ಪ್ರಧಾನ ಮಂತ್ರಿಯವರ ಕಛೇರಿ
ಪೋರ್ಟ್ ಬ್ಲೇರ್‌ನ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನ ಮಂತ್ರಿ ಭಾಷಣ
Posted On:
18 JUL 2023 1:47PM by PIB Bengaluru
ನಮಸ್ಕಾರ!
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಶ್ರೀ ಡಿ ಕೆ ಜೋಶಿ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಜ್ಯೋತಿರಾದಿತ್ಯ ಸಿಂಧಿಯಾ ಜಿ, ವಿ ಕೆ ಸಿಂಗ್ ಜಿ, ನನ್ನ ಸಂಸದೀಯ ಸಹೋದ್ಯೋಗಿಗಳು, ಇಲ್ಲಿರುವ ಇತರೆ ಎಲ್ಲಾ ಗಣ್ಯರು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನನ್ನ ಸಹೋದರ, ಸಹೋದರಿಯರೆ!
ಇಂದಿನ ಕಾರ್ಯಕ್ರಮ ಪೋರ್ಟ್ ಬ್ಲೇರ್‌ನಲ್ಲಿ ನಡೆಯುತ್ತಿದ್ದರೂ ಇಡೀ ರಾಷ್ಟ್ರದ ಕಣ್ಣು ಈ ಕಾರ್ಯಕ್ರಮದ ಮೇಲೆ ನೆಟ್ಟಿದೆ. ವೀರ್ ಸಾವರ್ಕರ್ ವಿಮಾನ ನಿಲ್ದಾಣದ ಸಾಮರ್ಥ್ಯ ಹೆಚ್ಚಿಸುವಂತೆ ಅಂಡಮಾನ್ ಮತ್ತು ನಿಕೋಬಾರ್ ಜನತೆಯಿಂದ ಬಹಳ ದಿನಗಳಿಂದ ಬೇಡಿಕೆ ಇತ್ತು. ನಮ್ಮ ಹಿಂದಿನ ಸಂಸದರು ಈ ವಿಷಯದ ಬಗ್ಗೆ ಕೆಲಸ ಮಾಡಲು ಪ್ರತಿ ವಾರ ನನ್ನ ಕಚೇರಿಗೆ ಬರುತ್ತಿದ್ದರು. ಆದ್ದರಿಂದ ಇಂದು ಅವರು ತುಂಬಾ ಸಂತೋಷಪಟ್ಟಿದ್ದಾರೆ ಮತ್ತು ನನ್ನ ಹಳೆಯ ಸ್ನೇಹಿತರನ್ನು ನಾನು ಪರದೆಯ ಮೇಲೆ ನೋಡುತ್ತಿದ್ದೇನೆ. ನಾನು ಇಂದು ನಿಮ್ಮೊಂದಿಗೆ ಭೌತಿಕವಾಗಿ ಸೇರಿಕೊಂಡು ಈ ಆಚರಣೆಯಲ್ಲಿ ಭಾಗವಹಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಆದರೆ ಸಮಯದ ಅಭಾವದಿಂದ ನನಗೆ ಬರಲಾಗಲಿಲ್ಲ, ಆದರೆ ನಿಮ್ಮೆಲ್ಲರ ಮುಖದಲ್ಲಿ ನಾನು ಸಂತೋಷ ನೋಡುತ್ತಿದ್ದೇನೆ. ನಾನು ಸಂತೋಷದ ವಾತಾವರಣ ಅನುಭವಿಸುತ್ತಿದ್ದೇನೆ.
ಸ್ನೇಹಿತರೆ,
ಈ ಸ್ಥಳಕ್ಕೆ ಭೇಟಿ ನೀಡಲು ಬಯಸಿದ ದೇಶಾದ್ಯಂತದ ಜನರು ಸಹ ಅದೇ ಆಸೆ ಹೊಂದಿದ್ದರು. ಇಲ್ಲಿಯವರೆಗೆ ಅಸ್ತಿತ್ವದಲ್ಲಿರುವ ಟರ್ಮಿನಲ್ ಸಾಮರ್ಥ್ಯವು ಪ್ರತಿದಿನ 4,000 ಪ್ರವಾಸಿಗರನ್ನು ನಿಭಾಯಿಸಬಲ್ಲದು. ಹೊಸ ಟರ್ಮಿನಲ್ ನಿರ್ಮಾಣದ ನಂತರ, ಈ ವಿಮಾನ ನಿಲ್ದಾಣವು ಪ್ರತಿದಿನ ಸುಮಾರು 11,000 ಪ್ರವಾಸಿಗರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದಂತಾಗಿದೆ. ಹೊಸ ವ್ಯವಸ್ಥೆಯಲ್ಲಿ, ಈಗ 10 ವಿಮಾನಗಳನ್ನು ಏಕಕಾಲದಲ್ಲಿ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಸಾಧ್ಯವಾಗುತ್ತದೆ. ಅಂದರೆ ಇಲ್ಲಿ ಹೊಸ ವಿಮಾನಗಳಿಗೆ ಮಾರ್ಗ ತೆರೆಯಲಾಗಿದೆ. ಹೆಚ್ಚು ವಿಮಾನಗಳು ಮತ್ತು ಹೆಚ್ಚು ಪ್ರವಾಸಿಗರು ಇಲ್ಲಿಗೆ ನೇರವಾಗಿ ಬರುತ್ತಾರೆ ಎಂದರೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಪೋರ್ಟ್ ಬ್ಲೇರ್‌ನ ಈ ಹೊಸ ಟರ್ಮಿನಲ್ ಕಟ್ಟಡದಲ್ಲಿ ಪ್ರಯಾಣ ಸುಲಭತೆ ಹೆಚ್ಚಾಗಲಿದೆ. ವ್ಯವಹಾರವನ್ನು ಮತ್ತಷ್ಟು ಸುಲಭಗೊಳಿಸುವುದು ಹೆಚ್ಚಾಗುತ್ತದೆ, ಸಂಪರ್ಕವು ಉತ್ತಮಗೊಳ್ಳುತ್ತದೆ. ಈ ಸೌಲಭ್ಯಕ್ಕಾಗಿ ನಾನು ದೇಶದ ಜನರಿಗೆ ಮತ್ತು ಪೋರ್ಟ್ ಬ್ಲೇರ್‌ನ ಎಲ್ಲಾ ಸ್ನೇಹಿತರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ದೀರ್ಘಕಾಲದವರೆಗೆ, ಭಾರತದಲ್ಲಿ ಅಭಿವೃದ್ಧಿಯ ವ್ಯಾಪ್ತಿಯು ಕೆಲವು ಪ್ರಮುಖ ನಗರಗಳು ಅಥವಾ ಕೆಲವು ಪ್ರದೇಶಗಳಿಗೆ ಸೀಮಿತವಾಗಿತ್ತು. ಕೆಲವು ಪಕ್ಷಗಳ ಸ್ವಾರ್ಥ ರಾಜಕಾರಣದಿಂದ ದೇಶದ ದೂರದ ಪ್ರದೇಶಗಳಿಗೆ ಅಭಿವೃದ್ಧಿಯ ಲಾಭ ತಲುಪಲಿಲ್ಲ. ಈ ಪಕ್ಷಗಳು ವೈಯಕ್ತಿಕವಾಗಿ ಮತ್ತು ಅವರ ಕುಟುಂಬಕ್ಕಾಗಿ ಲಾಭದಾಯಕ ಯೋಜನೆಗಳಿಗೆ ಮಾತ್ರ ಆದ್ಯತೆ ನೀಡಿದ್ದವು. ಇದರ ಪರಿಣಾಮವಾಗಿ ನಮ್ಮ ಬುಡಕಟ್ಟು ಪ್ರದೇಶಗಳು ಮತ್ತು ದ್ವೀಪಗಳು ಅಭಿವೃದ್ಧಿಯಿಂದ ವಂಚಿತವಾಗಿವೆ ಮತ್ತು ಅಭಿವೃದ್ಧಿಗಾಗಿ ಹಾತೊರೆಯುತ್ತಿವೆ.
ಕಳೆದ 9 ವರ್ಷಗಳಲ್ಲಿ ಹಿಂದಿನ ಸರ್ಕಾರಗಳ ಆ ತಪ್ಪುಗಳನ್ನು ನಾವು ಸಂಪೂರ್ಣ ಸೂಕ್ಷ್ಮತೆಯಿಂದ ಸರಿಪಡಿಸಿದ್ದೇವೆ. ಇದಲ್ಲದೆ, ನಾವು ಹೊಸ ವ್ಯವಸ್ಥೆಗಳನ್ನು ಸಹ ಅಭಿವೃದ್ಧಿಪಡಿಸಿದ್ದೇವೆ. ಈಗ ಭಾರತದಲ್ಲಿ ಅಭಿವೃದ್ಧಿಯ ಹೊಸ ಮಾದರಿಯನ್ನು ಸೃಜಿಸಲಾಗಿದೆ. ಈ ಮಾದರಿ ಎಲ್ಲ ಅಭಿವೃದ್ಧಿ ಕೆಲಗಳಲ್ಲೂ ಸೇರ್ಪಡೆಯಾಗಿದ್ದು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತದೆ. ಈ ಮಾದರಿಯನ್ನು 'ಸಬ್ಕಾ ಸಾಥ್ ಸಬ್ಕಾ ವಿಕಾಸ್' ಎಂದು ಕರೆಯಲಾಗುತ್ತದೆ. ನಾನು 'ಸಬ್ಕಾ ವಿಕಾಸ' ಅಥವಾ ಎಲ್ಲರ ಅಭಿವೃದ್ಧಿ ಎಂದು ಹೇಳಿದಾಗ ಅದರ ಅರ್ಥ ತುಂಬಾ ವಿಶಾಲವಾಗಿದೆ. 'ಸಬ್ಕಾ ವಿಕಾಸ್' ಎಂದರೆ ಪ್ರತಿಯೊಬ್ಬ ವ್ಯಕ್ತಿಯ, ಪ್ರತಿ ವರ್ಗದ, ಪ್ರತಿಯೊಂದು ಪ್ರದೇಶದ ಅಭಿವೃದ್ಧಿ. ಸಬ್ಕಾ ವಿಕಾಸ್ ಎಂದರೆ ಜೀವನದ ಪ್ರತಿಯೊಂದು ಅಂಶಗಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಸಂಪರ್ಕ, ಹೀಗೆ ಎಲ್ಲ ರೀತಿಯ ಅಭಿವೃದ್ಧಿ ಆಗಿದೆ.
ಸ್ನೇಹಿತರೆ,
ಈ ಚಿಂತನೆಯೊಂದಿಗೆ, ಕಳೆದ 9 ವರ್ಷಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಅಭಿವೃದ್ಧಿಯ ಹೊಸ ಯಶೋಗಾಥೆಯನ್ನು ಬರೆಯಲಾಗಿದೆ. ಹಿಂದಿನ ಸರ್ಕಾರದ 9 ವರ್ಷಗಳಲ್ಲಿ ಅಂದರೆ ನಮ್ಮ ಹಿಂದೆ ಇದ್ದ ಸರ್ಕಾರ ಅಂಡಮಾನ್-ನಿಕೋಬಾರ್ ಗೆ ಸುಮಾರು 23 ಸಾವಿರ ಕೋಟಿ ರೂ ವೆಚ್ಚ ಮಾಡಿತ್ತು. ಆದರೆ ನಮ್ಮ ಸರ್ಕಾರದ ಆಡಳಿತದಲ್ಲಿ 9 ವರ್ಷಗಳಲ್ಲಿ ಅಂಡಮಾನ್-ನಿಕೋಬಾರ್ ಅಭಿವೃದ್ಧಿಗೆ ಸುಮಾರು 48 ಸಾವಿರ ಕೋಟಿ ರೂ. ಅಂದರೆ, ಅಂಡಮಾನ್-ನಿಕೋಬಾರ್ ಅಭಿವೃದ್ಧಿಗೆ ನಮ್ಮ ಸರ್ಕಾರ ಮೊದಲಿನ ಸರ್ಕಾರಕ್ಕಿಂತ ದುಪ್ಪಟ್ಟು ಹಣ ಖರ್ಚು ಮಾಡಿದೆ.
ಹಿಂದಿನ ಸರ್ಕಾರದ 9 ವರ್ಷಗಳಲ್ಲಿ ಅಂಡಮಾನ್-ನಿಕೋಬಾರ್‌ನಲ್ಲಿ 28 ಸಾವಿರ ಮನೆಗಳಿಗೆ ನೀರು ಸರಬರಾಜು ಮಾಡಲಾಗಿತ್ತು. ನಮ್ಮ ಸರ್ಕಾರದ 9 ವರ್ಷಗಳ ಆಡಳಿತದಲ್ಲಿ ಇಲ್ಲಿನ ಸುಮಾರು 50 ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅದೇನೆಂದರೆ, ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸಲು ನಮ್ಮ ಸರ್ಕಾರ ಮೊದಲಿಗಿಂತ 2 ಪಟ್ಟು ವೇಗವಾಗಿ ಕೆಲಸ ಮಾಡಿದೆ.
ಇಂದು ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮದೇ ಆದ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಇಂದು ಇಲ್ಲಿನ ಪ್ರತಿಯೊಬ್ಬ ಬಡವರಿಗೂ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಸೌಲಭ್ಯ ಸಿಕ್ಕಿದೆ. ಹಿಂದಿನ ಸರ್ಕಾರದ ಆಡಳಿತದಲ್ಲಿ ಅಂಡಮಾನ್-ನಿಕೋಬಾರ್‌ನಲ್ಲಿ ಒಂದೇ ಒಂದು ವೈದ್ಯಕೀಯ ಕಾಲೇಜು ಇರಲಿಲ್ಲ. ಪೋರ್ಟ್ ಬ್ಲೇರ್‌ನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದು ನಮ್ಮ ಸರ್ಕಾರ ಎಂಬುದು ಗಮನಾರ್ಹ.
ಹಿಂದಿನ ಸರ್ಕಾರದ ಆಡಳಿತದಲ್ಲಿ, ಅಂಡಮಾನ್-ನಿಕೋಬಾರ್ ನಲ್ಲಿ ಇಂಟರ್ನೆಟ್ ಕೇವಲ ಉಪಗ್ರಹಗಳ ಮೇಲೆ ಅವಲಂಬಿತವಾಗಿತ್ತು. ನಮ್ಮ ಸರ್ಕಾರವು ಸಮುದ್ರದ ಅಡಿ ಅನೇಕ ಕಿಲೋ ಮೀಟರ್‌ಗಳಷ್ಟು ದೂರ ಸಬ್‌ಮೆರಿನ್ ಆಪ್ಟಿಕಲ್ ಫೈಬರ್ ಕೇಬಲ್ ಹಾಕುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿದೆ.
ಸ್ನೇಹಿತರೆ,
ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿನ ಈ ಸೌಲಭ್ಯಗಳ ಅಭಿವೃದ್ಧಿಯು ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದೆ. ಮೊಬೈಲ್ ಸಂಪರ್ಕ ಹೆಚ್ಚಿದಾಗ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತದೆ. ಆರೋಗ್ಯ ಮೂಲಸೌಕರ್ಯ ಸುಧಾರಿಸಿದಾಗ, ಪ್ರವಾಸಿಗರ ಒಳಹರಿವು ಮತ್ತಷ್ಟು ಹೆಚ್ಚಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಸೌಲಭ್ಯಗಳನ್ನು ಸುಧಾರಿಸಿದಾಗ, ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ. ರಸ್ತೆಗಳು ಉತ್ತಮ ಗುಣಮಟ್ಟದ್ದಾಗಿದ್ದರೆ, ಪ್ರವಾಸಿಗರು ಈ ಪ್ರದೇಶದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಆದ್ದರಿಂದಲೇ 2014ಕ್ಕೆ ಹೋಲಿಸಿದರೆ ಅಂಡಮಾನ್ ನಿಕೋಬಾರ್ ಗೆ ಬರುವ ಪ್ರವಾಸಿಗರ ಸಂಖ್ಯೆ ಈಗ ದುಪ್ಪಟ್ಟಾಗಿದೆ.
ಸ್ನಾರ್ಕೆಲಿಂಗ್, ಸ್ಕೂಬಾ ಡೈವಿಂಗ್ ಮತ್ತು ಸಮುದ್ರ ವಿಹಾರದಂತಹ ಸಾಹಸಗಳಿಗಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್‌ನ ನನ್ನ ಸಹೋದರ ಸಹೋದರಿಯರೆ, ಇದು ಆರಂಭವಷ್ಟೇ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಹಲವು ಪಟ್ಟು ಹೆಚ್ಚಾಗಲಿದೆ. ಈ ಕಾರಣದಿಂದಾಗಿ, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಉದ್ಯೋಗ ಮತ್ತು ಸ್ವಯಂಉದ್ಯೋಗದ ಹೊಸ ಸಾಧ್ಯತೆಗಳು ಸೃಷ್ಟಿಯಾಗಲಿವೆ.
ಸ್ನೇಹಿತರೆ,
ಇಂದು ಅಂಡಮಾನ್ ಮತ್ತು ನಿಕೋಬಾರ್ ಈ ಮಹಾನ್ ಮಂತ್ರದ ಜೀವಂತ ಉದಾಹರಣೆಯಾಗಿ ಬದಲಾಗುತ್ತಿದೆ - ವಿರಾಸತ್ ಭಿ ಔರ್ ವಿಕಾಸ್ ಭಿ' ಅಂದರೆ ಪರಂಪರೆ ಮತ್ತು ಅಭಿವೃದ್ಧಿ. ತ್ರಿವರ್ಣ ಧ್ವಜವನ್ನು ಕೆಂಪುಕೋಟೆಯಲ್ಲಿ ಹಾರಿಸುವ ಮೊದಲು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಹಾರಿಸಲಾಗಿತ್ತು ಎಂಬುದು ನಿಮಗೆ ತಿಳಿದಿದೆ. ಆದರೆ ಅದರ ಹೊರತಾಗಿಯೂ ಇಲ್ಲಿ ಗುಲಾಮಗಿರಿಯ ಕುರುಹುಗಳು ಇನ್ನೂ ಗೋಚರಿಸುತ್ತಿವೆ.
2018ರಲ್ಲಿ ಅಂಡಮಾನ್‌ನಲ್ಲಿ ನೇತಾಜಿ ಸುಭಾಸ್ ಚಂದ್ರ ಭೋಸ್ ಧ್ವಜಾರೋಹಣ ಮಾಡಿದ ಅದೇ ಸ್ಥಳದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಸೌಭಾಗ್ಯ ನನ್ನದಾಗಿತ್ತು. ನೇತಾಜಿ ಸುಭಾಸ್ ಅವರ ಹೆಸರನ್ನು ರಾಸ್ ದ್ವೀಪಕ್ಕೆ ಹೆಸರಿಸಿದ್ದು ನಮ್ಮ ಸರ್ಕಾರ. ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಿಗೆ ಸ್ವರಾಜ್ ಮತ್ತು ಶಹೀದ್ ದ್ವೀಪಗಳು ಎಂದು ಹೆಸರಿಸಿದ್ದು ನಮ್ಮ ಸರ್ಕಾರ. ದೇಶಕ್ಕಾಗಿ ಶೌರ್ಯ ಪ್ರದರ್ಶಿಸಿದ ವೀರ ಪುತ್ರರು, ಅಂದರೆ ಪರಮವೀರ ಚಕ್ರ ವಿಜೇತರ ಹೆಸರನ್ನು ನಾವು 21 ದ್ವೀಪಗಳಿಗೆ ಹೆಸರಿಸಿದ್ದೇವೆ. ಇಂದು ಈ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇಡೀ ದೇಶದ ಯುವಕರಿಗೆ ದೇಶದ ಅಭಿವೃದ್ಧಿಗೆ ಹೊಸ ಸ್ಫೂರ್ತಿ ನೀಡುತ್ತಿವೆ.
ಸ್ನೇಹಿತರೆ,
ಸ್ವಾತಂತ್ರ್ಯಾ ನಂತರದ 75 ವರ್ಷಗಳಲ್ಲಿ, ನಮ್ಮ ದೇಶ ಭಾರತವು ಅತ್ಯಂತ ಎತ್ತರವನ್ನು ತಲುಪಬಹುದಿತ್ತು, ನಾನು ಇದನ್ನು ಅಪಾರ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ಇದು ದೊಡ್ಡ ಎತ್ತರವನ್ನು ತಲುಪಬಹುದಿತ್ತು. ಭಾರತೀಯರಾದ ನಮ್ಮಲ್ಲಿ ಯಾವತ್ತೂ ಸಾಮರ್ಥ್ಯದ ಕೊರತೆ ಇರಲಿಲ್ಲ. ಆದರೆ ಭ್ರಷ್ಟ ಮತ್ತು ವಂಶ ಪಾರಂಪರ್ಯ ಪಕ್ಷಗಳು ಯಾವಾಗಲೂ ಭಾರತೀಯರ, ಸಾಮಾನ್ಯ ಜನರ ಈ ಸಾಮರ್ಥ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿವೆ. ಇಂದು ದೇಶದ ಜನತೆ ಮತ್ತೊಮ್ಮೆ 2024ರ ಚುನಾವಣೆಯಲ್ಲಿ ನಮ್ಮ ಸರ್ಕಾರವನ್ನು ತರಲು ಮನಸ್ಸು ಮಾಡಿದ್ದಾರೆ. ಅವರು ಈಗಾಗಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಭಾರತದ ದುಸ್ಥಿತಿಗೆ ಕಾರಣರಾದ ಕೆಲವರು ತಮ್ಮ ಕೊಳಕು ವ್ಯವಹಾರ ಆರಂಭಿಸಿದ್ದಾರೆ. ಅವರನ್ನು ನೋಡುವಾಗ ಒಂದು ಕವಿತೆಯ ಕೆಲವು ಸಾಲುಗಳು ನನಗೆ ನೆನಪಿಗೆ ಬರುತ್ತವೆ. ಕವಿಯೊಬ್ಬ ಆ ಕಾಲದಲ್ಲಿ ಬರೆದಿದ್ದ. ಇದು ಆ ಕಾಲದ ಭಾಷೆಯಲ್ಲಿ ಬರೆದ ಕವನ-
''ಗಾಯಿತ ಕುಃ ಹೇ, ಹಾಲ್ ಕುಃ ಹೈ, ಲೇಬಿಲ್ ಕುಃ ಹೈ, ಮಾಲ್ ಕುಃ ಹೈ''
2024ರ ಚುನಾವಣೆಗೆ ಒಗ್ಗೂಡಿರುವ 26 ರಾಜಕೀಯ ಪಕ್ಷಗಳಿಗೆ ಇದು ತುಂಬಾ ಸೂಕ್ತವಾಗಿದೆ.
''ಗಾಯಿತ ಕುಃ ಹೇ, ಹಾಲ್ ಕುಃ ಹೈ, ಲೇಬಿಲ್ ಕುಃ ಹೈ, ಮತ್ತು ಮಾಲ್ ಕುಃ ಹೈ''
ಅಂದರೆ ಯಾರೋ ಹಾಡನ್ನು ಹಾಡುತ್ತಿದ್ದಾರೆ, ಆದರೆ ಸತ್ಯ ಬೇರೆಯೇ ಆಗಿದೆ. ಲೇಬಲ್ ಬೇರೊಬ್ಬರದ್ದಾಗಿರುತ್ತದೆ, ಆದರೆ ಉತ್ಪನ್ನವು ಬೇರೆಯಾಗಿರುತ್ತದೆ. ಇದು ಅವರ ರಾಜಕೀಯ ವ್ಯವಹಾರದ ವಾಸ್ತವ. ಅವರ ಅಂಗಡಿ(ಪಕ್ಷ)ಗಳಲ್ಲಿ ಎರಡು ವಿಷಯಗಳನ್ನು ಖಾತರಿಪಡಿಸಲಾಗಿದೆ. ಮೊದಲನೆಯದಾಗಿ, ಅವರು ತಮ್ಮ ಅಂಗಡಿಯಲ್ಲಿ ಜಾತಿಯ ವಿಷ ಮಾರುತ್ತಾರೆ. ಎರಡನೆಯದಾಗಿ, ಈ ಜನರು ಅನಿಯಮಿತ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಈ ದಿನಗಳಲ್ಲಿ ಈ ಜನರು ಬೆಂಗಳೂರಿನಲ್ಲಿ ಜಮಾಯಿಸಿದ್ದಾರೆ.
ಒಂದಾನೊಂದು ಕಾಲದಲ್ಲಿ ಬಹಳ ಪ್ರಸಿದ್ಧವಾದ ಹಾಡು ಇತ್ತು, ನನಗೆ ಅದು ಸಂಪೂರ್ಣವಾಗಿ ನೆನಪಿಲ್ಲ, ಆದರೆ ತುಣುಕುಗಳಲ್ಲಿ - ಜನರು ಇರುವ ಒಂದೇ ಮುಖಕ್ಕೆ ವಿವಿಧ ಮುಖವಾಡಗಳನ್ನು ಧರಿಸುತ್ತಾರೆ. ಈ ಜನರು ವಿಭಿನ್ನ ಮುಖಗಳನ್ನು ಹೊಂದಿದ್ದಾರೆ. ಕ್ಯಾಮೆರಾ ಮುಂದೆ ಒಂದೇ ಫ್ರೇಮಿನಲ್ಲಿ ಇವರೆಲ್ಲ ಒಂದೆಡೆ ಸೇರಿದಾಗ ದೇಶದ ಜನರ ಮನಸ್ಸಿನಲ್ಲಿ ಮೂಡುವ ಮೊದಲ ಯೋಚನೆ - ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರ. ಹಾಗಾಗಿಯೇ ಇದೊಂದು ಪರಿಪೂರ್ಣ ಭ್ರಷ್ಟಾಚಾರ ಸಮಾವೇಶ’ ಎಂದು ದೇಶದ ಜನತೆ ಹೇಳುತ್ತಿದ್ದಾರೆ. ಈ ಜನ ಬೇರೆ ಏನೋ ಹೇಳುತ್ತಿದ್ದಾರೆ, ಆದರೆ ವಾಸ್ತವ ಪರಿಸ್ಥಿತಿಯೇ ಬೇರೆ. ಅವರ ಉತ್ಪನ್ನಗಳು ವಿಭಿನ್ನವಾಗಿರುವಾಗ ಅವರು ಬೇರೆ ಯಾವುದೋ ಲೇಬಲ್‌ಗಳನ್ನು ಇರಿಸಿದ್ದಾರೆ. ಅವರ ಉತ್ಪನ್ನ 20 ಲಕ್ಷ ಕೋಟಿ ಹಗರಣಗಳ ಗ್ಯಾರಂಟಿ.
