ಪ್ರಧಾನ ಮಂತ್ರಿಯವರ ಕಛೇರಿ
ಜಪಾನ್ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
Posted On:
29 AUG 2025 5:08PM by PIB Bengaluru
ಘನತೆವೇತ್ತ ಪ್ರಧಾನಮಂತ್ರಿ ಇಶಿಬಾ ಅವರೇ,
ಉಭಯ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮದ ಸ್ನೇಹಿತರೇ
ನಮಸ್ತೆ!
ಕೊನ್ಬನ್ವಾ! (ಶುಭ ಸಂಜೆ)
ಮೊದಲನೆಯದಾಗಿ, ಪ್ರಧಾನಮಂತ್ರಿ ಇಶಿಬಾ ಅವರ ಕರುಣೆಯ ಮಾತುಗಳು ಮತ್ತು ಆತ್ಮೀಯ ಸ್ವಾಗತಕ್ಕಾಗಿ ನಾನು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.
ಇಂದಿನ ನಮ್ಮ ಚರ್ಚೆಯು ಫಲಪ್ರದ ಮತ್ತು ನಿರ್ದಿಷ್ಟ ಉದ್ದೇಶಗಳನ್ನು ಒಳಗೊಂಡಿತ್ತು. ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವಗಳಾಗಿ, ನಮ್ಮ ಪಾಲುದಾರಿಕೆಯು ನಮ್ಮ ಎರಡೂ ದೇಶಗಳಿಗೆ ಮಾತ್ರವಲ್ಲದೆ ಜಾಗತಿಕ ಶಾಂತಿ ಮತ್ತು ಸ್ಥಿರತೆಗೂ ಬಹಳ ಮುಖ್ಯವಾಗಿದೆ ಎಂಬುದನ್ನು ನಾವಿಬ್ಬರೂ ಒಪ್ಪುತ್ತೇವೆ.
ಉತ್ತಮ ಜಗತ್ತನ್ನು ರೂಪಿಸುವಲ್ಲಿ ಬಲವಾದ ಪ್ರಜಾಪ್ರಭುತ್ವಗಳು ಸಹಜ ಪಾಲುದಾರರು.
ಸ್ನೇಹಿತರೇ,
ಇಂದು, ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಹೊಸ ಮತ್ತು ಸುವರ್ಣ ಅಧ್ಯಾಯಕ್ಕೆ ನಾವು ಬಲವಾದ ಅಡಿಪಾಯ ಹಾಕಿದ್ದೇವೆ. ಮುಂದಿನ ದಶಕಕ್ಕೆ ನಾವು ಒಂದು ಮಾರ್ಗಸೂಚಿಯನ್ನು ಹೊಂದಿದ್ದೇವೆ. ನಮ್ಮ ಚಿಂತನೆ, ದೃಷ್ಟಿಕೋನವು ಹೂಡಿಕೆ, ನಾವೀನ್ಯತೆ, ಆರ್ಥಿಕ ಭದ್ರತೆ, ಪರಿಸರ, ತಂತ್ರಜ್ಞಾನ, ಆರೋಗ್ಯ, ಚಲನಶೀಲತೆ, ಜನತೆ ಮತ್ತು ಜನತೆಯ ನಡುವಣ ಸಂಬಂಧಗಳು ಹಾಗು ಆಡಳಿತ- ಸಹಕಾರದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಜಪಾನ್‌ನಿಂದ 10 ಟ್ರಿಲಿಯನ್ ಯೆನ್ ಹೂಡಿಕೆಯ ಗುರಿಯನ್ನು ನಾವು ಹೊಂದಿದ್ದೇವೆ. ಎರಡೂ ದೇಶಗಳ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ನವೋದ್ಯಮಗಳನ್ನು ಜೋಡಿಸಲು ನಾವು ವಿಶೇಷ ಗಮನ ನೀಡುತ್ತೇವೆ.
ಭಾರತ-ಜಪಾನ್ ವ್ಯಾಪಾರ ವೇದಿಕೆಯಲ್ಲೂ, ನಾನು ಜಪಾನಿನ ಕಂಪನಿಗಳನ್ನು "ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್" ಗಾಗಿ ಒತ್ತಾಯಿಸಿದ್ದೇನೆ.
ಸ್ನೇಹಿತರೇ,
ನಮ್ಮ ಜಂಟಿ ಕ್ರೆಡಿಟ್ ಕಾರ್ಯವಿಧಾನವು ಇಂಧನಕ್ಕೆ ಒಂದು ದೊಡ್ಡ ಗೆಲುವು. ಇದು ನಮ್ಮ ಹಸಿರು ಪಾಲುದಾರಿಕೆಯು ನಮ್ಮ ಆರ್ಥಿಕ ಪಾಲುದಾರಿಕೆಯಷ್ಟೇ ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತದೆ. ಈ ದಿಕ್ಕಿನಲ್ಲಿ, ನಾವು ಸುಸ್ಥಿರ ಇಂಧನ ಉಪಕ್ರಮ ಮತ್ತು ಬ್ಯಾಟರಿ ಸರಬರಾಜು ಸರಪಳಿ ಪಾಲುದಾರಿಕೆಯನ್ನು ಸಹ ಪ್ರಾರಂಭಿಸುತ್ತಿದ್ದೇವೆ.
ನಾವು ಆರ್ಥಿಕ ಭದ್ರತಾ ಸಹಕಾರ ಉಪಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ಇದರ ಅಡಿಯಲ್ಲಿ, ನಾವು ನಿರ್ಣಾಯಕ ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಸಮಗ್ರ ವಿಧಾನದೊಂದಿಗೆ ಮುಂದುವರಿಯುತ್ತೇವೆ.
ಉನ್ನತ ತಂತ್ರಜ್ಞಾನದ ಕ್ಷೇತ್ರದಲ್ಲಿ ಸಹಕಾರವು ನಮ್ಮಿಬ್ಬರಿಗೂ ಆದ್ಯತೆಯಾಗಿದೆ. ಈ ಸಂದರ್ಭದಲ್ಲಿ, ಡಿಜಿಟಲ್ ಪಾಲುದಾರಿಕೆ 2.0 ಮತ್ತು ಕೃತಕ ಬುದ್ಧಿಮತ್ತೆ ಸಹಕಾರ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅರೆವಾಹಕಗಳು ಮತ್ತು ಅಪರೂಪದ ಭೂ- ಖನಿಜಗಳು ನಮ್ಮ ಕಾರ್ಯಸೂಚಿಗಳ ಆದ್ಯತೆಯಲ್ಲಿವೆ.
ಸ್ನೇಹಿತರೇ,
ಜಪಾನಿನ ತಂತ್ರಜ್ಞಾನ ಮತ್ತು ಭಾರತೀಯ ಪ್ರತಿಭೆಗಳು ಗೆಲುವಿನ ಸಂಯೋಜನೆ ಎಂದು ನಾವು ನಂಬುತ್ತೇವೆ. ಒಂದು ತುದಿಯಲ್ಲಿ ನಾವು ಹೈ-ಸ್ಪೀಡ್ ರೈಲಿನ ಮೇಲೆ ಕೆಲಸ ಮಾಡುತ್ತಿದ್ದರೆ, ಮುಂದಿನ ಪೀಳಿಗೆಯ ಚಲನಶೀಲತೆಯ ಪಾಲುದಾರಿಕೆಯಡಿಯಲ್ಲಿ ಬಂದರುಗಳು, ವಾಯುಯಾನ ಮತ್ತು ಹಡಗು ನಿರ್ಮಾಣದಂತಹ ಕ್ಷೇತ್ರಗಳಲ್ಲಿಯೂ ನಾವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದ್ದೇವೆ.
ಚಂದ್ರಯಾನ-5 ಕಾರ್ಯಾಚರಣೆಯಲ್ಲಿ ಸಹಕಾರಕ್ಕಾಗಿ ಇಸ್ರೋ ಮತ್ತು ಜೆಎಎಕ್ಸ್‌ಎ ನಡುವೆ ಮಾಡಿಕೊಂಡ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಸಕ್ರಿಯ ಭಾಗವಹಿಸುವಿಕೆಯು ಭೂಮಿಯ ಗಡಿಗಳನ್ನು ಮೀರಿ ಮತ್ತು ಬಾಹ್ಯಾಕಾಶದಲ್ಲಿ ಮಾನವೀಯತೆಯ ಪ್ರಗತಿಯನ್ನು ಸಂಕೇತಿಸುತ್ತದೆ!
ಸ್ನೇಹಿತರೇ,
ಮಾನವ ಸಂಪನ್ಮೂಲ ವಿನಿಮಯದ ಕ್ರಿಯಾ ಯೋಜನೆಯಡಿಯಲ್ಲಿ, ಮುಂದಿನ ಐದು ವರ್ಷಗಳಲ್ಲಿ, ಎರಡೂ ಕಡೆಯವರು ವಿವಿಧ ಕ್ಷೇತ್ರಗಳಲ್ಲಿ 5 ಲಕ್ಷ ಜನರ ವಿನಿಮಯವನ್ನು ಪ್ರೋತ್ಸಾಹಿಸಬೇಕು. ಇದರ ಅಡಿಯಲ್ಲಿ 50,000 ನುರಿತ ಭಾರತೀಯರು ಜಪಾನ್‌ನ ಆರ್ಥಿಕತೆಗೆ ಸಕ್ರಿಯವಾಗಿ ಕೊಡುಗೆ ನೀಡಲಿದ್ದಾರೆ.
ಭಾರತ ಮತ್ತು ಜಪಾನ್ ನಡುವಿನ ಪಾಲುದಾರಿಕೆ ದಿಲ್ಲಿ ಮತ್ತು ಟೋಕಿಯೊಗೆ ಮಾತ್ರ ಸೀಮಿತವಾಗಿರಬಾರದು. ಭಾರತದ ರಾಜ್ಯಗಳು ಮತ್ತು ಜಪಾನ್ ಪ್ರಾಂತ್ಯಗಳ ನಡುವಿನ ಸಾಂಸ್ಥಿಕ ಸಹಕಾರದ ಮೂಲಕ ನಮ್ಮ ತೊಡಗಿಸಿಕೊಳ್ಳುವಿಕೆಯು ಬಲಿಷ್ಟವಾಗುತ್ತದೆ, ಆಳವಾಗುತ್ತದೆ. ಇದು ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ.
ಸ್ನೇಹಿತರೇ,
ಭಾರತ ಮತ್ತು ಜಪಾನ್ ಮುಕ್ತ, ತೆರೆದ, ಶಾಂತಿಯುತ, ಸಮೃದ್ಧ ಮತ್ತು ನಿಯಮ ಆಧಾರಿತ ಇಂಡೋ-ಪೆಸಿಫಿಕ್‌ಗೆ ಸಂಪೂರ್ಣವಾಗಿ ಬದ್ಧವಾಗಿವೆ.
ಭಯೋತ್ಪಾದನೆ ಮತ್ತು ಸೈಬರ್ ಭದ್ರತೆಯ ಬಗ್ಗೆ ನಮಗೆ ಕಳವಳಗಳಿವೆ. ರಕ್ಷಣೆ ಮತ್ತು ಕಡಲ ಭದ್ರತೆಯ ಕ್ಷೇತ್ರಗಳಲ್ಲಿಯೂ ನಮಗೆ ಹಿತಾಸಕ್ತಿಗಳಿವೆ. ರಕ್ಷಣಾ ಉದ್ಯಮ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ಜಂಟಿಯಾಗಿ ನಿರ್ಧರಿಸಿದ್ದೇವೆ.
ಸ್ನೇಹಿತರೇ,
ಭಾರತ ಮತ್ತು ಜಪಾನ್ ಪಾಲುದಾರಿಕೆಯು ಪರಸ್ಪರ ನಂಬಿಕೆಯಲ್ಲಿ ಬೇರೂರಿದೆ, ನಮ್ಮ ರಾಷ್ಟ್ರೀಯ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಹಂಚಿಕೆಯ ಮೌಲ್ಯಗಳು ಮತ್ತು ನಂಬಿಕೆಗಳಿಂದ ರೂಪುಗೊಂಡಿದೆ.
ಜೊತೆಗೂಡಿ, ನಾವು ನಮ್ಮ ಜನರ ಮತ್ತು ಪ್ರಪಂಚದ ಶಾಂತಿ, ಪ್ರಗತಿ ಹಾಗು ಸಮೃದ್ಧಿಯ ಸಾಮಾನ್ಯ ಕನಸನ್ನು ಹೊತ್ತಿದ್ದೇವೆ.
ಗೌರವಾನ್ವಿತರೇ,
ಮತ್ತೊಮ್ಮೆ, ನಿಮ್ಮ ಸ್ನೇಹಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಮತ್ತು ಮುಂದಿನ ವಾರ್ಷಿಕ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡಲು ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ.
ಅರಿಗಾಟೊ ಗೊಜೈಮಾಸು.
ಧನ್ಯವಾದಗಳು
ಘೋಷಣೆ -ಇದು ಪ್ರಧಾನಮಂತ್ರಿ ಅವರ ಹೇಳಿಕೆಗಳ ಸರಿಸುಮಾರಾದ ಭಾಷಾಂತರ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.
*****
(Release ID: 2162199)
Visitor Counter : 21
Read this release in:
Malayalam
,
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu