಭಾರತ ರತ್ನ - ಪೂಜ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ: ಪ್ರಧಾನಮಂತ್ರಿ
ಇಂದು, ಇಡೀ ರಾಷ್ಟ್ರವು ಪರಂಪರೆ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೆ ಅಳವಡಿಸಿಕೊಳ್ಳುವ ಮೂಲಕ ಮುಂದುವರಿಯುತ್ತಿದೆ: ಪ್ರಧಾನಮಂತ್ರಿ
ಭಾರತವು ಪ್ರಜಾಪ್ರಭುತ್ವದ ತಾಯಿ: ಪ್ರಧಾನಮಂತ್ರಿ
ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವತ್ತ ಭಾರತ ಈಗ ಸಾಗುತ್ತಿದೆ: ಪ್ರಧಾನಮಂತ್ರಿ
ಈ ವಿಧಾನಸಭೆಯು ಕೇವಲ ಕಾನೂನು ರಚನೆಯ ಸ್ಥಳವಲ್ಲ, ಜೊತೆಗೆ ಛತ್ತೀಸ್‌ಗಢದ ಭವಿಷ್ಯವನ್ನು ರೂಪಿಸುವ ಚೈತನ್ಯಶೀಲ ಕೇಂದ್ರವಾಗಿದೆ: ಪ್ರಧಾನಮಂತ್ರಿ
Posted On:
01 NOV 2025 2:59PM by PIB Bengaluru
ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಇಂದು ಛತ್ತೀಸ್‌ಗಢ ವಿಧಾನಸಭೆಯ ಹೊಸ ಕಟ್ಟಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಛತ್ತೀಸ್‌ಗಢದ ಅಭಿವೃದ್ಧಿ ಪ್ರಯಾಣಕ್ಕೆ ಇಂದಿನ ದಿನ ಸುವರ್ಣ ಆರಂಭ ಎಂದು ಹೇಳಿದರು. ವೈಯಕ್ತಿಕವಾಗಿ, ಇದು ತಮಗೆ ಬಹಳ ಸಂತೋಷದಾಯಕ ಮತ್ತು ಮಹತ್ವದ ದಿನ ಎಂದು ಅವರು ಹೇಳಿದರು. ಹಲವಾರು ದಶಕಗಳಿಂದ ಪೋಷಿಸಲ್ಪಟ್ಟ ಈ ಭೂಮಿಯೊಂದಿಗಿನ ತಮ್ಮ ಆಳವಾದ ಭಾವನಾತ್ಮಕ ಬಾಂಧವ್ಯವನ್ನು ಅವರು ಉಲ್ಲೇಖಿಸಿದರು. ಪಕ್ಷದ ಕಾರ್ಯಕರ್ತನಾಗಿ ತಾವಿಲ್ಲಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾ, ಶ್ರೀ ಮೋದಿ ಅವರು ಛತ್ತೀಸ್‌ಗಢದಲ್ಲಿ ತಾವು ಸಾಕಷ್ಟು ಸಮಯವನ್ನು ಕಳೆದಿದ್ದನ್ನು ಮತ್ತು ಬಹಳಷ್ಟು ಕಲಿತುದನ್ನು ಹೇಳಿದರು. ಛತ್ತೀಸ್‌ಗಢದ ದೃಷ್ಟಿಕೋನ, ಅದರ ಸೃಷ್ಟಿಗಾಗಿನ ಸಂಕಲ್ಪ ಮತ್ತು ಆ ಸಂಕಲ್ಪದ ನೆರವೇರಿಕೆಯನ್ನು ಅವರು ನೆನಪಿಸಿಕೊಂಡರು, ಛತ್ತೀಸ್‌ಗಢದ ರೂಪಾಂತರದ ಪ್ರತಿ ಕ್ಷಣಕ್ಕೂ ತಾವು ಸಾಕ್ಷಿಯಾಗಿರುವುದನ್ನು ಅವರು ಉಲ್ಲೇಖಿಸಿದರು. ರಾಜ್ಯವು ತನ್ನ 25 ವರ್ಷಗಳ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲನ್ನು ತಲುಪುತ್ತಿರುವಾಗ, ಈ ಕ್ಷಣದ ಭಾಗವಾಗಲು ಅವಕಾಶ ನೀಡಿದ್ದಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಬೆಳ್ಳಿ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ, ರಾಜ್ಯದ ಜನತೆಗಾಗಿ ಹೊಸ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಂದರ್ಭದಲ್ಲಿ ಛತ್ತೀಸ್‌ಗಢದ ಜನರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಅವರು ತಮ್ಮ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
