ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 2,200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು


ಪ್ರಧಾನಮಂತ್ರಿಯವರು ಪಿಎಂ-ಕಿಸಾನ್ ಯೋಜನೆಯ 20 ನೇ ಕಂತನ್ನು ಬಿಡುಗಡೆ ಮಾಡಿದರು ಮತ್ತು ದೇಶಾದ್ಯಂತ 9.7 ಕೋಟಿಗೂ ಹೆಚ್ಚು ರೈತರಿಗೆ 20,500 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವರ್ಗಾಯಿಸಿದರು

ರೈತರ ಜೀವನವನ್ನು ಪರಿವರ್ತಿಸಲು, ಅವರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ಸಂಪೂರ್ಣ ಶಕ್ತಿಯಿಂದ ಕೆಲಸ ಮಾಡುತ್ತಿದೆ. ಬೀಜದಿಂದ ಮಾರುಕಟ್ಟೆಯವರೆಗೆ ನಾವು ರೈತರೊಂದಿಗೆ ನಿಲ್ಲುತ್ತೇವೆ: ಪ್ರಧಾನಮಂತ್ರಿ

ಭಾರತದ ಮೇಲೆ ದಾಳಿ ಮಾಡುವವರು ನರಕದಲ್ಲಿಯೂ ಸುರಕ್ಷಿತವಾಗಿರುವುದಿಲ್ಲ: ಪ್ರಧಾನಮಂತ್ರಿ

ಆಪರೇಷನ್ ಸಿಂಧೂರ ಸಮಯದಲ್ಲಿ, ಇಡೀ ಜಗತ್ತು ಭಾರತದ ದೇಶೀಯ ಶಸ್ತ್ರಾಸ್ತ್ರಗಳ ಶಕ್ತಿಯನ್ನು ಕಂಡಿತು: ಪ್ರಧಾನಮಂತ್ರಿ

ನಮ್ಮ ರೈತರು ಮತ್ತು ನಮ್ಮ ಸಣ್ಣ ಕೈಗಾರಿಕೆಗಳ ಹಿತಾಸಕ್ತಿ ನಮಗೆ ಅತ್ಯಂತ ಮಹತ್ವದ್ದಾಗಿದೆ, ಸರ್ಕಾರವು ಈ ದಿಕ್ಕಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ: ಪ್ರಧಾನಮಂತ್ರಿ

ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ, ಅದು ತನ್ನ ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಜಾಗರೂಕರಾಗಿರಬೇಕು: ಪ್ರಧಾನಮಂತ್ರಿ

Posted On: 02 AUG 2025 1:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 2,200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾ್ಥಾಪನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ, ಶ್ರಾವಣ ಮಾಸದ ಶುಭಸಂದರ್ಭದಲ್ಲಿ ವಾರಾಣಸಿಯ ಜನರನ್ನು ಭೇಟಿಯಾಗುತ್ತಿರುವ ಬಗ್ಗೆ ತಮ್ಮ ಹೃತ್ಪೂರ್ವಕ ಭಾವನೆಗಳನ್ನು ವ್ಯಕ್ತಪಡಿಸಿದರು. ವಾರಾಣಸಿಯ ಜನರೊಂದಿಗಿನ ತಮ್ಮ ಗಾಢವಾದ ಭಾವನಾತ್ಮಕ ಬಾಂಧವ್ಯವನ್ನು ಎತ್ತಿ ತೋರಿಸಿದ ಶ್ರೀ ಮೋದಿ, ನಗರದ ಪ್ರತಿಯೊಂದು ಕುಟುಂಬದ ಸದಸ್ಯರಿಗೂ ಗೌರವಯುತ ಶುಭಾಶಯಗಳನ್ನು ತಿಳಿಸಿದರು. ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ದೇಶಾದ್ಯಂತದ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕ ಸಾಧಿಸಿದ್ದಕ್ಕೆ ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು.

ಆಪರೇಷನ್ ಸಿಂಧೂರದ ನಂತರ ವಾರಾಣಸಿಗೆ ಇದು ತಮ್ಮ ಮೊದಲ ಭೇಟಿ ಎಂದು ಪ್ರಧಾನಿ ಹೇಳಿದರು. ಏಪ್ರಿಲ್ 22 ರಂದು ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಸಾವನ್ನಪ್ಪಿದ ಘಟನೆಯನ್ನು ಅವರು ನೆನಪಿಸಿಕೊಂಡರು. ಶ್ರೀ ಮೋದಿ ಅವರು ಸಂತ್ರಸ್ತ ಕುಟುಂಬಗಳ, ವಿಶೇಷವಾಗಿ ಈ ದುರಂತದಿಂದ ಬಾಧಿತರಾದ ಮಕ್ಕಳು ಮತ್ತು ಹೆಣ್ಣುಮಕ್ಕಳ ನೋವಿನ ಬಗ್ಗೆ ಮಾತನಾಡಿದರು. ತಮ್ಮ ಹೃದಯವು ದುಃಖದಿಂದ ತುಂಬಿತ್ತು ಎಂದು ಅವರು ಹೇಳಿದರು ಮತ್ತು ಆ ಸಮಯದಲ್ಲಿ ಎಲ್ಲಾ ದುಃಖಿತ ಕುಟುಂಬಗಳಿಗೆ ಈ ನೋವನ್ನು ಭರಿಸಲು ಶಕ್ತಿ ನೀಡುವಂತೆ ಬಾಬಾ ವಿಶ್ವನಾಥರನ್ನು ಪ್ರಾರ್ಥಿಸಿದ್ದೆ ಎಂದು ಅವರು ಹೇಳಿದರು. ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳುವ ತಮ್ಮ ಭರವಸೆ ಈಡೇರಿದೆ ಎಂದು ಪ್ರಧಾನಿ ಹೇಳಿದರು. ಇದು ಭಗವಾನ್ ಮಹಾದೇವನ ಆಶೀರ್ವಾದದಿಂದ ಮಾತ್ರ ಸಾಧ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಆಪರೇಷನ್ ಸಿಂಧೂರದ ಯಶಸ್ಸನ್ನು ಭಗವಾನ್ ಮಹಾದೇವನ ಪಾದಗಳಿಗೆ ಅರ್ಪಿಸಿದರು.

ಇತ್ತೀಚಿನ ದಿನಗಳಲ್ಲಿ, ವಾರಾಣಸಿಯಲ್ಲಿ ಶಿವ ಭಕ್ತರು ಗಂಗಾಜಲವನ್ನು ಹೊತ್ತುಕೊಂಡು ಹೋಗುತ್ತಿರುವ ದೈವಿಕ ಚಿತ್ರಗಳನ್ನು, ವಿಶೇಷವಾಗಿ ಶ್ರಾವಣ ಮಾಸದ ಮೊದಲ ಸೋಮವಾರದಂದು, ಯಾತ್ರಿಕರು ಬಾಬಾ ವಿಶ್ವನಾಥನಿಗೆ ಪವಿತ್ರ ಜಲಭಿಷೇಕವನ್ನು ಮಾಡಲು ಹೊರಟಿರುವುದನ್ನು ನೋಡುತ್ತಿರುವುದಾಗಿ ಅವರು ಹಂಚಿಕೊಂಡರು. ಗೌರಿ ಕೇದಾರನಾಥದಿಂದ ಯಾದವ ಸಹೋದರರು ಗಂಗಾಜಲವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ ಆಕರ್ಷಕ ದೃಶ್ಯವನ್ನು ಅವರು ಉಲ್ಲೇಖಿಸುತ್ತಾ, ಅದು ನಿಜವಾಗಿಯೂ ಮೋಡಿಮಾಡುವ ದೃಶ್ಯ ಎಂದು ಬಣ್ಣಿಸಿದರು. ಡಮರುವಿನ ಶಬ್ದ, ಓಣಿಗಳಲ್ಲಿನ ರೋಮಾಂಚಕ ಶಕ್ತಿ, ವಾತಾವರಣವನ್ನು ಅಸಾಧಾರಣ ಎಂದು ಅವರು ಕರೆದರು. ಪವಿತ್ರ ಶ್ರಾವಣ ಮಾಸದಲ್ಲಿ ಬಾಬಾ ವಿಶ್ವನಾಥ ಮತ್ತು ಮಾರ್ಕಂಡೇಯ ಮಹಾದೇವ ಅವರನ್ನು ಭೇಟಿ ಮಾಡುವ ವೈಯಕ್ತಿಕ ಬಯಕೆಯನ್ನು ಶ್ರೀ ಮೋದಿ ವ್ಯಕ್ತಪಡಿಸಿದರು. ಆದಾಗ್ಯೂ, ಅವರ ಉಪಸ್ಥಿತಿಯು ಮಹಾದೇವನ ಭಕ್ತರಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು ಅಥವಾ ಅವರ ದರ್ಶನಕ್ಕೆ ತೊಂದರೆಯಾಗಬಹುದು, ಆದ್ದರಿಂದ ಇಲ್ಲಿಂದಲೇ ಭಗವಾನ್ ಭೋಲೆನಾಥ ಮತ್ತು ಗಂಗಾ ಮಾತೆಗೆ ನಮಸ್ಕರಿಸುತ್ತೇನೆ ಎಂದು ಅವರು ಹೇಳಿದರು.

ಕೆಲವು ದಿನಗಳ ಹಿಂದೆ ತಮಿಳುನಾಡಿನ ಐತಿಹಾಸಿಕ ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಶ್ರೀ ಮೋದಿ, ಇದು ಸಾವಿರ ವರ್ಷಗಳಷ್ಟು ಹಳೆಯ ಸ್ಮಾರಕವಾಗಿದ್ದು, ಭಾರತದ ಶೈವ ಸಂಪ್ರದಾಯದ ಪ್ರಾಚೀನ ಕೇಂದ್ರವಾಗಿದೆ. ಈ ದೇವಾಲಯವನ್ನು ಉತ್ತರ ಮತ್ತು ದಕ್ಷಿಣವನ್ನು ಸಾಂಕೇತಿಕವಾಗಿ ಒಗ್ಗೂಡಿಸಲು ಉತ್ತರ ಭಾರತದಿಂದ ಗಂಗಾಜಲವನ್ನು ತಂದ ಪ್ರಖ್ಯಾತ ರಾಜ ರಾಜೇಂದ್ರ ಚೋಳ ನಿರ್ಮಿಸಿದ್ದಾನೆ ಎಂದು ಹೇಳಿದರು. ಸಾವಿರ ವರ್ಷಗಳ ಹಿಂದೆ, ಶಿವನ ಮೇಲಿನ ಭಕ್ತಿ ಮತ್ತು ಶೈವ ಸಂಪ್ರದಾಯಕ್ಕೆ ಬದ್ಧತೆಯ ಮೂಲಕ, ರಾಜೇಂದ್ರ ಚೋಳ "ಏಕ್ ಭಾರತ್, ಶ್ರೇಷ್ಠ ಭಾರತ್" ಎಂಬ ದೃಷ್ಟಿಕೋನವನ್ನು ಘೋಷಿಸಿದ್ದನ್ನು ಅವರು ಒತ್ತಿ ಹೇಳಿದರು. ಇಂದು, ಕಾಶಿ-ತಮಿಳು ಸಂಗಮಮ್‌ ನಂತಹ ಉಪಕ್ರಮಗಳ ಮೂಲಕ, ಆ ಪರಂಪರೆಯನ್ನು ಮುಂದುವರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಇತ್ತೀಚೆಗೆ ಗಂಗೈಕೊಂಡ ಚೋಳಪುರಂಗೆ ಭೇಟಿ ನೀಡಿದ್ದಾಗ, ತಾವು ಗಂಗಾಜಲವನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾಗಿ ಮತ್ತು ಗಂಗಾ ಮಾತೆಯ ಆಶೀರ್ವಾದದೊಂದಿಗೆ ಪೂಜೆಯನ್ನು ಅತ್ಯಂತ ಪವಿತ್ರ ವಾತಾವರಣದಲ್ಲಿ ನಡೆಸಲಾಯಿತು ಎಂದು ಅವರು ಹೇಳಿದರು. ಇಂತಹ ಪ್ರಮುಖ ಸಂದರ್ಭಗಳು ದೇಶದಲ್ಲಿ ಏಕತೆಯ ಮನೋಭಾವವನ್ನು ಬೆಳಗಿಸುತ್ತವೆ, ಇದು ಆಪರೇಷನ್ ಸಿಂಧೂರದಂತಹ ಕಾರ್ಯಾಚರಣೆಗಳ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. 140 ಕೋಟಿ ಭಾರತೀಯರ ಏಕತೆಯು ಆಪರೇಷನ್ ಸಿಂಧೂರದ ಶಕ್ತಿಯಾಯಿತು ಎಂದು ಅವರು ಹೇಳಿದರು.

ವಾರಾಣಸಿಯಲ್ಲಿ ನಡೆಯುತ್ತಿರುವ ರೈತ ಹಬ್ಬದ ಅದ್ಧೂರಿ ಆಚರಣೆಯನ್ನು ಪ್ರಮುಖವಾಗಿ ಉಲ್ಲೇಖಿಸಿದ ಪ್ರಧಾನಿ, ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶಾದ್ಯಂತ 10 ಕೋಟಿ ರೈತ ಸಹೋದರ ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ₹21,000 ಕೋಟಿ ವರ್ಗಾಯಿಸಲಾಗಿದೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ₹2,000 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಅವುಗಳ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಬಾಬಾ ಅವರ ಆಶೀರ್ವಾದದಿಂದ ವಾರಾಣಸಿಯಲ್ಲಿ ಅಭಿವೃದ್ಧಿಯ ನಿರಂತರ ಹರಿವು ಮುಂದುವರೆದಿದೆ ಎಂದು ಶ್ರೀ ಮೋದಿ ಹೇಳಿದರು. ಹಾಜರಿದ್ದ ಎಲ್ಲರಿಗೆ ಮತ್ತು ದೇಶದ ರೈತರಿಗೆ ಅವರು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು. ಕೆಲವು ದಿನಗಳ ಹಿಂದೆ ವಾರಾಣಸಿಯಲ್ಲಿ ಸಂಸತ್ ಸದಸ್ಯ ಪ್ರವಾಸಿ ಮಾರ್ಗದರ್ಶಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದು ಪ್ರಧಾನಿ ಉಲ್ಲೇಖಿಸಿದರು. ಮುಂಬರುವ ದಿನಗಳಲ್ಲಿ ಕಾಶಿ ಸಂಸದರ ಛಾಯಾಗ್ರಹಣ ಸ್ಪರ್ಧೆ ಮತ್ತು ಸಂಸದರ ಉದ್ಯೋಗ ಮೇಳದಂತಹ ಕಾರ್ಯಕ್ರಮಗಳು ನಡೆಯಲಿದ್ದು, ಈ ಉಪಕ್ರಮಗಳ ಯಶಸ್ಸಿಗೆ ಶುಭ ಹಾರೈಸಿದರು. ಇಂತಹ ಉಪಕ್ರಮಗಳಿಗಾಗಿ ಅವರು ಆಡಳಿತವನ್ನು ಶ್ಲಾಘಿಸಿದರು.

ರೈತರ ಏಳಿಗೆಗಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಹಿಂದಿನ ಸರ್ಕಾರಗಳಲ್ಲಿ ಇದು ವ್ಯತಿರಿಕ್ತವಾಗಿತ್ತು ಎಂದರು. ಆಗ ರೈತರ ಹೆಸರಿನಲ್ಲಿ ಮಾಡಿದ ಒಂದೇ ಒಂದು ಘೋಷಣೆ ಕೂಡ ಈಡೇರುವುದು ವಿರಳವಾಗಿತ್ತು ಎಂದು ಹೇಳಿದರು. ತಮ್ಮ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸುತ್ತದೆ ಎಂದು ಒತ್ತಿ ಹೇಳಿದ ಅವರು, ಪಿಎಂ-ಕಿಸಾನ್ ಸಮ್ಮಾನ್ ನಿಧಿ ಸರ್ಕಾರದ ದೃಢ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

2019ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪ್ರಾರಂಭಿಸಿದಾಗ, ಕೆಲವು ಪ್ರಮುಖ ವಿರೋಧ ಪಕ್ಷಗಳು ವಿವಿಧ ವದಂತಿಗಳನ್ನು ಹಬ್ಬಸಿದವು ಎಂದು ಶ್ರೀ ಮೋದಿ ಹೇಳಿದರು, ಕೆಲವರು ಚುನಾವಣೆಗಳ ನಂತರ ಪಾವತಿಗಳು ನಿಲ್ಲುತ್ತವೆ ಎಂದು ಹೇಳಿದರೆ, ಇನ್ನು ಕೆಲವರು ವರ್ಗಾವಣೆಯಾಗುತ್ತಿರುವ ಹಣವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದರು. ಇದು ವಿರೋಧ ಪಕ್ಷದ ನಿಜವಾದ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ, ಇದು ರೈತರು ಮತ್ತು ದೇಶದ ಜನರನ್ನು ದಾರಿ ತಪ್ಪಿಸುತ್ತದೆ ಎಂದು ಅವರು ಹೇಳಿದರು. ಒಂದೇ ಒಂದು ಕಂತು ನಿಲ್ಲಿಸಲಾಗಿದೆಯೇ ಎಂದು ಪ್ರಶ್ನಿಸಿದ ಪ್ರಧಾನಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯಾವುದೇ ಅಡೆತಡೆಯಿಲ್ಲದೆ ಮುಂದುವರೆದಿದೆ ಎಂದು ಪ್ರತಿಪಾದಿಸಿದರು. ಇಲ್ಲಿಯವರೆಗೆ, ₹ 3.75 ಲಕ್ಷ ಕೋಟಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶವೊಂದರಲ್ಲೇ ಸುಮಾರು 2.5 ಕೋಟಿ ರೈತರು ಈ ಯೋಜನೆಯಡಿಯಲ್ಲಿ ₹90,000 ಕೋಟಿಗೂ ಹೆಚ್ಚು ಪ್ರಯೋಜನ ಪಡೆದಿದ್ದಾರೆ. ವಾರಾಣಸಿಯ ರೈತರು ಸುಮಾರು ₹900 ಕೋಟಿ ಪಡೆದಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಈ ಯೋಜನೆಯ ಪ್ರಮುಖ ಅಂಶವೆಂದರೆ ಹಣವು ಯಾವುದೇ ಕಡಿತ ಅಥವಾ ಕಮಿಷನ್‌ ಇಲ್ಲದೆ ರೈತರನ್ನು ತಲುಪಿದೆ ಎಂದು ಅವರು ಒತ್ತಿ ಹೇಳಿದರು. ಇದು ತಮ್ಮ ಸರ್ಕಾರ ಸ್ಥಾಪಿಸಿದ ಶಾಶ್ವತ ವ್ಯವಸ್ಥೆಯಾಗಿದೆ - ಯಾವುದೇ ಸೋರಿಕೆ ಇರುವುದಿಲ್ಲ ಮತ್ತು ಬಡವರ ಹಕ್ಕುಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಅವರು ಹೇಳಿದರು.

"ಒಂದು ಪ್ರದೇಶವು ಹೆಚ್ಚು ಹಿಂದುಳಿದಿದ್ದಷ್ಟೂ ಅದಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತದೆ" ಎಂಬ ಅಭಿವೃದ್ಧಿ ಮಂತ್ರವನ್ನು ಪುನರುಚ್ಚರಿಸಿದ ಶ್ರೀ ಮೋದಿ, ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಎಂಬ ಪ್ರಮುಖ ಹೊಸ ಉಪಕ್ರಮವನ್ನು ಅನುಮೋದಿಸಿದೆ ಎಂದು ಘೋಷಿಸಿದರು. ಈ ಯೋಜನೆಗೆ ₹24,000 ಕೋಟಿ ಮೀಸಲಿಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಹಿಂದಿನ ಸರ್ಕಾರಗಳ ದೋಷಪೂರಿತ ನೀತಿಗಳಿಂದಾಗಿ ಹಿಂದುಳಿದ ಜಿಲ್ಲೆಗಳಲ್ಲಿ - ಕಡಿಮೆ ಕೃಷಿ ಉತ್ಪಾದನೆ ಮತ್ತು ರೈತರ ಆದಾಯ ಸೀಮಿತವಾಗಿರುವ ಪ್ರದೇಶಗಳು - ಈ ಉಪಕ್ರಮದಡಿ ಗಮನವನ್ನು ಕೇಂದ್ರೀಕರಿಸಲಾಗುವುದು ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯು ಉತ್ತರ ಪ್ರದೇಶದ ಲಕ್ಷಾಂತರ ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

"ನಮ್ಮ ಸರ್ಕಾರ ರೈತರ ಜೀವನವನ್ನು ಪರಿವರ್ತಿಸಲು, ಅವರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಸಂಪೂರ್ಣ ಶಕ್ತಿಯಿಂದ ಕೆಲಸ ಮಾಡುತ್ತಿದೆ. ಬೀಜದಿಂದ ಮಾರುಕಟ್ಟೆಯವರೆಗೆ ನಾವು ರೈತರೊಂದಿಗೆ ದೃಢವಾಗಿ ನಿಲ್ಲುತ್ತೇವೆ" ಎಂದು ಒತ್ತಿ ಹೇಳಿದ ಪ್ರಧಾನಿ, ಜಮೀನುಗಳಿಗೆ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಲು, ದೇಶಾದ್ಯಂತ ಲಕ್ಷಾಂತರ ಕೋಟಿ ರೂಪಾಯಿಗಳ ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಅತಿಯಾದ ಮಳೆಯಾಗಲಿ, ಆಲಿಕಲ್ಲು ಮಳೆಯಾಗಲಿ ಅಥವಾ ಹಿಮವಾಗಲಿ ಹವಾಮಾನವು ರೈತರಿಗೆ ಯಾವಾಗಲೂ ದೊಡ್ಡ ಸವಾಲನ್ನು ಒಡ್ಡುತ್ತದೆ ಎಂದು ಶ್ರೀ ಮೋದಿ ಒಪ್ಪಿಕೊಂಡರು. ಅಂತಹ ಅನಿಶ್ಚಿತತೆಗಳಿಂದ ರೈತರನ್ನು ರಕ್ಷಿಸಲು, ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ರೈತರು ಇಲ್ಲಿಯವರೆಗೆ ₹1.75 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಕ್ಲೈಮುಗಳನ್ನು ಇತ್ಯರ್ಥ ಮಾಡಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಪ್ರಧಾನ, ಅಕ್ಕಿ ಮತ್ತು ಗೋಧಿಯಂತಹ ಪ್ರಮುಖ ಆಹಾರ ಪದಾರ್ಥಗಳು ಸೇರಿದಂತೆ ಹಲವು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂ ಎಸ್‌ ಪಿ) ದಾಖಲೆಯ ಹೆಚ್ಚಳವನ್ನು ಮಾಡಲಾಗಿದೆ ಎಂದು ಹೇಳಿದರು. ರೈತರ ಬೆಳೆಗಳನ್ನು ರಕ್ಷಿಸಲು, ಸರ್ಕಾರವು ದೇಶಾದ್ಯಂತ ಸಾವಿರಾರು ಹೊಸ ಗೋದಾಮುಗಳನ್ನು ನಿರ್ಮಿಸುತ್ತಿದೆ ಎಂದು ಅವರು ಹೇಳಿದರು.

ಕೃಷಿ ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವತ್ತ ಸರ್ಕಾರದ ಗಮನವನ್ನು ಒತ್ತಿ ಹೇಳಿದ ಶ್ರೀ ಮೋದಿ, ಭಾರತದಾದ್ಯಂತ ಮೂರು ಕೋಟಿ ಲಕ್ಷಾಪತಿ ದೀದಿಯರನ್ನು ಸೃಷ್ಟಿಸುವ ಗುರಿಯೊಂದಿಗೆ "ಲಕ್ಷಾಪತಿ ದೀದಿ" ಅಭಿಯಾನವನ್ನು ಆರಂಭಿಸಲಾಗಿದೆ ಎಂದರು. 1.5 ಕೋಟಿಗೂ ಹೆಚ್ಚು ಮಹಿಳೆಯರು ಈಗಾಗಲೇ ಈ ಮೈಲಿಗಲ್ಲು ಸಾಧಿಸಿದ್ದಾರೆ ಎಂದು ಅವರು ಹೇಳಿದರು. ಸರ್ಕಾರದ "ಡ್ರೋನ್ ದೀದಿ" ಉಪಕ್ರಮವು ಲಕ್ಷಾಂತರ ಮಹಿಳೆಯರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಎಂದು ಅವರು ಹೇಳಿದರು.

ಆಧುನಿಕ ಕೃಷಿ ಸಂಶೋಧನೆಯನ್ನು ನೇರವಾಗಿ ಜಮೀನುಗಳಿಗೆ ಕೊಂಡೊಯ್ಯಲು ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. "ಪ್ರಯೋಗಾಲಯದಿಂದ ಜಮೀನಿಗೆ" ಎಂಬ ಮಾರ್ಗದರ್ಶಿ ತತ್ವದಡಿಯಲ್ಲಿ 2025 ರ ಮೇ ಮತ್ತು ಜೂನ್‌ ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ನಡೆಸಲಾಯಿತು, ಇದರ ಮೂಲಕ 1.25 ಕೋಟಿಗೂ ಹೆಚ್ಚು ರೈತರೊಂದಿಗೆ ನೇರ ಸಂಪರ್ಕ ಸಾಧಿಸಲಾಯಿತು ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳು ಎಲ್ಲಾ ನಾಗರಿಕರಿಗೆ ಸರಾಗವಾಗಿ ತಲುಪುವುದು ಮುಂದುವರಿಯಬೇಕು ಎಂದು ಅವರು ಒತ್ತಿ ಹೇಳಿದರು.

"ಜನಧನ್ ಯೋಜನೆಯಡಿಯಲ್ಲಿ, ದೇಶಾದ್ಯಂತ ಬಡವರಿಗಾಗಿ 55 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ" ಎಂದು ಶ್ರೀ ಮೋದಿ ಹೇಳಿದರು. ಈ ಯೋಜನೆ ಇತ್ತೀಚೆಗೆ ಹತ್ತು ವರ್ಷಗಳನ್ನು ಪೂರ್ಣಗೊಳಿಸಿದೆ ಮತ್ತು ನಿಯಮಗಳ ಪ್ರಕಾರ, ಹತ್ತು ವರ್ಷಗಳ ನಂತರ ಬ್ಯಾಂಕ್ ಖಾತೆಗಳಿಗೆ ಹೊಸ ಕೆವೈಸಿ ಪರಿಶೀಲನೆಯ ಅಗತ್ಯವಿದೆ ಎಂದು ಅವರು ಮಾಹಿತಿ ನೀಡಿದರು. ಈ ಅವಶ್ಯಕತೆಯನ್ನು ಪೂರೈಸಲು, ಜುಲೈ 1, 2025 ರಿಂದ ದೇಶಾದ್ಯಂತ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಬ್ಯಾಂಕುಗಳು ಪ್ರತಿ ಗ್ರಾಮ ಪಂಚಾಯ್ತಿಯನ್ನು ತಲುಪುತ್ತಿವೆ ಮತ್ತು ಸುಮಾರು ಒಂದು ಲಕ್ಷ ಗ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ಶಿಬಿರಗಳನ್ನು ಆಯೋಜಿಸಲಾಗಿದೆ, ಲಕ್ಷಾಂತರ ಜನರು ತಮ್ಮ ಕೆವೈಸಿ ನವೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಜನಧನ್ ಖಾತೆಯನ್ನು ಹೊಂದಿರುವ ಪ್ರತಿಯೊಬ್ಬರೂ ತಮ್ಮ ಕೆವೈಸಿ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕೆಂದು ಪ್ರಧಾನಿ ಕರೆ ನೀಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಲಾಗುತ್ತಿರುವ ವಿಶೇಷ ಬ್ಯಾಂಕ್ ಶಿಬಿರಗಳ ಹೆಚ್ಚುವರಿ ಪ್ರಯೋಜನವನ್ನು ಒತ್ತಿ ಹೇಳಿದ ಶ್ರೀ ಮೋದಿ, ಈ ಶಿಬಿರಗಳು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ನೋಂದಣಿಗಳನ್ನು ಸುಗಮಗೊಳಿಸುತ್ತಿವೆ ಎಂದು ಹೇಳಿದರು. ಈ ಯೋಜನೆಗಳು ನಾಗರಿಕರಿಗೆ ಗಮನಾರ್ಹ ಬೆಂಬಲವನ್ನು ನೀಡುತ್ತವೆ ಎಂದು ಅವರು ಒತ್ತಿ ಹೇಳಿದರು ಮತ್ತು ಪ್ರತಿಯೊಬ್ಬರೂ ಈ ಶಿಬಿರಗಳಿಗೆ ಭೇಟಿ ನೀಡಬೇಕೆಂದು ಒತ್ತಾಯಿಸಿದರು. ಈ ಯೋಜನೆಗಳಲ್ಲಿ ಇನ್ನೂ ದಾಖಲಾಗದವರು ತಮ್ಮ ಜನಧನ್ ಖಾತೆಗಳಿಗೆ ನೋಂದಾಯಿಸಿಕೊಳ್ಳಲು ಮತ್ತು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವರು ಕರೆ ನೀಡಿದರು. ಈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು, ಬ್ಯಾಂಕುಗಳ ಸಂಪರ್ಕ ಪ್ರಯತ್ನಗಳಲ್ಲಿ ಸಹಾಯ ಮಾಡಲು ಮತ್ತು ಸಾರ್ವಜನಿಕರಿಂದ ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ತಮ್ಮ ಪಕ್ಷದ ಎಲ್ಲಾ ಜನಪ್ರತಿನಿಧಿಗಳಿಗೆ ಕರೆ ನೀಡಿದರು.

ಮಹಾದೇವನ ನಗರದಲ್ಲಿ ಇಂದು ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ಶಿವ ಪದದ ಅರ್ಥವನ್ನು ವಿವರಿಸುತ್ತಾ, ಶಿವ ಎಂದರೆ "ಕಲ್ಯಾಣ", ಆದರೆ ಭಯೋತ್ಪಾದನೆ ಮತ್ತು ಅನ್ಯಾಯವನ್ನು ಎದುರಿಸುವಾಗ ಉಗ್ರ ರುದ್ರ ರೂಪವನ್ನು ಸಹ ತಾಳುತ್ತಾನೆ ಎಂದು ಹೇಳಿದರು. ಆಪರೇಷನ್ ಸಿಂಧೂರದ ಸಮಯದಲ್ಲಿ, "ಭಾರತದ ಮೇಲೆ ದಾಳಿ ಮಾಡುವ ಯಾರನ್ನೂ, ಪಾತಾಳದಲ್ಲಿದ್ದರೂ ಬಿಡುವುದಿಲ್ಲ" ಎಂದು ಘೋಷಿಸಿದ ಭಾರತದ ಈ ರುದ್ರ ರೂಪವನ್ನು ಜಗತ್ತು ಕಂಡಿತು ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಆಪರೇಷನ್ ಸಿಂಧೂರದ ಯಶಸ್ಸಿನ ಹೊರತಾಗಿಯೂ, ದೇಶದೊಳಗಿನ ಕೆಲವು ವ್ಯಕ್ತಿಗಳು ಇದರಿಂದ ತೊಂದರೆಗೊಳಗಾಗಿದ್ದಾರೆ ಎಂದು ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳನ್ನು ಭಾರತ ನಾಶಪಡಿಸಿದೆ ಎಂಬ ಅಂಶವನ್ನು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ನಿರ್ದಿಷ್ಟವಾಗಿ ವಿರೋಧ ಪಕ್ಷ ಮತ್ತು ಅದರ ಮಿತ್ರಪಕ್ಷಗಳತ್ತ ಬೊಟ್ಟು ಮಾಡಿದರು. ಭಾರತದ ಡ್ರೋನ್‌ ಗಳು ಭಯೋತ್ಪಾದಕ ನೆಲೆಗಳನ್ನು ನಿಖರವಾಗಿ ಗುರಿಯಾಗಿಸಿಕೊಂಡು ಹೇಗೆ ನಾಶಮಾಡಿದವು ಎಂಬುದನ್ನು ತೋರಿಸುವ ದೃಶ್ಯಗಳನ್ನು ಉಲ್ಲೇಖಿಸಿದ ಶ್ರೀ ಮೋದಿ, ಹಲವಾರು ಪಾಕಿಸ್ತಾನಿ ವಾಯುನೆಲೆಗಳು ಇನ್ನೂ ಗಂಭೀರ ಸ್ಥಿತಿಯಲ್ಲಿವೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕರನ್ನು ಟೀಕಿಸಿದ ಪ್ರಧಾನಿ, ಭಯೋತ್ಪಾದನೆಯ ಸೂತ್ರಧಾರಿಗಳು ಒಂದೆಡೆ ಶೋಕಿಸುತ್ತಿದ್ದರೆ, ಮತ್ತೊಂದೆಡೆ ಈ ಪಕ್ಷಗಳು ಭಯೋತ್ಪಾದಕರ ಸ್ಥಿತಿಯ ಬಗ್ಗೆ ಶೋಕಿಸುತ್ತಿವೆ ಎಂದು ಹೇಳಿದರು.

ಭಾರತದ ಸಶಸ್ತ್ರ ಪಡೆಗಳ ಶೌರ್ಯವನ್ನು ಪದೇ ಪದೇ ಅವಮಾನಿಸುತ್ತಿರುವುದಕ್ಕೆ ವಿರೋಧ ಪಕ್ಷಗಳನ್ನು ಟೀಕಿಸಿದ ಮೋದಿ, ಪ್ರತಿಪಕ್ಷಗಳು ಆಪರೇಷನ್ ಸಿಂಧೂರ್ ಅನ್ನು "ತಮಾಷಾ" ಎಂದು ಕರೆದಿವೆ ಮತ್ತು ಘನತೆ ಮತ್ತು ತ್ಯಾಗದ ಸಂಕೇತವಾದ ಸಿಂಧೂರ್ ಅನ್ನು ಎಂದಾದರೂ ತಮಾಷಾ ಎಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿದರು. ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಹೋದರಿಯರ ಸಿಂಧೂರಕ್ಕೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆಯ ನೆರವೇರಿಕೆಯನ್ನು ಈ ರೀತಿ ಕ್ಷುಲ್ಲಕಗೊಳಿಸಬಹುದೇ ಎಂದು ಅವರು ಕೇಳಿದರು.

ವಿರೋಧ ಪಕ್ಷಗಳು ಮತಬ್ಯಾಂಕ್ ಮತ್ತು ಓಲೈಕೆ ರಾಜಕೀಯದಲ್ಲಿ ತೊಡಗಿರುವುದನ್ನು ಪ್ರಧಾನಿ ಖಂಡಿಸಿದರು. ಪಹಲ್ಗಾಮ್‌ ನಲ್ಲಿ ಭಯೋತ್ಪಾದಕರನ್ನು ತಕ್ಷಣವೇ ಏಕೆ ನಿರ್ನಾಮ ಮಾಡಲಾಯಿತು ಎಂದು ಪ್ರಶ್ನಿಸಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರು ನೀಡಿದ ಹೇಳಿಕೆಗಳನ್ನು ಅವರು ಉಲ್ಲೇಖಿಸಿದರು. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಕಾಯಬೇಕೇ ಎಂದು ಶ್ರೀ ಮೋದಿ ಕೇಳಿದರು. ಉತ್ತರ ಪ್ರದೇಶದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಭಯೋತ್ಪಾದಕರಿಗೆ ಕ್ಲೀನ್ ಚಿಟ್ ನೀಡಿದ ಮತ್ತು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾದವರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಂಡ ವ್ಯಕ್ತಿಗಳು ಇವರು ಎಂದು ಅವರು ಸಾರ್ವಜನಿಕರಿಗೆ ನೆನಪಿಸಿದರು. ಭಯೋತ್ಪಾದಕರ ನಿರ್ಮೂಲನೆ ಮತ್ತು ಆಪರೇಷನ್ ಸಿಂಧೂರ್ ಹೆಸರಿನಿಂದಲೇ ಈ ಪಕ್ಷಗಳು ಈಗ ತೊಂದರೆಗೊಳಗಾಗಿವೆ ಎಂದು ಅವರು ಹೇಳಿದರು. ಇದು ಭಗವಾನ್ ಭೋಲೆನಾಥನನ್ನು ಪೂಜಿಸುವ ಮತ್ತು ದೇಶದ ಶತ್ರುಗಳ ಮುಂದೆ ಕಾಲ ಭೈರವನಾಗುವುದು ಹೇಗೆಂದು ತಿಳಿದಿರುವ ನವಭಾರತ ಎಂದು ವಾರಾಣಸಿಯ ಪವಿತ್ರ ನೆಲದಿಂದ ಪ್ರಧಾನ ಮಂತ್ರಿಯವರು ಘೋಷಿಸಿದರು.

"ಆಪರೇಷನ್ ಸಿಂಧೂರ ಸಮಯದಲ್ಲಿ, ಭಾರತದ ದೇಶೀಯ ಶಸ್ತ್ರಾಸ್ತ್ರಗಳ ಶಕ್ತಿ ಮತ್ತು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು, ದೇಶೀಯ ಕ್ಷಿಪಣಿಗಳು ಮತ್ತು ಡ್ರೋನ್‌ ಗಳ ಪರಿಣಾಮಕಾರಿತ್ವವನ್ನು ಜಗತ್ತು ವೀಕ್ಷಿಸಿತು, ಇದು ಆತ್ಮನಿರ್ಭರ ಭಾರತದ ಶಕ್ತಿಯನ್ನು ಪ್ರದರ್ಶಿಸಿತು" ಎಂದು ಪ್ರಧಾನಿ ಹೇಳಿದರು. ಭಾರತದ ಬ್ರಹ್ಮೋಸ್ ಕ್ಷಿಪಣಿಗಳ ಪ್ರಭಾವವನ್ನು ಅವರು ನಿರ್ದಿಷ್ಟವಾಗಿ ಒತ್ತಿ ಹೇಳಿದರು, ಅವುಗಳ ಉಪಸ್ಥಿತಿಯು ರಾಷ್ಟ್ರದ ಪ್ರತಿಯೊಬ್ಬ ಶತ್ರುಗಳಲ್ಲೂ ಭಯವನ್ನು ಹುಟ್ಟುಹಾಕಿದೆ ಎಂದು ಹೇಳಿದರು.

ಶೀಘ್ರದಲ್ಲೇ ರಾಜ್ಯದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸಲಾಗುವುದು ಎಂದು ಉತ್ತರ ಪ್ರದೇಶದ ಸಂಸತ್ ಸದಸ್ಯರಾಗಿ ಶ್ರೀ ಮೋದಿ ಅವರು ಹೆಮ್ಮೆ ವ್ಯಕ್ತಪಡಿಸಿದರು. ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳ ಉತ್ಪಾದನೆ ಪ್ರಾರಂಭವಾಗುತ್ತಿದೆ ಮತ್ತು ಹಲವಾರು ಪ್ರಮುಖ ರಕ್ಷಣಾ ಕಂಪನಿಗಳು ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್‌ ನಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸುತ್ತಿವೆ ಎಂದು ಅವರು ಘೋಷಿಸಿದರು. ಮುಂಬರುವ ವರ್ಷಗಳಲ್ಲಿ, ಉತ್ತರ ಪ್ರದೇಶದಲ್ಲಿ ತಯಾರಾಗುವ ಶಸ್ತ್ರಾಸ್ತ್ರಗಳು ಭಾರತದ ಮಿಲಿಟರಿ ಬಲದ ಪ್ರಮುಖ ಭಾಗವಾಗುತ್ತವೆ ಎಂದು ಅವರು ದೃಢಪಡಿಸಿದರು. ಈ ಸಾಧನೆಯ ಬಗ್ಗೆ ನೀವು ಹೆಮ್ಮೆಪಡುತ್ತೀರಾ ಎಂದು ಪ್ರಧಾನಿ ಸಾರ್ವಜನಿಕರನ್ನು ಕೇಳಿದರು. ಪಾಕಿಸ್ತಾನ ಮತ್ತೊಂದು ದುಷ್ಕೃತ್ಯ ಎಸಗಿದರೆ, ಉತ್ತರ ಪ್ರದೇಶದಲ್ಲಿ ತಯಾರಾದ ಕ್ಷಿಪಣಿಗಳು ಭಯೋತ್ಪಾದಕರನ್ನು ನಾಶಮಾಡುತ್ತವೆ ಎಂದು ಅವರು ಘೋಷಿಸಿದರು.
ಉತ್ತರ ಪ್ರದೇಶದಲ್ಲಿ ತ್ವರಿತ ಕೈಗಾರಿಕಾ ಅಭಿವೃದ್ಧಿ ನಡೆಯುತ್ತಿದೆ, ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿವೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಪರಿವರ್ತನೆಗೆ ತಮ್ಮ ಸರ್ಕಾರದ ಅಭಿವೃದ್ಧಿ ಆಧಾರಿತ ನೀತಿಗಳು ಕಾರಣ ಎಂದರು. ಅಪರಾಧಿಗಳು ನಿರ್ಭೀತವಾಗಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಹೂಡಿಕೆದಾರರು ರಾಜ್ಯವನ್ನು ಪ್ರವೇಶಿಸಲು ಹಿಂಜರಿಯುತ್ತಿದ್ದ ಹಿಂದಿನ ಆಡಳಿತದೊಂದಿಗೆ ಪ್ರಸ್ತುತ ಸನ್ನಿವೇಶವನ್ನು ಅವರು ಹೋಲಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ, ಅಪರಾಧಿಗಳು ಈಗ ಭಯಭೀತರಾಗಿದ್ದಾರೆ ಮತ್ತು ಹೂಡಿಕೆದಾರರು ಉತ್ತರ ಪ್ರದೇಶದ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. ವಾರಾಣಸಿಯಲ್ಲಿ ಅಭಿವೃದ್ಧಿಯ ಮಹಾ ಅಭಿಯಾನವು ಅಡೆತಡೆಯಿಲ್ಲದೆ ಮುಂದುವರೆದಿದೆ ಎಂದು ತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ, ಈ ಅಭಿವೃದ್ಧಿಯ ವೇಗಕ್ಕಾಗಿ ಉತ್ತರ ಪ್ರದೇಶ ಸರ್ಕಾರವನ್ನು ಅಭಿನಂದಿಸಿದರು.

ಹೊಸ ರೈಲು ಮೇಲ್ಸೇತುವೆ, ಜಲ ಜೀವನ್ ಮಿಷನ್ ಅಡಿಯಲ್ಲಿ ಉಪಕ್ರಮಗಳು, ವಾರಾಣಸಿಯಲ್ಲಿ ಶಾಲೆಗಳ ಪುನರ್ನಿರ್ಮಾಣ, ಹೋಮಿಯೋಪತಿ ಕಾಲೇಜು ನಿರ್ಮಾಣ ಮತ್ತು ಮುನ್ಶಿ ಪ್ರೇಮಚಂದ್ ಅವರ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನಗಳು ಸೇರಿದಂತೆ ಇಂದು ಪ್ರಾರಂಭಿಸಲಾದ ಹಲವಾರು ಯೋಜನೆಗಳನ್ನು ವಿವರಿಸಿದ ಶ್ರೀ ಮೋದಿ, ಈ ಯೋಜನೆಗಳು ಭವ್ಯ, ದೈವಿಕ ಮತ್ತು ಸಮೃದ್ಧ ವಾರಾಣಸಿಯ ಸೃಷ್ಟಿಯನ್ನು ವೇಗಗೊಳಿಸುತ್ತವೆ ಎಂದು ಹೇಳಿದರು. ಸೇವಾಪುರಿಗೆ ಭೇಟಿ ನೀಡುವುದು ಅದೃಷ್ಟದ ವಿಷಯ ಎಂದು ಅವರು ಹೇಳಿದರು, ಇದನ್ನು ಮಾತೆ ಕಲ್ಕಾ ದೇವಿಯ ಹೊಸ್ತಿಲು ಎಂದು ಬಣ್ಣಿಸಿದರು. ದೇವಿಯ ಪಾದಗಳಿಗೆ ನಮಸ್ಕರಿಸಿದ ಅವರು, ಸರ್ಕಾರವು ಮಾ ಕಲ್ಕಾ ಧಾಮವನ್ನು ಸುಂದರಗೊಳಿಸಿದೆ, ಅದನ್ನು ಹೆಚ್ಚು ಭವ್ಯವಾಗಿಸಿದೆ ಮತ್ತು ದೇವಾಲಯಕ್ಕೆ ಪ್ರವೇಶವನ್ನು ಸುಧಾರಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಸೇವಾಪುರಿಯ ಕ್ರಾಂತಿಕಾರಿ ಇತಿಹಾಸವನ್ನು ಪ್ರಧಾನಿ ನೆನಪಿಸಿಕೊಂಡರು, ಸ್ವಾತಂತ್ರ್ಯ ಹೋರಾಟಕ್ಕೆ ಅದರ ಮಹತ್ವದ ಕೊಡುಗೆಯನ್ನು ಗಮನಿಸಿದರು. ಪ್ರತಿ ಮನೆಯಲ್ಲೂ ಪುರುಷರು ಮತ್ತು ಮಹಿಳೆಯರ ಕೈಯಲ್ಲಿ ಚರಕಗಳೊಂದಿಗೆ ಮಹಾತ್ಮ ಗಾಂಧಿಯವರ ದೃಷ್ಟಿಕೋನವು ಜೀವಂತವಾದದ್ದು ಸೇವಾಪುರಿಯಲ್ಲಿಯೇ ಎಂದು ಅವರು ಒತ್ತಿ ಹೇಳಿದರು. ಶ್ರೀ ಮೋದಿ ಅವರು ಅರ್ಥಪೂರ್ಣ ಕಾಕತಾಳೀಯತೆಯನ್ನು ಸಹ ಎತ್ತಿ ತೋರಿಸಿದರು: ಚಂದಪುರ್-ಭದೋಹಿ ರಸ್ತೆಯಂತಹ ಯೋಜನೆಗಳ ಮೂಲಕ, ವಾರಾಣಸಿಯ ನೇಕಾರರು ಈಗ ಭದೋಹಿಯ ನೇಕಾರರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಇದು ಬನಾರಸಿ ರೇಷ್ಮೆಯ ಕುಶಲಕರ್ಮಿಗಳು ಮತ್ತು ಭದೋಹಿಯ ಕುಶಲಕರ್ಮಿಗಳು ಇಬ್ಬರಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಆರ್ಥಿಕ ಪ್ರಗತಿ, ಚಾಲ್ತಿಯಲ್ಲಿರುವ ಜಾಗತಿಕ ಪರಿಸ್ಥಿತಿಗಳತ್ತ ಗಮನ ಸೆಳೆದ ಶ್ರೀ ಮೋದಿ "ವಾರಾಣಸಿ ಬುದ್ಧಿಜೀವಿಗಳ ನಗರ" ಎಂದು ಕರೆದರು. ಜಾಗತಿಕ ಆರ್ಥಿಕತೆಯು ಪ್ರಸ್ತುತ ಬಹು ಅನಿಶ್ಚಿತತೆ ಮತ್ತು ಅಸ್ಥಿರತೆಯ ವಾತಾವರಣವನ್ನು ಎದುರಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಇಂತಹ ಸನ್ನಿವೇಶದಲ್ಲಿ, ಪ್ರಪಂಚದಾದ್ಯಂತದ ರಾಷ್ಟ್ರಗಳು ತಮ್ಮದೇ ಆದ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತಿವೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. ಆದ್ದರಿಂದ, ಭಾರತವು ತನ್ನ ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು. ರೈತರು ಮತ್ತು ಸಣ್ಣ ಕೈಗಾರಿಕೆಗಳ ಕಲ್ಯಾಣವು ಅತ್ಯಂತ ಮುಖ್ಯವಾದುದು ಮತ್ತು ಸರ್ಕಾರವು ಈ ದಿಕ್ಕಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು.

ನಾಗರಿಕರಿಗೂ ಕೆಲವು ಜವಾಬ್ದಾರಿಗಳಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಪ್ರತಿಯೊಬ್ಬರೂ ಸ್ವದೇಶಿಗಾಗಿ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು. ಸ್ವದೇಶಿ ಎಂದರೆ ಭಾರತೀಯರ ಬೆವರು ಮತ್ತು ಶ್ರಮದಿಂದ ಮಾಡಿದ ಯಾವುದೇ ವಸ್ತು ಎಂದು ಅವರು ವ್ಯಾಖ್ಯಾನಿಸಿದರು, "ವೋಕಲ್‌ ಫಾರ್‌ ಲೋಕಲ್‌" ಎಂಬ ಮಂತ್ರವನ್ನು ರಾಷ್ಟ್ರ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. "ಮೇಕ್ ಇನ್ ಇಂಡಿಯಾ" ಉತ್ಪನ್ನಗಳನ್ನು ಉತ್ತೇಜಿಸಲು ಪ್ರತಿಜ್ಞೆ ಮಾಡಬೇಕೆಂದು ಪ್ರಧಾನಮಂತ್ರಿ  ನಾಗರಿಕರನ್ನು ಒತ್ತಾಯಿಸಿದರು. ನಮ್ಮ ಮನೆಗಳಿಗೆ ಪ್ರವೇಶಿಸುವ ಪ್ರತಿಯೊಂದು ಹೊಸ ವಸ್ತುವೂ ಸ್ವದೇಶಿಯಾಗಿರಬೇಕು ಮತ್ತು ಈ ಜವಾಬ್ದಾರಿಯನ್ನು ಪ್ರತಿಯೊಬ್ಬ ಭಾರತೀಯನು ಸ್ವೀಕರಿಸಬೇಕು ಎಂದು ಅವರು ಹೇಳಿದರು. ಪ್ರತಿಯೊಬ್ಬ ವ್ಯಾಪಾರಿ ಮತ್ತು ಅಂಗಡಿಯವರು ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುವ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಶ್ರೀ ಮೋದಿ ಮನವಿ ಮಾಡಿದರು, ಇದು ರಾಷ್ಟ್ರಕ್ಕೆ ನಿಜವಾದ ಸೇವೆಯಾಗುತ್ತದೆ. ಮುಂಬರುವ ಹಬ್ಬದ ಋತುವಿನಲ್ಲಿ ಜನರು ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು ಮತ್ತು ಇದು ಮಹಾತ್ಮ ಗಾಂಧಿಯವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಹೇಳಿದರು.

ಅಭಿವೃದ್ಧಿ ಹೊಂದಿದ ಭಾರತದ ಕನಸು ಸಾಮೂಹಿಕ ಪ್ರಯತ್ನದಿಂದ ಮಾತ್ರ ನನಸಾಗುತ್ತದೆ ಎಂದು ಒತ್ತಿ ಹೇಳುವ ಮೂಲಕ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಇಂದು ಉದ್ಘಾಟನೆಗೊಂಡ ಅಭಿವೃದ್ಧಿ ಕೆಲಸಗಳಿಗೆ ಅವರು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಸೇರಿದಂತೆ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರು ಮತ್ತು ಇತರ ಗಣ್ಯರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು.

ಹಿನ್ನೆಲೆ

ಈ ಯೋಜನೆಗಳು ವಾರಾಣಸಿಯಲ್ಲಿ ಸಮಗ್ರ ನಗರ ಪರಿವರ್ತನೆ, ಸಾಂಸ್ಕೃತಿಕ ಪುನರುಜ್ಜೀವನ, ಸುಧಾರಿತ ಸಂಪರ್ಕ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿಯೊಂದಿಗೆ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ, ನಗರಾಭಿವೃದ್ಧಿ ಮತ್ತು ಸಾಂಸ್ಕೃತಿಕ ಪರಂಪರೆ ಸೇರಿದಂತೆ ಬಹು ಕ್ಷೇತ್ರಗಳನ್ನು ಒಳಗೊಂಡಿವೆ.

ವಾರಾಣಸಿಯಲ್ಲಿ ರಸ್ತೆ ಸಂಪರ್ಕವನ್ನು ಸುಧಾರಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಹಲವಾರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ಮಾಡಿದರು. ಅವರು ವಾರಾಣಸಿ - ಭದೋಹಿ ರಸ್ತೆ ಮತ್ತು ಛಿತೌನಿ - ಶೂಲ್ ಟಂಕೇಶ್ವರ ರಸ್ತೆಯ ಅಗಲೀಕರಣ ಮತ್ತು ಬಲವರ್ಧನೆಯನ್ನು ಉದ್ಘಾಟಿಸಿದರು; ಮತ್ತು ಮೋಹನ್ ಸರಾಯ್ - ಅಡಲ್ಪುರ ರಸ್ತೆಯಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಹರ್ದತ್ಪುರದಲ್ಲಿ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದರು. ದಲ್ಮಂಡಿ, ಲಹರ್ತಾರಾ-ಕೋಟ್ವಾ, ಗಂಗಾಪುರ, ಬಬತ್ಪುರ ಸೇರಿದಂತೆ ಅನೇಕ ಗ್ರಾಮೀಣ ಮತ್ತು ನಗರ ಕಾರಿಡಾರ್‌ಗಳಲ್ಲಿ ಸಮಗ್ರ ರಸ್ತೆ ಅಗಲೀಕರಣ ಮತ್ತು ಬಲವರ್ಧನೆಗೆ ಮತ್ತು ಲೆವೆಲ್ ಕ್ರಾಸಿಂಗ್ 22 ಸಿ ಮತ್ತು ಖಾಲಿಸ್ಪುರ್ ಯಾರ್ಡ್‌ ನಲ್ಲಿ ರೈಲ್ವೆ ಮೇಲ್ಸೇತುವೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ಪ್ರದೇಶದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವ ಸಲುವಾಗಿ, ಪ್ರಧಾನಮಂತ್ರಿಯವರು ಸ್ಮಾರ್ಟ್ ವಿತರಣಾ ಯೋಜನೆಯಡಿ ವಿವಿಧ ಕಾಮಗಾರಿಗಳು ಮತ್ತು 880 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ವಿದ್ಯುತ್ ಮೂಲಸೌಕರ್ಯಗಳ ಭೂಗತೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರವಾಸೋದ್ಯಮವನ್ನು ಉತ್ತೇಜಿಸಲು, ನದಿ ದಂಡೆಯಲ್ಲಿರುವ ಎಂಟು ಕಚ್ಚಾ ಘಾಟ್‌ ಗಳ ಪುನರಾಭಿವೃದ್ಧಿ, ಕಾಳಿಕಾ ಧಾಮದಲ್ಲಿ ಅಭಿವೃದ್ಧಿ ಕಾರ್ಯಗಳು, ಶಿವಪುರದ ರಂಗಿಲ್‌ದಾಸ್ ಕುಟಿಯಾದಲ್ಲಿ ಕೊಳ ಮತ್ತು ಘಾಟ್‌ ನ ಸುಂದರೀಕರಣ ಮತ್ತು ದುರ್ಗಾಕುಂಡ್‌ ನವೀಕರಣ ಮತ್ತು ಜಲಶುದ್ಧೀಕರಣ ಕಾರ್ಯಗಳನ್ನು ಪ್ರಧಾನಮಂತ್ರಿ  ಉದ್ಘಾಟಿಸಿದರು. ಕರ್ದಮೇಶ್ವರ ಮಹಾದೇವ ದೇವಾಲಯದ ನವೀಕರಣ ಕಾರ್ಯ; ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜನ್ಮಸ್ಥಳವಾದ ಕಾರ್ಖಿಯಾನ್ ಅಭಿವೃದ್ಧಿ; ಸಾರನಾಥ, ಋಷಿ ಮಾಂಡ್ವಿ ಮತ್ತು ರಾಮನಗರ ವಲಯದಲ್ಲಿನ ನಗರ ಸುವಿಧಾ ಕೇಂದ್ರಗಳ ಅಭಿವೃದ್ಧಿ; ಲಮಾಹಿಯಲ್ಲಿ ಮುನ್ಷಿ ಪ್ರೇಮಚಂದ್ ಅವರ ಪೂರ್ವಜರ ಮನೆಯ ಪುನರಾಭಿವೃದ್ಧಿ ಮತ್ತು ವಸ್ತುಸಂಗ್ರಹಾಲಯದ ಮೇಲ್ದರ್ಜೆಗೇರಿಸುವಿಕೆ ಇತ್ಯಾದಿಗಳಿಗೆ ಅವರು ಅಡಿಪಾಯ ಹಾಕಿದರು. ಕಾಂಚನಪುರದಲ್ಲಿ ನಗರ ಮಿಯಾವಾಕಿ ಅರಣ್ಯದ ಅಭಿವೃದ್ಧಿ ಮತ್ತು ಶಹೀದ್ ಉದ್ಯಾನ ಮತ್ತು ಇತರ 21 ಉದ್ಯಾನವನಗಳ ಪುನರಾಭಿವೃದ್ಧಿ ಮತ್ತು ಸುಂದರೀಕರಣಕ್ಕೂ ಅವರು ಅಡಿಪಾಯ ಹಾಕಿದರು.

ಇದಲ್ಲದೆ, ಸಾಂಸ್ಕೃತಿಕವಾಗಿ ಮಹತ್ವದ ಜಲಮೂಲಗಳನ್ನು ಸಂರಕ್ಷಿಸಲು, ಪ್ರಧಾನಮಂತ್ರಿಯವರು ರಾಮಕುಂಡ್, ಮಂದಾಕಿನಿ, ಶಂಕುಲ್ಧಾರ ಮತ್ತು ಇತರ ಕುಂಡಗಳಲ್ಲಿ ಜಲಶುದ್ಧೀಕರಣ ಮತ್ತು ನಿರ್ವಹಣಾ ಕಾರ್ಯಗಳಿಗೆ ನಾಲ್ಕು ತೇಲುವ ಪೂಜಾ ವೇದಿಕೆಗಳಿಗೆ ಶಂಕುಸ್ಥಾಪನೆ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಪ್ರಧಾನಮಂತ್ರಿಯವರು ಜಲ ಜೀವನ್ ಮಿಷನ್ ಅಡಿಯಲ್ಲಿ 47 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಉದ್ಘಾಟಿಸಿದರು.

ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಎಂಬ ತಮ್ಮ ದೃಷ್ಟಿಕೋನವನ್ನು ಮುಂದುವರಿಸುವ ಸಲುವಾಗಿ, ಪ್ರಧಾನಮಂತ್ರಿಯವರು ನಗರಸಭೆ ವ್ಯಾಪ್ತಿಯಲ್ಲಿನ 53 ಶಾಲಾ ಕಟ್ಟಡಗಳ ಮೇಲ್ದರ್ಜೆಗೇರಿಸುವಿಕೆಯನ್ನು ಉದ್ಘಾಟಿಸಿದರು. ಹೊಸ ಜಿಲ್ಲಾ ಗ್ರಂಥಾಲಯ ನಿರ್ಮಾಣ ಮತ್ತು ಲಾಲ್‌ಪುರದ ಜಖಿನಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಗಳ ಪುನರುಜ್ಜೀವನ ಸೇರಿದಂತೆ ಹಲವಾರು ಶೈಕ್ಷಣಿಕ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಆರೋಗ್ಯ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಮಹಾಮಾನ ಪಂಡಿತ್ ಮದನ್ ಮೋಹನ್ ಮಾಳವೀಯ ಕ್ಯಾನ್ಸರ್ ಕೇಂದ್ರ ಮತ್ತು ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಬೋಟಿಕ್ ಸರ್ಜರಿ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯಗಳು ಸೇರಿದಂತೆ ಸುಧಾರಿತ ವೈದ್ಯಕೀಯ ಉಪಕರಣಗಳ ಸೌಲಭ್ಯಗಳನ್ನು ಉದ್ಘಾಟಿಸಿದರು. ಅವರು ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆಯ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಇದಲ್ಲದೆ, ಅವರು ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರ ಮತ್ತು ಸಂಬಂಧಿತ ನಾಯಿ ಆರೈಕೆ ಕೇಂದ್ರವನ್ನು ಉದ್ಘಾಟಿಸಿದರು.

ವಾರಾಣಸಿಯಲ್ಲಿ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯಕ್ಕಾಗಿ ತಮ್ಮ ದೃಷ್ಟಿಕೋನದ ಮುಂದುವರಿಕೆಯಾಗಿ, ಪ್ರಧಾನಿಯವರು ಡಾ. ಭೀಮರಾವ್ ಅಂಬೇಡ್ಕರ್ ಕ್ರೀಡಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಅನ್ನು ಉದ್ಘಾಟಿಸಿದರು. ಕಾನೂನು ಜಾರಿ ಸಿಬ್ಬಂದಿಗೆ ಸೌಲಭ್ಯಗಳನ್ನು ಹೆಚ್ಚಿಸುವ ಸಲುವಾಗಿ, ರಾಮನಗರದ ಪ್ರಾದೇಶಿಕ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ)ಯಲ್ಲಿ 300 ಮಂದಿ ಸಾಮರ್ಥ್ಯದ ಬಹುಪಯೋಗಿ ಸಭಾಂಗಣವನ್ನು ಉದ್ಘಾಟಿಸಿದರು ಮತ್ತು ತ್ವರಿತ ಪ್ರತಿಕ್ರಿಯೆ ತಂಡ (ಕ್ಯೂಆರ್‌ಟಿ) ಬ್ಯಾರಕ್‌ ಗಳಿಗೆ ಅಡಿಪಾಯ ಹಾಕಿದರು.

ರೈತರ ಕಲ್ಯಾಣದಲ್ಲಿ ಮಹತ್ವದ ಹೆಜ್ಜೆಯಾಗಿ, ಪ್ರಧಾನ ಮಂತ್ರಿ ಅವರು ಪಿಎಂ-ಕಿಸಾನ್ ಯೋಜನೆಯ 20ನೇ ಕಂತನ್ನು ಬಿಡುಗಡೆ ಮಾಡಿದರು. ದೇಶಾದ್ಯಂತ 9.7 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 20,500 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ನೇರವಾಗಿ ವರ್ಗಾಯಿಸಿದರು. ಈ ಬಿಡುಗಡೆಯೊಂದಿಗೆ, ಈ ಯೋಜನೆಯ ಆರಂಭದಿಂದಲೂ ಒಟ್ಟು ವಿತರಣೆ 3.90 ಲಕ್ಷ ಕೋಟಿ ರೂ.ಗಳನ್ನು ದಾಟಿದೆ.

ಕಾಶಿ ಸಂಸದ್ ಪ್ರತಿಯೋಗಿತಾ ಅಡಿಯಲ್ಲಿ ರೇಖಾಚಿತ್ರ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯಾಗ್ರಹಣ ಸ್ಪರ್ಧೆ, ಖೇಲ್-ಕೂಡ್ ಪ್ರತಿಯೋಗಿತಾ, ಜ್ಞಾನ ಪ್ರತಿಯೋಗಿತಾ ಮತ್ತು ಉದ್ಯೋಗ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳ ನೋಂದಣಿ ಪೋರ್ಟಲ್ ಅನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ವಿವಿಧ ದಿವ್ಯಾಂಗರು ಮತ್ತು ಹಿರಿಯ ನಾಗರಿಕರಿಗೆ 7,400 ಕ್ಕೂ ಹೆಚ್ಚು ನೆರವು ಸಾಧನಗಳನ್ನು ವಿತರಿಸಿದರು.

 

 

*****

 


(Release ID: 2151846)