ರಾಷ್ಟ್ರಪತಿಗಳ ಕಾರ್ಯಾಲಯ

​​​​​​​ಸಂಸತ್ತನ್ನು ಉದ್ದೇಶಿಸಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಭಾಷಣ

Posted On: 31 JAN 2024 12:35PM by PIB Bengaluru

ಗೌರವಾನ್ವಿತ ಸದಸ್ಯರೇ,

1. ಈ ಹೊಸ ಸಂಸತ್ ಕಟ್ಟಡದಲ್ಲಿ ಇದು ನನ್ನ ಮೊದಲ ಭಾಷಣ. ಈ ಭವ್ಯವಾದ ಕಟ್ಟಡವನ್ನು "ಸ್ವಾತಂತ್ರ್ಯದ ಅಮೃತ ಕಾಲ"ದ ಆರಂಭದಲ್ಲಿ ನಿರ್ಮಿಸಲಾಗಿದೆ.

ಇದು 'ಏಕ ಭಾರತ-ಶ್ರೇಷ್ಠ ಭಾರತ'ದ ಕಂಪಿನಿಂದ ಆವರಿಸಿದೆ, ಜೊತೆಗೆ ಇದು ಭಾರತದ ನಾಗರಿಕತೆ ಮತ್ತು ಸಂಸ್ಕೃತಿಗೆ ಸಾಕ್ಷಿಯಾಗಿದೆ.

ಇದು ಪ್ರಜಾಪ್ರಭುತ್ವ ಮತ್ತು ಸಂಸದೀಯ ಸಂಪ್ರದಾಯಗಳನ್ನು ಗೌರವಿಸುವ ನಮ್ಮ ಸಂಕಲ್ಪವನ್ನು ಪ್ರತಿಧ್ವನಿಸುತ್ತದೆ.

ಅಷ್ಟೇ ಅಲ್ಲದೆ, 21ನೇ ಶತಮಾನದ ʻನವ ಭಾರತʼಕ್ಕಾಗಿ ಹೊಸ ಸಂಪ್ರದಾಯಗಳನ್ನು ರೂಪಿಸುವ ಬದ್ಧತೆಯನ್ನೂ ಇದು ಸಾಕಾರಗೊಳಿಸುತ್ತದೆ.

ಈ ಹೊಸ ಕಟ್ಟಡವು ನಮ್ಮ ʻಸ್ವಾತಂತ್ರ್ಯದ ಅಮೃತಕಾಲʼದಲ್ಲಿ 'ವಿಕಸಿತ ಭಾರತ'ದ ಅಭಿವೃದ್ಧಿಯನ್ನು ರೂಪಿಸುವ ನೀತಿಗಳ ಬಗ್ಗೆ ಫಲಕಾರಿ ಸಂವಾದಕ್ಕೆ ಸಾಕ್ಷಿಯಾಗಲಿದೆ ಎಂಬ ವಿಶ್ವಾಸ ನನಗಿದೆ.

ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು.

 

ಗೌರವಾನ್ವಿತ ಸದಸ್ಯರೇ,

2. ಈ ವರ್ಷ ನಮ್ಮ ಸಂವಿಧಾನವನ್ನು ಅಂಗೀಕರಿಸಿದ 75ನೇ ವರ್ಷವೂ ಹೌದು.

ಈ ಅವಧಿಯಲ್ಲಿ, ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯಾದ ʻಅಮೃತ ಮಹೋತ್ಸವʼವು ಪೂರ್ಣಗೊಂಡಿತು.

ಈ ಅವಧಿಯಲ್ಲಿ, ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ದೇಶವು ತನ್ನ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿತು.

75 ವರ್ಷಗಳ ನಂತರ, ಯುವ ಪೀಳಿಗೆಯು ಸ್ವಾತಂತ್ರ್ಯ ಹೋರಾಟದ ಆ ಅವಧಿಯನ್ನು ಪುನರುಜ್ಜೀವನಗೊಳಿಸಿತು.

3. ಈ ಅಭಿಯಾನದ ಸಮಯದಲ್ಲಿ:

  • 'ಮೇರಿ ಮಾತಿ, ಮೇರಾ ದೇಶ್' ಅಭಿಯಾನದ ಅಡಿಯಲ್ಲಿ ದೇಶದ ಪ್ರತಿಯೊಂದು ಹಳ್ಳಿಯಿಂದ ಸಂಗ್ರಹಿಸಲಾದ ಮಣ್ಣನ್ನು ಹೊತ್ತ ʻಅಮೃತ ಕಲಶʼವನ್ನು ದೆಹಲಿಗೆ ತರಲಾಯಿತು.
  • 2 ಲಕ್ಷಕ್ಕೂ ಹೆಚ್ಚು ಪ್ರದರ್ಶನ ಫಲಕಗಳನ್ನು ಅಳವಡಿಸಲಾಗಿದೆ.
  • ಮೂರು ಕೋಟಿಗೂ ಹೆಚ್ಚು ಜನರು 'ಪಂಚಪ್ರಾಣ'ದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  • 70,000ಕ್ಕೂ ಹೆಚ್ಚು ʻಅಮೃತ ಸರೋವರʼಗಳನ್ನು ನಿರ್ಮಿಸಲಾಯಿತು.
  • ಎರಡು ಲಕ್ಷಕ್ಕೂ ಹೆಚ್ಚು "ಅಮೃತ ಉದ್ಯಾನಗಳ" ನಿರ್ಮಾಣ ಪೂರ್ಣಗೊಂಡಿದೆ.
  • ಎರಡು ಕೋಟಿಗೂ ಹೆಚ್ಚು ಮರಗಳನ್ನು ನೆಡಲಾಯಿತು.
  • 16 ಕೋಟಿಗೂ ಹೆಚ್ಚು ಜನರು ತ್ರಿವರ್ಣ ಧ್ವಜದೊಂದಿಗೆ ತಮ್ಮ ಸೆಲ್ಫಿಗಳನ್ನು ಅಪ್‌ಲೋಡ್ ಮಾಡಿದ್ದಾರೆ.

4. ʻಅಮೃತ ಮಹೋತ್ಸವʼದ ಸಮಯದಲ್ಲಿ,

  • "ಕರ್ತವ್ಯ ಪಥ"ದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಯಿತು.
  • ದೇಶದ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಸಮರ್ಪಿತವಾದ ವಸ್ತುಸಂಗ್ರಹಾಲಯವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉದ್ಘಾಟಿಸಲಾಯಿತು.
  • ʻಶಾಂತಿನಿಕೇತನʼ ಮತ್ತು ಹೊಯ್ಸಳ ದೇವಾಲಯವನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ.
  • "ಸಾಹಿಬ್ಜಾದೆ" ಅವರ ನೆನಪಿಗಾಗಿ ʻವೀರ್ ಬಾಲ ದಿವಸ್ʼ ಆಚರಣೆಯನ್ನು ಘೋಷಿಸಲಾಯಿತು.
  • ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು "ಜನ್‌ಜಾತಿಯ ಗೌರವ್ ದಿವಸ್" ಎಂದು ಘೋಷಿಸಲಾಯಿತು.
  • ವಿಭಜನೆಯ ಭೀಕರತೆಯ ನೆನಪಿಗಾಗಿ ಆಗಸ್ಟ್ 14 ಅನ್ನು "ವಿಭಜನ್ ವಿಭೀಷಿಕ ಸ್ಮೃತಿ ದಿವಸ್" ಎಂದು ಘೋಷಿಸಲಾಯಿತು.

ಗೌರವಾನ್ವಿತ ಸದಸ್ಯರೇ,

5. ಕಳೆದ ವರ್ಷ ಭಾರತವು ಐತಿಹಾಸಿಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ, ನಮ್ಮ ದೇಶವಾಸಿಗಳ ಹೆಮ್ಮೆಯನ್ನು ಹೆಚ್ಚಿಸಿದ ಅನೇಕ ಕ್ಷಣಗಳಿವೆ.

  • ಗಂಭೀರ ಜಾಗತಿಕ ಬಿಕ್ಕಟ್ಟಿನ ನಡುವೆ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿತು, ಸತತ ಎರಡು ತ್ರೈಮಾಸಿಕಗಳಲ್ಲಿ ಶೇಕಡಾ 7.5 ಕ್ಕಿಂತ ಹೆಚ್ಚಿನ ಬೆಳವಣಿಗೆಯ ದರವನ್ನು ಸ್ಥಿರವಾಗಿ ಕಾಯ್ದುಕೊಂಡಿದೆ.
  • ಚಂದ್ರನ ದಕ್ಷಿಣ ಧ್ರುವದಲ್ಲಿ ತನ್ನ ಧ್ವಜವನ್ನು ಹಾರಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
  • ಭಾರತವು ʻಆದಿತ್ಯ ಮಿಷನ್ʼ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು ಮತ್ತು ಅದರ ಉಪಗ್ರಹವು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರವನ್ನು ತಲುಪಿತು.
  • ಐತಿಹಾಸಿಕ ʻಜಿ-20ʼ ಶೃಂಗಸಭೆಯ ಯಶಸ್ಸು ಭಾರತದ ಜಾಗತಿಕ ಸ್ಥಾನಮಾನವನ್ನು ಬಲಪಡಿಸಿದೆ.
  • ʻಏಷ್ಯನ್ ಗೇಮ್ಸ್ʼನಲ್ಲಿ ಭಾರತ ಮೊದಲ ಬಾರಿಗೆ 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದೆ.
  • ʻಪ್ಯಾರಾ ಏಷ್ಯನ್ ಕ್ರೀಡಾಕೂಟʼದಲ್ಲಿ ನಾವು 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದೇವೆ.
  • ಭಾರತವು ತನ್ನ ಅತಿದೊಡ್ಡ ಸಮುದ್ರ ಸೇತುವೆಯಾದ ʻಅಟಲ್ ಸೇತುʼವನ್ನು ಪಡೆದುಕೊಂಡಿದೆ.
  • ಭಾರತವು ತನ್ನ ಮೊದಲ ʻನಮೋ ಭಾರತ್ ರೈಲುʼ ಮತ್ತು ಮೊದಲ ʻಅಮೃತ್ ಭಾರತ್ ರೈಲುʼಗಳನ್ನು ಪಡೆದಿದೆ.
  • ಭಾರತವು ವಿಶ್ವದಲ್ಲೇ ಅತ್ಯಂತ ವೇಗದ 5ಜಿ ಸಂಪರ್ಕಜಾಲ ಹೊಂದಿರುವ ದೇಶವಾಗಿದೆ.
  • ʻಇಂಡಿಯನ್ ಏರ್‌ಲೈನ್ಸ್‌ʼ ಸಂಸ್ಥೆಯು ವಿಶ್ವದ ಅತಿದೊಡ್ಡ ವಿಮಾನ ಒಪ್ಪಂದವನ್ನು ಕಾರ್ಯಗತಗೊಳಿಸಿದೆ.
  • ಕಳೆದ ವರ್ಷ, ನನ್ನ ಸರ್ಕಾರವು ಸಮರೋಪಾದಿಯಲ್ಲಿ ಲಕ್ಷಾಂತರ ಯುವಕರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಿದೆ.

ಗೌರವಾನ್ವಿತ ಸದಸ್ಯರೇ,

6. ಕಳೆದ 12 ತಿಂಗಳುಗಳಲ್ಲಿ, ನನ್ನ ಸರ್ಕಾರವು ಹಲವಾರು ಪ್ರಮುಖ ಶಾಸನಗಳನ್ನು ಪರಿಚಯಿಸಿದೆ.

ಈ ಕಾನೂನುಗಳನ್ನು ಎಲ್ಲಾ ಸಂಸದರ ಸಹಕಾರದೊಂದಿಗೆ ಜಾರಿಗೆ ತರಲಾಗಿದೆ.

ಈ ಕಾನೂನುಗಳು 'ವಿಕಸಿತ ಭಾರತ'ದ ದೂರದೃಷ್ಟಿಯ ಸಾಕಾರಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತವೆ.

ಮೂರು ದಶಕಗಳ ಕಾಯುವಿಕೆಯ ನಂತರ ʻನಾರಿ ಶಕ್ತಿ ವಂದನ್ ಅಧಿನಿಯಮ್ʼ ಅನ್ನು ಜಾರಿಗೆ ತಂದಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.

ಇದು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳವನ್ನು ಖಚಿತಪಡಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ.

ಇದು ಮಹಿಳಾ ನೇತೃತ್ವದ ಅಭಿವೃದ್ಧಿಗಾಗಿ ನನ್ನ ಸರ್ಕಾರದ ಸಂಕಲ್ಪವನ್ನು ಬಲಪಡಿಸುತ್ತದೆ.

ʻಸುಧಾರಣೆʼ, ʻಕಾರ್ಯದಕ್ಷತೆʼ ಮತ್ತು ʻಪರಿವರ್ತನೆʼಯ ಬದ್ಧತೆಯನ್ನು ನನ್ನ ಸರ್ಕಾರ ನಿರಂತರವಾಗಿ ಎತ್ತಿಹಿಡಿದಿದೆ.

ಗುಲಾಮಗಿರಿಯ ಯುಗದಲ್ಲಿ ರೂಪುಗೊಂಡ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಈಗ ಇತಿಹಾಸದ ಪುಟಕ್ಕೆ ಸೇರಿದೆ. ಈಗ, ಶಿಕ್ಷೆಗಿಂತ ನ್ಯಾಯವು ಆದ್ಯತೆಯನ್ನು ಪಡೆದಿದೆ. 'ನ್ಯಾಯ ಮೊದಲು' ತತ್ವದ ಆಧಾರದ ಮೇಲೆ ರಾಷ್ಟ್ರವು ಹೊಸ ʻನ್ಯಾಯ ಸಂಹಿತೆʼಯನ್ನು ಪಡೆದುಕೊಂಡಿದೆ.

ʻಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆʼಯು ಡಿಜಿಟಲ್ ಕ್ಷೇತ್ರವನ್ನು ಹೆಚ್ಚು ಸುರಕ್ಷಿತವಾಗಿಸಿದೆ.

"ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಕಾಯ್ದೆ"ಯು ದೇಶದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸುತ್ತದೆ.

ʻಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಕಾಯ್ದೆʼಯು ಅಲ್ಲಿನ ಬುಡಕಟ್ಟು ಜನರಿಗೆ ಪ್ರಾತಿನಿಧ್ಯದ ಹಕ್ಕನ್ನು ಖಚಿತಪಡಿಸುತ್ತದೆ.

ಈ ಅವಧಿಯಲ್ಲಿ ʻಕೇಂದ್ರೀಯ ವಿಶ್ವವಿದ್ಯಾಲಯ ಕಾಯ್ದೆʼಗೆ ತಿದ್ದುಪಡಿ ತರಲಾಯಿತು. ಇದು ತೆಲಂಗಾಣದಲ್ಲಿ ʻಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲʼಯವನ್ನು ಸ್ಥಾಪಿಸಲು ದಾರಿ ಮಾಡಿಕೊಟ್ಟಿತು.

ಕಳೆದ ವರ್ಷ, ಇತರ 76 ಹಳೆಯ ಕಾನೂನುಗಳನ್ನು ಸಹ ರದ್ದುಪಡಿಸಲಾಯಿತು.

ಪರೀಕ್ಷೆಗಳಲ್ಲಿನ ಅಕ್ರಮಗಳ ಬಗ್ಗೆ ಯುವಕರ ಕಳಕಳಿಯ ಅರಿವು ನನ್ನ ಸರ್ಕಾರಕ್ಕಿದೆ.

ಆದ್ದರಿಂದ, ಅಂತಹ ದುಷ್ಕೃತ್ಯಗಳನ್ನು ಕಠಿಣವಾಗಿ ಎದುರಿಸಲು ಹೊಸ ಕಾನೂನನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

 

ಗೌರವಾನ್ವಿತ ಸದಸ್ಯರೇ,

7. ಯಾವುದೇ ರಾಷ್ಟ್ರವು ಹಿಂದಿನ ಸವಾಲುಗಳನ್ನು ಜಯಿಸಿದಾಗ ಮತ್ತು ಭವಿಷ್ಯಕ್ಕಾಗಿ ಗರಿಷ್ಠ ಶಕ್ತಿಯನ್ನು ಹೂಡಿಕೆ ಮಾಡಿದಾಗ ಮಾತ್ರ ಅದು ವೇಗವಾಗಿ ಪ್ರಗತಿ ಸಾಧಿಸಬಲ್ಲದು.

ಕಳೆದ 10 ವರ್ಷಗಳಲ್ಲಿ, ದೇಶದ ಜನರು ದಶಕಗಳಿಂದ ಕಾಯುತ್ತಿದ್ದ ಹಾಗೂ ರಾಷ್ಟ್ರೀಯ ಹಿತದೃಷ್ಟಿಯಿಂದ ಮುಖ್ಯವಾಗಿದ್ದ ಇಂತಹ ಹಲವಾರು ಕಾರ್ಯಗಳ ಸಾಧನೆಗೆ ಭಾರತ ಸಾಕ್ಷಿಯಾಗಿದೆ.

ಶತಮಾನಗಳಿಂದ ರಾಮ ಮಂದಿರ ನಿರ್ಮಾಣದ ಮಹತ್ವಾಕಾಂಕ್ಷೆ ಇತ್ತು. ಇಂದು ಅದು ಸಾಕಾರಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದುಹಾಕುವ ಬಗ್ಗೆ ಅನುಮಾನಗಳು ಇದ್ದವು. ಅವೆಲ್ಲವೂ ಈಗ ಇತಿಹಾಸ.

