ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲಾವೋ ಪಿಡಿಆರ್ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 11 OCT 2024 1:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಯೆಂಟಿಯಾನ್ ನಲ್ಲಿ ಲಾವೋ ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ (ಎಲ್ ಪಿ ಆರ್ ಪಿ) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಲಾವೋ ಪಿಡಿಆರ್ ಅಧ್ಯಕ್ಷ ಘನತೆವೆತ್ತ ಥೊಂಗ್ಲೋನ್ ಸಿಸೌಲಿತ್ ಅವರನ್ನು ಭೇಟಿ ಮಾಡಿದರು. ಆಸಿಯಾನ್ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಅಧ್ಯಕ್ಷ ಸಿಸೌಲಿತ್ ಅವರನ್ನು ಅಭಿನಂದಿಸಿದರು.

ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು ಮತ್ತು ನಿಕಟ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತ-ಲಾವೋಸ್ ಸಮಕಾಲೀನ ಪಾಲುದಾರಿಕೆಯು ಹಳೆಯ ನಾಗರಿಕ ಬಂಧಗಳಲ್ಲಿ ಆಳವಾಗಿ ಬೇರೂರಿದೆ ಎಂದು ಅವರು ಗಮನಿಸಿದರು. ಅಭಿವೃದ್ಧಿ ಪಾಲುದಾರಿಕೆ, ಪರಂಪರೆಯ ಪುನಃಸ್ಥಾಪನೆ ಮತ್ತು ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ನಡೆಯುತ್ತಿರುವ ಸಹಯೋಗದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. 2024 ಭಾರತದ ಆಕ್ಟ್ ಈಸ್ಟ್ ಪಾಲಿಸಿಯ ಒಂದು ದಶಕವನ್ನು ಸೂಚಿಸುತ್ತದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಲಾವೋಸ್ ನೊಂದಿಗಿನ ಭಾರತದ ಬಾಂಧವ್ಯಕ್ಕೆ ಮತ್ತಷ್ಟು ವೇಗವನ್ನು ಸೇರಿಸುವಲ್ಲಿ ಅದರ ಮಹತ್ವವನ್ನು ಉಲ್ಲೇಖಿಸಿದರು. ಉಭಯ ದೇಶಗಳ ನಡುವಿನ ನಾಗರಿಕ ಸಂಬಂಧಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಹೊಸ ನಳಂದ ವಿಶ್ವವಿದ್ಯಾಲಯವು ಪ್ರಸ್ತುತಪಡಿಸಿದ ಅವಕಾಶಗಳ ಮೂಲಕ ಜನರ ನಡುವಿನ ಸಂಬಂಧವನ್ನು ಬಲಪಡಿಸುವಂತೆ ಕರೆ ನೀಡಿದರು. ಯಗಿ ಚಂಡಮಾರುತದಿಂದ ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ ಲಾವೋ ಪಿಡಿಆರ್ ಗೆ ಭಾರತದ ಮಾನವೀಯ ನೆರವಿಗಾಗಿ ಅಧ್ಯಕ್ಷ ಸಿಸೌಲಿತ್ ಅವರು ಪ್ರಧಾನಮಂತ್ರಿಅವರಿಗೆ ಧನ್ಯವಾದ ಅರ್ಪಿಸಿದರು.

ಭಾರತ-ಆಸಿಯಾನ್ ಬಾಂಧವ್ಯವನ್ನು ಬಲಪಡಿಸಲು ಲಾವೋಸ್ ನೀಡಿದ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಅವರು ಅಧ್ಯಕ್ಷ ಸಿಸೌಲಿತ್ ಅವರಿಗೆ ಧನ್ಯವಾದ ಅರ್ಪಿಸಿದರು. ಇಬ್ಬರೂ ನಾಯಕರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು.

 

*****



(Release ID: 2064303) Visitor Counter : 12