ಸ್ನೇಹಿತರೆ,
ಈ ಸಭೆಯಲ್ಲಿ ಮತ್ತೊಂದು ವಿಶೇಷತೆ ಇದೆ. ಬಹುಕೋಟಿ ಹಗರಣದಲ್ಲಿ ಯಾರಾದರೂ ಜಾಮೀನಿನ ಮೇಲೆ ಹೊರಗಿದ್ದರೆ ಅವರನ್ನು ಬಹಳ ಗೌರವದಿಂದ ಕಾಣಲಾಗುತ್ತದೆ. ಇಡೀ ಕುಟುಂಬವು ಜಾಮೀನಿನ ಮೇಲೆ ಹೊರಗಿದ್ದರೆ, ನಂತರ ಅವರನ್ನು ಇನ್ನಷ್ಟು ಗೌರವಿಸಲಾಗುತ್ತದೆ. ಪಕ್ಷವೊಂದರ ಉಸ್ತುವಾರಿ ಸಚಿವರು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಜೈಲಿಗೆ ಹೋದರೆ ಅವರಿಗೆ ಹೆಚ್ಚುವರಿ ಅಂಕ ನೀಡಿ ‘ವಿಶೇಷ ಆಹ್ವಾನಿತ’ರನ್ನಾಗಿ ಆಹ್ವಾನಿಸಲಾಗುತ್ತದೆ. ಯಾರಾದರೂ ಒಂದು ಸಮುದಾಯವನ್ನು ಅವಮಾನಿಸಿದರೆ ಮತ್ತು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದರೆ, ಅವನು ಸಾಕಷ್ಟು ಆತಿಥ್ಯವನ್ನು ಪಡೆಯುತ್ತಾನೆ. ಕೋರ್ಟಿನಿಂದ ಯಾರಾದರೂ ಬಹುಕೋಟಿ ಹಗರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ, ಅವರು ಇಂತಹ ಸಭೆಗೆ ಹಾಜರಾಗಲು ಇನ್ನಷ್ಟು ಅರ್ಹರಾಗುತ್ತಾರೆ. ಬದಲಿಗೆ, ಈ ಜನರು ಅವನಿಂದ ಮಾರ್ಗದರ್ಶನವನ್ನು ಹುಡುಕುತ್ತಾರೆ. ಭ್ರಷ್ಟಾಚಾರದ ಬಗ್ಗೆ ಅವರಲ್ಲಿ ಅಪಾರ ಒಲವು ಮತ್ತು ಅಪಾರ ಪ್ರೀತಿ ಇದೆ. ಅದಕ್ಕೇ 20 ಲಕ್ಷ ಕೋಟಿ ರೂ. ಭ್ರಷ್ಟಾಚಾರದ ಗ್ಯಾರಂಟಿ ಕೊಡುವ ಇವರು ಪರಸ್ಪರ ಪ್ರೀತಿ, ಮಮತೆಯಿಂದ ಭೇಟಿಯಾಗುತ್ತಿದ್ದಾರೆ.
ಸ್ನೇಹಿತರೆ,
ಭ್ರಷ್ಟಾಚಾರದಲ್ಲಿ ತೊಡಗಿರುವ ಇವರೆಲ್ಲ ವಂಶಾಡಳಿತ ವ್ಯವಸ್ಥೆಯ ಕಟ್ಟಾ ಬೆಂಬಲಿಗರು – ಮನೆಯವರು ಏನೇ ಹೇಳಿದರೂ ಸರಿ. ಪ್ರಜಾಪ್ರಭುತ್ವಕ್ಕಾಗಿ ಇದನ್ನು ನಂಬಲಾಗಿದೆ. - ಜನರಿಂದ, ಜನರಿಗಾಗಿ. ಜನರಿಗೋಸ್ಕರ. ಆದರೆ ವಂಶ ಪಾರಂಪರ್ಯದ ರಾಜಕೀಯ ಬೆಂಬಲಿಸುವ ಈ ಜನರ ಮಂತ್ರ - 'ಕುಟುಂಬದಿಂದ, ಕುಟುಂಬಕ್ಕೋಸ್ಕರ ಮತ್ತು ಕುಟುಂಬಕ್ಕಾಗಿ'. 'ಕುಟುಂಬ ಮೊದಲು, ರಾಷ್ಟ್ರ ಏನೂ ಇಲ್ಲ' ಎಂಬುದು ಈ ಜನರ ಧ್ಯೇಯವಾಕ್ಯವಾಗಿದೆ. ಇದೇ ಅವರ ಸ್ಫೂರ್ತಿ.
ಈ ಜನರು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ತಮ್ಮ ಒತ್ತೆಯಾಳಾಗಿ ಮಾಡಲು ಬಯಸುತ್ತಾರೆ. ನಾನು ಅವರಿಗೆ ಹೇಳಲು ಬಯಸುತ್ತೇನೆ... 'ದ್ವೇಷವಿದೆ, ಹಗರಣಗಳಿವೆ, ನೀಚತನ ಮತ್ತು ವಕ್ರ ಬುದ್ಧಿಗಳಿವೆ. ದೇಶವು ದಶಕಗಳಿಂದ ವಂಶ ಪಾರಂಪರ್ಯ ವ್ಯವಸ್ಥೆಯ ಹಿಡಿತದಲ್ಲಿದೆ.
ಸ್ನೇಹಿತರೆ,
ಅವರಿಗೆ ದೇಶದ ಬಡವರ ಮಕ್ಕಳ ಅಭಿವೃದ್ಧಿ ಮುಖ್ಯವಲ್ಲ, ಆದರೆ ಅವರ ಸ್ವಂತ ಮಕ್ಕಳು, ಅವರ ಸಹೋದರರು ಮತ್ತು ಸೋದರಳಿಯರ ಅಭಿವೃದ್ಧಿ ಯಾವಾಗಲೂ ಅವರ ಆದ್ಯತೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸ್ಟಾರ್ಟಪ್‌ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ನಮ್ಮ ಯುವಕರು ಪೇಟೆಂಟ್ (ಹಕ್ಕುಸ್ವಾಮ್ಯ) ಪಡೆಯುತ್ತಿದ್ದಾರೆ. ಟ್ರೇಡ್‌ಮಾರ್ಕ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲಾಗುತ್ತಿದೆ, ನನ್ನ ದೇಶದ ಯುವಕರು ಕ್ರೀಡಾ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಮತ್ತು ಹೆಣ್ಣುಮಕ್ಕಳು ಅದ್ಭುತಗಳನ್ನು ಸೃಷ್ಟಿಸುತ್ತಿದ್ದಾರೆ.
ಈ ಯುವಶಕ್ತಿ ನಮ್ಮ ದೇಶದಲ್ಲಿ ಹಿಂದೆಯೂ ಇತ್ತು, ಆದರೆ ಈ ವಂಶಾಡಳಿತ ಪಕ್ಷಗಳು ದೇಶದ ಯುವಕರ ಶಕ್ತಿಗೆ ಎಂದಿಗೂ ನ್ಯಾಯ ಸಲ್ಲಿಸಲಿಲ್ಲ. ಅವರಿಗೆ ಒಂದೇ ಸಿದ್ಧಾಂತವಿದೆ, ಒಂದೇ ಅಜೆಂಡಾ - ಕುಟುಂಬವನ್ನು ಉಳಿಸಿ ಮತ್ತು ಕುಟುಂಬಕ್ಕಾಗಿ ಭ್ರಷ್ಟಾಚಾರವನ್ನು ಜೀವಂತವಾಗಿಡಿ! ದೇಶದ ಅಭಿವೃದ್ಧಿಯನ್ನು ನಿಲ್ಲಿಸುವುದು, ತಮ್ಮ ದುರಾಡಳಿತವನ್ನು ಮುಚ್ಚಿ ಹಾಕುವುದು ಮತ್ತು ಭ್ರಷ್ಟರ ವಿರುದ್ಧ ಕ್ರಮಗಳನ್ನು ನಿಲ್ಲಿಸುವುದು ಅವರ ಸಾಮಾನ್ಯ ಕನಿಷ್ಠ ಕಾರ್ಯಕ್ರಮವಾಗಿದೆ.
ಈಗ ನೋಡಿ, ಒಟ್ಟುಗೂಡಿರುವ ಈ ಗುಂಪು ಅವರು ಮಾಡಿದ ದೊಡ್ಡ ಹಗರಣಗಳು ಮತ್ತು ಅಪರಾಧಗಳ ವಿಷಯಕ್ಕೆ ಬಂದಾಗ ಮೂಕರಾಗುತ್ತಾರೆ. ಯಾವುದೇ ಒಂದು ರಾಜ್ಯದಲ್ಲಿ ಅವರ ದುರಾಡಳಿತ ಬಹಿರಂಗಪಡಿಸಿದಾಗ, ಇತರ ರಾಜ್ಯಗಳ ಅವರ ಗುಂಪಿನ ಈ ಜನರು ತಕ್ಷಣವೇ ತಮ್ಮ ರಕ್ಷಣೆಗಾಗಿ ವಾದಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಆದರೆ ಎಲ್ಲೋ ಪ್ರವಾಹದ ಹಗರಣ ನಡೆದರೆ ಅಥವಾ ಯಾರಾದರೂ ಅಪಹರಿಸಿದರೆ, ಈ ಕುಲದ ಜನರೆಲ್ಲರೂ ಮೌನವಾಗುತ್ತಾರೆ.
ಕೆಲವು ದಿನಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ನಡೆದಿರುವುದನ್ನು ನೀವು ನೋಡಿದ್ದೀರಿ. ಬಹಿರಂಗ ಹಿಂಸಾಚಾರ ಮತ್ತು ಅಜಾಗರೂಕ ರಕ್ತಪಾತ ನಡೆಯಿತು. ಈ ವಿಚಾರವಾಗಿಯೂ ಅವರೆಲ್ಲ ಮಾತು ನಿಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಕಾರ್ಯಕರ್ತರು ತಮ್ಮನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಾಯಕರು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಕಾರ್ಯಕರ್ತರನ್ನು ಒಕ್ಕಲೆಬ್ಬಿಸಲು ಬಿಟ್ಟಿದ್ದಾರೆ.
ರಾಜಸ್ಥಾನದಲ್ಲಿ ಹೆಣ್ಣುಮಕ್ಕಳಿಗೆ ಚಿತ್ರಹಿಂಸೆಯಾಗಲಿ, ಪರೀಕ್ಷೆ ಪತ್ರಿಕೆ ಸೋರಿಕೆಯಾಗಲಿ ಎಲ್ಲದಕ್ಕೂ ಕಣ್ಣು ಮುಚ್ಚಿಬಿಡುತ್ತಾರೆ. ಬದಲಾವಣೆಯ ಮಾತುಗಳನ್ನಾಡಿ ಸಾರ್ವಜನಿಕರಿಗೆ ದ್ರೋಹ ಬಗೆಯುವವರು ಕೋಟಿಗಟ್ಟಲೆ ಮದ್ಯದ ದಂಧೆಯಲ್ಲಿ ತೊಡಗಿದಾಗ ಈ ಕುಟುಂಬ ಮತ್ತೆ ಅವರಿಗೆ ಮುಚ್ಚಳಿಕೆ ನೀಡಲು ಆರಂಭಿಸುತ್ತದೆ. ಅವರು ಆ ಘೋರ ಭ್ರಷ್ಟಾಚಾರಕ್ಕೆ ಕಣ್ಣು ಮುಚ್ಚುತ್ತಾರೆ.
ದೇಶದ ಯಾವುದೇ ತನಿಖಾ ಏಜೆನ್ಸಿ ಅವರ ಮೇಲೆ ಕಾರ್ಯ ನಿರ್ವಹಿಸಿದಾಗ, ಅವರು ಪ್ರತಿ ಬಾರಿ ಹೇಳಲು ಒಂದೇ ಮಾತು ಹೊಂದಿರುತ್ತಾರೆ - "ಏನೂ ಆಗಿಲ್ಲ...ಎಲ್ಲವೂ ಪಿತೂರಿ. ನಮ್ಮನ್ನು ಪಿತೂರಿಗೆ ಸಿಕ್ಕಿಸಲಾಗುತ್ತಿದೆ". ತಮಿಳುನಾಡಿನಲ್ಲಿ ನೋಡಿದರೆ ಹಲವಾರು ಭ್ರಷ್ಟಾಚಾರ, ಹಗರಣಗಳು ಮುನ್ನೆಲೆಗೆ ಬರುತ್ತಿವೆ. ಆದರೆ ಈ ವಂಶ ಪಾರಂಪರ್ಯ ಪಕ್ಷಗಳು ಈಗಾಗಲೇ ಎಲ್ಲರಿಗೂ ಕ್ಲೀನ್ ಚಿಟ್ ನೀಡಿವೆ. ಅದಕ್ಕಾಗಿಯೇ ಸ್ನೇಹಿತರೆ, ಜನರು ಈ ಜನರನ್ನು ಗುರುತಿಸುತ್ತಾರೆ ಮತ್ತು ಅವರನ್ನು ತಿಳಿದುಕೊಳ್ಳುತ್ತಾರೆ. ಇಂಥವರ ಬಗ್ಗೆ ಜಾಗರೂಕರಾಗಿರಿ ಸಹೋದರ ಸಹೋದರಿಯರೇ.
ಸ್ನೇಹಿತರೆ,
ಇಂಥವರ ಷಡ್ಯಂತ್ರಗಳ ನಡುವೆ ದೇಶದ ಅಭಿವೃದ್ಧಿಗೆ ನಾವೆಲ್ಲಾ ಮುಡಿಪಾಗಿಡಬೇಕಿದೆ. ಇಂದು ಜಗತ್ತಿನಲ್ಲಿ ಅನೇಕ ಉದಾಹರಣೆಗಳಿವೆ, ದ್ವೀಪಗಳು ಮತ್ತು ಸಣ್ಣ ಭೂಕುಸಿತ ಅನುಭವಿಸಿದ ದೇಶಗಳು ಅಭೂತಪೂರ್ವ ಪ್ರಗತಿ ಸಾಧಿಸಿವೆ. ಈ ರಾಷ್ಟ್ರಗಳು ಪ್ರಗತಿಯ ಹಾದಿ ಆರಿಸಿಕೊಂಡಾಗ ಅವರೂ ಹಲವಾರು ಸವಾಲುಗಳನ್ನು ಎದುರಿಸಿದ್ದರು.
ಎಲ್ಲವೂ ಸರಳವಾಗಿರಲಿಲ್ಲ, ಆದರೆ ಅಭಿವೃದ್ಧಿ ಮುನ್ನಡೆಯುವಾಗ ಅದು ಎಲ್ಲಾ ರೀತಿಯ ಪರಿಹಾರಗಳನ್ನು ತರುತ್ತದೆ ಎಂದು ಆ ದೇಶಗಳು ತೋರಿಸಿವೆ. ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಈ ಇಡೀ ಪ್ರದೇಶವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಸಂಪರ್ಕಕ್ಕೆ ಸಂಬಂಧಿಸಿದ ಈ ಹೊಸ ಸೌಲಭ್ಯ, ಅಂದರೆ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಎಲ್ಲರಿಗೂ ಪ್ರಯೋಜನಕಾರಿಯಾಗಲಿದೆ ಎಂದು ನಾನು ಭಾವಿಸುತ್ತೇನೆ.
ಈ ಹಾರೈಕೆಯೊಂದಿಗೆ, ಈ ವೀಡಿಯೊ ಕಾನ್ಫರೆನ್ಸ್ ಕಾರ್ಯಕ್ರಮಕ್ಕೆ ನೀವೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಸಂತೋಷ ಮತ್ತು ಉತ್ಸಾಹವನ್ನು ನಾನು ಇಲ್ಲಿಂದ ಕೂಡ ಅನುಭವಿಸಬಲ್ಲೆ.
ಇಂತಹ ಸಂದರ್ಭದಲ್ಲಿ ಹೊಸ ನಂಬಿಕೆ ಮತ್ತು ಸಂಕಲ್ಪದೊಂದಿಗೆ ದೇಶ ಮುನ್ನಡೆಯಬೇಕು. ಅಂಡಮಾನ್-ನಿಕೋಬಾರ್ ಅದರೊಂದಿಗೆ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಹಾರೈಕೆಯೊಂದಿಗೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು, ಹೃತ್ಪೂರ್ವಕ ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಮೂಲತಃ ಪ್ರಧಾನ ಮಂತ್ರಿ ಅವರು ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
***
(Release ID: 1940702)
Visitor Counter : 128
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Malayalam