ಪ್ರಧಾನ ಮಂತ್ರಿಯವರ ಕಛೇರಿ
ಸಂಸತ್ತಿನ 2025ರ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಹೇಳಿಕೆ
ಮುಂಗಾರು ಅಧಿವೇಶನವು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ, ನಮ್ಮ ಸಾಮೂಹಿಕ ಸಾಧನೆಗಳ ನಿಜವಾದ ಆಚರಣೆಯಾಗಿದೆ: ಪ್ರಧಾನಮಂತ್ರಿ
ಭಾರತದ ಮಿಲಿಟರಿ ಶಕ್ತಿಯ ಬಲವನ್ನು ಜಗತ್ತು ನೋಡಿದೆ; ಆಪರೇಷನ್ ಸಿಂಧೂರ್ ನಲ್ಲಿ, ಭಾರತೀಯ ಸೈನಿಕರು ಅಡಗುತಾಣಗಳಲ್ಲಿದ್ದ ಭಯೋತ್ಪಾದನೆಯ ಹಿಂದಿನ ಸೂತ್ರಧಾರಿಗಳನ್ನು ನಿರ್ಮೂಲನೆ ಮಾಡುವ ಮೂಲಕ ಶೇ.100 ರಷ್ಟು ಯಶಸ್ಸಿನೊಂದಿಗೆ ತಮ್ಮ ಗುರಿಯನ್ನು ಸಾಧಿಸಿದ್ದಾರೆ: ಪ್ರಧಾನಮಂತ್ರಿ
ಭಾರತವು ಭಯೋತ್ಪಾದನೆ ಅಥವಾ ನಕ್ಸಲಿಸಂ ನಂತಹ ಅನೇಕ ಹಿಂಸಾತ್ಮಕ ಸವಾಲುಗಳನ್ನು ಎದುರಿಸಿದೆ, ಆದರೆ ಇಂದು ನಕ್ಸಲ್ ವಾದ ಮತ್ತು ಮಾವೋವಾದದ ಪ್ರಭಾವ ವೇಗವಾಗಿ ಕಡಿಮೆಯಾಗುತ್ತಿದೆ; ಸಂವಿಧಾನವು ಬಾಂಬ್ ಮತ್ತು ಬಂದೂಕುಗಳ ವಿರುದ್ಧ ಮೇಲುಗೈ ಸಾಧಿಸುತ್ತಿದೆ. ಹಿಂದಿನ ಕೆಂಪು ಕಾರಿಡಾರ್ ಗಳು ಈಗ ಅಭಿವೃದ್ಧಿ ಮತ್ತು ಪ್ರಗತಿಯ ಹಸಿರು ಪ್ರದೇಶಗಳಾಗಿ ಬದಲಾಗುತ್ತಿವೆ: ಪ್ರಧಾನಮಂತ್ರಿ
ಡಿಜಿಟಲ್ ಇಂಡಿಯಾ ಜಾಗತಿಕವಾಗಿ ಅಲೆಗಳನ್ನು ಎಬ್ಬಿಸುತ್ತಿದೆ, ಯುಪಿಐ ಅನೇಕ ದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ, ಇದು ಫಿನ್ ಟೆಕ್ ಜಗತ್ತಿನಲ್ಲಿ ಮನೆಮಾತಾಗಿದೆ: ಪ್ರಧಾನಮಂತ್ರಿ
ಪಹಲ್ಗಾಮ್ ನಲ್ಲಿ ನಡೆದ ಕ್ರೂರ ಹತ್ಯಾಕಾಂಡವು ಇಡೀ ಜಗತ್ತನ್ನು ಬೆಚ್ಚಿಬೀಳಿಸಿತು ಮತ್ತು ಭಯೋತ್ಪಾದನೆ ಮತ್ತು ಅದರ ಕೇಂದ್ರಬಿಂದುವಿನತ್ತ ಜಾಗತಿಕ ಗಮನ ಸೆಳೆಯಿತು; ರಾಜಕೀಯ ಪಕ್ಷಗಳ ಗಡಿಗಳನ್ನು ಮೀರಿ, ಭಾರತದಾದ್ಯಂತದ ಪ್ರತಿನಿಧಿಗಳು ಪಾಕಿಸ್ತಾನದ ಪಾತ್ರವನ್ನು ಬಹಿರಂಗಪಡಿಸಲು ಒಗ್ಗೂಡಿದರು: ಪ್ರಧಾನಮಂತ್ರಿ
Posted On:
21 JUL 2025 12:31PM by PIB Bengaluru
