ಪ್ರಧಾನ ಮಂತ್ರಿಯವರ ಕಛೇರಿ
'ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೊ' ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಭಾಷಣ
Posted On:
04 JUL 2025 10:45PM by PIB Bengaluru
ನಮಸ್ಕಾರ,
ಎಲ್ಲರಿಗೂ ಶುಭೋದಯ,
ಅಧ್ಯಕ್ಷ ಕ್ರಿಸ್ಟೀನ್ ಕಂಗಾಲೂ ಜಿ,
ಪ್ರಧಾನಿ ಕಮಲಾ ಪೆರ್ಸಾದ್ -ಬಿಸ್ಸೆಸ್ಸರ್ ಜಿ,
ಗೌರವಾನ್ವಿತ ಅತಿಥಿಗಳೇ,
ನನಗೆ ನಿಮ್ಮ ಅತ್ಯುನ್ನತ ರಾಷ್ಟ್ರೀಯ ಗೌರವವಾದ 'ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೊ' ನೀಡಿದ್ದಕ್ಕಾಗಿ ನಾನು ನಿಮಗೆ, ನಿಮ್ಮ ಸರ್ಕಾರಕ್ಕೆ ಹಾಗು ನಿಮ್ಮ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಈ ಗೌರವವು ನಮ್ಮ ಎರಡೂ ದೇಶಗಳ ನಡುವಿನ ಶಾಶ್ವತ ಮತ್ತು ಆಳವಾದ ಸ್ನೇಹದ ಸಂಕೇತವಾಗಿದೆ. 140 ಕೋಟಿ ಭಾರತೀಯರ ಪರವಾಗಿ ಈ ಗೌರವವನ್ನು ನಾನು ಹಂಚಿಕೊಂಡ ಹೆಮ್ಮೆ ಎಂದು ಸ್ವೀಕರಿಸುತ್ತೇನೆ.
ಸ್ನೇಹಿತರೇ,
ಮೊದಲ ಬಾರಿಗೆ ವಿದೇಶಿ ನಾಯಕನಿಗೆ ಈ ಗೌರವವನ್ನು ನೀಡುತ್ತಿರುವುದು ನಮ್ಮ ವಿಶೇಷ ಸಂಬಂಧಗಳ ಆಳವನ್ನು ಪ್ರತಿಬಿಂಬಿಸುತ್ತದೆ. ಈ ಸಂಬಂಧವು ನಮ್ಮ ಹಂಚಿಕೊಂಡ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಆಧರಿಸಿದೆ.
ನೂರ ಎಂಬತ್ತು ವರ್ಷಗಳ ಹಿಂದೆ, ಭಾರತದಿಂದ ಇಲ್ಲಿಗೆ ಬಂದವರು ನಮ್ಮ ಸ್ನೇಹದ ಅಡಿಪಾಯವನ್ನು ಹಾಕಿದರು. ಅವರು ಬರಿಗೈಯಲ್ಲಿ ಬಂದಿದ್ದರೂ , ಅವರ ಮನಸ್ಸುಗಳು ಭಾರತೀಯ ನಾಗರಿಕತೆ, ಸಂಸ್ಕೃತಿ ಮತ್ತು ವೈವಿಧ್ಯತೆಯಿಂದ ಸಮೃದ್ಧವಾಗಿದ್ದವು. ಅವರು ಬಿತ್ತಿದ ಪರಸ್ಪರ ಸಾಮರಸ್ಯ ಮತ್ತು ಸದ್ಭಾವನೆಯ ಬೀಜಗಳು ಇಂದು ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಗತಿ ಮತ್ತು ಸಮೃದ್ಧಿಯ ರೂಪದಲ್ಲಿ ಸಾಕಾರಗೊಳ್ಳುತ್ತಿವೆ.
ನಮ್ಮ ಹಂಚಿಕೆಯ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಪದ್ಧತಿಗಳನ್ನು ಭಾರತೀಯ ಸಮುದಾಯವು ಇನ್ನೂ ಸಂರಕ್ಷಿಸುತ್ತಿದೆ ಎಂಬುದು ಬಹಳ ಹೆಮ್ಮೆಯ ವಿಷಯ. ಅಧ್ಯಕ್ಷ ಕಂಗಾಲೂ ಜಿ ಮತ್ತು ಪ್ರಧಾನಿ ಕಮಲಾ ಜಿ ಈ ಸಮುದಾಯದ ಅತಿದೊಡ್ಡ ಬ್ರಾಂಡ್ ಅಂಬಾಸಡರ್ ಗಳು. ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಸಾಮರಸ್ಯವು ಪ್ರತಿ ಹಂತದಲ್ಲೂ ಗೋಚರಿಸುತ್ತದೆ.
