ರಕ್ಷಣಾ ಸಚಿವಾಲಯ
77ನೇ ಸ್ವಾತಂತ್ರ್ಯ ದಿನಾಚರಣೆಗೆ ವೇದಿಕೆ ಸಜ್ಜು; ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪು ಕೋಟೆಯಿಂದ ಸಂಭ್ರಮಾಚರಣೆಯ ನೇತೃತ್ವ ವಹಿಸಲಿದ್ದಾರೆ
ದೇಶದ ವಿವಿಧ ಭಾಗಗಳಿಂದ ಸುಮಾರು 1,800 ಜನರನ್ನು ಸಮಾರಂಭವನ್ನು ವೀಕ್ಷಿಸಲು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ
प्रविष्टि तिथि:
13 AUG 2023 11:01AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 15, 2023 ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ. ಅವರು ರಾಷ್ಟ್ರಧ್ವಜಾರೋಹಣವನ್ನು ಮಾಡಲಿದ್ದಾರೆ ಮತ್ತು ಐತಿಹಾಸಿಕ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಾರ್ಚ್ 12, 2021 ರಂದು ಗುಜರಾತ್ ನ ಅಹಮದಾಬಾದ್ ನಲ್ಲಿರುವ ಸಬರಮತಿ ಆಶ್ರಮದಿಂದ ಪ್ರಧಾನ ಮಂತ್ರಿಯವರು ಪ್ರಾರಂಭಿಸಿದ 'ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆಯು ಈ ವರ್ಷದ ಸ್ವಾತಂತ್ರ್ಯ ದಿನದಂದು ಮುಕ್ತಾಯಗೊಳ್ಳುತ್ತದೆ ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಶ್ರೀ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು ನವ ಚೈತನ್ಯದೊಂದಿಗೆ ದೇಶವನ್ನು ‘ಅಮೃತ ಕಾಲ’ಕ್ಕೆ ಕರೆದೊಯ್ಯುತ್ತದೆ. 77 ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಹಲವಾರು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ.
ವಿಶೇಷ ಅತಿಥಿಗಳು
ಕೆಂಪು ಕೋಟೆಯಲ್ಲಿನ ಆಚರಣೆಯ ಭಾಗವಾಗಲು ದೇಶದಾದ್ಯಂತ ವಿವಿಧ ವೃತ್ತಿಗಳ ಸುಮಾರು 1,800 ಜನರನ್ನು, ಅವರ ಕುಟುಂಬದೊಂದಿಗೆ, ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಸರ್ಕಾರದ ʼಜನ ಭಾಗೀದಾರಿʼದೃಷ್ಟಿಕೋನಕ್ಕೆ ಅನುಗುಣವಾಗಿ ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಈ ವಿಶೇಷ ಅತಿಥಿಗಳು 660 ಕ್ಕೂ ಹೆಚ್ಚು ವಿವಿಧ ಗ್ರಾಮಗಳ 400 ಕ್ಕೂ ಹೆಚ್ಚು ಸರಪಂಚರನ್ನು ಒಳಗೊಂಡಿರುತ್ತಾರೆ; ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯ 250; ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ ತಲಾ 50; ಹೊಸ ಸಂಸತ್ತಿನ ಕಟ್ಟಡ ಸೇರಿದಂತೆ ಕೇಂದ್ರ ವಿಸ್ಟಾ ಯೋಜನೆಯ 50 ಶ್ರಮ ಯೋಗಿಗಳು (ನಿರ್ಮಾಣ ಕೆಲಸಗಾರರು); ಖಾದಿ ಕಾರ್ಮಿಕರು, ಗಡಿ ರಸ್ತೆಗಳ ನಿರ್ಮಾಣ, ಅಮೃತ್ ಸರೋವರ ಮತ್ತು ಹರ್ ಘರ್ ಜಲ ಯೋಜನೆಯ ತಲಾ 50 ಮತ್ತು ತಲಾ 50 ಪ್ರಾಥಮಿಕ ಶಾಲಾ ಶಿಕ್ಷಕರು, ದಾದಿಯರು ಮತ್ತು ಮೀನುಗಾರರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ವಿಶೇಷ ಅತಿಥಿಗಳಲ್ಲಿ ಕೆಲವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲು ಮತ್ತು ದೆಹಲಿಯಲ್ಲಿ ತಮ್ಮ ವಾಸ್ತವ್ಯದ ಭಾಗವಾಗಿ ರಕ್ಷಣಾ ರಾಜ್ಯ ಮಂತ್ರಿ ಶ್ರೀ ಅಜಯ್ ಭಟ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಎಪ್ಪತ್ತೈದು ದಂಪತಿಗಳನ್ನು ಅವರ ಸಾಂಪ್ರದಾಯಿಕ ಉಡುಗೆಯಲ್ಲಿ, ಕೆಂಪು ಕೋಟೆಯಲ್ಲಿ ಸಮಾರಂಭವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ.
ಸೆಲ್ಫಿ ಸ್ಥಳಗಳು:
ರಾಷ್ಟ್ರೀಯ ಯುದ್ಧ ಸ್ಮಾರಕ, ಇಂಡಿಯಾ ಗೇಟ್, ವಿಜಯ್ ಚೌಕ್, ನವದೆಹಲಿ ರೈಲು ನಿಲ್ದಾಣ, ಪ್ರಗತಿ ಮೈದಾನ, ರಾಜ್ ಘಾಟ್, ಜಾಮಾ ಮಸೀದಿ ಮೆಟ್ರೋ ನಿಲ್ದಾಣ, ರಾಜೀವ್ ಚೌಕ್ ಮೆಟ್ರೋ ನಿಲ್ದಾಣ, ದೆಹಲಿ ಗೇಟ್ ಮೆಟ್ರೋ ನಿಲ್ದಾಣ, ITO ಮೆಟ್ರೋ ಗೇಟ್, ನೌಬತ್ ಖಾನಾ ಮತ್ತು ಶೀಶ್ ಗಂಜ್ ಗುರುದ್ವಾರ ಸೇರಿದಂತೆ 12 ಸ್ಥಳಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳಿಗೆ ಮೀಸಲಾದ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ.
ಜಾಗತಿಕವಾಗಿ ಭರವಸೆ ಮೂಡಿಸಿರುವ ಯೋಜನೆಗಳು/ಉಪಕ್ರಮಗಳು: ಲಸಿಕೆ ಮತ್ತು ಯೋಗ; ಉಜ್ವಲ ಯೋಜನೆ; ಬಾಹ್ಯಾಕಾಶ ಶಕ್ತಿ; ಡಿಜಿಟಲ್ ಇಂಡಿಯಾ; ಕೌಶಲ್ಯ ಭಾರತ; ಸ್ಟಾರ್ಟ್ ಅಪ್ ಇಂಡಿಯಾ; ಸ್ವಚ್ಛ ಭಾರತ; ಸಶಕ್ತ ಭಾರತ, ನಯಾ ಭಾರತ; ಬಲಿಷ್ಠ ಭಾರತ; ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಜಲ ಜೀವನ್ ಮಿಷನ್.
ಆಚರಣೆಯ ಭಾಗವಾಗಿ, ರಕ್ಷಣಾ ಸಚಿವಾಲಯವು ಆಗಸ್ಟ್ 15-20 ರಿಂದ MyGov ಪೋರ್ಟಲ್ ನಲ್ಲಿ ಆನ್‌ಲೈನ್ ಸೆಲ್ಫಿ ಸ್ಪರ್ಧೆಯನ್ನು ನಡೆಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು 12 ಸ್ಥಾಪನೆ (Installation) ಗಳಲ್ಲಿ ಒಂದು ಅಥವಾ ಹೆಚ್ಚಿನ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮತ್ತು ಅವುಗಳನ್ನು MyGov ಪ್ಲಾಟ್ ಫಾರ್ಮ್ ನಲ್ಲಿ ಅಪ್ ಲೋಡ್ ಮಾಡಲು ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಆನ್ ಲೈನ್ ಸೆಲ್ಫಿ ಸ್ಪರ್ಧೆಯ ಆಧಾರದ ಮೇಲೆ ಪ್ರತಿ ಸ್ಥಾಪನೆಯಿಂದ ಒಬ್ಬರಂತೆ ಹನ್ನೆರಡು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ತಲಾ 10,000 ರೂಪಾಯಿ ಬಹುಮಾನ ನೀಡಲಾಗುವುದು.
ಇ-ಆಮಂತ್ರಣಗಳು:
ಎಲ್ಲಾ ಅಧಿಕೃತ ಆಹ್ವಾನಗಳನ್ನು ಆಮಂತ್ರಣ್ ಪೋರ್ಟಲ್ (http://www.aamantran.mod.gov.in) ಮೂಲಕ ಆನ್ ಲೈನ್ ನಲ್ಲಿ ಕಳುಹಿಸಲಾಗಿದೆ. ಪೋರ್ಟಲ್ ಮೂಲಕ 17,000 ಇ-ಆಮಂತ್ರಣ ಕಾರ್ಡ್ ಗಳನ್ನು ನೀಡಲಾಗಿದೆ.
ಸಮಾರಂಭ:
ಕೆಂಪುಕೋಟೆಗೆ ಆಗಮಿಸುವ ಪ್ರಧಾನಿ ಅವರನ್ನು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ರಕ್ಷಣಾ ರಾಜ್ಯ ಮಂತ್ರಿ ಶ್ರೀ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಶ್ರೀ ಗಿರಿಧರ್ ಅರಮನೆ ಅವರು ಬರಮಾಡಿಕೊಳ್ಳಲಿದ್ದಾರೆ. ರಕ್ಷಣಾ ಕಾರ್ಯದರ್ಶಿಯು ಜನರಲ್ ಆಫೀಸರ್ ಕಮಾಂಡಿಂಗ್ (GoC), ದೆಹಲಿ ಪ್ರದೇಶ, ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಪ್ರಧಾನಿಯವರಿಗೆ ಪರಿಚಯಿಸುತ್ತಾರೆ. ನಂತರ ದೆಹಲಿ ಪ್ರದೇಶದ GoC ಯವರು ಶ್ರೀ ನರೇಂದ್ರ ಮೋದಿಯವರನ್ನು ಸೆಲ್ಯೂಟಿಂಗ್ ಬೇಸ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ಸಂಯೋಜಿತ ಇಂಟರ್-ಸರ್ವೀಸ್ ಮತ್ತು ದೆಹಲಿ ಪೊಲೀಸ್ ಗಾರ್ಡ್ ಪ್ರಧಾನ ಮಂತ್ರಿಯವರಿಗೆ ಸಾಮಾನ್ಯ ಸೆಲ್ಯೂಟ್ ಸಲ್ಲಿಸುತ್ತಾರೆ. ಬಳಿಕ ಪ್ರಧಾನಮಂತ್ರಿಯವರು ಗೌರವ ವಂದನೆ ಸ್ವೀಕರಿಸುತ್ತಾರೆ.
ಪ್ರಧಾನ ಮಂತ್ರಿಯವರಿಗೆ ಗೌರವ ವಂದನೆ ಸಲ್ಲಿಸುವ ತಂಡವು ಸೇನೆ, ವಾಯುಪಡೆ ಮತ್ತು ದೆಹಲಿ ಪೊಲೀಸರ ತಲಾ 25 ಸಿಬ್ಬಂದಿ ಮತ್ತು ನೌಕಾಪಡೆಯ ಒಬ್ಬ ಅಧಿಕಾರಿ ಮತ್ತು 24 ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಭಾರತೀಯ ಸೇನೆಯು ಈ ವರ್ಷ ಸಮನ್ವಯ ಸೇವೆಯಾಗಿದೆ. ಗಾರ್ಡ್ ಆಫ್ ಹಾನರ್ ಗೆ ಮೇಜರ್ ವಿಕಾಸ್ ಸಾಂಗ್ವಾನ್ ಅವರು ಕಮಾಂಡರ್ ಆಗಿರುತ್ತಾರೆ. ಪ್ರಧಾನ ಮಂತ್ರಿಗಳ ಗಾರ್ಡ್ ನಲ್ಲಿರುವ ಸೇನಾ ತುಕಡಿಗೆ ಮೇಜರ್ ಇಂದ್ರಜೀತ್ ಸಚಿನ್, ನೌಕಾದಳಕ್ಕೆ ಲೆಫ್ಟಿನೆಂಟ್ ಕಮಾಂಡರ್ ಎಂವಿ ರಾಹುಲ್ ರಾಮನ್ ಮತ್ತು ವಾಯುಪಡೆಯ ತುಕಡಿಗೆ ಸ್ಕ್ವಾಡ್ರನ್ ಲೀಡರ್ ಆಕಾಶ್ ಗಂಘಾಸ್ ಅವರು ಕಮಾಂಡರ್ ಆಗಿರುತ್ತಾರೆ. ದೆಹಲಿ ಪೊಲೀಸ್ ತುಕಡಿಗೆ ಹೆಚ್ಚುವರಿ ಡಿಸಿಪಿ ಸಂಧ್ಯಾ ಸ್ವಾಮಿ ಅವರು ಕಮಾಂಡರ್ ಆಗಿರುತ್ತಾರೆ.
ಗೌರವ ವಂದನೆ ಸ್ವೀಕರಿಸಿದ ನಂತರ, ಪ್ರಧಾನ ಮಂತ್ರಿ ಅವರು ಕೆಂಪು ಕೋಟೆಯ ಆವರಣಕ್ಕೆ ತೆರಳುತ್ತಾರೆ, ಅಲ್ಲಿ ಅವರನ್ನು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ರಕ್ಷಣಾ ರಾಜ್ಯ ಮಂತ್ರಿ ಶ್ರೀ ಅಜಯ್ ಭಟ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌವ್ಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಸ್ವಾಗತಿಸುತ್ತಾರೆ. ದೆಹಲಿ ಪ್ರದೇಶದ ಜಿಒಸಿಯವರು ಪ್ರಧಾನ ಮಂತ್ರಿಯವರನ್ನು ರಾಷ್ಟ್ರಧ್ವಜಾರೋಹಣ ಮಾಡುವ ವೇದಿಕೆಗೆ ಕರೆದೊಯ್ಯುತ್ತಾರೆ.
ಧ್ಜಜಾರೋಹಣದ ನಂತರ, ತ್ರಿವರ್ಣ ಧ್ವಜವು 'ರಾಷ್ಟ್ರೀಯ ಸೆಲ್ಯೂಟ್' ಅನ್ನು ಸ್ವೀಕರಿಸುತ್ತದೆ. ಒಬ್ಬರು ಜೆಸಿಒ ಮತ್ತು 20 ಇತರ ಶ್ರೇಣಿಗಳನ್ನು ಒಳಗೊಂಡಿರುವ ಆರ್ಮಿ ಬ್ಯಾಂಡ್, ರಾಷ್ಟ್ರ ಧ್ವಜಾರೋಹಣ ಮತ್ತು 'ರಾಷ್ಟ್ರೀಯ ಸೆಲ್ಯೂಟ್' ಸಮಯದಲ್ಲಿ ರಾಷ್ಟ್ರಗೀತೆಯನ್ನು ನುಡಿಸುತ್ತದೆ. ನಾಯಕ್ ಸುಬೇದಾರ್ ಜತೀಂದರ್ ಸಿಂಗ್ ಅವರ ನೇತೃತ್ವದಲ್ಲಿ ಬ್ಯಾಂಡ್ ನಡೆಯಲಿದೆ.
ಮೇಜರ್ ನಿಕಿತಾ ನಾಯರ್ ಮತ್ತು ಮೇಜರ್ ಜಾಸ್ಮಿನ್ ಕೌರ್ ಅವರು ರಾಷ್ಟ್ರ ಧ್ವಜಾರೋಹಣದಲ್ಲಿ ಪ್ರಧಾನ ಮಂತ್ರಿಯವರಿಗೆ ಸಹಾಯ ಮಾಡುತ್ತಾರೆ. ಇದನ್ನು ಗಣ್ಯ 8711 ಫೀಲ್ಡ್ ಬ್ಯಾಟರಿ (ಸೆರೆಮೋನಿಯಲ್)ಯ ಧೀರ ಗನ್ನರ್‌ಗಳ 21 ಗನ್ ಸೆಲ್ಯೂಟ್‌ನೊಂದಿಗೆ ಮೇಳೈಸಲಾಗುತ್ತದೆ. ಸೆರೆಮೋನಿಯಲ್ ಬ್ಯಾಟರಿಯ ನೇತೃತ್ವವನ್ನು ಲೆಫ್ಟಿನೆಂಟ್ ಕರ್ನಲ್ ವಿಕಾಸ್ ಕುಮಾರ್ ವಹಿಸಲಿದ್ದಾರೆ ಮತ್ತು ಗನ್ ಪೊಸಿಷನ್ ಆಫೀಸರ್ ನಾಯಕ್ ಸುಬೇದಾರ್ (ಎಐಜಿ) ಅನೂಪ್ ಸಿಂಗ್ ಆಗಿರುತ್ತಾರೆ.
ಐವರು ಅಧಿಕಾರಿಗಳು ಮತ್ತು ಸೇನೆ, ನೌಕಾಪಡೆ, ವಾಯುಪಡೆ ಮತ್ತು ದೆಹಲಿ ಪೊಲೀಸರ 128 ಇತರ ಶ್ರೇಣಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ಧ್ವಜ ರಕ್ಷಕ ತಂಡವು ಪ್ರಧಾನಮಂತ್ರಿ ಅವರು ರಾಷ್ಟ್ರಧ್ವಜಾರೋಹಣ ಮಾಡುವ ಸಮಯದಲ್ಲಿ ರಾಷ್ಟ್ರೀಯ ಗೌರವವನ್ನು ಸಲ್ಲಿಸುತ್ತಾರೆ. ಸೇನೆಯ ಮೇಜರ್ ಅಭಿನವ್ ದೇಥಾ ಅವರು ಈ ಇಂಟರ್-ಸರ್ವೀಸ್ ಗಾರ್ಡ್ ಮತ್ತು ಪೊಲೀಸ್ ಗಾರ್ಡ್ ನ ಕಮಾಂಡ್ ಆಗಿರುತ್ತಾರೆ.
ರಾಷ್ಟ್ರೀಯ ಧ್ವಜ ರಕ್ಷಕ ತಂಡದಲ್ಲಿರುವ ಸೇನಾ ತುಕಡಿಗೆ ಮೇಜರ್ ಮುಖೇಶ್ ಕುಮಾರ್ ಸಿಂಗ್, ನೌಕಾ ತುಕಡಿಗೆ ಲೆಫ್ಟಿನೆಂಟ್ ಕಮಾಂಡರ್ ಹರ್‌ಪ್ರೀತ್ ಮಾನ್ ಮತ್ತು ವಾಯುಪಡೆಯ ತುಕಡಿಗೆ ಸ್ಕ್ವಾಡ್ರನ್ ಲೀಡರ್ ಶ್ರೇಯ್ ಚೌಧರಿ ಕಮಾಂಡರ್ ಆಗಿರುತ್ತಾರೆ. ದೆಹಲಿ ಪೊಲೀಸ್ ತುಕಡಿಗೆ ಹೆಚ್ಚುವರಿ ಡಿಸಿಪಿ ಶಶಾಂಕ್ ಜೈಸ್ವಾಲ್ ಅವರು ಕಮಾಂಡರ್ ಆಗಿರುತ್ತಾರೆ.
ಪ್ರಧಾನಮಂತ್ರಿಯವರು ರಾಷ್ಟ್ರಧ್ವಜವನ್ನು ಹಾರಿಸಿದ ತಕ್ಷಣ, ಲೈನ್ ಆಸ್ಟರ್ನ್ ಫಾರ್ಮೇಶನ್ (ಒಂದರ ಹಿಂದೆ ಒಂದರಂತೆ) ನಲ್ಲಿ ಭಾರತೀಯ ವಾಯುಪಡೆಯ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳಾದ ಮಾರ್ಕ್-III ಧ್ರುವ್ ಮೂಲಕ ಧ್ವಜಾರೋಹಣ ಸ್ಥಳದ ಮೇಲೆ ಪುಷ್ಪವೃಷ್ಟಿ ಮಾಡಲಾಗುವುದು. ವಿಂಗ್ ಕಮಾಂಡರ್ ಅಂಬರ್ ಅಗರ್ವಾಲ್ ಮತ್ತು ಸ್ಕ್ವಾಡ್ರನ್ ಲೀಡರ್ ಹಿಮಾಂಶು ಶರ್ಮಾ ಹೆಲಿಕಾಪ್ಟರ್‌ನ ಕ್ಯಾಪ್ಟನ್‌ಗಳಾಗಿರುತ್ತಾರೆ.
ಪುಷ್ಪವೃಷ್ಟಿಯ ನಂತರ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಮಂತ್ರಿಯವರ ಭಾಷಣದ ಕೊನೆಯಲ್ಲಿ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ ಸಿ ಸಿ) ನ ಕೆಡೆಟ್‌ಗಳು ರಾಷ್ಟ್ರಗೀತೆಯನ್ನು ಹಾಡುತ್ತಾರೆ. ದೇಶದಾದ್ಯಂತ ವಿವಿಧ ಶಾಲೆಗಳ ಒಂದು ಸಾವಿರದ ನೂರು ಬಾಲಕ ಮತ್ತು ಬಾಲಕಿ ಎನ್ ಸಿ ಸಿ ಕೆಡೆಟ್ ಗಳು (ಸೇನೆ, ನೌಕಾಪಡೆ ಮತ್ತು ವಾಯುಪಡೆ) ಈ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಜ್ಞಾನಪಥ್ ನಲ್ಲಿ ಆಸನಗಳನ್ನು ಅಳವಡಿಸಲಾಗಿದ್ದು, ಕೆಡೆಟ್ ಗಳು ಅಧಿಕೃತ ಬಿಳಿ ಉಡುಗೆಯಲ್ಲಿ ಇಲ್ಲಿ ಕುಳಿತುಕೊಳ್ಳುತ್ತಾರೆ.
ಇದರ ಜೊತೆಗೆ, ಸಮವಸ್ತ್ರದಲ್ಲಿರುವ ಎನ್ ಸಿ ಸಿ ಕೆಡೆಟ್ ಗಳನ್ನು ಆಚರಣೆಯ ಭಾಗವಾಗಿ ಜ್ಞಾನ ಪಥದಲ್ಲಿ ಕೂರಿಸಲಾಗುವುದು. ಇನ್ನೊಂದು ಪ್ರಮುಖ ಅಂಶವೆಂದರೆ ಜಿ-20 ಲೋಗೋ, ಇದು ಕೆಂಪು ಕೋಟೆಯಲ್ಲಿ ಹೂವಿನ ಅಲಂಕಾರದ ಭಾಗವಾಗಿರುತ್ತದೆ.
*****
(रिलीज़ आईडी: 1948282)
आगंतुक पटल : 331
इस विज्ञप्ति को इन भाषाओं में पढ़ें:
Nepali
,
हिन्दी
,
Marathi
,
Punjabi
,
Gujarati
,
Tamil
,
Telugu
,
Malayalam
,
Manipuri
,
Assamese
,
Odia
,
Khasi
,
English
,
Urdu
,
Bengali