ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ-ಜಪಾನ್ ಆರ್ಥಿಕ ವೇದಿಕೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

Posted On: 29 AUG 2025 11:57AM by PIB Bengaluru

ಗೌರವಾನ್ವಿತ ಪ್ರಧಾನ ಮಂತ್ರಿ ಇಶಿಬಾ ಅವರೇ, 
ಭಾರತ ಮತ್ತು ಜಪಾನ್ ನ ಉದ್ಯಮ ಮುಖಂಡರೇ, 
ಮಹಿಳೆಯರೇ ಮತ್ತು ಮಹನೀಯರೇ,

ನಮಸ್ಕಾರ

ಕೊನ್ನಿಚಿವಾ!

ನಾನು ಇಂದು ಬೆಳಿಗ್ಗೆಯೇ ಟೋಕಿಯೋಗೆ ಬಂದಿಳಿದಿದ್ದೇನೆ. ನನ್ನ ಈ ಪ್ರವಾಸವು ವ್ಯಾಪಾರ ಪ್ರಪಂಚದ ದಿಗ್ಗಜರೊಂದಿಗೆ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ.

ನಿಮ್ಮಲ್ಲಿ ಅನೇಕರನ್ನು ನಾನು ವೈಯಕ್ತಿಕವಾಗಿ ಬಲ್ಲೆ. ನಾನು ಗುಜರಾತ್ನಲ್ಲಿದ್ದಾಗ ಆಗಿರಬಹುದು, ಅಥವಾ ದೆಹಲಿಗೆ ಬಂದ ನಂತರವೇ ಆಗಿರಬಹುದು, ನಿಮ್ಮಲ್ಲಿ ಅನೇಕರೊಂದಿಗೆ ನನಗೆ ನಿಕಟವಾದ ಸಂಪರ್ಕವಿದೆ. ಇಂದು ನಿಮ್ಮೆಲ್ಲರನ್ನೂ ಭೇಟಿಯಾಗುವ ಈ ಅವಕಾಶ ಸಿಕ್ಕಿದ್ದಕ್ಕೆ ನನಗೆ ನಿಜಕ್ಕೂ ಬಹಳ ಸಂತೋಷವಾಗಿದೆ.

ಈ ವೇದಿಕೆಯಲ್ಲಿ ನಮ್ಮೊಂದಿಗೆ ಭಾಗವಹಿಸಿದ್ದಕ್ಕಾಗಿ ನಾನು ಪ್ರಧಾನ ಮಂತ್ರಿ ಇಶಿಬಾ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರ ಮೌಲ್ಯಯುತವಾದ ಮಾತುಗಳಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ

ಜಪಾನ್, ಭಾರತದ ಬೆಳವಣಿಗೆಯ ಪಯಣದಲ್ಲಿ ಯಾವಾಗಲೂ ಒಂದು ಪ್ರಮುಖ ಪಾಲುದಾರನಾಗಿದೆ. ಮೆಟ್ರೋ, ಉತ್ಪಾದನಾ ಕ್ಷೇತ್ರ, ಸೆಮಿಕಂಡಕ್ಟರ್ಗಳು ಅಥವಾ ಸ್ಟಾರ್ಟ್ ಅಪ್ಗಳು, ಯಾವುದೇ ಕ್ಷೇತ್ರವಿರಲಿ, ನಮ್ಮ ಪಾಲುದಾರಿಕೆಯು ಪರಸ್ಪರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಜಪಾನ್ ನ ಕಂಪನಿಗಳು ಭಾರತದಲ್ಲಿ 40 ಬಿಲಿಯನ್ ಡಾಲರ್ ಗಳಿಗಿಂತ ಹೆಚ್ಚು ಹೂಡಿಕೆ ಮಾಡಿವೆ. ಕಳೆದ ಎರಡು ವರ್ಷಗಳಲ್ಲಿ, 13 ಬಿಲಿಯನ್ ಡಾಲರ್ ಗಳ ಖಾಸಗಿ ಹೂಡಿಕೆ ಆಗಿದೆ. 'ಜೆಬಿಐಸಿ' (JBIC) ಪ್ರಕಾರ, ಭಾರತವು ಅತ್ಯಂತ 'ಭರವಸೆಯ' ತಾಣವಾಗಿದೆ. 'ಜೆ ಇಟಿ ಆರ್ ಒ' (JETRO) ಹೇಳುವ ಪ್ರಕಾರ, ಶೇಕಡ 80ರಷ್ಟು ಕಂಪನಿಗಳು ಭಾರತದಲ್ಲಿ ತಮ್ಮ ವ್ಯವಹಾರ ವಿಸ್ತರಿಸಲು ಬಯಸುತ್ತವೆ ಮತ್ತು ಶೇಕಡ 75ರಷ್ಟು ಕಂಪನಿಗಳು ಈಗಾಗಲೇ ಲಾಭ ಗಳಿಸುತ್ತಿವೆ.

