ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ʻಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2025ʼರಲ್ಲಿ ಭಾರತ ತನ್ನ ಸೃಜನಶೀಲ ಪರಾಕ್ರಮವನ್ನು ಪ್ರದರ್ಶಿಸಲಿದೆ; ʻಬಿ.ಐ.ಎಫ್.ಎಫ್ʼಗೆ ಭಾರತದಿಂದ ಮೊಟ್ಟಮೊದಲ ಸಚಿವರ ನಿಯೋಗದ ನೇತೃತ್ವ ವಹಿಸಲಿರುವ ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್
ಇದುವರೆಗಿನ ಗರಿಷ್ಠವೆನಿಸಿದ 10 ಚಲನಚಿತ್ರಗಳೊಂದಿಗೆ ಭಾರತದ ಪ್ರಬಲ ಶ್ರೇಣಿಯನ್ನು ʻಬಿ.ಐ.ಎಫ್.ಎಫ್-2025ʼ ಪ್ರದರ್ಶಿಸಲಿದೆ; ʻಏಷ್ಯನ್ ಕಂಟೆಂಟ್ ಮತ್ತು ಫಿಲ್ಮ್ ಮಾರ್ಕೆಟ್ʼನ(ಎ.ಸಿ.ಎಫ್.ಎಂ) ಸಹ-ನಿರ್ಮಾಣ ಮಾರುಕಟ್ಟೆಗೆ 5 ಭಾರತೀಯ ಯೋಜನೆಗಳನ್ನು ಆಯ್ಕೆ ಮಾಡಲಾಗಿದೆ
ʻಬಿ.ಐ.ಎಫ್.ಎಫ್-2025ʼರಲ್ಲಿ ಭಾಗವಹಿಸುವಿಕೆಯು ಸಹ-ನಿರ್ಮಾಣಗಳನ್ನು ವಿಸ್ತರಿಸಲು, ʻಎ.ವಿ.ಜಿ.ಸಿʼ ಅವಕಾಶಗಳನ್ನು ಹೆಚ್ಚಿಸಲು ಮತ್ತು ದಕ್ಷಿಣ ಕೊರಿಯಾದೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಭಾರತದ ಸಂಕಲ್ಪವನ್ನು ಉಲ್ಲೇಖಿಸುತ್ತದೆ
ʻಭಾರತ್ ಪೆವಿಲಿಯನ್ʼನಲ್ಲಿರುವ ʻವೇವ್ಸ್ ಬಜಾರ್ʼ ವೇದಿಕೆಯು ಭಾರತೀಯ ಕಂಟೆಂಟ್ ಸೃಷ್ಟಿಕರ್ತರನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲಿದೆ, ಜೊತೆಗೆ ಸಹ-ನಿರ್ಮಾಣ ಮತ್ತು ಎ.ವಿ.ಜಿ.ಸಿಗೆ ಪ್ರೋತ್ಸಾಹಕಗಳನ್ನು ಉಲ್ಲೇಖಿಸಲಾಗಿದೆ
ಬುಸಾನ್ ನಲ್ಲಿ ʻಭಾರತ್ ಪರ್ವ್ʼ ಮತ್ತು ಭಾರತೀಯ ಚಲನಚಿತ್ರಗಳು ಭಾರತದ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಆಚರಿಸಲಿವೆ; ಸಂವಾದಗಳು ಮತ್ತು ಒಪ್ಪಂದಗಳು ಭಾರತ-ಕೊರಿಯಾ ನಡುವೆ ʻಎ.ವಿ.ಜಿ.ಸಿʼ ಮತ್ತು ಚಲನಚಿತ್ರ ಸಹ-ನಿರ್ಮಾಣ ನೀತಿಯನ್ನು ಬಲಪಡಿಸಲಿವೆ
Posted On:
16 SEP 2025 1:04PM by PIB Bengaluru
