ಗೃಹ ವ್ಯವಹಾರಗಳ ಸಚಿವಾಲಯ
ದೇಶದಲ್ಲಿ ಪ್ರವಾಹ ನಿರ್ವಹಣೆಯ ಸನ್ನದ್ಧತೆಯನ್ನು ಪರಿಶೀಲಿಸಲು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಇಂದು ನವದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು
2014ರಲ್ಲಿ, ಭಾರತ ಹವಾಮಾನಶಾಸ್ತ್ರ ಕ್ಷೇತ್ರದಲ್ಲಿ ಬಹಳ ಹಿಂದುಳಿದಿತ್ತು, ಆದರೆ ಇಂದು ಮೋದಿ ಅವರ ನೇತೃತ್ವದಲ್ಲಿ ನಾವು ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿದ್ದೇವೆ, ಈಗ ನಾವು ನಂ. 1 ಆಗಬೇಕು
ಕೇಂದ್ರ ಸಂಸ್ಥೆಗಳು ಪ್ರವಾಹ ನಿಯಂತ್ರಣ ಮತ್ತು ನೀರು ನಿರ್ವಹಣೆಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು
ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಬಲವಾದ ಪ್ರವಾಹ ನಿರ್ವಹಣಾ ಕ್ರಮಗಳಿಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಆಯ್ಕೆಗಳನ್ನು ಅನ್ವೇಷಿಸಬೇಕು
ಭಾರೀ ಮಳೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ನಿಭಾಯಿಸಲು ಹೆದ್ದಾರಿಗಳಲ್ಲಿ ಏಕರೂಪದ ವಿನ್ಯಾಸ ಬದಲಾವಣೆಗಳನ್ನು ಖಚಿತಪಡಿಸಿಕೊಳ್ಳಲು ಎನ್ ಎಚ್ ಎ ಐ ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು
ಎನ್ ಡಿ ಎಸ್ ಎ, ಐ ಎಂ ಡಿ ಮತ್ತು ಎನ್ ಆರ್ ಎಸ್ ಸಿ ಯಂತಹ ಇಲಾಖೆಗಳು ಜಂಟಿಯಾಗಿ ಸಮ್ಮೇಳನವನ್ನು ಆಯೋಜಿಸಬೇಕು. ಇದರಲ್ಲಿ ಭಾರತ ಮೂಲದ ತಜ್ಞರು ಪ್ರವಾಹ, ಬಾಹ್ಯಾಕಾಶ ಮತ್ತು ಇತರ ಅಂಶಗಳನ್ನು ಚರ್ಚಿಸಬಹುದು
Posted On:
10 JUN 2025 8:17PM by PIB Bengaluru
ದೇಶದಲ್ಲಿ ಪ್ರವಾಹ ನಿರ್ವಹಣೆಯ ಸನ್ನದ್ಧತೆಯನ್ನು ಪರಿಶೀಲಿಸಲು ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವಹಿಸಿದ್ದರು. ದೇಶದಲ್ಲಿ ಪ್ರವಾಹದ ಭೀತಿಯನ್ನು ತಗ್ಗಿಸಲು ತೆಗೆದುಕೊಳ್ಳುತ್ತಿರುವ ದೀರ್ಘಕಾಲೀನ ಕ್ರಮಗಳು ಮತ್ತು ಕಳೆದ ವರ್ಷ ನಡೆದ ಸಭೆಯ ನಿರ್ಧಾರಗಳ ಮೇಲೆ ತೆಗೆದುಕೊಂಡ ಕ್ರಮಗಳನ್ನು ಕೇಂದ್ರ ಗೃಹ ಸಚಿವರು ಪರಿಶೀಲಿಸಿದರು.

ಸಭೆಯಲ್ಲಿ ಪ್ರವಾಹ ನಿರ್ವಹಣೆ ಮತ್ತು ಅವುಗಳ ಜಾಲ ವಿಸ್ತರಣೆಗಾಗಿ ಎಲ್ಲಾ ಸಂಸ್ಥೆಗಳು ಅಳವಡಿಸಿಕೊಂಡ ಹೊಸ ತಂತ್ರಜ್ಞಾನಗಳ ಬಗ್ಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಚರ್ಚಿಸಿದರು. ಪ್ರವಾಹ ನಿಯಂತ್ರಣ ಮತ್ತು ನೀರಿನ ನಿರ್ವಹಣೆಗಾಗಿ ವಿವಿಧ ಕೇಂದ್ರ ಸಂಸ್ಥೆಗಳು ಬಾಹ್ಯಾಕಾಶ ತಂತ್ರಜ್ಞಾನವನ್ನು ಗರಿಷ್ಠವಾಗಿ ಬಳಸಬೇಕು ಎಂದು ಅವರು ಒತ್ತಿ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ವಿಪತ್ತು ನಿರ್ವಹಣೆ 'ಶೂನ್ಯ ಅಪಘಾತ ವಿಧಾನ'ದೊಂದಿಗೆ ಮುಂದುವರಿಯುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್ ಡಿ ಎಂ ಎ) ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು (ಎಸ್ ಡಿ ಎಂ ಎ) ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳೊಂದಿಗೆ (ಡಿಡಿಎಂಎ) ಸಮನ್ವಯ ಸಾಧಿಸುವಂತೆ ಅವರು ನಿರ್ದೇಶನ ನೀಡಿದರು ಮತ್ತು ಪ್ರವಾಹ ನಿರ್ವಹಣೆಗಾಗಿ ಎನ್ ಡಿ ಎಂ ಎ ಹೊರಡಿಸಿದ ಸಲಹೆಗಳನ್ನು ಸಕಾಲಿಕವಾಗಿ ಅನುಷ್ಠಾನಗೊಳಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದರು. ರಾಜ್ಯಗಳೊಂದಿಗೆ ಸಂಪೂರ್ಣ ಸಮನ್ವಯದೊಂದಿಗೆ ಪ್ರವಾಹ ನಿರ್ವಹಣೆಯತ್ತ ಕೆಲಸ ಮಾಡುವಂತೆ ಅವರು ಎನ್ ಡಿ ಎಂ ಎ ಮತ್ತು ಎನ್ ಡಿ ಆರ್ ಎಫ್ ಗಳಿಗೆ ಕರೆ ನೀಡಿದರು.

ಪ್ರವಾಹ ಮುನ್ಸೂಚನೆ/ಸಲಹೆಗಳನ್ನು ನೀಡುವ ಸಮಯವನ್ನು ಹೆಚ್ಚಿಸಿದ್ದಕ್ಕಾಗಿ ಕೇಂದ್ರ ಜಲ ಆಯೋಗ ಮತ್ತು ಭಾರತೀಯ ಹವಾಮಾನ ಇಲಾಖೆಯನ್ನು ಕೇಂದ್ರ ಗೃಹ ಸಚಿವರು ಶ್ಲಾಘಿಸಿದರು ಮತ್ತು ಮುನ್ಸೂಚನೆಗಳ ನಿಖರತೆಯ ಮಟ್ಟವನ್ನು ಹೆಚ್ಚಿಸುವ ಬಗ್ಗೆ ಒತ್ತಿ ಹೇಳಿದರು. ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಪ್ರವಾಹ ಮೇಲ್ವಿಚಾರಣಾ ಕೇಂದ್ರಗಳು ನಮ್ಮ ಅವಶ್ಯಕತೆಗಳು ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ಅವರು ಹೇಳಿದರು. ಹಿಮನದಿ ಸರೋವರಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಸ್ಫೋಟದ ಸಂದರ್ಭದಲ್ಲಿ ಸಕಾಲಿಕ ಕ್ರಮ ಕೈಗೊಳ್ಳಲು ಜಲಶಕ್ತಿ ಸಚಿವಾಲಯ, ಎನ್ ಡಿ ಎಂ ಎ ಮತ್ತು ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್ ಆರ್ ಎಸ್ ಸಿ) ಕ್ಕೆ ಶ್ರೀ ಶಾ ಸಲಹೆ ನೀಡಿದರು.
ಭಾರೀ ಮಳೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ನಿಭಾಯಿಸಲು ಹೆದ್ದಾರಿಗಳ ಒಳಚರಂಡಿ ವ್ಯವಸ್ಥೆಯು ರಸ್ತೆ ವಿನ್ಯಾಸದ ಅವಿಭಾಜ್ಯ ಅಂಗವಾಗುವಂತೆ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿ ಏಕರೂಪದ ವಿನ್ಯಾಸ ಬದಲಾವಣೆಗಳನ್ನು ಖಚಿತಪಡಿಸಿಕೊಳ್ಳಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ/ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಇದರ ಹೊರತಾಗಿ, ಪ್ರವಾಹ ಸಿದ್ಧತೆ ಮತ್ತು ಪ್ರವಾಹ ತಗ್ಗಿಸುವಿಕೆಗಾಗಿ ಕೇಂದ್ರ ಸಂಸ್ಥೆಗಳು ಮತ್ತು ರಾಜ್ಯಗಳ ನಡುವಿನ ಸಮನ್ವಯಕ್ಕಾಗಿ ಎನ್ ಡಿ ಎಂ ಎ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಅವರು ಹೇಳಿದರು.
ನರ್ಮದಾ ನದಿ ಜಲಾನಯನ ಪ್ರದೇಶದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಅಗತ್ಯವನ್ನು ಗೃಹ ಸಚಿವ ಶ್ರೀ ಅಮಿತ್ ಶಾ ಒತ್ತಿ ಹೇಳಿದರು, ಈ ಪ್ರಯೋಗ ಯಶಸ್ವಿಯಾದರೆ, ಇತರ ನದಿಗಳ ಪ್ರದೇಶಗಳಲ್ಲೂ ಇದೇ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು. ಇದು ನದಿ ಜಲಾನಯನ ಪ್ರದೇಶವನ್ನು ಪುನರುಜ್ಜೀವನಗೊಳಿಸಲು, ಮಣ್ಣಿನ ಸವೆತವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಕಡಿಮೆ ಮಳೆಯ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಪ್ರವಾಹ ನಿರ್ವಹಣೆಯ ದೃಢವಾದ ಕ್ರಮಗಳಿಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಆಯ್ಕೆಗಳನ್ನು ಅನ್ವೇಷಿಸಬೇಕು ಎಂದು ಅವರು ಹೇಳಿದರು.
ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಪ್ರವಾಹದ ಘಟನೆಗಳನ್ನು ಉಲ್ಲೇಖಿಸಿದ ಗೃಹ ಸಚಿವರು, ಈ ನಗರಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ, ಸಕಾಲಿಕ ಕ್ರಮ ಕೈಗೊಳ್ಳುವಂತೆ ಮತ್ತು ದೊಡ್ಡ ನಗರಗಳಲ್ಲಿ ಪ್ರವಾಹ ನಿರ್ವಹಣೆಗೆ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವಂತೆ ಎಲ್ಲಾ ಕೇಂದ್ರ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು. ಮಳೆಗಾಲದಲ್ಲಿ ಕಡಿಮೆ ಅವಧಿಯಲ್ಲಿ ಭಾರೀ ಮಳೆಯಾಗುವ ಪ್ರವೃತ್ತಿಯನ್ನು ಎದುರಿಸಲು ಜೌಗು ಪ್ರದೇಶ ಪುನರುಜ್ಜೀವನ ಮತ್ತು ಅರಣ್ಯೀಕರಣ ಕ್ರಮಗಳ ಮಹತ್ವವನ್ನು ಶ್ರೀ ಶಾ ಎತ್ತಿ ತೋರಿಸಿದರು. ಬ್ರಹ್ಮಪುತ್ರ ಜಲಾನಯನ ಪ್ರದೇಶದಲ್ಲಿನ ಜೌಗು ಪ್ರದೇಶಗಳ ಸ್ಥಿತಿಯನ್ನು ಸುಧಾರಿಸುವತ್ತ ಕೆಲಸ ಮಾಡುವಂತೆ ಅವರು ಜಲಶಕ್ತಿ ಸಚಿವಾಲಯಕ್ಕೆ ಸಲಹೆ ನೀಡಿದರು, ಇದು ಪ್ರವಾಹ ತಡೆಗಟ್ಟುವಿಕೆ ಹಾಗೂ ಆರ್ಥಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮುಖ್ಯವಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ (ಎನ್ ಡಿ ಎಸ್ ಎ), ಐಎಂಡಿ ಮತ್ತು ಎನ್ ಆರ್ ಎಸ್ ಸಿ ಸೇರಿದಂತೆ ಇತರ ಇಲಾಖೆಗಳು ಜಂಟಿಯಾಗಿ ಇಂತಹ ಸಮ್ಮೇಳನವನ್ನು ಆಯೋಜಿಸಬೇಕು ಎಂದು ಶ್ರೀ ಅಮಿತ್ ಶಾ ಸಲಹೆ ನೀಡಿದರು, ಇದರಲ್ಲಿ ಪ್ರವಾಹ, ಬಾಹ್ಯಾಕಾಶ ಮತ್ತು ಇತರ ಅಂಶಗಳನ್ನು ಚರ್ಚಿಸಲು ತಜ್ಞರನ್ನು ಆಹ್ವಾನಿಸಬಹುದು ಎಂದರು. 2014 ರಲ್ಲಿ ಭಾರತವು ಹವಾಮಾನಶಾಸ್ತ್ರ ಕ್ಷೇತ್ರದಲ್ಲಿ ಬಹಳ ಹಿಂದುಳಿದಿತ್ತು, ಆದರೆ ಇಂದು ಮೋದಿ ಅವರ ನೇತೃತ್ವದಲ್ಲಿ ನಾವು ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮಾನರಾಗಿದ್ದೇವೆ, ಈಗ ನಾವು ನಂ. 1 ಆಗಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ, ಐಎಂಡಿ, ಸಿಡಬ್ಲ್ಯೂಸಿ ಸೇರಿದಂತೆ ಹಲವಾರು ಇಲಾಖೆಗಳು ವಿವರವಾದ ಪ್ರಸ್ತುತಿಗಳನ್ನು ನೀಡಿದವು. ಕಳೆದ ವರ್ಷ ನಡೆದ ಪ್ರವಾಹ ಪರಿಶೀಲನಾ ಸಭೆಯಲ್ಲಿ ಕೇಂದ್ರ ಗೃಹ ಸಚಿವರು ನೀಡಿದ ನಿರ್ದೇಶನಗಳ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸಂಬಂಧಪಟ್ಟ ಸಚಿವಾಲಯಗಳು/ಇಲಾಖೆಗಳು ಮಾಹಿತಿ ನೀಡಿದವು. ಪ್ರಸ್ತುತ ಮಳೆಗಾಲಕ್ಕಾಗಿ ತಮ್ಮ ಸಿದ್ಧತೆಗಳು ಮತ್ತು ಭವಿಷ್ಯದ ಕ್ರಿಯಾ ಯೋಜನೆಯ ಬಗ್ಗೆಯೂ ಗೃಹ ಸಚಿವರಿಗೆ ಮಾಹಿತಿ ನೀಡಿದವು. ಎಲ್ಲಾ ಇಲಾಖೆಗಳು ಮಾಡಿರುವ ಸಿದ್ಧತೆಗಳ ಬಗ್ಗೆ ಗೃಹ ಸಚಿವರು ತೃಪ್ತಿ ವ್ಯಕ್ತಪಡಿಸಿದರು. ಎಲ್ಲಾ ಇಲಾಖೆಗಳ ಕೊಡುಗೆಯೊಂದಿಗೆ ತೀವ್ರ ಹವಾಮಾನವನ್ನು ನಿಭಾಯಿಸಬಹುದಾದ ಸಾಫ್ಟ್‌ವೇರ್ ಅನ್ನು ರಚಿಸಲು ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುವಂತೆ ಅವರು ಮನವಿ ಮಾಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳ ಪರಿಣಾಮವನ್ನು ಕಡಿಮೆ ಮಾಡಲು ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಪ್ರತಿ ವರ್ಷ, ಕೇಂದ್ರ ಗೃಹ ಸಚಿವರು ಪ್ರವಾಹ ಸನ್ನದ್ಧತಾ ಕ್ರಮಗಳನ್ನು ಪರಿಶೀಲಿಸುತ್ತಾರೆ ಮತ್ತು ಅವರ ನಿರ್ದೇಶನದ ಮೇರೆಗೆ, ಐಎಂಡಿ ಮತ್ತು ಸಿಡಬ್ಲ್ಯೂಸಿಯಿಂದ ಮಳೆ ಮತ್ತು ಪ್ರವಾಹ ಮುನ್ಸೂಚನೆಗಳನ್ನು 3 ರಿಂದ 7 ದಿನಗಳಿಗೆ ಹೆಚ್ಚಿಸುವುದು ಮತ್ತು ಶಾಖದ ಅಲೆಯ ಮುನ್ಸೂಚನೆಗಾಗಿ ಸುಧಾರಿತ ನಿಯತಾಂಕಗಳನ್ನು ಒಳಗೊಂಡಂತೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್, ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ನಿತ್ಯಾನಂದ ರೈ, ಕೇಂದ್ರ ಗೃಹ ಕಾರ್ಯದರ್ಶಿ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ, ಭೂ ವಿಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳು, ರೈಲ್ವೆ ಮಂಡಳಿಯ ಅಧ್ಯಕ್ಷರು, ಎನ್ ಡಿ ಎಂ ಎ ಇಲಾಖೆಗಳ ಸದಸ್ಯರು ಮತ್ತು ಮುಖ್ಯಸ್ಥರು, ಎನ್ ಡಿ ಆರ್ ಎಫ್ ಮತ್ತು ಐಎಂಡಿಯ ಮಹಾನಿರ್ದೇಶಕರು, ಎನ್ ಎಚ್ ಎ ಐ ಮತ್ತು ಸಿಡಬ್ಲ್ಯೂಸಿ ಅಧ್ಯಕ್ಷರು ಮತ್ತು ಎನ್ ಆರ್ ಎಸ್ ಸಿ ಮತ್ತು ಇತರ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
*****
(Release ID: 2135521)
Read this release in:
Khasi
,
English
,
Urdu
,
Marathi
,
Hindi
,
Nepali
,
Bengali-TR
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Malayalam