ಪ್ರಧಾನ ಮಂತ್ರಿಯವರ ಕಛೇರಿ
ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಹಸಿವು ಮತ್ತು ಬಡತನದ ವಿರುದ್ಧದ ಹೋರಾಟ ಕುರಿತ ಜಿ 20 ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
18 NOV 2024 9:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಹಸಿವು ಮತ್ತು ಬಡತನದ ವಿರುದ್ಧದ ಹೋರಾಟ' ಕುರಿತ ಜಿ 20 ಶೃಂಗಸಭೆಯ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಶೃಂಗಸಭೆಯ ಆತಿಥ್ಯ ವಹಿಸಿದ್ದಕ್ಕಾಗಿ ಮತ್ತು ಅವರ ಆತ್ಮೀಯ ಆತಿಥ್ಯಕ್ಕಾಗಿ ಬ್ರೆಜಿಲ್ ಅಧ್ಯಕ್ಷ ಘನತೆವೆತ್ತ ಶ್ರೀ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಕೇಂದ್ರೀಕರಿಸಿದ ಬ್ರೆಜಿಲ್ ಜಿ 20 ಕಾರ್ಯಸೂಚಿಯನ್ನು ಅವರು ಶ್ಲಾಘಿಸಿದರು, ಈ ವಿಧಾನವು ಜಾಗತಿಕ ದಕ್ಷಿಣದ ಕಾಳಜಿಗಳನ್ನು ಎತ್ತಿ ತೋರಿಸಿದೆ ಮತ್ತು ಹೊಸದಿಲ್ಲಿ ಜಿ 20 ಶೃಂಗಸಭೆಯ ಜನ ಕೇಂದ್ರಿತ ನಿರ್ಧಾರಗಳನ್ನು ಮುಂದಕ್ಕೆ ಕೊಂಡೊಯ್ದಿದೆ ಎಂದು ಹೇಳಿದರು. "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಕ್ಕಾಗಿ ಭಾರತದ ಜಿ 20 ಅಧ್ಯಕ್ಷತೆಯ ಕರೆ ರಿಯೋ ಸಂಭಾಷಣೆಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ ಎಂದು ಅವರು ಒತ್ತಿ ಹೇಳಿದರು.
ಹಸಿವು ಮತ್ತು ಬಡತನವನ್ನು ಎದುರಿಸಲು ಭಾರತದ ಉಪಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ ಹತ್ತು ವರ್ಷಗಳಲ್ಲಿ ಭಾರತವು 250 ಮಿಲಿಯನ್ ಜನರನ್ನು ಬಡತನದಿಂದ ಹೊರತಂದಿದೆ ಮತ್ತು ದೇಶದ 800 ಮಿಲಿಯನ್ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ ಎಂದರು. ಆಹಾರ ಭದ್ರತೆಯನ್ನು ನಿಭಾಯಿಸುವಲ್ಲಿ ಭಾರತದ ಯಶಸ್ಸಿನ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, 'ಬ್ಯಾಕ್ ಟು ಬೇಸಿಕ್ಸ್ ಮತ್ತು ಮಾರ್ಚ್ ಟು ಫ್ಯೂಚರ್' (ಮೂಲತತ್ವಗಳಿಗೆ ಹಿಂತಿರುಗಿ ಮತ್ತು ಭವಿಷ್ಯದತ್ತ ಸಾಗಿ) ಆಧಾರಿತ ವಿಧಾನವು ಫಲಿತಾಂಶಗಳನ್ನು ನೀಡುತ್ತಿದೆ ಎಂದೂ ಒತ್ತಿ ಹೇಳಿದರು. ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತ ಕೈಗೊಂಡ ಕ್ರಮಗಳ ಬಗ್ಗೆ ಅವರು ವಿವರಿಸಿದರು.
ಆಫ್ರಿಕಾ ಮತ್ತು ಇತರ ಕಡೆಗಳಲ್ಲಿ ಆಹಾರ ಭದ್ರತೆಯನ್ನು ಬಲಪಡಿಸಲು ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪ್ರಧಾನಿ ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಹಸಿವು ಮತ್ತು ಬಡತನದ ವಿರುದ್ಧ ಜಾಗತಿಕ ಮೈತ್ರಿಯನ್ನು ಸ್ಥಾಪಿಸುವ ಬ್ರೆಜಿಲ್ ಉಪಕ್ರಮವನ್ನು ಅವರು ಸ್ವಾಗತಿಸಿದರು, ನಡೆಯುತ್ತಿರುವ ಸಂಘರ್ಷಗಳಿಂದ ಸೃಷ್ಟಿಯಾದ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನಿಂದ ಜಾಗತಿಕ ದಕ್ಷಿಣವು ತೀವ್ರವಾಗಿ ತೊಂದರೆ ಅನುಭವಿಸುತ್ತಿದೆ ಮತ್ತು ಆದ್ದರಿಂದ ಅವರ ಕಾಳಜಿಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದರು.
ಪ್ರಧಾನ ಮಂತ್ರಿಯವರ ಸಂಪೂರ್ಣ ಹೇಳಿಕೆಗಳನ್ನು ಇಲ್ಲಿ ನೋಡಬಹುದು.
*****
(Release ID: 2074532)
Visitor Counter : 13