2025ನೇ ಸಾಲಿನ ʻಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವʼ(ಬಿ.ಐ.ಎಫ್.ಎಫ್-2025) ಮತ್ತು ದಕ್ಷಿಣ ಕೊರಿಯಾದ ʻಏಷ್ಯನ್ ಕಂಟೆಂಟ್ ಮತ್ತು ಚಲನಚಿತ್ರ ಮಾರುಕಟ್ಟೆʼಯಲ್ಲಿ(ಎ.ಸಿ.ಎಫ್.ಎಂ) ಗೌರವಾನ್ವಿತ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವರಾದ ಡಾ. ಎಲ್. ಮುರುಗನ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಮೂಲಕ ಭಾರತವು ಮಹತ್ವದ ಛಾಪು ಮೂಡಿಸಲು ಸಜ್ಜಾಗಿದೆ. ಇದು ʻಬಿ.ಐ.ಎಫ್.ಎಫ್ʼಗೆ ಭಾರತದಿಂದ ಮೊದಲ ಸಚಿವರ ನಿಯೋಗವಾಗಿದ್ದು, ಸಾಂಸ್ಕೃತಿಕ ರಾಜತಾಂತ್ರಿಕತೆಯನ್ನು ಬಲಪಡಿಸಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೃಜನಶೀಲ ಸಹಯೋಗವನ್ನು ವಿಸ್ತರಿಸಲು ಮತ್ತು ಭಾರತವನ್ನು ಸೃಜನಶೀಲ ಆರ್ಥಿಕತೆಯ ಜಾಗತಿಕ ಕೇಂದ್ರವಾಗಿ ಇರಿಸುವ ರಾಷ್ಟ್ರದ ಬದ್ಧತೆಯನ್ನು ಒತ್ತಿಹೇಳುತ್ತದೆ.
ನಿಯೋಗವು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು, ಎನ್.ಎಫ್.ಡಿ.ಸಿ, ಎಫ್.ಐ.ಸಿ.ಸಿ.ಐ, ಎಫ್.ಟಿ.ಐ.ಐ, ಎಸ್.ಆರ್.ಎಫ್.ಟಿ.ಐ ಮತ್ತು ಐ.ಐ.ಎಂ.ಸಿಯ ಪ್ರತಿನಿಧಿಗಳು ಹಾಗೂ ʻವೇವ್ಸ್ ಬಜಾರ್ʼ ಉಪಕ್ರಮದ ಆಯ್ದ ಕಂಟೆಂಟ್ ಸೃಷ್ಟಿಕರ್ತರನ್ನು ಒಳಗೊಂಡಿರುತ್ತದೆ.
ಭೇಟಿಗೂ ಮುನ್ನ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವರಾದ ಡಾ. ಎಲ್.ಮುರುಗನ್ ಅವರು, "ಏಷ್ಯನ್ ಮತ್ತು ಜಾಗತಿಕ ಸಿನೆಮಾದ ಅತ್ಯುತ್ತಮ ಚಿತ್ರಗಳನ್ನು ಒಟ್ಟುಗೂಡಿಸುವ ಉತ್ಸವವಾದ ʻಬಿ.ಐ.ಎಫ್.ಎಫ್ -2025ʼರಲ್ಲಿ ಭಾಗವಹಿಸಲು ಭಾರತ ಹೆಮ್ಮೆಪಡುತ್ತದೆ. ಇಲ್ಲಿ ನಮ್ಮ ಉಪಸ್ಥಿತಿಯು ಸಹ-ನಿರ್ಮಾಣಗಳನ್ನು ವಿಸ್ತರಿಸುವ, ʻಎ.ವಿ.ಜಿ.ಸಿʼಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ಹಾಗೂ ದಕ್ಷಿಣ ಕೊರಿಯಾದೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಭಾರತದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ʻವೇವ್ಸ್ ಬಜಾರ್ʼ ಮತ್ತು ʻಭಾರತ್ ಪರ್ವ್ʼ ಮೂಲಕ, ನಾವು ನಮ್ಮ ಸೃಜನಶೀಲ ಆರ್ಥಿಕತೆಯನ್ನು ಮಾತ್ರವಲ್ಲದೆ ಭಾರತದ ಕಾಲಾತೀತ ಪರಂಪರೆ ಮತ್ತು ಪ್ರತಿಭೆಯನ್ನು ಸಹ ಪ್ರದರ್ಶಿಸುತ್ತೇವೆ.ʼʼ ಎಂದು ಹೇಳಿದರು.
ಭಾರತದ ಭಾಗವಹಿಸುವಿಕೆಯ ಮುಖ್ಯಾಂಶಗಳು
ʻಬಿ.ಐ.ಎಫ್.ಎಫ್ʼ ಮತ್ತು ʻಎ.ಸಿ.ಎಫ್.ಎಂʼನಲ್ಲಿನ ʻಭಾರತ್ ಪೆವಿಲಿಯನ್ʼ ವೇದಿಕೆಯು 'ವೇವ್ಸ್ ಬಜಾರ್' ಉಪಕ್ರಮದ ಬಗ್ಗೆ ಬೆಳಕು ಚೆಲ್ಲಲಿದೆ
"ಭಾರತ-ವಿಶ್ವಕ್ಕಾಗಿ ಸೃಜನಶೀಲ ಆರ್ಥಿಕತೆ" ಎಂಬ ಧ್ಯೇಯವಾಕ್ಯದಡಿಯಲ್ಲಿ ʻ ಬಿ.ಐ.ಎಫ್.ಎಫ್ ʼ ಮತ್ತು ʻಎ.ಸಿ.ಎಫ್.ಎಂʼ ಎರಡರಲ್ಲೂ ʻಭಾರತ್ ಪೆವಿಲಿಯನ್ʼ ಅನ್ನು ಸ್ಥಾಪಿಸಲಾಗುವುದು. ʻಬಿ2ಬಿʼ ಸಭೆಗಳ ಮೂಲಕ ಭಾರತೀಯ ಕಂಟೆಂಟ್ ಸೃಷ್ಟಿಕರ್ತರು, ನಿರ್ಮಾಪಕರು ಮತ್ತು ವಿತರಕರನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ವಿನ್ಯಾಸಗೊಳಿಸಲಾದ ʻವೇವ್ಸ್ ಬಜಾರ್ʼ ಉಪಕ್ರಮವನ್ನು ಪೆವಿಲಿಯನ್ ಎತ್ತಿ ತೋರಲಿದೆ. ʻಎ.ಸಿ.ಎಫ್.ಎಂʼನ ಅಧಿಕೃತ ಕಾರ್ಯಕ್ರಮದ ಭಾಗವಾಗಿ, ಎರಡೂ ದೇಶಗಳ ಪ್ರಮುಖ ಉದ್ಯಮ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ "ಭಾರತ-ಕೊರಿಯಾ ಸಂಯೋಜನೆ: ಸಹ-ನಿರ್ಮಾಣಗಳಲ್ಲಿ ಹೊಸ ದಿಗಂತಗಳು" ಕುರಿತು ಚರ್ಚೆಯನ್ನು ಆಯೋಜಿಸಲಾಗುವುದು.
ಬುಸಾನ್ ನಲ್ಲಿ ಭಾರತೀಯ ಸಿನಿಮಾ ಪ್ರದರ್ಶನ
ಈ ವರ್ಷ ಭಾರತದ ಪ್ರದರ್ಶನವು ಅತ್ಯಂತ ಪ್ರಬಲವಾಗಿದೆ, ಹತ್ತಕ್ಕೂ ಹೆಚ್ಚು ಚಲನಚಿತ್ರಗಳು ಭಾರತೀಯ ಕಥೆ ಹೇಳುವಿಕೆಯ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ:
• ಸ್ಪೈಂಗ್ ಸ್ಟಾರ್ಸ್ (ಪದ್ಮ ಶ್ರೀ ನೀಲಾ ಮಾಧಬ್ ಪಾಂಡಾ) - ಉದ್ಘಾಟನಾ ಸ್ಪರ್ಧೆ ವಿಭಾಗದಲ್ಲಿ ಸ್ಪರ್ಧಿಸಲಿದೆ
• ಇಫ್ ಆನ್ ಎ ವಿಂಟರ್ ನೈಟ್ (ಸಂಜು ಸುರೇಂದ್ರನ್); ಕೋಕ್ ಕೋಕ್ ಕೊಕೂಕ್ (ಮಹರ್ಷಿ ತುಹಿನ್ ಕಶ್ಯಪ್); ಶೇಪ್ ಆಫ್ ಮೊಮೊ (ತ್ರಿಬೆನಿ ರೈ) - ವಿಷನ್ ಏಷ್ಯಾ ವಿಭಾಗದ ಅಡಿಯಲ್ಲಿ.
• ಇತರ ಯೋಜನೆಗಳಲ್ಲಿ ಬಯಾನ್ (ಬಿಕಾಸ್ ರಂಜನ್ ಮಿಶ್ರಾ); ಡೋಂಟ್ ಟೆಲ್ ಮದರ್ (ಅನೂಪ್ ಲೋಕೂರ್); ಫುಲ್ ಪ್ಲೇಟ್ (ತನ್ನಿಷ್ಠ ಚಟರ್ಜಿ); ಕರಿಂಜಿ (ಶೀತಲ್ ಎನ್.ಎಸ್.); ಐ, ಪಾಪ್ಪಿ(ವಿವೇಕ್ ಚೌಧರಿ) ಸೇರಿವೆ.
ʻಏಷ್ಯನ್ ಪ್ರಾಜೆಕ್ಟ್ ಮಾರ್ಕೆಟ್ʼನಲ್ಲಿ(ಎ.ಸಿ.ಎಫ್.ಎಂ), ಸಹ-ನಿರ್ಮಾಣ ಮಾರುಕಟ್ಟೆಗೆ ಐದು ಭಾರತೀಯ ಯೋಜನೆಗಳನ್ನು ಆಯ್ಕೆ ಮಾಡಲಾಗಿದೆ:
• ಡಿಫಿಕಲ್ಟ್ ಡಾಟರ್ಸ್ - ಸೋನಿ ರಜ್ದಾನ್ ನಿರ್ದೇಶಿಸಿದ್ದಾರೆ; ಆಲಿಯಾ ಭಟ್, ಶಾಹೀನ್ ಭಟ್, ಅಲನ್ ಮೆಕ್ಅಲೆಕ್ಸ್ ಮತ್ತು ಗ್ರಿಷ್ಮಾ ಶಾ ನಿರ್ಮಿಸಿದ್ದಾರೆ.
• ದಿ ಲಾಸ್ಟ್ ಆಫ್ ದೇಮ್ ಪ್ಲೇಗ್ಸ್ - ಕುಂಜಿಲಾ ಮಸ್ಸಿಲಮಣಿ ನಿರ್ದೇಶಿಸಿದ್ದಾರೆ; ಪಾಯಲ್ ಕಪಾಡಿಯಾ, ಜಿಯೋ ಬೇಬಿ ಮತ್ತು ಕನಿ ಕುಶ್ರುತಿ ನಿರ್ಮಿಸಿದ್ದಾರೆ.
• ಲಂಕಾ (ದಿ ಫೈರ್) - ಸೌರವ್ ರೈ ನಿರ್ದೇಶಿಸಿದ್ದಾರೆ; ಸುದೀಪಾ ಸಾಧುಖಾನ್, ವಿರಾಜ್ ಸೆಲೋಟ್ ಮತ್ತು ಅಂಕಿತಾ ಪುರ್ಕಾಯಸ್ಥ ನಿರ್ಮಿಸಿದ್ದಾರೆ.
• ಮೂನ್ - ಪ್ರದೀಪ್ ಕುರ್ಬಾ ನಿರ್ದೇಶನ ಮತ್ತು ನಿರ್ಮಾಣ.
• ದಿ ಮ್ಯಾಜಿಕಲ್ ಮೆನ್ - ಬಿಪ್ಲೋಬ್ ಸರ್ಕಾರ್ ನಿರ್ದೇಶಿಸಿದ್ದಾರೆ; ಭಾರತ ಮತ್ತು ಅಂತರರಾಷ್ಟ್ರೀಯ ಪಾಲುದಾರರು ಸಹ-ನಿರ್ಮಾಪಕರಾಗಿದ್ದಾರೆ.
ಭಾರತ್ ಪರ್ವ್ - ಭಾರತೀಯ ಸಂಸ್ಕೃತಿಯ ಆಚರಣೆ
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಭಾರತೀಯ ಕಲೆ, ಸಂಗೀತ ಮತ್ತು ಪಾಕಪದ್ಧತಿಯನ್ನು ಒಳಗೊಂಡ ಸಾಂಸ್ಕೃತಿಕ ಸಂಜೆ "ಭಾರತ್ ಪರ್ವ್" ಅನ್ನು ಆಯೋಜಿಸಲಿದೆ. ಈ ಕಾರ್ಯಕ್ರಮವು ಭಾರತ ಮತ್ತು ಕೊರಿಯಾದ ನಡುವೆ ಆಳವಾದ ಮಾನವ ಮತ್ತು ಸಾಂಸ್ಕೃತಿಕ ಸಂಪರ್ಕಕ್ಕೆ ವೇದಿಕೆಯಾಗಿ ಸೇವೆ ಸಲ್ಲಿಸಲಿದೆ. ಇದರಲ್ಲಿ ಭಾರತೀಯ ಮತ್ತು ಕೊರಿಯಾದ ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳ ಮುಖಂಡರು ಭಾಗವಹಿಸಲಿದ್ದಾರೆ.
ನೀತಿ ಸಂವಾದಗಳು ಮತ್ತು ಸಹಯೋಗಗಳು
• ಕೊರಿಯಾ ಗಣರಾಜ್ಯದ ಸಂಸ್ಕೃತಿ, ಕ್ರೀಡೆ ಮತ್ತು ಪ್ರವಾಸೋದ್ಯಮ ಸಚಿವರೊಂದಿಗೆ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವರ ʻಜಿ2ಜಿʼ ಸಭೆಯಲ್ಲಿ ಭಾರತ-ಕೊರಿಯಾ ಎ.ವಿ.ಜಿ.ಸಿ ಮತ್ತು ಚಲನಚಿತ್ರ ಸಹ-ನಿರ್ಮಾಣ ನೀತಿಗೆ ರಚನಾತ್ಮಕ ಸಂವಾದವನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
• ಭಾರತದ ಎನ್.ಎಫ್.ಡಿ.ಸಿ, ಎಫ್.ಟಿ.ಐ.ಐ, ಎಫ್.ಐ.ಸಿ.ಸಿ.ಐ ಮತ್ತು ಕೊರಿಯಾದ ಸಂಸ್ಥೆಗಳಾದ ಕೆ.ಎ.ಎಫ್.ಎ, ಕೆ.ಒ.ಎಫ್.ಐ.ಸಿ., ಕೆ.ಒ.ಸಿ.ಸಿ.ಎ ಮತ್ತು ಕೊರಿಯನ್ ಒ.ಟಿ.ಟಿ ವೇದಿಕೆಗಳ ನಡುವೆ ತರಬೇತಿ, ವಿನಿಮಯ ಕಾರ್ಯಕ್ರಮ ಮತ್ತು ಭಾರತೀಯ ಕಂಟೆಂಟ್ ವಿತರಣೆಗಾಗಿ ಆಶಯ ಪತ್ರಗಳಿಗೆ (ಎಲ್.ಓ.ಐ) ಸಹಿ ಹಾಕುವ ಕಾರ್ಯಕ್ರಮ ನಿಗದಿಯಾಗಿದೆ.
ಬಿ.ಐ.ಎಫ್.ಎಫ್ ಮತ್ತು ಎ.ಸಿ.ಎಫ್.ಎಂ ಬಗ್ಗೆ
ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿ.ಐ.ಎಫ್.ಎಫ್) ಏಷ್ಯಾದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಇದನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ಮತ್ತು ಕೇನ್ಸ್ ಚಲನಚಿತ್ರೋತ್ಸಗಳೊಂದಿಗೆ ಜೊತೆಗೆ ʻಎಫ್.ಐ.ಎ.ಪಿ.ಎಫ್ʼ ಗುರುತಿಸಿದೆ. ಏಷ್ಯನ್ ಕಂಟೆಂಟ್ ಮತ್ತು ಚಲನಚಿತ್ರ ಮಾರುಕಟ್ಟೆಯು (ಎ.ಸಿ.ಎಫ್.ಎಂ) ಪ್ರಮುಖ ಸಹ-ನಿರ್ಮಾಣ ಮತ್ತು ಹಣಕಾಸು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಚಲನಚಿತ್ರ ನಿರ್ಮಾಪಕರನ್ನು ಜಾಗತಿಕ ಹೂಡಿಕೆದಾರರು ಮತ್ತು ಪಾಲುದಾರರೊಂದಿಗೆ ಸಂಪರ್ಕಿಸುತ್ತದೆ.
*****
(Release ID: 2167153)
Visitor Counter : 2
Read this release in:
English
,
Urdu
,
Nepali
,
Hindi
,
Marathi
,
Bengali-TR
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam