ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಜಲ ದೀಪಾವಳಿ-“ಮಹಿಳೆಯರಿಗಾಗಿ ನೀರು, ಮಹಿಳೆಯರಿಗಾಗಿ ಜಲ ಅಭಿಯಾನ’ ಆರಂಭ
ಜಲ ಆಡಳಿತ ನಿರ್ವಹಣೆಯಲ್ಲಿ ಮಹಿಳೆಯರ ಸೇರ್ಪಡೆಗೆ ವೇದಿಕೆ ಒದಗಿಸುವ ಗುರಿ
ಈ ಅಭಿಯಾನದಡಿ ಮಹಿಳಾ ಸ್ವಸಹಾಯ ಗುಂಪುಗಳಿಂದ 550ಕ್ಕೂ ಅಧಿಕ ಜಲ ಸಂಸ್ಕರಣಾ ಘಟಕಗಳಿಗೆ ಭೇಟಿ
Posted On:
06 NOV 2023 11:57AM by PIB Bengaluru
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ ಯುಎ) ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಎನ್ ಯುಎಲ್ ಎಂ) ಸಹಭಾಗಿತ್ವದಲ್ಲಿ ಮಹತ್ಷಾಕಾಂಕ್ಷೆಯ ಯೋಜನೆ ಅಟಲ್ ನಗರ ನವೀಕರಣ ಮತ್ತು ಪರಿವರ್ತನೆ ಯೋಜನೆ( ಅಮೃತ್ ) ಅಡಿಯಲ್ಲಿ “ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರ ಅಭಿಯಾನ’’ ಎಂಬ ಪ್ರಗತಿಪರ ಉಪಕ್ರಮವನ್ನು ಆರಂಭಿಸಲು ಸಜ್ಜಾಗಿದೆ. ಇದಕ್ಕೆ ಒಡಿಶಾ ನಗರ ಅಕಾಡೆಮಿ ಜ್ಞಾನ ಪಾಲುದಾರನಾಗಿದೆ. ಈ ಅಭಿಯಾನದಡಿ “ಜಲ ದೀಪಾವಳಿ’’ ಆಚರಿಸಲಾಗುವುದು ಮತ್ತು ಇದು ನವೆಂಬರ್ 7, 2023ರಂದು ಆರಂಭವಾಗಲಿದೆ ಮತ್ತು 2023ರ ನವೆಂಬರ್ 9ರವರೆಗೆ ನಡೆಯಲಿದೆ.
ಈ ಅಭಿಯಾನವು ನೀರಿನ ಆಡಳಿತ ನಿರ್ವಹಣೆಯಲ್ಲಿ ಮಹಿಳೆಯರನ್ನು ಸೇರ್ಪಡೆ ಮಾಡಿಕೊಳ್ಳಲು ವೇದಿಕೆ ಒದಗಿಸುವ ಗುರಿ ಹೊಂದಿದೆ. ಅವರು ಆಯಾ ನಗರಗಳಲ್ಲಿನ ಜಲ ಸಂಸ್ಕರಣಾ ಘಟಕಗಳಿಗೆ (ಡಬ್ಲೂಟಿಪಿಎಸ್) ಭೇಟಿ ನೀಡುವ ಮೂಲಕ ನೀರಿನ ಸಂಸ್ಕರಣಾ ಪ್ರಕ್ರಿಯೆಗಳ ಬಗ್ಗೆ ಅವರಿಗೆ ಖುದ್ದು ಜ್ಞಾನ ಪಡೆಯಲಿದ್ದಾರೆ. ಈ ಭೇಟಿಗಳು ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ತಲುಪಿಸುವ ಪ್ರಮುಖ ಕಾರ್ಯವಿಧಾನಗಳನ್ನು ವಿವರಿಸುತ್ತದೆ. ಅಲ್ಲದೆ, ಹೆಚ್ಚುವರಿಯಾಗಿ, ಮಹಿಳೆಯರು ನೀರಿನ ಗುಣಮಟ್ಟ ಪರೀಕ್ಷೆಯ ಶಿಷ್ಟಾಚಾರ (ಪ್ರೋಟೋಕಾಲ್)ಗಳ ಒಳನೋಟವನ್ನು ಪಡೆಯಲಿದ್ದಾರೆ, ಇದು ನಾಗರಿಕರು ಅಗತ್ಯವಾದ ಗುಣಮಟ್ಟದ ನೀರನ್ನು ಪಡೆಯುವುದನ್ನು ಖಾತ್ರಿಪಡಿಸುತ್ತದೆ. ನೀರಿನ ಮೂಲಸೌಕರ್ಯದೆಡೆಗೆ ಮಹಿಳೆಯರಲ್ಲಿ ಮಾಲೀಕತ್ವ ಮತ್ತು ತಮ್ಮದು ಎನ್ನುವ ಭಾವನೆಯನ್ನು ಹುಟ್ಟುಹಾಕುವುದು ಅಭಿಯಾನದ ಪ್ರಮುಖ ಗುರಿಯಾಗಿದೆ.
ಭಾರತವು 3,000 ಕ್ಕೂ ಅಧಿಕ ನೀರಿನ ಸಂಸ್ಕರಣಾ ಘಟಕಗಳನ್ನು ಹೊಂದಿದೆ, 65,000 ಎಂಎಲ್ ಡಿ ಗಿಂತ ಅಧಿಕ ನೀರಿನ ಸಂಸ್ಕರಣಾ ಸಾಮರ್ಥ್ಯ ಮತ್ತು 55,000 ಎಂಎಲ್ ಡಿ ಗಿಂತ ಅಧಿಕ ಕಾರ್ಯಾಚರಣೆ ಸಾಮರ್ಥ್ಯ ಹೊಂದಿವೆ. ಅಭಿಯಾನದ ವೇಳೆ ಮಹಿಳಾ ಸ್ವಸಹಾಯ ಗುಂಪುಗಳು (ಎಸ್ ಎಚ್ ಜಿ ಎಸ್ ಗಳು) 550 ಕ್ಕೂ ಅಧಿಕ ನೀರಿನ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಲಿದ್ದು, ಅವು 20,000 ಎಂಎಲ್ ಡಿ ಗಿಂತ (ದೇಶದ ಒಟ್ಟು ಶೇ.35 ಕ್ಕಿಂತ ಅಧಿಕ) ಅಧಿಕ ಸಂಯೋಜಿತ ಕಾರ್ಯಾಚರಣೆ ಸಾಮರ್ಥ್ಯವನ್ನು ಹೊಂದಿವೆ.
ಮನೆಗಳಲ್ಲಿ ಜಲ ನಿರ್ವಹಣೆಯಲ್ಲಿ ಮಹಿಳೆಯರು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಜಲ ಸಂಸ್ಕರಣೆ ಪ್ರಕ್ರಿಯೆ ಮತ್ತು ಮೂಲಸೌಕರ್ಯದ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸುವ ಮೂಲಕ, ಎಂಒಎಚ್ ಯುಎ ಅವರು ತಮ್ಮ ಕುಟುಂಬಗಳಿಗೆ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು ಖಾತ್ರಿಪಡಿಸಿಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸಲಿದೆ. ಅಲ್ಲದೆ, ಈ ಅಭಿಯಾನ ಸಾಂಪ್ರದಾಯಿಕ ಪುರುಷರ ಪ್ರಾಬಲ್ಯವಿರುವ ವಲಯದಲ್ಲಿ ಎಲ್ಲರನ್ನೂ ಒಳಗೊಂಡ ಮತ್ತು ವೈವಿಧ್ಯತೆ ಉತ್ತೇಜಿಸುವ ಮೂಲಕ ಲಿಂಗ ಸಮಾನತೆ ವಿಷಯವನ್ನು ಎದುರಿಸುವ ಗುರಿ ಹೊಂದಲಾಗಿದೆ.
ಒಂದನೇ ಹಂತದ ಜಲ ದೀಪಾವಳಿ- “ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರ ಅಭಿಯಾನ’’ದಡಿ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ (ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಐದು ರಾಜ್ಯಗಳನ್ನು ಹೊರತುಪಡಿಸಿ) ರಾಷ್ಟ್ರವ್ಯಾಪಿ 15, 000 ಕ್ಕೂ ಅಧಿಕ ಮಹಿಳಾ ಸ್ವಸಹಾಯ ಗುಂಪುಗಳು ಭಾಗವಹಿಸುವ ಸಾಧ್ಯತೆ ಇದೆ. ಅಭಿಯಾನದಡಿ ಈ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
- ಮಹಿಳೆಯರಿಗೆ ಜಲ ಸಂಸ್ಕರಣಾ ಘಟಕಗಳು ಮತ್ತು ನೀರಿನ ಪರೀಕ್ಷಾ ಸೌಕರ್ಯಗಳ ಕಾರ್ಯನಿರ್ವಹಣೆ ಬಗ್ಗೆ ಪ್ರಚುರ ಪಡಿಸುವುದು.
- ಮಹಿಳಾ ಸ್ವಸಹಾಯ ಗುಂಪುಗಳು ಮಾಡಿರುವ ವಸ್ತುಗಳ ಮತ್ತು ಸ್ಮರಣಿಕೆಗಳ ಮೂಲಕ ಎಲ್ಲರನ್ನೂ ಒಳಗೊಳ್ಳುವ ಭಾವನೆ ಉತ್ತೇಜಿಸುವುದು.
- ಅಮೃತ್ ಯೋಜನೆ ಮತ್ತು ಅದು ಜಲ ಮೂಲಸೌಕರ್ಯದ ಮೇಲೆ ಮಾಡಿರುವ ಪರಿಣಾಮಗಳ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡುವುದು ಮತ್ತು ಅವುಗಳನ್ನು ಜನಪ್ರಿಯಗೊಳಿಸುವುದು.
ನೀರಿನ ಸಂಸ್ಕರಣೆ, ಮಾಲೀಕತ್ವ ಮತ್ತು ಜವಾಬ್ದಾರಿಯ ಪ್ರಜ್ಞೆ, ಒಳಗೊಳ್ಳುವಿಕೆಯ ಉತ್ತೇಜನ, ಸ್ವಸಹಾಯ ಗುಂಪುಗಳ ಸಬಲೀಕರಣ, ಸಕಾರಾತ್ಮಕ ಸಮುದಾಯದ ಪರಿಣಾಮ ಮತ್ತು ಭವಿಷ್ಯದ ಉಪಕ್ರಮಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಜ್ಞಾನ ಇವು ಅಭಿಯಾನದ ನಿರೀಕ್ಷಿತ ಫಲಿತಾಂಶಗಳಲ್ಲಿ ಒಳಗೊಂಡಿರುತ್ತದೆ.
ಅಮೃತ್ ಮತ್ತು ಎನ್ ಯುಎಲ್ ಎಂ ನ ರಾಜ್ಯ ಮತ್ತು ನಗರ ಅಧಿಕಾರಿಗಳು ಡಬ್ಲೂಟಿಪಿ ಗಳನ್ನು ಗುರುತಿಸುವ ಮೂಲಕ ಈ ಭೇಟಿಗಳನ್ನು ಸುಗಮಗೊಳಿಸುತ್ತಾರೆ. ಅಮೃತ್ ಅಡಿಯಲ್ಲಿ ನೀರಿನ ಮೂಲಸೌಕರ್ಯದ ಪ್ರಮುಖ ಕಾರ್ಯದಲ್ಲಿ ಮಹಿಳೆಯರನ್ನು ಸೇರಿಸುವಲ್ಲಿ ಮಹತ್ವದ ದಾಪುಗಾಲು ಹಾಕುವ ಮೂಲಕ ಈ ಉಪಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಬೆಂಬಲಿಸಲು ಎಂಒಎಚ್ ಯುಎ ಎಲ್ಲಾ ರಾಜ್ಯ ಮತ್ತು ನಗರ ಅಧಿಕಾರಿಗಳಿಗೆ ಕರೆ ನೀಡಿದೆ.
****
(Release ID: 1975068)
Visitor Counter : 168
Read this release in:
English
,
Khasi
,
Urdu
,
Hindi
,
Nepali
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam