ಪ್ರಧಾನ ಮಂತ್ರಿಯವರ ಕಛೇರಿ

ಜೂನ್ 20 ಮತ್ತು 21ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಜಮ್ಮು ಮತ್ತು ಕಾಶ್ಮೀರದಲ್ಲಿ 1,500 ಕೋಟಿ ರೂ.ಗೂ ಅಧಿಕ ಮೌಲ್ಯದ 84 ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿಗಳು

1800 ಕೋಟಿ ರೂಪಾಯಿ ಮೌಲ್ಯದ 'ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸ್ಪರ್ಧಾತ್ಮಕತೆ ಸುಧಾರಣೆ' (ಜೆಕೆಸಿಐಪಿ) ಯೋಜನೆಗೆ ಚಾಲನೆ ನೀಡಲಿದ್ದಾರೆ

ಶ್ರೀನಗರದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಲಿರುವ ಪ್ರಧಾನಿ

"ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ" ವಿಷಯಾಧಾರಿತವಾಗಿ10ನೇ ಅಂತರರಾಷ್ಟ್ರೀಯ ಯೋಗ ದಿನ ನಡೆಯಲಿದೆ

Posted On: 19 JUN 2024 4:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಜೂನ್ 20 ಮತ್ತು 21ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

ಜೂನ್ 20 ರಂದು ಸಂಜೆ 6ಗಂಟೆಗೆ ಶ್ರೀನಗರದ ʻಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ʼನಲ್ಲಿ(ಎಸ್‌ಕೆಐಸಿಸಿ) ನಡೆಯಲಿರುವ 'ಯುವಕರ ಸಬಲೀಕರಣ, ಜಮ್ಮು ಮತ್ತು ಕಾಶ್ಮೀರದ ಪರಿವರ್ತನೆʼ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ  ಉದ್ಘಾಟನೆ/ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ʻಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸ್ಪರ್ಧಾತ್ಮಕತೆ ಸುಧಾರಣೆ ಯೋಜನೆʼಗೂ(ಜೆಕೆಸಿಐಪಿ) ಅವರು ಚಾಲನೆ ನೀಡಲಿದ್ದಾರೆ.

ಜೂನ್ 21 ರಂದು ಬೆಳಗ್ಗೆ 6.30ಕ್ಕೆ ಶ್ರೀನಗರದ ʻಎಸ್‌ಕೆಐಸಿಸಿʼಯಲ್ಲಿ ನಡೆಯಲಿರುವ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಯವರು ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ನಂತರ ʻಸಿವೈಪಿʼ ಯೋಗ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ಯುವಕರ ಸಬಲೀಕರಣ, ಜಮ್ಮು ಮತ್ತು ಕಾಶ್ಮೀರದ  ಪರಿವರ್ತನೆ

"ಯುವಕರ ಸಬಲೀಕರಣ, ಜಮ್ಮು ಮತ್ತು ಕಾಶ್ಮೀರದ ಪರಿವರ್ತನೆ" ಕಾರ್ಯಕ್ರಮವು  ಈ ಪ್ರದೇಶದ ಪಾಲಿಗೆ ಪ್ರಮುಖ ಘಳಿಗೆಯಾಗಲಿದೆ. ಈ ಕಾರ್ಯಕ್ರಮವು ಈ ಭಾಗದಲ್ಲಿನ ಪ್ರಗತಿಯನ್ನು ಪ್ರದರ್ಶಿಸುವುದರ ಜೊತೆಗೆ, ಯುವ ಸಾಧಕರಿಗೆ ಸ್ಫೂರ್ತಿ ನೀಡಲಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಳಿಗೆಗಳಲ್ಲಿ ಹೆಜ್ಜೆ ಹಾಕಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಮತ್ತು ಜಮ್ಮು ಮತ್ತು ಕಾಶ್ಮೀರದ ಯುವ ಸಾಧಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಪ್ರಧಾನಮಂತ್ರಿಯವರು 1,500 ಕೋಟಿ ರೂ.ಗೂ ಅಧಿಕ ಮೌಲ್ಯದ 84 ಪ್ರಮುಖ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ರಸ್ತೆ ಮೂಲಸೌಕರ್ಯ, ನೀರು ಸರಬರಾಜು ಯೋಜನೆಗಳು ಮತ್ತು ಉನ್ನತ ಶಿಕ್ಷಣದಲ್ಲಿ ಮೂಲಸೌಕರ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಯೋಜನೆಗಳು ಇದರಲ್ಲಿ ಸೇರಿವೆ. ಇದಲ್ಲದೆ, ʻಚೆನಾನಿ-ಪಟ್ನೀಟಾಪ್-ನಾಶಾರಿ ವಿಭಾಗದ ಸುಧಾರಣೆ, ಕೈಗಾರಿಕಾ ಎಸ್ಟೇಟ್‌ಗಳ ಅಭಿವೃದ್ಧಿ ಹಾಗೂ 06 ಸರ್ಕಾರಿ ಪದವಿ ಕಾಲೇಜುಗಳ ನಿರ್ಮಾಣದಂತಹ ಯೋಜನೆಗಳಿಗೆ ಪ್ರಧಾನಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು 1,800 ಕೋಟಿ ರೂಪಾಯಿ ಮೌಲ್ಯದ, ʻಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸ್ಪರ್ಧಾತ್ಮಕತೆ ಸುಧಾರಣೆʼ (ಜೆಕೆಸಿಐಪಿ) ಯೋಜನೆಗೂ ಚಾಲನೆ ನೀಡಲಿದ್ದಾರೆ. ಈ ಯೋಜನೆಯನ್ನು ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳ 90 ಬ್ಲಾಕ್‌ಗಳಲ್ಲಿ ಜಾರಿಗೆ ತರಲಾಗುವುದು. ಈ ಯೋಜನೆಯಡಿ 300,000 ಕುಟುಂಬಗಳ ವ್ಯಾಪ್ತಿಯಲ್ಲಿ 15 ಲಕ್ಷ ಫಲಾನುಭವಿಗಳನ್ನು ತಲುಪುವ ಗುರಿಯನ್ನು ಹೊಂದಲಾಗಿದೆ.

ಸರ್ಕಾರಿ ಸೇವೆಗೆ ನೇಮಕಗೊಂಡ 2000ಕ್ಕೂ ಹೆಚ್ಚು ವ್ಯಕ್ತಿಗಳಿಗೆ ನೇಮಕಾತಿ ಪತ್ರಗಳನ್ನು ಪ್ರಧಾನಿ ವಿತರಿಸಲಿದ್ದಾರೆ.

ಯೋಜನೆಗಳಿಗೆ ಶಂಕುಸ್ಥಾಪನೆ/ಉದ್ಘಾಟನೆ ಹಾಗೂ ಚಾಲನೆಯು ಯುವಕರನ್ನು ಸಬಲೀಕರಣಗೊಳಿಸುತ್ತದೆ, ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನ

2024ರ ಜೂನ್ 21ರಂದು ನಡೆಯಲಿರುವ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಶ್ರೀನಗರದ ʻಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ʼನಲ್ಲಿ(ಎಸ್‌ಕೆಐಸಿಸಿ) ನಡೆಯಲಿರುವ  ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ. ಈ ವರ್ಷದ ಕಾರ್ಯಕ್ರಮವು ಯುವ ಮನಸ್ಸುಗಳು ಮತ್ತು ದೇಹದ ಮೇಲೆ ಯೋಗದ ಗಾಢವಾದ ಪ್ರಭಾವವನ್ನು ಒತ್ತಿಹೇಳುತ್ತದೆ. ಸಾವಿರಾರು ಜನರನ್ನು ಯೋಗಾಭ್ಯಾಸದ ಮೂಲಕ ಒಂದುಗೂಡಿಸುವ ಹಾಗೂ ಜಾಗತಿಕ ಮಟ್ಟದಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುವ ಗುರಿಯನ್ನು ಈ ಆಚರಣೆಯು ಹೊಂದಿದೆ.

2015ರಿಂದ, ಪ್ರಧಾನಿಯವರು ದೆಹಲಿ, ಚಂಡೀಗಢ, ಡೆಹ್ರಾಡೂನ್, ರಾಂಚಿ, ಲಕ್ನೋ, ಮೈಸೂರು ಮತ್ತು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಸೇರಿದಂತೆ ವಿವಿಧ ಪ್ರಧಾನ ಸ್ಥಳಗಳಲ್ಲಿ ʻಅಂತರರಾಷ್ಟ್ರೀಯ ಯೋಗ ದಿನʼ (ಐಡಿವೈ) ಆಚರಣೆಯ ನೇತೃತ್ವ ವಹಿಸಿದ್ದಾರೆ.

"ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ" ಎಂಬ ವಿಷಯಾಧಾರಿತವಾಗಿ ಈ ವರ್ಷದ ಯೋಗದಿನ ಆಚರಿಸಲಾಗುತ್ತಿದ್ದು, ಇದು ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವ ಅವಳಿ ಪಾತ್ರವನ್ನು ಎತ್ತಿ ತೋರುತ್ತದೆ. ಈ ಕಾರ್ಯಕ್ರಮವು ತಳಮಟ್ಟದಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯೋಗದ ಪ್ರಚಾರವನ್ನು ಉತ್ತೇಜಿಸುತ್ತದೆ.

*****



(Release ID: 2026922) Visitor Counter : 33