2025ರ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ ಆವರಣದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಮುಂಗಾರು ಅಧಿವೇಶನಕ್ಕೆ ಎಲ್ಲರನ್ನೂ ಸ್ವಾಗತಿಸಿದ ಪ್ರಧಾನಮಂತ್ರಿ, ಮುಂಗಾರು ನಾವೀನ್ಯತೆ ಮತ್ತು ನವೀಕರಣವನ್ನು ಸಂಕೇತಿಸುತ್ತದೆ ಎಂದು ಹೇಳಿದರು, ದೇಶಾದ್ಯಂತ ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿ ಮುಂದುವರಿಯುತ್ತಿವೆ, ಕೃಷಿಗೆ ಪ್ರಯೋಜನಕಾರಿ ಮುನ್ಸೂಚನೆಗಳನ್ನು ನೀಡುತ್ತಿವೆ ಎಂದು ಅವರು ಹೇಳಿದರು. ಮಳೆಯು ಗ್ರಾಮೀಣ ಆರ್ಥಿಕತೆ ಮತ್ತು ದೇಶದ ಒಟ್ಟಾರೆ ಆರ್ಥಿಕ ರಚನೆಯಲ್ಲಿ ಮಾತ್ರವಲ್ಲದೆ, ಪ್ರತಿಯೊಂದು ಕುಟುಂಬದ ಆರ್ಥಿಕ ಯೋಗಕ್ಷೇಮದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಪ್ರಸ್ತುತ ಮಾಹಿತಿಯ ಆಧಾರದ ಮೇಲೆ, ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಜಲಾಶಯಗಳ ಮಟ್ಟವು ಮೂರು ಪಟ್ಟು ಹೆಚ್ಚಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ಹೆಚ್ಚಳವು ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತದ ಧ್ವಜ ಹಾರಿಸಿದ ಐತಿಹಾಸಿಕ ಕ್ಷಣವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, "ಪ್ರಸ್ತುತ ಮುಂಗಾರು ಅಧಿವೇಶನವು ರಾಷ್ಟ್ರಕ್ಕೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ಇದು ಭಾರತದ ವಿಜಯೋತ್ಸವದ ಆಚರಣೆಯಾಗಿದೆ" ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಇದು ಅಪಾರ ಹೆಮ್ಮೆಯ ಮೂಲವಾಗಿದೆ ಎಂದು ಅವರು ಹೇಳಿದರು. ಈ ಸಾಧನೆಯು ದೇಶಾದ್ಯಂತ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಾಗಿ ಹೊಸ ಉತ್ಸಾಹ ಮತ್ತು ಹುರುಪನ್ನು ತುಂಬಿದೆ ಎಂದು ಅವರು ಒತ್ತಿ ಹೇಳಿದರು. ಈ ಸಾಧನೆಯ ಬಗ್ಗೆ ಇಡೀ ಸಂಸತ್ - ಲೋಕಸಭೆ ಮತ್ತು ರಾಜ್ಯಸಭೆ - ಹಾಗೂ ಭಾರತದ ಜನರು ಒಗ್ಗಟ್ಟಿನಿಂದ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಈ ಸಾಮೂಹಿಕ ಆಚರಣೆಯು ಭಾರತದ ಭವಿಷ್ಯದ ಬಾಹ್ಯಾಕಾಶ ಪರಿಶೋಧನಾ ಕಾರ್ಯಾಚರಣೆಗಳಿಗೆ ಸ್ಫೂರ್ತಿ ಮತ್ತು ಪ್ರೋತ್ಸಾಹವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಈ ಬಾರಿಯ ಮುಂಗಾರು ಅಧಿವೇಶನವನ್ನು ಭಾರತದ ವಿಜಯಗಳ ಆಚರಣೆ ಎಂದು ಬಣ್ಣಿಸಿದ ಶ್ರೀ ಮೋದಿ, ಭಾರತದ ಸಶಸ್ತ್ರ ಪಡೆಗಳ ಶಕ್ತಿ ಮತ್ತು ಸಾಮರ್ಥ್ಯವನ್ನು ಜಗತ್ತು ಕಂಡಿದೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿ, ಭಾರತೀಯ ಸೇನೆಯು ತನ್ನ ಗುರಿಗಳನ್ನು 100 ಪ್ರತಿಶತ ಯಶಸ್ಸಿನೊಂದಿಗೆ ಸಾಧಿಸಿದೆ ಎಂದು ಒತ್ತಿ ಹೇಳಿದರು. ಆಪರೇಷನ್ ಸಿಂಧೂರ್ ಅಡಿಯಲ್ಲಿ ಕೇವಲ 22 ನಿಮಿಷಗಳಲ್ಲಿ, ಭಾರತದ ಪಡೆಗಳು ಅಡಗುದಾಣಗಳಲ್ಲಿದ್ದ ಹೆಚ್ಚಿನ ಮೌಲ್ಯದ ಗುರಿಗಳನ್ನು ನಿರ್ಮೂಲನೆ ಮಾಡಿದವು ಎಂದು ಅವರು ಒತ್ತಿ ಹೇಳಿದರು. ಬಿಹಾರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ತಾವು ಈ ಕಾರ್ಯಾಚರಣೆಯನ್ನು ಘೋಷಿಸಿದ್ದಾಗಿ ಮತ್ತು ಸಶಸ್ತ್ರ ಪಡೆಗಳು ತಮ್ಮ ಸಾಮರ್ಥ್ಯವನ್ನು ತ್ವರಿತವಾಗಿ ಸಾಬೀತುಪಡಿಸಿದವು ಎಂದು ಅವರು ಹೇಳಿದರು. ಭಾರತದ "ಮೇಡ್ ಇನ್ ಇಂಡಿಯಾ" ರಕ್ಷಣಾ ಸಾಮರ್ಥ್ಯಗಳಲ್ಲಿ ಜಾಗತಿಕವಾಗಿ ಆಸಕ್ತಿ ಹೆಚ್ಚುತ್ತಿರುವುದನ್ನು ಶ್ರೀ ಮೋದಿ ಪ್ರಸ್ತಾಪಿಸಿ, ಇತ್ತೀಚಿನ ಅಂತರರಾಷ್ಟ್ರೀಯ ಸಂವಾದಗಳ ಸಮಯದಲ್ಲಿ, ವಿಶ್ವ ನಾಯಕರು ಭಾರತದ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮಿಲಿಟರಿ ಉಪಕರಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು. ಅಧಿವೇಶನದಲ್ಲಿ ಸಂಸತ್ ಈ ವಿಜಯವನ್ನು ಒಂದೇ ಧ್ವನಿಯಲ್ಲಿ ಆಚರಿಸಲು ಒಗ್ಗೂಡಿದಾಗ, ಅದು ಭಾರತದ ಮಿಲಿಟರಿ ಬಲವನ್ನು ಮತ್ತಷ್ಟು ಚೈತನ್ಯಗೊಳಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸಾಮೂಹಿಕ ಮನೋಭಾವವು ನಾಗರಿಕರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ರಕ್ಷಣಾ ವಲಯದ ಸಂಶೋಧನೆ, ನಾವೀನ್ಯತೆ ಮತ್ತು ಉತ್ಪಾದನೆಗೆ ವೇಗ ನೀಡುತ್ತದೆ ಮತ್ತು ಭಾರತದ ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಈ ದಶಕವು ಶಾಂತಿ ಮತ್ತು ಪ್ರಗತಿಯು ಪರಸ್ಪರ ಕೈಜೋಡಿಸಿ ಮುನ್ನಡೆಯುವುದನ್ನು ಪ್ರತಿಬಿಂಬಿಸುತ್ತದೆ, ಪ್ರತಿ ಹಂತದಲ್ಲೂ ನಿರಂತರ ಅಭಿವೃದ್ಧಿಯ ಮನೋಭಾವವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಾತಂತ್ರ್ಯದ ನಂತರವೂ ಮುಂದುವರಿದ ಭಯೋತ್ಪಾದನೆ ಅಥವಾ ನಕ್ಸಲಿಸಂ ನಂತಹ ವಿವಿಧ ಹಿಂಸಾತ್ಮಕ ಘಟನೆಗಳಿಂದ ರಾಷ್ಟ್ರವು ದೀರ್ಘಕಾಲದಿಂದ ಬಳಲಿತು ಎಂದು ಅವರು ಹೇಳಿದರು. ನಕ್ಸಲಿಸಂ ಮತ್ತು ಮಾವೋವಾದದ ಭೌಗೋಳಿಕ ಹರಡುವಿಕೆ ಈಗ ವೇಗವಾಗಿ ಕುಗ್ಗುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಭಾರತದ ಭದ್ರತಾ ಪಡೆಗಳು ಹೊಸ ವಿಶ್ವಾಸ ಮತ್ತು ವೇಗವರ್ಧಿತ ಪ್ರಯತ್ನಗಳೊಂದಿಗೆ ನಕ್ಸಲಿಸಂ ಮತ್ತು ಮಾವೋವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯತ್ತ ಸ್ಥಿರವಾಗಿ ಸಾಗುತ್ತಿವೆ ಎಂದು ಹೇಳಿದರು. ನಕ್ಸಲ್ ಹಿಂಸಾಚಾರದ ಹಿಡಿತದಿಂದ ಮುಕ್ತವಾದ ನಂತರ ದೇಶಾದ್ಯಂತ ನೂರಾರು ಜಿಲ್ಲೆಗಳು ಈಗ ಮುಕ್ತವಾಗಿ ಉಸಿರಾಡುತ್ತಿವೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಭಾರತದ ಸಂವಿಧಾನವು ಶಸ್ತ್ರಾಸ್ತ್ರ ಮತ್ತು ಹಿಂಸಾಚಾರದ ವಿರುದ್ಧ ಜಯಗಳಿಸುತ್ತಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಹಿಂದಿನ 'ರೆಡ್ ಕಾರಿಡಾರ್' ಪ್ರದೇಶಗಳು ಈಗ ಸ್ಪಷ್ಟವಾಗಿ 'ಹಸಿರು ಅಭಿವೃದ್ಧಿ ವಲಯ'ಗಳಾಗಿ ಬದಲಾಗುತ್ತಿವೆ, ಇದು ದೇಶದ ಉಜ್ವಲ ಭವಿಷ್ಯದ ಸಂಕೇತವಾಗಿದೆ ಎಂದು ಅವರು ಹೇಳಿದರು.
ಈ ಪ್ರತಿಯೊಂದು ಕಾರ್ಯಕ್ರಮವು ಪ್ರತಿಯೊಬ್ಬ ಗೌರವಾನ್ವಿತ ಸಂಸದರಿಗೂ ದೇಶಭಕ್ತಿ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಸಮರ್ಪಣೆಯಿಂದ ಪ್ರೇರಿತವಾದ ಹೆಮ್ಮೆಯ ಕ್ಷಣಗಳನ್ನು ಪ್ರತಿನಿಧಿಸುತ್ತದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸಂಸತ್ತಿನ ಈ ಮುಂಗಾರು ಅಧಿವೇಶನದಲ್ಲಿ, ಪ್ರತಿಯೊಬ್ಬ ಸಂಸದರು ಮತ್ತು ಪ್ರತಿಯೊಂದು ರಾಜಕೀಯ ಪಕ್ಷವು ಧ್ವನಿಯಾದ ರಾಷ್ಟ್ರೀಯ ಹೆಮ್ಮೆಯ ಆಚರಣೆಯನ್ನು ಇಡೀ ದೇಶವು ಕೇಳುತ್ತದೆ ಎಂದು ಒತ್ತಿ ಹೇಳಿದರು.
2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ, ಭಾರತವು ಐದು ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿತ್ತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆ ಸಮಯದಲ್ಲಿ ಭಾರತ ಜಾಗತಿಕ ಆರ್ಥಿಕ ಶ್ರೇಯಾಂಕದಲ್ಲಿ ಹತ್ತನೇ ಸ್ಥಾನದಲ್ಲಿತ್ತು, ಆದರೆ ಇಂದು ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ ಮತ್ತು ಆ ಮೈಲಿಗಲ್ಲಿನ ಬಾಗಿಲನ್ನು ತಟ್ಟುತ್ತಿದೆ ಎಂದು ಅವರು ಹೇಳಿದರು. 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಈ ಬದಲಾವಣೆಯನ್ನು ಜಾಗತಿಕ ಸಂಸ್ಥೆಗಳು ವ್ಯಾಪಕವಾಗಿ ಗುರುತಿಸಿವೆ ಮತ್ತು ಶ್ಲಾಘಿಸಿವೆ ಎಂದು ಅವರು ಹೇಳಿದರು. 2014 ಕ್ಕಿಂತ ಮೊದಲು ಭಾರತವು ಎರಡಂಕಿಯ ಹಣದುಬ್ಬರದೊಂದಿಗೆ ಹೋರಾಡುತ್ತಿತ್ತು ಎಂದು ಶ್ರೀ ಮೋದಿ ಹೇಳಿದರು. "ಇಂದು, ಹಣದುಬ್ಬರ ದರಗಳು ಶೇ.2 ರ ಆಸುಪಾಸಿನಲ್ಲಿದ್ದು, ನಾಗರಿಕರು ನೆಮ್ಮದಿಯ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಮಾಡುತ್ತಿದ್ದಾರೆ. ಕಡಿಮೆ ಹಣದುಬ್ಬರ ಮತ್ತು ಹೆಚ್ಚಿನ ಬೆಳವಣಿಗೆಯ ದರಗಳು ಬಲವಾದ ಮತ್ತು ಸ್ಥಿರವಾದ ಅಭಿವೃದ್ಧಿ ಪ್ರಯಾಣವನ್ನು ಪ್ರತಿಬಿಂಬಿಸುತ್ತವೆ" ಎಂದು ಶ್ರೀ ಮೋದಿ ಹೇಳಿದರು.
"ಡಿಜಿಟಲ್ ಇಂಡಿಯಾ ಮತ್ತು ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ನಂತಹ ಉಪಕ್ರಮಗಳು ಭಾರತದ ಉದಯೋನ್ಮುಖ ಸಾಮರ್ಥ್ಯಗಳನ್ನು ಜಗತ್ತಿಗೆ ಪ್ರದರ್ಶಿಸುತ್ತಿವೆ, ಜಾಗತಿಕ ಮನ್ನಣೆ ಮತ್ತು ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಆಸಕ್ತಿ ವೇಗವಾಗಿ ಹೆಚ್ಚುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಫಿನ್ ಟೆಕ್ ಕ್ಷೇತ್ರದಲ್ಲಿ ಯುಪಿಐ ಬಲವಾದ ಅಸ್ತಿತ್ವವನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು. ಭಾರತವು ನೈಜ-ಸಮಯದ ಡಿಜಿಟಲ್ ವಹಿವಾಟುಗಳಲ್ಲಿ ಜಗತ್ತನ್ನು ಮುನ್ನಡೆಸುತ್ತಿದೆ, ಜಾಗತಿಕವಾಗಿ ಯಾವುದೇ ಇತರ ದೇಶಗಳಿಗಿಂತ ಹೆಚ್ಚು ವಹಿವಾಟುಗಳನ್ನು ನಡೆಸುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಇತ್ತೀಚಿನ ಅಂತರರಾಷ್ಟ್ರೀಯ ಸಂಸ್ಥೆಗಳ ಜಾಗತಿಕ ಶೃಂಗಸಭೆಯಲ್ಲಿ ಭಾರತದ ಪ್ರಮುಖ ಸಾಧನೆಗಳನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಭಾರತದಲ್ಲಿ 90 ಕೋಟಿಗೂ ಹೆಚ್ಚು ಜನರು ಈಗ ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ, ಇದು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯಾಗಿದೆ ಎಂಬ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ ಎಲ್ ಒ)ಯ ವರದಿಯನ್ನು ಉಲ್ಲೇಖಿಸಿದರು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಣ್ಣಿನ ಕಾಯಿಲೆಯಾದ ಟ್ರಾಕೋಮಾದಿಂದ ಭಾರತವು ಮುಕ್ತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಘೋಷಿಸಿರುವುದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈ ಗುರುತಿಸುವಿಕೆಯು ಭಾರತದ ಸಾರ್ವಜನಿಕ ಆರೋಗ್ಯ ಪ್ರಯತ್ನಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಅವರು ಒತ್ತಿ ಹೇಳಿದರು.
ಪಹಲ್ಗಾಮ್ ನಲ್ಲಿ ನಡೆದ ಕ್ರೂರ ಹತ್ಯೆಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಭಯೋತ್ಪಾದನೆ ಮತ್ತು ಅದರ ಪ್ರಾಯೋಜಕರ ಬಗ್ಗೆ ಜಾಗತಿಕ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬಹುತೇಕ ರಾಜಕೀಯ ಪಕ್ಷಗಳು ಮತ್ತು ರಾಜ್ಯಗಳ ಪ್ರತಿನಿಧಿಗಳು ಪಕ್ಷಗಳ ಹಿತಾಸಕ್ತಿಗಳನ್ನು ಮೀರಿ ರಾಷ್ಟ್ರದ ಸೇವೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರಮಿಸಿದರು ಎಂದು ಹೇಳಿದರು. ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಭಯೋತ್ಪಾದನೆಯ ಪ್ರಾಯೋಜಕತ್ವವನ್ನು ಬಹಿರಂಗಪಡಿಸಿದ ಈ ಸಮಗ್ರ ರಾಜತಾಂತ್ರಿಕ ಅಭಿಯಾನದ ಯಶಸ್ಸನ್ನು ಅವರು ಒತ್ತಿ ಹೇಳಿದರು. ಈ ಮಹತ್ವದ ರಾಷ್ಟ್ರೀಯ ಉಪಕ್ರಮವನ್ನು ಕೈಗೊಂಡ ಸಂಸದರು ಮತ್ತು ರಾಜಕೀಯ ಪಕ್ಷಗಳಿಗೆ ಶ್ರೀ ಮೋದಿ ತಮ್ಮ ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು. ಅವರ ಪ್ರಯತ್ನಗಳು ದೇಶದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿವೆ ಮತ್ತು ಭಯೋತ್ಪಾದನೆಯ ಬಗ್ಗೆ ಭಾರತದ ದೃಷ್ಟಿಕೋನಕ್ಕೆ ಅಂತರರಾಷ್ಟ್ರೀಯ ಸಮುದಾಯದ ಮನಸ್ಸನ್ನು ತೆರೆದಿವೆ ಎಂದು ಅವರು ಹೇಳಿದರು, ರಾಷ್ಟ್ರೀಯ ಹಿತಾಸಕ್ತಿಗೆ ಈ ಮಹತ್ವದ ಕೊಡುಗೆ ನೀಡಿದ್ದಕ್ಕಾಗಿ ಭಾಗಿಯಾಗಿರುವ ಎಲ್ಲರನ್ನೂ ಶ್ಲಾಘಿಸುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.
ರಾಷ್ಟ್ರಕ್ಕೆ ಸ್ಫೂರ್ತಿ ಮತ್ತು ಚೈತನ್ಯ ತುಂಬುವ ಏಕತೆಯ ಶಕ್ತಿ ಮತ್ತು ಒಂದೇ ಧ್ವನಿಯ ಮನೋಭಾವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಪ್ರಸ್ತುತ ಮುಂಗಾರು ಅಧಿವೇಶನವು ವಿಜಯೋತ್ಸವದ ರೂಪದಲ್ಲಿ ಈ ಮನೋಭಾವವನ್ನು ಪ್ರತಿಬಿಂಬಿಸುತ್ತದೆ, ಭಾರತದ ಮಿಲಿಟರಿ ಶಕ್ತಿ ಮತ್ತು ರಾಷ್ಟ್ರೀಯ ಸಾಮರ್ಥ್ಯವನ್ನು ಗೌರವಿಸುತ್ತದೆ ಮತ್ತು 140 ಕೋಟಿ ನಾಗರಿಕರಿಗೆ ಸ್ಫೂರ್ತಿಯ ಮೂಲವಾಗುತ್ತದೆ ಎಂದು ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯ ಹಾದಿಯನ್ನು ಸಾಮೂಹಿಕ ಪ್ರಯತ್ನಗಳು ಮತ್ತಷ್ಟು ಬಲಪಡಿಸುತ್ತವೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಸಶಸ್ತ್ರ ಪಡೆಗಳ ಶಕ್ತಿಯನ್ನು ಗುರುತಿಸಿ ಪ್ರಶಂಸಿಸುವಂತೆ ಅವರು ರಾಷ್ಟ್ರವನ್ನು ಒತ್ತಾಯಿಸಿದರು. ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಏಕತೆಯಿಂದ ಬರುವ ಶಕ್ತಿ ಮತ್ತು ಒಂದೇ ಧ್ವನಿಯಲ್ಲಿ ಮಾತನಾಡುವುದರಿಂದ ಉಂಟಾಗುವ ಪರಿಣಾಮವನ್ನು ಎತ್ತಿ ತೋರಿಸಿದರು. ಸಂಸತ್ತಿನಲ್ಲಿ ಈ ಭಾವನೆಯನ್ನು ಮುಂದುವರಿಸುವಂತೆ ಅವರು ಎಲ್ಲಾ ಸಂಸದರಿಗೆ ಕರೆ ನೀಡಿದರು. ರಾಜಕೀಯ ಪಕ್ಷಗಳ ವೈವಿಧ್ಯತೆ ಮತ್ತು ಅವುಗಳ ಕಾರ್ಯಸೂಚಿಗಳನ್ನು ಶ್ಲಾಘಿಸಿದ ಶ್ರೀ ಮೋದಿ, ಪಕ್ಷದ ಹಿತಾಸಕ್ತಿಗಳ ಬಗ್ಗೆ ಅಭಿಪ್ರಾಯಗಳು ಭಿನ್ನವಾಗಿರಬಹುದು, ಆದರೆ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಸಾಮರಸ್ಯವಿರಬೇಕು ಎಂದು ಹೇಳಿದರು. ಈ ಅಧಿವೇಶನವು ರಾಷ್ಟ್ರದ ಅಭಿವೃದ್ಧಿಯನ್ನು ವೇಗಗೊಳಿಸುವ, ನಾಗರಿಕರನ್ನು ಸಬಲೀಕರಣಗೊಳಿಸುವ ಮತ್ತು ಭಾರತದ ಪ್ರಗತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಹಲವಾರು ಪ್ರಸ್ತಾವಿತ ಮಸೂದೆಗಳನ್ನು ಒಳಗೊಂಡಿರುತ್ತದೆ ಎಂದು ಪುನರುಚ್ಚರಿಸುವ ಮೂಲಕ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು. ಫಲಪ್ರದ ಮತ್ತು ಉತ್ತಮ ಗುಣಮಟ್ಟದ ಚರ್ಚೆಗಳಿಗಾಗಿ ಅವರು ಎಲ್ಲಾ ಸಂಸದರಿಗೆ ಶುಭ ಹಾರೈಸಿದರು.
*****
(Release ID: 2146335)
Read this release in:
Odia
,
Malayalam
,
Manipuri
,
Assamese
,
Bengali
,
English
,
Urdu
,
Hindi
,
Marathi
,
Bengali-TR
,
Punjabi
,
Gujarati
,
Tamil
,
Telugu