"ಈ ವರ್ಷ, ಅಂದರೆ 2025 ಭಾರತೀಯ ಗಣರಾಜ್ಯದ ಅಮೃತ ವರ್ಷವಾಗಿದ್ದು, ಭಾರತ ತನ್ನ ಸಂವಿಧಾನವನ್ನು ತನ್ನ ನಾಗರಿಕರಿಗೆ ಅರ್ಪಿಸಿದ 75 ವರ್ಷಗಳನ್ನು ಸ್ಮರಿಸುವ ವರ್ಷವಾಗಿದೆ" ಎಂದು ಶ್ರೀ ಮೋದಿ ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ, ಅವರು ಈ ಪ್ರದೇಶದ ಸಂವಿಧಾನ ಸಭೆಯ ಗಣ್ಯ ಸದಸ್ಯರಾದ ಶ್ರೀ ರವಿಶಂಕರ್ ಶುಕ್ಲಾ, ಬ್ಯಾರಿಸ್ಟರ್ ಠಾಕೂರ್ ಚೆಡಿಲಾಲ್, ಶ್ರೀ ಘನಶ್ಯಾಮ್ ಸಿಂಗ್ ಗುಪ್ತಾ, ಶ್ರೀ ಕಿಶೋರಿ ಮೋಹನ್ ತ್ರಿಪಾಠಿ, ಶ್ರೀ ರಾಮಪ್ರಸಾದ್ ಪೋಟೈ ಮತ್ತು ಶ್ರೀ ರಘುರಾಜ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು - ಅವರು ಆ ಸಮಯದಲ್ಲಿ ಈ ಪ್ರದೇಶ ಹಿಂದುಳಿದಿದ್ದರೂ, ದಿಲ್ಲಿಗೆ ತಲುಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಛತ್ತೀಸ್‌ಗಢದ ಇತಿಹಾಸದಲ್ಲಿ ಇಂದು ಒಂದು ಸುವರ್ಣ ಅಧ್ಯಾಯ ಎಂದು ಪ್ರಧಾನಮಂತ್ರಿ ಹೇಳಿದರು. ಭವ್ಯ ಮತ್ತು ಆಧುನಿಕ ವಿಧಾನಸಭಾ ಕಟ್ಟಡ ಉದ್ಘಾಟನೆಯಾಗುತ್ತಿದೆ ಆದರೆ, ಇದು ಕೇವಲ ಒಂದು ಕಟ್ಟಡದ ಸಮಾರಂಭವಲ್ಲ, ಬದಲಾಗಿ 25 ವರ್ಷಗಳ ಸಾರ್ವಜನಿಕ ಆಕಾಂಕ್ಷೆ, ಹೋರಾಟ ಮತ್ತು ಹೆಮ್ಮೆಯ ಆಚರಣೆಯಾಗಿದೆ ಎಂದು ಅವರು ಒತ್ತಿ ಹೇಳಿದರು. "ಇಂದು, ಛತ್ತೀಸ್‌ಗಢವು ತನ್ನ ಆಕಾಂಕ್ಷೆಗಳ ಹೊಸ ಶಿಖರದಲ್ಲಿ ನಿಂತಿದೆ; ಈ ಹೆಮ್ಮೆಯ ಸಂದರ್ಭದಲ್ಲಿ, ಈ ರಾಜ್ಯದ ರಚನೆಗೆ ಕಾರಣವಾದ ದೂರದೃಷ್ಟಿ ಮತ್ತು ಕರುಣಾಮಯಿ ನಾಯಕ - ಭಾರತ ರತ್ನ, ಪೂಜ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀ ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ" ಎಂದು ಶ್ರೀ ಮೋದಿ ಹೇಳಿದರು. 2000 ನೇ ಇಸವಿಯಲ್ಲಿ ಅಟಲ್ ಜೀ ಛತ್ತೀಸ್‌ಗಢ ರಾಜ್ಯವನ್ನು ರಚಿಸಿದಾಗ, ಅದು ಕೇವಲ ಆಡಳಿತಾತ್ಮಕ ನಿರ್ಧಾರವಾಗಿರಲಿಲ್ಲ, ಬದಲಾಗಿ ಅಭಿವೃದ್ಧಿಯ ಹೊಸ ಮಾರ್ಗಗಳನ್ನು ತೆರೆಯುವ ಮತ್ತು ಛತ್ತೀಸ್‌ಗಢದ ಆತ್ಮವನ್ನು ಗುರುತಿಸುವತ್ತ ಒಂದು ಹೆಜ್ಜೆಯಾಗಿತ್ತು ಎಂದು ಅವರು ನೆನಪಿಸಿಕೊಂಡರು. ಇಂದು, ವಿಧಾನಸಭಾ ಕಟ್ಟಡದ ಉದ್ಘಾಟನೆಯೊಂದಿಗೆ, ಅಟಲ್ ಜೀ ಅವರ ಪ್ರತಿಮೆಯ ಅನಾವರಣವೂ ನಡೆದಿದೆ ಮತ್ತು ಹೃದಯವು ಸ್ವಾಭಾವಿಕವಾಗಿ ಹೇಳುತ್ತದೆ - 'ಅಟಲ್ ಜೀ, ನೋಡಿ, ನಿಮ್ಮ ಕನಸು ನನಸಾಗುತ್ತಿದೆ, ನೀವು ಕಲ್ಪಿಸಿಕೊಂಡ ಛತ್ತೀಸ್‌ಗಢ ಈಗ ಆತ್ಮವಿಶ್ವಾಸದಿಂದ ತುಂಬಿದೆ ಮತ್ತು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತಿದೆ'.