ಈ ಸಂಸತ್ತು 'ತ್ರಿವಳಿ ತಲಾಖ್' ವಿರುದ್ಧ ಕಠಿಣ ಕಾನೂನನ್ನು ಜಾರಿಗೆ ತಂದಿತು.

ಈ ಸಂಸತ್ತು ನಮ್ಮ ನೆರೆಯ ದೇಶಗಳಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾನೂನನ್ನು ಜಾರಿಗೆ ತಂದಿತು.

ನಾಲ್ಕು ದಶಕಗಳಿಂದ ಕಾಯುತ್ತಿದ್ದ ʻಸಮಾನ ಶ್ರೇಣಿ, ಸಮಾನ ಪಿಂಚಣಿʼ(ಒಆರ್‌ಒಪಿ) ಯೋಜನೆಯನ್ನು ನನ್ನ ಸರ್ಕಾರ ಜಾರಿಗೆ ತಂದಿದೆ. ʻಒಆರ್‌ಒಪಿʼ ಅನುಷ್ಠಾನದ ನಂತರ, ಮಾಜಿ ಸೈನಿಕರು ಇದುವರೆಗೂ ಸರಿಸುಮಾರು 1 ಲಕ್ಷ ಕೋಟಿ ರೂ. ಪಡೆದುಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಭಾರತದ ಮೂರೂ ರಕ್ಷಣಾ ಪಡೆಗಳಿಗೆ ಮುಖ್ಯಸ್ಥರೊಬ್ಬರನ್ನು ನೇಮಿಸಲಾಗಿದೆ.

 

ಗೌರವಾನ್ವಿತ ಸದಸ್ಯರೇ,

8. ಉತ್ಕಲ್ಮಣಿ ಪಂಡಿತ್ ಗೋಪಬಂಧು ದಾಸ್ ಅವರ ಅಮರ ಸಾಲುಗಳು ಅಪರಿಮಿತ ದೇಶಭಕ್ತಿಯ ಭಾವನೆಯನ್ನು ಉದ್ದೀಪಿಸುತ್ತವೆ. ಅವರು ಹೇಳುತ್ತಾರೆ:

मिशु मोर देह देश माटिरे,

देशबासी चालि जाआन्तु पिठिरे।

देशर स्वराज्य-पथे जेते गाड़,

पूरु तहिं पड़ि मोर मांस हाड़।

ಅಂದರೆ,

ನನ್ನ ದೇಹವು ಈ ದೇಶದ ಮಣ್ಣಿನಲ್ಲಿ ಕರಗಲಿ,

ದೇಶವಾಸಿಗಳು ನನ್ನ ಬೆನ್ನಿನ ಮೇಲೆ ಸವಾರಿ ಮಾಡಿ ಹೋಗಲಿ.

ದೇಶದ ಸ್ವಾತಂತ್ರ್ಯದ ಹಾದಿಯಲ್ಲಿ ಇರುವ ಎಲ್ಲಾ ಗುಂಡಿಗಳು,

ಅವೆಲ್ಲವೂ ನನ್ನ ಮಾಂಸ ಮತ್ತು ಮೂಳೆಗಳಿಂದ ತುಂಬಿರಲಿ.

 

ಈ ಸಾಲುಗಳಲ್ಲಿ ನಾವು ಕರ್ತವ್ಯದ ಪರಾಕಾಷ್ಠೆ ಮತ್ತು ರಾಷ್ಟ್ರ-ಮೊದಲೆಂಬ ಆದರ್ಶವನ್ನು ನೋಡಬಹುದು.

 

9. ಇಂದು ಗೋಚರಿಸುತ್ತಿರುವ ಸಾಧನೆಗಳು ಕಳೆದ 10 ವರ್ಷಗಳ ಪ್ರಯತ್ನಗಳ ಫಲಿತಾಂಶವಾಗಿದೆ.

ಬಾಲ್ಯದಿಂದಲೂ ನಾವು 'ಗರೀಬಿ ಹಟಾವೋ' ಘೋಷಣೆಯನ್ನು ಕೇಳುತ್ತಿದ್ದೇವೆ. ಈಗ, ನಮ್ಮ ಜೀವನದಲ್ಲಿ ಮೊದಲ ಬಾರಿಗೆ, ನಾವು ಬೃಹತ್ ಪ್ರಮಾಣದಲ್ಲಿ ಬಡತನದ ನಿರ್ಮೂಲನೆಗೆ ಸಾಕ್ಷಿಯಾಗುತ್ತಿದ್ದೇವೆ.

ʻನೀತಿ ಆಯೋಗʼದ ಪ್ರಕಾರ, ನನ್ನ ಸರ್ಕಾರದ ಕಳೆದ ಒಂದು ದಶಕದ ಆಡಳಿತಾವಧಿಯಲ್ಲಿ ಸುಮಾರು 25 ಕೋಟಿ ದೇಶವಾಸಿಗಳು ಬಡತನದ ಸಂಕೋಲೆಯಿಂದ ಮುಕ್ತರಾಗಿದ್ದಾರೆ.

ಇದು ಬಡವರಲ್ಲಿ ಅಗಾಧ ವಿಶ್ವಾಸವನ್ನು ತುಂಬುವ ವಿಷಯವಾಗಿದೆ.

25 ಕೋಟಿ ಜನರ ಬಡತನವನ್ನು ನಿವಾರಿಸಲು ಸಾಧ್ಯವಾದರೆ, ಉಳಿದವರ ಬಡತನವನ್ನು ಸಹ ನಿವಾರಿಸಬಹುದು.

10. ನಾವು ಇಂದು ಆರ್ಥಿಕತೆಯ ವಿವಿಧ ಆಯಾಮಗಳನ್ನು ನೋಡಿದರೆ, ಭಾರತವು ಸರಿಯಾದ ದಿಕ್ಕಿನಲ್ಲಿ ಮುಂದುವರಿಯುತ್ತಿದೆ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂಬ ನಮ್ಮ ವಿಶ್ವಾಸ ಹೆಚ್ಚುತ್ತದೆ.

ಕಳೆದ 10 ವರ್ಷಗಳಲ್ಲಿ:

  • ಭಾರತವು "ದುರ್ಬಲ ಐದನೆಯ" ಆರ್ಥಿಕತೆಯ ಸ್ಥಾನದಿಂದ "ಅಗ್ರ ಐದನೆಯ" ಆರ್ಥಿಕತೆಯಾಗಿ ರೂಪಾಂತರಗೊಂಡಿರುವುದನ್ನು ನಾವು ನೋಡಿದ್ದೇವೆ.
  • ಭಾರತದ ರಫ್ತು ಸುಮಾರು 450 ಶತಕೋಟಿ  ಡಾಲರ್‌ನಿಂದ 775 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.
  • ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಹರಿವು ದ್ವಿಗುಣಗೊಂಡಿದೆ.
  • ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟವು 4 ಪಟ್ಟು ಹೆಚ್ಚಾಗಿದೆ.
  • ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಸುಮಾರು 3.25 ಕೋಟಿಯಿಂದ ಸುಮಾರು 8.25 ಕೋಟಿಗೆ ಏರಿದೆ.

ಒಂದು ದಶಕದ ಹಿಂದೆ:

  • ದೇಶದಲ್ಲಿ ಕೆಲವೇ ನೂರು ನವೋದ್ಯಮಗಳಿದ್ದವು, ಅವುಗಳ ಸಂಖ್ಯೆ ಇಂದು ಒಂದು ಲಕ್ಷಕ್ಕೂ ಅಧಿಕ ಮಟ್ಟಕ್ಕೆ ಬೆಳೆದಿವೆ.
  • ಒಂದು ವರ್ಷದಲ್ಲಿ 94 ಸಾವಿರ ಕಂಪನಿಗಳು ನೋಂದಾವಣಿಯಾಗುತ್ತಿದ್ದವು. ಈಗ ಒಂದು ವರ್ಷದಲ್ಲಿ ನೋಂದಣಿಯಾಗುವ ಕಂಪನಿಗಳ ಸಂಖ್ಯೆ 1 ಲಕ್ಷ 60 ಸಾವಿರಕ್ಕೆ ಏರಿದೆ.
  • 2017ರ ಡಿಸೆಂಬರ್‌ನಲ್ಲಿ 98 ಲಕ್ಷ ಜನರು ʻಜಿಎಸ್‌ಟಿʼ ಪಾವತಿಸುತ್ತಿದ್ದರು, ಇಂದು ಅವರ ಸಂಖ್ಯೆ 1 ಕೋಟಿ 40 ಲಕ್ಷಕ್ಕೆ ಏರಿದೆ.
  • 2014ಕ್ಕೂ ಹಿಂದಿನ 10 ವರ್ಷಗಳಲ್ಲಿ ಸುಮಾರು 13 ಕೋಟಿ ವಾಹನಗಳು ಮಾರಾಟಗೊಂಡಿವೆ. ಕಳೆದ 10 ವರ್ಷಗಳಲ್ಲಿ ದೇಶವಾಸಿಗಳು 21 ಕೋಟಿಗೂ ಹೆಚ್ಚು ವಾಹನಗಳನ್ನು ಖರೀದಿಸಿದ್ದಾರೆ.
  • 2014-15ರಲ್ಲಿ ಸುಮಾರು 2 ಸಾವಿರ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಾಗಿದೆ. ಆದರೆ, 2023-24ರ ಡಿಸೆಂಬರ್ ತಿಂಗಳವರೆಗೆ ಸುಮಾರು 12 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಾಗಿದೆ.

ಗೌರವಾನ್ವಿತ ಸದಸ್ಯರೇ,

11. ಕಳೆದ ದಶಕದಲ್ಲಿ, ನನ್ನ ಸರ್ಕಾರವು ಉತ್ತಮ ಆಡಳಿತ ಮತ್ತು ಪಾರದರ್ಶಕತೆಯನ್ನು ಪ್ರತಿಯೊಂದು ಸಂಸ್ಥೆಯ ಮುಖ್ಯ ಅಡಿಪಾಯವನ್ನಾಗಿ ಮಾಡಿದೆ.

ಇದರ ಪರಿಣಾಮವಾಗಿ, ನಾವು ಪ್ರಮುಖ ಆರ್ಥಿಕ ಸುಧಾರಣೆಗಳಿಗೆ ಸಾಕ್ಷಿಯಾಗಿದ್ದೇವೆ.

  • ಈ ಅವಧಿಯಲ್ಲಿ, ದೇಶದಲ್ಲಿ ʻದಿವಾಳಿತನ ಸಂಹಿತೆʼಯನ್ನು ಜಾರಿಗೆ ತರಲಾಯಿತು.
  • ದೇಶವು ಈಗ ʻಜಿಎಸ್‌ಟಿʼ ರೂಪದಲ್ಲಿ ʻಒಂದು ದೇಶ-ಒಂದು ತೆರಿಗೆʼ ಕಾನೂನನ್ನು ಹೊಂದಿದೆ.
  • ನನ್ನ ಸರ್ಕಾರವು ಸಮಗ್ರ-ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಿದೆ.
  • 10 ವರ್ಷಗಳಲ್ಲಿ ಬಂಡವಾಳ ವೆಚ್ಚ(ಕ್ಯಾಪೆಕ್ಸ್‌) 5 ಪಟ್ಟು ಏರಿಕೆಯಾಗಿ 10 ಲಕ್ಷ ಕೋಟಿ ರೂ.ಗೆ ತಲುಪಿದೆ. ವಿತ್ತೀಯ ಕೊರತೆಯೂ ನಿಯಂತ್ರಣದಲ್ಲಿದೆ.
  • ಇಂದು, ನಾವು 600 ಶತಕೋಟಿ ಅಮೆರಿಕನ್‌ ಡಾಲರ್ಗಳಿಗಿಂತ ಅಧಿಕ ವಿದೇಶಿ ವಿನಿಮಯ ಮೀಸಲು ಹೊಂದಿದ್ದೇವೆ.
  • ಈ ಹಿಂದೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು ಇಂದು ವಿಶ್ವದ ಪ್ರಬಲ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ಒಂದೆನಿಸಿದೆ.
  • ಈ ಹಿಂದೆ ಎರಡಂಕಿಯಲ್ಲಿದ್ದ ಬ್ಯಾಂಕುಗಳ ಅನುತ್ಪಾದಕ ಸಾಲಗಳು ಇಂದು ಕೇವಲ 4 ಪ್ರತಿಶತದಷ್ಟಿವೆ.
  • ʻಮೇಕ್ ಇನ್ ಇಂಡಿಯಾʼ ಮತ್ತು ʻಆತ್ಮನಿರ್ಭರ ಭಾರತʼ ಅಭಿಯಾನಗಳು ನಮ್ಮ ಶಕ್ತಿಯಾಗಿವೆ.
  • ಇಂದು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿದೆ.
  • ಕಳೆದ ದಶಕದಲ್ಲಿ, ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದೆ.
  • ಕೆಲವು ವರ್ಷಗಳ ಹಿಂದೆ, ಭಾರತವು ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿತ್ತು, ಇಂದು ಭಾರತವು ʻಮೇಡ್ ಇನ್ ಇಂಡಿಯಾʼ ಆಟಿಕೆಗಳನ್ನು ರಫ್ತು ಮಾಡುತ್ತಿದೆ.
  • ಭಾರತದ ರಕ್ಷಣಾ ಉತ್ಪಾದನೆ ಒಂದು ಲಕ್ಷ ಕೋಟಿ ರೂಪಾಯಿ ದಾಟಿದೆ.
  • ಇಂದು, ದೇಶದ ದೇಶೀಯ ವಿಮಾನವಾಹಕ ನೌಕೆ ʻಐಎನ್ಎಸ್ ವಿಕ್ರಾಂತ್ʼ ಅನ್ನು ನೋಡಿ ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡುತ್ತಾರೆ.
  • ಯುದ್ಧ ವಿಮಾನ ʻತೇಜಸ್ʼ ನಮ್ಮ ವಾಯುಪಡೆಯ ಶಕ್ತಿಯಾಗುತ್ತಿದೆ.
  • ʻಸಿ -295ʼ ಸಾರಿಗೆ ವಿಮಾನಗಳ ಉತ್ಪಾದನೆ ಭಾರತದಲ್ಲಿ ನಡೆಯಲಿದೆ.
  • ಆಧುನಿಕ ವಿಮಾನ ಎಂಜಿನ್‌ಗಳನ್ನು ಸಹ ಭಾರತದಲ್ಲಿ ತಯಾರಿಸಲಾಗುವುದು.
  • ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ʻರಕ್ಷಣಾ ಕಾರಿಡಾರ್ʼಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
  • ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ನನ್ನ ಸರ್ಕಾರ ಖಾತರಿಪಡಿಸಿದೆ.
  • ನಮ್ಮ ಸರ್ಕಾರವು ಯುವ ನವೋದ್ಯಮಗಳಿಗೆ ಬಾಹ್ಯಾಕಾಶ ಕ್ಷೇತ್ರದ ಪ್ರವೇಶವನ್ನು ಮುಕ್ತಗೊಳಿಸಿದೆ.

ಗೌರವಾನ್ವಿತ ಸದಸ್ಯರೇ,

12. ನನ್ನ ಸರ್ಕಾರವು ಸಂಪತ್ತಿನ ಸೃಷ್ಟಿಕರ್ತರ ಕೊಡುಗೆಯನ್ನು ಗುರುತಿಸುತ್ತದೆ ಮತ್ತು ಭಾರತದ ಖಾಸಗಿ ವಲಯದ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿದೆ.

ಭಾರತದಲ್ಲಿ ವ್ಯಾಪಾರ ಮಾಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ ಮತ್ತು ಸರ್ಕಾರವು ಈ ಗುರಿಯತ್ತ ನಿರಂತರವಾಗಿ ಕೆಲಸ ಮಾಡುತ್ತಿದೆ.

  • ಸುಗಮವಾಗಿ ವ್ಯಾಪಾರ-ವಹಿವಾಟು ನಡೆಸುವಲ್ಲಿ ಸ್ಥಿರವಾದ ಸುಧಾರಣೆ ಕಂಡುಬಂದಿದೆ.
  • ಕಳೆದ ಕೆಲವು ವರ್ಷಗಳಲ್ಲಿ 40,000ಕ್ಕೂ ಹೆಚ್ಚು ಅನುಸರಣೆಗಳನ್ನು ಕೈಬಿಡಲಾಗಿದೆ ಅಥವಾ ಸರಳೀಕರಿಸಲಾಗಿದೆ.
  • ʻಕಂಪನಿಗಳ ಕಾಯ್ದೆʼ ಮತ್ತು ʻಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯ್ದೆʼಯ 63 ನಿಬಂಧನೆಗಳನ್ನು ಕ್ರಿಮಿನಲ್ ಅಪರಾಧಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.
  • ʻಜನ ವಿಶ್ವಾಸ್ ಕಾಯ್ದೆʼಯು ವಿವಿಧ ಕಾನೂನುಗಳ ಅಡಿಯಲ್ಲಿ 183 ನಿಬಂಧನೆಗಳನ್ನು ನಿರಪರಾಧಿಕರಣಗೊಳಿಸಿದೆ.
  • ನ್ಯಾಯಾಲಯದ ಹೊರಗೆ ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ʻಮಧ್ಯಸ್ಥಿಕೆ ಕಾನೂನುʼ ಜಾರಿಗೆ ತರಲಾಗಿದೆ.
  • ಈ ಹಿಂದೆ 600 ದಿನಗಳನ್ನು ತೆಗೆದುಕೊಳ್ಳುತ್ತಿದ್ದ ಅರಣ್ಯ ಮತ್ತು ಪರಿಸರ ಅನುಮತಿಗಳು ಈಗ 75 ದಿನಗಳಿಗಿಂತ ಕಡಿಮೆ ಸಮಯದಲ್ಲೇ ಅನುಮೋದನೆಗೊಳ್ಳುತ್ತವೆ.
  • ʻಮುಖರಹಿತ ಮೌಲ್ಯಮಾಪನ ಯೋಜನೆʼಯು ತೆರಿಗೆ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತಂದಿದೆ.

ಗೌರವಾನ್ವಿತ ಸದಸ್ಯರೇ,

13. ನಮ್ಮ ʻಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆʼಗಳ(ಎಂಎಸ್ಎಂಇ) ವಲಯವೂ ಸುಧಾರಣೆಗಳಿಂದ ಅಪಾರ ಲಾಭವನ್ನು ಪಡೆಯುತ್ತಿದೆ.

ನಿಮಗೆ ತಿಳಿದಿರುವಂತೆ, ಇಂದು, ಕೋಟ್ಯಂತರ ನಾಗರಿಕರು ʻಎಂಎಸ್ಎಂಇʼಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

`ಎಂಎಸ್ಎಂಇ’ಗಳು ಮತ್ತು ಸಣ್ಣ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ.

  • ʻಎಂಎಸ್ಎಂಇʼಗಳ ವ್ಯಾಖ್ಯಾನವನ್ನು ವಿಸ್ತರಿಸಲಾಗಿದೆ.
  • ಹೂಡಿಕೆ ಮತ್ತು ವಹಿವಾಟನ್ನು ಹೊಸ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ.
  • ಪ್ರಸ್ತುತ, ಸರಿಸುಮಾರು 3.5 ಕೋಟಿ ʻಎಂಎಸ್ಎಂಇʼಗಳು ʻಉದ್ಯಮ್‌ʼ ಮತ್ತು ʻಉದ್ಯಮ್‌ ಅಸಿಸ್ಟ್‌ʼ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿವೆ.
  • ʻಸಾಲ ಖಾತರಿ ಯೋಜನೆʼ ಅಡಿಯಲ್ಲಿ ʻಎಂಎಸ್ಎಂಇʼಗಳಿಗೆ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 5 ಲಕ್ಷ ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಲಾಗಿದೆ.
  • ಇದು 2014ರ ಹಿಂದಿನ ದಶಕದಲ್ಲಿ ಒದಗಿಸಲಾದ ಮೊತ್ತಕ್ಕಿಂತ ಆರು ಪಟ್ಟು ಹೆಚ್ಚಾಗಿದೆ.

ಗೌರವಾನ್ವಿತ ಸದಸ್ಯರೇ,

14. ನನ್ನ ಸರ್ಕಾರದ ಮತ್ತೊಂದು ಮಹತ್ವದ ಸುಧಾರಣೆಯೆಂದರೆ ʻಡಿಜಿಟಲ್ ಇಂಡಿಯಾʼದ ಸೃಷ್ಟಿ. ʻಡಿಜಿಟಲ್ ಇಂಡಿಯಾʼ ಭಾರತದಲ್ಲಿ ಜೀವನ ಮತ್ತು ವ್ಯವಹಾರವನ್ನು ಹೆಚ್ಚು ಸುಲಭಗೊಳಿಸಿದೆ.

ಇಂದು, ಇಡೀ ಜಗತ್ತು ಇದನ್ನು ಭಾರತದ ದೊಡ್ಡ ಸಾಧನೆ ಎಂದು ಒಪ್ಪಿಕೊಂಡಿದೆ. ಅಭಿವೃದ್ಧಿ ಹೊಂದಿದ ದೇಶಗಳು ಸಹ ಭಾರತದಂತಹ ಡಿಜಿಟಲ್ ವ್ಯವಸ್ಥೆಯನ್ನು ಹೊಂದಿಲ್ಲ.

ಹಳ್ಳಿಗಳಲ್ಲಿಯೂ ಸಹ, ಬಹುತೇಕ ಖರೀದಿ ಮತ್ತು ಮಾರಾಟವನ್ನು ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ ಎಂಬುದು ಕೆಲವು ಜನರ ಕಲ್ಪನೆಗೂ ಮೀರಿದ ಸಂಗತಿಯಾಗಿದೆ.

  • ಇಂದು, ವಿಶ್ವದ ಒಟ್ಟು ನೈಜ-ಸಮಯದ ಡಿಜಿಟಲ್ ವಹಿವಾಟಿನ 46 ಪ್ರತಿಶತ ಭಾರತದಲ್ಲಿ ನಡೆಯುತ್ತದೆ.
  • ಕಳೆದ ತಿಂಗಳು ʻಯುಪಿಐʼ ಮೂಲಕ ದಾಖಲೆಯ 1200 ಕೋಟಿ ವಹಿವಾಟುಗಳು ನಡೆದಿವೆ.
  • ಈ ವಹಿವಾಟಿನ ಒಟ್ಟು ಮೌಲ್ಯವು ದಾಖಲೆಯ 18 ಲಕ್ಷ ಕೋಟಿ ರೂಪಾಯಿಗಳು.
  • ವಿಶ್ವದ ಇತರ ದೇಶಗಳು ಸಹ ಈಗ ʻಯುಪಿಐʼ ಮೂಲಕ ವಹಿವಾಟಿನ ಸೌಲಭ್ಯವನ್ನು ಒದಗಿಸುತ್ತಿವೆ.
  • ಬ್ಯಾಂಕಿಂಗ್ ವ್ಯವಹಾರವನ್ನು ʻಡಿಜಿಟಲ್ ಇಂಡಿಯಾʼ ಹೆಚ್ಚು ಅನುಕೂಲಕರವಾಗಿಸಿದೆ ಮತ್ತು ಸಾಲ ವಿತರಣೆಯನ್ನು ಸುಲಭಗೊಳಿಸಿದೆ.
  • ʻಜನ್‌ಧನ್-ಆಧಾರ್-ಮೊಬೈಲ್ʼ(ಜೆಎಎಂ) ಎಂಬ ತ್ರಿವಳಿ ಶಕ್ತಿಯು ಭ್ರಷ್ಟಾಚಾರವನ್ನು ನಿಗ್ರಹಿಸಲು ಸಹಾಯ ಮಾಡಿದೆ.
  • ನನ್ನ ಸರ್ಕಾರ ಈವರೆಗೆ ʻಫಲಾನುಭವಿಗಳಿಗೆ ನೇರ ವರ್ಗಾವಣೆʼ(ಡಿಬಿಟಿ) ಮೂಲಕ 34 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ.
  • ʻಜನ್‌ಧನ್-ಆಧಾರ್-ಮೊಬೈಲ್ʼಗೆ(ಜೆಎಎಂ) ನೆರವಿನಿಂದ ಸುಮಾರು 10 ಕೋಟಿ ನಕಲಿ ಫಲಾನುಭವಿಗಳನ್ನು ವ್ಯವಸ್ಥೆಯಿಂದ ಹೊರಹಾಕಲಾಗಿದೆ.
  • ಇದು 2.75 ಲಕ್ಷ ಕೋಟಿ ರೂಪಾಯಿಗಳನ್ನು ಫಲಾನುಭವಿಗಳಲ್ಲದವರ ಕೈ ಸೇರದಂತೆ ತಡೆಯಲು ಸಹಾಯ ಮಾಡಿದೆ.
  • ʻಡಿಜಿಲಾಕರ್ʼ ಸೌಲಭ್ಯವು ಜೀವನವನ್ನು ಸುಲಭಗೊಳಿಸುತ್ತಿದೆ. ಇಲ್ಲಿಯವರೆಗೆ 6 ಶತಕೋಟಿಗಿಂತಲೂ ಹೆಚ್ಚು ದಾಖಲೆಗಳನ್ನು ಅದರ ಬಳಕೆದಾರರಿಗೆ ಒದಗಿಸಲಾಗಿದೆ.
  • ʻಆಯುಷ್ಮಾನ್ ಭಾರತ್ ಆರೋಗ್ಯ ಖಾತೆʼಯಡಿ ಸುಮಾರು 53 ಕೋಟಿ ಜನರ ʻಡಿಜಿಟಲ್ ಆರೋಗ್ಯ ಐಡಿʼಗಳನ್ನು ಸೃಜಿಸಲಾಗಿದೆ.

ಗೌರವಾನ್ವಿತ ಸದಸ್ಯರೇ,

15. ಡಿಜಿಟಲ್ ಜೊತೆಗೆ, ಭೌತಿಕ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆ ಮಾಡಲಾಗಿದೆ. ಇಂದು, ಪ್ರತಿಯೊಬ್ಬ ಭಾರತೀಯನ ಕನಸಾಗಿದ್ದ ಮೂಲಸೌಕರ್ಯಗಳನ್ನು ಭಾರತದಲ್ಲಿ ನಿರ್ಮಿಸಲಾಗುತ್ತಿದೆ.

ಕಳೆದ 10 ವರ್ಷಗಳಲ್ಲಿ:

  • ಹಳ್ಳಿಗಳಲ್ಲಿ ಸುಮಾರು 3.75 ಲಕ್ಷ ಕಿಲೋಮೀಟರ್ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.
  • ರಾಷ್ಟ್ರೀಯ ಹೆದ್ದಾರಿಗಳ ಉದ್ದವು 90 ಸಾವಿರ ಕಿಲೋಮೀಟರ್‌ನಿಂದ 1 ಲಕ್ಷ 46 ಸಾವಿರ ಕಿಲೋಮೀಟರ್‌ಗೆ ಹೆಚ್ಚಳಗೊಂಡಿದೆ.
  • ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳ ಉದ್ದ 2.5 ಪಟ್ಟು ಹೆಚ್ಚಾಗಿದೆ.
  • ʻಹೈಸ್ಪೀಡ್ ಕಾರಿಡಾರ್‌ʼನ ಉದ್ದವು ಮೊದಲು 500 ಕಿಲೋಮೀಟರ್ ಇದ್ದದ್ದು, ಈಗ 4 ಸಾವಿರ ಕಿಲೋಮೀಟರ್ ತಲುಪಿದೆ.
  • ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 149ಕ್ಕೆ ದ್ವಿಗುಣಗೊಂಡಿದೆ.
  • ದೇಶದ ಪ್ರಮುಖ ಬಂದರುಗಳಲ್ಲಿ ಸರಕು ನಿರ್ವಹಣಾ ಸಾಮರ್ಥ್ಯ ದ್ವಿಗುಣಗೊಂಡಿದೆ.
  • ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ 14 ಪಟ್ಟು ಹೆಚ್ಚಾಗಿದೆ.
  • ದೇಶದ ಸುಮಾರು 2 ಲಕ್ಷ ಗ್ರಾಮ ಪಂಚಾಯಿತಿಗಳನ್ನು ʻಆಪ್ಟಿಕಲ್ ಫೈಬರ್ʼ ಮೂಲಕ ಸಂಪರ್ಕಿಸಲಾಗಿದೆ.
  • ಹಳ್ಳಿಗಳಲ್ಲಿ 4 ಲಕ್ಷಕ್ಕೂ ಹೆಚ್ಚು ʻಸಾಮಾನ್ಯ ಸೇವಾ ಕೇಂದ್ರʼಗಳನ್ನು ತೆರೆಯಲಾಗಿದೆ. ಇವು ಉದ್ಯೋಗದ ಪ್ರಮುಖ ಮೂಲವಾಗಿ ಮಾರ್ಪಟ್ಟಿವೆ.
  • ದೇಶದಲ್ಲಿ 10,000 ಕಿಲೋಮೀಟರ್ ಅನಿಲ ಕೊಳವೆ ಮಾರ್ಗವನ್ನು ಅಳವಡಿಸಲಾಗಿದೆ.
  • ʻಒಂದು ರಾಷ್ಟ್ರ-ಒಂದು ಪವರ್‌ಗ್ರಿಡ್ʼ ದೇಶದಲ್ಲಿ ವಿದ್ಯುತ್ ಪ್ರಸರಣವನ್ನು ಸುಧಾರಿಸಿದೆ.
  • ʻಒಂದು ರಾಷ್ಟ್ರ-ಒಂದು ಅನಿಲಗ್ರಿಡ್ʼ ಅನಿಲ ಆಧಾರಿತ ಆರ್ಥಿಕತೆಯನ್ನು ಹೆಚ್ಚಿಸುತ್ತಿದೆ.
  • ಕೇವಲ 5 ನಗರಗಳಿಗೆ ಸೀಮಿತವಾಗಿದ್ದ ಮೆಟ್ರೋ ಸೌಲಭ್ಯವು ಈಗ 20 ನಗರಗಳಿಗೆ ವ್ಯಾಪಿಸಿದೆ.
  • 25 ಸಾವಿರ ಕಿಲೋಮೀಟರ್‌ಗಿಂತ ಹೆಚ್ಚು ರೈಲ್ವೆ ಹಳಿಗಳನ್ನು ಹಾಕಲಾಗಿದೆ. ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ರೈಲ್ವೆ ಹಳಿಗಳ ಒಟ್ಟು ಉದ್ದಕ್ಕಿಂತ ಹೆಚ್ಚಾಗಿದೆ.
  • ಭಾರತವು ರೈಲ್ವೆಯ 100% ವಿದ್ಯುದ್ದೀಕರಣಕ್ಕೆ ಬಹಳ ಹತ್ತಿರದಲ್ಲಿದೆ.
  • ಈ ಅವಧಿಯಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ʻಸೆಮಿ ಹೈಸ್ಪೀಡ್ ರೈಲುʼಗಳನ್ನು ಪ್ರಾರಂಭಿಸಲಾಗಿದೆ.
  • ಇಂದು ʻವಂದೇ ಭಾರತ್ʼ ರೈಲುಗಳು 39ಕ್ಕೂ ಹೆಚ್ಚು ಮಾರ್ಗಗಳಲ್ಲಿ ಚಲಿಸುತ್ತಿವೆ.
  • ʻಅಮೃತ್ ಭಾರತ್ ಸ್ಟೇಷನ್ʼ ಯೋಜನೆಯಡಿ 1300ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

16. 'ವಿಕಸಿತ ಭಾರತ'ದ ಭವ್ಯ ಕಟ್ಟಡವನ್ನು 4 ಬಲವಾದ ಆಧಾರ ಸ್ತಂಭಗಳ ಮೇಲೆ ನಿರ್ಮಿಸುವಲ್ಲಿ ನನ್ನ ಸರ್ಕಾರ ನಂಬಿಕೆ ಇರಿಸಿದೆ.

 ಈ ಆಧಾರ ಸ್ತಂಭಗಳೆಂದರೆ - ಯುವ ಶಕ್ತಿ, ಮಹಿಳಾ ಶಕ್ತಿ, ರೈತರು ಮತ್ತು ಬಡವರು.

ಅವರ ಪರಿಸ್ಥಿತಿ ಮತ್ತು ಕನಸುಗಳು ದೇಶದ ಪ್ರತಿಯೊಂದು ಭಾಗ ಹಾಗೂ ಸಮಾಜದ ಪ್ರತಿಯೊಂದು ವರ್ಗದಲ್ಲೂ ಒಂದೇ ಆಗಿರುತ್ತವೆ.

ಆದ್ದರಿಂದ ಈ ನಾಲ್ಕು ಸ್ತಂಭಗಳನ್ನು ಸಬಲೀಕರಣಗೊಳಿಸಲು ನನ್ನ ಸರ್ಕಾರ ದಣಿವರಿಯದೆ ಕೆಲಸ ಮಾಡುತ್ತಿದೆ.

ಈ ಸ್ತಂಭಗಳನ್ನು ಸಬಲೀಕರಣಗೊಳಿಸಲು ನನ್ನ ಸರ್ಕಾರ ತೆರಿಗೆ ಆದಾಯದ ಗಮನಾರ್ಹ ಭಾಗವನ್ನು ಖರ್ಚು ಮಾಡಿದೆ.

  • 4 ಕೋಟಿ 10 ಲಕ್ಷ ಬಡ ಕುಟುಂಬಗಳು ಸ್ವಂತ ಶಾಶ್ವತ ಮನೆಗಳನ್ನು ಪಡೆದಿವೆ. ಈ ಉಪಕ್ರಮಕ್ಕಾಗಿ ಸುಮಾರು 6 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
  • ಇದೇ ಮೊದಲ ಬಾರಿಗೆ ಸುಮಾರು 11 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಮೂಲಕ ಮನೆಗೆ ನೀರು ಪೂರೈಸಲಾಗಿದೆ.
  • ಇದಕ್ಕಾಗಿ ಸುಮಾರು 4 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ.
  • ಈಗಾಗಲೇ 10 ಕೋಟಿ ʻಉಜ್ವಲʼ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ.
  • ಈ ಫಲಾನುಭವಿ ಸಹೋದರಿಯರಿಗೆ ಅತ್ಯಂತ ಅಗ್ಗದ ದರದಲ್ಲಿ ಅಡುಗೆ ಅನಿಲವನ್ನು ಸಹ ನೀಡಲಾಗುತ್ತಿದೆ.
  • ಈ ಯೋಜನೆಗಾಗಿ ಸರ್ಕಾರ ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
  • ಕೋವಿಡ್‌ ಸಾಂಕ್ರಾಮಿಕದ ಸಮಯದಿಂದ 80 ಕೋಟಿ ದೇಶವಾಸಿಗಳಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ.
  • ಈ ಸೌಲಭ್ಯವನ್ನು ಈಗ ಇನ್ನೂ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ.
  • ಇದಕ್ಕಾಗಿ ಹೆಚ್ಚುವರಿಯಾಗಿ 11 ಲಕ್ಷ ಕೋಟಿ ರೂ. ಖರ್ಚಾಗಲಿದೆ.
  • ಪ್ರತಿಯೊಂದು ಯೋಜನೆಯೂ ತ್ವರಿತವಾಗಿ ಪರಿಪೂರ್ಣತೆಯನ್ನು ಸಾಧಿಸುವಂತೆ, ಯಾವುದೇ ಅರ್ಹ ವ್ಯಕ್ತಿ ಅದರ ಪ್ರಯೋಜನದಿಂದ ವಂಚಿತರಾಗದಂತೆ ಖಚಿತಪಡಿಸಿಕೊಳ್ಳಲು ನನ್ನ ಸರ್ಕಾರ ಪ್ರಯತ್ನಿಸುತ್ತಿದೆ.
  • ಈ ಉದ್ದೇಶದೊಂದಿಗೆ ನವೆಂಬರ್ 15ರಿಂದ ʻವಿಕಸಿತ ಭಾರತʼ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಇಲ್ಲಿಯವರೆಗೆ, ಸುಮಾರು 19 ಕೋಟಿ ನಾಗರಿಕರು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಗೌರವಾನ್ವಿತ ಸದಸ್ಯರೇ,

17. ಕಳೆದ ಕೆಲವು ವರ್ಷಗಳಲ್ಲಿ, ಜಗತ್ತು ಎರಡು ಪ್ರಮುಖ ಯುದ್ಧಗಳಿಗೆ ಸಾಕ್ಷಿಯಾಗಿದೆ ಮತ್ತು ಕೋವಿಡ್‌ನಂತಹ ಜಾಗತಿಕ ಸಾಂಕ್ರಾಮಿಕವನ್ನೂ ಎದುರಿಸಿದೆ.

