ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಪರೀಕ್ಷಾ ಪೇ ಚರ್ಚಾ 2025ರ 7 ನೇ ಸಂಚಿಕೆಯಲ್ಲಿ ಎಂ ಸಿ ಮೇರಿ ಕೋಮ್, ಅವನಿ ಲೇಖರಾ ಮತ್ತು ಸುಹಾಸ್ ಯತಿರಾಜ್ ಭಾಗಿ
Posted On:
17 FEB 2025 3:57PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಪರೀಕ್ಷಾ ಪೇ ಚರ್ಚಾ 2025ರ ಉದ್ಘಾಟನಾ ಸಂಚಿಕೆಯ ಒಳನೋಟವುಳ್ಳ ಚರ್ಚೆಗಳ ಮುಂದುವರಿದ ಭಾಗವಾಗಿ, ಇಂದು ಪ್ರಸಾರವಾದ ಏಳನೇ ಸಂಚಿಕೆಯಲ್ಲಿ ಖ್ಯಾತ ಕ್ರೀಡಾಪಟುಗಳಾದ ಎಂ ಸಿ ಮೇರಿ ಕೋಮ್, ಅವನಿ ಲೇಖರಾ ಮತ್ತು ಸುಹಾಸ್ ಯತಿರಾಜ್ ಭಾಗಿಯಾಗಿದ್ದರು. ಶಿಸ್ತಿನ ಮೂಲಕ ಗುರಿ ನಿಗದಿಪಡಿಸುವಿಕೆ, ಸಂಕಷ್ಟಗಳಿಂದ ಶೀಘ್ರ ಚೇತರಿಕೆ ಮತ್ತು ಒತ್ತಡ ನಿರ್ವಹಣೆಯ ಬಗ್ಗೆ ಅವರು ಮಾತನಾಡಿದರು. ಅವರು ತಮ್ಮ ವೈಯಕ್ತಿಕ ಜೀವನದ ಘಟನೆಗಳನ್ನು ಮತ್ತು ಕ್ರೀಡೆಗಳಿಂದ ಏನು ಕಲಿತರು ಎಂಬ ಬಗ್ಗೆ ಹಂಚಿಕೊಂಡರು.
ಮೇರಿ ಕೋಂ ಅವರು, ಕೇವಲ ತಮಗಾಗಿ ಮಾತ್ರವಲ್ಲದೇ ದೇಶಾದ್ಯಂತದ ಮಹಿಳೆಯರಿಗಾಗಿ ಸಮಾಜದಲ್ಲಿದ್ದ ಗ್ರಹಿಕೆಗಳಿಗೆ ಸವಾಲು ಹಾಕುತ್ತಾ ಬಾಕ್ಸಿಂಗ್ ಮಹಿಳಾ ಕ್ರೀಡೆಯಲ್ಲ ಎಂದು ಪ್ರಚಲಿತದಲ್ಲಿದ್ದ ನಂಬಿಕೆಯನ್ನು ತಾವು ಧಿಕ್ಕರಿಸಿದ್ದು ಹೇಗೆ ಎಂಬ ಬಗ್ಗೆ ಮಾತನಾಡಿದರು. ನಮಗೆ ನಾವೇ ಬೆನ್ನೆಲುಬಾಗಿ ವಿಶ್ವಾಸದಿಂದರಬೇಕು ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಲಹೆಯನ್ನು ಉಲ್ಲೇಖಿಸಿದ ಅವರು, ಮಗಳಾಗಿ, ಹೆಂಡತಿಯಾಗಿ ಮತ್ತು ತಾಯಿಯಾಗಿ ತಮ್ಮ 20 ವರ್ಷಗಳ ಪಯಣದ ಬಗ್ಗೆ ತಿಳಿಸಿದರು. ಕಠಿಣ ಪರಿಶ್ರಮದ ಮಹತ್ವವನ್ನು ಒತ್ತಿ ಹೇಳಿದ ಮೇರಿ ಕೋಂ ಅವರು, ಬದ್ಧತೆ ಮತ್ತು ಪರಿಶ್ರಮವು ಯಶಸ್ಸಿನ ನಿಜವಾದ ವಾಹಕ ಎಂದು ಪ್ರತಿಪಾದಿಸಿದರು.