ಸ್ನೇಹಿತರೇ,
ಅಧ್ಯಕ್ಷ ಕಂಗಾಲೂ ಅವರ ಪೂರ್ವಜರು ಸಂತ ತಿರುವಳ್ಳುವರ್ ಅವರ ನಾಡು ತಮಿಳುನಾಡಿನವರು. ಸಾವಿರಾರು ವರ್ಷಗಳ ಹಿಂದೆ, ಸಂತ ತಿರುವಳ್ಳುವರ್ ಹೀಗೆ ಹೇಳಿದ್ದರು-
ಪಡೈ ಕುಡಿ ಕೂಲ್ ಅಮಾಯಿಚು ನಟಪರನ್ ಆರುಮ್
ಉಡೈಯಾನ್ ಅರಸರುಳ್ ಎರು
ಅಂದರೆ, ಬಲಿಷ್ಠ ದೇಶಗಳು ಆರು ವಿಷಯಗಳನ್ನು ಹೊಂದಿರಬೇಕು. ವೀರ ಸೈನ್ಯ, ದೇಶಭಕ್ತ ನಾಗರಿಕರು, ಸಂಪನ್ಮೂಲಗಳು, ಉತ್ತಮ ಪ್ರತಿನಿಧಿಗಳು, ಬಲವಾದ ರಕ್ಷಣೆ... ಮತ್ತು ಯಾವಾಗಲೂ ಒಟ್ಟಿಗೆ ನಿಲ್ಲುವ ಸ್ನೇಹಪರ ದೇಶಗಳು. ಟ್ರಿನಿಡಾಡ್ ಮತ್ತು ಟೊಬಾಗೋ ಭಾರತಕ್ಕೆ ಅಂತಹ ಸ್ನೇಹಪರ ದೇಶವಾಗಿದೆ.
ನಮ್ಮ ಸಂಬಂಧಗಳಲ್ಲಿ ಕ್ರಿಕೆಟಿನ ರೋಮಾಂಚನ ಮತ್ತು ಟ್ರಿನಿಡಾಡ್ ಮೆಣಸಿನಕಾಯಿಯ ಮಸಾಲೆ ತಡ್ಕಾ ಇವೆ. "ಕ್ಯಾಲಿಪ್ಸೊ" ದ ಲಯವು ತಬಲಾದ ತಾಳದೊಂದಿಗೆ ಸೇರಿದಾಗ, ನಮ್ಮ ಸಂಬಂಧಗಳು ಇನ್ನಷ್ಟು ಮಧುರವಾಗುತ್ತವೆ. ಎರಡು ಸಂಸ್ಕೃತಿಗಳ ನಡುವಿನ ಆಳವಾದ ಸಾಮರಸ್ಯವು ನಮ್ಮ ಸಂಬಂಧಗಳ ದೊಡ್ಡ ಶಕ್ತಿಯಾಗಿದೆ.
ಸ್ನೇಹಿತರೇ,
ಈ ಗೌರವವನ್ನು ನಮ್ಮ ಸಂಬಂಧಗಳಿಗೆ ಒಂದು ಜವಾಬ್ದಾರಿಯಾಗಿಯೂ ನಾನು ನೋಡುತ್ತೇನೆ. ನಿಕಟ ಮತ್ತು ವಿಶ್ವಾಸಾರ್ಹ ಪಾಲುದಾರರಾಗಿ, ನಾವು ಯಾವಾಗಲೂ ಟ್ರಿನಿಡಾಡ್ ಮತ್ತು ಟೊಬಾಗೋ ಜನರ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಿದ್ದೇವೆ. ಕ್ಯಾರಿ-ಕಾಮ್ (CARI-COM) ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಟ್ರಿನಿಡಾಡ್ ಮತ್ತು ಟೊಬಾಗೋ ಭಾರತಕ್ಕೆ ಪ್ರಮುಖ ಪಾಲುದಾರ ದೇಶವಾಗಿದೆ.
ನಮ್ಮ ಸಹಕಾರವು ಇಡೀ ಜಾಗತಿಕ ದಕ್ಷಿಣಕ್ಕೆ ಬಹು ಮುಖ್ಯವಾಗಿದೆ. ಎರಡು ಚೈತನ್ಯಶೀಲ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ನಾವು ಎರಡೂ ದೇಶಗಳ ಜನರ ಒಳಿತಿಗಾಗಿ ಮತ್ತು ಇಡೀ ಮಾನವೀಯತೆಗಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.
ಘನತೆವೆತ್ತ ಅಧ್ಯಕ್ಷರೇ,
ಮತ್ತೊಮ್ಮೆ, 140 ಕೋಟಿ ಭಾರತೀಯರ ಪರವಾಗಿ, ಈ ಗೌರವಕ್ಕಾಗಿ ನಾನು ನನ್ನ ಮನದಾಳದಿಂದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಗೌರವವು ಪ್ರತಿಯೊಂದು ಕ್ಷೇತ್ರದಲ್ಲೂ ಹೆಚ್ಚಿನ ಎತ್ತರವನ್ನು ಸಾಧಿಸಲು ನಮಗೆ ಸ್ಫೂರ್ತಿ ನೀಡುವುದನ್ನು ಮುಂದುವರೆಸುತ್ತದೆ.
ತುಂಬಾ ಧನ್ಯವಾದಗಳು.
ಸೂಚನೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಯಿತು.
*****
(Release ID: 2142880)
Read this release in:
Punjabi
,
Urdu
,
Bengali
,
Assamese
,
Telugu
,
Malayalam
,
English
,
Hindi
,
Gujarati
,
Odia
,
Tamil