ಛತ್ತೀಸ್‌ಗಢ ವಿಧಾನಸಭೆಯ ಇತಿಹಾಸವು ಸ್ವತಃ ತಾನೇ ಸ್ಫೂರ್ತಿಯ ಮೂಲವಾಗಿದೆ ಎಂದು ಹೇಳಿದ ಶ್ರೀ ಮೋದಿ, 2000ನೇ ಇಸವಿಯಲ್ಲಿ ಈ ಸುಂದರ ರಾಜ್ಯ ಸ್ಥಾಪನೆಯಾದಾಗ, ಮೊದಲ ವಿಧಾನಸಭೆ ಅಧಿವೇಶನವು ರಾಯ್‌ಪುರದ ರಾಜ್‌ಕುಮಾರ್ ಕಾಲೇಜಿನ ಜಶ್‌ಪುರ ಸಭಾಂಗಣದಲ್ಲಿ ನಡೆಯಿತು ಎಂದು ನೆನಪಿಸಿಕೊಂಡರು. ಆ ಅವಧಿಯು ಸೀಮಿತ ಸಂಪನ್ಮೂಲಗಳಿಂದ ಕೂಡಿತ್ತು, ಆದರೆ ಅಪರಿಮಿತ ಕನಸುಗಳಿಂದ ತುಂಬಿತ್ತು. ಆ ಸಮಯದಲ್ಲಿ ಒಂದೇ ಒಂದು ಭಾವನೆ ಇತ್ತು ಎಂಬುದರತ್ತ ಅವರು ಗಮನ ಸೆಳೆದರು: "ನಾವು ಹೆಚ್ಚಿನ ವೇಗದಲ್ಲಿ ನಮ್ಮ ಭವಿಷ್ಯವನ್ನು ಬೆಳಗಿಸುತ್ತೇವೆ." ಎಂಬ ಭಾವನೆ ಅಲ್ಲಿತ್ತು. ನಂತರ ನಿರ್ಮಾಣವಾದ ವಿಧಾನಸಭೆ ಕಟ್ಟಡವು ಮೂಲತಃ ಮತ್ತೊಂದು ಇಲಾಖೆಯ ಆವರಣವಾಗಿತ್ತು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಅಲ್ಲಿಂದ, ಛತ್ತೀಸ್‌ಗಢದಲ್ಲಿ ಪ್ರಜಾಪ್ರಭುತ್ವದ ಪ್ರಯಾಣವು ನವೀಕೃತ ಶಕ್ತಿಯೊಂದಿಗೆ ಪ್ರಾರಂಭವಾಯಿತು. ಇಂದು, 25 ವರ್ಷಗಳ ನಂತರ, ಅದೇ ಪ್ರಜಾಪ್ರಭುತ್ವ ಮತ್ತು ಅದೇ ಜನರು ಆಧುನಿಕ, ಡಿಜಿಟಲ್ ಮತ್ತು ಸ್ವಾವಲಂಬಿ ವಿಧಾನಸಭೆ ಕಟ್ಟಡವನ್ನು ಉದ್ಘಾಟಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ವಿಧಾನಸಭಾ ಕಟ್ಟಡವನ್ನು ಪ್ರಜಾಪ್ರಭುತ್ವದ ಯಾತ್ರಾ ಸ್ಥಳ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ, ವಿಧಾನಸಭೆಯ ಪ್ರತಿಯೊಂದು ಸ್ತಂಭವು ಪಾರದರ್ಶಕತೆಯನ್ನು ಸಂಕೇತಿಸುತ್ತದೆ, ಪ್ರತಿಯೊಂದು ಕಾರಿಡಾರ್ ನಮಗೆ ಹೊಣೆಗಾರಿಕೆಯನ್ನು ನೆನಪಿಸುತ್ತದೆ ಮತ್ತು ಪ್ರತಿಯೊಂದು ಕೊಠಡಿಯು ಜನರ ಧ್ವನಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ದಶಕಗಳಲ್ಲಿ ಛತ್ತೀಸ್‌ಗಢದ ಭವಿಷ್ಯವನ್ನು ರೂಪಿಸುತ್ತವೆ ಮತ್ತು ಈ ಗೋಡೆಗಳ ಒಳಗೆ ಮಾತನಾಡುವ ಪ್ರತಿಯೊಂದು ಮಾತು ರಾಜ್ಯದ ಭೂತ, ವರ್ತಮಾನ ಮತ್ತು ಭವಿಷ್ಯದ ಅವಿಭಾಜ್ಯ ಅಂಗವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಕಟ್ಟಡವು ಮುಂದಿನ ದಶಕಗಳಲ್ಲಿ ಛತ್ತೀಸ್‌ಗಢದ ನೀತಿ, ಭವಿಷ್ಯ ಮತ್ತು ನೀತಿ ನಿರೂಪಕರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
"ಇಂದು, ಇಡೀ ರಾಷ್ಟ್ರವು ಪರಂಪರೆ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೆ ಅಳವಡಿಸಿಕೊಳ್ಳುವ ಮೂಲಕ ಮುಂದುವರಿಯುತ್ತಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು, ಈ ಮನೋಭಾವವು ಸರ್ಕಾರದ ಪ್ರತಿಯೊಂದು ನೀತಿ ಮತ್ತು ನಿರ್ಧಾರದಲ್ಲಿ ಪ್ರತಿಫಲಿಸುತ್ತಿದೆ ಎಂದರು. ಪವಿತ್ರ ಸೆಂಗೋಲ್ (ರಾಜ ದಂಡ) ಈಗ ಭಾರತೀಯ ಸಂಸತ್ತಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಸಂಸತ್ತಿನ ಹೊಸ ಗ್ಯಾಲರಿಗಳು ಭಾರತದ ಪ್ರಜಾಪ್ರಭುತ್ವದ ಪ್ರಾಚೀನ ಬೇರುಗಳೊಂದಿಗೆ ಜಗತ್ತನ್ನು ಸಂಪರ್ಕಿಸುತ್ತವೆ ಎಂದು ಅವರು ಹೇಳಿದರು. ಸಂಸತ್ತಿನ ಸಂಕೀರ್ಣದಲ್ಲಿ ಸ್ಥಾಪಿಸಲಾದ ಪ್ರತಿಮೆಗಳು ಭಾರತದಲ್ಲಿನ ಪ್ರಜಾಪ್ರಭುತ್ವ ಸಂಪ್ರದಾಯಗಳ ಆಳವಾದ ಜ್ಞಾನವನ್ನು ಜಗತ್ತಿಗೆ ತಿಳಿಸುತ್ತವೆ. ಛತ್ತೀಸ್‌ಗಢದ ಹೊಸ ವಿಧಾನಸಭೆಯಲ್ಲಿಯೂ ಇದೇ ನೀತಿ ಮತ್ತು ಭಾವನೆ ಪ್ರತಿಫಲಿಸುತ್ತಿದೆ ಎಂದು ಶ್ರೀ ಮೋದಿ ಸಂತೋಷ ವ್ಯಕ್ತಪಡಿಸಿದರು. ಹೊಸ ವಿಧಾನಸಭಾ ಸಂಕೀರ್ಣವು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು. ಈ ವಿಧಾನಸಭೆಯ ಪ್ರತಿಯೊಂದು ಅಂಶವು ಛತ್ತೀಸ್‌ಗಢದ ಭೂಮಿಯಲ್ಲಿ ಜನಿಸಿದ ಮಹಾನ್ ವ್ಯಕ್ತಿಗಳ ಸ್ಫೂರ್ತಿಯನ್ನು ಹೊಂದಿದೆ. ವಂಚಿತರಿಗೆ ಆದ್ಯತೆ ನೀಡುವುದು ಮತ್ತು 'ಸಬ್‌ಕಾ ಸಾಥ್, ಸಬ್ಕಾ ವಿಕಾಸ್' ತತ್ವವು ತಮ್ಮ ಸರ್ಕಾರದ ಉತ್ತಮ ಆಡಳಿತದ ವಿಶಿಷ್ಟ ಲಕ್ಷಣಗಳಾಗಿವೆ ಎಂದು ಅವರು ದೃಢಪಡಿಸಿದರು. ಇದು ಭಾರತದ ಸಂವಿಧಾನದ ಚೈತನ್ಯ ಮತ್ತು ನಮ್ಮ ಮಹಾನ್ ನಾಯಕರು, ಋಷಿಗಳು ಮತ್ತು ಚಿಂತಕರು ನೀಡಿದ ಮೌಲ್ಯಗಳು ಎಂದು ಅವರು ಹೇಳಿದರು.
ಹೊಸ ವಿಧಾನಸಭಾ ಕಟ್ಟಡವನ್ನು ವೀಕ್ಷಿಸುತ್ತಿದ್ದಾಗ, ಬಸ್ತಾರ್ ಕಲೆಯ ಸುಂದರ ನೋಟವನ್ನು ತಾವು ಗಮನಿಸಿರುವುದಾಗಿ ಪ್ರಧಾನಮಂತ್ರಿ ಶ್ರೀ ಮೋದಿ ಹಂಚಿಕೊಂಡರು. ಕೆಲವು ತಿಂಗಳ ಹಿಂದೆ ಥೈಲ್ಯಾಂಡ್ ಪ್ರಧಾನಮಂತ್ರಿಗೆ ಅದೇ ಬಸ್ತಾರ್ ಕಲಾಕೃತಿಯನ್ನು ನೀಡಿದ್ದನ್ನು ಅವರು ನೆನಪಿಸಿಕೊಂಡರು, ಇದು ಭಾರತದ ಸೃಜನಶೀಲತೆ ಮತ್ತು ಸಾಂಸ್ಕೃತಿಕ ಶಕ್ತಿಯ ಸಂಕೇತವಾಗಿದೆ ಎಂದು ಬಣ್ಣಿಸಿದರು.
ಕಟ್ಟಡದ ಗೋಡೆಗಳು ಬಾಬಾ ಗುರು ಘಾಸಿದಾಸ್ ಜೀ ಅವರ ಸಂದೇಶವನ್ನು ಹೊಂದಿವೆ ಎಂದು ಶ್ರೀ ಮೋದಿ ಹೇಳಿದರು, ಇದು ಎಲ್ಲರನ್ನೂ ಒಳಗೊಳ್ಳುವಿಕೆ, ಎಲ್ಲರಿಗೂ ಅಭಿವೃದ್ಧಿ ಮತ್ತು ಎಲ್ಲರಿಗೂ ಗೌರವದ ಮೌಲ್ಯಗಳನ್ನು ಕಲಿಸುತ್ತದೆ. ಪ್ರತಿಯೊಂದು ದ್ವಾರವು ಮಾತಾ ಶಬರಿ ಕಲಿಸಿದ ಹಾರ್ದಿಕ ಭಾವವನ್ನು ಪ್ರತಿಬಿಂಬಿಸುತ್ತದೆ ಎಂಬುದರತ್ತ ಅವರು ಗಮನ ಸೆಳೆದರು. ಇದು ಪ್ರತಿಯೊಬ್ಬ ಅತಿಥಿ ಮತ್ತು ನಾಗರಿಕರನ್ನು ಪ್ರೀತಿಯಿಂದ ಸ್ವಾಗತಿಸಲು ನಮಗೆ ನೆನಪಿಸುತ್ತದೆ. ವಿಧಾನಸಭೆಯ ಪ್ರತಿಯೊಂದು ಕುರ್ಚಿಯು ಸಂತ ಕಬೀರ್ ಕಲಿಸಿದ ಸತ್ಯ ಮತ್ತು ನಿರ್ಭಯತೆಯ ಮನೋಭಾವವನ್ನು ಸಾಕಾರಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಟ್ಟಡದ ಅಡಿಪಾಯವು ಮಹಾಪ್ರಭು ವಲ್ಲಭಾಚಾರ್ಯ ಜೀ ಅವರ ತತ್ವವಾದ "ನರ ಸೇವೆ, ನಾರಾಯಣ ಸೇವೆ" ಯ ಸಂಕಲ್ಪವನ್ನು ಹೊಂದಿದೆ ಎಂದು ಅವರು ಹೇಳಿದರು.
“ಭಾರತ ಪ್ರಜಾಪ್ರಭುತ್ವದ ತಾಯಿ" ಎಂದು ಪುನರುಚ್ಚರಿಸಿದ ಶ್ರೀ ಮೋದಿ, ಭಾರತದ ಬುಡಕಟ್ಟು ಸಮುದಾಯಗಳು ತಲೆಮಾರುಗಳಿಂದ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಪಾಲಿಸುತ್ತಿವೆ ಎಂದು ಒತ್ತಿ ಹೇಳಿದರು. ಬಸ್ತಾರ್‌ನ ಮುರಿಯ ದರ್ಬಾರ್ ಅನ್ನು ಅವರು ಜೀವಂತ ಉದಾಹರಣೆ ಎಂದು ಉಲ್ಲೇಖಿಸಿದರು - ಇದು ತಳಮಟ್ಟದ ಪ್ರಜಾಪ್ರಭುತ್ವ ಪದ್ಧತಿಗಳನ್ನು ಪ್ರತಿಬಿಂಬಿಸುವ 'ಪ್ರಾಚೀನ ಸಂಸತ್ತು'. ವರ್ಷಗಳಿಂದ, ಭಾರತದಲ್ಲಿ ಸಮಾಜ ಮತ್ತು ಆಡಳಿತವು ಸವಾಲುಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡಿದೆ ಎಂದು ಅವರು ಹೇಳಿದರು. ಹೊಸ ವಿಧಾನಸಭಾ ಕಟ್ಟಡದಲ್ಲಿ ಮುರಿಯ ದರ್ಬಾರ್‌ನ ಸಂಪ್ರದಾಯಕ್ಕೂ ಸ್ಥಾನ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಸಂತೋಷ ವ್ಯಕ್ತಪಡಿಸಿದರು.
ವಿಧಾನಸಭೆಯ ಪ್ರತಿಯೊಂದು ಮೂಲೆಯೂ ನಮ್ಮ ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ, ಅದರ ಸ್ಪೀಕರ್ ಕುರ್ಚಿಯನ್ನು ಡಾ. ರಮಣ್ ಸಿಂಗ್ ಅವರ ಅನುಭವಿ ನಾಯಕತ್ವವು ಅಲಂಕರಿಸಿದೆ ಎಂದು ಶ್ರೀ ಮೋದಿ ಹೇಳಿದರು. ಪಕ್ಷದ ಸಮರ್ಪಿತ ಕಾರ್ಯಕರ್ತ, ಕಠಿಣ ಪರಿಶ್ರಮ ಮತ್ತು ಬದ್ಧತೆಯ ಮೂಲಕ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಹೇಗೆ ಬಲಪಡಿಸಬಹುದು ಎಂಬುದಕ್ಕೆ ಡಾ. ರಮಣ್ ಸಿಂಗ್ ಒಂದು ಪ್ರಬಲ ಉದಾಹರಣೆ ಎಂದೂ ಅವರು ಹೇಳಿದರು.
ರಾಷ್ಟ್ರಕವಿ ನಿರಾಲ ಅವರು ಸರಸ್ವತಿ ಮಾತೆಗೆ ಮಾಡಿದ ಪ್ರಾರ್ಥನೆಯನ್ನು ಪ್ರಧಾನಮಂತ್ರಿ ಉಲ್ಲೇಖಿಸಿ, ಅದು ಕೇವಲ ಕಾವ್ಯವಲ್ಲ, ಸ್ವತಂತ್ರ ಭಾರತದ ಪುನರ್ಜನ್ಮಕ್ಕಾಗಿ ಒಂದು ಮಂತ್ರ ಎಂದೂ ಹೇಳಿದರು. ನಿರಾಲ ಅವರ "ನವ ಗತಿ, ನವ ಲೇ, ನವ ಸ್ವರ್" ಎಂಬ ಕರೆಯನ್ನು ಅವರು ಉಲ್ಲೇಖಿಸಿದರು, ಇದು ಸಂಪ್ರದಾಯದಲ್ಲಿ ಬೇರೂರಿರುವ ಆದರೆ ಭವಿಷ್ಯದತ್ತ ಆತ್ಮವಿಶ್ವಾಸದಿಂದ ಸಾಗುವ ಭಾರತವನ್ನು ಸಂಕೇತಿಸುತ್ತದೆ ಎಂದರು. ಛತ್ತೀಸ್‌ಗಢದ ಹೊಸ ವಿಧಾನಸಭೆಯಲ್ಲಿ ನಿಂತ ಶ್ರೀ ಮೋದಿ, ಈ ಭಾವನೆ ಇಲ್ಲಿಯೂ ಅಷ್ಟೇ ಪ್ರಸ್ತುತವಾಗಿದೆ ಎಂದು ದೃಢವಾಗಿ ನುಡಿದರು. ಹಿಂದಿನ ಅನುಭವಗಳ ಪ್ರತಿಧ್ವನಿಗಳು ಹೊಸ ಕನಸುಗಳ ಶಕ್ತಿಯನ್ನು ಸೇರುವ 'ನವ ಸ್ವರ್' ನ ಸಂಕೇತ ಎಂದು ಅವರು ಕಟ್ಟಡವನ್ನು ವಿವರಿಸಿದರು. ಈ ಶಕ್ತಿಯೊಂದಿಗೆ, ನಾವು ಭಾರತವನ್ನು ನಿರ್ಮಿಸಬೇಕು ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುವಾಗ ಅದರ ಪರಂಪರೆಯೊಂದಿಗೆ ಸಂಪರ್ಕ ಹೊಂದಿರುವ ಛತ್ತೀಸ್‌ಗಢದ ಅಡಿಪಾಯವನ್ನು ಹಾಕಬೇಕು ಎಂದು ಅವರು ಹೇಳಿದರು.
"ನಾಗರಿಕ್ ದೇವೋ ಭವ" ಉತ್ತಮ ಆಡಳಿತದ ಮಾರ್ಗದರ್ಶಿ ಮಂತ್ರ ಎಂದು ಒತ್ತಿ ಹೇಳಿದ ಶ್ರೀ ಮೋದಿ, ವಿಧಾನಸಭೆಯಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಜನರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂದೂ ಹೇಳಿದರು. ಇಲ್ಲಿ ಜಾರಿಗೆ ತರಲಾದ ಕಾನೂನುಗಳು ಸುಧಾರಣೆಯನ್ನು ವೇಗಗೊಳಿಸಬೇಕು, ನಾಗರಿಕರ ಜೀವನವನ್ನು ಸರಳಗೊಳಿಸಬೇಕು ಮತ್ತು ಅನಗತ್ಯ ಸರ್ಕಾರಿ ಹಸ್ತಕ್ಷೇಪವನ್ನು ಕಡಿಮೆ ಮಾಡಬೇಕು. ಆಡಳಿತವು ಇಲ್ಲದಿರಬಾರದು ಅಥವಾ ಅತಿಯಾಗಿರಲೂಬಾರದು ಎಂದೂ ಅವರು ಹೇಳಿದರು - ಈ ಸಮತೋಲನವು ತ್ವರಿತ ಪ್ರಗತಿಗೆ ಏಕೈಕ ನಿಜವಾದ ಸೂತ್ರವಾಗಿದೆ ಎಂದವರು ವಿವರಿಸಿದರು.
ಛತ್ತೀಸ್‌ಗಢವು ಶ್ರೀರಾಮನ ತಾಯಿಯ ಮನೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು ಮತ್ತು ಅವರನ್ನು ಈ ಭೂಮಿಯ ಸೋದರಳಿಯ ಎಂದು ಉಲ್ಲೇಖಿಸಿದರು. ಈ ಹೊಸ ವಿಧಾನಸಭಾ ಸಂಕೀರ್ಣದಲ್ಲಿ ಶ್ರೀರಾಮನ ಆದರ್ಶಗಳನ್ನು ನೆನಪಿಸಿಕೊಳ್ಳಲು ಇಂದು ಇದಕ್ಕಿಂತ ಉತ್ತಮ ಸಂದರ್ಭ ಇನ್ನೊಂದಿಲ್ಲ ಎಂದು ಅವರು ಹೇಳಿದರು. ಶ್ರೀರಾಮನ ಮೌಲ್ಯಗಳು ಉತ್ತಮ ಆಡಳಿತದಲ್ಲಿ ಕಾಲಾತೀತ ಪಾಠಗಳನ್ನು ನೀಡುತ್ತವೆ ಎಂದು ಅವರು ದೃಢ ಭಾವನೆಯಿಂದ ನುಡಿದರು.
ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ, ರಾಷ್ಟ್ರವು ಭಕ್ತಿಯಿಂದ ರಾಷ್ಟ್ರ ನಿರ್ಮಾಣಕ್ಕೆ - "ದೇವರಿಂದ ದೇಶಕ್ಕೆ" ಮತ್ತು "ರಾಮನಿಂದ ರಾಷ್ಟ್ರಕ್ಕೆ" ಸಾಗಲು ಸಾಮೂಹಿಕವಾಗಿ ಸಂಕಲ್ಪ ಮಾಡಿದೆ ಎಂದು ಶ್ರೀ ಮೋದಿ ಹೇಳಿದರು. "ರಾಮನಿಂದ ರಾಷ್ಟ್ರ"ದ ಸಾರವು ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣದಲ್ಲಿ ಬೇರೂರಿರುವ ಆಡಳಿತವನ್ನು ಸಂಕೇತಿಸುವ ದೃಷ್ಟಿಕೋನದಲ್ಲಿದೆ, ಇದು "ಸಬ್ಕಾ ಸಾಥ್, ಸಬ್ಕಾ ವಿಕಾಸ್" ಎಂಬ ಸಮಗ್ರ ಅಭಿವೃದ್ಧಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು. "ರಾಮನಿಂದ ರಾಷ್ಟ್ರ"ವು ಬಡತನ ಮತ್ತು ದುಃಖದಿಂದ ಮುಕ್ತವಾದ ಸಮಾಜವನ್ನು ಹೊಂದಿರುವ, ಅಭಾವ, ಕೊರತೆಯನ್ನು ನಿರ್ಮೂಲನೆ ಮಾಡುವ ಮೂಲಕ ಮುನ್ನಡೆಯುವ ಭಾರತ ರಾಷ್ಟ್ರವನ್ನು ಕಲ್ಪಿಸುತ್ತದೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಅನಾರೋಗ್ಯದಿಂದ ಅಕಾಲಿಕ ಮರಣವನ್ನು ಅನುಭವಿಸದ ಮತ್ತು ಆರೋಗ್ಯಕರ ಹಾಗು ಸಂತೋಷದ ದೇಶ ಎಂದೂ ಇದರ ಅರ್ಥ ಎಂದು ಅವರು ಹೇಳಿದರು. ಕೊನೆಯದಾಗಿ, "ರಾಮನಿಂದ ರಾಷ್ಟ್ರಕ್ಕೆ" ಎಂಬುದು ತಾರತಮ್ಯ ಮುಕ್ತ ಸಮಾಜವನ್ನು ಸೂಚಿಸುತ್ತದೆ, ಅಲ್ಲಿ ಎಲ್ಲಾ ಸಮುದಾಯಗಳಲ್ಲಿ ಸಾಮಾಜಿಕ ನ್ಯಾಯವು ಮೇಲುಗೈ ಸಾಧಿಸುತ್ತದೆ ಎಂದು ಅವರು ಹೇಳಿದರು.