ಸುಹಾಸ್ ಯತಿರಾಜ್ ಅವರು ವಿದ್ಯಾರ್ಥಿಗಳು ಮನಸ್ಸಿನ ಅದ್ಭುತ ಶಕ್ತಿಯ ಮೂಲಕ ಯಶಸ್ಸಿನ ಪ್ರಮುಖ ಅಡ್ಡಿಯಾಗಿರುವ ಭಯದಂತಹ ನಕಾರಾತ್ಮಕ ಭಾವನೆಗಳನ್ನು ಜಯಿಸುವಂತೆ ಉತ್ತೇಜನ ನೀಡಿದರು. ಸಹಜ ಪ್ರದರ್ಶನ ನೀಡುತ್ತಾ ಔನ್ನತ್ಯ ಸಾಧಿಸಲು ದಿಗಿಲಿನಿಂದ ಹೊರಬರುವುದೊಂದೇ ಮಾರ್ಗ ಎಂದು ಅವರು ಒತ್ತಿ ಹೇಳಿದರು. "ಸೂರ್ಯನಂತೆ ಪ್ರಜ್ವಲಿಸಲು ಬಯಸಿದರೆ ಭಾಸ್ಕರನಂತೆ ಉರಿಯಲೂ ಸಿದ್ಧರಾಗಿರಬೇಕು" ಎಂದು ಉಲ್ಲೇಖಿಸುತ್ತಾ ಅವರು, ದೃಢಚಿತ್ತದಿಂದ ಮತ್ತು ಬದ್ಧತೆಯಿಂದ ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಬೇಕು ಎಂದು ಕಿವಿಮಾತು ಮಾಡಿದರು. ಸಕಾರಾತ್ಮಕ ಶಕ್ತಿ ಪ್ರವಹಿಸುವಂತಾಗಲು ವಿದ್ಯಾರ್ಥಿಗಳಿಗೆ ಅವರು ಸಂಗೀತ ಚಿಕಿತ್ಸೆಯನ್ನು ಪರಿಚಯಿಸಿದರು ಮತ್ತು ಆಲೋಚನೆಗಳೇ ಒಬ್ಬರ ಹಣೆಬರಹವನ್ನು ರೂಪಿಸಲಿದ್ದು, ಜಾಗೃತ ಚಿಂತನೆಯ ಮಹತ್ವವನ್ನು ವಿವರಿಸಿದರು.
ಸೂಕ್ತ ಕೌಶಲ್ಯಗಳನ್ನು ಪಡೆದಲ್ಲಿ ಹೇಗೆ ಆತ್ಮವಿಶ್ವಾಸ ಹೊಂದಬಹುದು ಮತ್ತು ಭಯ ಕಡಿಮೆ ಮಾಡಿಕೊಳ್ಳಬಹುದು ಎಂದು ವಿವರಿಸುತ್ತಾ ಕೌಶಲ್ಯ ಅಭಿವೃದ್ಧಿಯ ಮಹತ್ವವನ್ನು ಅವನಿ ಲೇಖರ ಅವರು ಒತ್ತಿ ಹೇಳಿದರು. ಕ್ರೀಡೆಗಳಿಂದ ಇಂತಹ ಉದಾಹರಣೆಗಳನ್ನು ನೀಡುತ್ತಾ ಅವರು, ಅಧ್ಯಯನದಲ್ಲಿ ವಿಶ್ರಾಂತಿ ಮತ್ತು ಮರಳಿ ಚೈತನ್ಯ ಪಡೆಯುವ ಮಹತ್ವವನ್ನು ಒತ್ತಿ ಹೇಳಿದರು. ಪರೀಕ್ಷೆಗೂ ಮುನ್ನ ಸಾಕಷ್ಟು ನಿದ್ದೆ ಅಗತ್ಯ ಎಂದು ಪ್ರತಿಪಾದಿಸಿದ ಅವರು, ಆಗ ಮಾತ್ರ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯ ಎಂದರು. ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ವೃದ್ಧಿಸುವ ಪೂರಕ ಚಟುವಟಿಕೆಯನ್ನೂ ಅವರು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ, ವೃತ್ತಿ ಆಯ್ಕೆಗಳ ಬಗ್ಗೆ ಪೋಷಕರ ಮನವೊಲಿಸುವುದು, ಸವಾಲುಗಳನ್ನು ಎದುರಿಸಲು ಸ್ಥೈರ್ಯ ಪಡೆಯುವುದು, ಗಮನ ಕೇಂದ್ರೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದರು. ದುಬೈ ಮತ್ತು ಕತಾರ್ ನಿಂದ ಸಹ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅತಿಥಿಗಳಿಗೆ ತಮ್ಮ ಪ್ರಶ್ನೆ ಕೇಳಿದರು.
ಕಠಿಣ ಪರಿಶ್ರಮವೇ ಯಶಸ್ಸಿನ ಮೂಲ ಮಂತ್ರವಾಗಿದೆ, ಯಾವುದೇ ಅಡ್ಡದಾರಿ ಅಥವಾ ಸುಲಭ ಮಾರ್ಗದಿಂದ ಯಶಸ್ಸು ಸಾಧ್ಯವಿಲ್ಲ ಎಂದು ಎಲ್ಲಾ ಅತಿಥಿಗಳು ಸರ್ವಾನುಮತದಿಂದ ಒತ್ತಿ ಹೇಳಿದರು.
ಸಮಗ್ರ ಅಭಿವೃದ್ಧಿಯನ್ನು ಖಾತರಿಪಡಿಸಿಕೊಳ್ಳಲು ಕ್ರೀಡೆ, ತಂತ್ರಜ್ಞಾನ ತಜ್ಞರು, ಸ್ಪರ್ಧಾತ್ಮಕ ಪರೀಕ್ಷೆಗಳ ಅಗ್ರ ಶ್ರೇಯಾಂಕಿತರು, ಮನೋರಂಜನಾ ಉದ್ಯಮದ ವೃತ್ತಿಪರರು ಮತ್ತು ಆಧ್ಯಾತ್ಮಿಕ ನಾಯಕರು ಸೇರಿದಂತೆ ವಿವಿಧ ವಲಯಗಳ ಖ್ಯಾತನಾಮರು ಪಠ್ಯಪುಸ್ತಕಗಳನ್ನು ಮೀರಿದ ಆಳವಾದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಪಸರಿಸುತ್ತಿದ್ದಾರೆ. ಈಗಾಗಲೇ ಮೂರು ಸಂಚಿಕೆಗಳು ಪ್ರಸಾರವಾಗಿದ್ದು, ಪ್ರತಿ ಸಂಚಿಕೆಯು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ವೈಯಕ್ತಿಕವಾಗಿ ಉತ್ತಮ ಸಾಧನೆ ಮಾಡಲು ಅಗತ್ಯವಾದ ಸಾಧನಗಳು ಮತ್ತು ತಂತ್ರಗಾರಿಕೆಗಳನ್ನು ಒದಗಿಸುವುದನ್ನು ಮುಂದುವರಿಸಿದೆ. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಆ ಅವಧಿಯಲ್ಲಿನ ತಮ್ಮ ಕಲಿಕೆಯನ್ನು ಪ್ರತಿಬಿಂಬಿಸಿದರು ಮತ್ತು ಹಂಚಿಕೊಂಡರು.
ಪರಿಷ್ಕೃತ ಮತ್ತು ತೊಡಗಿಕೊಳ್ಳುವಿಕೆಯ ಸ್ವರೂಪದ ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2025 ರ ಎಂಟನೇ ಆವೃತ್ತಿಗೆ ದೇಶಾದ್ಯಂತದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಾಂಪ್ರದಾಯಿಕ ಸಭೆ (ಟೌನ್ ಹಾಲ್) ಸ್ವರೂಪದಿಂದ ಹೊರಬಂದು, ಈ ವರ್ಷದ ಆವೃತ್ತಿಯು 2025ರ ಫೆಬ್ರವರಿ 10 ರಂದು ನವದೆಹಲಿಯ ಸುಂದರ್ ನರ್ಸರಿಯಲ್ಲಿ ಮನಮೋಹಕ ಪರಿಸರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಸಂವಾದಾತ್ಮಕ ರೂಪದಲ್ಲಿ ಪ್ರಾರಂಭವಾಯಿತು.
ಉದ್ಘಾಟನಾ ಸಂಚಿಕೆಯಲ್ಲಿ, ಪ್ರಧಾನಮಂತ್ರಿಯವರು ದೇಶಾದ್ಯಂತದ 36 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಪೌಷ್ಟಿಕಾಂಶ ಮತ್ತು ಸ್ವಾಸ್ಥ್ಯ, ಒತ್ತಡ ನಿರ್ವಹಣೆ, ಸ್ವಯಂ ಸವಾಲು, ನಾಯಕತ್ವದ ಕಲೆ, ಪುಸ್ತಕಗಳನ್ನು ಮೀರಿ – ಎಲ್ಲಾ ಆಯಾಮಗಳ ಬೆಳವಣಿಗೆ, ಸಕಾರಾತ್ಮಕ ಅಂಶಗಳ ಪತ್ತೆ ಮತ್ತು ಇನ್ನೂ ಹಲವು ಗಹನವಾದ ವಿಚಾರಧಾರೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಶೈಕ್ಷಣಿಕ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಪ್ರಧಾನಮಂತ್ರಿಗಳ ಅಮೂಲ್ಯ ಮಾರ್ಗದರ್ಶನವು ಬೆಳವಣಿಗೆಯನ್ನು ಹೊಂದಬೇಕು ಎಂಬ ಮನಃಸ್ಥಿತಿಯ ಹಾಗೂ ಸಮಗ್ರ ಕಲಿಕೆಯನ್ನು ಪೋಷಿಸುವ ಜೊತೆಗೆ ಪ್ರಾಯೋಗಿಕ ತಂತ್ರಗಾರಿಕೆಗಳನ್ನು ನೀಡಿತು.
ಪರೀಕ್ಷಾ ಪೇ ಚರ್ಚಾ 2025 ನಿರಂತರವಾಗಿ ತೆರೆದುಕೊಳ್ಳುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿ, ಅವರು ಶೈಕ್ಷಣಿಕ ಮತ್ತು ಜೀವನದ ಸವಾಲುಗಳನ್ನು ಸಕಾರಾತ್ಮಕ ಮನಸ್ಥಿತಿಯೊಂದಿಗೆ ಎದುರಿಸಲು ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ನೀಡುತ್ತಿದೆ.
1ನೇ ಸಂಚಿಕೆ ವೀಕ್ಷಿಸಲು ಲಿಂಕ್ : https://www.youtube.com/watch?v=G5UhdwmEEls
2ನೇ ಸಂಚಿಕೆ ವೀಕ್ಷಿಸಲು ಲಿಂಕ್ : https://www.youtube.com/watch?v=DrW4c_ttmew
3ನೇ ಸಂಚಿಕೆ ವೀಕ್ಷಿಸಲು ಲಿಂಕ್ : https://www.youtube.com/watch?v=wgMzmDYShXw
4ನೇ ಸಂಚಿಕೆ ವೀಕ್ಷಿಸಲು ಲಿಂಕ್ : https://www.youtube.com/watch?v=3CfR4-5v5mk
5ನೇ ಸಂಚಿಕೆ ವೀಕ್ಷಿಸಲು ಲಿಂಕ್ : https://www.youtube.com/watch?v=3GD_SrxsAx8
6ನೇ ಸಂಚಿಕೆ ವೀಕ್ಷಿಸಲು ಲಿಂಕ್ : https://www.youtube.com/watch?v=uhI6UbZJgEQ
7ನೇ ಸಂಚಿಕೆ ವೀಕ್ಷಿಸಲು ಲಿಂಕ್ : https://www.youtube.com/watch?v=y9Zg7B_o8So
*****
(Release ID: 2104241)
Visitor Counter : 37
Read this release in:
Khasi
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam