ಪ್ರಧಾನ ಮಂತ್ರಿಯವರ ಕಛೇರಿ
ಬಿಹಾರದ ಪೂರ್ಣಿಯಾದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಸುಮಾರು ₹40,000 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ
ಪೂರ್ಣಿಯಾ ಈಗ ದೇಶದ ವಿಮಾನಯಾನ ಭೂಪಟದಲ್ಲಿ ಸ್ಥಾನ ಪಡೆದಿದೆ: ಪ್ರಧಾನಮಂತ್ರಿ
ರಾಷ್ಟ್ರೀಯ ಮಖಾನಾ ಮಂಡಳಿಯನ್ನು ರಚಿಸಲಾಗುವುದು ಎಂದು ನಾನು ಬಿಹಾರದ ಜನರಿಗೆ ಭರವಸೆ ನೀಡಿದ್ದೆ, ನಿನ್ನೆಯಷ್ಟೇ ಕೇಂದ್ರ ಸರ್ಕಾರವು ಅದರ ಸ್ಥಾಪನೆಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ: ಪ್ರಧಾನಮಂತ್ರಿ
ಭಾರತದಲ್ಲಿ, ಭಾರತದ ಕಾನೂನೇ ನಡೆಯುವುದೇ ಹೊರತು ನುಸುಳುಕೋರರ ಮನಸ್ಸೋಇಚ್ಛೆಯಲ್ಲ ಮತ್ತು ಇದು ಮೋದಿಯ ಗ್ಯಾರಂಟಿ: ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ದೇಶವು ಸಕಾರಾತ್ಮಕ ಫಲಿತಾಂಶಗಳನ್ನು ಕಾಣಲಿದೆ: ಪ್ರಧಾನಮಂತ್ರಿ
Posted On:
15 SEP 2025 5:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಪೂರ್ಣಿಯಾದಲ್ಲಿ ಸುಮಾರು ₹40,000 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ, ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎಲ್ಲರಿಗೂ ಗೌರವಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಪೂರ್ಣಿಯಾವು ಮಾ ಪುರನ್ ದೇವಿ, ಭಕ್ತ ಪ್ರಹ್ಲಾದ, ಮತ್ತು ಮಹರ್ಷಿ ಮೇಹಿ ಬಾಬಾ ಅವರ ಪುಣ್ಯಭೂಮಿಯಾಗಿದೆ ಎಂದು ಅವರು ಬಣ್ಣಿಸಿದರು. "ಈ ಮಣ್ಣು ಫಣೀಶ್ವರ್ ನಾಥ್ ರೇಣು ಮತ್ತು ಸತೀನಾಥ್ ಭಾದುರಿ ಅವರಂತಹ ಸಾಹಿತ್ಯ ದಿಗ್ಗಜರಿಗೆ ಜನ್ಮ ನೀಡಿದೆ" ಎಂದು ಶ್ರೀ ಮೋದಿಯವರು ಸ್ಮರಿಸಿದರು. ಇದಲ್ಲದೆ, ಈ ಪ್ರದೇಶವು ವಿನೋಬಾ ಭಾವೆ ಅವರಂತಹ ನಿಷ್ಠಾವಂತ ಕರ್ಮಯೋಗಿಗಳ ಕರ್ಮಭೂಮಿಯಾಗಿದೆ ಎಂದು ಹೇಳಿದ ಅವರು, ಈ ಪವಿತ್ರ ಭೂಮಿಯ ಬಗ್ಗೆ ತನಗೆ ಅಗಾಧವಾದ ಗೌರವವಿದೆ ಎಂದು ಹೇಳಿದರು.
ಬಿಹಾರಕ್ಕಾಗಿ ಸುಮಾರು ₹40,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಘೋಷಿಸಿದ ಶ್ರೀ ಮೋದಿಯವರು, "ರೈಲ್ವೆ, ವಿಮಾನ ನಿಲ್ದಾಣ, ವಿದ್ಯುತ್, ಮತ್ತು ನೀರಿನಂತಹ ಕ್ಷೇತ್ರಗಳಿಗೆ ಸಂಬಂಧಿಸಿದ ಈ ಯೋಜನೆಗಳು, ಸೀಮಾಂಚಲ ಪ್ರದೇಶದ ಜನರ ಆಶೋತ್ತರಗಳನ್ನು ಈಡೇರಿಸುವ ಸಾಧನವಾಗಿ ಕಾರ್ಯನಿರ್ವಹಿಸಲಿವೆ," ಎಂದು ಹೇಳಿದರು. "ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 40,000ಕ್ಕೂ ಹೆಚ್ಚು ಫಲಾನುಭವಿಗಳು ಶಾಶ್ವತ ಮನೆಗಳನ್ನು ಪಡೆದಿದ್ದಾರೆ. ಇಂದು ಆ 40,000 ಕುಟುಂಬಗಳ ಜೀವನದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿದೆ," ಎಂದು ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಧನತೇರಸ್, ದೀಪಾವಳಿ, ಮತ್ತು ಛಠ್ ಪೂಜೆಯ ಮೊದಲು ಪಕ್ಕಾ ಮನೆಗೆ ಪ್ರವೇಶಿಸುವುದು ದೊಡ್ಡ ಸೌಭಾಗ್ಯದ ವಿಷಯ ಎಂದು ಹೇಳಿದ ಅವರು, ಎಲ್ಲಾ ಕುಟುಂಬಗಳಿಗೆ ತಮ್ಮ ಅಭಿನಂದನೆ ಮತ್ತು ಶುಭಾಶಯಗಳನ್ನು ತಿಳಿಸಿದರು.
"ಇಂದು ಸೂರು ಇಲ್ಲದ ನನ್ನ ಸಹೋದರ ಸಹೋದರಿಯರಿಗೂ ಒಂದು ದಿನ ಶಾಶ್ವತ ಮನೆ ಸಿಗುತ್ತದೆ ಎಂಬ ಭರವಸೆಯನ್ನು ನೀಡುವ ಸಂದರ್ಭವಿದು," ಎಂದು ಹೇಳಿದ ಪ್ರಧಾನಮಂತ್ರಿಯವರು, ಕಳೆದ 11 ವರ್ಷಗಳಲ್ಲಿ ಸರ್ಕಾರವು 4 ಕೋಟಿಗೂ ಹೆಚ್ಚು ಶಾಶ್ವತ ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಿದೆ ಎಂದು ತಿಳಿಸಿದರು. "ಈಗ ಸರ್ಕಾರವು ಇನ್ನೂ 3 ಕೋಟಿ ಹೊಸ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ," ಎಂದು ಅವರು ಹೇಳಿದರು. "ಪ್ರತಿಯೊಬ್ಬ ಬಡ ನಾಗರಿಕನಿಗೂ ಶಾಶ್ವತ ಮನೆ ಸಿಗುವವರೆಗೂ ಮೋದಿ ನಿಲ್ಲುವುದೂ ಇಲ್ಲ, ವಿರಮಿಸುವುದೂ ಇಲ್ಲ. ವಂಚಿತರಿಗೆ ಆದ್ಯತೆ ನೀಡುವುದು ಮತ್ತು ಬಡವರ ಸೇವೆ ಮಾಡುವುದೇ ನನ್ನ ಸರ್ಕಾರದ ಮೂಲ ಮಂತ್ರ," ಎಂದು ಶ್ರೀ ಮೋದಿಯವರು ದೃಢವಾಗಿ ನುಡಿದರು.
"ಇಂದು, ಎಂಜಿನಿಯರ್ ಗಳ ದಿನದಂದು, ರಾಷ್ಟ್ರವು ಸರ್ ಎಂ. ವಿಶ್ವೇಶ್ವರಯ್ಯನವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತದೆ. ವಿಕಸಿತ ಭಾರತ ಮತ್ತು ವಿಕಸಿತ ಬಿಹಾರವನ್ನು ನಿರ್ಮಿಸುವಲ್ಲಿ ಎಂಜಿನಿಯರ್ ಗಳು ಮಹತ್ವದ ಪಾತ್ರ ವಹಿಸುತ್ತಾರೆ," ಎಂದು ಪ್ರಧಾನಮಂತ್ರಿಯವರು ಹೇಳಿದರು. ಅವರು ದೇಶದಾದ್ಯಂತದ ಎಲ್ಲಾ ಎಂಜಿನಿಯರ್ ಗಳಿಗೆ ತಮ್ಮ ಅಭಿನಂದನೆ ಮತ್ತು ಶುಭಾಶಯಗಳನ್ನು ತಿಳಿಸಿದರು. "ಇಂದಿನ ಈ ಕಾರ್ಯಕ್ರಮದಲ್ಲಿಯೂ ಎಂಜಿನಿಯರ್ ಗಳ ಸಮರ್ಪಣೆ ಮತ್ತು ಕೌಶಲ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪೂರ್ಣಿಯಾ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಐದು ತಿಂಗಳಿಗಿಂತ ಕಡಿಮೆ ಅವಧಿಯ ದಾಖಲೆ ಸಮಯದಲ್ಲಿ ನಿರ್ಮಿಸಲಾಗಿದೆ," ಎಂದು ಶ್ರೀ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಟರ್ಮಿನಲ್ ಅನ್ನು ಉದ್ಘಾಟಿಸಿ, ಮೊದಲ ವಾಣಿಜ್ಯ ವಿಮಾನಯಾನಕ್ಕೆ ಚಾಲನೆ ನೀಡಿದರು. "ಈ ಹೊಸ ವಿಮಾನ ನಿಲ್ದಾಣದ ಪ್ರಾರಂಭದೊಂದಿಗೆ, ಪೂರ್ಣಿಯಾ ಈಗ ದೇಶದ ವಾಯುಯಾನ ನಕ್ಷೆಯಲ್ಲಿ ಸ್ಥಾನ ಪಡೆದಿದೆ. ಇದು ಪೂರ್ಣಿಯಾ ಮತ್ತು ಸೀಮಾಂಚಲ ಪ್ರದೇಶಗಳಿಗೆ ದೇಶದ ಪ್ರಮುಖ ನಗರಗಳು ಹಾಗೂ ಪ್ರಮುಖ ವಾಣಿಜ್ಯ ಕೇಂದ್ರಗಳೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸಲಿದೆ" ಎಂದು ಪ್ರಧಾನಿ ಉಲ್ಲೇಖಿಸಿದರು.
"ನಮ್ಮ ಸರ್ಕಾರವು ಈ ಇಡೀ ಪ್ರದೇಶವನ್ನು ಆಧುನಿಕ, ಹೈ-ಟೆಕ್ ರೈಲು ಸೇವೆಗಳೊಂದಿಗೆ ಸಂಪರ್ಕಿಸುತ್ತಿದೆ," ಎಂದು ಶ್ರೀ ಮೋದಿ ಹರ್ಷ ವ್ಯಕ್ತಪಡಿಸಿದರು. ಅವರು ಇಂದು ಒಂದು ವಂದೇ ಭಾರತ್, ಎರಡು ಅಮೃತ್ ಭಾರತ್, ಮತ್ತು ಒಂದು ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ, ಅವರು ಹೊಸ ಅರಾರಿಯಾ-ಗಲ್ಗಾಲಿಯಾ ರೈಲು ಮಾರ್ಗವನ್ನು ಉದ್ಘಾಟಿಸಿದರು ಮತ್ತು ವಿಕ್ರಮಶಿಲಾ-ಕಟಾರಿಯಾ ರೈಲು ಮಾರ್ಗಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಬಕ್ಸರ್-ಭಾಗಲ್ಪುರ್ ಹೈ-ಸ್ಪೀಡ್ ಕಾರಿಡಾರ್ ನ ಮೊಕಾಮಾ-ಮುಂಗೇರ್ ವಿಭಾಗಕ್ಕೆ ಭಾರತ ಸರ್ಕಾರವು ಇತ್ತೀಚೆಗೆ ಅನುಮೋದನೆ ನೀಡುವ ಮೂಲಕ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, "ಇದು ಮುಂಗೇರ್, ಜಮಾಲ್ಪುರ್, ಮತ್ತು ಭಾಗಲ್ಪುರ್ ನಂತಹ ಕೈಗಾರಿಕಾ ಕೇಂದ್ರಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ," ಎಂದು ಹೇಳಿದರು. ಭಾಗಲ್ಪುರ್-ದುಮ್ಕಾ-ರಾಮಪುರಹತ್ ರೈಲು ಮಾರ್ಗದ ಜೋಡಿ ಮಾರ್ಗ ಕಾಮಗಾರಿಗೆ ಸರ್ಕಾರವು ಅನುಮೋದನೆ ನೀಡಿದೆ ಎಂದು ಅವರು ಇದೇ ವೇಳೆ ಘೋಷಿಸಿದರು.
"ದೇಶದ ಅಭಿವೃದ್ಧಿಗೆ, ಬಿಹಾರದ ಅಭಿವೃದ್ಧಿ ಅತ್ಯಗತ್ಯ. ಬಿಹಾರದ ಪ್ರಗತಿಗೆ, ಪೂರ್ಣಿಯಾ ಮತ್ತು ಸೀಮಾಂಚಲ ಪ್ರದೇಶದ ಅಭಿವೃದ್ಧಿ ಅತಿಮುಖ್ಯ," ಎಂದು ಶ್ರೀ ಮೋದಿ ನುಡಿದರು. ಹಿಂದಿನ ಸರ್ಕಾರಗಳ ದುರಾಡಳಿತದಿಂದಾಗಿ ಈ ಪ್ರದೇಶವು ಗಣನೀಯ ನಷ್ಟವನ್ನು ಅನುಭವಿಸಿತ್ತು ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. "ನಮ್ಮ ಸರ್ಕಾರ ಈಗ ಆ ಪರಿಸ್ಥಿತಿಯನ್ನು ಬದಲಾಯಿಸುತ್ತಿದೆ. ಈ ಪ್ರದೇಶವು ಈಗ ನಮ್ಮ ಅಭಿವೃದ್ಧಿಯ ಕೇಂದ್ರಬಿಂದುವಾಗಿದೆ," ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
"ಬಿಹಾರವನ್ನು ವಿದ್ಯುತ್ ವಲಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ," ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾಗಲ್ಪುರ್ ನ ಪಿರ್ ಪೈಂಟಿಯಲ್ಲಿ 2400 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಾಗಿದೆ ಎಂದು ತಿಳಿಸಿದರು. "ಕೇಂದ್ರ ಮತ್ತು ರಾಜ್ಯದಲ್ಲಿರುವ ನಮ್ಮ ಸರ್ಕಾರಗಳು ರೈತರು ಹಾಗೂ ಜಾನುವಾರು ಸಾಕಣೆದಾರರ ಆದಾಯವನ್ನು ಹೆಚ್ಚಿಸಲು ಬದ್ಧವಾಗಿವೆ," ಎಂದು ಅವರು ಹೇಳಿದರು. "ಕೋಸಿ-ಮೇಚಿ ರಾಜ್ಯಾಂತರಿಕ ನದಿ ಜೋಡಣೆ ಯೋಜನೆಯ ಮೊದಲ ಹಂತಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಇದು ಪೂರ್ವ ಕೋಸಿ ಮುಖ್ಯ ಕಾಲುವೆಯನ್ನು ವಿಸ್ತರಿಸಲಿದ್ದು, ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಿದೆ ಮತ್ತು ಪ್ರವಾಹದ ಸವಾಲನ್ನು ನಿಭಾಯಿಸಲು ಸಹಾಯ ಮಾಡುತ್ತದೆ," ಎಂದು ಶ್ರೀ ಮೋದಿ ಘೋಷಿಸಿದರು. "ಮಖಾನಾ ಕೃಷಿಯು ಬಿಹಾರದ ರೈತರ ಆದಾಯದ ಮೂಲವಾಗಿದೆ. ಆದರೆ, ಹಿಂದಿನ ಸರ್ಕಾರಗಳು ಈ ಬೆಳೆ ಮತ್ತು ರೈತರಿಬ್ಬರನ್ನೂ ಕಡೆಗಣಿಸಿದ್ದವು. ಮಖಾನಾಗೆ ಅದಕ್ಕೆ ಸಲ್ಲಬೇಕಾದ ಆದ್ಯತೆಯನ್ನು ನೀಡಿದ್ದೇ ನಮ್ಮ ಸರ್ಕಾರ," ಎಂದು ಅವರು ಪ್ರತಿಪಾದಿಸಿದರು.
"ನಾನು ಬಿಹಾರದ ಜನರಿಗೆ 'ರಾಷ್ಟ್ರೀಯ ಮಖಾನ ಮಂಡಳಿ'ಯನ್ನು ಸ್ಥಾಪಿಸುವ ಭರವಸೆ ನೀಡಿದ್ದೆ. ಕೇಂದ್ರ ಸರ್ಕಾರವು ಅದರ ಸ್ಥಾಪನೆಗಾಗಿ ನಿನ್ನೆಯಷ್ಟೇ ಅಧಿಸೂಚನೆಯನ್ನು ಹೊರಡಿಸಿದೆ," ಎಂದು ಪ್ರಧಾನಮಂತ್ರಿಯವರು ಘೋಷಿಸಿದರು. "ಈ ಮಂಡಳಿಯು ಮಖಾನಾ ರೈತರಿಗೆ ಉತ್ತಮ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಈ ವಲಯದಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ನಿರಂತರವಾಗಿ ಕೆಲಸ ಮಾಡಲಿದೆ," ಎಂದು ಅವರು ಒತ್ತಿ ಹೇಳಿದರು. ಇದಲ್ಲದೆ, ಮಖಾನಾ ವಲಯದ ಅಭಿವೃದ್ಧಿಗಾಗಿ ಸರ್ಕಾರವು ಸುಮಾರು ₹475 ಕೋಟಿ ಮೌಲ್ಯದ ಯೋಜನೆಯನ್ನು ಅನುಮೋದಿಸಿದೆ ಎಂದು ಅವರು ತಿಳಿಸಿದರು.
"ಬಿಹಾರದ ಇಂದಿನ ಅಭಿವೃದ್ಧಿ ಮತ್ತು ಪ್ರಗತಿಯ ವೇಗವು ಕೆಲವರಿಗೆ ತಳಮಳ ಉಂಟುಮಾಡುತ್ತಿದೆ," ಎಂದು ಹೇಳಿದ ಶ್ರೀ ಮೋದಿಯವರು, "ದಶಕಗಳ ಕಾಲ ಬಿಹಾರವನ್ನು ಶೋಷಿಸಿದವರು ಮತ್ತು ಈ ಮಣ್ಣಿಗೆ ದ್ರೋಹ ಬಗೆದವರು, ಬಿಹಾರವು ಈಗ ಹೊಸ ದಾಖಲೆಗಳನ್ನು ನಿರ್ಮಿಸಲು ಸಾಧ್ಯ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ" ಎಂದು ತಿಳಿಸಿದರು. "ಇಂದು ಬಿಹಾರದ ಪ್ರತಿಯೊಂದು ವಲಯದಲ್ಲಿ ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ," ಎಂದು ಪ್ರಧಾನಮಂತ್ರಿಯವರು ಹೇಳಿದರು. ರಾಜ್ ಗೀರ್ ನಲ್ಲಿ ಹಾಕಿ ಏಷ್ಯಾ ಕಪ್ ಆಯೋಜಿಸಿದ್ದು, ಔಂಟಾ-ಸಿಮರಿಯಾ ಸೇತುವೆಯ ಐತಿಹಾಸಿಕ ನಿರ್ಮಾಣ, ಮತ್ತು 'ಮೇಡ್-ಇನ್-ಬಿಹಾರ' ರೈಲು ಇಂಜಿನ್ ಗಳನ್ನು ಆಫ್ರಿಕಾಕ್ಕೆ ರಫ್ತು ಮಾಡಿದ್ದನ್ನು ಉದಾಹರಿಸಿದ ಅವರು, "ಈ ಸಾಧನೆಗಳನ್ನು ವಿರೋಧ ಪಕ್ಷದ ನಾಯಕರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ," ಎಂದು ಪ್ರತಿಪಾದಿಸಿದರು. "ಬಿಹಾರವು ಮುನ್ನಡೆದಾಗಲೆಲ್ಲಾ, ವಿರೋಧ ಪಕ್ಷಗಳು ರಾಜ್ಯಕ್ಕೆ ಅವಮಾನ ಮಾಡಲು ಮುಂದಾಗುತ್ತವೆ. ಇತ್ತೀಚೆಗೆ, ವಿರೋಧ ಪಕ್ಷವೊಂದು ಸಾಮಾಜಿಕ ಜಾಲತಾಣದಲ್ಲಿ ಬಿಹಾರವನ್ನು 'ಬೀಡಿ'ಗೆ ಹೋಲಿಸಿತ್ತು, ಇದು ಅವರ ಆಳವಾದ ತಿರಸ್ಕಾರವನ್ನು ತೋರಿಸುತ್ತದೆ," ಎಂದು ಅವರು ಉಲ್ಲೇಖಿಸಿದರು. "ಈ ಪಕ್ಷಗಳು ಹಿಂದೆ ಹಗರಣಗಳು ಮತ್ತು ಭ್ರಷ್ಟಾಚಾರದ ಮೂಲಕ ಬಿಹಾರದ ಹೆಸರಿಗೆ ಮಸಿ ಬಳಿದಿದ್ದರು, ಮತ್ತು ಈಗ ರಾಜ್ಯವು ಪ್ರಗತಿ ಸಾಧಿಸುತ್ತಿರುವಾಗ ಮತ್ತೆ ಅದಕ್ಕೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಮನಸ್ಥಿತಿ ಇರುವವರು ಬಿಹಾರದ ಕಲ್ಯಾಣಕ್ಕಾಗಿ ಎಂದಿಗೂ ಕೆಲಸ ಮಾಡಲು ಸಾಧ್ಯವಿಲ್ಲ. ಕೇವಲ ತಮ್ಮ ಸ್ವಂತ ಬೊಕ್ಕಸವನ್ನು ತುಂಬಿಸಿಕೊಳ್ಳುವ ಬಗ್ಗೆ ಚಿಂತಿಸುವವರು, ಬಡವರ ಮನೆಗಳ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿಲ್ಲ," ಎಂದು ಅವರು ಹೇಳಿದರು. "ಹಿಂದೊಮ್ಮೆ ಮಾಜಿ ಪ್ರಧಾನಿಯೊಬ್ಬರು, ಸರ್ಕಾರದಿಂದ ಕಳುಹಿಸಿದ ಪ್ರತಿ ₹1 ರಲ್ಲಿ 85 ಪೈಸೆ ಭ್ರಷ್ಟಾಚಾರದ ಪಾಲಾಗುತ್ತದೆ ಎಂದು ಒಪ್ಪಿಕೊಂಡಿದ್ದರು," ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು. "ವಿರೋಧ ಪಕ್ಷಗಳ ಆಡಳಿತದಲ್ಲಿ, ಹಣ ಎಂದಾದರೂ ನೇರವಾಗಿ ಬಡವರಿಗೆ ತಲುಪಿತ್ತೇ?" ಎಂದು ಅವರು ಪ್ರಶ್ನಿಸಿದರು. "ಕೋವಿಡ್-19 ಸಾಂಕ್ರಾಮಿಕದ ನಂತರ, ಪ್ರತಿಯೊಬ್ಬ ಬಡ ನಾಗರಿಕನಿಗೂ ಉಚಿತ ಪಡಿತರ ಸಿಗುತ್ತಿದೆ. ಇಂತಹ ಸೌಲಭ್ಯಗಳು ವಿರೋಧ ಪಕ್ಷಗಳ ಸರ್ಕಾರಗಳ ಅಡಿಯಲ್ಲಿ ಎಂದಾದರೂ ಸಿಕ್ಕಿತ್ತೇs? ಆಯುಷ್ಮಾನ್ ಭಾರತ್ ಯೋಜನೆಯಡಿ, ಪ್ರತಿಯೊಬ್ಬ ಬಡವರಿಗೂ ಈಗ ₹5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ. ಆಸ್ಪತ್ರೆಗಳನ್ನು ಕಟ್ಟಲು ವಿಫಲರಾದವರು ಇಂತಹ ಆರೋಗ್ಯ ಸೌಲಭ್ಯಗಳನ್ನು ಎಂದಾದರೂ ನೀಡಲು ಸಾಧ್ಯವಿತ್ತೇ?" ಎಂದು ಶ್ರೀ ಮೋದಿ ಪ್ರಶ್ನಿಸಿದರು.
ವಿರೋಧ ಪಕ್ಷಗಳು ಬಿಹಾರದ ಘನತೆಗೆ ಮಾತ್ರವಲ್ಲ, ಅದರ ಅಸ್ಮಿತೆಗೂ ಅಪಾಯವನ್ನುಂಟುಮಾಡುತ್ತಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ. ಅಕ್ರಮ ನುಸುಳುಕೋರರಿಂದಾಗಿ ಸೀಮಾಂಚಲ ಮತ್ತು ಪೂರ್ವ ಭಾರತದಲ್ಲಿ ಗಂಭೀರವಾದ ಜನಸಂಖ್ಯಾ ಬಿಕ್ಕಟ್ಟು ಉದ್ಭವಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಬಿಹಾರ, ಬಂಗಾಳ ಮತ್ತು ಅಸ್ಸಾಂನಲ್ಲಿನ ಜನರು ತಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ ಎಂದು ಶ್ರೀ ಮೋದಿಯವರು ಕಳವಳ ವ್ಯಕ್ತಪಡಿಸಿದರು. ಈ ಸಮಸ್ಯೆಯನ್ನು ಪರಿಹರಿಸಲು ತಾವು ಕೆಂಪುಕೋಟೆಯಿಂದ 'ಜನಸಂಖ್ಯಾ ಮಿಷನ್' (ಡೆಮೋಗ್ರಫಿ ಮಿಷನ್) ಘೋಷಿಸಿದ್ದನ್ನು ಅವರು ನೆನಪಿಸಿಕೊಂಡರು. ಮತಬ್ಯಾಂಕ್ ರಾಜಕಾರಣಕ್ಕಾಗಿ ನುಸುಳುಕೋರರನ್ನು ರಕ್ಷಿಸುವ ಮತ್ತು ಅವರಿಗೆ ಗುರಾಣಿಯಾಗಲು ಯತ್ನಿಸುತ್ತಿರುವ ವಿರೋಧ ಪಕ್ಷಗಳ ಮೈತ್ರಿಕೂಟ ಮತ್ತು ಅದರ ಪರಿಸರ ವ್ಯವಸ್ಥೆಯನ್ನು ಪ್ರಧಾನಮಂತ್ರಿಯವರು ಟೀಕಿಸಿದರು. ಈ ಗುಂಪುಗಳು ಬಿಹಾರ ಮತ್ತು ದೇಶದ ಸಂಪನ್ಮೂಲಗಳು ಹಾಗೂ ಭದ್ರತೆ ಎರಡನ್ನೂ ಅಪಾಯಕ್ಕೆ ತಳ್ಳಲು ಸಿದ್ಧವಾಗಿವೆ ಎಂದು ಶ್ರೀ ಮೋದಿಯವರು ಪ್ರತಿಪಾದಿಸಿದರು. ಪೂರ್ಣಿಯಾದ ನೆಲದಿಂದ ಮಾತನಾಡಿದ ಅವರು, ಪ್ರತಿಯೊಬ್ಬ ನುಸುಳುಕೋರನನ್ನೂ ಹೊರಹಾಕಲೇಬೇಕು ಎಂದು ಘೋಷಿಸಿದರು. ನುಸುಳುಕೋರತನಕ್ಕೆ ಸಂಪೂರ್ಣ ಕಡಿವಾಣ ಹಾಕುವುದು ನಮ್ಮ ಸರ್ಕಾರದ ದೃಢವಾದ ಜವಾಬ್ದಾರಿಯಾಗಿದೆ ಎಂದು ಅವರು ದೃಢಪಡಿಸಿದರು. ನೇರ ಸವಾಲನ್ನು ಎಸೆದ ಪ್ರಧಾನಮಂತ್ರಿಯವರು, ನುಸುಳುಕೋರರನ್ನು ರಕ್ಷಿಸುವ ನಾಯಕರು ಮುಂದೆ ಬರಲಿ ಎಂದು ಕರೆ ನೀಡಿದರು. ನುಸುಳುಕೋರರನ್ನು ರಕ್ಷಿಸಲು ಅವರು ಎಷ್ಟೇ ಪ್ರಯತ್ನಿಸಿದರೂ, ಅವರನ್ನು ಹೊರಹಾಕುವ ಕೆಲಸವನ್ನು ಸರ್ಕಾರ ಸಂಕಲ್ಪದೊಂದಿಗೆ ಮುಂದುವರಿಸುತ್ತದೆ ಎಂದು ಅವರು ಹೇಳಿದರು. ನುಸುಳುಕೋರರಿಗೆ ಗುರಾಣಿಯಾಗಿ ನಿಂತಿರುವವರಿಗೆ, ಇಲ್ಲಿ ಭಾರತೀಯ ಕಾನೂನು ನಡೆಯುವುದೇ ಹೊರತು ಅಕ್ರಮ ಪ್ರವೇಶಿಕರ ಮನಸ್ಸೋ ಇಚ್ಛೆಯಲ್ಲ ಎಂದು ಅವರು ಎಚ್ಚರಿಸಿದರು. ಒಳನುಸುಳುಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ದೇಶವು ಅದರ ಫಲಿತಾಂಶಗಳನ್ನು ನೋಡಲಿದೆ ಎಂದು ಅವರು ದೇಶಕ್ಕೆ ಭರವಸೆ ನೀಡಿದರು, ಇದು ನನ್ನ ಗ್ಯಾರಂಟಿ ಎಂದು ತಿಳಿಸಿದರು. ನುಸುಳುಕೋರತನವನ್ನು ಬೆಂಬಲಿಸುವ ಕಥನಗಳನ್ನು ಪ್ರಚಾರ ಮಾಡುತ್ತಿರುವ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಶ್ರೀ ಮೋದಿಯವರು ಟೀಕಿಸಿದರು ಮತ್ತು ಬಿಹಾರ ಹಾಗೂ ಭಾರತದ ಜನರು ಅವರಿಗೆ ಬಲವಾದ ಮತ್ತು ನಿರ್ಣಾಯಕ ಉತ್ತರವನ್ನು ನೀಡಲು ಸಿದ್ಧರಾಗುತ್ತಿದ್ದಾರೆ ಎಂದು ಘೋಷಿಸಿದರು.
ಬಿಹಾರದಲ್ಲಿ ಕಳೆದ ಎರಡು ದಶಕಗಳಿಂದ ವಿರೋಧ ಪಕ್ಷವು ಅಧಿಕಾರದಿಂದ ಹೊರಗಿದೆ ಮತ್ತು ಈ ಬದಲಾವಣೆಯ ಹಿಂದಿನ ಪ್ರೇರಕ ಶಕ್ತಿ ಬಿಹಾರದ ಮಹಿಳೆಯರು, ಅಂದರೆ ಇಲ್ಲಿನ ತಾಯಂದಿರು ಮತ್ತು ಸಹೋದರಿಯರೇ ಆಗಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ವಿರೋಧ ಪಕ್ಷದ ಆಡಳಿತದ ಸಮಯದಲ್ಲಿ, ಕೊಲೆ, ಅತ್ಯಾಚಾರ ಮತ್ತು ಸುಲಿಗೆಯಂತಹ ವ್ಯಾಪಕ ಅಪರಾಧಗಳಿಗೆ ಮಹಿಳೆಯರೇ ಪ್ರಮುಖ ಬಲಿಪಶುಗಳಾಗಿದ್ದರು ಎಂದು ಅವರು ಉಲ್ಲೇಖಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿನ ನಮ್ಮ ಸರ್ಕಾರಗಳ ಅಡಿಯಲ್ಲಿ, ಇದೇ ಮಹಿಳೆಯರು ಇಂದು ಸ್ವಸಹಾಯ ಗುಂಪುಗಳ ಮೂಲಕ 'ಲಕ್ಷಪತಿ ದೀದಿ' ಮತ್ತು 'ಡ್ರೋನ್ ದೀದಿ'ಗಳಾಗಿ ಹೊರಹೊಮ್ಮುತ್ತಿದ್ದು, ಒಂದು ಪರಿವರ್ತನಾತ್ಮಕ ಕ್ರಾಂತಿಯನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ಶ್ರೀ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ 'ಜೀವಿಕಾ ದೀದಿ' ಅಭಿಯಾನವು ಕಂಡ ಅಭೂತಪೂರ್ವ ಯಶಸ್ಸನ್ನು ಅವರು ಶ್ಲಾಘಿಸಿದರು.
ಮಹಿಳೆಯರಿಗಾಗಿ ಸುಮಾರು ₹500 ಕೋಟಿ ಮೊತ್ತದ 'ಸಮುದಾಯ ಬಂಡವಾಳ ನಿಧಿ'ಯನ್ನು (Community Investment Fund) ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿಯವರು ಘೋಷಿಸಿದರು. ಈ ಮೊತ್ತವು ಕ್ಲಸ್ಟರ್ ಮಟ್ಟದ ಒಕ್ಕೂಟಗಳನ್ನು ತಲುಪಲಿದ್ದು, ಇದು ಹಳ್ಳಿಗಳಲ್ಲಿನ ಸ್ವಸಹಾಯ ಗುಂಪುಗಳನ್ನು ಸಬಲೀಕರಣಗೊಳಿಸುತ್ತದೆ ಎಂದು ಅವರು ವಿವರಿಸಿದರು. ಈ ಉಪಕ್ರಮವು ಮಹಿಳೆಯರಿಗೆ ತಮ್ಮ ಸಾಮರ್ಥ್ಯ ಮತ್ತು ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ವಿರೋಧ ಪಕ್ಷಗಳಿಗೆ ತಮ್ಮ ಸ್ವಂತ ಕುಟುಂಬಗಳ ಕಲ್ಯಾಣವೇ ಯಾವಾಗಲೂ ಮೊದಲ ಆದ್ಯತೆಯಾಗಿದೆ, ಅವರು ಜನರ ಕುಟುಂಬಗಳ ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡಿಲ್ಲ ಎಂದು ಶ್ರೀ ಮೋದಿಯವರು ಹೇಳಿದರು. ತನಗೆ ದೇಶದ ಪ್ರತಿಯೊಬ್ಬ ನಾಗರಿಕನೂ ತನ್ನ ಕುಟುಂಬದ ಭಾಗ ಎಂದು ಅವರು ಒತ್ತಿ ಹೇಳಿದರು. ಆದ್ದರಿಂದ, ತಾನು ಜನರ ಖರ್ಚುವೆಚ್ಚಗಳು ಮತ್ತು ಅವರ ಉಳಿತಾಯದ ಬಗ್ಗೆ ಚಿಂತಿಸುತ್ತೇನೆ ಎಂದು ಅವರು ಹೇಳಿದರು. ದೀಪಾವಳಿ ಮತ್ತು ಛಠ್ ಪೂಜೆ ಸೇರಿದಂತೆ ಹಲವಾರು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿಯವರು ಬಡವರು ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಒಂದು ದೊಡ್ಡ ಉಡುಗೊರೆಯನ್ನು ಘೋಷಿಸಿದರು. "ಇಂದು ಸೆಪ್ಟೆಂಬರ್ 15, ಮತ್ತು ಸರಿಯಾಗಿ ಒಂದು ವಾರದ ನಂತರ ನವರಾತ್ರಿ ಪ್ರಾರಂಭವಾಗಲಿದೆ. ಆ ದಿನ, ಅಂದರೆ ಸೆಪ್ಟೆಂಬರ್ 22 ರಂದು, ದೇಶಾದ್ಯಂತ ಜಿ ಎಸ್ ಟಿ ಯನ್ನು ಕಡಿಮೆ ಮಾಡಲಾಗುವುದು," ಎಂದು ಅವರು ಹೇಳಿದರು. ಹೆಚ್ಚಿನ ದಿನಬಳಕೆಯ ವಸ್ತುಗಳ ಮೇಲಿನ ಜಿ ಎಸ್ ಟಿ ಯನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ ಎಂದು ಶ್ರೀ ಮೋದಿಯವರು ತಿಳಿಸಿದರು. ಇಲ್ಲಿ ನೆರೆದಿರುವ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿ ಎಸ್ ಟಿ ಇಳಿಕೆಯು ಅಡುಗೆಮನೆಯ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂದರು. ಟೂತ್ ಪೇಸ್ಟ್, ಸೋಪು, ಶಾಂಪೂ, ತುಪ್ಪ ಮತ್ತು ವಿವಿಧ ಆಹಾರ ಉತ್ಪನ್ನಗಳಂತಹ ವಸ್ತುಗಳು ಇನ್ನಷ್ಟು ಅಗ್ಗವಾಗಲಿವೆ. ಮಕ್ಕಳ ಶಿಕ್ಷಣಕ್ಕೆ ಬಳಸುವ ಲೇಖನ ಸಾಮಗ್ರಿಗಳ ಬೆಲೆಯೂ ಕಡಿಮೆಯಾಗಲಿದೆ ಎಂದು ಅವರು ಹೇಳಿದರು. ಈ ಹಬ್ಬದ ಋತುವಿನಲ್ಲಿ, ಮಕ್ಕಳಿಗೆ ಹೊಸ ಬಟ್ಟೆ ಮತ್ತು ಶೂಗಳನ್ನು ಖರೀದಿಸುವುದು ಸುಲಭವಾಗಲಿದೆ, ಏಕೆಂದರೆ ಅವುಗಳ ಬೆಲೆಯೂ ಇಳಿಯಲಿದೆ. ಬಡವರ ಬಗ್ಗೆ ನಿಜವಾಗಿಯೂ ಕಾಳಜಿವಹಿಸುವ ಸರ್ಕಾರವಿದ್ದಾಗ, ಅದು ಇಂತಹ ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಪೂರ್ಣಿಯಾದ ಪುತ್ರರು ಬ್ರಿಟಿಷರಿಗೆ ಭಾರತದ ಶಕ್ತಿಯನ್ನು ಪ್ರದರ್ಶಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮತ್ತೊಮ್ಮೆ 'ಆಪರೇಷನ್ ಸಿಂಧೂರ'ದ ಮೂಲಕ ರಾಷ್ಟ್ರವು ತನ್ನ ವೈರಿಗಳಿಗೆ ಅದೇ ಶಕ್ತಿಯನ್ನು ತೋರಿಸಿದೆ ಎಂದು ನುಡಿದರು. ಈ ಕಾರ್ಯಾಚರಣೆಯ ಯಶಸ್ವಿ ಅನುಷ್ಠಾನದಲ್ಲಿ ಪೂರ್ಣಿಯಾದ ವೀರ ಪುತ್ರನೊಬ್ಬ ಮಹತ್ವದ ಪಾತ್ರ ವಹಿಸಿದ್ದಾನೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ರಾಷ್ಟ್ರೀಯ ಭದ್ರತೆಯಾಗಲಿ ಅಥವಾ ರಾಷ್ಟ್ರೀಯ ಅಭಿವೃದ್ಧಿಯಾಗಲಿ, ದೇಶದ ಪ್ರಗತಿಯಲ್ಲಿ ಬಿಹಾರವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಬಿಹಾರದ ಅಭಿವೃದ್ಧಿ ಅಭಿಯಾನದ ಈ ವೇಗವು ಪೂರ್ಣ ಬಲದೊಂದಿಗೆ ಮುಂದುವರಿಯಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಹಾರದ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್, ಬಿಹಾರದ ಮುಖ್ಯಮಂತ್ರಿಗಳಾದ ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವರಾದ ಶ್ರೀ ರಾಮ್ಮೋಹನ್ ನಾಯ್ಡು, ಶ್ರೀ ರಾಜೀವ್ ರಂಜನ್ ಸಿಂಗ್, ಶ್ರೀ ಜಿತನ್ ರಾಮ್ ಮಾಂಝಿ, ಶ್ರೀ ಗಿರಿರಾಜ್ ಸಿಂಗ್, ಶ್ರೀ ಚಿರಾಗ್ ಪಾಸ್ವಾನ್, ಶ್ರೀ ನಿತ್ಯಾನಂದ ರೈ, ಶ್ರೀ ರಾಮ್ ನಾಥ್ ಠಾಕೂರ್, ಡಾ. ರಾಜ್ ಭೂಷಣ್ ಚೌಧರಿ, ಶ್ರೀ ಸತೀಶ್ ಚಂದ್ರ ದುಬೆ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ಬಿಹಾರದಲ್ಲಿ ರಾಷ್ಟ್ರೀಯ ಮಖಾನಾ ಮಂಡಳಿಗೆ ಚಾಲನೆ ನೀಡಿದರು. ಈ ಮಂಡಳಿಯು ಮಖಾನಾ ಉತ್ಪಾದನೆ ಮತ್ತು ಹೊಸ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ, ಕೊಯ್ಲಿನ ನಂತರದ ನಿರ್ವಹಣೆಯನ್ನು ಬಲಪಡಿಸುತ್ತದೆ, ಮೌಲ್ಯವರ್ಧನೆ ಮತ್ತು ಸಂಸ್ಕರಣೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಮಾರುಕಟ್ಟೆ, ರಫ್ತು ಹಾಗೂ ಬ್ರ್ಯಾಂಡ್ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುತ್ತದೆ. ಇದರಿಂದ ಬಿಹಾರ ಮತ್ತು ದೇಶದ ಮಖಾನಾ ರೈತರಿಗೆ ಪ್ರಯೋಜನವಾಗಲಿದೆ.
ದೇಶದ ಒಟ್ಟು ಮಖಾನಾ ಉತ್ಪಾದನೆಯಲ್ಲಿ ಬಿಹಾರವು ಸುಮಾರು 90% ಪಾಲನ್ನು ಹೊಂದಿದೆ. ಮಧುಬನಿ, ದರ್ಭಾಂಗ, ಸೀತಾಮರ್ಹಿ, ಸಹರ್ಸಾ, ಕತಿಹಾರ್, ಪೂರ್ಣಿಯಾ, ಸುಪೌಲ್, ಕಿಶನ್ ಗಂಜ್ ಮತ್ತು ಅರಾರಿಯಾಗಳಂತಹ ಪ್ರಮುಖ ಜಿಲ್ಲೆಗಳು ಇದರ ಪ್ರಾಥಮಿಕ ಕೇಂದ್ರಗಳಾಗಿವೆ. ಇಲ್ಲಿನ ಅನುಕೂಲಕರ ಹವಾಮಾನ ಮತ್ತು ಫಲವತ್ತಾದ ಮಣ್ಣು ಉತ್ತಮ ಗುಣಮಟ್ಟದ ಮಖಾನಾ ಉತ್ಪಾದನೆಗೆ ಕೊಡುಗೆ ನೀಡುತ್ತವೆ. ಬಿಹಾರದಲ್ಲಿ ಮಖಾನಾ ಮಂಡಳಿಯ ಸ್ಥಾಪನೆಯು ರಾಜ್ಯ ಮತ್ತು ದೇಶದಲ್ಲಿ ಮಖಾನಾ ಉತ್ಪಾದನೆಗೆ ದೊಡ್ಡ ಉತ್ತೇಜನ ನೀಡಲಿದೆ ಮತ್ತು ಈ ವಲಯದಲ್ಲಿ ಜಾಗತಿಕ ಭೂಪಟದಲ್ಲಿ ಬಿಹಾರದ ಸ್ಥಾನವನ್ನು ಬಲಪಡಿಸುತ್ತದೆ.
ಪ್ರಧಾನಮಂತ್ರಿಯವರು ಪೂರ್ಣಿಯಾ ವಿಮಾನ ನಿಲ್ದಾಣದ ಹೊಸ ನಾಗರಿಕ ಎನ್ ಕ್ಲೇವ್ ನ ಮಧ್ಯಂತರ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು, ಇದು ಈ ಪ್ರದೇಶದಲ್ಲಿ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಪ್ರಧಾನಮಂತ್ರಿಯವರು ಪೂರ್ಣಿಯಾದಲ್ಲಿ ಸುಮಾರು ₹40,000 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಿ, ಹಲವು ಯೋಜನೆಗಳನ್ನು ಉದ್ಘಾಟಿಸಿದರು.
ಪ್ರಧಾನಮಂತ್ರಿಯವರು ಭಾಗಲ್ಪುರದ ಪಿರ್ ಪೈಂಟಿಯಲ್ಲಿ 3x800 ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಯೋಜನೆಗೆ ಅಡಿಗಲ್ಲು ಹಾಕಿದರು. ಇದು ₹25,000 ಕೋಟಿ ಮೌಲ್ಯದ, ಬಿಹಾರದ ಅತಿದೊಡ್ಡ ಖಾಸಗಿ ವಲಯದ ಹೂಡಿಕೆಯಾಗಿದೆ. ಇದನ್ನು ಅಲ್ಟ್ರಾ-ಸೂಪರ್ ಕ್ರಿಟಿಕಲ್, ಕಡಿಮೆ-ಹೊರಸೂಸುವಿಕೆಯ ತಂತ್ರಜ್ಞಾನದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು ಮೀಸಲಾದ ವಿದ್ಯುತ್ ಒದಗಿಸುತ್ತದೆ ಮತ್ತು ಬಿಹಾರದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ.
ಪ್ರಧಾನಮಂತ್ರಿಯವರು ₹2680 ಕೋಟಿಗೂ ಅಧಿಕ ಮೌಲ್ಯದ ಕೋಸಿ-ಮೇಚಿ ಅಂತರ-ರಾಜ್ಯ ನದಿ ಜೋಡಣೆ ಯೋಜನೆಯ ಮೊದಲ ಹಂತಕ್ಕೆ ಅಡಿಗಲ್ಲು ಹಾಕಿದರು. ಇದು ಕಾಲುವೆಯಲ್ಲಿನ ಹೂಳೆತ್ತುವುದು, ಹಾನಿಗೊಳಗಾದ ರಚನೆಗಳ ಪುನರ್ನಿರ್ಮಾಣ, ಮತ್ತು ಸೆಟ್ಲಿಂಗ್ ಬೇಸಿನ್‌ನ ನವೀಕರಣ ಸೇರಿದಂತೆ ಕಾಲುವೆಯನ್ನು ಮೇಲ್ದರ್ಜೆಗೇರಿಸುವುದರ ಮೇಲೆ ಗಮನಹರಿಸುತ್ತದೆ. ಜೊತೆಗೆ, ಇದರ ವಿಸರ್ಜನಾ ಸಾಮರ್ಥ್ಯವನ್ನು 15,000 ದಿಂದ 20,000 ಕ್ಯುಸೆಕ್ಸ್‌ಗೆ ಹೆಚ್ಚಿಸಲಾಗುವುದು. ಇದು ಈಶಾನ್ಯ ಬಿಹಾರದ ಅನೇಕ ಜಿಲ್ಲೆಗಳಿಗೆ ನೀರಾವರಿ ವಿಸ್ತರಣೆ, ಪ್ರವಾಹ ನಿಯಂತ್ರಣ ಮತ್ತು ಕೃಷಿ ಸ್ಥಿತಿಸ್ಥಾಪಕತ್ವದಲ್ಲಿ ಪ್ರಯೋಜನ ನೀಡಲಿದೆ.
ರೈಲು ಸಂಪರ್ಕವನ್ನು ಸುಧಾರಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಬಿಹಾರದಲ್ಲಿ ಹಲವಾರು ರೈಲು ಯೋಜನೆಗಳನ್ನು ಉದ್ಘಾಟಿಸಿ, ಅಡಿಗಲ್ಲು ಹಾಕಿ, ಹಾಗೂ ಅನೇಕ ರೈಲುಗಳಿಗೆ ಹಸಿರು ನಿಶಾನೆ ತೋರಿದರು.
ಪ್ರಧಾನಮಂತ್ರಿಯವರು ₹2,170 ಕೋಟಿಗೂ ಅಧಿಕ ಮೌಲ್ಯದ ಬಿಕ್ರಮಶಿಲಾ – ಕಟರೇಹ್ ನಡುವಿನ ರೈಲು ಮಾರ್ಗಕ್ಕೆ ಅಡಿಗಲ್ಲು ಹಾಕಿದರು. ಇದು ಗಂಗಾ ನದಿಯಾದ್ಯಂತ ನೇರ ರೈಲು ಸಂಪರ್ಕವನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದ ಜನರಿಗೆ ಗಣನೀಯವಾಗಿ ಪ್ರಯೋಜನ ನೀಡಲಿದೆ.
ಪ್ರಧಾನಮಂತ್ರಿಯವರು ₹4,410 ಕೋಟಿಗೂ ಅಧಿಕ ಮೌಲ್ಯದ ಅರಾರಿಯಾ - ಗಲ್ಗಾಲಿಯಾ (ಠಾಕುರ್ ಗಂಜ್) ನಡುವಿನ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಿದರು.
ಪ್ರಧಾನಮಂತ್ರಿಯವರು ಅರಾರಿಯಾ – ಗಲ್ಗಾಲಿಯಾ (ಠಾಕುರ್ ಗಂಜ್) ವಿಭಾಗದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿದರು. ಇದು ಅರಾರಿಯಾ ಮತ್ತು ಕಿಶನ್ ಗಂಜ್ ಜಿಲ್ಲೆಗಳ ನಡುವೆ ನೇರ ರೈಲು ಸಂಪರ್ಕವನ್ನು ಸ್ಥಾಪಿಸುತ್ತದೆ, ಈಶಾನ್ಯ ಬಿಹಾರದಾದ್ಯಂತ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಅವರು ಜೋಗ್ ಬನಿ ಮತ್ತು ದಾನಾಪುರ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಇದು ಅರಾರಿಯಾ, ಪೂರ್ಣಿಯಾ, ಮಧೇಪುರ, ಸಹರ್ಸಾ, ಖಗರಿಯಾ, ಬೇಗುಸರಾಯ್, ಸಮಸ್ತಿಪುರ್, ಮುಜಫರ್ ಪುರ್, ವೈಶಾಲಿ ಮತ್ತು ಪಾಟ್ನಾ ಜಿಲ್ಲೆಗಳಿಗೆ ನೇರವಾಗಿ ಪ್ರಯೋಜನ ನೀಡುತ್ತದೆ. ಅವರು ಸಹರ್ಸಾ ಮತ್ತು ಛೇಹರ್ತಾ (ಅಮೃತಸರ) ಹಾಗೂ ಜೋಗ್ ಬನಿ ಮತ್ತು ಈರೋಡ್ ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೂ ಚಾಲನೆ ನೀಡಿದರು. ಈ ರೈಲುಗಳು ಆಧುನಿಕ ಒಳಾಂಗಣ, ಸುಧಾರಿತ ಸೌಲಭ್ಯಗಳು ಮತ್ತು ವೇಗದ ಪ್ರಯಾಣ ಸಾಮರ್ಥ್ಯಗಳನ್ನು ಒದಗಿಸುತ್ತವೆ ಹಾಗೂ ಪ್ರದೇಶಗಳ ನಡುವೆ ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಏಕೀಕರಣವನ್ನು ಹೆಚ್ಚಿಸುತ್ತವೆ.
ಪ್ರಧಾನಮಂತ್ರಿಯವರು ಪೂರ್ಣಿಯಾದಲ್ಲಿ ಲಿಂಗ ನಿರ್ಧಾರಿತ ವೀರ್ಯ ಸೌಲಭ್ಯ (Sex Sorted Semen Facility) ಕೇಂದ್ರವನ್ನು ಉದ್ಘಾಟಿಸಿದರು. ಇದು ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ ವೀರ್ಯ ಕೇಂದ್ರವಾಗಿದ್ದು, ವಾರ್ಷಿಕ 5 ಲಕ್ಷ ಲಿಂಗ ನಿರ್ಧಾರಿತ ವೀರ್ಯ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಈ ರೀತಿಯ ಮೊದಲ ಸೌಲಭ್ಯ ಇದಾಗಿದ್ದು, ಅಕ್ಟೋಬರ್ 2024 ರಲ್ಲಿ ಬಿಡುಗಡೆಯಾದ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ಬಳಸುತ್ತದೆ. ಇದು "ಮೇಕ್ ಇನ್ ಇಂಡಿಯಾ" ಮತ್ತು "ಆತ್ಮನಿರ್ಭರ ಭಾರತ" ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಹೆಣ್ಣು ಕರುಗಳ ಜನನದ ಸಾಧ್ಯತೆಯನ್ನು ಹೆಚ್ಚಿಸುವ ಮೂಲಕ, ಈ ತಂತ್ರಜ್ಞಾನವು ಸಣ್ಣ, ಅತಿ ಸಣ್ಣ ರೈತರು ಮತ್ತು ಭೂಹೀನ ಕಾರ್ಮಿಕರಿಗೆ ಹೆಚ್ಚಿನ ಬದಲಿ ಹೆಬ್ಬೆ ಕರುಗಳನ್ನು ಪಡೆಯಲು, ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಹೈನುಗಾರಿಕೆ ಉತ್ಪಾದಕತೆಯನ್ನು ಸುಧಾರಿಸುವ ಮೂಲಕ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪ್ರಧಾನಮಂತ್ರಿಯವರು PMAY (ಗ್ರಾಮೀಣ) ಅಡಿಯಲ್ಲಿ 35,000 ಗ್ರಾಮೀಣ ಫಲಾನುಭವಿಗಳು ಮತ್ತು PMAY (ನಗರ) ಅಡಿಯಲ್ಲಿ 5,920 ನಗರ ಫಲಾನುಭವಿಗಳಿಗಾಗಿ ಆಯೋಜಿಸಲಾದ ಗೃಹ ಪ್ರವೇಶ ಸಮಾರಂಭಗಳಲ್ಲಿ ಭಾಗವಹಿಸಿ, ಕೆಲವು ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸಿದರು.
ಪ್ರಧಾನಮಂತ್ರಿಯವರು ಬಿಹಾರದಲ್ಲಿ DAY-NRLM ಅಡಿಯಲ್ಲಿ ಕ್ಲಸ್ಟರ್ ಮಟ್ಟದ ಒಕ್ಕೂಟಗಳಿಗೆ (CLF) ಸುಮಾರು ₹500 ಕೋಟಿ ಮೌಲ್ಯದ ಸಮುದಾಯ ಬಂಡವಾಳ ನಿಧಿಯನ್ನು ವಿತರಿಸಿದರು ಮತ್ತು ಕೆಲವು CLF ಅಧ್ಯಕ್ಷರಿಗೆ ಚೆಕ್ ಗಳನ್ನು ಹಸ್ತಾಂತರಿಸಿದರು.
*****
(Release ID: 2167048)
Visitor Counter : 2
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam