ರಾಷ್ಟ್ರಪತಿಗಳ ಕಾರ್ಯಾಲಯ

ಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ರಾಷ್ಟ್ರಪತಿ ಭಾಗಿ

Posted On: 23 AUG 2024 1:31PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯ ಭಾರತ ಮಂಟಪಂನಲ್ಲಿಂದು (ಆಗಸ್ಟ್ 23,2024) ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 2023ರ ಆಗಸ್ಟ್ 23 ರಂದು ಚಂದ್ರನ ಅಂಗಳದಲ್ಲಿ ‘ವಿಕ್ರಂ’ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇರಿಸಿದ ದಿನದ ಸ್ಮರಣಾರ್ಥವಾಗಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಗುತ್ತಿದೆ. ಇದೇ ವೇಳೆ “ರೋಬೋಟಿಕ್ಸ್ ಚಾಲೆಂಜ್” ಮತ್ತು “ಭಾರತೀಯ ಅಂತರಿಕ್ಷ ಹ್ಯಾಕಥಾನ್” ಸ್ಪರ್ಧೆಯ ವಿಜೇತರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಆರಂಭದಿಂದಲೂ ಇಸ್ರೋ ಪಯಣ ಅದ್ಭುತವಾಗಿದೆ. ಬಾಹ್ಯಾಕಾಶ ವಲಯದಲ್ಲಿ ಇಸ್ರೋ ಗಮನಾರ್ಹ ಸಾಧನೆ ಮಾಡಿದೆ. ಇದರ ಜೊತೆಗೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೂ ಇಸ್ರೋ ಅಮೂಲ್ಯ ಕೊಡುಗೆ ನೀಡಿದೆ. ಕನಿಷ್ಠ ಸಂಪನ್ಮೂಲಗಳನ್ನು ಬಳಸಿ ವಿಶ್ವದ ಅತ್ಯುತ್ತಮ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಉತ್ಕೃಷ್ಟ ಸ್ಥಾನದಲ್ಲಿರಿಸಲು ಬದ್ಧರಾಗಿ ಕಾರ್ಯನಿರ್ವಹಿಸಿದ ವಿಜ್ಞಾನಿಗಳನ್ನು ಅವರು ಶ್ಲಾಘಿಸಿದರು. ಬಾಹ್ಯಾಕಾಶ ವಲಯದಲ್ಲಿ ನಮ್ಮ ದೇಶವು ನಿರಂತರ ಪ್ರಗತಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ನಾವು ಶ್ರೇಷ್ಠತೆಯ ಮಾನದಂಡಗಳನ್ನು ನಿಗದಿಪಡಿಸುವುದನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು.

ಭಾರತದ ಬಾಹ್ಯಾಕಾಶ ವಲಯದ ಪ್ರಗತಿಯು ಅತ್ಯದ್ಭುತವಾಗಿದೆ. ಅದು ಸೀಮಿತ ಸಂಪನ್ಮೂಲಗಳೊಂದಿಗೆ ಯಶಸ್ವಿಯಾದ ಮಂಗಳಯಾನವಾಗಿರಬಹುದು ಅಥವಾ ಒಮ್ಮೆಗೇ ನೂರಕ್ಕೂ ಹೆಚ್ಚು ಉಪಗ್ರಹಗಳ ಯಶಸ್ವಿ ಉಡಾವಣೆಯಾಗಿರಬಹುದು, ನಾವು ಅನೇಕ ಮಹತ್ವದ ಸಾಧನೆಗಳನ್ನು ಮಾಡಿದ್ದೇವೆ ಎಂದು ರಾಷ್ಟ್ರಪತಿ ಹೇಳಿದರು. 

ಬಾಹ್ಯಾಕಾಶ ಅನ್ವೇಷಣೆಯು ಮಾನವನ ಸಾಮರ್ಥ್ಯವನ್ನು ಹೆಚ್ಚಿಸಿದೆ ಮತ್ತು ನಮ್ಮ ಕಲ್ಪನೆಯು ವಾಸ್ತವದಲ್ಲಿ ಸಾಕಾರಗೊಂಡಿದೆ ಎಂದು ರಾಷ್ಟ್ರಪತಿ ಹೇಳಿದರು. ಆದರೆ ಬಾಹ್ಯಾಕಾಶ ಅನ್ವೇಷಣೆಯು ಸವಾಲಿನ ಕೆಲಸ. ಬಾಹ್ಯಾಕಾಶ ಅನ್ವೇಷಣೆಯ ಸಂದರ್ಭದಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ನಡೆಸಿದ ಸಂಶೋಧನೆಯು ವಿಜ್ಞಾನದ ಬೆಳವಣಿಗೆಗೆ ಚುರುಕು ನೀಡುತ್ತದೆ ಮತ್ತು ಮಾನವ ಜೀವನ ಸುಧಾರಣೆಗೆ ಪೂರಕವಾಗಿದೆ. ಆರೋಗ್ಯ ಮತ್ತು ಔಷಧ, ಸಾರಿಗೆ, ಭದ್ರತೆ, ಇಂಧನ, ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಿಗೂ ಬಾಹ್ಯಾಕಾಶ ಕ್ಷೇತ್ರದ ಪ್ರಗತಿಯಿಂದ ಅನುಕೂಲವಾಗಿದೆ ಎಂದು ಅವರು ವಿವರಿಸಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅನುಮತಿ ದೊರೆಯುವುದರೊಂದಿಗೆ, ಸ್ಟಾರ್ಟ್‌ಅಪ್‌ಗಳ ಸಂಖ್ಯೆಯು ಅತ್ಯಂತ ತ್ವರಿತ ಗತಿಯಲ್ಲಿ ಹೆಚ್ಚಿದೆ ಎಂದು ರಾಷ್ಟ್ರಪತಿಗಳು ಗಮನಸೆಳೆದರು. ಇದು ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಗತಿಗೆ ಪೂರಕವಾಗಿದೆಯಲ್ಲದೇ ನಮ್ಮ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಕೌಶಲ್ಯವೃದ್ಧಿಗೆ ಹೊಸ ಅವಕಾಶಗಳನ್ನು ನೀಡಿದೆ. ಕೆಲವೇ ತಿಂಗಳುಗಳ ಹಿಂದೆ, ಭಾರತೀಯ ಕಂಪನಿಯೊಂದು 3ಡಿ ಮುದ್ರಿತ ಏಕ ಸೆಮಿ ಕ್ರಯೋಜೆನಿಕ್ ಎಂಜಿನ್ ಚಾಲಿತ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಇಂತಹ ಸಾಧನೆ ಇದೇ ಮೊದಲನೆಯದಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. 

ಭವಿಷ್ಯದ ಸವಾಲುಗಳಿಗೆ ನಾವು ಸಿದ್ಧರಾಗಿರಬೇಕು ಎಂದು ಕಿವಿಮಾತು ಹೇಳಿದ ಅವರು,  ಬಾಹ್ಯಾಕಾಶ ತ್ಯಾಜ್ಯಗಳು / ಅವಶೇಷಗಳು ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅಡ್ಡಿಯುಂಟುಮಾಡಬಹುದು ಎಂದರು. ಬಾಹ್ಯಾಕಾಶ ಸಂಶೋಧನಾ ಚಟುವಟಿಕೆಗಳ ನಿರಂತರ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಕಾರ್ಯನಿರ್ವಹಿಸುತ್ತಿರುವ 'ಸುರಕ್ಷಿತ ಮತ್ತು ಸುಸ್ಥಿರ ಕಾರ್ಯಾಚರಣೆ ನಿರ್ವಹಣೆ ಇಸ್ರೋ ವ್ಯವಸ್ಥೆ” ಸೌಲಭ್ಯವನ್ನು ಅವರು ಶ್ಲಾಘಿಸಿದರು. 2030 ರ ವೇಳೆಗೆ ಭಾರತವು ತನ್ನ ಎಲ್ಲಾ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಅವಶೇಷ ಮುಕ್ತಗೊಳಿಸುವತ್ತ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. 

ರಾಷ್ಟ್ರಪತಿಗಳ ಭಾಷಣ ನೋಡಲು ಇಲ್ಲಿ ಕ್ಲಿಕ್ ಮಾಡಿ-
https://static.pib.gov.in/WriteReadData/specificdocs/documents/2024/aug/doc2024823379401.pdf

 

*****



(Release ID: 2048175) Visitor Counter : 27