ಪ್ರಧಾನ ಮಂತ್ರಿಯವರ ಕಛೇರಿ
ಪಂಜಾಬ್‌ನ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಮಂತ್ರಿ
ಗುರುದಾಸ್‌ಪುರದಲ್ಲಿ ನಡೆದ ಸಭೆಯಲ್ಲಿ ಹಾನಿಯ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ
ಪಂಜಾಬ್ ರಾಜ್ಯಕ್ಕೆ ಈಗಾಗಲೇ ಇರುವ 12,000 ಕೋಟಿ ರೂ.ಗಳ ಜೊತೆಗೆ 1600 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ ಪ್ರಧಾನಮಂತ್ರಿ
ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ ಪ್ರಧಾನಮಂತ್ರಿ
ಇತ್ತೀಚಿನ ಪ್ರವಾಹ ಮತ್ತು ಭೂಕುಸಿತದಿಂದ ಅನಾಥರಾದ ಮಕ್ಕಳಿಗೆ ಮಕ್ಕಳಿಗಾಗಿ ಪಿ.ಎಂ. ಕೇರ್ಸ್ ಯೋಜನೆಯಡಿ ಸಮಗ್ರ ಬೆಂಬಲವನ್ನು ಘೋಷಿಸಿದ ಪ್ರಧಾನಮಂತ್ರಿ
ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ ಪ್ರಧಾನಮಂತ್ರಿ ಸಂತಾಪ
ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಮತ್ತು ಆಪದಾ ಮಿತ್ರ ಸ್ವಯಂಸೇವಕರನ್ನೂ ಭೇಟಿ ಮಾಡಿದ ಪ್ರಧಾನಮಂತ್ರಿ
ಸಂತ್ರಸ್ತ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಮರುಸ್ಥಾಪನೆ ಮತ್ತು ಪುನರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಎಲ್ಲ ನೆರವಿನ ಭರವಸೆ
Posted On:
09 SEP 2025 5:34PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಸೆಪ್ಟೆಂಬರ್ 9ರಂದು ಪಂಜಾಬ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿಅವರು ಪ್ರವಾಹ ಪರಿಸ್ಥಿತಿ ಮತ್ತು ಪಂಜಾಬ್‌ನ ಪೀಡಿತ ಪ್ರದೇಶಗಳಲ್ಲಿ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು.
ಪ್ರಧಾನಮಂತ್ರಿ ಅವರು ಪಂಜಾಬ್‌ನ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ನಂತರ ಅವರು ಗುರುದಾಸ್‌ಪುರದಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ಅಧಿಕೃತ ಪರಿಶೀಲನಾ ಸಭೆ ನಡೆಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೈಗೊಂಡ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಪರಿಶೀಲಿಸಿದರು ಮತ್ತು ಪಂಜಾಬ್‌ನಲ್ಲಿ ಆಗಿರುವ ಹಾನಿಯ ಮೌಲ್ಯಮಾಪನ ಮಾಡಿದರು.
ಪಂಜಾಬ್ ರಾಜ್ಯಕ್ಕೆ ಈಗಾಗಲೇ ಇರುವ 12,000 ಕೋಟಿ ರೂಪಾಯಿಗಳ ಜೊತೆಗೆ 1,600 ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ಘೋಷಿಸಿದರು. ಎಸ್.ಡಿ.ಆರ್.ಎಫ್ ಮತ್ತು ಪಿ.ಎಂ. ಕಿಸಾನ್ ಸಮ್ಮಾನ್ ನಿಧಿಯ ಎರಡನೇ ಕಂತಿನ ಮುಂಗಡ ಬಿಡುಗಡೆಯೂ ಆಗಲಿದೆ.
ಇಡೀ ಪ್ರದೇಶ ಮತ್ತು ಅದರ ಜನರು ಚೇತರಿಸಿಕೊಳ್ಳಲು ಸಹಾಯ ಮಾಡಲು ಬಹು ಆಯಾಮದ ವಿಧಾನದ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಪುನರ್ ನಿರ್ಮಿಸುವುದು, ರಾಷ್ಟ್ರೀಯ ಹೆದ್ದಾರಿಗಳ ಪುನರ್ ನಿರ್ಮಾಣ, ಶಾಲೆಗಳ ಪುನರ್ ನಿರ್ಮಾಣ, ಪಿ.ಎಂ.ಎನ್.ಆರ್.ಎಫ್ ಮೂಲಕ ಪರಿಹಾರ ಒದಗಿಸುವುದು ಮತ್ತು ಜಾನುವಾರುಗಳಿಗೆ ಮಿನಿ ಕಿಟ್‌ಗಳನ್ನು ವಿತರಿಸುವಂತಹ ಕ್ರಮಗಳು ಇದರಲ್ಲಿ ಸೇರಿವೆ.
ಕೃಷಿ ಸಮುದಾಯವನ್ನು ಬೆಂಬಲಿಸುವ ನಿರ್ಣಾಯಕ ಅಗತ್ಯವನ್ನು ಗುರುತಿಸಿ, ಪ್ರಸ್ತುತ ವಿದ್ಯುತ್ ಸಂಪರ್ಕಗಳಿಲ್ಲದ ರೈತರನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ಹೆಚ್ಚುವರಿ ಸಹಾಯವನ್ನು ಒದಗಿಸಲಾಗುವುದು. ಹೂಳು ತುಂಬಿದ ಅಥವಾ ಕೊಚ್ಚಿ ಹೋಗಿರುವ ಕೊಳವೆಗಳಿಗೆ, ರಾಜ್ಯ ಸರ್ಕಾರದ ನಿರ್ದಿಷ್ಟ ಪ್ರಸ್ತಾವನೆಯ ಪ್ರಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಯೋಜನಾ ಮಾದರಿಯಲ್ಲಿ ನವೀಕರಣಕ್ಕೆ ಬೆಂಬಲವನ್ನು ವಿಸ್ತರಿಸಲಾಗುವುದು.
ಡೀಸೆಲ್‌ನಲ್ಲಿ ಚಲಿಸುವ ಬೋರ್ ಪಂಪ್‌ಗಳಿಗೆ, ಸೌರ ಫಲಕಗಳಿಗಾಗಿ ಎಂ.ಎನ್.ಆರ್.ಇ ಜೊತೆ ಸಂಯೋಜನೆ ಮತ್ತು ಪ್ರತಿ ಹನಿ ಹೆಚ್ಚು ಬೆಳೆ ಮಾರ್ಗಸೂಚಿಗಳ ಅಡಿಯಲ್ಲಿ ಸೂಕ್ಷ್ಮ ನೀರಾವರಿಗೆ ಬೆಂಬಲವನ್ನು ಸುಗಮಗೊಳಿಸಲಾಗುವುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ ಅಡಿಯಲ್ಲಿಗ್ರಾಮೀಣ ಪ್ರದೇಶದಲ್ಲಿ ಮನೆಗಳ ಪುನರ್ ನಿರ್ಮಾಣಕ್ಕಾಗಿ ಪಂಜಾಬ್ ಸರ್ಕಾರ ಸಲ್ಲಿಸಿದ ವಿಶೇಷ ಯೋಜನೆಯಡಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು ಹಾನಿಗೊಳಗಾದ ಅರ್ಹ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು.
ಪಂಜಾಬ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಹಾನಿಗೊಳಗಾದ ಸರ್ಕಾರಿ ಶಾಲೆಗಳಿಗೆ ಸಮಗ್ರ ಶಿಕ್ಷಾ ಅಭಿಯಾನದಡಿ ಆರ್ಥಿಕ ನೆರವು ನೀಡಲಾಗುವುದು. ರಾಜ್ಯ ಸರ್ಕಾರವು ಮಾರ್ಗಸೂಚಿಗಳ ಪ್ರಕಾರ ಅಗತ್ಯವಿರುವ ಎಲ್ಲಾ ಪೂರಕ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
ಜಲ ಸಂಚಾಯ್ ಜನ ಭಾಗೀದಾರಿ ಕಾರ್ಯಕ್ರಮದ ಅಡಿಯಲ್ಲಿ ಪಂಜಾಬ್‌ನಲ್ಲಿ ನೀರು ಕೊಯ್ಲಿಗಾಗಿ ಮರುಪೂರಣ ಕಟ್ಟಡಗಳ ನಿರ್ಮಾಣವನ್ನು ವ್ಯಾಪಕವಾಗಿ ಕೈಗೊಳ್ಳಲಾಗುವುದು. ಹಾನಿಗೊಳಗಾದ ಮರುಪೂರಣ ರಚನೆಗಳನ್ನು ಸರಿಪಡಿಸಲು ಮತ್ತು ಹೆಚ್ಚುವರಿ ನೀರು ಕೊಯ್ಲು ರಚನೆಗಳನ್ನು ನಿರ್ಮಿಸಲು ಇದು ಗುರಿಯಾಗಲಿದೆ. ಈ ಪ್ರಯತ್ನಗಳು ಮಳೆನೀರು ಕೊಯ್ಲು ಹೆಚ್ಚಿಸುತ್ತವೆ ಮತ್ತು ದೀರ್ಘಕಾಲೀನ ನೀರಿನ ಸುಸ್ಥಿರತೆಯನ್ನು ಖಚಿತಪಡಿಸುತ್ತವೆ.
ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಕೇಂದ್ರ ಸರ್ಕಾರವು ಪಂಜಾಬ್‌ಗೆ ಭೇಟಿ ನೀಡಲು ಅಂತರ ಸಚಿವಾಲಯ ಕೇಂದ್ರ ತಂಡಗಳನ್ನು ಕಳುಹಿಸಿದೆ ಮತ್ತು ಅವರ ವಿವರವಾದ ವರದಿಯ ಆಧಾರದ ಮೇಲೆ ಹೆಚ್ಚಿನ ಸಹಾಯವನ್ನು ಪರಿಗಣಿಸಲಾಗುವುದು.
ನೈಸರ್ಗಿಕ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ ಅವರು, ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ಹೇಳಿದರು.
ಪ್ರವಾಹ ಮತ್ತು ವಿಪತ್ತುಗಳಿಂದ ಬಾಧಿತರಾದ ಪಂಜಾಬ್‌ನ ಕುಟುಂಬಗಳನ್ನು ಪ್ರಧಾನಮಂತ್ರಿ ಭೇಟಿ ಮಾಡಿದರು. ನೊಂದ ಎಲ್ಲರಿಗೂ ತಮ್ಮ ಸಂಪೂರ್ಣ ಒಗ್ಗಟ್ಟನ್ನು ವ್ಯಕ್ತಪಡಿಸಿದ ಅವರು, ತಮ್ಮ ಆಪ್ತರನ್ನು ಕಳೆದುಕೊಂಡವರಿಗೆ ತೀವ್ರ ದುಃಖ ವ್ಯಕ್ತಪಡಿಸಿದರು.
ಪ್ರವಾಹ ಮತ್ತು ನೈಸರ್ಗಿಕ ವಿಕೋಪದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ.ಗಳ ಪರಿಹಾರ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ.ಗಳ ಪರಿಹಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದರು.
ಇತ್ತೀಚಿನ ಪ್ರವಾಹ ಮತ್ತು ಭೂಕುಸಿತದಿಂದ ಅನಾಥರಾದ ಮಕ್ಕಳಿಗೆ ಮಕ್ಕಳಿಗಾಗಿ ಪಿ.ಎಂ. ಕೇರ್ಸ್ ಯೋಜನೆಯಡಿ ಸಮಗ್ರ ನೆರವು ನೀಡಲಾಗುವುದು ಎಂದು ಪ್ರಧಾನಮಂತ್ರಿ ಘೋಷಿಸಿದರು. ಇದು ಅವರ ದೀರ್ಘಕಾಲೀನ ಕಲ್ಯಾಣವನ್ನು ಖಚಿತಪಡಿಸುತ್ತದೆ.
ರಾಜ್ಯಗಳಿಗೆ ಮುಂಗಡ ವಿತರಣೆ ಸೇರಿದಂತೆ ವಿಪತ್ತು ನಿರ್ವಹಣಾ ನಿಯಮಗಳ ಅಡಿಯಲ್ಲಿ ಎಲ್ಲಾ ನೆರವು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ತಕ್ಷಣದ ಪರಿಹಾರ ಮತ್ತು ಸ್ಪಂದನೆಗಾಗಿ ಪ್ರಯತ್ನಗಳನ್ನು ಮಾಡಿದ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಸೇನೆ, ರಾಜ್ಯ ಆಡಳಿತ ಮತ್ತು ಇತರ ಸೇವಾ ಆಧಾರಿತ ಸಂಸ್ಥೆಗಳ ಸಿಬ್ಬಂದಿಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ರಾಜ್ಯದ ಜ್ಞಾಪಕ ಪತ್ರ ಮತ್ತು ಕೇಂದ್ರ ತಂಡಗಳ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಮೌಲ್ಯಮಾಪನವನ್ನು ಮತ್ತಷ್ಟು ಪರಿಶೀಲಿಸುತ್ತದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪ್ರಧಾನಮಂತ್ರಿ ಅವರು, ಪರಿಸ್ಥಿತಿಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ಭರವಸೆ ನೀಡಿದರು.
*****
(Release ID: 2165098)
Visitor Counter : 2