"ರಾಮನಿಂದ ರಾಷ್ಟ್ರಕ್ಕೆ" ಎಂಬುದು ಮಾನವೀಯತೆಗೆ ವಿರುದ್ಧವಾದ ಶಕ್ತಿಗಳನ್ನು ನಿರ್ಮೂಲನೆ ಮಾಡುವ ಸಂಕಲ್ಪವನ್ನು ಸೂಚಿಸುತ್ತದೆ, ಭಯೋತ್ಪಾದನೆಯನ್ನು ನಾಶಮಾಡುವ ಪ್ರತಿಜ್ಞೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಯೋತ್ಪಾದನೆಯ ಬೆನ್ನೆಲುಬನ್ನು ಮುರಿದ ಆಪರೇಷನ್ ಸಿಂಧೂರ್‌ನಲ್ಲಿ ಈ ಸಂಕಲ್ಪವು ಸ್ಪಷ್ಟವಾಗಿ ಪ್ರದರ್ಶಿಸಲ್ಪಟ್ಟಿದೆ ಎಂದು ಅವರು ಹೇಳಿದರು. "ಭಾರತವು ಈಗ ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯ ನಿರ್ಮೂಲನೆಯತ್ತ ಸಾಗುತ್ತಿದೆ ಮತ್ತು ಅದರ ಅಭೂತಪೂರ್ವ ವಿಜಯಗಳ ಬಗ್ಗೆ ಹೆಮ್ಮೆಯಿಂದ ತುಂಬಿದೆ" ಎಂದು ಪ್ರಧಾನಮಂತ್ರಿ ದೃಢಪಡಿಸಿದರು, ಈ ಹೆಮ್ಮೆಯ ಮನೋಭಾವವು ಛತ್ತೀಸ್‌ಗಢ ವಿಧಾನಸಭೆಯ ಹೊಸ ಆವರಣದಲ್ಲಿ ಗೋಚರವಾಗುತ್ತಿದೆ ಎಂದು ಹೇಳಿದರು.
ಕಳೆದ 25 ವರ್ಷಗಳಲ್ಲಿ ಛತ್ತೀಸ್‌ಗಢ ಕಂಡ ಪರಿವರ್ತನೆ ಗಮನಾರ್ಹ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ಎತ್ತಿ ತೋರಿಸಿದ ಶ್ರೀ ಮೋದಿ, "ಒಂದು ಕಾಲದಲ್ಲಿ ನಕ್ಸಲಿಸಂ ಮತ್ತು ಹಿಂದುಳಿದಿರುವಿಕೆಗೆ ಹೆಸರುವಾಸಿಯಾಗಿದ್ದ ರಾಜ್ಯವು ಈಗ ಸಮೃದ್ಧಿ, ಭದ್ರತೆ ಮತ್ತು ಸ್ಥಿರತೆಯ ಸಂಕೇತವಾಗಿ ಹೊರಹೊಮ್ಮುತ್ತಿದೆ" ಎಂದು ಹೇಳಿದರು. ಬಸ್ತಾರ್ ಒಲಿಂಪಿಕ್ಸ್ ಅನ್ನು ಈಗ ದೇಶಾದ್ಯಂತ ಚರ್ಚಿಸಲಾಗುತ್ತಿದೆ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಹಾಗು ಶಾಂತಿ ಮರಳಿದೆ ಎಂದು ಅವರು ಗಮನಿಸಿದರು. ಈ ಪರಿವರ್ತನೆಗೆ ಛತ್ತೀಸ್‌ಗಢದ ಜನರ ಕಠಿಣ ಪರಿಶ್ರಮ ಮತ್ತು ಸರ್ಕಾರಗಳ ದೂರದೃಷ್ಟಿಯ ನಾಯಕತ್ವ ಕಾರಣ ಎಂದೂ ಪ್ರಧಾನಮಂತ್ರಿ ಹೇಳಿದರು.
ಛತ್ತೀಸ್‌ಗಢದ ಬೆಳ್ಳಿ ಮಹೋತ್ಸವ ಆಚರಣೆಗಳು ಈಗ ದೊಡ್ಡ ರಾಷ್ಟ್ರೀಯ ಗುರಿಯ ಆರಂಭಿಕ ಹಂತವಾಗುತ್ತಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಧಿಸುವಲ್ಲಿ ಛತ್ತೀಸ್‌ಗಢ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು. ದೇಶದ ಪ್ರತಿಯೊಂದು ರಾಜ್ಯವು ಈ ಧ್ಯೇಯಕ್ಕೆ ನಾವೀನ್ಯತೆ ಮತ್ತು ಕೊಡುಗೆ ನೀಡಲು ಪ್ರೇರೇಪಿಸುವ ವಿಧಾನಸಭೆಯ ಮೂಲಕ ಒಂದು ವ್ಯವಸ್ಥೆಯನ್ನು ನಿರ್ಮಿಸಬೇಕು ಮತ್ತು ಒಂದು ಮಾದರಿಯನ್ನು ಸ್ಥಾಪಿಸಬೇಕು ಎಂದು ಶ್ರೀ ಮೋದಿ ನೆರೆದಿದ್ದ ಎಲ್ಲರನ್ನೂ ಒತ್ತಾಯಿಸಿದರು. ಇಲ್ಲಿ ನಡೆಯುವ ಸಂವಾದಗಳಲ್ಲಿ, ಎತ್ತಲಾಗುವ ಪ್ರಶ್ನೆಗಳಲ್ಲಿ ಮತ್ತು ಸದನದ ಕಲಾಪಗಳಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸಬೇಕೆಂದು ಅವರು ಕರೆ ನೀಡಿದರು. ಪ್ರತಿಯೊಂದು ಕ್ರಿಯೆಯೂ, ಪ್ರತಿಯೊಂದು ರೂಪದಲ್ಲಿಯೂ, ಅಭಿವೃದ್ಧಿ ಹೊಂದಿದ ಛತ್ತೀಸ್‌ಗಢ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ನಿರ್ದೇಶಿಸಲ್ಪಡಬೇಕು ಎಂದು ಅವರು ಒತ್ತಿ ಹೇಳಿದರು.
ಛತ್ತೀಸ್‌ಗಢದ ಹೊಸ ವಿಧಾನಸಭೆಯ ನಿಜವಾದ ಶ್ರೇಷ್ಠತೆ ಅದರ ಭವ್ಯತೆಯಲ್ಲಿ ಅಲ್ಲ, ಬದಲಾಗಿ ಅದರೊಳಗೆ ತೆಗೆದುಕೊಳ್ಳಲಾದ ಕಲ್ಯಾಣ-ಆಧಾರಿತ ನಿರ್ಧಾರಗಳಲ್ಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದು ಸದನವು ಛತ್ತೀಸ್‌ಗಢದ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಎಷ್ಟು ಆಳವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಅವುಗಳನ್ನು ಪೂರೈಸಲು ಅದು ಎಷ್ಟು ದೂರ ಹೋಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದರು. ಪ್ರತಿಯೊಂದು ನಿರ್ಧಾರವು ರೈತರ ಕಠಿಣ ಪರಿಶ್ರಮವನ್ನು ಗೌರವಿಸಬೇಕು, ಯುವಜನರ ಕನಸುಗಳಿಗೆ ಮಾರ್ಗದರ್ಶನ ನೀಡಬೇಕು, ಮಹಿಳೆಯರಿಗೆ ಹೊಸ ಭರವಸೆಯನ್ನು ತರಬೇಕು ಮತ್ತು ಸಮಾಜದ ಅತ್ಯಂತ ಅಂಚಿನಲ್ಲಿರುವವರನ್ನು ಉನ್ನತೀಕರಿಸುವ ಮಾಧ್ಯಮವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. "ಈ ವಿಧಾನಸಭೆಯು ಕೇವಲ ಕಾನೂನು ರಚನೆಗೆ ಒಂದು ಸ್ಥಳವಲ್ಲ, ಆದರೆ ಛತ್ತೀಸ್‌ಗಢದ ಭವಿಷ್ಯವನ್ನು ರೂಪಿಸುವ ಒಂದು ಚೈತನ್ಯಶೀಲ ಕೇಂದ್ರವಾಗಿದೆ" ಎಂದು ಶ್ರೀ ಮೋದಿ ಹೇಳಿದರು ಮತ್ತು ಈ ಸದನದಿಂದ ಹೊರಹೊಮ್ಮುವ ಪ್ರತಿಯೊಂದು ಆಲೋಚನೆಯು ಸಾರ್ವಜನಿಕ ಸೇವೆಯ ಮನೋಭಾವ, ಅಭಿವೃದ್ಧಿಯ ಸಂಕಲ್ಪ ಮತ್ತು ಭಾರತವನ್ನು ಹೊಸ ಎತ್ತರಕ್ಕೆ ಏರಿಸುವ ವಿಶ್ವಾಸವನ್ನು ಹೊಂದಿರಬೇಕು ಎಂದು ಆಗ್ರಹಿಸಿದರು. ಇದು ನಮ್ಮ ಸಾಮೂಹಿಕ ಆಕಾಂಕ್ಷೆ ಎಂದು ಅವರು ದೃಢಪಡಿಸಿದರು.
ಹೊಸ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸುವುದರ ನಿಜವಾದ ಮಹತ್ವವೆಂದರೆ ಪ್ರಜಾಪ್ರಭುತ್ವದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಕರ್ತವ್ಯವನ್ನು ಎತ್ತಿಹಿಡಿಯುವ ಮತ್ತು ಸಾರ್ವಜನಿಕ ಜೀವನದಲ್ಲಿ ನಮ್ಮ ಪಾತ್ರಗಳನ್ನು ಬದ್ಧತೆಯಿಂದ ಪೂರೈಸುವ ಗಂಭೀರ ಪ್ರತಿಜ್ಞೆ ಮಾಡುವುದರಲ್ಲಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ವಿಶೇಷವಾಗಿ ಭಾರತೀಯ ಗಣರಾಜ್ಯದ ಈ ಸಂಕೀರ್ಣವನ್ನು ತೊರೆಯುವಾಗ ಈ ಅಮೃತ ವರ್ಷದಲ್ಲಿ, ಜನರ ಸೇವೆಗೆ ತಮ್ಮ ಜೀವನವನ್ನು ಅರ್ಪಿಸುವ ಸಂಕಲ್ಪದೊಂದಿಗೆ ನಿರ್ಗಮಿಸಬೇಕು ಎಂದು ಎಲ್ಲರನ್ನೂ ಒತ್ತಾಯಿಸಿದರು. ಪ್ರಜಾಪ್ರಭುತ್ವದ ಈ ಸುಂದರ ಹೊಸ ದೇವಾಲಯದ ಉದ್ಘಾಟನೆಗೆ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುವ ಮೂಲಕ ಅವರು ಮಾತುಗಳನ್ನು ಮುಕ್ತಾಯಗೊಳಿಸಿದರು.
ಛತ್ತೀಸ್‌ಗಢದ ರಾಜ್ಯಪಾಲ ಶ್ರೀ ರಾಮೆನ್ ದೇಕಾ, ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಛತ್ತೀಸ್‌ಗಢ ವಿಧಾನಸಭೆಯ ಸ್ಪೀಕರ್ ಡಾ. ರಮಣ್ ಸಿಂಗ್, ಛತ್ತೀಸ್‌ಗಢದ ಮುಖ್ಯಮಂತ್ರಿ ಶ್ರೀ ವಿಷ್ಣು ದಿಯೋ ಸಾಯಿ, ಕೇಂದ್ರ ಸಚಿವ ಶ್ರೀ ಟೋಕನ್ ಸಾಹು ಮತ್ತು ಇತರ ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಛತ್ತೀಸ್‌ಗಢ ವಿಧಾನಸಭಾದ ಹೊಸ ಕಟ್ಟಡವನ್ನು ಹಸಿರು ಕಟ್ಟಡ ಪರಿಕಲ್ಪನೆಯ ಮೇಲೆ ನಿರ್ಮಿಸಲಾಗಿದ್ದು, ಸಂಪೂರ್ಣವಾಗಿ ಸೌರಶಕ್ತಿಯಿಂದ ಚಾಲಿತವಾಗುವಂತೆ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಹೊಂದುವಂತೆ ಯೋಜಿಸಲಾಗಿದೆ.
****
(Release ID: 2185416)
Visitor Counter : 4
Read this release in:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Gujarati
,
Odia
,
Tamil
,
Telugu
,
Malayalam