ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ 'ಕೌಶಲ್ ದೀಕ್ಷಾಂತ್ ಸಮಾರೋಹ್' ಉದ್ದೇಶಿಸಿ ಭಾಷಣ; ರೂ. 62,000 ಕೋಟಿಗೂ ಹೆಚ್ಚು ಮೌಲ್ಯದ ಯುವಕೇಂದ್ರಿತ ಯೋಜನೆಗಳಿಗೆ ಚಾಲನೆ


ಭಾರತ ಜ್ಞಾನ ಮತ್ತು ಕೌಶಲ್ಯದ ದೇಶ, ಈ ಬೌದ್ಧಿಕ ಶಕ್ತಿಯೇ ನಮ್ಮ ದೊಡ್ಡ ಬಲ: ಪ್ರಧಾನಮಂತ್ರಿ

ಐ.ಟಿ.ಐಗಳು ಕೇವಲ ಕೈಗಾರಿಕಾ ಶಿಕ್ಷಣದ ಪ್ರಮುಖ ಸಂಸ್ಥೆಗಳಲ್ಲ, ಅವು 'ಆತ್ಮನಿರ್ಭರ ಭಾರತ' ನಿರ್ಮಾಣದ ಕಾರ್ಯಾಗಾರಗಳೂ ಆಗಿವೆ: ಪ್ರಧಾನಮಂತ್ರಿ

'ಪಿ.ಎಂ.-ಸೇತು' ಯೋಜನೆಯು ಭಾರತದ ಯುವಕರನ್ನು ವಿಶ್ವದ ಕೌಶಲ್ಯ ಬೇಡಿಕೆಗಳೊಂದಿಗೆ ಸಂಪರ್ಕಿಸುತ್ತದೆ: ಪ್ರಧಾನಮಂತ್ರಿ

ಭಾರತ ರತ್ನ ಕರ್ಪೂರಿ ಠಾಕೂರ್ ಅವರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆ ಮತ್ತು ಶಿಕ್ಷಣದ ಪ್ರಗತಿಗೆ ಮುಡಿಪಾಗಿಟ್ಟಿದ್ದರು, ಅವರ ಹೆಸರಿನಲ್ಲಿ ಸ್ಥಾಪನೆಯಾಗುತ್ತಿರುವ ಕೌಶಲ್ಯ ವಿಶ್ವವಿದ್ಯಾಲಯವು ಆ ದೃಷ್ಟಿಕೋನವನ್ನು ಮುನ್ನಡೆಸಲು ಪ್ರಬಲ ಮಾಧ್ಯಮವಾಗಲಿದೆ: ಪ್ರಧಾನಮಂತ್ರಿ

ಯುವಕರ ಶಕ್ತಿ ಹೆಚ್ಚಾದಾಗ, ರಾಷ್ಟ್ರದ ಶಕ್ತಿ ಹೆಚ್ಚಾಗುತ್ತದೆ: ಪ್ರಧಾನಮಂತ್ರಿ

Posted On: 04 OCT 2025 1:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 'ಕೌಶಲ್ ದೀಕ್ಷಾಂತ್ ಸಮಾರೋಹ್' ಕಾರ್ಯಕ್ರಮದಲ್ಲಿ  ರೂ. 62,000 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಯುವಕೇಂದ್ರಿತ ಯೋಜನೆಗಳಿಗೆ ಚಾಲನೆ ನೀಡಿದರು. ದೇಶಾದ್ಯಂತ ಐ.ಟಿ.ಐಗಳಿಗೆ ಸಂಬಂಧಿಸಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಬಿಹಾರದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ ಅವರು, ಕೆಲವು ವರ್ಷಗಳ ಹಿಂದೆ ಸರ್ಕಾರವು ಐ.ಟಿ.ಐ ವಿದ್ಯಾರ್ಥಿಗಳಿಗಾಗಿ ಬೃಹತ್ ಪ್ರಮಾಣದಲ್ಲಿ ಘಟಿಕೋತ್ಸವ ಸಮಾರಂಭಗಳನ್ನು ಆಯೋಜಿಸುವ ಹೊಸ ಸಂಪ್ರದಾಯವನ್ನು ಆರಂಭಿಸಿದ್ದನ್ನು ಸ್ಮರಿಸಿದರು. ಇಂದಿನ ದಿನವು ಆ ಸಂಪ್ರದಾಯದಲ್ಲಿ ಮತ್ತೊಂದು ಮೈಲಿಗಲ್ಲು ಎಂದು ಅವರು ಬಣ್ಣಿಸಿದರು.

ಭಾರತವು ಕೌಶಲ್ಯಾಭಿವೃದ್ಧಿಗೆ ನೀಡುವ ಆದ್ಯತೆಯನ್ನು ಇಂದಿನ ಸಮಾರಂಭ ಸಂಕೇತಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ದೇಶಾದ್ಯಂತ ಯುವಜನರಿಗಾಗಿ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿರುವುದಾಗಿ ಅವರು ಘೋಷಿಸಿದರು. ರೂ. 60,000 ಕೋಟಿ ವೆಚ್ಚದ 'ಪಿ.ಎಂ. ಸೇತು' ಯೋಜನೆಯಡಿ, ಐ.ಟಿ.ಐಗಳನ್ನು ಈಗ ಕೈಗಾರಿಕೆಗಳೊಂದಿಗೆ ಇನ್ನಷ್ಟು ಬಲವಾಗಿ ಸಂಯೋಜಿಸಲಾಗುವುದು ಎಂದು ಶ್ರೀ ಮೋದಿ ಅವರು ಹೇಳಿದರು. ಇದಲ್ಲದೆ, ದೇಶಾದ್ಯಂತ ನವೋದಯ ವಿದ್ಯಾಲಯಗಳು ಮತ್ತು ಏಕಲವ್ಯ ಮಾದರಿ ಶಾಲೆಗಳಲ್ಲಿ ಇಂದು 1,200 ಕೌಶಲ್ಯ ಪ್ರಯೋಗಾಲಯಗಳನ್ನು ಉದ್ಘಾಟಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಕಾರ್ಯಕ್ರಮವನ್ನು ಮೊದಲು ವಿಜ್ಞಾನ ಭವನದಲ್ಲಿ ಕೇವಲ ಘಟಿಕೋತ್ಸವ ಸಮಾರಂಭವಾಗಿ ನಡೆಸಲು ಯೋಜಿಸಲಾಗಿತ್ತು ಎಂದು ಶ್ರೀ ಮೋದಿ ಅವರು ಹೇಳಿದರು. ಆದರೆ, ಶ್ರೀ ನಿತೀಶ್ ಕುಮಾರ್ ಅವರು ಈ ಸಂದರ್ಭವನ್ನು ಬೃಹತ್ ಹಬ್ಬವನ್ನಾಗಿ ಪರಿವರ್ತಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ, ಅದು "ಚಿನ್ನದ ಆಭರಣಗಳಿಂದ ಅಲಂಕರಿಸಲ್ಪಟ್ಟ ಪೆಟ್ಟಿಗೆ " ಯಂತೆ ಅದ್ಧೂರಿಯಾಗಿ ಮಾರ್ಪಟ್ಟಿತು ಎಂದು ಅವರು  ಬಣ್ಣಿಸಿದರು. ಇದೇ ವೇದಿಕೆಯಿಂದ ಬಿಹಾರದ ಯುವಜನರಿಗಾಗಿ ಹಲವಾರು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಸಮರ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇವುಗಳಲ್ಲಿ ಬಿಹಾರದಲ್ಲಿ ಹೊಸ ಕೌಶಲ್ಯ ತರಬೇತಿ ವಿಶ್ವವಿದ್ಯಾಲಯದ ಸ್ಥಾಪನೆ, ಇತರ ವಿಶ್ವವಿದ್ಯಾಲಯಗಳಲ್ಲಿ ಸೌಲಭ್ಯಗಳ ವಿಸ್ತರಣೆ, ಹೊಸ ಯುವ ಆಯೋಗದ ರಚನೆ, ಮತ್ತು ಸಾವಿರಾರು ಯುವಕರಿಗೆ ಖಾಯಂ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರಗಳನ್ನು ನೀಡುವುದು ಸೇರಿದೆ. ಈ ಉಪಕ್ರಮಗಳು ಬಿಹಾರದ ಯುವಕರ ಉಜ್ವಲ ಭವಿಷ್ಯಕ್ಕೆ ಖಾತರಿಯಾಗಿವೆ ಎಂದು ಅವರು ದೃಢವಾಗಿ ಹೇಳಿದರು.

ಇತ್ತೀಚೆಗೆ ಬಿಹಾರದ ಮಹಿಳೆಯರ ಉದ್ಯೋಗ ಮತ್ತು ಸ್ವಾವಲಂಬನೆಗೆ ಮೀಸಲಾಗಿದ್ದ, ಲಕ್ಷಾಂತರ ಸಹೋದರಿಯರು ಭಾಗವಹಿಸಿದ್ದ ಬೃಹತ್ ಕಾರ್ಯಕ್ರಮವನ್ನು ಸ್ಮರಿಸಿದ ಶ್ರೀ ಮೋದಿ ಅವರು, ಬಿಹಾರದ ಯುವ ಸಬಲೀಕರಣಕ್ಕಾಗಿ ನಡೆದ ಇಂದಿನ ಈ ಬೃಹತ್ ಕಾರ್ಯಕ್ರಮವು, ತಮ್ಮ ಸರ್ಕಾರವು ರಾಜ್ಯದ ಯುವಕರು ಮತ್ತು ಮಹಿಳೆಯರಿಗೆ ನೀಡುವ ಆದ್ಯತೆಯನ್ನು ಮತ್ತಷ್ಟು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಭಾರತವು ಜ್ಞಾನ ಮತ್ತು ಕೌಶಲ್ಯದ ರಾಷ್ಟ್ರವಾಗಿದ್ದು, ಈ ಬೌದ್ಧಿಕ ಶಕ್ತಿಯೇ ಅದರ ದೊಡ್ಡ ಆಸ್ತಿ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಕೌಶಲ್ಯ ಮತ್ತು ಜ್ಞಾನವು ರಾಷ್ಟ್ರೀಯ ಅಗತ್ಯಗಳಿಗೆ ಹೊಂದಿಕೊಂಡಾಗ ಮತ್ತು ಅವುಗಳನ್ನು ಪೂರೈಸಲು ಕೊಡುಗೆ ನೀಡಿದಾಗ, ಅವುಗಳ ಪ್ರಭಾವವು ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಿದರು. ದೇಶದ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ಥಳೀಯ ಪ್ರತಿಭೆ, ಸ್ಥಳೀಯ ಸಂಪನ್ಮೂಲಗಳು, ಸ್ಥಳೀಯ ಕೌಶಲ್ಯಗಳು ಮತ್ತು ಸ್ಥಳೀಯ ಜ್ಞಾನವನ್ನು ವೇಗವಾಗಿ ಮುನ್ನಡೆಸುವುದು 21ನೇ ಶತಮಾನದ ಬೇಡಿಕೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಅಭಿಯಾನದಲ್ಲಿ ಸಾವಿರಾರು ಐ.ಟಿ.ಐಗಳ ಮಹತ್ವದ ಪಾತ್ರವನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಪ್ರಸ್ತುತ ಐ.ಟಿ.ಐಗಳು ಸುಮಾರು 170 ಟ್ರೇಡ್‌ ಗಳಲ್ಲಿ ತರಬೇತಿ ನೀಡುತ್ತಿದ್ದು, ಕಳೆದ 11 ವರ್ಷಗಳಲ್ಲಿ 1.5 ಕೋಟಿಗೂ ಹೆಚ್ಚು ಯುವಕರು ಈ ವಿಭಾಗಗಳಲ್ಲಿ ತರಬೇತಿ ಪಡೆದು, ವಿವಿಧ ಕ್ಷೇತ್ರಗಳಲ್ಲಿ ತಾಂತ್ರಿಕ ಅರ್ಹತೆಗಳನ್ನು ಗಳಿಸಿದ್ದಾರೆ ಎಂದು ಹೇಳಿದರು. ಈ ಕೌಶಲ್ಯಗಳನ್ನು ಸ್ಥಳೀಯ ಭಾಷೆಗಳಲ್ಲಿ ನೀಡಲಾಗುತ್ತಿದ್ದು, ಇದು ಉತ್ತಮ ತಿಳುವಳಿಕೆ ಮತ್ತು ಸುಲಭ ಲಭ್ಯತೆಗೆ ಅನುವು ಮಾಡಿಕೊಡುತ್ತದೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು. ಈ ವರ್ಷ, 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 'ಅಖಿಲ ಭಾರತ ಟ್ರೇಡ್ ಟೆಸ್ಟ್'ನಲ್ಲಿ ಭಾಗವಹಿಸಿದ್ದು, ಅವರಲ್ಲಿ ನಲವತ್ತೈದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸುವ ಅವಕಾಶ ತಮಗೆ ದೊರೆತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಪ್ರಶಸ್ತಿ ವಿಜೇತರಲ್ಲಿ ಹೆಚ್ಚಿನ ಸಂಖ್ಯೆಯವರು ಭಾರತದ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಂದ ಬಂದವರಾಗಿದ್ದಾರೆ ಎಂದು ತಿಳಿಸಿ ಪ್ರಧಾನಮಂತ್ರಿ ಅವರು ಈ ಕ್ಷಣದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಅವರಲ್ಲಿ ಹೆಣ್ಣುಮಕ್ಕಳು ಮತ್ತು ದಿವ್ಯಾಂಗ ಸಹೋದರರೂ ಇರುವುದನ್ನು ಉಲ್ಲೇಖಿಸಿದ ಅವರು, ಸಮರ್ಪಣೆ ಮತ್ತು ಪರಿಶ್ರಮದಿಂದ ಅವರು ಗಳಿಸಿದ ಯಶಸ್ಸನ್ನು ಶ್ಲಾಘಿಸಿದರು.

"ಭಾರತದ ಐ.ಟಿ.ಐಗಳು ಕೇವಲ ಕೈಗಾರಿಕಾ ಶಿಕ್ಷಣದ ಪ್ರಮುಖ ಸಂಸ್ಥೆಗಳಲ್ಲ, ಅವು 'ಆತ್ಮನಿರ್ಭರ ಭಾರತ'ವನ್ನು ನಿರ್ಮಿಸುವ ಕಾರ್ಯಾಗಾರಗಳೂ ಆಗಿವೆ," ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಐ.ಟಿ.ಐಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ನಿರಂತರವಾಗಿ ಮೇಲ್ದರ್ಜೆಗೇರಿಸುವುದರ ಮೇಲೆ ಸರ್ಕಾರ ಗಮನಹರಿಸಿದೆ ಎಂದು ಅವರು ಒತ್ತಿ ಹೇಳಿದರು. 2014ರ ವರೆಗೆ ದೇಶದಲ್ಲಿ ಕೇವಲ 10,000 ಐ.ಟಿ.ಐಗಳಿದ್ದವು, ಆದರೆ ಕಳೆದ ಒಂದು ದಶಕದಲ್ಲಿ ಸುಮಾರು 5,000 ಹೊಸ ಐ.ಟಿ.ಐಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಕೈಗಾರಿಕೆಗಳ ಕೌಶಲ್ಯದ ಅವಶ್ಯಕತೆಗಳನ್ನು ಪೂರೈಸಲು ಮತ್ತು ಮುಂದಿನ ಹತ್ತು ವರ್ಷಗಳ ಬೇಡಿಕೆಗಳನ್ನು ನಿರೀಕ್ಷಿಸಲು ಐ.ಟಿ.ಐ ಜಾಲವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಈ ಹೊಂದಾಣಿಕೆಯನ್ನು ಬಲಪಡಿಸಲು, ಕೈಗಾರಿಕೆ ಮತ್ತು ಐ.ಟಿ.ಐಗಳ ನಡುವಿನ ಸಮನ್ವಯವನ್ನು ಹೆಚ್ಚಿಸಲಾಗುತ್ತಿದೆ. ಭಾರತದಾದ್ಯಂತ 1,000ಕ್ಕೂ ಹೆಚ್ಚು ಐ.ಟಿ.ಐ ಸಂಸ್ಥೆಗಳಿಗೆ ಪ್ರಯೋಜನ ನೀಡುವ 'ಪಿ.ಎಂ. ಸೇತು' (PM SETU) ಯೋಜನೆಯನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದರು. ಈ ಯೋಜನೆಯ ಮೂಲಕ, ಐ.ಟಿ.ಐಗಳನ್ನು ಹೊಸ ಯಂತ್ರೋಪಕರಣಗಳು, ಉದ್ಯಮ ತರಬೇತಿ ತಜ್ಞರು ಮತ್ತು ಪ್ರಸ್ತುತ ಹಾಗೂ ಭವಿಷ್ಯದ ಕೌಶಲ್ಯ ಬೇಡಿಕೆಗಳಿಗೆ ಅನುಗುಣವಾದ ಪಠ್ಯಕ್ರಮದೊಂದಿಗೆ ಮೇಲ್ದರ್ಜೆಗೇರಿಸಲಾಗುವುದು. "'ಪಿ.ಎಂ. ಸೇತು' ಯೋಜನೆಯು ಭಾರತೀಯ ಯುವಕರನ್ನು ಜಾಗತಿಕ ಕೌಶಲ್ಯದ ಅವಶ್ಯಕತೆಗಳೊಂದಿಗೆ ಸಂಪರ್ಕಿಸುತ್ತದೆ" ಎಂದು ಶ್ರೀ ಮೋದಿ ಹೇಳಿದರು.

ಬಿಹಾರದ ಸಾವಿರಾರು ಯುವಕರು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಪ್ರಸ್ತಾಪಿಸಿದ ಶ್ರೀ ಮೋದಿ ಅವರು, ಎರಡು ಅಥವಾ ಎರಡೂವರೆ ದಶಕಗಳ ಹಿಂದೆ ಬಿಹಾರದಲ್ಲಿ ಶಿಕ್ಷಣ ವ್ಯವಸ್ಥೆಯು ಹೇಗೆ ಹದಗೆಟ್ಟಿತ್ತು ಎಂಬುದನ್ನು ಈ ಪೀಳಿಗೆಯು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿರಬಹುದು ಎಂದು ಹೇಳಿದರು. ಶಾಲೆಗಳನ್ನು ಪ್ರಾಮಾಣಿಕವಾಗಿ ತೆರೆಯಲಾಗುತ್ತಿರಲಿಲ್ಲ, ನೇಮಕಾತಿಗಳೂ ನಡೆಯುತ್ತಿರಲಿಲ್ಲ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳು ಸ್ಥಳೀಯವಾಗಿ ಅಧ್ಯಯನ ಮಾಡಿ ಪ್ರಗತಿ ಸಾಧಿಸಬೇಕೆಂದು ಬಯಸುತ್ತಾರೆ. ಆದರೆ, ಅನಿವಾರ್ಯತೆಯ ಕಾರಣದಿಂದಾಗಿ, ಲಕ್ಷಾಂತರ ಮಕ್ಕಳು ಬಿಹಾರವನ್ನು ತೊರೆದು ಬನಾರಸ್, ದೆಹಲಿ, ಮತ್ತು ಮುಂಬೈನಂತಹ ಸ್ಥಳಗಳಿಗೆ ವಲಸೆ ಹೋಗಬೇಕಾಯಿತು. ಇದು ವಲಸೆಯ ನಿಜವಾದ ಆರಂಭ ಎಂದು ಅವರು ಗುರುತಿಸಿದರು.

ಬೇರುಗಳಿಗೆ ಹುಳು ಹಿಡಿದ ಮರವನ್ನು ಪುನಶ್ಚೇತನಗೊಳಿಸುವುದು ಒಂದು ದೊಡ್ಡ ಸಾಹಸದ ಕೆಲಸ ಎಂದು ಹೇಳಿದ ಶ್ರೀ ಮೋದಿ ಅವರು, ವಿರೋಧ ಪಕ್ಷದ ದುರಾಡಳಿತದಲ್ಲಿ ಬಿಹಾರದ ಸ್ಥಿತಿಯನ್ನು ಅಂತಹ ಮರಕ್ಕೆ ಹೋಲಿಸಿದರು. ಅದೃಷ್ಟವಶಾತ್, ಬಿಹಾರದ ಜನರು ಶ್ರೀ ನಿತೀಶ್ ಕುಮಾರ್ ಅವರಿಗೆ ಆಡಳಿತದ ಜವಾಬ್ದಾರಿಯನ್ನು ವಹಿಸಿದರು ಮತ್ತು ಮೈತ್ರಿ ಸರ್ಕಾರದ ಸಂಪೂರ್ಣ ತಂಡವು ಒಟ್ಟಾಗಿ ಕೆಲಸ ಮಾಡಿ ಹಳಿತಪ್ಪಿದ ವ್ಯವಸ್ಥೆಗಳನ್ನು ಸರಿಪಡಿಸಿತು. ಇಂದಿನ ಕಾರ್ಯಕ್ರಮವು ಆ ಪರಿವರ್ತನೆಯ ಒಂದು ಝಲಕ್ ನೀಡುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಇಂದಿನ ಕೌಶಲ್ಯ ಘಟಿಕೋತ್ಸವ ಸಮಾರಂಭದಲ್ಲಿ ಬಿಹಾರಕ್ಕೆ ಹೊಸ ಕೌಶಲ್ಯ ವಿಶ್ವವಿದ್ಯಾಲಯ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಶ್ರೀ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ವಿಶ್ವವಿದ್ಯಾಲಯಕ್ಕೆ 'ಭಾರತ ರತ್ನ ಜನನಾಯಕ ಕರ್ಪೂರಿ ಠಾಕೂರ್' ಅವರ ಹೆಸರನ್ನು ಇಟ್ಟಿದೆ ಎಂದು ತಿಳಿಸಿದರು. ಭಾರತ ರತ್ನ ಕರ್ಪೂರಿ ಠಾಕೂರ್ ಅವರು ತಮ್ಮ ಇಡೀ ಜೀವನವನ್ನು ಸಾರ್ವಜನಿಕ ಸೇವೆ ಮತ್ತು ಶಿಕ್ಷಣದ ವಿಸ್ತರಣೆಗಾಗಿ ಮುಡಿಪಾಗಿಟ್ಟಿದ್ದರು ಮತ್ತು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳ ಉನ್ನತಿಗಾಗಿ ನಿರಂತರವಾಗಿ ಪ್ರತಿಪಾದಿಸಿದ್ದರು. ಅವರ ಗೌರವಾರ್ಥವಾಗಿ ಹೆಸರಿಸಲಾದ ಕೌಶಲ್ಯ ವಿಶ್ವವಿದ್ಯಾಲಯವು ಅದೇ ದೃಷ್ಟಿಕೋನವನ್ನು ಮುನ್ನಡೆಸಲು ಪ್ರಬಲ ಮಾಧ್ಯಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ದೃಢಪಡಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿರುವ ತಮ್ಮ ಸರ್ಕಾರಗಳು ಬಿಹಾರದ ಶಿಕ್ಷಣ ಸಂಸ್ಥೆಗಳನ್ನು ಆಧುನೀಕರಿಸಲು ನಿರಂತರವಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಐ.ಐ.ಟಿ ಪಾಟ್ನಾದಲ್ಲಿ ಮೂಲಸೌಕರ್ಯ ವಿಸ್ತರಣೆ ಪ್ರಾರಂಭವಾಗಿದ್ದು, ಬಿಹಾರದಾದ್ಯಂತ ಹಲವಾರು ಪ್ರಮುಖ ಶಿಕ್ಷಣ ಸಂಸ್ಥೆಗಳ ಆಧುನೀಕರಣವೂ ಆರಂಭವಾಗಿದೆ ಎಂದು ಅವರು ಮಾಹಿತಿ ನೀಡಿದರು. ಎನ್‌.ಐ.ಟಿ ಪಾಟ್ನಾದ ಬಿಹ್ತಾ ಕ್ಯಾಂಪಸ್ ಅನ್ನು ಈಗ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ತೆರೆಯಲಾಗಿದೆ ಎಂದು ಶ್ರೀ ಮೋದಿ ಘೋಷಿಸಿದರು. ಹೆಚ್ಚುವರಿಯಾಗಿ, ಪಾಟ್ನಾ ವಿಶ್ವವಿದ್ಯಾಲಯ, ಭೂಪೇಂದ್ರ ಮಂಡಲ್ ವಿಶ್ವವಿದ್ಯಾಲಯ, ಛಾಪ್ರಾದಲ್ಲಿರುವ ಜೈ ಪ್ರಕಾಶ್ ವಿಶ್ವವಿದ್ಯಾಲಯ ಮತ್ತು ನಳಂದ ಮುಕ್ತ ವಿಶ್ವವಿದ್ಯಾಲಯದಲ್ಲಿ ಹೊಸ ಶೈಕ್ಷಣಿಕ ಮೂಲಸೌಕರ್ಯಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವುದರ ಜೊತೆಗೆ, ಶ್ರೀ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಬಿಹಾರದ ಯುವಜನರ ಶಿಕ್ಷಣದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಉನ್ನತ ಶಿಕ್ಷಣದ ಶುಲ್ಕವನ್ನು ಪಾವತಿಸಲು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬಿಹಾರ ಸರ್ಕಾರವು 'ಸ್ಟೂಡೆಂಟ್‌ ಕ್ರೆಡಿಟ್ ಕಾರ್ಡ್' ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದ್ದು, ಈಗ ಈ ಯೋಜನೆಯಡಿ ಶೈಕ್ಷಣಿಕ ಸಾಲವನ್ನು ಬಡ್ಡಿ ರಹಿತವಾಗಿಸಲು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಹೆಚ್ಚುವರಿಯಾಗಿ, ವಿದ್ಯಾರ್ಥಿ ವೇತನವನ್ನು ₹1,800 ರಿಂದ ₹3,600 ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಘೋಷಿಸಿದರು.

"ಭಾರತವು ವಿಶ್ವದ ಯುವ  ರಾಷ್ಟ್ರಗಳಲ್ಲಿ ಒಂದಾಗಿದ್ದು, ಬಿಹಾರವು ಅತಿ ಹೆಚ್ಚು ಯುವಜನರ ಪ್ರಮಾಣವನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ," ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಬಿಹಾರದ ಯುವಕರ ಸಾಮರ್ಥ್ಯ ಬೆಳೆದಾಗ, ರಾಷ್ಟ್ರದ ಶಕ್ತಿಯೂ ಹೆಚ್ಚಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಬಿಹಾರದ ಯುವಕರನ್ನು ಮತ್ತಷ್ಟು ಸಬಲೀಕರಣಗೊಳಿಸಲು ತಮ್ಮ ಸರ್ಕಾರ ಸಂಪೂರ್ಣ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಅವರು ದೃಢವಾಗಿ ಹೇಳಿದರು. ಹಿಂದಿನ ವಿರೋಧ ಪಕ್ಷದ ಸರ್ಕಾರಕ್ಕೆ ಹೋಲಿಸಿದರೆ, ಬಿಹಾರದ ಶಿಕ್ಷಣ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಇಂದು, ಬಿಹಾರದ ಪ್ರತಿಯೊಂದು ಗ್ರಾಮ ಮತ್ತು ಹಳ್ಳಿಯಲ್ಲಿಯೂ ಶಾಲೆಯಿದೆ, ಮತ್ತು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಬಿಹಾರದ 19 ಜಿಲ್ಲೆಗಳಿಗೆ ಕೇಂದ್ರೀಯ ವಿದ್ಯಾಲಯಗಳನ್ನು ಮಂಜೂರು ಮಾಡಿದೆ ಎಂದು ಅವರು ಮಾಹಿತಿ ನೀಡಿದರು. ಒಂದು ಕಾಲದಲ್ಲಿ ಬಿಹಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಮೂಲಸೌಕರ್ಯಗಳ ಕೊರತೆಯಿತ್ತು, ಆದರೆ ಇಂದು ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಸ್ಮರಿಸಿದರು.

ಕಳೆದ ಎರಡು ದಶಕಗಳಲ್ಲಿ, ಬಿಹಾರ ಸರ್ಕಾರವು 50 ಲಕ್ಷ ಯುವಕರನ್ನು ರಾಜ್ಯದೊಳಗೆ ಉದ್ಯೋಗಾವಕಾಶಗಳೊಂದಿಗೆ ಸಂಪರ್ಕಿಸಿದೆ ಎಂದು ಹೇಳಿದ ಶ್ರೀ ಮೋದಿ ಅವರು, ಇತ್ತೀಚಿನ ವರ್ಷಗಳಲ್ಲಿಯೇ ಸುಮಾರು 10 ಲಕ್ಷ ಖಾಯಂ ಸರ್ಕಾರಿ ಉದ್ಯೋಗಗಳನ್ನು ಬಿಹಾರದ ಯುವಕರಿಗೆ ಒದಗಿಸಲಾಗಿದೆ ಎಂದು ತಿಳಿಸಿದರು. ಶಿಕ್ಷಣ ಇಲಾಖೆಯನ್ನು ಇದಕ್ಕೆ ಪ್ರಮುಖ ಉದಾಹರಣೆಯಾಗಿ ಅವರು ಉಲ್ಲೇಖಿಸಿದರು, ಅಲ್ಲಿ ಬೃಹತ್ ಪ್ರಮಾಣದಲ್ಲಿ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ, ಬಿಹಾರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ನೇಮಿಸಲಾಗಿದೆ, ಇದರಿಂದ ಯುವಕರಿಗೆ ಉದ್ಯೋಗ ಸಿಕ್ಕಿರುವುದಲ್ಲದೆ, ಶಿಕ್ಷಣ ವ್ಯವಸ್ಥೆಯ ಗುಣಮಟ್ಟದಲ್ಲಿಯೂ ಗಮನಾರ್ಹ ಸುಧಾರಣೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಿಹಾರ ಸರ್ಕಾರವು ಈಗ ಹೊಸ ಗುರಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ ಶ್ರೀ ಮೋದಿ ಅವರು, ಕಳೆದ ಎರಡು ದಶಕಗಳಲ್ಲಿ ಸೃಷ್ಟಿಸಲಾದ ಉದ್ಯೋಗಾವಕಾಶಗಳಿಗಿಂತ ಎರಡು ಪಟ್ಟು ಹೆಚ್ಚು ಉದ್ಯೋಗಗಳನ್ನು ಮುಂದಿನ ಐದು ವರ್ಷಗಳಲ್ಲಿ ಸೃಷ್ಟಿಸುವ ಗುರಿಯನ್ನು ರಾಜ್ಯ ಹೊಂದಿದೆ ಎಂದು ತಿಳಿಸಿದರು. ಬಿಹಾರದ ಯುವಕರು ಬಿಹಾರದಲ್ಲಿಯೇ ಉದ್ಯೋಗ ಮತ್ತು ಕೆಲಸವನ್ನು ಕಂಡುಕೊಳ್ಳಬೇಕು ಎಂಬ ಸಂಕಲ್ಪ ಸ್ಪಷ್ಟವಾಗಿದೆ ಎಂದು ಪ್ರಧಾನಮಂತ್ರಿ ಅವರು ದೃಢವಾಗಿ ಹೇಳಿದರು.

ಇದು ಬಿಹಾರದ ಯುವಕರಿಗೆ 'ಡಬಲ್ ಬೋನಸ್'ನ ಸಮಯ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದೇಶಾದ್ಯಂತ ನಡೆಯುತ್ತಿರುವ 'ಜಿ.ಎಸ್‌.ಟಿ ಉಳಿತಾಯ ಉತ್ಸವ'ದ ಬಗ್ಗೆ ಪ್ರಸ್ತಾಪಿಸಿದ ಅವರು, ಬೈಕ್ ಮತ್ತು ಸ್ಕೂಟರ್‌ಗಳ ಮೇಲಿನ ಜಿ.ಎಸ್‌.ಟಿ ಕಡಿಮೆಯಾಗಿರುವುದರಿಂದ ಬಿಹಾರದ ಯುವಕರಲ್ಲಿ ಸಂತಸ ಮನೆಮಾಡಿದೆ ಎಂದು ತಮಗೆ ಮಾಹಿತಿ ಬಂದಿದೆ ಎಂದು ಹೇಳಿದರು. ಅನೇಕ ಯುವಕರು ಧನತೇರಸ್ ಸಮಯದಲ್ಲಿ ಇವುಗಳನ್ನು ಖರೀದಿಸಲು ಯೋಜಿಸಿದ್ದಾರೆ. ಹೆಚ್ಚಿನ ಅಗತ್ಯ ವಸ್ತುಗಳ ಮೇಲಿನ ಜಿ.ಎಸ್‌.ಟಿ ಕಡಿತಕ್ಕಾಗಿ ಶ್ರೀ ಮೋದಿ ಅವರು ಬಿಹಾರದ ಮತ್ತು ದೇಶದ ಯುವಕರಿಗೆ ಅಭಿನಂದನೆ ಸಲ್ಲಿಸಿದರು.

"ಕೌಶಲ್ಯಗಳು ಬೆಳೆದಂತೆ, ರಾಷ್ಟ್ರವು ಆತ್ಮನಿರ್ಭರವಾಗುತ್ತದೆ, ರಫ್ತು ಹೆಚ್ಚಾಗುತ್ತದೆ ಮತ್ತು ಉದ್ಯೋಗಾವಕಾಶಗಳು ವಿಸ್ತರಿಸುತ್ತವೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. 2014ಕ್ಕಿಂತ ಮೊದಲು, ಭಾರತವನ್ನು ಕಡಿಮೆ ಬೆಳವಣಿಗೆ ಮತ್ತು ಸೀಮಿತ ಉದ್ಯೋಗ ಸೃಷ್ಟಿಯಿಂದ ಕೂಡಿದ 'ದುರ್ಬಲ ಐದು' ಆರ್ಥಿಕತೆಗಳಲ್ಲಿ ಒಂದೆಂದು ಗುರುತಿಸಲಾಗಿತ್ತು ಎಂದು ಅವರು ಸ್ಮರಿಸಿದರು. ಇಂದು, ಭಾರತವು ಉತ್ಪಾದನೆ ಮತ್ತು ಉದ್ಯೋಗದಲ್ಲಿ ಗಮನಾರ್ಹ ಬೆಳವಣಿಗೆಯೊಂದಿಗೆ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗುವತ್ತ ಸಾಗುತ್ತಿದೆ. ಮೊಬೈಲ್ ಫೋನ್‌ ಗಳು, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್‌ ಗಳು ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಉತ್ಪಾದನೆ ಮತ್ತು ರಫ್ತಿನಲ್ಲಿ ಅಭೂತಪೂರ್ವ ಬೆಳವಣಿಗೆಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ಏರಿಕೆಯು ಬೃಹತ್ ಕೈಗಾರಿಕೆಗಳು ಮತ್ತು ಎಂ.ಎಸ್‌.ಎಂ.ಇ ಗಳಲ್ಲಿ ಗಮನಾರ್ಹ ಉದ್ಯೋಗ ಸೃಷ್ಟಿಗೆ ಕಾರಣವಾಗಿದ್ದು, ಐ.ಟಿ.ಐಗಳಲ್ಲಿ ತರಬೇತಿ ಪಡೆದವರು ಸೇರಿದಂತೆ ಯುವಕರಿಗೆ ಹೆಚ್ಚಿನ ಪ್ರಯೋಜನವಾಗಿದೆ. 'ಮುದ್ರಾ ಯೋಜನೆ'ಯು ಕೋಟ್ಯಂತರ ಯುವಕರಿಗೆ ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಸಹಾಯ ಮಾಡಿದೆ ಎಂದು ಅವರು ಒತ್ತಿ ಹೇಳಿದರು. ಹೆಚ್ಚುವರಿಯಾಗಿ, ₹1 ಲಕ್ಷ ಕೋಟಿ ವೆಚ್ಚದ 'ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆ'ಯನ್ನು ಜಾರಿಗೊಳಿಸುವುದಾಗಿ ಪ್ರಧಾನಮಂತ್ರಿ ಅವರು ಘೋಷಿಸಿದರು, ಇದು ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಸುಮಾರು 3.5 ಕೋಟಿ ಯುವಕರಿಗೆ ಸಹಾಯ ಮಾಡುತ್ತದೆ.

ಇದು ದೇಶದ ಪ್ರತಿಯೊಬ್ಬ ಯುವಕರಿಗೂ ಅವಕಾಶಗಳಿಂದ ತುಂಬಿದ ಸಮಯ ಎಂದು ದೃಢವಾಗಿ ಹೇಳಿದ ಪ್ರಧಾನಮಂತ್ರಿ ಅವರು, ಅನೇಕ ವಿಷಯಗಳಿಗೆ ಪರ್ಯಾಯಗಳಿರಬಹುದು, ಆದರೆ ಕೌಶಲ್ಯ, ನಾವೀನ್ಯತೆ ಮತ್ತು ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ ಎಂದು ಒತ್ತಿ ಹೇಳಿದರು. ಈ ಎಲ್ಲಾ ಗುಣಗಳು ಭಾರತದ ಯುವಜನರಲ್ಲಿವೆ ಮತ್ತು ಅವರ ಶಕ್ತಿಯೇ 'ವಿಕಸಿತ ಭಾರತ'ದ ಶಕ್ತಿಯಾಗಲಿದೆ ಎಂದು ದೃಢವಿಶ್ವಾಸದಿಂದ ಹೇಳುತ್ತಾ ಪ್ರಧಾನಮಂತ್ರಿ ಅವರು ತಮ್ಮ ಮಾತುಗಳನ್ನು ಮುಗಿಸಿದರು ಮತ್ತು ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.

ಕೇಂದ್ರ ಸಚಿವ ಶ್ರೀ ಜಯಂತ್ ಚೌಧರಿ ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವರಾದ ಶ್ರೀ ಜುವಾಲ್ ಓರಂ, ಶ್ರೀ ರಾಜೀವ್ರಂಜನ್ ಸಿಂಗ್, ಶ್ರೀ ಸುಕಾಂತ್ ಮಜುಂದಾರ್ ಮತ್ತು ಇತರ ಗಣ್ಯರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಹಿನ್ನೆಲೆ 

ಯುವಜನರ ಅಭಿವೃದ್ಧಿಗಾಗಿ ಒಂದು ಮಹತ್ವದ ಉಪಕ್ರಮವಾಗಿ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ರೂ.62,000 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಯುವ-ಕೇಂದ್ರಿತ ಉಪಕ್ರಮಗಳನ್ನು ಅನಾವರಣಗೊಳಿಸಿದರು, ಇದು ದೇಶಾದ್ಯಂತ ಶಿಕ್ಷಣ, ಕೌಶಲ್ಯ ಮತ್ತು ಉದ್ಯಮಶೀಲತೆಗೆ ನಿರ್ಣಾಯಕ ಉತ್ತೇಜನ ನೀಡಿತು. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಆಯೋಜಿಸಲಾದ ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವದ ನಾಲ್ಕನೇ ಆವೃತ್ತಿಯಾದ ಕೌಶಲ್ಯ ದೀಕ್ಷಾಂತ್ ಸಮರೋಹ್ ಕೂಡ ಸೇರಿತ್ತು, ಇದರಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ ಬರುವ ಕೈಗಾರಿಕಾ ತರಬೇತಿ ಸಂಸ್ಥೆಗಳ 46 ಅಖಿಲ ಭಾರತ ಟಾಪರ್‌ ಗಳನ್ನು ಸನ್ಮಾನಿಸಲಾಯಿತು.

ಪ್ರಧಾನಮಂತ್ರಿ ಅವರು ರೂ. 60,000 ಕೋಟಿ ಹೂಡಿಕೆಯ ಕೇಂದ್ರ ಪ್ರಾಯೋಜಿತ ಯೋಜನೆಯಾದ 'ಪಿಎಂ-ಸೇತು' (PM-SETU - ಪ್ರಧಾನ ಮಂತ್ರಿ ಸ್ಕಿಲ್ಲಿಂಗ್ ಆಂಡ್ ಎಂಪ್ಲಾಯಬಿಲಿಟಿ ಟ್ರಾನ್ಸ್‌ಫಾರ್ಮೇಶನ್ ಥ್ರೂ ಅಪ್‌ಗ್ರೇಡೆಡ್ ಐ.ಟಿ.ಐ ಗಳು) ಗೆ ಚಾಲನೆ ನೀಡಿದರು. ಈ ಯೋಜನೆಯು ದೇಶಾದ್ಯಂತ 1,000 ಸರ್ಕಾರಿ ಐ.ಟಿ.ಐಗಳನ್ನು 'ಹಬ್-ಆ್ಯಂಡ್-ಸ್ಪೋಕ್' ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಗುರಿ ಹೊಂದಿದೆ. ಇದು 200 ಹಬ್ ಐ.ಟಿ.ಐಗಳು ಮತ್ತು 800 ಸ್ಪೋಕ್ ಐಟಿಐಗಳನ್ನು ಒಳಗೊಂಡಿದೆ. ಪ್ರತಿ ಹಬ್ ಸರಾಸರಿ ನಾಲ್ಕು ಸ್ಪೋಕ್‌ ಗಳಿಗೆ ಸಂಪರ್ಕ ಹೊಂದಿರುತ್ತದೆ, ಇದರಿಂದ ಸುಧಾರಿತ ಮೂಲಸೌಕರ್ಯ, ಆಧುನಿಕ ಟ್ರೇಡ್‌ಗಳು, ಡಿಜಿಟಲ್ ಕಲಿಕಾ ವ್ಯವಸ್ಥೆಗಳು ಮತ್ತು ಇನ್‌ಕ್ಯುಬೇಶನ್ ಸೌಲಭ್ಯಗಳನ್ನು ಹೊಂದಿರುವ ಕ್ಲಸ್ಟರ್‌ಗಳು ಸೃಷ್ಟಿಯಾಗುತ್ತವೆ. ಆ್ಯಂಕರ್ ಇಂಡಸ್ಟ್ರಿ ಪಾರ್ಟ್ನರ್‌ ಗಳು ಈ ಕ್ಲಸ್ಟರ್‌ಗಳನ್ನು ನಿರ್ವಹಿಸುತ್ತಾರೆ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಫಲಿತಾಂಶ-ಆಧಾರಿತ ಕೌಶಲ್ಯವನ್ನು ಖಚಿತಪಡಿಸುತ್ತಾರೆ. ಹಬ್‌ಗಳು ನಾವೀನ್ಯತಾ ಕೇಂದ್ರಗಳು, ತರಬೇತುದಾರರ ತರಬೇತಿ ಸೌಲಭ್ಯಗಳು, ಉತ್ಪಾದನಾ ಘಟಕಗಳು ಮತ್ತು ಉದ್ಯೋಗ ಸೇವೆಗಳನ್ನು ಸಹ ಹೊಂದಿರುತ್ತವೆ, ಆದರೆ ಸ್ಪೋಕ್‌ಗಳು ಲಭ್ಯತೆಯನ್ನು ವಿಸ್ತರಿಸುವುದರ ಮೇಲೆ ಗಮನಹರಿಸುತ್ತವೆ. ಒಟ್ಟಾರೆಯಾಗಿ, 'ಪಿಎಂ-ಸೇತು' ಭಾರತದ ಐ.ಟಿ.ಐ ವ್ಯವಸ್ಥೆಯನ್ನು ಪುನರ್‌ ವ್ಯಾಖ್ಯಾನಿಸುತ್ತದೆ, ಇದನ್ನು ಸರ್ಕಾರಿ-ಮಾಲೀಕತ್ವದಲ್ಲಿ ಆದರೆ ಕೈಗಾರಿಕೆ-ನಿರ್ವಹಣೆಯಲ್ಲಿ ನಡೆಸುತ್ತದೆ, ಮತ್ತು ವಿಶ್ವ ಬ್ಯಾಂಕ್ ಹಾಗೂ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ ಜಾಗತಿಕ ಸಹ-ಹಣಕಾಸು ಬೆಂಬಲವನ್ನು ಪಡೆಯುತ್ತದೆ. ಯೋಜನೆಯ ಅನುಷ್ಠಾನದ ಮೊದಲ ಹಂತದಲ್ಲಿ ಪಾಟ್ನಾ ಮತ್ತು ದರ್ಭಾಂಗಾದಲ್ಲಿನ ಐಟಿಐಗಳಿಗೆ ವಿಶೇಷ ಗಮನ ನೀಡಲಾಗುವುದು.

ಪ್ರಧಾನಮಂತ್ರಿ ಅವರು 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 400 ನವೋದಯ ವಿದ್ಯಾಲಯಗಳು ಮತ್ತು 200 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಸ್ಥಾಪಿಸಲಾದ 1,200 ವೃತ್ತಿಪರ ಕೌಶಲ್ಯ ಪ್ರಯೋಗಾಲಯಗಳನ್ನು ಉದ್ಘಾಟಿಸಿದರು. ಈ ಪ್ರಯೋಗಾಲಯಗಳು ದೂರದ ಮತ್ತು ಬುಡಕಟ್ಟು ಪ್ರದೇಶಗಳ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಐಟಿ, ಆಟೋಮೋಟಿವ್, ಕೃಷಿ, ಎಲೆಕ್ಟ್ರಾನಿಕ್ಸ್, ಲಾಜಿಸ್ಟಿಕ್ಸ್ ಮತ್ತು ಪ್ರವಾಸೋದ್ಯಮದಂತಹ 12 ಹೆಚ್ಚಿನ ಬೇಡಿಕೆಯಿರುವ ಕ್ಷೇತ್ರಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡುತ್ತವೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಸಿಬಿಎಸ್‌ಇ ಪಠ್ಯಕ್ರಮಕ್ಕೆ ಅನುಗುಣವಾಗಿ, ಈ ಯೋಜನೆಯು ಉದ್ಯಮ-ಸಂಬಂಧಿತ ಕಲಿಕೆಯನ್ನು ನೀಡಲು ಮತ್ತು ಉದ್ಯೋಗಾರ್ಹತೆಗೆ ಆರಂಭಿಕ ಅಡಿಪಾಯವನ್ನು ರಚಿಸಲು 1,200 ವೃತ್ತಿಪರ ಶಿಕ್ಷಕರ ತರಬೇತಿಯನ್ನು ಸಹ ಒಳಗೊಂಡಿದೆ.

ಈ ಕಾರ್ಯಕ್ರಮದಲ್ಲಿ ಬಿಹಾರದ ಶ್ರೀಮಂತ ಪರಂಪರೆ ಮತ್ತು ಯುವ ಜನಸಂಖ್ಯೆಯನ್ನು ಪ್ರತಿಬಿಂಬಿಸುವ ಪರಿವರ್ತನಾ ಯೋಜನೆಗಳಿಗೆ ವಿಶೇಷ ಒತ್ತು ನೀಡಲಾಗುವುದು. ಪ್ರಧಾನಮಂತ್ರಿ ಅವರು ಬಿಹಾರದ ಪರಿಷ್ಕೃತ 'ಮುಖ್ಯಮಂತ್ರಿ ನಿಶ್ಚಯ್ ಸ್ವಯಂ ಸಹಾಯತಾ ಭತ್ತಾ ಯೋಜನೆ'ಗೆ ಚಾಲನೆ ನೀಡಿದರು. ಇದರ ಅಡಿಯಲ್ಲಿ ಪ್ರತಿ ವರ್ಷ ಸುಮಾರು ಐದು ಲಕ್ಷ ಪದವೀಧರ ಯುವಕರು ಎರಡು ವರ್ಷಗಳವರೆಗೆ ಉಚಿತ ಕೌಶಲ್ಯ ತರಬೇತಿಯೊಂದಿಗೆ ಮಾಸಿಕ ರೂ. 1,000 ಭತ್ಯೆಯನ್ನು ಪಡೆಯುತ್ತಾರೆ. ಅವರು ಮರುವಿನ್ಯಾಸಗೊಳಿಸಲಾದ 'ಬಿಹಾರ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆ'ಗೂ ಚಾಲನೆ ನೀಡಿದರು. ಇದು ರೂ. 4 ಲಕ್ಷದವರೆಗೆ ಸಂಪೂರ್ಣ ಬಡ್ಡಿರಹಿತ ಶೈಕ್ಷಣಿಕ ಸಾಲವನ್ನು ಒದಗಿಸುತ್ತದೆ, ಇದರಿಂದ ಉನ್ನತ ಶಿಕ್ಷಣದ ಆರ್ಥಿಕ ಹೊರೆ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಯೋಜನೆಯಡಿ ಈಗಾಗಲೇ 3.92 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ರೂ. 7,880 ಕೋಟಿಗೂ ಹೆಚ್ಚು ಮೌಲ್ಯದ ಸಾಲವನ್ನು ಪಡೆದಿದ್ದಾರೆ. ರಾಜ್ಯದಲ್ಲಿ ಯುವ ಸಬಲೀಕರಣವನ್ನು ಮತ್ತಷ್ಟು ಬಲಪಡಿಸಲು, 18 ರಿಂದ 45 ವರ್ಷ ವಯಸ್ಸಿನವರಿಗಾಗಿ ಶಾಸನಬದ್ಧ ಆಯೋಗವಾದ 'ಬಿಹಾರ ಯುವ ಆಯೋಗ'ವನ್ನು ರಾಜ್ಯದ ಯುವ ಜನಸಂಖ್ಯೆಯ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರಧಾನಮಂತ್ರಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.

ಪ್ರಧಾನಮಂತ್ರಿ ಅವರು ಬಿಹಾರದಲ್ಲಿ 'ಜನ ನಾಯಕ ಕರ್ಪೂರಿ ಠಾಕೂರ್ ಕೌಶಲ್ಯ ವಿಶ್ವವಿದ್ಯಾಲಯ'ವನ್ನು ಸಹ ಉದ್ಘಾಟಿಸಿದರು. ಇದು ಜಾಗತಿಕವಾಗಿ ಸ್ಪರ್ಧಾತ್ಮಕ ಕಾರ್ಯಪಡೆಯನ್ನು ರಚಿಸಲು ಉದ್ಯಮ-ಆಧಾರಿತ ಕೋರ್ಸ್‌ಗಳು ಮತ್ತು ವೃತ್ತಿಪರ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ.

ಉನ್ನತ ಶಿಕ್ಷಣದ ಅವಕಾಶಗಳನ್ನು ಉತ್ತಮಗೊಳಿಸುವ ದೃಷ್ಟಿಯೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಮುನ್ನಡೆಸುತ್ತಾ, ಪ್ರಧಾನಮಂತ್ರಿ ಅವರು 'ಪಿ.ಎಂ.-ಉಷಾ' (ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ್) ಅಡಿಯಲ್ಲಿ ಬಿಹಾರದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಹೊಸ ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳಿಗೆ ಶಂಕುಸ್ಥಾಪನೆ ಮಾಡಿದರು. ಅವುಗಳೆಂದರೆ ಪಾಟ್ನಾ ವಿಶ್ವವಿದ್ಯಾಲಯ, ಮಧೇಪುರದ ಭೂಪೇಂದ್ರ ನಾರಾಯಣ್ ಮಂಡಲ್ ವಿಶ್ವವಿದ್ಯಾಲಯ, ಛಾಪ್ರಾದ ಜೈ ಪ್ರಕಾಶ್ ವಿಶ್ವವಿದ್ಯಾಲಯ ಮತ್ತು ಪಾಟ್ನಾದ ನಳಂದ ಮುಕ್ತ ವಿಶ್ವವಿದ್ಯಾಲಯ. ಒಟ್ಟಾರೆಯಾಗಿ, ರೂ. 160 ಕೋಟಿ ಒಟ್ಟು ಅನುದಾನದ ಈ ಯೋಜನೆಗಳು, ಆಧುನಿಕ ಶೈಕ್ಷಣಿಕ ಮೂಲಸೌಕರ್ಯ, ಸುಧಾರಿತ ಪ್ರಯೋಗಾಲಯಗಳು, ಹಾಸ್ಟೆಲ್‌ ಗಳು ಮತ್ತು ಬಹುಶಿಸ್ತೀಯ ಕಲಿಕೆಗೆ ಅನುವು ಮಾಡಿಕೊಡುವ ಮೂಲಕ 27,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡಲಿವೆ.

ಪ್ರಧಾನಮಂತ್ರಿ ಅವರು ಎನ್‌.ಐ.ಟಿ ಪಾಟ್ನಾದ ಬಿಹ್ತಾ ಕ್ಯಾಂಪಸ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 6,500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯದ ಈ ಕ್ಯಾಂಪಸ್, 5G ಬಳಕೆಯ ಕೇಸ್ ಲ್ಯಾಬ್ (5G use case lab), ಇಸ್ರೋ ಸಹಯೋಗದೊಂದಿಗೆ ಸ್ಥಾಪಿಸಲಾದ ಬಾಹ್ಯಾಕಾಶಕ್ಕಾಗಿ ಪ್ರಾದೇಶಿಕ ಶೈಕ್ಷಣಿಕ ಕೇಂದ್ರ, ಮತ್ತು ಈಗಾಗಲೇ ಒಂಬತ್ತು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಿರುವ ನಾವೀನ್ಯತೆ ಮತ್ತು ಇನ್‌ಕ್ಯುಬೇಶನ್ ಕೇಂದ್ರದಂತಹ ಸುಧಾರಿತ ಸೌಲಭ್ಯಗಳನ್ನು ಹೊಂದಿದೆ.

ಪ್ರಧಾನಮಂತ್ರಿ ಅವರು ಬಿಹಾರ ಸರ್ಕಾರದಲ್ಲಿ ಹೊಸದಾಗಿ ನೇಮಕಗೊಂಡ 4,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು ಮತ್ತು 'ಮುಖ್ಯಮಂತ್ರಿ ಬಾಲಕ/ಬಾಲಿಕಾ ವಿದ್ಯಾರ್ಥಿವೇತನ ಯೋಜನೆ' ಅಡಿಯಲ್ಲಿ 9 ಮತ್ತು 10ನೇ ತರಗತಿಯ 25 ಲಕ್ಷ ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ರೂ. 450 ಕೋಟಿ ವಿದ್ಯಾರ್ಥಿವೇತನವನ್ನು ಬಿಡುಗಡೆ ಮಾಡಿದರು.

ಚಾಲನೆ ನೀಡಲಾದ ಈ ಉಪಕ್ರಮಗಳು ಭಾರತದ ಯುವಜನರಿಗೆ ಮಹತ್ವದ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಸುಧಾರಿತ ಮೂಲಸೌಕರ್ಯಗಳನ್ನು ಸಂಯೋಜಿಸುವ ಮೂಲಕ, ಇವು ದೇಶದ ಪ್ರಗತಿಗೆ ಭದ್ರ ಅಡಿಪಾಯ ಹಾಕುವ ಗುರಿಯನ್ನು ಹೊಂದಿವೆ. ಬಿಹಾರದ ಮೇಲೆ ವಿಶೇಷ ಗಮನಹರಿಸಿರುವುದರಿಂದ, ರಾಜ್ಯವು ಕೌಶಲ್ಯಪೂರ್ಣ ಮಾನವಶಕ್ತಿಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವ ಸಾಧ್ಯತೆಯಿದ್ದು, ಇದು ಪ್ರಾದೇಶಿಕವಾಗಿ ಮತ್ತು ರಾಷ್ಟ್ರೀಯವಾಗಿ ಬೆಳವಣಿಗೆಗೆ ಕೊಡುಗೆ ನೀಡಲಿದೆ.

 

*****

 

 


(Release ID: 2174846) Visitor Counter : 7