ಇದರ ಅರ್ಥ, ಭಾರತದಲ್ಲಿ ಬಂಡವಾಳ ಕೇವಲ ಬೆಳೆಯುವುದಿಲ್ಲ, ಅದು ಹಲವು ಪಟ್ಟು ಹೆಚ್ಚಾಗುತ್ತದೆ!

ಸ್ನೇಹಿತರೇ,

ಕಳೆದ ಹನ್ನೊಂದು ವರ್ಷಗಳಲ್ಲಿ ಭಾರತವು ಕಂಡಿರುವ ಗಮನಾರ್ಹ ಬದಲಾವಣೆಗಳ ಬಗ್ಗೆ ನಿಮ್ಮೆಲ್ಲರಿಗೂ ತಿಳಿದಿದೆ. ಇಂದು, ನಮ್ಮಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಇದೆ, ಹಾಗೂ ಸ್ಪಷ್ಟ ಮತ್ತು ನಿರೀಕ್ಷಿಸಬಹುದಾದ ನೀತಿಗಳಿವೆ. ಭಾರತವು ಈಗ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ, ಮತ್ತು ಅತಿ ಶೀಘ್ರದಲ್ಲೇ ಇದು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.

ಜಾಗತಿಕ ಬೆಳವಣಿಗೆಗೆ ಭಾರತವು ಶೇ. 18ರಷ್ಟು ಕೊಡುಗೆ ನೀಡುತ್ತಿದೆ. ದೇಶದ ಬಂಡವಾಳ ಮಾರುಕಟ್ಟೆಗಳು ಉತ್ತಮ ಆದಾಯವನ್ನು ನೀಡುತ್ತಿವೆ, ಮತ್ತು ನಾವು ಬಲಿಷ್ಠವಾದ ಬ್ಯಾಂಕಿಂಗ್ ವಲಯವನ್ನು ಹೊಂದಿದ್ದೇವೆ. ಹಣದುಬ್ಬರ ಮತ್ತು ಬಡ್ಡಿ ದರಗಳು ಕಡಿಮೆಯಾಗಿವೆ, ಮತ್ತು ನಮ್ಮ ವಿದೇಶಿ ವಿನಿಮಯ ಮೀಸಲು ಸುಮಾರು $700 ಬಿಲಿಯನ್ ನಷ್ಟಿದೆ.

ಸ್ನೇಹಿತರೇ,

ಈ ಬದಲಾವಣೆಯ ಹಿಂದೆ 'ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ' ಎಂಬ ನಮ್ಮ ವಿಧಾನವಿದೆ. 2017ರಲ್ಲಿ, ನಾವು "ಒಂದು ರಾಷ್ಟ್ರ-ಒಂದು ತೆರಿಗೆ"ಯನ್ನು ಜಾರಿಗೆ ತಂದೆವು, ಮತ್ತು ಈಗ ನಾವು ಅದರಲ್ಲಿ ಹೊಸ ಮತ್ತು ಇನ್ನೂ ದೊಡ್ಡ ಸುಧಾರಣೆಗಳನ್ನು ತರಲು ಕೆಲಸ ಮಾಡುತ್ತಿದ್ದೇವೆ. ಕೆಲವೇ ವಾರಗಳ ಹಿಂದೆ, ನಮ್ಮ ಸಂಸತ್ತು ಹೊಸ ಮತ್ತು ಸರಳೀಕೃತ ಆದಾಯ ತೆರಿಗೆ ಸಂಹಿತೆಗೂ ಅನುಮೋದನೆ ನೀಡಿದೆ.

ನಮ್ಮ ಸುಧಾರಣೆಗಳು ಕೇವಲ ತೆರಿಗೆ ವ್ಯವಸ್ಥೆಗೆ ಸೀಮಿತವಾಗಿಲ್ಲ. ನಾವು ಸುಲಭವಾಗಿ ವ್ಯವಹಾರ ನಡೆಸುವುದಕ್ಕೆ ಒತ್ತು ನೀಡಿದ್ದೇವೆ. ವ್ಯವಹಾರಗಳಿಗೆ ಒಂದೇ ಡಿಜಿಟಲ್ ವಿಂಡೋ ಮೂಲಕ ಅನುಮೋದನೆ ನೀಡುವ ವ್ಯವಸ್ಥೆಯನ್ನು ಸ್ಥಾಪಿಸಿದ್ದೇವೆ. ನಾವು 45,000 ಅನುಸರಣೆಗಳನ್ನು ಸರಳೀಕರಿಸಿದ್ದೇವೆ. ಈ ಪ್ರಕ್ರಿಯೆಯನ್ನು ವೇಗಗೊಳಿಸಲು ಡಿ-ರೆಗ್ಯುಲೇಷನ್ಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಸೂಕ್ಷ್ಮ ವಲಯಗಳನ್ನು ಖಾಸಗಿ ಕ್ಷೇತ್ರಕ್ಕೆ ಮುಕ್ತಗೊಳಿಸಲಾಗಿದೆ. ಈಗ, ನಾವು ಪರಮಾಣು ಇಂಧನ ವಲಯವನ್ನೂ ಸಹ ಮುಕ್ತಗೊಳಿಸುತ್ತಿದ್ದೇವೆ.

ಸ್ನೇಹಿತರೇ,

ಈ ಸುಧಾರಣೆಗಳು ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟುವ ನಮ್ಮ ಸಂಕಲ್ಪವನ್ನು ಪ್ರತಿಬಿಂಬಿಸುತ್ತವೆ. ನಮ್ಮಲ್ಲಿ ಬದ್ಧತೆ, ದೃಢವಿಶ್ವಾಸ, ಮತ್ತು ಕಾರ್ಯತಂತ್ರವಿದೆ. ಮತ್ತು ಜಗತ್ತು ಇದನ್ನು ಕೇವಲ ಗುರುತಿಸಿಲ್ಲ, ಬದಲಾಗಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದೆ. ಎರಡು ದಶಕಗಳ ನಂತರ, ಎಸ್ & ಪಿ ಗ್ಲೋಬಲ್ (S&P Global) ಸಂಸ್ಥೆಯು ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಮೇಲ್ದರ್ಜೆಗೇರಿಸಿದೆ.

ಜಗತ್ತು ಭಾರತವನ್ನು ಕೇವಲ ನೋಡುತ್ತಿಲ್ಲ, ಅದು ಭಾರತವನ್ನು ನೆಚ್ಚಿಕೊಂಡಿದೆ.

ಸ್ನೇಹಿತರೇ,

ನಮ್ಮ ಕಂಪನಿಗಳ ನಡುವಿನ ವ್ಯಾಪಾರ ಒಪ್ಪಂದಗಳನ್ನು ವಿವರಿಸುವ ಭಾರತ-ಜಪಾನ್ ಬಿಸಿನೆಸ್ ಫೋರಂ ವರದಿಯನ್ನು ಈಗಷ್ಟೇ ಮಂಡಿಸಲಾಗಿದೆ. ಈ ಗಮನಾರ್ಹ ಪ್ರಗತಿಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಹಾಗೆಯೇ, ನಮ್ಮ ಪಾಲುದಾರಿಕೆಗಾಗಿ ಕೆಲವು ಸಲಹೆಗಳನ್ನು ನಾನು ವಿನಮ್ರವಾಗಿ ಮುಂದಿಡಲು ಬಯಸುತ್ತೇನೆ.

ಮೊದಲನೆಯದು ಉತ್ಪಾದನಾ ವಲಯ. ಆಟೋ ಕ್ಷೇತ್ರದಲ್ಲಿ ನಮ್ಮ ಪಾಲುದಾರಿಕೆಯು ಅತ್ಯಂತ ಯಶಸ್ವಿಯಾಗಿದೆ. ಮತ್ತು ಪ್ರಧಾನ ಮಂತ್ರಿಯವರು ಅದನ್ನು ಬಹಳ ವಿವರವಾಗಿ ಬಣ್ಣಿಸಿದರು. ಒಟ್ಟಾಗಿ ನಾವು ಬ್ಯಾಟರಿಗಳು, ರೊಬೊಟಿಕ್ಸ್, ಸೆಮಿಕಂಡಕ್ಟರ್ ಗಳು, ಹಡಗು ನಿರ್ಮಾಣ ಮತ್ತು ಪರಮಾಣು ಇಂಧನ ಕ್ಷೇತ್ರಗಳಲ್ಲಿಯೂ ಇದೇ ರೀತಿಯ ಯಶಸ್ಸನ್ನು ಮರುಸೃಷ್ಟಿಸಬಹುದು. ಒಟ್ಟಾಗಿ ನಾವು ಗ್ಲೋಬಲ್ ಸೌತ್, ವಿಶೇಷವಾಗಿ ಆಫ್ರಿಕಾದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡಬಹುದು.

ನಿಮ್ಮೆಲ್ಲರಿಗೂ ನಾನು ಕರೆ ನೀಡುತ್ತೇನೆ: ಬನ್ನಿ, ಭಾರತದಲ್ಲಿ ತಯಾರಿಸಿ, ಜಗತ್ತಿಗಾಗಿ ತಯಾರಿಸಿ. ಸುಜುಕಿ ಮತ್ತು ಡೈಕಿನ್ ಅವರ ಯಶೋಗಾಥೆಗಳು ನಿಮ್ಮ ಯಶೋಗಾಥೆಗಳೂ ಆಗಬಹುದು.

ಎರಡನೆಯದಾಗಿ, ತಂತ್ರಜ್ಞಾನ ಮತ್ತು ನಾವೀನ್ಯತೆ. ಜಪಾನ್ ಒಂದು "ಟೆಕ್ ಪವರ್ಹೌಸ್". ಹಾಗೆಯೇ, ಭಾರತವು ಒಂದು "ಟ್ಯಾಲೆಂಟ್ ಪವರ್ ಹೌಸ್". ಎಐ (AI), ಸೆಮಿಕಂಡಕ್ಟರ್ ಗಳು, ಕ್ವಾಂಟಮ್ ಕಂಪ್ಯೂಟಿಂಗ್, ಬಯೋಟೆಕ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತವು ಧೈರ್ಯಶಾಲಿ ಮತ್ತು ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನು ಕೈಗೊಂಡಿದೆ. ಜಪಾನ್ ನ ತಂತ್ರಜ್ಞಾನ ಮತ್ತು ಭಾರತದ ಪ್ರತಿಭೆ ಒಟ್ಟಾಗಿ ಈ ಶತಮಾನದ ತಂತ್ರಜ್ಞಾನದ ಕ್ರಾಂತಿಯನ್ನು ಮುನ್ನಡೆಸಬಲ್ಲವು.

ಮೂರನೇ ಕ್ಷೇತ್ರವೆಂದರೆ ಹಸಿರು ಇಂಧನ ಪರಿವರ್ತನೆ. 2030ರ ವೇಳೆಗೆ 500 ಗಿಗಾವ್ಯಾಟ್ (GW) ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ಭಾರತವು ವೇಗವಾಗಿ ಸಾಗುತ್ತಿದೆ. 2047ರ ವೇಳೆಗೆ 100 ಗಿಗಾವ್ಯಾಟ್ (GW) ಪರಮಾಣು ವಿದ್ಯುತ್ ಉತ್ಪಾದಿಸುವ ಗುರಿಯನ್ನೂ ನಾವು ಹೊಂದಿದ್ದೇವೆ. ಸೌರ ಕೋಶಗಳಿಂದ ಹಿಡಿದು ಗ್ರೀನ್ ಹೈಡ್ರೋಜನ್ವರೆಗೆ, ಪಾಲುದಾರಿಕೆಗೆ ಅಪಾರ ಅವಕಾಶಗಳಿವೆ.

ಜಂಟಿ ಕ್ರೆಡಿಟ್ ವ್ಯವಸ್ಥೆ (Joint Credit Mechanism) ಕುರಿತು ಭಾರತ ಮತ್ತು ಜಪಾನ್ ನಡುವೆ ಒಪ್ಪಂದ ಏರ್ಪಟ್ಟಿದೆ. ಸ್ವಚ್ಛ ಮತ್ತು ಹಸಿರು ಭವಿಷ್ಯವನ್ನು ನಿರ್ಮಿಸಲು ಸಹಕರಿಸಲು ಇದನ್ನು ಬಳಸಿಕೊಳ್ಳಬಹುದು.

ನಾಲ್ಕನೆಯದಾಗಿ, ಮುಂದಿನ ಪೀಳಿಗೆಯ ಮೂಲಸೌಕರ್ಯ. ಕಳೆದ ದಶಕದಲ್ಲಿ, ಮುಂದಿನ ಪೀಳಿಗೆಯ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯದಲ್ಲಿ ಭಾರತವು ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ನಮ್ಮ ಬಂದರುಗಳ ಸಾಮರ್ಥ್ಯ ದ್ವಿಗುಣಗೊಂಡಿದೆ. 160ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿವೆ. 1000 ಕಿಲೋಮೀಟರ್ ಗೂ ಹೆಚ್ಚು ಮೆಟ್ರೋ ಮಾರ್ಗಗಳನ್ನು ನಿರ್ಮಿಸಲಾಗಿದೆ. ಜಪಾನ್ ಸಹಯೋಗದೊಂದಿಗೆ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಯೋಜನೆಯ ಕಾಮಗಾರಿಯೂ ಪ್ರಗತಿಯಲ್ಲಿದೆ.

ಆದರೆ ನಮ್ಮ ಈ ಪ್ರಯಾಣ ಇಲ್ಲಿಗೇ ಮುಗಿಯುವುದಿಲ್ಲ. ಜಪಾನ್ನ ಪರಿಣತಿ ಮತ್ತು ಭಾರತದ ವಿಶಾಲ ಶಕ್ತಿ, ಇವೆರಡೂ ಸೇರಿದರೆ ಒಂದು ಅತ್ಯುತ್ತಮ ಜೊತೆಗಾರಿಕೆ ಸಾಧ್ಯ.

ಐದನೆಯದು, ಕೌಶಲ್ಯ ವಿಕಾಸ ಮತ್ತು ಜನರ ನಡುವಿನ ಸಂಬಂಧ. ನಮ್ಮಲ್ಲಿರುವ ನುರಿತ ಯುವಕರ ಪ್ರತಿಭೆಗೆ, ಇಡೀ ಜಗತ್ತಿನ ಬೇಡಿಕೆಗಳನ್ನು ಪೂರೈಸುವ ಶಕ್ತಿಯಿದೆ. ಇದರ ಲಾಭವನ್ನು ಜಪಾನ್ ಕೂಡ ಪಡೆಯಬಹುದು. ನೀವು ಭಾರತದ ಯುವಕರಿಗೆ ಜಪಾನೀಸ್ ಭಾಷೆ ಮತ್ತು ಇತರ ಕೌಶಲ್ಯಗಳಲ್ಲಿ ತರಬೇತಿ ನೀಡಬಹುದು. ಹೀಗೆ ನಾವಿಬ್ಬರೂ ಸೇರಿ 'ಜಪಾನ್ಗೆ ಸಿದ್ಧರಿರುವ' ಒಂದು ಕಾರ್ಯಪಡೆಯನ್ನು ರೂಪಿಸಬಹುದು. ಹೀಗೆ ಹಂಚಿಕೊಂಡ ಕಾರ್ಯಶಕ್ತಿ, ಇಬ್ಬರಿಗೂ ಸಮೃದ್ಧಿಯನ್ನು ತರುತ್ತದೆ.

ಸ್ನೇಹಿತರೇ,

ಕೊನೆಯದಾಗಿ ಹೇಳುವುದೇನೆಂದರೆ, ಭಾರತ ಮತ್ತು ಜಪಾನ್ ನಡುವಿನ ಈ ಸಂಬಂಧ ಬಹಳ ಮುಖ್ಯವಾದುದು ಮತ್ತು ಅಷ್ಟೇ ಬುದ್ಧಿವಂತಿಕೆಯಿಂದ ಕೂಡಿದೆ. ನಮ್ಮಿಬ್ಬರ ಹಿತಾಸಕ್ತಿಗಳನ್ನು ಒಗ್ಗೂಡಿಸಿ, ಇಬ್ಬರಿಗೂ ಲಾಭವಾಗುವಂತೆ ನಾವು ಮಾಡಿದ್ದೇವೆ.

ಜಪಾನ್‌ನ ಕಂಪನಿಗಳು 'ಗ್ಲೋಬಲ್ ಸೌತ್' ದೇಶಗಳನ್ನು ತಲುಪಲು ಭಾರತ ಒಂದು ಮುಖ್ಯ ಹೆಬ್ಬಾಗಿಲಾಗಿದೆ. ನಾವೆಲ್ಲರೂ ಸೇರಿ ಸ್ಥಿರತೆ, ಬೆಳವಣಿಗೆ ಮತ್ತು ಸಮೃದ್ಧಿಯ ಏಷ್ಯಾದ ಶತಮಾನವನ್ನು ನಿರ್ಮಿಸೋಣ.

ಈ ಮಾತುಗಳೊಂದಿಗೆ, ಪ್ರಧಾನ ಮಂತ್ರಿ ಇಶಿಬಾ ಅವರಿಗೂ ಮತ್ತು ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಅರಿಗಾತೋ ಗೊಝೈಮಾಸ್! 
ನಿಮಗೆಲ್ಲರಿಗೂ ಧನ್ಯವಾದಗಳು.

ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿಯವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****
 


(Release ID: 2161911) Visitor Counter : 8