ಇಂತಹ ಜಾಗತಿಕ ಬಿಕ್ಕಟ್ಟಿನ ಹೊರತಾಗಿಯೂ, ನನ್ನ ಸರ್ಕಾರವು ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದೆ, ನಮ್ಮ ದೇಶವಾಸಿಗಳ ಮೇಲೆ ಹೆಚ್ಚುವರಿ ಹೊರೆಯನ್ನು ತಡೆಗಟ್ಟಿದೆ.

2014ಕ್ಕೆ ಮುಂಚಿನ 10 ವರ್ಷಗಳಲ್ಲಿ ಸರಾಸರಿ ಹಣದುಬ್ಬರ ದರ ಶೇ.8ರಷ್ಟಿತ್ತು. ಆದಾಗ್ಯೂ, ಕಳೆದ ದಶಕದಲ್ಲಿ ಸರಾಸರಿ ಹಣದುಬ್ಬರ ದರವನ್ನು ಶೇಕಡಾ 5ರ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ.

ಸಾಮಾನ್ಯ ನಾಗರಿಕರ ಉಳಿತಾಯವನ್ನು ಹೆಚ್ಚಿಸುವ ನಿಟ್ಟಿನಲ್ಲೂ ನನ್ನ ಸರ್ಕಾರ ಪ್ರಯತ್ನಗಳನ್ನು ನಡೆಸಿದೆ.

  • ಈ ಹಿಂದೆ, ಭಾರತದಲ್ಲಿ 2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯದ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತಿತ್ತು.
  • ಇಂದು ಭಾರತದಲ್ಲಿ, 7 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ.
  • ತೆರಿಗೆ ವಿನಾಯಿತಿ ಮತ್ತು ಸುಧಾರಣೆಗಳಿಂದಾಗಿ, ಭಾರತೀಯ ತೆರಿಗೆದಾರರು ಕಳೆದ 10 ವರ್ಷಗಳಲ್ಲಿ ಸುಮಾರು 2.5 ಲಕ್ಷ ಕೋಟಿ ರೂ.ಗಳನ್ನು ಉಳಿಸಿದ್ದಾರೆ.
  • ʻಆಯುಷ್ಮಾನ್ ಭಾರತ್ʼ ಯೋಜನೆಯ ಜೊತೆಗೆ, ಕೇಂದ್ರ ಸರ್ಕಾರವು ವಿವಿಧ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಸಹ ನೀಡುತ್ತಿದೆ. ಇದು ದೇಶದ ನಾಗರಿಕರಿಗೆ ಸುಮಾರು ಮೂರೂವರೆ ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದೆ.
  • ʻಜನೌಷಧʼ ಕೇಂದ್ರಗಳು ನಮ್ಮ ದೇಶವಾಸಿಗಳಿಗೆ ಔಷಧಗಳ ಖರೀದಿಯಲ್ಲಿ ಸುಮಾರು 28 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿವೆ.
  • ಹೃದಯದ ಸ್ಟೆಂಟ್‌ಗಳು, ಮೊಣಕಾಲು ಕಸಿ, ಕ್ಯಾನ್ಸರ್ ಔಷಧಗಳ ಬೆಲೆಯನ್ನು ಸಹ ಕಡಿಮೆ ಮಾಡಲಾಗಿದೆ. ಈ ಕಾರಣದಿಂದಾಗಿ, ರೋಗಿಗಳು ಪ್ರತಿವರ್ಷ ಸುಮಾರು 27 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ.
  • ನನ್ನ ಸರ್ಕಾರವು ಮೂತ್ರಪಿಂಡ ಸಮಸ್ಯೆಯುಳ್ಳ ರೋಗಿಗಳಿಗೆ ಉಚಿತ ಡಯಾಲಿಸಿಸ್ ಒದಗಿಸುವ ಕಾರ್ಯಕ್ರಮವನ್ನು ಸಹ ಆರಂಭಿಸಿದೆ. ಪ್ರತಿ ವರ್ಷ 21 ಲಕ್ಷಕ್ಕೂ ಹೆಚ್ಚು ರೋಗಿಗಳು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದು ರೋಗಿಗಳಿಗೆ ಪ್ರತಿವರ್ಷ ಒಂದು ಲಕ್ಷ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದೆ.
  • ಬಡ ಜನರಿಗೆ ಸಬ್ಸಿಡಿ ಪಡಿತರ ನೀಡುವುದನ್ನು ಮುಂದುವರಿಸಲು ನನ್ನ ಸರ್ಕಾರವು ಸುಮಾರು 20 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
  • ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಗೆ ರೈಲ್ವೆ ಸುಮಾರು 50 ಪ್ರತಿಶತದಷ್ಟು ರಿಯಾಯಿತಿ ನೀಡುತ್ತದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರು ಪ್ರತಿವರ್ಷ 60 ಸಾವಿರ ಕೋಟಿ ರೂ.ಗಳನ್ನು ಉಳಿಸುತ್ತಾರೆ.
  • ಬಡವರು ಮತ್ತು ಮಧ್ಯಮ ವರ್ಗದವರು ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಪಡೆಯುತ್ತಿದ್ದಾರೆ. ʻಉಡಾನ್ʼ ಯೋಜನೆಯಡಿ, ಬಡವರು ಮತ್ತು ಮಧ್ಯಮ ವರ್ಗದವರು ವಿಮಾನ ಟಿಕೆಟ್‌ಗಳಲ್ಲಿ ಮೂರು ಸಾವಿರ ಕೋಟಿ ರೂ.ಗಿಂತ ಹೆಚ್ಚು ಉಳಿತಾಯ ಮಾಡಿದ್ದಾರೆ.
  • ʻಎಲ್ಇಡಿ ಬಲ್ಬ್ʼ ಯೋಜನೆಯಿಂದಾಗಿ ವಿದ್ಯುತ್ ಬಿಲ್‌ನಲ್ಲಿ 20,000 ಕೋಟಿ ರೂ.ಗಿಂತ ಹೆಚ್ಚು ಉಳಿತಾಯವಾಗಿದೆ.
  • ʻಜೀವನ್ ಜ್ಯೋತಿ ಬಿಮಾ ಯೋಜನೆʼ ಮತ್ತು ʻಸುರಕ್ಷಾ ಬಿಮಾ ಯೋಜನೆʼ ಅಡಿಯಲ್ಲಿ ಬಡವರು 16,000 ಕೋಟಿ ರೂ.ಗಿಂತ ಹೆಚ್ಚು ಕ್ಲೇಮ್‌ಗಳನ್ನು ಪಡೆದಿದ್ದಾರೆ.

ಗೌರವಾನ್ವಿತ ಸದಸ್ಯರೇ,

18. ನಾರಿ ಶಕ್ತಿಯನ್ನು ಬಲಪಡಿಸಲು ನನ್ನ ಸರ್ಕಾರ ಪ್ರತಿಯೊಂದು ಹಂತದಲ್ಲೂ ಕೆಲಸ ಮಾಡುತ್ತಿದೆ.

ಈ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆಯನ್ನು ಮಹಿಳಾ ಸಬಲೀಕರಣಕ್ಕೆ ಸಮರ್ಪಿಸಲಾಗಿದೆ.

ಈ ಮೆರವಣಿಗೆಯಲ್ಲಿ, ಜಗತ್ತು ಮತ್ತೊಮ್ಮೆ ನಮ್ಮ ಹೆಣ್ಣುಮಕ್ಕಳ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು.

ನನ್ನ ಸರ್ಕಾರವು ನೀರು, ಭೂಮಿ, ಆಕಾಶ ಮತ್ತು ಬಾಹ್ಯಾಕಾಶದಲ್ಲಿ ಹೆಣ್ಣುಮಕ್ಕಳ ಪಾತ್ರವನ್ನು ಎಲ್ಲೆಡೆ ವಿಸ್ತರಿಸಿದೆ.

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಎಂದರೇನು ಎಂದು ನಮಗೆಲ್ಲರಿಗೂ ತಿಳಿದಿದೆ.

ಮಹಿಳೆಯರ ಆರ್ಥಿಕ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನನ್ನ ಸರ್ಕಾರ ಅವಿರತ ಪ್ರಯತ್ನಗಳನ್ನು ಮಾಡುತ್ತಿದೆ.

  • ಇಂದು ಸುಮಾರು 10 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.
  • ಈ ಗುಂಪುಗಳಿಗೆ 8 ಲಕ್ಷ ಕೋಟಿ ರೂ.ಗಳ ಬ್ಯಾಂಕ್ ಸಾಲ ಮತ್ತು 40 ಸಾವಿರ ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ವಿತರಿಸಲಾಗಿದೆ.
  • 2 ಕೋಟಿ ಮಹಿಳೆಯರನ್ನು ʻಲಕ್ಷಾಧಿಪತಿ ದೀದಿʼಗಳನ್ನಾಗಿ ಮಾಡುವ ಅಭಿಯಾನವನ್ನು ಸರ್ಕಾರ ಜಾರಿಗೆ ತರುತ್ತಿದೆ.
  • ʻನಮೋ ಡ್ರೋನ್ ದೀದಿʼ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ 15 ಸಾವಿರ ಡ್ರೋನ್‌ಗಳನ್ನು ಒದಗಿಸಲಾಗುತ್ತಿದೆ.
  •  ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಿರುವುದರಿಂದ ದೇಶದ ಲಕ್ಷಾಂತರ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗಿದೆ.
  • ನಮ್ಮ ಸರ್ಕಾರವು ಮೊದಲ ಬಾರಿಗೆ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಖಾಯಂ ನಿಯೋಜನೆಗೆ ಅವಕಾಶ ಕಲ್ಪಿಸಿದೆ.
  • ಇದೇ ಮೊದಲ ಬಾರಿಗೆ ಮಹಿಳಾ ಕೆಡೆಡ್‌ಗಳಿಗೆ ʻಸೈನಿಕ ಶಾಲೆʼಗಳು ಮತ್ತು ʻರಾಷ್ಟ್ರೀಯ ರಕ್ಷಣಾ ಅಕಾಡೆಮಿʼಯಲ್ಲಿ ಪ್ರವೇಶ ಕಲ್ಪಿಸಲಾಗಿದೆ.
  • ಇಂದು, ಮಹಿಳೆಯರು ಫೈಟರ್ ಪೈಲಟ್‌ಗಳಾಗಿದ್ದಾರೆ ಮತ್ತು ಮೊದಲ ಬಾರಿಗೆ ಯುದ್ಧ ನೌಕೆಗಳನ್ನು ನಿಯಂತ್ರಿಸುತ್ತಿದ್ದಾರೆ.
  • ʻಮುದ್ರಾʼ ಯೋಜನೆಯಡಿ ನೀಡಲಾದ 46 ಕೋಟಿಗೂ ಹೆಚ್ಚು ಸಾಲಗಳಲ್ಲಿ 31 ಕೋಟಿಗೂ ಹೆಚ್ಚು ಸಾಲಗಳನ್ನು ಮಹಿಳೆಯರಿಗೆ ಒದಗಿಸಲಾಗಿದೆ.
  • ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯುವ ಮೂಲಕ ಕೋಟ್ಯಂತರ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿದ್ದಾರೆ.

ಗೌರವಾನ್ವಿತ ಸದಸ್ಯರೇ,

19. ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು ನನ್ನ ಸರ್ಕಾರ ಒತ್ತು ನೀಡುತ್ತಿದೆ. ಲಾಭವನ್ನು ಹೆಚ್ಚಿಸುವುದರ ಜೊತೆಗೆ ಕೃಷಿಯ ವೆಚ್ಚವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ.

ಮೊದಲ ಬಾರಿಗೆ, ನನ್ನ ಸರ್ಕಾರವು ದೇಶದ ಕೃಷಿ ನೀತಿ ಮತ್ತು ಯೋಜನೆಗಳಲ್ಲಿ 10 ಕೋಟಿಗೂ ಹೆಚ್ಚು ಸಣ್ಣ ರೈತರಿಗೆ ಆದ್ಯತೆ ನೀಡಿದೆ.

  • ʻಪಿಎಂ-ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯಡಿ, ರೈತರು ಇಲ್ಲಿಯವರೆಗೆ 2 ಲಕ್ಷ 80 ಸಾವಿರ ಕೋಟಿ ರೂ. ಪಡೆದಿದ್ದಾರೆ.
  • ಕಳೆದ 10 ವರ್ಷಗಳಲ್ಲಿ, ಬ್ಯಾಂಕುಗಳಿಂದ ರೈತರಿಗೆ ಸಿಗುವ ಸುಲಭ ಸಾಲಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.
  •  ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರು 30 ಸಾವಿರ ಕೋಟಿ ರೂ.ಗಳ ಪ್ರೀಮಿಯಂ ಪಾವತಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಅವರು 1.5 ಲಕ್ಷ ಕೋಟಿ ರೂ.ಗಳ ಕ್ಲೈಮ್ ಪಡೆದಿದ್ದಾರೆ.
  • ಕಳೆದ 10 ವರ್ಷಗಳಲ್ಲಿ, ರೈತರು ಭತ್ತ ಮತ್ತು ಗೋಧಿ ಬೆಳೆಗಳಿಗೆ ʻಕನಿಷ್ಠ ಬೆಂಬಲ ಬೆಲೆʼ(ಎಂಎಸ್‌ಪಿ) ಯಾಗಿ ಸುಮಾರು 18 ಲಕ್ಷ ಕೋಟಿ ರೂ. ಪಡೆದಿದ್ದಾರೆ.
  • ಇದು 2014ರ ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ 2.5 ಪಟ್ಟು ಹೆಚ್ಚು.
  • ಈ ಹಿಂದೆ, ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳ ಬೆಳೆಗಳ ಸರ್ಕಾರಿ ಖರೀದಿ ನಗಣ್ಯವಾಗಿತ್ತು.
  • ಕಳೆದ ದಶಕದಲ್ಲಿ, ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳನ್ನು ಉತ್ಪಾದಿಸುವ ರೈತರು ಕನಿಷ್ಠ ಬೆಂಬಲ ಬೆಲೆಯಾಗಿ 1.25 ಲಕ್ಷ ಕೋಟಿ ರೂ.ಗಳನ್ನು ಪಡೆದಿದ್ದಾರೆ.
  • ದೇಶದಲ್ಲಿ  ಮೊದಲ ಬಾರಿಗೆ ಕೃಷಿ ರಫ್ತು ನೀತಿಯನ್ನು ರೂಪಿಸಿದ್ದು ನಮ್ಮ ಸರ್ಕಾರ.
  • ಇದು ಕೃಷಿ ರಫ್ತು 4 ಲಕ್ಷ ಕೋಟಿ ರೂ.ಗೆ ತಲುಪಲು ಕಾರಣವಾಗಿದೆ.
  • 10 ವರ್ಷಗಳಲ್ಲಿ, ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳನ್ನು ಒದಗಿಸಲು 11 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಲಾಗಿದೆ.
  • ನನ್ನ ಸರ್ಕಾರ 1.75 ಲಕ್ಷಕ್ಕೂ ಹೆಚ್ಚು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದೆ.
  • ಇಲ್ಲಿಯವರೆಗೆ, ಸುಮಾರು 8,000 ʻರೈತ ಉತ್ಪಾದಕ ಸಂಸ್ಥೆʼಗಳನ್ನು(ಎಫ್‌ಪಿಒ) ಸ್ಥಾಪಿಸಲಾಗಿದೆ.
  • ನನ್ನ ಸರ್ಕಾರವು ಕೃಷಿಯಲ್ಲಿ ಸಹಕಾರಿ ಸಂಸ್ಥೆಗಳನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ, ದೇಶದಲ್ಲಿ ಮೊದಲ ಬಾರಿಗೆ ಸಹಕಾರ ಸಚಿವಾಲಯವನ್ನು ಸ್ಥಾಪಿಸಲಾಗಿದೆ.
  • ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಶೇಖರಣಾ ಯೋಜನೆಯನ್ನು ಪ್ರಾರಂಭಿಸಲಾಗಿದೆ.
  • ಸಹಕಾರಿ ಸಂಘಗಳಿಲ್ಲದ ಹಳ್ಳಿಗಳಲ್ಲಿ 2 ಲಕ್ಷ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ.
  • ಮೀನುಗಾರಿಕೆ ಕ್ಷೇತ್ರದಲ್ಲಿ 38 ಸಾವಿರ ಕೋಟಿ ರೂ.ಗಿಂತ ಅಧಿಕ ಮೌಲ್ಯದ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ, ಇದರಿಂದಾಗಿ ಮೀನು ಉತ್ಪಾದನೆ 95 ಲಕ್ಷ ಮೆಟ್ರಿಕ್ ಟನ್‌ಗಳಿಂದ 175 ಲಕ್ಷ ಮೆಟ್ರಿಕ್ ಟನ್‌ಗೆ ಏರಿದೆ. ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ದ್ವಿಗುಣಗೊಂಡಿದೆ.
  • ಒಳನಾಡಿನ ಮೀನುಗಾರಿಕೆ ಉತ್ಪಾದನೆ 61 ಲಕ್ಷ ಮೆಟ್ರಿಕ್ ಟನ್‌ನಿಂದ 131 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ.
  • ಮೀನುಗಾರಿಕೆ ಕ್ಷೇತ್ರದಲ್ಲಿ ರಫ್ತು ದ್ವಿಗುಣಗೊಂಡಿದೆ, ಅಂದರೆ 30 ಸಾವಿರ ಕೋಟಿ ರೂ.ಗಳಿಂದ 64 ಸಾವಿರ ಕೋಟಿ ರೂ.ಗೆ ಹೆಚ್ಚಳವಾಗಿದೆ.
  • ದೇಶದಲ್ಲಿ ಮೊದಲ ಬಾರಿಗೆ ಜಾನುವಾರು ಸಾಕಣೆದಾರರು ಮತ್ತು ಮೀನುಗಾರರಿಗೆ ʻಕಿಸಾನ್ ಕ್ರೆಡಿಟ್ ಕಾರ್ಡ್ʼಗಳ ಪ್ರಯೋಜನವನ್ನು ನೀಡಲಾಗಿದೆ.
  • ಕಳೆದ ದಶಕದಲ್ಲಿ, ತಲಾ ಹಾಲಿನ ಲಭ್ಯತೆಯು ಶೇಕಡಾ 40 ರಷ್ಟು ಹೆಚ್ಚಾಗಿದೆ.
  • ಕಾಲು ಬಾಯಿ ರೋಗಗಳಿಂದ ಪ್ರಾಣಿಗಳನ್ನು ರಕ್ಷಿಸಲು ಮೊದಲ ಉಚಿತ ಲಸಿಕಾ ಅಭಿಯಾನ ನಡೆಯುತ್ತಿದೆ.
  • ಇಲ್ಲಿಯವರೆಗೆ, ನಾಲ್ಕು ಹಂತಗಳಲ್ಲಿ ಪ್ರಾಣಿಗಳಿಗೆ 50 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ.

ಗೌರವಾನ್ವಿತ ಸದಸ್ಯರೇ,

20. ಈ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳು ಕೇವಲ ಸೇವೆಗಳಲ್ಲ. ಇವು ದೇಶದ ನಾಗರಿಕರ ಜೀವನ ಚಕ್ರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿವೆ.

ನನ್ನ ಸರ್ಕಾರದ ಯೋಜನೆಗಳ ಫಲಿತಾಂಶಗಳು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಅಧ್ಯಯನದ ವಿಷಯವಾಗಿವೆ.

ಈ ಯೋಜನೆಗಳ ಫಲಿತಾಂಶಗಳು ಪರಿಣಾಮಕಾರಿಯಾಗಿವೆ ಮತ್ತು ಬಡತನದ ವಿರುದ್ಧ ಹೋರಾಟದಲ್ಲಿ ತೊಡಗಿರುವ ಪ್ರತಿಯೊಂದು ದೇಶಕ್ಕೂ ಸ್ಪೂರ್ತಿದಾಯಕ ಉದಾಹರಣೆಗಳಾಗಿ ಕಾರ್ಯನಿರ್ವಹಿಸುತ್ತವೆ.

ಇತ್ತೀಚಿನ ವರ್ಷಗಳಲ್ಲಿ ವಿವಿಧ ಸಂಸ್ಥೆಗಳು ನಡೆಸಿದ ಅಧ್ಯಯನಗಳು ಕಂಡುಬಂದ ಅಂಶಗಳು ಹೀಗಿವೆ:

  • 11 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು ಬಯಲು ಮಲವಿಸರ್ಜನೆಯನ್ನು ನಿರ್ಮೂಲನೆ ಮಾಡುವ ಮೂಲಕ ಅನೇಕ ರೋಗಗಳನ್ನು ತಡೆಗಟ್ಟಲಾಗಿದೆ.
  • ಇದರ ಪರಿಣಾಮವಾಗಿ, ನಗರ ಪ್ರದೇಶದ ಪ್ರತಿ ಬಡ ಕುಟುಂಬವು ವೈದ್ಯಕೀಯ ವೆಚ್ಚಗಳಿಗಾಗಿ ವರ್ಷಕ್ಕೆ 60 ಸಾವಿರ ರೂ.ಗಳವರೆಗೆ ಉಳಿತಾಯ ಮಾಡುತ್ತಿದೆ.
  • ನಲ್ಲಿ ಮೂಲಕ ಕುಡಿಯುವ ನೀರು ಸರಬರಾಜು ಮಾಡುವುದರಿಂದ ಪ್ರತಿವರ್ಷ ಲಕ್ಷಾಂತರ ಮಕ್ಕಳ ಜೀವ ಉಳಿಸಲಾಗುತ್ತಿದೆ.
  • ʻಪಿಎಂ ಆವಾಸ್ʼ ಯೋಜನೆಯಡಿ ಶಾಶ್ವತ ಮನೆಗಳ ನಿರ್ಮಾಣವು ಫಲಾನುಭವಿ ಕುಟುಂಬಗಳ ಸಾಮಾಜಿಕ ಸ್ಥಾನಮಾನ ಮತ್ತು ಘನತೆಯನ್ನು ಹೆಚ್ಚಿಸಿದೆ.
  • 'ಶಾಶ್ವತ' ಮನೆಗಳನ್ನು ಹೊಂದಿರುವ ಕುಟುಂಬಗಳಲ್ಲಿ ಮಕ್ಕಳ ಶಿಕ್ಷಣವು ಸುಧಾರಿಸಿದೆ ಮತ್ತು ಶಾಲೆಯಿಂದ ಹೊರಗುಳಿಯುವವರ ಪ್ರಮಾಣ ಕಡಿಮೆಯಾಗಿದೆ.
  • ʻಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನʼದ ಅಡಿಯಲ್ಲಿ, ಇಂದು ದೇಶದಲ್ಲಿ ಶೇಕಡಾ 100ರಷ್ಟು ಸಾಂಸ್ಥಿಕ ಹೆರಿಗೆಗಳು ನಡೆಯುತ್ತಿವೆ. ಇದು ತಾಯಂದಿರ ಮರಣ ದರದಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿದೆ.
  • ಮತ್ತೊಂದು ಅಧ್ಯಯನದ ಪ್ರಕಾರ, ʻಉಜ್ವಲʼ ಫಲಾನುಭವಿಗಳ ಕುಟುಂಬಗಳಲ್ಲಿ ಗಂಭೀರ ಕಾಯಿಲೆಗಳ ಸಂಭಾವ್ಯತೆ ಕಡಿಮೆಯಾಗಿದೆ.

ಗೌರವಾನ್ವಿತ ಸದಸ್ಯರೇ,

21. ನನ್ನ ಸರ್ಕಾರ ಮಾನವ ಕೇಂದ್ರಿತ ಅಭಿವೃದ್ಧಿಯತ್ತ ಗಮನ ಹರಿಸಿದೆ. ಪ್ರತಿಯೊಬ್ಬ ನಾಗರಿಕನ ಘನತೆ ನಮಗೆ ಪರಮೋನ್ನತವಾಗಿದೆ. ಇದು ನಮ್ಮ ಸಾಮಾಜಿಕ ನ್ಯಾಯದ ಕಲ್ಪನೆಯೂ ಹೌದು. ಇದು ಭಾರತದ ಸಂವಿಧಾನದ ಪ್ರತಿಯೊಂದು ಅನುಚ್ಛೇದದ ಆಶಯವೂ ಹೌದು.

ದೀರ್ಘಕಾಲದವರೆಗೆ ಹಕ್ಕುಗಳ ಬಗ್ಗೆ ಮಾತ್ರ ಚರ್ಚೆ ನಡೆಯಿತು. ನಾವು ಸರ್ಕಾರದ ಕರ್ತವ್ಯಗಳ ಬಗ್ಗೆಯೂ ಒತ್ತಿ ಹೇಳಿದ್ದೇವೆ. ಇದು ನಾಗರಿಕರಲ್ಲಿಯೂ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿದೆ. ಯಾವುದೇ ವ್ಯಕ್ತಿಯ ಕರ್ತವ್ಯಗಳ ನಿರ್ವಹಣೆಯು ಅವರ ಹಕ್ಕುಗಳ ಖಾತರಿಯನ್ನು ಖಚಿತಪಡಿಸುತ್ತದೆ ಎಂಬ ಭಾವನೆಯನ್ನು ಇಂದು ಸೃಷ್ಟಿಸಲಾಗಿದೆ.

ಇಲ್ಲಿಯವರೆಗೆ ಅಭಿವೃದ್ಧಿಯ ಹಾದಿಯಿಂದ ದೂರ ಉಳಿದವರ ಬಗ್ಗೆಯೂ ನನ್ನ ಸರ್ಕಾರ ಕಾಳಜಿ ವಹಿಸಿದೆ. ಕಳೆದ 10 ವರ್ಷಗಳಲ್ಲಿ, ಸಾವಿರಾರು ಬುಡಕಟ್ಟು ಗ್ರಾಮಗಳಿಗೆ ಮೊದಲ ಬಾರಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕವನ್ನು ಒದಗಿಸಲಾಗಿದೆ. ಲಕ್ಷಾಂತರ ಬುಡಕಟ್ಟು ಕುಟುಂಬಗಳು ಈಗ ಕೊಳಾಯಿ ನೀರು ಸರಬರಾಜು ಪಡೆಯಲು ಪ್ರಾರಂಭಿಸಿವೆ. ವಿಶೇಷ ಅಭಿಯಾನದ ಅಡಿಯಲ್ಲಿ, ನನ್ನ ಸರ್ಕಾರವು ಹೆಚ್ಚಾಗಿ ಬುಡಕಟ್ಟು ಜನರು ವಾಸಿಸುವ ಸಾವಿರಾರು ಹಳ್ಳಿಗಳಿಗೆ 4ಜಿ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತಿದೆ. ʻವನ್ ಧನ್ ಕೇಂದ್ರʼಗಳ ಸ್ಥಾಪನೆ ಮತ್ತು 90ಕ್ಕೂ ಹೆಚ್ಚು ಅರಣ್ಯ ಉತ್ಪನ್ನಗಳಿಗೆ ʻಕನಿಷ್ಠ ಬೆಂಬಲ ಬೆಲೆʼಯು(ಎಂಎಸ್‌ಪಿ) ಬುಡಕಟ್ಟು ಜನರಿಗೆ ಅಪಾರ ಪ್ರಯೋಜನವನ್ನು ನೀಡಿದೆ.

ಮೊದಲ ಬಾರಿಗೆ, ನನ್ನ ಸರ್ಕಾರವು ʻನಿರ್ದಿಷ್ಟವಾದ ದುರ್ಬಲ ಬುಡಕಟ್ಟು ಗುಂಪುʼಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ.  ಈ ಗುಂಪುಗಳಿಗಾಗಿ ಸುಮಾರು 24 ಸಾವಿರ ಕೋಟಿ ರೂ.ಗಳ ವೆಚ್ಚದ ʻಪಿಎಂ ಜನಮಾನ್ʼ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಬುಡಕಟ್ಟು ಕುಟುಂಬಗಳ ತಲೆಮಾರುಗಳು ʻಕುಡಗೋಲು ಕೋಶ ರಕ್ತಹೀನತೆʼಯಿಂದ ಬಳಲುತ್ತಿವೆ. ಇದನ್ನು ಪರಿಹರಿಸಲು ಮೊದಲ ಬಾರಿಗೆ ರಾಷ್ಟ್ರೀಯ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ, ಈ ಯೋಜನೆ ಅಡಿಯಲ್ಲಿ ಸುಮಾರು ಒಂದು ಕೋಟಿ ನಲವತ್ತು ಲಕ್ಷ ಜನರನ್ನು ಪರೀಕ್ಷಿಸಲಾಗಿದೆ.

ನನ್ನ ಸರ್ಕಾರವು ದಿವ್ಯಾಂಗರಿಗಾಗಿ 'ಸುಗಮ್ಯ ಭಾರತ ಅಭಿಯಾನ'ವನ್ನು ಪ್ರಾರಂಭಿಸಿದೆ. ಭಾರತೀಯ ಸಂಕೇತ ಭಾಷೆಯಲ್ಲಿ ಪಠ್ಯಪುಸ್ತಕಗಳನ್ನು ಸಹ ಲಭ್ಯವಾಗುವಂತೆ ಮಾಡಲಾಗಿದೆ.

ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಗೌರವಾನ್ವಿತ ಸ್ಥಾನವನ್ನು ನೀಡಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಕಾನೂನನ್ನು ಸಹ ಜಾರಿಗೆ ತರಲಾಗಿದೆ.

ಗೌರವಾನ್ವಿತ ಸದಸ್ಯರೇ,

22. ವಿಶ್ವಕರ್ಮ ಕುಟುಂಬಗಳಿಲ್ಲದ ದೈನಂದಿನ ಜೀವನವನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟ. ಈ ಕುಟುಂಬಗಳು ತಮ್ಮ ಕೌಶಲ್ಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುತ್ತವೆ. ಆದಾಗ್ಯೂ, ಸರ್ಕಾರದ ಬೆಂಬಲದ ಕೊರತೆಯಿಂದಾಗಿ, ನಮ್ಮ ವಿಶ್ವಕರ್ಮ ಸಹಚರರು ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದರು. ಅಂತಹ ವಿಶ್ವಕರ್ಮ ಕುಟುಂಬಗಳ ಬಗ್ಗೆಯೂ ನನ್ನ ಸರ್ಕಾರ ಕಾಳಜಿ ವಹಿಸಿದೆ. ಇಲ್ಲಿಯವರೆಗೆ, 84 ಲಕ್ಷಕ್ಕೂ ಹೆಚ್ಚು ಜನರು ʻಪಿಎಂ ವಿಶ್ವಕರ್ಮ ಯೋಜನೆʼಯೊಂದಿಗೆ ಸಂಪರ್ಕ ಹೊಂದಿದ್ದಾರೆ.

ಅನೇಕ ದಶಕಗಳಿಂದ, ಬೀದಿ ಬದಿ ವ್ಯಾಪಾರಿಗಳಾಗಿ ಕೆಲಸ ಮಾಡುವ ನಮ್ಮ ಸ್ನೇಹಿತರನ್ನು ಸಹ ನಿರ್ಲಕ್ಷಿಸಲಾಗಿತ್ತು. ನನ್ನ ಸರ್ಕಾರವು ʻಪಿಎಂ ಸ್ವನಿಧಿʼ ಯೋಜನೆ ಮೂಲಕ ಅವರಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ ಪ್ರವೇಶವನ್ನು ನೀಡಿದೆ. ಇಲ್ಲಿಯವರೆಗೆ, 10,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಅವರಿಗೆ ಸಾಲವಾಗಿ ನೀಡಲಾಗಿದೆ. ಅವರ ಮೇಲೆ ವಿಶ್ವಾಸವಿಟ್ಟು ಸರ್ಕಾರ ಅಡಮಾನ ರಹಿತ ಸಾಲವನ್ನೂ ಒದಗಿಸಿದೆ. ಹೆಚ್ಚಿನ ಜನರು ಸಾಲವನ್ನು ಮರುಪಾವತಿಸುವ ಮೂಲಕ ಈ ನಂಬಿಕೆಯನ್ನು ಬಲಪಡಿಸಿರುವುದು ಮಾತ್ರವಲ್ಲದೆ ಮತ್ತೊಂದು ಕಂತಿನ ಸಾಲವನ್ನೂ ಪಡೆದಿದ್ದಾರೆ. ಫಲಾನುಭವಿಗಳಲ್ಲಿ ಹೆಚ್ಚಿನವರು ದಲಿತರು, ಹಿಂದುಳಿದ ವರ್ಗಗಳು, ಬುಡಕಟ್ಟು ಜನಾಂಗದವರು ಮತ್ತು ಮಹಿಳೆಯರೇ ಆಗಿದ್ದಾರೆ.

ಗೌರವಾನ್ವಿತ ಸದಸ್ಯರೇ,

23. "ಸಬ್ ಕಾ ಸಾಥ್, ಸಬ್ ಕಾ ವಿಕಾಸ್; ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್" ತತ್ವದಿಂದ ಮಾರ್ಗದರ್ಶನ ಪಡೆದ ನನ್ನ ಸರ್ಕಾರವು ಸಮಾಜದ ಪ್ರತಿಯೊಂದು ವರ್ಗಕ್ಕೂ ನ್ಯಾಯಯುತ ಅವಕಾಶಗಳನ್ನು ಒದಗಿಸಲು ಬದ್ಧವಾಗಿದೆ.

  • ಇದೇ ಮೊದಲ ಬಾರಿಗೆ, ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿಯ ಪ್ರಯೋಜನವನ್ನು ವಿಸ್ತರಿಸಲಾಗಿದೆ.
  • ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ(ಒಬಿಸಿ) ಕೇಂದ್ರದ ಕೋಟಾದಡಿ ಶೇಕಡಾ 27 ರಷ್ಟು ಮೀಸಲಾತಿಯನ್ನು ಪರಿಚಯಿಸಲಾಗಿದೆ.
  • ʻಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗʼಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ.
  • ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಸ್ಥಳಗಳನ್ನು ʻಪಂಚತೀರ್ಥʼವಾಗಿ ಅಭಿವೃದ್ಧಿಪಡಿಸಲಾಗಿದೆ.
  • ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಸಮರ್ಪಿತವಾದ 10 ವಸ್ತುಸಂಗ್ರಹಾಲಯಗಳನ್ನು ದೇಶಾದ್ಯಂತ ನಿರ್ಮಿಸಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

24. ದಶಕಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದ ಪ್ರದೇಶಗಳಿಗೆ ನನ್ನ ಸರ್ಕಾರ ಮೊದಲ ಬಾರಿಗೆ ಅಭಿವೃದ್ಧಿಯನ್ನು ಪರಿಚಯಿಸಿದೆ. ನಮ್ಮ ಗಡಿಗಳಿಗೆ ಹೊಂದಿಕೊಂಡಿರುವ ಗ್ರಾಮಗಳನ್ನು ದೇಶದ ಕೊನೆಯ ಹಳ್ಳಿಗಳೆಂದು ನೋಡಲಾಗುತ್ತಿತ್ತು. ನಾವು ಅವುಗಳನ್ನು ದೇಶದ ಮೊದಲ ಹಳ್ಳಿಗಳು ಎಂದು ಗುರುತಿಸಿದ್ದೇವೆ. ಈ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ, ರೋಮಾಂಚಕ ಗ್ರಾಮ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.

ನಮ್ಮ ದೂರದ ದ್ವೀಪಗಳಾದ ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪಗಳು ಸಹ ಅಭಿವೃದ್ಧಿಯಿಂದ ವಂಚಿತವಾಗಿವೆ. ನನ್ನ ಸರ್ಕಾರವು ಈ ದ್ವೀಪಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದೆ. ಅಲ್ಲಿ ರಸ್ತೆಗಳು, ವಾಯು ಸಂಪರ್ಕ ಮತ್ತು ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೆಲವು ವಾರಗಳ ಹಿಂದೆ, ಲಕ್ಷದ್ವೀಪವನ್ನು ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕಿಸಲಾಯಿತು. ಇದರಿಂದ ಸ್ಥಳೀಯ ಜನರಿಗೆ ಮತ್ತು ಪ್ರವಾಸಿಗರಿಗೆ ಹೆಚ್ಚು ಪ್ರಯೋಜನವಾಗಲಿದೆ.

ʻಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮʼದಡಿ, ನಮ್ಮ ಸರ್ಕಾರ ದೇಶದ ನೂರಕ್ಕೂ ಹೆಚ್ಚು ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಿದೆ. ಇದರ ಯಶಸ್ಸಿನ ಹಿನ್ನೆಲೆಯಲ್ಲಿ, ಸರ್ಕಾರವು ʻಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮʼವನ್ನು ಸಹ ಪ್ರಾರಂಭಿಸಿದೆ. ದೇಶದಲ್ಲಿ ಹಿಂದುಳಿದಿರುವ ಇಂತಹ ಬ್ಲಾಕ್‌ಗಳ ಅಭಿವೃದ್ಧಿಗೆ ಈಗ ವಿಶೇಷ ಗಮನ ನೀಡಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

25. ಇಂದು ನನ್ನ ಸರ್ಕಾರ ಇಡೀ ಗಡಿಯುದ್ದಕ್ಕೂ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ. ಈ ಕೆಲಸವನ್ನು ಬಹಳ ಹಿಂದೆಯೇ ಆದ್ಯತೆಯ ಆಧಾರದ ಮೇಲೆ ಮಾಡಬೇಕಾಗಿತ್ತು. ಅದು ಭಯೋತ್ಪಾದನೆಯಾಗಿರಲಿ ಅಥವಾ ಅತಿಕ್ರಮಣವಾಗಿರಲಿ, ನಮ್ಮ ಭದ್ರತಾ ಪಡೆಗಳು ಇಂದು ದಿಟ್ಟ ಪ್ರತ್ಯುತ್ತರ ನೀಡುತ್ತಿವೆ.

ಆಂತರಿಕ ಭದ್ರತೆಯನ್ನು ಬಲಪಡಿಸುವ ನನ್ನ ಸರ್ಕಾರದ ಪ್ರಯತ್ನಗಳ ಸ್ಪಷ್ಟ ಫಲಿತಾಂಶಗಳು ನಮ್ಮ ಕಣ್ಣ ಮುಂದಿವೆ.

  • ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯ ಭಾವನೆ ಮೂಡಿದೆ.
  • ಈ ಹಿಂದೆ ಮುಷ್ಕರದಿಂದಾಗಿ ನಿರ್ಜನವಾಗಿ ಕಾಣುತ್ತಿದ್ದ ಮಾರುಕಟ್ಟೆಗಲ್ಲಿ ಇಂದು ಜನದಟ್ಟಣೆಯ ಕಲರವವನ್ನು ಕಾಣಬಹುದಾಗಿದೆ.
  • ಈಶಾನ್ಯ ಭಾರತದಲ್ಲಿ ಪ್ರತ್ಯೇಕತಾವಾದದ ಹಿಂಸಾಚಾರ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
  • ಅನೇಕ ಬಂಡುಕೋರ ಸಂಘಟನೆಗಳು ಶಾಶ್ವತ ಶಾಂತಿಯತ್ತ ಹೆಜ್ಜೆ ಇಟ್ಟಿವೆ.
  • ನಕ್ಸಲ್ ಪೀಡಿತ ಪ್ರದೇಶಗಳು ಕಡಿಮೆಯಾಗಿವೆ ಮತ್ತು ನಕ್ಸಲ್ ಹಿಂಸಾಚಾರದಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಗೌರವಾನ್ವಿತ ಸದಸ್ಯರೇ,

26. ಮುಂಬರುವ ಶತಮಾನಗಳಿಗಾಗಿ ಭಾರತವು ಭವಿಷ್ಯವನ್ನು ಬರೆಯುವ ಸಮಯ ಇದಾಗಿದೆ. ನಮ್ಮ ಪೂರ್ವಜರು ನಮಗೆ ಸಾವಿರಾರು ವರ್ಷಗಳ ಪರಂಪರೆಯನ್ನು ನೀಡಿದ್ದಾರೆ. ಇಂದಿಗೂ, ನಮ್ಮ ಪೂರ್ವಜರ ಅಸಾಧಾರಣ ಸಾಧನೆಗಳನ್ನು ನಾವು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ. ಇಂದಿನ ಪೀಳಿಗೆಯು ಸಹ ಶತಮಾನಗಳವರೆಗೆ ನೆನಪಿನಲ್ಲಿ ಉಳಿಯುವ ಶಾಶ್ವತ ಪರಂಪರೆಯನ್ನು ನಿರ್ಮಿಸಬೇಕು.

ಆದ್ದರಿಂದ, ನನ್ನ ಸರ್ಕಾರ ಈಗ ಭವ್ಯ ಆಶಯದತ್ತ ಕೆಲಸ ಮಾಡುತ್ತಿದೆ.

ಈ ಆಶಯವು ಮುಂದಿನ 5 ವರ್ಷಗಳ ಕಾರ್ಯಕ್ರಮವನ್ನು ಸಹ ಹೊಂದಿದೆ. ಇದು ಮುಂದಿನ 25 ವರ್ಷಗಳ ಮಾರ್ಗಸೂಚಿಯನ್ನು ಸಹ ಹೊಂದಿದೆ. ನಮಗೆ, ʻವಿಕಸಿತ ಭಾರತʼದ ದೃಷ್ಟಿಕೋನವು ಕೇವಲ ಆರ್ಥಿಕ ಸಮೃದ್ಧಿಗೆ ಸೀಮಿತವಾಗಿಲ್ಲ. ನಾವು ಸಾಮಾಜಿಕ, ಸಾಂಸ್ಕೃತಿಕ ಮತ್ತು ವ್ಯೂಹಾತ್ಮಕ ಸಾಮರ್ಥ್ಯಗಳಿಗೆ ಸಮಾನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಅವುಗಳಿಲ್ಲದೆ ಅಭಿವೃದ್ಧಿ ಮತ್ತು ಆರ್ಥಿಕ ಸಮೃದ್ಧಿ ಶಾಶ್ವತವಾಗಿರುವುದಿಲ್ಲ. ಕಳೆದ ದಶಕದ ನಿರ್ಧಾರಗಳನ್ನು ಸಹ ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

27. ಇಂದು ವಿಶ್ವದ ಪ್ರತಿಯೊಂದು ಸಂಸ್ಥೆಗೂ ಭಾರತದ ಕ್ಷಿಪ್ರ ಅಭಿವೃದ್ಧಿಯ ಮೇಲೆ ಭರವಸೆ ಇದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಈ ಮೌಲ್ಯಮಾಪನಗಳು ಭಾರತದ ನೀತಿಗಳನ್ನು ಆಧರಿಸಿವೆ. ಮೂಲಸೌಕರ್ಯ ಮತ್ತು ನೀತಿ ಸುಧಾರಣೆಗಳಲ್ಲಿ ದಾಖಲೆಯ ಹೂಡಿಕೆಗಳು ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಪೂರ್ಣ ಬಹುಮತದೊಂದಿಗೆ ಸ್ಥಿರ ಮತ್ತು ಸದೃಢ ಸರ್ಕಾರಕ್ಕಾಗಿ ಭಾರತೀಯರು ನೀಡುತ್ತಿರುವ ಆದ್ಯತೆಯು ವಿಶ್ವದ ವಿಶ್ವಾಸವನ್ನು ನವೀಕರಿಸಿದೆ.

ಇಂದು ಭಾರತ ಮಾತ್ರ ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸಬಲ್ಲದು ಎಂದು ಜಗತ್ತು ನಂಬಿದೆ. ಅದಕ್ಕಾಗಿಯೇ ಭಾರತ ಇಂದು ಈ ದಿಕ್ಕಿನಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದಲ್ಲಿ ʻಎಂಎಸ್ಎಂಇʼಗಳ ಬಲವಾದ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ನನ್ನ ಸರ್ಕಾರವು 14 ವಲಯಗಳಿಗೆ ʻಉತ್ಪಾಧನಾ ಆಧರಿತ ಸಹಾಯಧನʼ(ಪಿಎಲ್ಐ) ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಇದುವರೆಗೆ ಸುಮಾರು 9 ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಉತ್ಪಾದನೆ ನಡೆದಿದೆ. ಇದು ದೇಶದಲ್ಲಿ ಲಕ್ಷಾಂತರ ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

ಎಲೆಕ್ಟ್ರಾನಿಕ್, ಔಷಧ, ಆಹಾರ ಸಂಸ್ಕರಣೆ ಮತ್ತು ವೈದ್ಯಕೀಯ ಸಾಧನಗಳ ಕ್ಷೇತ್ರಗಳಿಗೂ ʻಪಿಎಲ್ಐʼ ಯೋಜನೆಯು ಪ್ರಯೋಜನ ನೀಡುತ್ತಿದೆ. ವೈದ್ಯಕೀಯ ಸಾಧನಗಳಿಗೆ ಸಂಬಂಧಿಸಿದ ಹತ್ತಾರು ಯೋಜನೆಗಳಲ್ಲಿ ಉತ್ಪಾದನೆ ಪ್ರಾರಂಭವಾಗಿದೆ. ನನ್ನ ಸರ್ಕಾರವು ದೇಶದಲ್ಲಿ 3 ಬೃಹತ್ ಔಷಧ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದೆ.

ಗೌರವಾನ್ವಿತ ಸದಸ್ಯರೇ,

28. ಇಂದು ʻಮೇಡ್ ಇನ್ ಇಂಡಿಯಾʼ ಜಾಗತಿಕ ಬ್ರಾಂಡ್ ಆಗಿ ಮಾರ್ಪಟ್ಟಿದೆ. ಈಗ, ಜಗತ್ತು ನಮ್ಮ ʻಮೇಕ್ ಇನ್ ಇಂಡಿಯಾʼ ನೀತಿಯ ಬಗ್ಗೆ ಹೆಚ್ಚು ಉತ್ಸುಕವಾಗಿದೆ. "ಆತ್ಮನಿರ್ಭರ ಭಾರತ"ದ ಉದ್ದೇಶವನ್ನು ಜಗತ್ತು ಶ್ಲಾಘಿಸುತ್ತಿದೆ. ಇಂದು ಪ್ರಪಂಚ ವ್ಯಾಪಿಯಾಗಿ ಕಂಪನಿಗಳು ಭಾರತದಲ್ಲಿನ ಉದಯೋನ್ಮುಖ ಕ್ಷೇತ್ರಗಳ ಬಗ್ಗೆ ಉತ್ಸುಕವಾಗಿವೆ. ಅರೆವಾಹಕ (ಸೆಮಿಕಂಡಕ್ಟರ್) ವಲಯದಲ್ಲಿನ ಹೂಡಿಕೆಯಿಂದ ಇದು ಸ್ಪಷ್ಟವಾಗುತ್ತದೆ. ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಕ್ಷೇತ್ರಗಳು ಸೆಮಿಕಂಡಕ್ಟರ್ ವಲಯದಿಂದ ಗಮನಾರ್ಹವಾಗಿ ಪ್ರಯೋಜನ ಪಡೆಯುತ್ತವೆ.

ನನ್ನ ಸರ್ಕಾರವು ಹಸಿರು ಸಾರಿಗೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಲಕ್ಷಾಂತರ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲಾಗಿದೆ. ನಾವು ಈಗ ಭಾರತದಲ್ಲಿ ದೊಡ್ಡ ವಿಮಾನಗಳ ತಯಾರಿಕೆಗೂ ಕ್ರಮಗಳನ್ನು ಕೈಗೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಉತ್ಪಾದನಾ ವಲಯದಲ್ಲಿ ಕೋಟ್ಯಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.

ಗೌರವಾನ್ವಿತ ಸದಸ್ಯರೇ,

29. ಇಂದು ಪ್ರಪಂಚದಾದ್ಯಂತ, ಪರಿಸರ ಸ್ನೇಹಿ ಉತ್ಪನ್ನಗಳಿಗೆ ವಿಶೇಷ ಬೇಡಿಕೆ ಇದೆ. ಅದಕ್ಕಾಗಿಯೇ ನನ್ನ ಸರ್ಕಾರ ʻಶೂನ್ಯ ಪರಿಣಾಮ-ಶೂನ್ಯ ದೋಷʼಕ್ಕೆ ಒತ್ತು ನೀಡುತ್ತಿದೆ. ನಾವು ಈಗ ಹಸಿರು ಇಂಧನಕ್ಕೂ ಹೆಚ್ಚಿನ ಗಮನ ನೀಡುತ್ತಿದ್ದೇವೆ.

  • 10 ವರ್ಷಗಳಲ್ಲಿ, ಪಳೆಯುಳಿಕೆಯೇತರ ಇಂಧನ ಆಧಾರಿತ ಇಂಧನ ಸಾಮರ್ಥ್ಯವು 81 ಗಿಗಾವ್ಯಾಟ್ ನಿಂದ 188 ಗಿಗಾವ್ಯಾಟ್‌ಗೆ ಏರಿದೆ.
  • ಈ ಅವಧಿಯಲ್ಲಿ ಸೌರ ವಿದ್ಯುತ್ ಸಾಮರ್ಥ್ಯ 26 ಪಟ್ಟು ಹೆಚ್ಚಾಗಿದೆ.
  • ಅಂತೆಯೇ, ಪವನ ವಿದ್ಯುತ್ ಸಾಮರ್ಥ್ಯವು ದ್ವಿಗುಣಗೊಂಡಿದೆ.
  • ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದ ವಿಷಯದಲ್ಲಿ ನಾವು ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದೇವೆ.
  • ಪವನ ವಿದ್ಯುತ್ ಸಾಮರ್ಥ್ಯದಲ್ಲಿ ನಾವು ನಾಲ್ಕನೇ ಸ್ಥಾನದಲ್ಲಿದ್ದೇವೆ.
  • ಸೌರ ವಿದ್ಯುತ್ ಸಾಮರ್ಥ್ಯದಲ್ಲಿ ನಾವು ಐದನೇ ಸ್ಥಾನದಲ್ಲಿದ್ದೇವೆ.
  • ಭಾರತವು 2030ರ ವೇಳೆಗೆ ತನ್ನ ವಿದ್ಯುತ್ ಶಕ್ತಿ ಸ್ಥಾಪಿತ ಸಾಮರ್ಥ್ಯದ 50 ಪ್ರತಿಶತವನ್ನು ಪಳೆಯುಳಿಕೆಯೇತರ ಇಂಧನಗಳಿಂದ ಪಡೆಯುವ ಗುರಿಯನ್ನು ಹೊಂದಿದೆ.
  • ಕಳೆದ 10 ವರ್ಷಗಳಲ್ಲಿ 11 ಹೊಸ ʻಸೋಲಾರ್ ಪಾರ್ಕ್ʼಗಳನ್ನು ನಿರ್ಮಿಸಲಾಗಿದೆ. ಇಂದು, 9 ಸೋಲಾರ್‌ ಪಾರ್ಕ್‌ಗಳ ಕೆಲಸ ಪ್ರಗತಿಯಲ್ಲಿದೆ.
  • ಕೆಲವು ದಿನಗಳ ಹಿಂದೆ, ಸೌರ ಮೇಲ್ಛಾವಣಿ ಸ್ಥಾಪನೆಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ 1 ಕೋಟಿ ಕುಟುಂಬಗಳಿಗೆ ನೆರವು ನೀಡಲಾಗುವುದು. ಇದು ಜನರ ವಿದ್ಯುತ್ ಬಿಲ್ ಗಳನ್ನು ಸಹ ಕಡಿಮೆ ಮಾಡುತ್ತದೆ ಮತ್ತು ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ಮಾರುಕಟ್ಟೆಗೆ ಮಾರಾಟ ಮಾಡಬಹುದಾಗಿದೆ.
  • ಪರಮಾಣು ಶಕ್ತಿ ಕ್ಷೇತ್ರದಲ್ಲಿಯೂ ಬಹಳ ವೇಗವಾಗಿ ಕೆಲಸ ನಡೆಯುತ್ತಿದೆ. ನನ್ನ ಸರ್ಕಾರ 10 ಹೊಸ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಅನುಮೋದನೆ ನೀಡಿದೆ.
  • ಜಲಜನಕ ಇಂಧನ ಕ್ಷೇತ್ರದಲ್ಲಿಯೂ ಭಾರತವು ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಇಲ್ಲಿಯವರೆಗೆ, ನಾವು ಲಡಾಖ್ ಮತ್ತು ಡಿಯು-ಡಮನ್‌ನಲ್ಲಿ ಎರಡು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ.
  • ನನ್ನ ಸರ್ಕಾರ ಎಥೆನಾಲ್ ಕ್ಷೇತ್ರದಲ್ಲಿ ಅಭೂತಪೂರ್ವ ಕೆಲಸ ಮಾಡಿದೆ. ದೇಶವು ಶೇಕಡಾ 12ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸಿದೆ. ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣದ ಗುರಿ ಸಾಧನೆಯೂ ಶೀಘ್ರದಲ್ಲೇ ನೆರವೇರಲಿದೆ. ಇದು ನಮ್ಮ ರೈತರ ಆದಾಯವನ್ನು ಹೆಚ್ಚಿಸುತ್ತದೆ. ಇಲ್ಲಿಯವರೆಗೆ, ಸರ್ಕಾರಿ ಕಂಪನಿಗಳು ಒಂದು ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ಎಥೆನಾಲ್ ಅನ್ನು ಸಂಗ್ರಹಿಸಿವೆ. ಈ ಎಲ್ಲಾ ಪ್ರಯತ್ನಗಳು ನಮ್ಮ ಇಂಧನ ಅಗತ್ಯಗಳಿಗಾಗಿ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ. ಕೆಲವು ದಿನಗಳ ಹಿಂದೆ, ಬಂಗಾಳ ಕೊಲ್ಲಿಯಲ್ಲಿ ಹೊಸ ಬ್ಲಾಕ್‌ನಲ್ಲಿ ತೈಲ ಉತ್ಪಾದನೆ ಪ್ರಾರಂಭವಾಗಿದೆ. ಇದು ದೇಶದ ಪಾಲಿಗೆ ದೊಡ್ಡ ಸಾಧನೆಯಾಗಿದೆ.

ಗೌರವಾನ್ವಿತ ಸದಸ್ಯರೇ,

30. ಭೂಮಿಯಲ್ಲಿ ಪ್ರಮುಖ ಖನಿಜಗಳ ಲಭ್ಯತೆಯು ಸೀಮಿತವಾಗಿದೆ. ಅದಕ್ಕಾಗಿಯೇ ನನ್ನ ಸರ್ಕಾರ ಪರಿವೃತ್ತ ಆರ್ಥಿಕತೆಯನ್ನು ಪ್ರೋತ್ಸಾಹಿಸುತ್ತಿದೆ. ಭಾರತದ ಮೊದಲ  'ವೆಹಿಕಲ್ ಸ್ಕ್ರ್ಯಾಪೇಜ್ ಪಾಲಿಸಿ' ಕೂಡ ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿದೆ.

ಆಳ ಸಮುದ್ರ ಗಣಿಗಾರಿಕೆಯ ಮೂಲಕ ಖನಿಜಗಳ ಭವಿಷ್ಯವನ್ನು ಅನ್ವೇಷಿಸುವುದು ಸಹ ಮುಖ್ಯವಾಗಿದೆ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ʻಆಳ ಸಾಗರ ಯೋಜನೆʼಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯು ಸಮುದ್ರ ಜೀವಿಗಳ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಭಾರತದ 'ಸಮುದ್ರಯಾನ' ಈ ಬಗ್ಗೆ ಸಂಶೋಧನೆಯಲ್ಲಿ ತೊಡಗಿದೆ.

ಭಾರತವನ್ನು ವಿಶ್ವದ ಪ್ರಮುಖ ಬಾಹ್ಯಾಕಾಶ ಶಕ್ತಿಯನ್ನಾಗಿ ಮಾಡುವಲ್ಲಿ ನನ್ನ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಇದು ಮಾನವ ಜೀವನವನ್ನು ಸುಧಾರಿಸುವ ಮಾರ್ಗವಾಗಿದೆ. ಜೊತೆಗೆ, ಸರ್ಕಾರದ ಈ ಕ್ರಮವು ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಪಾಲನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ವಿಸ್ತರಿಸಲು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದು ಅನೇಕ ಹೊಸ ಬಾಹ್ಯಾಕಾಶ ನವೋದ್ಯಮಗಳ ಉಗಮಕ್ಕೆ ಕಾರಣವಾಗಿದೆ. ʻಗಗನಯಾನʼ ಯೋಜನೆಯ ಮೂಲಕ ಭಾರತ ಬಾಹ್ಯಾಕಾಶಕ್ಕೆ ಜಿಗಿಯುವ ದಿನ ದೂರವಿಲ್ಲ.

ಗೌರವಾನ್ವಿತ ಸದಸ್ಯರೇ,

31. ನನ್ನ ಸರ್ಕಾರವು ಭಾರತವನ್ನು ವಿಶ್ವದ ಪ್ರಮುಖ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡಿದೆ. ಇದು ಕೋಟ್ಯಂತರ ಯುವಕರಿಗೆ ಉದ್ಯೋಗ ಒದಗಿಸಿದೆ.

ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವು ವಿಶ್ವದ ಮುಂಚೂಣಿ ದೇಶವಾಗಿ ಉಳಿಯಬೇಕು ಎಂಬುದೇ ನಮ್ಮ ಪ್ರಯತ್ನವಾಗಿದೆ.

ನನ್ನ ಸರ್ಕಾರ ʻಕೃತಕ ಬುದ್ಧಿಮತ್ತೆ ಯೋಜನೆʼ ಮೇಲೆ ಕೆಲಸ ಮಾಡುತ್ತಿದೆ. ಇದು ಭಾರತದ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಇದು ಹೊಸ ನವೋದ್ಯಮಗಳಿಗೆ ಮಾರ್ಗಗಳನ್ನು ತೆರೆಯುತ್ತದೆ. ಇದು ಕೃಷಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತದೆ.

ನನ್ನ ಸರ್ಕಾರವು ʻರಾಷ್ಟ್ರೀಯ ಕ್ವಾಂಟಮ್ ಮಿಷನ್ʼಗೂ ಅನುಮೋದನೆ ನೀಡಿದೆ. ಹೊಸ ಯುಗದ ಡಿಜಿಟಲ್ ಮೂಲಸೌಕರ್ಯವನ್ನು ʻಕ್ವಾಂಟಮ್ ಕಂಪ್ಯೂಟಿಂಗ್ʼ ಅಭಿವೃದ್ಧಿಪಡಿಸುತ್ತದೆ. ಈಗ ಭಾರತವು ಇದರಲ್ಲಿ ಮುಂಚೂಣಿಯಲ್ಲಿ ಇರುವಂತೆ ಖಚಿತಪಡಿಸಿಕೊಳ್ಳುವ ಕೆಲಸ ಪ್ರಗತಿಯಲ್ಲಿದೆ.

ಗೌರವಾನ್ವಿತ ಸದಸ್ಯರೇ,

32. ಭಾರತದ ಯುವಜನರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ನನ್ನ ಸರ್ಕಾರ ನಿರಂತರವಾಗಿ ಹೊಸ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ, ʻಹೊಸ ರಾಷ್ಟ್ರೀಯ ಶಿಕ್ಷಣ ನೀತಿʼಯನ್ನು ರೂಪಿಸಿ, ತ್ವರಿತವಾಗಿ ಜಾರಿಗೆ ತರಲಾಗುತ್ತಿದೆ.

ʻರಾಷ್ಟ್ರೀಯ ಶಿಕ್ಷಣ ನೀತಿʼಯಲ್ಲಿ ಮಾತೃಭಾಷೆ ಮತ್ತು ಭಾರತೀಯ ಭಾಷೆಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಭಾರತೀಯ ಭಾಷೆಗಳಲ್ಲೂ ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಮುಂತಾದ ವಿಷಯಗಳ ಬೋಧನೆಯನ್ನು ಪ್ರಾರಂಭಿಸಲಾಗಿದೆ.

ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು, ನನ್ನ ಸರ್ಕಾರವು 14,000ಕ್ಕೂ ಹೆಚ್ಚು 'ಪಿಎಂ ಶ್ರೀ ವಿದ್ಯಾಲಯ'ಗಳ ಸ್ಥಾಪನೆಗೆ ಮುಂದಾಗಿದೆ. ಈ ಪೈಕಿ 6000ಕ್ಕೂ ಹೆಚ್ಚು ಶಾಲೆಗಳನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ಅವು ಕಾರ್ಯಾರಂಭ ಮಾಡಿವೆ.

ನನ್ನ ಸರ್ಕಾರದ ಪ್ರಯತ್ನದಿಂದಾಗಿ ದೇಶದಲ್ಲಿ ಶಾಲೆ ಬಿಡುವವರ ಪ್ರಮಾಣ ಕಡಿಮೆಯಾಗಿದೆ. ಉನ್ನತ ಶಿಕ್ಷಣದಲ್ಲಿ ಬಾಲಕಿಯರ ದಾಖಲಾತಿ ಹೆಚ್ಚಾಗಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ದಾಖಲಾತಿ ಸುಮಾರು 44%, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ದಾಖಲಾತಿ 65% ಹೆಚ್ಚು ಮತ್ತು ಒಬಿಸಿ ವಿದ್ಯಾರ್ಥಿಗಳ ದಾಖಲಾತಿ ಶೇಕಡಾ 44ಕ್ಕಿಂತ ಹೆಚ್ಚಾಗಿದೆ.

ʻಅಟಲ್ ಇನ್ನೋವೇಶನ್ ಮಿಷನ್ʼ ಅಡಿಯಲ್ಲಿ, ನಾವೀನ್ಯತೆಯನ್ನು ಉತ್ತೇಜಿಸಲು 10,000 ʻಅಟಲ್ ಟಿಂಕರಿಂಗ್ ಲ್ಯಾಬ್ʼಗಳನ್ನು ಸ್ಥಾಪಿಸಲಾಗಿದೆ. 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದಾರೆ.

2014ರವರೆಗೆ ದೇಶದಲ್ಲಿ 7 ʻಏಮ್ಸ್ʼ ಮತ್ತು 390 ಕ್ಕಿಂತ ಕಡಿಮೆ ವೈದ್ಯಕೀಯ ಕಾಲೇಜುಗಳಿದ್ದವು, ಕಳೆದ ದಶಕದಲ್ಲಿ 16 ʻಏಮ್ಸ್ʼ ಮತ್ತು 315 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.

157 ನರ್ಸಿಂಗ್ ಕಾಲೇಜುಗಳನ್ನು ಸಹ ಸ್ಥಾಪಿಸಲಾಗುತ್ತಿದೆ.

ಕಳೆದ ದಶಕದಲ್ಲಿ, ಎಂಬಿಬಿಎಸ್ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ.

 

ಗೌರವಾನ್ವಿತ ಸದಸ್ಯರೇ,

33. ಪ್ರವಾಸೋದ್ಯಮವು ಯುವಕರಿಗೆ ಉದ್ಯೋಗವನ್ನು ಒದಗಿಸುವ ದೊಡ್ಡ ಕ್ಷೇತ್ರವಾಗಿದೆ. ಕಳೆದ 10 ವರ್ಷಗಳಲ್ಲಿ ನನ್ನ ಸರ್ಕಾರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭೂತಪೂರ್ವ ಕೆಲಸ ಮಾಡಿದೆ. ಭಾರತದಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆಯ ಜೊತೆಗೆ, ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.

ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಕಾರಣ ಭಾರತದ ಬೆಳೆಯುತ್ತಿರುವ ಸ್ಥಾನಮಾನ. ಇಂದು ಜಗತ್ತು ಭಾರತವನ್ನು ಅನ್ವೇಷಿಸಲು ಮತ್ತು ತಿಳಿದುಕೊಳ್ಳಲು ಬಯಸುತ್ತಿದೆ. ಇದಲ್ಲದೆ, ಅತ್ಯುತ್ತಮ ಸಂಪರ್ಕದಿಂದಾಗಿ ಪ್ರವಾಸೋದ್ಯಮದ ವ್ಯಾಪ್ತಿಯೂ ಹೆಚ್ಚಾಗಿದೆ. ವಿವಿಧ ಸ್ಥಳಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣದಿಂದಲೂ ಅನುಕೂಲವಾಗಿದೆ. ಈಗ, ಈಶಾನ್ಯ ಭಾರತವು ದಾಖಲೆಯ ಪ್ರವಾಸಿಗರ ಆಗಮನಕ್ಕೆ ಸಾಕ್ಷಿಯಾಗುತ್ತಿದೆ. ಈಗ ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪಗಳ ಬಗ್ಗೆ ಪ್ರವಾಸಿಗರ ಉತ್ಸಾಹ ಹೆಚ್ಚಿದೆ.

ದೇಶಾದ್ಯಂತ ಯಾತ್ರಾ ಸ್ಥಳಗಳು ಮತ್ತು ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ನನ್ನ ಸರ್ಕಾರ ಒತ್ತು ನೀಡಿದೆ. ಇದು ಈಗ ಭಾರತದಲ್ಲಿ ತೀರ್ಥಯಾತ್ರೆಯನ್ನು ಸುಗಮವಾಗಿಸಿದೆ. ಇದೇ ವೇಳೆ, ಭಾರತದಲ್ಲಿ ಪಾರಂಪರಿಕ ಪ್ರವಾಸೋದ್ಯಮದ ಬಗ್ಗೆ ಜಗತ್ತಿನಲ್ಲಿ ಆಸಕ್ತಿ ಹೆಚ್ಚುತ್ತಿದೆ. ಕಳೆದ ಒಂದು ವರ್ಷದಲ್ಲಿ 8.5 ಕೋಟಿ ಜನರು ಕಾಶಿಗೆ ಭೇಟಿ ನೀಡಿದ್ದಾರೆ. 5 ಕೋಟಿಗೂ ಹೆಚ್ಚು ಜನರು ʻಮಹಾಕಾಲ್ʼ ದೇಗುಲಕ್ಕೆ ಭೇಟಿ ನೀಡಿದ್ದಾರೆ. 19 ಲಕ್ಷಕ್ಕೂ ಹೆಚ್ಚು ಜನರು ಕೇದಾರಧಾಮಕ್ಕೆ ಭೇಟಿ ನೀಡಿದ್ದಾರೆ. ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾನದ 5 ದಿನಗಳಲ್ಲಿ 13 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಭಾರತದ ಪ್ರತಿಯೊಂದು ಭಾಗದಲ್ಲೂ ಯಾತ್ರಾ ಸ್ಥಳಗಳು ಅಭೂತಪೂರ್ವ ಸೌಲಭ್ಯಗಳ ವಿಸ್ತರಣೆಗೆ ಸಾಕ್ಷಿಯಾಗಿವೆ.

ಸಭೆಗಳು ಮತ್ತು ವಸ್ತುಪ್ರದರ್ಶನ ಸಂಬಂಧಿತ ಕ್ಷೇತ್ರಗಳಿಗೆ ಭಾರತವನ್ನು ಪ್ರಮುಖ ತಾಣವನ್ನಾಗಿ ಮಾಡಲು ನನ್ನ ಸರ್ಕಾರ ಇಚ್ಛಿಸಿದೆ. ಇದಕ್ಕಾಗಿ ʻಭಾರತ ಮಂಟಪʼ, ʻಯಶೋಭೂಮಿʼಯಂತಹ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ, ಪ್ರವಾಸೋದ್ಯಮವು ಉದ್ಯೋಗದ ಪ್ರಮುಖ ಮೂಲವಾಗಲಿದೆ.

ಗೌರವಾನ್ವಿತ ಸದಸ್ಯರೇ,

34.  ದೇಶದ ಯುವಕರಲ್ಲಿ ಕೌಶಲ್ಯ ಮತ್ತು ಉದ್ಯೋಗಾರ್ಹತೆ ಹೆಚ್ಚಿಸಲು ನಾವು ಕ್ರೀಡಾ ಆರ್ಥಿಕತೆಯನ್ನು ಬಲಪಡಿಸುತ್ತಿದ್ದೇವೆ. ನನ್ನ ಸರ್ಕಾರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಅಭೂತಪೂರ್ವ ಬೆಂಬಲ ನೀಡಿದೆ. ಇಂದು ಭಾರತವು ಮಹಾನ್ ಕ್ರೀಡಾ ಶಕ್ತಿಯಾಗುವತ್ತ ದಾಪುಗಾಲು ಇಡುತ್ತಿದೆ.

ಆಟಗಾರರ ಜೊತೆಗೆ, ಇಂದು ನಾವು ಕ್ರೀಡೆಗೆ ಸಂಬಂಧಿಸಿದ ಇತರ ಕ್ಷೇತ್ರಗಳಿಗೂ ಒತ್ತು ನೀಡುತ್ತಿದ್ದೇವೆ. ಇಂದು ʻರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯʼವನ್ನು ಸ್ಥಾಪಿಸಲಾಗಿದೆ. ನಾವು ದೇಶದಲ್ಲಿ ಹತ್ತಾರು ʻಉತ್ಕೃಷ್ಟತಾ ಕೇಂದ್ರʼಗಳನ್ನು ಸ್ಥಾಪಿಸಿದ್ದೇವೆ. ಇವು ಯುವಕರಿಗೆ ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಲು ಅವಕಾಶವನ್ನು ಒದಗಿಸುತ್ತವೆ. ಕ್ರೀಡಾ ಸರಕುಗಳ ಉದ್ಯಮಕ್ಕೂ ಎಲ್ಲಾ ರೀತಿಯ ನೆರವನ್ನು ನೀಡಲಾಗುತ್ತಿದೆ.

ಕಳೆದ 10 ವರ್ಷಗಳಲ್ಲಿ, ಭಾರತವು ಅನೇಕ ಕ್ರೀಡೆಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದೆ.

'ವಿಕಸಿತ ಭಾರತ' ನಿರ್ಮಾಣಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ನಮ್ಮ ಯುವಕರನ್ನು ಪ್ರೇರೇಪಿಸಲು ಹಾಗೂ ಅವರಲ್ಲಿ ಕರ್ತವ್ಯ ಪ್ರಜ್ಞೆ ಮತ್ತು ಸೇವಾ ಮನೋಭಾವವನ್ನು ಬೆಳೆಸಲು 'ಮೇರಾ ಯುವ ಭಾರತ್' ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ, ಸುಮಾರು 1 ಕೋಟಿ ಯುವಕರು ಈ ಉಪಕ್ರಮದೊಂದಿಗೆ ಕೈ ಜೋಡಿಸಿದ್ದಾರೆ.

ಗೌರವಾನ್ವಿತ ಸದಸ್ಯರೇ,

35. ಏಳಿಗೆಯ ಸಮಯದಲ್ಲಿ ಸದೃಢ ಸರ್ಕಾರವಿದ್ದರೆ, ಅದರಿಂದ ಆಗುವ ಪ್ರಯೋಜನವನ್ನು ನಾವು ನೋಡಿದ್ದೇವೆ. ಕಳೆದ 3 ವರ್ಷಗಳಲ್ಲಿ ಜಗತ್ತು ಪ್ರಕ್ಷುಬ್ಧವಾಗಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಅನೇಕ ಸಂಘರ್ಷಗಳು ಭುಗಿಲೆದ್ದಿವೆ. ಈ ಕಷ್ಟದ ಸಮಯದಲ್ಲಿ ನನ್ನ ಸರ್ಕಾರ ಭಾರತವನ್ನು ʻವಿಶ್ವ-ಮಿತ್ರʼನನ್ನಾಸಿದೆ. ʻವಿಶ್ವ-ಮಿತ್ರʼನಾಗಿ ಭಾರತದ ಪಾತ್ರದಿಂದಾಗಿಯೇ ನಾವು ಇಂದು ಜಾಗತಿಕ ದಕ್ಷಿಣದ ಧ್ವನಿಯಾಗಿದ್ದೇವೆ.

ಕಳೆದ 10 ವರ್ಷಗಳಲ್ಲಿ, ಮತ್ತೊಂದು ಸಾಂಪ್ರದಾಯಿಕ ಆಲೋಚನಾ ವಿಧಾನವನ್ನು ಬದಲಾಯಿಸಲಾಗಿದೆ. ಈ ಮೊದಲು, ರಾಜತಾಂತ್ರಿಕತೆಗೆ ಸಂಬಂಧಿಸಿದ ಕಾರ್ಯಕ್ರಮಗಳು ದೆಹಲಿಯ ಕಾರಿಡಾರ್‌ಗಳಿಗೆ ಮಾತ್ರ ಸೀಮಿತವಾಗಿದ್ದವು. ನನ್ನ ಸರ್ಕಾರವು ಇದರಲ್ಲಿ ಸಾರ್ವಜನಿಕರ ನೇರ ಭಾಗವಹಿಸುವಿಕೆಯನ್ನು ಖಚಿತಪಡಿಸಿದೆ. ಭಾರತದ ʻಜಿ-20ʼ ಅಧ್ಯಕ್ಷತೆಯ ಅವಧಿಯಲ್ಲಿ ನಾವು ಇದಕ್ಕೆ ಉತ್ತಮ ಉದಾಹರಣೆಯನ್ನು ನೋಡಿದ್ದೇವೆ. ಭಾರತವು ʻಜಿ-20ʼ ಶೃಂಗಸಭೆಯನ್ನು ಸಾರ್ವಜನಿಕರೊಂದಿಗೆ ಸಂಪರ್ಕಿಸಿದ ರೀತಿ ಅಭೂತಪೂರ್ವವಾಗಿತ್ತು. ದೇಶಾದ್ಯಂತ ನಡೆದ ಕಾರ್ಯಕ್ರಮಗಳ ಮೂಲಕ ಭಾರತದ ನಿಜವಾದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಲಾಯಿತು. ಜಮ್ಮು-ಕಾಶ್ಮೀರ ಮತ್ತು ಈಶಾನ್ಯವು ಮೊದಲ ಬಾರಿಗೆ ಇಂತಹ ದೊಡ್ಡ ಅಂತರರಾಷ್ಟ್ರೀಯ ಕಾರ್ಯಕ್ರಮಗಳಿಗೆ ಸಾಕ್ಷಿಯಾದವು.

ಭಾರತದಲ್ಲಿ ನಡೆದ ಐತಿಹಾಸಿಕ ʻಜಿ -20ʼ ಶೃಂಗಸಭೆಯನ್ನು ಇಡೀ ಜಗತ್ತು ಶ್ಲಾಘಿಸಿತು. ವಿಭಜಿತ ವಾತಾವರಣದಲ್ಲಿಯೂ ʻದೆಹಲಿ ಘೋಷಣೆʼಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು ಐತಿಹಾಸಿಕ ಬೆಳವಣಿಗೆ. 'ಮಹಿಳಾ ನೇತೃತ್ವದ ಅಭಿವೃದ್ಧಿ'ಯಿಂದ ಹಿಡಿದು ಹವಾಮಾನ ವಿಷಯಗಳವರೆಗೆ ಭಾರತದ ಆಶಯಗಳು ಈ ಘೋಷಣೆಯ ಆಧಾರವಾಗಿವೆ.

ಆಫ್ರಿಕನ್ ಒಕ್ಕೂಟಕ್ಕೆ ʻಜಿ-20ʼಯಲ್ಲಿ ಶಾಶ್ವತ ಸದಸ್ಯತ್ವವನ್ನು ಕಲ್ಪಿಸಿಕೊಡುವಲ್ಲಿ ನಮ್ಮ ಪ್ರಯತ್ನಗಳನ್ನು ಸಹ ಶ್ಲಾಘಿಸಲಾಗಿದೆ. ಈ ಸಮ್ಮೇಳನದಲ್ಲಿ, ʻಭಾರತ-ಮಧ್ಯಪ್ರಾಚ್ಯ- ಯುರೋಪ್ ಕಾರಿಡಾರ್ʼ ಅಭಿವೃದ್ಧಿಯನ್ನು ಘೋಷಿಸಲಾಯಿತು. ಈ ಕಾರಿಡಾರ್ ಭಾರತದ ಕಡಲ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ʻಜಾಗತಿಕ ಜೈವಿಕ ಇಂಧನ ಮೈತ್ರಿʼಯ ಆರಂಭವೂ ಒಂದು ದೊಡ್ಡ ಕಾರ್ಯಕ್ರಮವಾಗಿದೆ. ಇಂತಹ ಕ್ರಮಗಳು ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತದ ಪಾತ್ರವನ್ನು ವಿಸ್ತರಿಸುತ್ತಿವೆ.

ಗೌರವಾನ್ವಿತ ಸದಸ್ಯರೇ,

36. ಜಾಗತಿಕ ವಿವಾದಗಳು ಮತ್ತು ಸಂಘರ್ಷಗಳ ಈ ಯುಗದಲ್ಲಿಯೂ ನನ್ನ ಸರ್ಕಾರವು ಭಾರತದ ಹಿತಾಸಕ್ತಿಗಳನ್ನು ದೃಢವಾಗಿ ವಿಶ್ವದ ಮುಂದಿರಿಸಿದೆ. ಇಂದು ಭಾರತದ ವಿದೇಶಾಂಗ ನೀತಿಯ ವ್ಯಾಪ್ತಿ ಹಿಂದಿನ ನಿರ್ಬಂಧಗಳನ್ನು ಮೀರಿದೆ. ಇಂದು ಭಾರತವು ಅನೇಕ ಜಾಗತಿಕ ಸಂಸ್ಥೆಗಳ ಗೌರವಾನ್ವಿತ ಸದಸ್ಯ ರಾಷ್ಟ್ರವಾಗಿದೆ. ಇಂದು ಭಾರತವು ಭಯೋತ್ಪಾದನೆಯ ವಿರುದ್ಧ ವಿಶ್ವದ ಪ್ರಮುಖ ಧ್ವನಿಯಾಗಿದೆ.

ಇಂದು ಭಾರತವು ಜಾಗತಿಕ ಸಮಸ್ಯೆಗಳಿಗೆ ದಿಟ್ಟವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಮನುಕುಲವು ಬಿಕ್ಕಟ್ಟಿಗೆ ಸಿಲುಕಿದಾಗ ಸೂಕ್ತ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂದು ಜಗತ್ತಿನಲ್ಲಿ ಎಲ್ಲೆಲ್ಲಿ ಬಿಕ್ಕಟ್ಟು ಇದೆಯೋ, ಅಲ್ಲಿ ಭಾರತವು ತ್ವರಿತವಾಗಿ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತದೆ. ವಿಶ್ವದಾದ್ಯಂತ ವಿವಿಧ ಭಾಗಗಳಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರಲ್ಲಿ ನನ್ನ ಸರ್ಕಾರ ಹೊಸ ವಿಶ್ವಾಸವನ್ನು ತುಂಬಿದೆ. ಬಿಕ್ಕಟ್ಟು ಉಂಟಾದೆಡೆಯೆಲ್ಲಾ, ʻಆಪರೇಷನ್ ಗಂಗಾʼ, ʻಆಪರೇಷನ್ ಕಾವೇರಿʼ, ʻವಂದೇ ಭಾರತ್ʼನಂತಹ ಅಭಿಯಾನಗಳ ಮೂಲಕ ನಾವು ಪ್ರತಿಯೊಬ್ಬ ಭಾರತೀಯರನ್ನು ಸುರಕ್ಷಿತವಾಗಿ ತವರಿಗೆ ಸ್ಥಳಾಂತರಿಸಿದ್ದೇವೆ.

ಯೋಗ, ಪ್ರಾಣಾಯಾಮ ಮತ್ತು ಆಯುರ್ವೇದದಂತಹ ಭಾರತೀಯ ಸಂಪ್ರದಾಯಗಳನ್ನು ಇಡೀ ಜಗತ್ತಿಗೆ ಪ್ರಚಾರ ಮಾಡಲು ನನ್ನ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡಿದೆ. ಕಳೆದ ವರ್ಷ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ 135 ದೇಶಗಳ ಪ್ರತಿನಿಧಿಗಳು ಒಟ್ಟಿಗೆ ಯೋಗ ಮಾಡಿದ್ದರು. ಇದು ಸ್ವತಃ ಒಂದು ದಾಖಲೆಯಾಗಿದೆ. ನನ್ನ ಸರ್ಕಾರ ʻಆಯುಷ್ʼ ಅಭಿವೃದ್ಧಿಗಾಗಿ ಹೊಸ ಸಚಿವಾಲಯವನ್ನು ಸ್ಥಾಪಿಸಿದೆ. ʻವಿಶ್ವ ಆರೋಗ್ಯ ಸಂಸ್ಥೆʼಯ ಮೊಟ್ಟ ಮೊದಲ ʻಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರʼವನ್ನು ಭಾರತದಲ್ಲಿ ಸ್ಥಾಪಿಸಲಾಗುತ್ತಿದೆ.

ಗೌರವಾನ್ವಿತ ಸದಸ್ಯರೇ,

37. ನಾಗರಿಕತೆಗಳ ಇತಿಹಾಸದಲ್ಲಿ, ಮುಂಬರುವ ಹಲವು ಶತಮಾನಗಳ ಭವಿಷ್ಯವನ್ನು ರೂಪಿಸುವ ಘಟ್ಟಗಳು ಬರುತ್ತವೆ. ಭಾರತದ ಇತಿಹಾಸದಲ್ಲಿಯೂ ಇಂತಹ ಅನೇಕ ನಿರ್ಣಾಯಕ ಕ್ಷಣಗಳಿವೆ.

ಈ ವರ್ಷದ ಜನವರಿ 22 ರಂದು, ಭಾರತವು ಇದೇ ರೀತಿಯ ʻಯುಗಪ್ರವರ್ತಕ ಕ್ಷಣʼಕ್ಕೆ ಸಾಕ್ಷಿಯಾಯಿತು.

ಶತಮಾನಗಳ ಕಾಯುವಿಕೆಯ ಬಳಿಕ ʻರಾಮಲಲ್ಲಾʼನನ್ನು ಈಗ ಅಯೋಧ್ಯೆಯ ತನ್ನ ಭವ್ಯ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಇದು ನಮ್ಮ ಕೋಟ್ಯಂತರ ದೇಶವಾಸಿಗಳ ಆಕಾಂಕ್ಷೆಗಳು ಮತ್ತು ನಂಬಿಕೆಯ ವಿಷಯವಾಗಿತ್ತು.  ವಿಶೇಷವೆಂದರೆ, ಇದರ ನಿರ್ಣಯವನ್ನು ಸಾಮರಸ್ಯದ ರೀತಿಯಲ್ಲಿ ಸಾಧಿಸಲಾಗಿದೆ.

ಗೌರವಾನ್ವಿತ ಸದಸ್ಯರೇ,

38. ನೀವೆಲ್ಲರೂ ಕೋಟ್ಯಂತರ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತೀರಿ. ಇಂದು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಯುವಕರ ಕನಸುಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ʻಅಮೃತ ಪೀಳಿʼಗೆಯ ಕನಸುಗಳನ್ನು ನನಸು ಮಾಡಲು ಸಿಗುವ ಯಾವೊಂದು ಅವಕಾಶವನ್ನೂ ಕೈತಪ್ಪದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ʻವಿಕಸಿತ ಭಾರತʼ ನಮ್ಮ ʻಅಮೃತ ಪೀಳಿಗೆʼಯ ಕನಸುಗಳನ್ನು ಈಡೇರಿಸುತ್ತದೆ. ಇದಕ್ಕಾಗಿ, ಈ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ.

ಗೌರವಾನ್ವಿತ ಸದಸ್ಯರೇ,

39. ಗೌರವಾನ್ವಿತ ಅಟಲ್ ಜೀ ಹೇಳಿದ್ದರು:

अपनी ध्येय-यात्रा में,

हम कभी रुके नहीं हैं।

किसी चुनौती के सम्मुख

कभी झुके नहीं हैं।

ನನ್ನ ಸರ್ಕಾರ 140 ಕೋಟಿ ದೇಶವಾಸಿಗಳ ಕನಸುಗಳನ್ನು ಈಡೇರಿಸುವ ಭರವಸೆಯೊಂದಿಗೆ ಮುನ್ನಡೆಯುತ್ತಿದೆ.

 

ಈ ಹೊಸ ಸಂಸತ್ ಭವನವು ಭಾರತದ ಮಹತ್ವಾಕಾಂಕ್ಷೆಯ ಪ್ರಯಾಣಕ್ಕೆ ಬಲ ತುಂಬುವುದನ್ನು ಮುಂದುವರಿಸುತ್ತದೆ, ಜೊತೆಗೆ ಹೊಸ ಮತ್ತು ಆರೋಗ್ಯಕರ ಸಂಪ್ರದಾಯಗಳನ್ನು ಸೃಷ್ಟಿಸುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.

2047ನೇ ವರ್ಷಕ್ಕೆ ಸಾಕ್ಷಿಯಾಗಲು ಅನೇಕ ಸ್ನೇಹಿತರು ಈ ಸದನದಲ್ಲಿ ಇಲ್ಲದಿರಬಹುದು. ಆದರೆ ನಮ್ಮ ಪರಂಪರೆಯು, ಭವಿಷ್ಯದ ಪೀಳಿಗೆ ನಮ್ಮನ್ನು ನೆನಪಿಸಿಕೊಳ್ಳುವಂತಿರಬೇಕು.

ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು!

ಧನ್ಯವಾದಗಳು!

ಜೈ ಹಿಂದ್!

ಜೈ ಭಾರತ್!

 

*********

 



(Release ID: 2001044) Visitor Counter : 81