ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻರಾಷ್ಟ್ರೀಯ ಉದ್ಯೋಗ ಮೇಳʼ ಉದ್ದೇಶಿಸಿ ಪ್ರಧಾನಿ ಭಾಷಣ


 ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ ಸುಮಾರು 70,000 ನೇಮಕಾತಿ ಪತ್ರಗಳನ್ನು ವಿತರಿಸಿದರು.

“ಇಡೀ ಜಗತ್ತು ಇಂದು ಭಾರತದ ಬೆಳವಣಿಗೆಯ ಪ್ರಯಾಣದಲ್ಲಿ ಪಾಲುದಾರರಾಗಲು ಉತ್ಸುಕವಾಗಿದೆ”

“ಇಂದು, ಭಾರತವು ರಾಜಕೀಯ ಸ್ಥಿರತೆಗೆ ಹೆಸರುವಾಸಿಯಾಗಿದೆ, ಇದು ಇಂದಿನ ಜಗತ್ತಿನಲ್ಲಿ ಬಹಳಷ್ಟು ಮಹತ್ವದ ವಿಷಯವಾಗಿದೆ. ಇಂದು, ಭಾರತ ಸರ್ಕಾರವನ್ನು ನಿರ್ಣಾಯಕ ಸರ್ಕಾರವೆಂದು ಗುರುತಿಸಲಾಗಿದೆ. ಇಂದು, ಸರ್ಕಾರವು ಪ್ರಗತಿಪರ ಆರ್ಥಿಕ ಮತ್ತು ಸಾಮಾಜಿಕ ನಿರ್ಧಾರಗಳಿಗೆ ಹೆಸರುವಾಸಿಯಾಗಿದೆ”

"ಸರ್ಕಾರಿ ಯೋಜನೆಗಳು ನಾಗರಿಕರ ಕಲ್ಯಾಣದ ನಿಟ್ಟಿನಲ್ಲಿ ಗುಣಾತ್ಮಕ ಪರಿಣಾಮ ಬೀರುತ್ತವೆ"

"ಉದ್ಯೋಗಗಳಿಗಾಗಿ 'ರೇಟ್ ಕಾರ್ಡ್' ನೀಡುವ ದಿನಗಳು ಮುಗಿದಿವೆ, ಪ್ರಸ್ತುತ ಸರ್ಕಾರವು ಯುವಕರ ಭವಿಷ್ಯದ ʻಸೇಫ್ ಗಾರ್ಡ್ʼಗೆ (ರಕ್ಷಣೆಗೆ) ಗಮನ ಹರಿಸಿದೆ" 

"ಹಿಂದೆ ಜನರನ್ನು ವಿಭಜಿಸಲು ಭಾಷೆಯನ್ನು ದುರುಪಯೋಗಪಡಿಸಿಕೊಳ್ಳಲಾಯಿತು, ಈಗ ಸರ್ಕಾರವು ಭಾಷೆಯನ್ನು ಉದ್ಯೋಗದ ಬಲವಾದ ಮಾಧ್ಯಮವನ್ನಾಗಿ ಮಾಡುತ್ತಿದೆ"

"ಈಗ ಸರ್ಕಾರವು ತನ್ನ ಸೇವೆಗಳನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ ನಾಗರಿಕರ ಮನೆಗಳನ್ನು ತಲುಪುತ್ತಿದೆ"

Posted On: 13 JUN 2023 11:52AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ `ರಾಷ್ಟ್ರೀಯ ಉದ್ಯೋಗ ಮೇಳʼ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ, ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 70,000 ನೇಮಕಾತಿ ಪತ್ರಗಳನ್ನು ವಿತರಿಸಿದರು. ಹಣಕಾಸು ಸೇವೆಗಳ ಇಲಾಖೆ, ಅಂಚೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರಕ್ಷಣಾ ಸಚಿವಾಲಯ, ಕಂದಾಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಪರಮಾಣು ಶಕ್ತಿ ಇಲಾಖೆ, ರೈಲ್ವೆ ಸಚಿವಾಲಯ,  ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೇಶಾದ್ಯಂತ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರದ ಸೇವೆಗೆ ಸೇರ್ಪಡೆಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರ ಭಾಷಣದ ವೇಳೆ ದೇಶಾದ್ಯಂತ ಉದ್ಯೋಗ ಮೇಳ ಹಮ್ಮಿಕೊಳ್ಳಲಾದ 43 ಸ್ಥಳಗಳಿಂದ ನೇರ ಸಂಪರ್ಕ ಏರ್ಪಡಿಸಲಾಗಿತ್ತು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು 70,000ಕ್ಕೂ ಅಧಿಕ ಮಂದಿಗೆ ನೇಮಕಾತಿ ಪತ್ರಗಳನ್ನು ನೀಡುತ್ತಿರುವುದರಿಂದ ʻರಾಷ್ಟ್ರೀಯ ಉದ್ಯೋಗ ಮೇಳʼವು ಪ್ರಸ್ತುತ ಸರ್ಕಾರದ ಹೊಸ ಹೆಗ್ಗುರುತಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳು ಸಹ ಇದೇ ರೀತಿಯ ʻಉದ್ಯೋಗ ಮೇಳʼಗಳನ್ನು ನಿಯಮಿತವಾಗಿ ಆಯೋಜಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ʻಸ್ವಾತಂತ್ರ್ಯದ ಅಮೃತ ಕಾಲʼ ಈಗಷ್ಟೇ ಪ್ರಾರಂಭವಾಗಿದೆ ಎಂದು ಹೇಳಿದ ಪ್ರಧಾನಿ, ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಕೊಡುಗೆ ನೀಡುವ ಅವಕಾಶ ಇರುವುದರಿಂದ, ಸರ್ಕಾರಿ ಸೇವೆಗೆ ಸೇರುತ್ತಿರುವವರಿಗೆ ಇದು ಬಹಳ ಮಹತ್ವದ ಕ್ಷಣವಾಗಿದೆ ಎಂದರು. "ವರ್ತಮಾನದ ಜೊತೆಗೆ, ದೇಶದ ಭವಿಷ್ಯಕ್ಕಾಗಿ ನೀವು ಎಲ್ಲವನ್ನೂ ನೀಡಬೇಕು" ಎಂದು ಪ್ರಧಾನಿ ಹೇಳಿದರು. ಈ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಆರ್ಥಿಕತೆಯಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೆಚ್ಚುತ್ತಿರುವ ಅವಕಾಶಗಳ ಬಗ್ಗೆ ಪ್ರಧಾನಿ ಮಾತನಾಡಿದರು.  ʻಮುದ್ರಾ ಯೋಜನೆʼ, ʻಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾʼ ಮುಂತಾದ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. ಈಗ ಯುವಕರು ಉದ್ಯೋಗ ಸೃಷ್ಟಿಕರ್ತರಾಗುತ್ತಿದ್ದಾರೆ ಎಂದು ಅವರು ಹೇಳಿದರು. ಯುವಕರಿಗೆ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಅಭಿಯಾನವು ಅಭೂತಪೂರ್ವವಾಗಿದೆ ಎಂದು ಪ್ರಧಾನಿ ಹೇಳಿದರು. ʻಎಸ್ಎಸ್‌ಸಿʼ, ʻಯುಪಿಎಸ್‌ಸಿʼ ಮತ್ತು ʻಆರ್ ಆರ್ ಬಿರ್ʼಯಂತಹ ಸಂಸ್ಥೆಗಳು ಹೊಸ ವ್ಯವಸ್ಥೆಗಳೊಂದಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸುತ್ತಿವೆ. ಈ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಮತ್ತು ಸುಲಭಗೊಳಿಸುವತ್ತ ಗಮನ ಹರಿಸುತ್ತಿವೆ. ಅವುಗಳು 1-2 ವರ್ಷಗಳಿದ್ದ ನೇಮಕಾತಿಯ ಸಮಯವನ್ನು, ಕೆಲವು ತಿಂಗಳುಗಳಿಗೆ ಇಳಿಸಿವೆ ಎಂದು ಅವರು ಹೇಳಿದರು.

"ಇಂದು ಭಾರತದ ಬೆಳವಣಿಗೆಯ ಪಯಣದಲ್ಲಿ ಭಾರತದೊಂದಿಗೆ ಪಾಲುದಾರರಾಗಲು ಇಡೀ ಜಗತ್ತು ಉತ್ಸುಕವಾಗಿದೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಅದರ ಆರ್ಥಿಕತೆಯ ಮೇಲೆ ವಿಶ್ವದ ವಿಶ್ವಾಸವನ್ನು ಒತ್ತಿ ಹೇಳಿದರು. ಆರ್ಥಿಕ ಹಿಂಜರಿತ, ಜಾಗತಿಕ ಸಾಂಕ್ರಾಮಿಕ ರೋಗ ಮತ್ತು ಹಾಲಿ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಪೂರೈಕೆ ಸರಪಳಿಯಲ್ಲಿನ ಅಡೆತಡೆ ಸೇರಿದಂತೆ ಇಂದಿನ ಸವಾಲುಗಳ ಬಗ್ಗೆ ಗಮನಸೆಳೆದ ಪ್ರಧಾನಮಂತ್ರಿಯವರು ಇದೆಲ್ಲದರ ನಡುವೆಯೂ ಭಾರತವು ತನ್ನ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು  ಹೇಳಿದರು. ವಿವಿಧ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದನೆಗಾಗಿ ಭಾರತಕ್ಕೆ ಪ್ರವೇಶಿಸುತ್ತಿರುವ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ವಿದೇಶಿ ವಿನಿಮಯ ಮೀಸಲಿನ ಉದಾಹರಣೆಗಳನ್ನು ಪ್ರಧಾನಿ ಉಲ್ಲೇಖಿಸಿದರು. ದೇಶದಲ್ಲಿ ಮಾಡಲಾದ ವಿದೇಶಿ ಹೂಡಿಕೆಗಳು, ಉತ್ಪಾದನೆ, ವಿಸ್ತರಣೆ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಗೆ ನೆರವಾಗುತ್ತವೆ. ಜೊತೆಗೆ ರಫ್ತುಗಳನ್ನು ಹೆಚ್ಚಿಸುತ್ತವೆ, ಆ ಮೂಲಕ ಉದ್ಯೋಗಾವಕಾಶಗಳಿಗೆ ಅತ್ಯಂತ ವೇಗವಾಗಿ ಉತ್ತೇಜನ ನೀಡುತ್ತವೆ ಎಂದು ಶ್ರೀ ಮೋದಿ ವಿವರಿಸಿದರು. ಖಾಸಗಿ ವಲಯದಲ್ಲಿ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವ ಪ್ರಸ್ತುತ ಸರ್ಕಾರದ ನೀತಿಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ದೇಶದ ಜಿಡಿಪಿಗೆ ಶೇ.6.5ಕ್ಕೂ ಹೆಚ್ಚು ಕೊಡುಗೆ ನೀಡಿರುವ ಆಟೋಮೊಬೈಲ್ ಕ್ಷೇತ್ರದ ಉದಾಹರಣೆ ನೀಡಿದರು. ವಿವಿಧ ದೇಶಗಳಿಗೆ ಪ್ರಯಾಣಿಕ ವಾಹನಗಳು, ವಾಣಿಜ್ಯ ವಾಹನಗಳು,  ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳ ರಫ್ತು ಹೆಚ್ಚುತ್ತಿರುವುದು ಭಾರತದಲ್ಲಿ ವಾಹನ ಉದ್ಯಮದ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಅವರು ಉಲ್ಲೇಖಿಸಿದರು. ಹತ್ತು ವರ್ಷಗಳ ಹಿಂದೆ 5 ಲಕ್ಷ ಕೋಟಿ ರೂ.ಗಳಷ್ಟಿದ್ದ ವಾಹನ ಉದ್ಯಮದ ಮೌಲ್ಯವು ಇಂದು 12 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. "ಎಲೆಕ್ಟ್ರಿಕ್ ಮೊಬಿಲಿಟಿಯ ವಿಸ್ತರಣೆಯೂ ಭಾರತದಲ್ಲಿ ನಡೆಯುತ್ತಿದೆ. ʻಪಿಎಲ್ಐʼ(ಉತ್ಪಾದನೆ ಆಧರಿತ ಸಹಾಯಧನ) ಯೋಜನೆಯು ವಾಹನ ಉದ್ಯಮಕ್ಕೂ ಸಹಾಯ ಮಾಡುತ್ತಿದೆ," ಎಂದು ಹೇಳಿದ ಶ್ರೀ ಮೋದಿ, ಇಂತಹ ಕ್ಷೇತ್ರಗಳು ಭಾರತದಲ್ಲಿ ಲಕ್ಷಾಂತರ ಯುವಕರಿಗೆ ನಾನಾ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದರು.

ಒಂದು ದಶಕದ ಹಿಂದಿನ ದೇಶದ ಪರಿಸ್ಥಿತಿಗೆ ಹೋಲಿಸಿದರೆ, ಭಾರತವು ಇಂದು ಹೆಚ್ಚು ಸ್ಥಿರ, ಸುರಕ್ಷಿತ ಮತ್ತು ಬಲವಾದ ದೇಶವಾಗಿದೆ ಎಂದು ಪ್ರಧಾನಿ ಹೇಳಿದರು. ಹಿಂದಿನ ಕಾಲದಲ್ಲಿ ಹಗರಣ ಮತ್ತು ಸಾರ್ವಜನಿಕರ ಹಣದ ದುರುಪಯೋಗವು ಆಡಳಿತದ ಹೆಗ್ಗುರುತಾಗಿತ್ತು ಎಂದು ಅವರು ಟೀಕಿಸಿದರು. "ಇಂದು, ಭಾರತವು ರಾಜಕೀಯ ಸ್ಥಿರತೆಗೆ ಹೆಸರುವಾಸಿಯಾಗಿದೆ, ಇದು ಇಂದಿನ ಜಗತ್ತಿನಲ್ಲಿ ಬಹಳ ಮಹತ್ವದ ವಿಚಾರ ಎಂದರು. ಇಂದು, ಭಾರತ ಸರ್ಕಾರವನ್ನು ನಿರ್ಣಾಯಕ ಸರ್ಕಾರವೆಂದು ಗುರುತಿಸಲಾಗಿದೆ. ಸರ್ಕಾರವು ಪ್ರಗತಿಪರ ಆರ್ಥಿಕ ಮತ್ತು ಸಾಮಾಜಿಕ ನಿರ್ಧಾರಗಳಿಗೆ ಹೆಸರುವಾಸಿಯಾಗಿದೆ," ಎಂದು ಅವರು ಹೇಳಿದರು. ಸುಗಮ ಜೀವನ, ಮೂಲಸೌಕರ್ಯ ನಿರ್ಮಾಣ ಮತ್ತು ವ್ಯಾಪಾರವನ್ನು ಸುಗಮಗೊಳಿಸುವ ಸರ್ಕಾರದ ಕ್ರಮಗಳನ್ನು ಜಾಗತಿಕ ಏಜೆನ್ಸಿಗಳು ಗುರುತಿಸುತ್ತಿವೆ ಎಂದರು.

ಭಾರತವು ತನ್ನ ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳಲ್ಲಿ ಭಾರಿ ಹೂಡಿಕೆ ಮಾಡಿದೆ ಎಂದು ಅವರು ಪುನರುಚ್ಚರಿಸಿದರು. ಸಾಮಾಜಿಕ ಮೂಲಸೌಕರ್ಯಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ʻಜಲ ಜೀವನ್ ಮಿಷನ್ʼ ಮೂಲಕ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯನ್ನು ಖಾತರಿಪಡಿಸಿದ ಉದಾಹರಣೆ ನೀಡಿದರು. ʻಜಲ ಜೀವನ್ ಮಿಷನ್ʼಗಾಗಿ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಯೋಜನೆ ಆರಂಭದಲ್ಲಿ ಸರಾಸರಿ 100 ಗ್ರಾಮೀಣ ಮನೆಗಳಲ್ಲಿ 15ರಲ್ಲಿ ಮಾತ್ರ ಕೊಳಾಯಿ ನೀರು ಸೌಕರ್ಯವಿತ್ತು. ಈಗ ಈ ಸಂಖ್ಯೆ ಪ್ರತಿ 100 ಮನೆಗಳಲ್ಲಿ 62ಕ್ಕೆ ಏರಿದೆ. ಜೊತೆಗೆ ಕೆಲಸವು ತ್ವರಿತ ಗತಿಯಲ್ಲಿ ಸಾಗುತ್ತಿದೆ. 130 ಜಿಲ್ಲೆಗಳಲ್ಲಿ ಪ್ರತಿ ಮನೆಗೆ ಕೊಳವೆ ನೀರಿನ ಪೂರೈಕೆ ಕೆಲಸ ಪೂರ್ಣಗೊಂಡಿದೆ ಎಂದರು.  ಇದು ನೀರಿನಿಂದ ಹರಡುವ ಅನೇಕ ರೋಗಗಳಿಂದ ರಕ್ಷಣ ನೀಡುವುದಲ್ಲದೆ, ಜನರ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಈ ಯೋಜನೆ ಮೂಲಕ ಜನರಿಗೆ ದೊರೆಯುತ್ತಿರುವ ಶುದ್ಧ ನೀರು, ಅತಿಸಾರ ಸಂಬಂಧಿತ ಕಾಯಿಲೆಗಳಿಂದ ಸಂಭವಿಸುತ್ತಿದ್ದ ಸುಮಾರು 4 ಲಕ್ಷ ಸಾವುಗಳನ್ನು ತಡೆದಿದೆ. ಜೊತೆಗೆ, ನೀರಿನ ನಿರ್ವಹಣೆ ಹಾಗೂ ರೋಗಗಳ ಚಿಕಿತ್ಸೆಗಾಗಿ ಖರ್ಚು ಮಾಡಲಾಗುತ್ತಿದ್ದ 8 ಲಕ್ಷ ಕೋಟಿ ರೂ.  ಹಣವನ್ನು ಉಳಿತಾಯ ಮಾಡಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ ಎಂದರು. ಸರ್ಕಾರದ ಯೋಜನೆಗಳಿಂದ ಆಗುವ ಈ ರೀತಿಯ ಗುಣಾತ್ಮಕ ಪರಿಣಾಮವನ್ನು ಅರ್ಥಮಾಡಿಕೊಳ್ಳುವಂತೆ ಅವರು ಅಭ್ಯರ್ಥಿಗಳಿಗೆ ಸಲಹೆ ನೀಡಿದರು. 

ನೇಮಕಾತಿ ಪ್ರಕ್ರಿಯೆಯಲ್ಲಿ ವಂಶಪಾರಂಪರ್ಯ ರಾಜಕಾರಣ ಮತ್ತು ಸ್ವಜನಪಕ್ಷಪಾತದ ದುಷ್ಪರಿಣಾಮಗಳ ಬಗ್ಗೆ ಶ್ರೀ ಮೋದಿ ಅವರು ಮಾತನಾಡಿದರು. ರಾಜ್ಯವೊಂದರಲ್ಲಿ ಬೆಳಕಿಗೆ ಬಂದಿರುವ 'ಉದ್ಯೋಗಕ್ಕಾಗಿ ನಗದು ಹಗರಣ'ದ ವಿಷಯವನ್ನು ಪ್ರಧಾನಿ ಎತ್ತಿ ತೋರಿದ್ದಲ್ಲದೆ, ಅಂತಹ ವ್ಯವಸ್ಥೆಯ ಬಗ್ಗೆ ಯುವಕರಿಗೆ ಎಚ್ಚರಿಕೆ ನೀಡಿದರು. ರೆಸ್ಟೋರೆಂಟ್ ನಲ್ಲಿ ʻಮೆನು ಕಾರ್ಡ್ʼನಂತೆಯೇ ಪ್ರತಿ ಹುದ್ದೆಗೆ ʻರೇಟ್ ಕಾರ್ಡ್ʼ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂದು ವಿವರಿಸಿದರು. ದೇಶದ ಆಗಿನ ರೈಲ್ವೆ ಸಚಿವರು ತಾವು ನೀಡುವ ಉದ್ಯೋಗಕ್ಕೆ ಬದಲಿಯಾಗಿ ಭೂಮಿಯನ್ನು ಪಡೆದ  'ಉದ್ಯೋಗಕ್ಕಾಗಿ ಭೂಮಿ ಹಗರಣ'ವನ್ನು ಪ್ರಧಾನಿ ಟೀಕಿಸಿದರು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ ಮತ್ತು ನ್ಯಾಯಾಲಯಗಳಲ್ಲಿ ಇದರ ವಿಚಾರಣೆ ಬಾಕಿ ಇದೆ ಎಂದು ಹೇಳಿದರು. ವಂಶಪಾರಂಪರ್ಯ ರಾಜಕೀಯದಲ್ಲಿ ತೊಡಗಿರುವ ಮತ್ತು ಉದ್ಯೋಗದ ಹೆಸರಿನಲ್ಲಿ ದೇಶದ ಯುವಕರನ್ನು ಲೂಟಿ ಮಾಡುವ ಇಂತಹ ರಾಜಕೀಯ ಪಕ್ಷಗಳ ಬಗ್ಗೆ ಯುವಕರಿಗೆ ಪ್ರಧಾನಿ ಎಚ್ಚರಿಕೆ ನೀಡಿದರು. "ಒಂದು ಕಡೆ ನಾವು ಉದ್ಯೋಗಗಳಿಗೆ ʻರೇಟ್ ಕಾರ್ಡ್ʼ ನಿಗದಿಪಡಿಸುವ ರಾಜಕೀಯ ಪಕ್ಷಗಳನ್ನು ಹೊಂದಿದ್ದೇವೆ, ಮತ್ತೊಂದೆಡೆ, ಪ್ರಸ್ತುತ ಸರ್ಕಾರವು ಯುವಕರ ಭವಿಷ್ಯವನ್ನು ರಕ್ಷಿಸುತ್ತಿದೆ. ಈಗ ಯುವಜನರ ಭವಿಷ್ಯವನ್ನು ʻರೇಟ್ ಕಾರ್ಡ್ʼನಿಂದ ನಿಯಂತ್ರಿಸಬಹುದೋ ಅಥವಾ ʻಸೇಫ್ ಗಾರ್ಡ್ʼನಿಂದ (ಸುರಕ್ಷತೆಯಿಂದ) ನಿಯಂತ್ರಿಸಬಹುದೋ ಎಂಬುದನ್ನು ದೇಶವೇ ನಿರ್ಧರಿಸುತ್ತದೆ", ಎಂದು  ಹೇಳಿದರು.
ಇತರ ರಾಜಕೀಯ ಪಕ್ಷಗಳು ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿವೆ, ಆದರೆ ಹಾಲಿ ಸರ್ಕಾರವು ಭಾಷೆಯನ್ನು ಉದ್ಯೋಗದ ಬಲವಾದ ಮಾಧ್ಯಮವನ್ನಾಗಿ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಮಾತೃಭಾಷೆಯಲ್ಲಿ ನೇಮಕಾತಿ ಪರೀಕ್ಷೆಗಳಿಗೆ ಒತ್ತು ನೀಡಿರುವುದು ಯುವಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.

ವೇಗವಾಗಿ ಚಲಿಸುತ್ತಿರುವ ಇಂದಿನ ಭಾರತದಲ್ಲಿ ಸರ್ಕಾರಿ ವ್ಯವಸ್ಥೆಗಳು ಮತ್ತು ಸರ್ಕಾರಿ ನೌಕರರು ಕೆಲಸ ಮಾಡುವ ರೀತಿ ವೇಗವಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಸಾಮಾನ್ಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಿದ್ದ ಸಮಯವನ್ನು ಸ್ಮರಿಸಿದ ಅವರು, ಇಂದು ಸರ್ಕಾರವು ತನ್ನ ಸೇವೆಗಳನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ ನಾಗರಿಕರ ಮನೆಗಳನ್ನು ತಲುಪುತ್ತಿದೆ ಎಂದರು. ಸಾರ್ವಜನಿಕರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ, ಸರ್ಕಾರಿ ಕಚೇರಿಗಳು ಮತ್ತು ಇಲಾಖೆಗಳು ಸಾರ್ವಜನಿಕರ ಬಗ್ಗೆ ಸಂವೇದನೆಯೊಂದಿಗೆ ಕಾರ್ಯನಿರ್ವಹಿಸಬೇಕಾದ ಕ್ಷೇತ್ರಗಳು ಯಾವುವೆಂದು ತಿಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು. ಮೊಬೈಲ್ ಆ್ಯಪ್ ಆಧರಿತ ಡಿಜಿಟಲ್ ಸೇವೆಗಳ ಮೂಲಕ ಸರ್ಕಾರಿ ಸೌಲಭ್ಯ  ಪಡೆಯುವುದನ್ನು ಈಗ ಸುಲಭಗೊಳಿಸಲಾಗಿದೆ,  ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆಯನ್ನು ನಿರಂತರವಾಗಿ ಬಲಪಡಿಸಲಾಗುತ್ತಿದೆ ಎಂದು ಶ್ರೀ ಮೋದಿ ಉದಾಹರಣೆ ನೀಡಿದರು.

ಕೊನೆಯದಾಗಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶದ ನಾಗರಿಕರ ಬಗ್ಗೆ ಸಂಪೂರ್ಣ ಸಂವೇದನಾಶೀಲತೆಯಿಂದ ಕೆಲಸ ಮಾಡುವಂತೆ ಹೊಸದಾಗಿ ನೇಮಕಗೊಂಡವರಿಗೆ ಸಲಹೆ ನೀಡಿದರು. "ನೀವು ಈ ಸುಧಾರಣೆಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಬೇಕು. ಇದರ ಜೊತೆಗೆ, ನೀವು ಸದಾ ನಿಮ್ಮ ಕಲಿಕೆಯ ಪ್ರವೃತ್ತಿಯನ್ನು ಮುಂದುವರಿಸಬೇಕು", ಎಂದು ಪ್ರಧಾನಿ ಕರೆ ನೀಡಿದರು. ಇತ್ತೀಚೆಗೆ  1 ದಶಲಕ್ಷಕ್ಕೂ ಅಧಿಕ ಬಳಕೆದಾರರ ಸಂಖ್ಯೆಯೊಂದಿಗೆ ದಾಖಲೆ ಸೃಷ್ಟಿಸಿದ ಆನ್‌ಲೈನ್ ಪೋರ್ಟಲ್ ʻಐಜಿಒಟಿʼ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಆನ್ ಲೈನ್ ಪೋರ್ಟಲ್ ನಲ್ಲಿ ಲಭ್ಯವಿರುವ ಕೋರ್ಸ್‌ಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ಅವರು ಒತ್ತಾಯಿಸಿದರು. "ಅಮೃತ ಕಾಲದ ಮುಂದಿನ 25 ವರ್ಷಗಳ ಪ್ರಯಾಣದಲ್ಲಿ, ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ," ಎಂದು ಹೇಳುವ ಮೂಲಕ ಪ್ರಧಾನಿ ಮಾತು ಮುಗಿಸಿದರು.

ಹಿನ್ನೆಲೆ
ಉದ್ಯೋಗ ಸೃಷ್ಟಿಗೆ ಗರಿಷ್ಠ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ʻಉದ್ಯೋಗ ಮೇಳʼ ಒಂದು ಮಹತ್ವದ ಹೆಜ್ಜೆಯಾಗಿದೆ. ʻಉದ್ಯೋಗ ಮೇಳʼವು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಜೊತೆಗೆ ಯುವಕರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ಇದು ಒದಗಿಸುತ್ತದೆ.

ಹೊಸದಾಗಿ ನೇಮಕಗೊಂಡವರು ʻಐಜಿಒಟಿ ಕರ್ಮಯೋಗಿʼ ಪೋರ್ಟಲ್ ನಲ್ಲಿ ಲಭ್ಯವಿರುವ ʻಕರ್ಮಯೋಗಿ ಪ್ರರಂಭ್ʼ ಎಂಬ ಆನ್ ಲೈನ್ ಮಾಡ್ಯೂಲ್ ಮೂಲಕ ತರಬೇತಿ ಪಡೆಯುವ ಅವಕಾಶವನ್ನು ಸಹ ಪಡೆಯುತ್ತಿದ್ದಾರೆ, ಅಲ್ಲಿ 400ಕ್ಕೂ ಅಧಿಕ ಇ-ಕಲಿಕಾ ಕೋರ್ಸ್ ಗಳಿದ್ದು, ಎಲ್ಲಿಂದ ಬೇಕಾದರೂ, ಯಾವ ಸಾಧನದಿಂದ ಬೇಕಾದರೂ ಅವುಗಳು ಕಲಿಕಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. 

***


(Release ID: 1931959) Visitor Counter : 152